Monday, August 31, 2020

ಸರಳ ಭಾಷೆಯಲ್ಲಿ ಅರಳಿದ ಬಂದೂಕು ಹಿಡಿದವರ ನಾಡಿಮಿಡಿತ!


 

ಗೆಳೆಯ ಮೇ.ಡಾ. ಕುಶ್ವಂತ್‌ ಕೋಳಿಬೈಲು ಮೊದಲ ಎಸೆತದಲ್ಲಿಯೇ ಸಿಕ್ಸರ್‌ ಭಾರಿಸಿದ್ದಾನೆ. ಅವನಿಗೆ ಸಿಕ್ಸರ್‌ ಹೊಡೆಯುವುದು ಹೊಸದಲ್ಲ ಬಿಡಿ. ಆದರೆ ಇದು ಪುಸ್ತಕ ರೂಪದಲ್ಲಿ ಭಾರಿಸಿರುವ ಸಿಕ್ಸರ್‌ ಎನ್ನುವುದು ವಿಶೇಷ. ಮುಂದಿರುವುದು ಪುಸ್ತಕದ ಬಗೆಗಿನ ನನ್ನ ಅನಿಸಿಕೆಗಳು.


ಕೂರ್ಗ್‌ ರೆಜಿಮಂಟ್‌ ಪುಸ್ತಕ ಕೈಸೇರುತ್ತಿದ್ದಂತೆ ಓದಿ ಮುಗಿಸಿದೆ. ಬಂದೂಕು ಹಿಡಿದವರ ನಾಡಿಮಿಡಿತವನ್ನು ಬಹುಚೆನ್ನಾಗಿ ಬರಹ ರೂಪದಲ್ಲಿ ಕಟ್ಟಿಕೊಡುವಲ್ಲಿ ಕುಶ್ವಂತ್‌ ಯಶಸ್ವಿಯಾಗಿದ್ದಾರೆ. ಇಲ್ಲಿರುವ ಪುಟ್ಟ ಪುಟ್ಟ ಕಥೆಗಳು ಕೊಡಗು ಮತ್ತು ಕಾಶ್ಮೀರದ ನಡುವಿನ ಗಾಢವಾದ ನಂಟನ್ನು ಗಟ್ಟಿಯಾಗಿ ಹಿಡಿದಿಟ್ಟಿವೆ. ಕೊಡಗಿನ ಕಲಿಗಳು ಯುದ್ಧರಂಗದಲ್ಲಿ ಮಾಡಿರುವ ಸಾಧನೆಗಳು ಇಡೀ ದೇಶಕ್ಕೆ ಗೊತ್ತಿದೆ. ತಲೆಬಾಗಿ ನಮಿಸಿದೆ. ಆದರೆ ಆ ವೀರ ಸೈನಿಕರ ಕುಟುಂಬದವರ ಮಿಡಿತಗಳು, ತಲ್ಲಣಗಳು, ದೇಶದ ಗಡಿ ಕಾಯುವ ಸೇವೆಯಲ್ಲಿ ಯಶಸ್ವಿಯಾದವರು ನಿವೃತ್ತರಾದ ನಂತರ ತಮ್ಮದೇ ಸ್ವಂತ ಜಾಗದ ಗಡಿ ಕಾಯುವಾಗ ಅನುಭವಿಸುವ ಸಂಕಷ್ಟಗಳು ಅಷ್ಟಾಗಿ ಗೊತ್ತಾಗುವುದಿಲ್ಲ.


‘ಇಝತ್‌ ಓ ಇಕ್ಬಾಲ್‌' ಕಥೆಯಲ್ಲಿ ಸುಬೇದಾರ್‌ ಮೇಜರ್‌ ಕುಶಾಲಪ್ಪ ಬಗ್ಗೆ ಹೇಳುತ್ತಲೇ ‘ ಬಹುಶಃ ಸಮಾಜಕ್ಕೆ ಆಕರ್ಷಕವಾಗಿ ಕಾಣುವುದು ಶೌರ್ಯ ಮತ್ತು ಯುದ್ಧವೇ ಇರಬೇಕು. ಹತ್ತು ಜನ ಶತ್ರು ರಾಷ್ಟ್ರದವರ ತಲೆ ತೆಗೆದ ವಿಷಯದಲ್ಲಿ ಉಂಟಾಗುವ ಉತ್ಸಾಹ ನಮ್ಮ ಸೈನಿಕರು ಗಡಿಯಿಂದ ಸುರಕ್ಷಿತವಾಗಿ ಊರಿಗೆ ಮರಳಿದಾಗ ಯಾಕೆ ಉಂಟಾಗುವುದಿಲ್ಲ ಎಂದು ಕುಶಾಲಪ್ಪ ಯೋಚಿಸಿದ. ಬಹುಶಃ ಕ್ರೌರ್ಯವನ್ನು ಹತ್ತಿರದಿಂದ ನೋಡಿದವರು ಮಾತ್ರ ಯುದ್ಧಕ್ಕಿಂತ ಜಾಸ್ತಿ ಬದುಕಿನ ಬಗ್ಗೆ ಮಾತಾಡುತ್ತಾರೆ.' ಎಂದು ಡಾ. ಕುಶ್ವಂತ್‌ ಬರೆದಿರುವ ಸಾಲುಗಳು ನಿಜಕ್ಕೂ ಸೈನಿಕರ ವಿಚಾರದಲ್ಲಿ ನಮ್ಮ ಸಮಾಜ ಹೊಂದಿರುವ ದೃಷ್ಟಿಕೋನಕ್ಕೆ ಸಾಕ್ಷಿ. ಹಲವು ನಿವೃತ್ತ ಸೈನಿಕರು ತಮ್ಮ ಮನೆಯನ್ನು ಉಳಿಸಿಕೊಳ್ಳಲು ಪರದಾಡುವ ಸುದ್ದಿಗಳನ್ನು ಆಗೊಮ್ಮೆ ಈಗೊಮ್ಮೆ ಓದುವ ನಮಗೆ, ಅದೇ ಸೈನಿಕರ ಬಲಿದಾನವಾದಾಗ ಮಾತ್ರ ‘ಹೀರೋ' ಎಂದು ಹೊಗಳುತ್ತೇವೆ. ಇದಕ್ಕೆ ಉತ್ತರವೆಂಬಂತೆ ಮೊದಲ ಕಥೆಯಲ್ಲಿ ಬರುವ ಸಾಲುಗಳನ್ನು ಗಮನಿಸಬೇಕು.


ಕೂರ್ಗ್‌ ರೆಜಿಮೆಂಟ್‌ ಕಥೆಯಲ್ಲಿ ಕಾವೇರಿಯ ಮನದ ತಲ್ಲಣಗಳನ್ನು ಕಟ್ಟಿಕೊಡುವಾಗ ಬರುವ ಈ ಸಾಲುಗಳು ನಿಜಕ್ಕೂ ದೇಶಪ್ರೇಮದ ಬಗ್ಗೆ ಬರೀ ಭಾಷಣ ಬಿಗಿಯುವವರಿಗೆ ಸರಿಯಾಗಿ ಅನ್ವಯಿಸುತ್ತದೆ. ಅಲ್ಲಿ ಕುಶ್ವಂತ್‌ ಬರೆಯುತ್ತಾರೆ, ‘ ಬಹುಶಃ ಊರಿನವರಿಗೆ ಒಬ್ಬ ಹೀರೋ ಬೇಕಾಗಿತ್ತು? ಭಾಷಣದಲ್ಲಿ ಪ್ರಸ್ತಾಪಿಸಲು, ರಸ್ತೆಗೆ ಹೆಸರಿಡಲು. ಮುಡಿಗೇರಿಸಿದ್ದ ಹೂವಿನಲ್ಲಿ ಸಂತೃಪ್ತಿ ಪಟ್ಟುಕೊಳ್ಳುವ ಹೆಣ್ಣಿಗೆ ಆ ರೀತಿಯ ಆಸೆಗಳಿರಲಿಲ್ಲ.' ಇದಕ್ಕಿಂತ ಚೆನ್ನಾಗಿ ಸೈನಿಕರ ಜತೆ ಬಾಳು ಹಂಚಿಕೊಂಡ ಹೆಣ್ಣಿನ ಬಗ್ಗೆ ವರ್ಣಿಸಲು ಸಾಧ್ಯವಿಲ್ಲವೇನೋ. ಕೇವಲ ಒಂದು ಪ್ರಶ್ನಾರ್ಥಕ ಚಿಹ್ನೆ, ಒಂದು ಅಲ್ಪ ವಿರಾಮ ಎರಡು ಫುಲ್‌ಸ್ಟಾಪ್‌ಗಳಲ್ಲಿ ಮುಗಿಯುವ ಈ ಸಾಲುಗಳು ಮನಸ್ಸಿನಲ್ಲಿ ಮೂಡಿಸುವ ಚಿತ್ರಣ ದೊಡ್ಡದು. ಇದೇ ಕಥೆಯಲ್ಲಿ ಇನ್ನೊಂದು ಮಾತು ಬರುತ್ತದೆ. ‘ಒಂದನೇ ಮಹಾಯುದ್ಧದಿಂದ ಇಂದಿನವರೆಗೆ ಈ ಮನೆಯಲ್ಲಿ ಹುಟ್ಟಿದ ಗಂಡು ಮಕ್ಕಳನ್ನೆಲ್ಲ ತಾಯಂದಿರು ಕೂರ್ಗ್‌ ರೆಜಿಮೆಂಟಿಗೆ ಬರೆದುಕೊಟ್ಟಂತಿತ್ತು. ಆ ಮನೆಯ ಹೆಣ್ಣುಮಕ್ಕಳು ಗಂಡನಿಲ್ಲದೆ ಬದುಕಲು ಮಾಡಬೇಕಾಗಿದ್ದ ಸಂಘರ್ಷಕ್ಕಾಗಿ ಮೆಡಲುಗಳನ್ನು ಕೊಡುವುದಿದ್ದರೆ ರವಿಕೆಯ ಮೇಲೆ ಅಂಟಿಸಲು ಜಾಗವೇ ಸಾಲುತ್ತಿರಲಿಲ್ಲವೇನೋ?' ಇಷ್ಟು ಸರಳವಾಗಿ ಹೆಣ್ಣಿನ ತ್ಯಾಗವನ್ನು ಎತ್ತಿ ತೋರಿಸುವುದು ವೈದ್ಯರಾಗಿರುವ ಕುಶ್ವಂತ್‌ ಬರಹದಲ್ಲಿ ಅನಾಯಾಸವಾಗಿ ಬಂದುಹೋಗುತ್ತದೆ.


‘ಕೂರ್ಗ್‌ ರೆಜಿಮೆಂಟ್‌' ಪುಸ್ತಕದ ಕಥೆಗಳು ಒಂದಕ್ಕಿಂತ ಒಂದು ಭಿನ್ನ ರೂಪದಲ್ಲಿ ಓದುಗನನ್ನು ಕಾಡುವುದು ನಿಶ್ಚಿತ. ‘ಗಣಿ ಬೋಪಣ್ಣ' ಬದುಕು ಮನಸ್ಸನ್ನು ಆರ್ದ್ರಗೊಳಿಸುತ್ತದೆ. ‘ಮುತ್ತಿನಹಾರ' ಮನಸ್ಸಿಗೆ ಮುದಕೊಡುತ್ತದೆ. ‘ಸ್ವರ್ಗಕ್ಕೆ ಏಣಿ' ದಾಯಾದಿಗಳ ನಡುವಿನ ಜಾಗದ ಗಲಾಟೆಯ ಕರಾಳ ರೂಪಕ್ಕೆ ಸಾಕ್ಷಿಯಂತಿದೆ. ಹೀಗೆ ಒಂದೊಂದು ಕಥೆಗಳೂ ಓದುಗರಿಗೆ ಆಪ್ತವಾಗುವುದರಲ್ಲಿ ಅನುಮಾನವಿಲ್ಲ.


ಅದೇಕೋ ಗೊತ್ತಿಲ್ಲ. ನಮ್ಮ ಡಾಕ್ಟರ್‌ಗೆ ಬಾರ್‌ಗಳ ಸುತ್ತಲೇ ಕಥೆ ಹೆಣೆಯುವುದು ಹೆಚ್ಚು ಖುಷಿಕೊಟ್ಟಂತಿದೆ! ಬಂದೂಕು, ಕೃಷಿಯ ಜತೆಗೆ ಕುಡಿತವೂ ಇಲ್ಲಿನ ಕಥೆಗಳ ಪ್ರಧಾನ ಅಂಗ. ಬೇಟೆಯೂ ಅಷ್ಟೇ. ಇವೆಲ್ಲವೂ ಕೊಡಗಿನ ಪರಿಸರದಲ್ಲಿ ನಡೆಯುವ ಸಾಮಾನ್ಯ ಅಂಶ ಎನ್ನುವುದನ್ನು ಮರೆಯಬಾರದು. ಕಥೆಗಳನ್ನು ಅನವಶ್ಯಕವಾಗಿ ಲಂಬಿಸದೆ, ಎಷ್ಟು ಸರಳವಾಗಿ ಕಟ್ಟಿಕೊಡಲು ಸಾಧ್ಯವೋ ಅಷ್ಟು ಸರಳವಾಗಿ ಒಂದಿಷ್ಟು ಚಂದದ ಡೈಲಾಗ್‌ಗಳ ಮೂಲಕ ಕುಶ್ವಂತ್‌ ಹೇಳಿಮುಗಿಸುತ್ತಾರೆ.


ಕುಶ್ವಂತ್‌ ಪುಸ್ತಕ ಬಿಡುಗಡೆ ಹೇಳಿಕೊಂಡಾಗಲೇ ಗೂಗಲ್‌ಪೇ ಮಾಡಿ ಪುಸ್ತಕಕ್ಕೆ ಆರ್ಡರ್‌ ಮಾಡಿದ್ದೆ. ಪುಸ್ತಕದ ಬಗ್ಗೆ ಬರೆದು ಅವನಿಗೆ ಸರ್ಪ್ರೈಸ್‌ ಕೊಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಆದ್ರೆ ಅದಕ್ಕೂ ಮೊದಲೇ ಅವನಿಗೆ ನಾನು ಪುಸ್ತಕ ಪಡೆದಿರುವುದು ಗೊತ್ತಾಗಿಬಿಟ್ಟಿದೆ. ಇರಲಿ, ಪುಸ್ತಕವನ್ನು ಖರೀದಿಸಿ ಓದಿ. ಮುಂದೆ ಕುಶ್ವಂತ್‌ ಇನ್ನಷ್ಟು ಕಥೆಗಳನ್ನು ಹೇಳುವ ಹುಮ್ಮಸ್ಸು ಬರಲಿ. ಬರೆಯುವ ಶ್ರಮ ಅವನದ್ದು. ಓದುವ ಖುಷಿ ನಮ್ಮದು.


  • ಹರಿಪ್ರಸಾದ್‌ ಅಡ್ಪಂಗಾಯ

Friday, July 24, 2020

ಕಾರಣ - ರಾಜಕಾರಣ



ಬದಲಾವಣೆ ಬಯಸುವ
ಜನರಿಗಾಗಿ
ಆಗಿದ್ದಾಂಗೆ ನಾಯಕರೆ
ಇಲ್ಲಿಂದಲ್ಲಿಗೆ ಬದಲಾಗುತ್ತಾರೆ

***

ಅರೆ..! ಅನರ್ಹರು ಅರ್ಹರಾಗುತ್ತಾರೆ
ಅರ್ಹರಾಗದಿದ್ದರೆ, 'ನಾಮ' ಹಾಕುತ್ತಾರೆ
ಕಡೆಗೆ ಜನರಿಗೆ ಉಳಿವುದು
ನಾಮವೇ!

*****

ಪ್ರಭುತ್ವ ಮಕ್ಕಳಿಗೆ ಹಂಚಿಕೆಯಾಗಿ
ಪ್ರಭುಗಳಾದ ಪ್ರಜೆಗಳು
ಆಳಿಸಿಕೊಳ್ಳುವುದು
ತಪ್ಪುವುದಿಲ್ಲ!

******

ಅದೇ ಕದ್ದಿದ್ಯಾರು, ಕೊಟ್ಟಿದ್ಯಾರು?
ಉಂಡಿದ್ಯಾರು? ಬಡಿಸಿದ್ಯಾರು?
ಎನ್ನುವುದೇ ಪ್ರಶ್ನೆ - ಯಾಕೆಂದರೆ
ಸರ್ಕಾರದ ಗಂಟು ತುಂಬುವುದು ಜನ

*****



ತನಿಖೆಗೊಂದು ಸಮಿತಿ ರಚಿಸಬೇಕು!
ಇದ್ದ ಸಂಸ್ಥೆಯ ಹಲ್ಲು ಕಿತ್ತು, ಬಡವಾಗಿದೆ
ತಾವೇ ಹುಟ್ಟಿಸಿದ್ದಕ್ಕೆ ಕೊಟ್ಟರೆ ಹಳ್ಳಹಿಡಿವುದು
ಗೊತ್ತಾಗಿದೆ ಈಗ, ತನಿಖೆಗೊಂದು ಸಮಿತಿ ಬೇಕು!


- ಹರಿಪ್ರಸಾದ್ ಅಡ್ಪಂಗಾಯ

Saturday, June 6, 2020

ನೂರ್‌ ಬದುಕಿನ ದೃಶ್ಯ ಕಾವ್ಯ


 ಇದೊಂದು ಪುಸ್ತಕ ಪ್ರಕಟಗೊಳ್ಳುವುದಿಕ್ಕೂ ಮೊದಲೇ ಕಾದು ಕುಳಿತಿದ್ದವನು ನಾನು. ಇದು ಗೆಳೆಯ ಬರೆದ ಪುಸ್ತಕ ಎನ್ನುವ ಕಾರಣಕ್ಕಲ್ಲ. ಆತ ನೂರ್‌ ಬಗ್ಗೆ ನೀಡುತ್ತಾ ಬಂದಿದ್ದ ವಿವರಣೆಯ ಕಾರಣಕ್ಕೆ. ಪುಸ್ತಕ ಪ್ರಕಟಗೊಂಡ ಕೂಡಲೇ ಖರೀದಿಸಿದರೂ ತಕ್ಷಣ ಓದಲು ಸಾಧ್ಯವಾಗದೆ ಈಗ ಓದಿ ಮುಗಿಸಿದ್ದೇನೆ. ಹಾಗಾಗಿ ಈ ಬರಹ.

 ನೂರ್‌ ಇನಾಯತ್‌ ಖಾನ್‌. ಭಾರತದ ಮೂಲ, ಮಾಸ್ಕೋದಲ್ಲಿ ಜನನ, ಪ್ಯಾರಿಸ್‌ನಲ್ಲಿ ಬಾಲ್ಯ, ಲಂಡನ್‌ನಲ್ಲಿ ಯೌವ್ವನ ಹಾಗೂ ಉದ್ಯೋಗ, ಪ್ಯಾರಿಸ್‌ನಲ್ಲಿ ಶತ್ರುಗಳ ಜತೆ ಸೆಣಸಾಣ, ನಾಝಿಗಳ ದೌರ್ಜನ್ಯಕ್ಕೆ ಸಿಲುಕಿ ನರಳಾಟ, ಡಕಾವೋದಲ್ಲಿ ಅಂತ್ಯಕಾಣುವ ವೇಳೆಯೂ ಆಕೆ ಹೇಳುವ ಮಾತು ‘ಲಿಬರ್ಟಿ'.  ವಿಶ್ವಮಾನವತೆಯ ತತ್ವ ಕನ್ನಡಕ್ಕೆ ಹೊಸದಲ್ಲ. ವಿಶ್ವಮಾನವತೆಯನ್ನು ಪಾಲಿಸುತ್ತಲೇ ಶತ್ರುವಿನ ವಿರುದ್ಧ ಸ್ವಾತಂತ್ರ್ಯಕ್ಕಾಗಿ ನಡೆಸುವ ಅನಿವಾರ್ಯ ಹೋರಾಟದಲ್ಲಿ ಪ್ರಾಣ ಕಳೆದುಕೊಂಡ ಹೆಣ್ಣುಮಗಳ ಬಗ್ಗೆ ಗೆಳೆಯ ಚಂದ್ರಶೇಖರ್‌ ಮಂಡೆಕೋಲು ಬರೆದಿರುವ ‘ನಾಝಿ ಹೋರಾಟದ ಆರ್ದ್ರ ಕಾವ್ಯ - ನೂರ್‌ ಇನಾಯತ್‌ ಖಾನ್‌' ಪುಸ್ತಕ ಕನ್ನಡಕ್ಕೊಂದು ಉತ್ತಮ ಕೊಡುಗೆ ಮತ್ತು ಕನ್ನಡದಲ್ಲಿ ಬರಲೇ ಬೇಕಿದ್ದ ಪುಸ್ತಕ.


 ಟಿಪ್ಪು ಸುಲ್ತಾನನ ವಂಶವಾಹಿ ಹೊಂದಿದ್ದ ನೂರಳನ್ನು ಗೆಸ್ಟಪೋಗಳು ಬಂಧಿಸುವ ವೇಳೆ ಆಕೆ ‘ಹೆಣ್ಣು ಹುಲಿ'ಯಂತೆ ಅಬ್ಬರಿಸಿದ್ದಳು ಎಂದು ಜರ್ಮನ್ ಅಧಿಕಾರಿಗಳು ವರ್ಣಿಸಿದ್ದು ಅಕಸ್ಮಿಕ ಇರಬಹುದು. ಈ ಹೆಣ್ಣುಹುಲಿಯ ಜೀವನಗಾಥೆಯನ್ನು ಕನ್ನಡಿಗರಿಗೆ ಅತ್ಯಂತ ಮಧುರ ಭಾಷೆಯಲ್ಲಿ ವರ್ಣಿಸಿದ್ದಾರೆ ಚಂದ್ರಶೇಖರ್‌. ಕೇವಲ ನೂರಳಿಗೆ ಮಾತ್ರ ಸೀಮಿತಗೊಳಿಸದೆ ಆಕೆಯಲ್ಲಿ ಅಂಥದ್ದೊಂದು ವ್ಯಕ್ತಿತ್ವ ಬೆಳೆಸಿದ ಅವಳಪ್ಪ ಇನಾಯತ್‌ ಖಾನರ ಬಗ್ಗೆ ಇನಾಯತ ಖಾನರಿಗೂ ಸಂಗೀತದ ಪಾಠದ ಜತೆ ಸೂಫಿ ತತ್ವದ ತಳಹದಿ ಹಾಕಿಕೊಟ್ಟ ಅವರಜ್ಜ ಅಲ್ಲಾ ಭಕ್ಷ್ ಬಗ್ಗೆ ವಿವರವನ್ನು ಒಳಗೊಂಡಿರುವ ಪುಸ್ತಕವಿದು.

 ಸಂಗೀತ ಹಾಗೂ ಸೂಫಿ ತತ್ವದ ವಿಚಾರದಲ್ಲೇ ಕೃತಿಯ ಬಹುಭಾಗ ಸಾಗುವಾಗ ಓದುಗನ ಮನಸ್ಸಿಗೊಂದು ಪ್ರಶಾಂತ ಅನುಭವ ಕಟ್ಟಿಕೊಡುವ ಕೆಲಸ ಚಂದ್ರಶೇಖರ್‌ ಮಾಡಿದ್ದಾರೆ. ಯುದ್ಧರಂಗವನ್ನು ನೂರ್‌ ಪ್ರವೇಶಿಸುತ್ತಿದ್ದಂತೆ ಕೃತಿಯಲ್ಲೊಂದು ವೇಗ ಸಿಕ್ಕಿದಂತಾಗುತ್ತದೆ. ನೂರ್‌ ಓಡುವಷ್ಟೇ ವೇಗ, ಶತ್ರುಗಳಿಂದ ತಪ್ಪಿಸಿಕೊಳ್ಳುವ ಚಾಕಚಕ್ಯತೆ ಇದೆಲ್ಲವನ್ನೂ ಕಣ್ಣಿಗೆ ಕಟ್ಟಿದಂತೆ ವಿವರಿಸಿದ್ದಾರೆ. ಹಾಗೆಯೇ ಶತ್ರುವಿನ ಕೈಯಲ್ಲಿ ಸಿಲುಕಿ ನರಕಯಾತನೆ ಅನುಭವಿಸಿ, ಸೂರ್ಯನನ್ನೂ ಕಾಣದ, ಚಂದ್ರನನ್ನೂ ನೋಡದ ಕತ್ತಲ ಕೋಣೆಯಲ್ಲಿ ಆ ಯುವತಿ ಅನುಭವಿಸಿರಬಹುದಾದ ನೋವನ್ನು ನೆನೆದಾಗ ಮನಸ್ಸು ಆರ್ದ್ರವಾಗುತ್ತದೆ. ಇದೇ ಕಾರಣಕ್ಕೆ ಕೃತಿಯನ್ನು ‘ನಾಝಿ ಹೋರಾಟದ ಆರ್ದ್ರ್ಯ ಕಾವ್ಯ' ಎಂದು ಕರೆದಿರುವುದು ಸ್ಪಷ್ಟ.

 ಪತ್ರಕರ್ತನಾಗಿ ಅದರಲ್ಲೂ ದೃಶ್ಯ ಮಾಧ್ಯಮದಲ್ಲಿ ಕೆಲಸ ಮಾಡುತ್ತಿರುವ ಕಾರಣದಿಂದಲೋ ಏನೋ ಈ ಬರಹ ಹೆಚ್ಚು ದೃಶ್ಯಾತ್ಮಕವಾಗಿಯೇ ಕಾಣಿಸಿಕೊಳ್ಳುತ್ತದೆ. ಮನಸ್ಸಿನೊಳಗೆ ಪ್ರತಿ ಘಟನೆಯ ಪ್ರತಿಯೊಂದು ವಿವರ ಅಚ್ಚುಕಟ್ಟಾಗಿ ಮೂಡುತ್ತದೆ. ನಮ್ಮೆದುರು ಘಟನೆಗಳು ನಡೆಯುತ್ತಿರುವಂತೆಯೇ ಇಡೀ ಪುಸ್ತಕದ ಪಯಣ ಸಾಗುತ್ತಿರುವುದು ಚಂದ್ರುವಿನ ಬರಹದ ಹೆಚ್ಚುಗಾರಿಕೆ.

 ಇಲ್ಲಿ ಕೇವಲ ನೂರ್‌ ಬಗ್ಗೆ ತಿಳಿಸುವ ಕೆಲಸಕ್ಕೆ ಮಾತ್ರ ಬರಹಗಾರ ನಿಲ್ಲುವುದಿಲ್ಲ. ನೂರಳನ್ನು ಗೌರವಿಸುವ ವಿಚಾರದ ಬಗ್ಗೆಯೂ ಕಳಕಳಿ ಕಂಡುಬರುತ್ತದೆ. ಈ ಕೃತಿ ಕನ್ನಡಕ್ಕೆ ಬಹುಮುಖ್ಯವಾಗಲು ಇನ್ನೊಂದು ಕಾರಣವಿದೆ. ಅದುವೇ ಇಂದಿನ ಜಾತಿ, ಧರ್ಮದ ಸಂಘರ್ಷದ ನಡುವೆ ನೂರ್‌ ಸಾರುವ ಸಂದೇಶ. ನೂರ್‌ ತನ್ನ ಬದುಕಿನಲ್ಲಿ ಪಾಲಿಸಿದ್ದ ಸಂದೇಶ. ಎಲ್ಲಿಯ ಮಾಸ್ಕೋ, ಎಲ್ಲಿಯ ಪ್ಯಾರಿಸ್‌, ಎಲ್ಲಿಯ ಎಸ್‌ಒಇ. ಆದರೆ ಅಲ್ಲೆಲ್ಲಾ ನೂರ್‌ ತನ್ನೊಳಗೆ ಕೊಂಡೊಯ್ದಿದ್ದು ಮಹಾಭಾರತ, ಬುದ್ಧನ ಜಾತಕ ಕಥೆಗಳು, ಸೂಫಿ ಸಿದ್ಧಾಂತ, ವಿಶ್ವಮಾನವತೆ. ಅದಲ್ಲವೇ ಇಂದು ನಮಗೂ ಬೇಕಿರುವುದು. ಇದೇ ಕಾರಣಕ್ಕೆ ನೂರ್‌ ಇನಾಯತ್‌ ಖಾನ್‌ ಪುಸ್ತಕ ಅತ್ಯಮೂಲ್ಯ.


Tuesday, August 20, 2019

ಮಂತ್ರಿಯಾಗದ ಅಂಗಾರ..!


2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ದಿನ ನಿಗದಿಯಾಗಿತ್ತು. ರೇಸ್ ಕೋರ್ಸ್ ರಸ್ತೆಯಲ್ಲಿದ್ದ ಯಡಿಯೂರಪ್ಪ ನಿವಾಸಕ್ಕೆ ಮಂತ್ರಿ ಆಕಾಂಕ್ಷಿಗಳ ದಂಡು ಹರಿದು ಬಂದಿತ್ತು. ಆಗೆಲ್ಲಾ ಬಿಜೆಪಿ ಶಾಸಕರಲ್ಲಿ ಒಂದು ಬಾರಿ, ಎರಡು ಬಾರಿ, ಮೂರು ಬಾರಿ ಆಯ್ಕೆಯಾಗಿದ್ದ ಶಾಸಕರ ದಂಡು ಹೆಚ್ಚಿತ್ತು. ನಾಲ್ಕು ಬಾರಿ, ಐದು ಬಾರೆ ಗೆದ್ದವರು ಕೆಲವರಷ್ಟೇ ಇದ್ದರು. ಮೊದಲ ಬಾರಿ ಗೆದ್ದವರೇ ಮಂತ್ರಿಯಾಗಲು ಲಾಬಿ ಶುರು ಮಾಡಿದ್ದರು. ಹೀಗೆ ಒಬ್ಬೊಬ್ಬರೇ ಶಾಸಕರ ಜೊತೆ ಮಾತಾಡುತ್ತಿದ್ದೆ.  ನಮ್ಮ ತಾಲೂಕು ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರ ಆಗಲೇ ನಾಲ್ಕು ಬಾರಿ ಶಾಸಕರಾಗಿದ್ದರು.  ಹೀಗಾಗಿ ಅವ್ರಿಗೆ ಕರೆ ಮಾಡಿ 'ನೀವೂ ಆಕಾಂಕ್ಷಿ ಇದ್ದೀರಾ?' ಎಂದು ಸಹಜವಾಗಿ ಪ್ರಶ್ನಿಸಿದ್ದೆ. ಆಗಲೇ ಸಂಭಾವ್ಯರ ಪಟ್ಟಿಯಲ್ಲಿ ಅಂಗಾರರ ಹೆಸರು ಹರಿದಾಡಿತ್ತು. ಆದರೆ ಅಂಗಾರರಿಗೆ ಮಂತ್ರಿಯಾಗುವ ನಿರೀಕ್ಷೆಯೂ ಇರಲಿಲ್ಲ. ಆಸೆಯೂ ಇದ್ದಂತೆ ಕಾಣಲಿಲ್ಲ. ಅವರು ಮಂತ್ರಿ ಲಾಬಿಯ ಗೋಜಿಗೂ ಹೋಗದೆ ಶಾಸಕರ ಭವನದಲ್ಲಿ ಹಂಚಿಕೆಯಾಗುವ ಹೊಸ ಕೊಠಡಿಯ ಕಡೆಗೆ ನಡೆದಿದ್ದರು.

ಈ ಬಾರಿ ಅಂಗಾರ ಆರನೇ ಬಾರಿಯ ಶಾಸಕ. ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಳು ಶಾಸಕರಲ್ಲಿ ಆರು ಮಂದಿ ಮೊದಲ ಬಾರಿಯ ಎಂಎಲ್ಎಗಳು. 2013ರಲ್ಲಿ ದಕ್ಷಿಣ ಕನ್ನಡದಲ್ಲಿ ಎಂಟರಲ್ಲಿ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಾಗಲೂ ಸುಳ್ಯದಿಂದ ಅಂಗಾರ ಗೆದ್ದು ಬಂದಿದ್ದರು. ಹೀಗಾಗಿ ಅಂಗಾರ ಮಂತ್ರಿ ಮಂಡಲಕ್ಕೆ ಸಹಜ ಆಯ್ಕೆಯಾಗಿ ಸೇರುವ ನಿರೀಕ್ಷೆಯಿತ್ತು. ಅಂಗಾರರಲ್ಲೂ ಆ ವಿಶ್ವಾಸ ಇತ್ತು.

ಆದರೆ ಅಂಗಾರ ಮಂತ್ರಿಯಾಗಿಲ್ಲ. 2008ರಲ್ಲೇ ನಾನೂ ಆಕಾಂಕ್ಷಿ ಅಂತ ಸಣ್ಣದಾಗಿ ಧ್ವನಿ ಎತ್ತುತ್ತಿದ್ದರೆ ಈಗಲಾದ್ರೂ ಮಂತ್ರಿಯಾಗುತ್ತಿದ್ದರು. ಪಕ್ಷ ನಿಷ್ಠೆ, ಸರಳತೆ ಮೈಗೂಡಿಸಿದ್ದಾರೆ. ಆರು ಬಾರಿ ಶಾಸಕರಾಗಿದ್ದರೂ ವಿಧಾನಸಭೆಯಲ್ಲಿ ಚರ್ಚೆಗಳಲ್ಲಿ ಭಾಗಿಯಾಗಿದ್ದು ಕಡಿಮೆ. ಹಿರಿತನದ ಜೊತೆಗೆ ತನ್ನ ಜೀವನಾನುಭವದ ಆಧಾರದಲ್ಲಿ ಶಾಸನಸಭೆಯ ಚರ್ಚೆಗಳಲ್ಲಿ ಭಾಗಿಯಾಗುವ ವಿಫುಲ ಅವಕಾಶ ಅಂಗಾರರಿಗಿತ್ತು. ಲಾಬಿ ನಡೆಸಲು ಶಕ್ತಿ ಇಲ್ಲದವರು ತಮ್ಮನ್ನು ಕೈಬಿಡಲು ಸಾಧ್ಯವಿಲ್ಲ ಅನ್ನೋದನ್ನು ವಿಧಾನಸಭೆಯಲ್ಲಿ ಭಾಗವಹಿಸುವಿಕೆ  ಮೂಲಕ ತೋರಿಸಿಕೊಡಬೇಕಾಗುತ್ತದೆ.   'ನನಗಿದು ಸಿಗಬೇಕು' ಎಂದು ಕೇಳದಿದ್ದರೆ ರಾಜಕಾರಣದಲ್ಲಿ ಹುದ್ದೆಗಳು ಸುಮ್ಮನೆ ಹುಡುಕಿಕೊಂಡು ಬರೋದಿಲ್ಲ ಎನ್ನುವುದೂ ವಾಸ್ತವ.



Friday, March 8, 2019

ಕತ್ತಲೋಡಿಸದ ಬೆಳಕು




ನಿದನಿಧಾನ ಸಾಗುವ ರಸ್ತೆ
ಇದರ ತಳುಕೇನು? ಬಳುಕೇನು?
ಸುತ್ತು ಸುತ್ತಲೇ ಹತ್ತಿ ಹೋಗುವ ಸುಸ್ತು
ಮನಕೋಟೆಯ ಮುಂದೆ ತಲೆಎತ್ತಿದ ಘಾಟಿ

ಕತ್ತಲಾವರಿಸಿತು. ಘಾಟಿಗೇನು? ಘಾಟಿ 'ಘಾಟಿ'ಯೇ
ಹೆಸರೇ ಕೃಷ್ಣ. ಕಪ್ಪು ಕತ್ತಲು.
ಸುತ್ತಲೂ ಝಗಮಗಿಸುತಿದೆ ಬೆಳಕು. ಮನೆಗಳು.. 
ಒಂದು, ಎರಡು, ಮೂರು.. ನೂರು, ಇನ್ನೂರು.. 
ಸಾವಿರವೇ? ದಾಟಿರಬೇಕು. ಎಣಿಸುವುದು ಇತ್ತಲೋ? 
ಅತ್ತಲೋ...?

ಅತ್ತಲೆಂದರೆ ಅತ್ತಲೇ. ಇತ್ತಲಿಂದಲೇ ಹೋದ ಅತ್ತಲಿಂದಲೇ ತೂರಿ ಬರುತಿದೆ ಬೆಳಕು. ಕತ್ತಲೋಡಿಸಲು
ಆವರಿಸಿದೆ ಅಲ್ಲೂ.. ಇಲ್ಲೂ


ಅತ್ತಲಿಂದಿತ್ತ ಇತ್ತಿಲಿಂದ ಹೋಗುತಿದೆ ಅತ್ತಕೂ.. ಬೆಳಕಿಗೆಲ್ಲಿದೆ ಬೇಲಿ? 
ಬೇಲಿಯೇ? ಬೇಲಿಯೂ ಇದೆ ನಡುವೆ. ಬೇಲಿಗೂ ಬೆಳಕು. ನಸುನಕ್ಕು ಬೆಳಕು ಬೀರುತಿದೆ ಬೆಳಕು. ನಸುನಕ್ಕಿದ್ದು ಹೌದೋ? ಹೌದೆಂದಿತು ಮನ. ಅಲ್ಲವೋ? ಅಲ್ಲದೆಯೂ ಇರಬಹುದು. ನಿರ್ಲಿಪ್ತ. ನನಗೇನಿದೆ ಹಂಗು? ನಗುವೂ ಇಲ್ಲ ಅಳುವೂ..

ಬೇಲಿ ಬೆಳಕುಗಳ ಮೀರಿ ಹಾರಿ ಬರುತಲಿದೆ 
ಸಿಡಿತಲೆಯ ಮದ್ದು ಗುಂಡು
ಢಂ.. ಢಮಾರ್.. ಅಬ್ಬರ.. ಸದ್ದಡಗುವ ನಡುವೆ ಚೀತ್ಕಾರ
ಕಷ್ಣಘಾಟಿಯ ಮಡಿಲ ಮಕ್ಕಳ ಕೂಗು

ಚೆಲ್ಲಿದ ರಕ್ತಕ್ಕೆ ಪ್ರತೀಕಾರದ ಪ್ರತಿಜ್ಞೆ
ಹಾರಲೇಬೇಕು ಸಿಡಿತಲೆಯ ಮದ್ದು
ಸಿಡಿಯಲೇಬೇಕು ಗುಂಡು.. ಚೆಲ್ಲಬೇಕು ರಕ್ತ
ರಕ್ತಕ್ಕೆ ರಕ್ತವೇ ಉತ್ತರ.. ಹಾ ಹಾ.. ರಕ್ತವೇ ಉತ್ತರ.
ಹಾರಿಹೋಗಿದ್ದು ರಕ್ತ ಬೇಕಿಲ್ಲದವರ ಪ್ರಾಣ
ಈಗಲಾದರು ಹರಿಯುವುದು ನಿಲ್ಲುತ್ತಾ ರಕ್ತ? ಇಲ್ಲ?

ನಗು ಮರೆತು ನಿರ್ಲಿಪ್ತವಾಗಿ ಬೆಳಕು ಬೀರುತಿದೆ ಬೇಲಿ
ಮೈಲುದ್ದದವರೆಗೂ ನೆರಳಾಗಿ ಕಾಡುತಿದೆ ಭಯ
ಯಾವುದರ ಗೊಡವೆಯಿಲ್ಲದೆ ನಿದ್ರೆಗೆ ಜಾರುತಿದೆ ಘಾಟಿ
ಕೃಷ್ಣಘಾಟಿ.

- ಹರಿಪ್ರಸಾದ್ ಅಡ್ಪಂಗಾಯ

(ಮನಕೋಟೆಯಿಂದ ಕೃಷ್ಣಘಾಟಿ ಹತ್ತಿಳಿದು ಪೂಂಚ್ ಗೆ ಬರುವ ಹಾದಿಯಲ್ಲಿ ಬರೆದಿದ್ದು)

Wednesday, September 5, 2018

ಧೈರ್ಯ ತುಂಬಿದ ಭಾಷಣ..!


ಹಲೋ..
ಹಲೋ..
ಹರಿಪ್ರಸಾದ್‌.. ?
ಹೌದು.. ಹಲೋ..
ಹಲೋ.. ಗೊತ್ತಾಯ್ತಾ ಯಾರೂ ಅಂತ..
ಹೆಚ್‌ಎಂ ಸರ್‌..
ಹಾಂ.. ಗುರುತು ಹಿಡಿದೆ..
ಮೊನ್ನೆಯಷ್ಟೇ ಹೆಚ್‌ಎಂ ಫೋನ್‌ ಮಾಡಿದಾಗ ನಮ್ಮಿಬ್ಬರ ನಡುವಿನ ಮಾತು ಶುರುವಾಗಿದ್ದು ಹೀಗೆ. ಹೆಚ್‌ಎಂ ಈಗ ರಾಮನಗರದ ಡಿಡಿಪಿಐ ಆಗಿದ್ದಾರೆ. ಆದ್ರೆ ನಮ್ಗೆ ಈಗ್ಲೂ ಅವ್ರು ಹೆಚ್‌ಎಂ.

ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕಿನ ಅಜ್ಜಾವರ ಪ್ರೌಢಶಾಲೆಗೆ ಹೆಚ್‌ಎಂ ಆಗಿ ಗಂಗಮಾರೇಗೌಡರು ಬಂದಾಗ ನಾನು ಎಂಟನೇ ಕ್ಲಾಸ್‌ನ ವಿದ್ಯಾರ್ಥಿ. ಆದ್ರೆ ಹೈಸ್ಕೂಲ್‌ನಲ್ಲೂ ವಿದ್ಯಾರ್ಥಿಗಳ ಕೈ ಬರಹ ತಿದ್ದಬಹುದು, ಅಕ್ಷರ ಚಂದ ಬರೆಯುವಂತೆ ಮಾಡಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದು ಗಂಗಮಾರೇಗೌಡರು. ಅದುವರೆಗೆ ಕಾಟಾಚಾರಕ್ಕೆ ಬರೀತಿದ್ದ ಕಾಪಿಯನ್ನು ತಿದ್ದಿ ತೀಡಿದ್ದು ಅವರೇ. ಬೋರ್ಡ್‌ ಮೇಲೆ ಗೆರೆ ಎಳೆದು ಅಲ್ಲೇ ಅ, , , .. ಬರೆದು, ,ಬಿ,ಸಿ,ಡಿ.. ಬರೆದು ಹೇಗೆ ಅಕ್ಷರಗಳನ್ನು ಚಂದಗೆ ಬರೀಬೇಕು ಅಂತ ತೋರಿಸಿಕೊಟ್ಟಿದ್ದರು. ಅವರ ಕೈ ಬರಹದಲ್ಲಿ ಕನ್ನಡದ ಅಕ್ಷರಗಳು ಬೋರ್ಡ್‌ ಮೇಲೆ ಅರಳಿದ ಹೂವುಗಳಂತೆಯೇ ಭಾಸವಾಗುತ್ತಿದ್ದವು. ಕನ್ನಡದ ಸ್ಪಷ್ಟ ಉಚ್ಛರಣೆ ಕಲಿಸಿದ್ದು ಪ್ರೈಮರಿಯಲ್ಲಿ ಜನಾರ್ಧನ ಮಾಷ್ಟ್ರು ಹಾಗೂ ರುಕ್ಮಿಣಿ ಟೀಚರ್‌. ಆದರೆ ಇವತ್ತಿಗೂ ಕಿವಿಯಲ್ಲಿರುವ ಕಂಚಿನ ಕಂಠ ಗಂಗಮಾರೇಗೌಡರದ್ದು.
ಕೆಲವೊಂದು ಸಂದರ್ಭಗಳಲ್ಲಿ ಯಾವುದೋ ಸಮಸ್ಯೆಯನ್ನು ಎದುರಿಸಲು ಹಿಂಜರಿಕೆಯಾದಾಗ ಸದಾ ನೆನಪಾಗುವುದು ಗಂಗಮಾರೇಗೌಡರು ಮಾಡಿದ್ದ ಒಂದು ಭಾಷಣ. ಅದು ನಮ್ಮ ಹೈಸ್ಕೂಲಿನ ವಾರ್ಷಿಕೋತ್ಸವದಲ್ಲಿ ಅವರು ಮಾಡಿದ್ದ ಭಾಷಣ. ಅನೇಕ ವರ್ಷಗಳ ನಂತರ ಅದೇ ಮೊದಲ ಬಾರಿಗೆ ನಮ್ಮ ಹೈಸ್ಕೂಲಿನಲ್ಲಿ ವಾರ್ಷಿಕೋತ್ಸವ ನಡೆದಿತ್ತು. ಈ ವಾರ್ಷಿಕೋತ್ಸವಕ್ಕೂ ಮೊದಲು ಅಜ್ಜಾವರ ಹೈಸ್ಕೂಲಿನ ವಿಶಾಲವಾದ ಗ್ರೌಂಡ್‌ನಲ್ಲಿ ಇದ್ದ ಏರು ತಗ್ಗುಗಳನ್ನು ಜೆಸಿಬಿ ತರಿಸಿ ರಾತ್ರಿ ಹಗಲು ಕೆಲಸದ ಮೂಲಕ ಸರಿ ಮಾಡಿಸಿದ್ದು ಗಂಗಮಾರೇಗೌಡರು ಹೆಚ್‌ಎಂ ಆಗಿದ್ದಾಗ. ಆದರೆ ಹೀಗೆ ಕೆಲಸ ಮಾಡಿದ್ದಕ್ಕೆ ಗಂಗಮಾರೇಗೌಡರ ವಿರುದ್ಧವೇ ಒಂದಷ್ಟು ಆಪಾದನೆಗಳನ್ನು ಮಾಡಿದ್ದರು ಎಂದು ನೆನಪು. ಇದರ ಜೊತೆಗೆ ನಮ್ಮ ಊರಲ್ಲಿ ಕಾಂಗ್ರೆಸ್‌-ಬಿಜೆಪಿ ಅಂತ ದೊಡ್ಡ ಮಟ್ಟದ ರಾಜಕಾರಣ ಬೇರೆ. ಇಂತಹ ಸಂದರ್ಭದಲ್ಲೇ ವಾರ್ಷಿಕೋತ್ಸವ ಆಚರಣೆಗೆ ಗಂಗಮಾರೇಗೌಡರು ನಿರ್ಧರಿಸಿದ್ದರು. ಆದರೆ ಅದನ್ನು ವಿರೋಧಿಸಿ ಒಂದು ಗುಂಪು ವಾರ್ಷಿಕೋತ್ಸವದ ದಿನ ಕಪ್ಪುಬಾವುಟ ಪ್ರದರ್ಶಿಸುವ ಬೆದರಿಕೆ ಹಾಕಿದ್ದರು. ಈ ಗುಸುಗುಸು ವಿದ್ಯಾರ್ಥಿಗಳಾಗಿದ್ದ ನಮಗೆಲ್ಲಾ ಒಂದು ರೀತಿಯ ಆತಂಕ ಸೃಷ್ಟಿಸಿತ್ತು. ಆದರೆ ವಿದ್ಯಾರ್ಥಿಗಳ ಮನಸ್ಸನ್ನು ತಿಳಿಗೊಳಿಸುವ ದೃಷ್ಟಿಯಿಂದಲೋ ಏನೋ (ಈಗ ಯೋಚಿಸುವಾಗ ಹಾಗನ್ನಿಸುತ್ತದೆ) ಕಲ್ಲಡ್ಕದ ಬೊಂಬೆಗಳು, ಕೀಲು ಕುದುರೆ ತರಿಸಿ ನೀಲಗಿರಿ ಅಡ್ಕದಿಂದ ಹೈಸ್ಕೂಲ್‌ವರೆಗೆ ಸುಮಾರು ಅರ್ಧ ಕಿಲೋಮೀಟರ್‌ ಉದ್ದಕ್ಕೆ ವಾರ್ಷಿಕೋತ್ಸವದ ಉದ್ಘಾಟನೆಗೂ ಮೊದಲು ಮೆರವಣಿಗೆ ನಡೆಸಿದ್ದರು.

ಇದಾದ ನಂತರ ವಾರ್ಷಿಕೋತ್ಸವದ ಉದ್ಘಾಟನೆ ವೇಳೆ ಶಾಲೆಯ ವರದಿಯನ್ನು ಮಂಡಿಸಿ ಗಂಗಮಾರೇಗೌಡರು ಅವತ್ತು ಒಂದು ಭಾಷಣ ಮಾಡಿದ್ದರು. ಕ್ಲಾಸ್‌ರೂಂನಲ್ಲಿ ಕೇಳುತ್ತಿದ್ದ ಕಂಚಿನ ಕಂಠ ಅವತ್ತು ಇನ್ನಷ್ಟು ಸ್ಪಷ್ಟವಾಗಿ, ಅಧಿಕಾರಯುತವಾಗಿ, ವಿಶ್ವಾಸದಿಂದ ಮೊಳಗಿತ್ತು. ‘ಒಬ್ಬ ಸರ್ಕಾರಿ ನೌಕರನಾಗಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ಕೆಲಸ ಮಾಡಲು ನಾನು ತಯಾರಿದ್ದೇನೆ...' ಎಂದು ಗೌಡರು ಹೇಳಿದ್ದರು. ಇದು ಕಪ್ಪುಬಾವುಟ ಪ್ರದರ್ಶಿಸುವ, ಚಿಲ್ರೆ ಪಾಲಿಟಿಕ್ಸ್‌ ಮಾಡುವವರಿಗೆ ಗಂಗಮಾರೇಗೌಡರು ಕೊಟ್ಟ ಎಚ್ಚರಿಕೆಯಂತಿತ್ತು. ಅಂದಿನ ನಂತರ ಮತ್ತೆಂದೂ ಗಂಗಮಾರೇಗೌಡರ ವಿರುದ್ಧ ಆಪಾದನೆ ಮಾಡುವ ಧೈರ್ಯ ಪ್ರದರ್ಶಿಸಿದ್ದು ನಾನು ಕಂಡಿಲ್ಲ. ಅವರ ಅವಧಿಯಲ್ಲೇ ತಾಲೂಕು ಮಟ್ಟದ ಕ್ರೀಡಾಕೂಟ, ಜಿಲ್ಲಾ ಮಟ್ಟದ ಯೋಗ ಸಮ್ಮೇಳನ, ಶಾಲಾ ವಾರ್ಷಿಕೋತ್ಸವ ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಡೆದಿದ್ದವು. ಒಂದು ರೀತಿಯಲ್ಲಿ ಅಜ್ಜಾವರ ಪ್ರೌಢಶಾಲೆಯ ಸುವರ್ಣ ದಿನಗಳವು. ಅದೇ ಸಂದರ್ಭದಲ್ಲಿ ನಾನು ಅಲ್ಲಿನ ವಿದ್ಯಾರ್ಥಿ.

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಇದೆಲ್ಲಾ ನೆನಪಾಯಿತು. ಗಂಗಮಾರೇಗೌಡರ ರೀತಿಯಲ್ಲೇ ನನ್ನನ್ನು ತಿದ್ದಿತೀಡಿ ಪ್ರಭಾವಿಸಿದ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯ.



Saturday, August 25, 2018

ಡಿಗ್ರಿ ದಿನಗಳ ಪ್ರಧಾನಿ..!



ಕಳೆದೊಂದು ವಾರದಿಂದ ವಾಜಪೇಯಿಯವರ ಕಾವ್ಯಲೋಕದಲ್ಲಿ ವಿಹಾರ ಮಾಡುವಂತಾಗಿದೆ. ‘ಗೀತ್‌ ನಹೀ ಗಾತಾ ಹೂಂ..' ನಿಂದು ಶುರುವಾಗಿ ‘ಗೀತ್‌ ನಯಾ ಗಾತಾ ಹೂಂ..' ಎನ್ನುವ ಕವಿಯ ಮನ. ಅದನ್ನು ಹೇಳುವಾಗ ಕವಿ ವಾಜಪೇಯಿಯವರ ಮುಖದ ಹಾವಭಾವ..!

ವ್ಯಕ್ತಿಗೆ ಸಾವಿದೆ. ಆದರೆ ಕವಿಗೆ ಸಾವಿಲ್ಲ. ಯಾಕಂದ್ರೆ ಕವಿಯ ಕವಿತೆ ಓದುವಾಗೆಲ್ಲಾ ಜೊತೆಗೆ ಕುಳಿತು ಓದಿಸುತ್ತಾನೆ. ಕವಿಯ ಭಾವನೆಗಳು ಜೀವಂತವಾಗಿರುತ್ತವೆ. ಅದರಲ್ಲಿ ಕವಿ ಜೀವಂತವಾಗಿರುತ್ತಾನೆ. ರಾಜಕಾರಣಿ ವಾಜಪೇಯಿ ಇಹಲೋಕ ತ್ಯಜಿಸಿರಬಹುದು. ಆದರೆ ಕವಿ ವಾಜಪೇಯಿಯ ಕವಿತೆಗಳು ಜೊತೆಗಿರುತ್ತವೆ. ‘ಕಾಲನ ಕಪಾಲದ ಮೇಲೆ ನನ್ನ ಭವಿಷ್ಯ ನಾನೇ ಬರೆಯುತ್ತೇನೆ' ಎಂಬ ಸಾಲುಗಳಲ್ಲಿರುವ ವಿಶ್ವಾಸವೇ ಇದು.

ನಾನು ಪಿಯು ಓದುವಾಗ ಶುರುವಾಗಿ ಡಿಗ್ರಿ ಮುಗಿಸಿ ಮೊದಲ ವರ್ಷದ ಪಿಜಿ ಮುಗಿಸುವವರೆಗೆ ಪ್ರಧಾನಮಂತ್ರಿಯಾಗಿದ್ದವರು ಅಟಲ್‌ ಬಿಹಾರಿ ವಾಜಪೇಯಿ. ಹೀಗಾಗಿ ನಮ್ಮ ಕಾಲೇಜು ದಿನಗಳ ಸಂದರ್ಭದಲ್ಲಿ ಪ್ರಧಾನಿಯಾಗಿದ್ದರಿಂದ ಸ್ಪಷ್ಟವಾಗಿ ಒಂದು ಸರ್ಕಾರ, ಪ್ರಧಾನಮಂತ್ರಿಯ ಕಾರ್ಯವೈಖರಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದ್ದ ಮೊದಲ ಪ್ರಧಾನಮಂತ್ರಿ ವಾಜಪೇಯಿ. ಬಸ್‌ ಏರಿ ಲಾಹೋರ್‌ಗೆ ಹೊರಟಿದ್ದ ವಾಜಪೇಯಿ ಅಚ್ಚರಿ ಮೂಡಿಸಿದ್ದರು. ‘ ಶಾಂತಿಗೆ ಬದ್ಧರಿದ್ದೇವೆ. ಆದರೆ ಯುದ್ಧಕ್ಕೂ ನಾವು ಸಿದ್ಧರಿದ್ದೇವೆ' ಎಂದು ವಾಜಪೇಯಿ ಕಾರ್ಗಿಲ್‌ ಯುದ್ಧದ ವೇಳೆ ಮಾಡಿದ್ದ ಘೋಷಣೆ ಈಗಲೂ ಮನಸಿನಾಳದಲ್ಲಿ ಹಸಿರಾಗಿದೆ. ಜೈ ಜವಾನ್‌, ಜೈ ಕಿಸಾನ್‌ ಎಂಬ ಘೋಷಣೆಗಳಿಗೆ ದೆಹಲಿಯ ಕೆಂಪು ಕೋಟೆಯ ಮೇಲೆ ನಿಂತು ಜೈ ವಿಜ್ಞಾನ್‌ ಎಂದು ಸೇರಿಸಿದಾಗ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನಗಾಗಿದ್ದ ಆನಂದ ಅಷ್ಟಿಷ್ಟಲ್ಲ.

ಡಿಗ್ರಿಯಲ್ಲಿದ್ದಾಗ ಒಂದು ಕವಿತೆ ಬರೆದಿದ್ದೆ. ಆ ಕವಿತೆಯನ್ನು ನಾನು ಬರೆದಿದ್ದು ಪ್ರಧಾನಿ ವಾಜಪೇಯಿಯವರು ದೆಹಲಿಯಲ್ಲಿ ವಿಪರೀತಿ ಚಳಿ, ಹಿಮಪಾತದ ಸಂದರ್ಭದಲ್ಲಿ ಒಂದು ವಾರದ ಮಟ್ಟಿಗೋ ಏನೋ ವಿಶ್ರಾಂತಿಗೆಂದು ಗೋವಾಗೆ ತೆರಳಿದ್ದರು. ಅದನ್ನು ಟೀಕಿಸಿ ಆ ಕವಿತೆಯನ್ನು ಬರೆದಿದ್ದೆ. ಅದನ್ನು ಓದಿದ್ದ ನಮ್ಮ ಎನ್ನೆಂಸಿಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಶಿವಣ್ಣ ಸರ್ ತುಂಬಾ ಚೆನ್ನಾಗಿ ಬರೆದಿದ್ದಿ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾನು ಬರೆದಿದ್ದ ಕವಿತೆಗೆ ಅವರಿಂದ ಸಿಕ್ಕ ಮೊದಲ ಪ್ರಶಂಸೆ ಅದಾಗಿತ್ತು.

ವಾಜಪೇಯಿ ಪ್ರಧಾನಿ ಹುದ್ದೆಯ ಅಂತಿಮ ದಿನಗಳಲ್ಲಿ ಮೊಣಕಾಲಿನ ಆಪರೇಷನ್‌ ಆದ ನಂತರ ನಡೆಯುವಾಗ ತುಂಬ ಕಷ್ಟಪಡುತ್ತಿದ್ದರು. ಮಾತುಗಳಲ್ಲಿ ಹಳೆಯ ವೈಖರಿಯಲ್ಲಿ ತರಲು ಪ್ರಯಾಸಪಡುತ್ತಿದ್ದರು. ಮುಂದೆ 2004ರ ಚುನಾವಣೆಯಲ್ಲಿ ‘ಇಂಡಿಯಾ ಶೈನಿಂಗ್‌' ಕ್ಯಾಂಪೇನ್‌ ಮಾಡಿದ್ರೂ ವಾಪಸ್‌ ಅಧಿಕಾರಕ್ಕೇರಲು ಸಾಧ್ಯವಾಗಿರಲಿಲ್ಲ. ಅಲ್ಲಿಂದ ನಂತರ ನಿಧಾನಕ್ಕೆ ಅನಾರೋಗ್ಯಕ್ಕೆ ಒಳಗಾದ ವಾಜಪೇಯಿ ಕಳೆದು ಒಂದು ದಶಕದಿಂದ ಹೊರಗೆ ಕಾಣಿಸಿಕೊಂಡಿರಲಿಲ್ಲ. ಅವರ ಭಾಷಣಗಳನ್ನು ಕಳೆದೊಂದು ದಶಕದ ಯುವಕರಿಗೆ ಕೇಳಿಸಿಕೊಳ್ಳುವ ಸೌಭಾಗ್ಯ ಸಿಕ್ಕಿರಲಿಲ್ಲ.

ವಾಜಪೇಯಿ ಸ್ವತಂತ್ರ ಭಾರತದ ಶ್ರೇಷ್ಠ ನಾಯಕರ ಸಾಲಿನಲ್ಲಿ ಸದಾ ನಿಂತಿರುತ್ತಾರೆ. ಅದು ಕೇವಲ ಅವರು ಪ್ರಧಾನಮಂತ್ರಿಯಾಗಿದ್ದರು ಎಂಬ ಕಾರಣಕ್ಕೋ, ಪ್ರಧಾನಮಂತ್ರಿಯಾಗಿ ಮಾಡಿದ ಕೆಲಸದಿಂದಲೋ ಮಾತ್ರವಲ್ಲ. ಓರ್ವ ಅಪ್ಪಟ ನಾಯಕನಾಗಿ. ನೇತಾರನಾಗಿ. ಸಂಸದೀಯ ಪಟುವಾಗಿ. ದೇಶದ ಕಟ್ಟಾಳುವಾಗಿ, ಚಿಂತಕನಾಗಿ. ಮಾರ್ಗದರ್ಶಿಯಾಗಿ. ಕವಿಯಾಗಿ.

ಅದೇಕೋ ಏನೋ, ವಾಜಪೇಯಿ ಅಂತಿಮ ದರ್ಶನದ ವೇಳೆ ತುಂಬಾ ಕಾಡಿದ್ದು ಎಲ್‌.ಕೆ.ಅಡ್ವಾಣಿ.