Monday, June 13, 2011

ಬಾಲ್ಯದ ನೆನಪುಗಳ ಸುತ್ತ...!

ಬಾಲ್ಯದ ನೆನಪುಗಳು ಮನಸಸಿಗೆ ಅತ್ಯಂತ ಮುದ ನೀಡುತ್ತವೆ . ಹಳ್ಳಿಗಾಡಿನಲ್ಲಿ ಬೆಳೆದವರ ನೆನಪಿನ ಬುತ್ತಿಯಲ್ಲಿ ಇಂತಹ ಮೊಗೆದಷ್ಟು ಮುಗಿಯದ ಕಥೆಗಳಿರುತ್ತವೆ.
ಆಗಿನ್ನೂ ನಾನು ನಾಲ್ಕೋ -ಐದೋ ವರ್ಷದವನು. ಶಾಲೆಗೆ ಇನ್ನೂ ಸೇರಿರಲಿಲ್ಲ ಅಂತ ನೆನಪು. ಅವತ್ತು ನಮ್ಮಲ್ಲಿ ತೆಂಗಿನ ಮರಗಳಿಂದ ತೆಂಗಿನ ಕಾಯಿ ಕೀಳುತ್ತಿದ್ದರು. ಹಾಗೆ ಕಿತ್ತು ತಂದ ತೆಂಗಿನ ಕಾಯಿ ರಾಶಿ ಮನೆ ಅಂಗಳದಲ್ಲಿತ್ತು. ದೊಡ್ಡಣ್ಣ ಮೆಟ್ಟಿಲ ಮೇಲೆ ಕುಳಿತಿದ್ದ. ನಾನು ಒಂದು ಕಡ್ಪತ್ತಿ ( ಸೊಪ್ಪು ತರಿಯಲು ಬಳಸುವ ಕತ್ತಿ) ಹಿಡ್ಕೊಂಡು ತೆಂಗಿನ ಕಾಯಿ ಇಲ್ಲದ ಕಿಲೆಯನ್ನು ಕಡೀತಾ ಇದ್ದೆ. ದೊಡ್ಡಣ್ಣ ಮನೆ ಮೆಟ್ಟಿಲಲ್ಲೇ ಕುಳಿತು ಹಾಗೆ ಕಡೀಬೇಡ ಅಂತ ಬಯ್ಯುತ್ತಾ ಇದ್ದ. ಆದ್ರೆ ನಾನು ಅಣ್ಣನ ಮಾತಿಗೆ ಕ್ಯಾರೇ ಅನ್ನದೆ ನನ್ನ ಪಾಡಿಗೆ ಕಡೀತಾ ಇದ್ದೆ. ಅದೂ ಎತ್ತೊದಿಕ್ಕೆ ಸಾಧ್ಯವಿಲ್ಲದ ಭಾರವಾಗಿದ್ದ ಕತ್ತಿಯನ್ನು ಎತ್ತಿಕೊಂಡು. ಆಗ ಇದ್ದಕ್ಕಿದ್ದಂತೆ ನಾನು ಕಡೀತಿದ್ದ ಕತ್ತಿ ತಾಗಿದ್ದು ನನ್ನ ಎಡಗೈ ಹೆಬ್ಬರಳಿಗೆ. "ಅವ್ವಾ... " ಎಂದು ಜೋರಾಗಿ ಅಳೋದಿಕ್ಕೆ ಶುರು ಮಾಡಿದೆ. ರಕ್ತ ಚಿಮ್ಮಿ ಬರುತ್ತಿತ್ತು. ನೋಡಿದ್ರೆ ಎಡಗೈ ಹೆಬ್ಬೆರಳಿನ ಎಲುಬು ಅರ್ಧ ಕಟ್ ಆಗಿ ನೇತಾಡುತ್ತಿತತ್ತು. ಅಳುತ್ತಿದ್ದ ನನ್ನನ್ನು ಸಮಾಧಾನಿಸೋದು ಅವ್ವ, ಅಣ್ಣಂದಿರು ಹಾಗೂ ಅಕ್ಕಂದಿರಿಗೆ ಸಾಧ್ಯವಾಗದ ಕೆಲಸವಾಗಿತ್ತು.
ಮನೆಯಿಂದ ನನ್ನನ್ನು ಎತ್ತಿಕೊಂಡೇ ಅಜ್ಜಾವರದಲ್ಲಿರುವ ಡಾಕ್ಟರ್ ಕ್ಲಿನಿಕ್ ಗೆ ಕರಕೊಂಡು ಹೋದ್ರು. ಡಾಕ್ಟ್ರು ಅದ್ಯಾವುದೋ ವಕ್ರವಾಗಿರುವ ಸೂಜಿಗೆ ನೂಲು ಹಾಕಿ ಆರೋ - ಏಳೋ ಸ್ಟಿಚ್ ಹಾಕಿದ್ರು. ಹೆಬ್ಬರಳಿನ ಸುತ್ತ ದೊಡ್ಡ ಬ್ಯಾಂಡೇಜ್ ಬೇರೆ ಕಟ್ಟಿದ್ರು. ಅವತ್ತು ಅನುಭವಿಸಿದ ನೋವು ಈಗಲೂ ಮನಸ್ಸಿನ ಮೂಲೆಯಲ್ಲಿ ಹಾಗೆಯೇ ನೆನಪಲ್ಲಿ ಉಳಿದಿದೆ.
ಆದ್ರೆ ಅದಕ್ಕಿಂತಲೂ ಹೆಚ್ಚು ನೆನಪಲ್ಲಿರೋದು ರತ್ನೋಜಿ ಅಣ್ಣನ ಹೊಟೇಲ್ ನಲ್ಲಿ ತಿನ್ನುತ್ತಿದ್ದ ಶೀರಾ( ಕೇಸರಿಬಾತ್) ಮತ್ತು ಚಾ. ಬೆರಳಿಗೆ ಕಟ್ಟಿದ್ದ ಬ್ಯಾಂಡೇಜ್ ಬಿಚ್ಚುವವರೆಗೂ ಅಪ್ಪ ನನ್ನನ್ನು ಕರೆದುಕೊಂಡು ಅಜ್ಜಾವರಕ್ಕೆ ಹೋಗುತ್ತಿದ್ದರು. ಆಗೆಲ್ಲಾ ಅಲ್ಲಿ ಡಾಕ್ಟರ್ ಹತ್ರ ಹೋಗಿ ಬಂದ್ಮೇಲೆ ಅಲ್ಲೇ ಇರುವ ರತ್ನೋಜಿ ಅಣ್ಣನ ಹೊಟೇಲ್ ನಲ್ಲಿ ಕುಳಿತು ಅಪ್ಪ ಶೀರಾ ತಿನ್ನಿಸ್ತಿದ್ರು. ನಮ್ಮ ಮನೇಲಿ ಶೀರಾ ಮಾಡ್ತಿದ್ದುದು ವರ್ಷದಲ್ಲಿ ಒಂದೇ ದಿನ. ಅದು ನನ್ನ ಬರ್ತ್ ಡೇ ದಿನದಂದು ಮಾತ್ರ. ಅದನ್ನು ಬಿಟ್ರೆ ಶೀರಾ ಟೇಸ್ಟ್ ಮಾಡುವ ಅವಕಾಶ ಸಿಗುತ್ತಿದ್ದುದು ರತ್ನೋಜಿ ಅಣ್ಣನ ಹೊಟೇಲ್ ನಲ್ಲಿ ಮಾತ್ರ. ಮೊನ್ನೆ ಊರಿಗೆ ಹೋಗಿದ್ದಾಗ ಅಪ್ಪನ ಜೊತೆ ರತ್ನೋಜಿ ಅಣ್ಣನ ಹೊಟೇಲ್ ಗೂ ಹೋಗಿದ್ದೆ. ಆಗ ಈ ಎಲ್ಲಾ ನೆನಪುಗಳು ಮನಸ್ಸಲ್ಲಿ ಸುಳಿದುಹೋದವು. ಸುಮಾರು ೨೫ ವರ್ಷಗಳ ನಂತ್ರವೂ ಅವ್ರು ಅದೇ ಉತ್ಸಾಹದಲ್ಲಿ ಅಜ್ಜಾವರದಲ್ಲಿ ಹೊಟೇಲ್ ನಡೆಸುತ್ತಿದ್ದಾರೆ.
ಇನ್ನು ಬಾಲ್ಯದ ದಿನಗಳಲ್ಲಿ ಮೀನಿಗೆ ಗಾಳ ಹಾಕುತ್ತಿದ್ದ ಮಜಾನೇ ಬೇರೆ. ಜಾರುತ್ತಿದ್ದ ಚಡ್ಡಿಯನ್ನು ಎತ್ತಿಕಟ್ಟಿಕೊಂಡು ಕೆಸುವಿನ ಬುಡಗಳಲ್ಲಿ ಇರುತ್ತಿದ್ದ ಎರೆಹುಳು ಹಿಡೀತಿದ್ದೆವು. ನಂಗೂ ಶಾಮಣ್ಣಗೂ ಇದೇ ಕೆಲಸ. ಒಮ್ಮೊಮ್ಮೆ ಅಪ್ಪ ನನ್ನ ಸಹಾಯಕ್ಕೆ ಬರುತ್ತಿದ್ದುದೂ ಇತ್ತು. ಎರೆಹುಳು ಸಿಗದಿದ್ರೆ ಕಪ್ಪೆ ಹಿಡಿದು ಅದನ್ನೇ ಗಾಳಕ್ಕೆ ಕಟ್ಟುತ್ತಿದ್ದೆವು. ಆ ಕಪ್ಪೆ ಹಿಡಿಯೋದಿಕ್ಕೆ ಅದ್ರ ಸುತ್ತ ತಿರುಗಣಿ ತರ ಕೈ ಸುತ್ತಿಸೋದು. ಆಗ ಕಪ್ಪೆಗೂ ತಲೆ ತಿರುಗುತ್ತೆ ಅನ್ನೋದು ನಮ್ಮ ನಂಬಿಕೆ. ಆಗೆ ಕೈ ಸುತ್ತಾಡಿಸ್ತಾ ಇದ್ರೆ ಕಪ್ಪೆ ಕದಲದೆ ಸುಮ್ಮನೆ ಕುಳಿತಿರುತ್ತಿತ್ತು. ಆಗ ಗಬಕ್ಕನೆ ಅದನ್ನು ಹಿಡ್ಕೊಳ್ಳುತ್ತಿದ್ದೆವು. ಆಮೇಲೆ ಅದ್ರ ಬೆನ್ನಿಗೆ ಗಾಳ ಚುಚ್ಚುತ್ತಿದ್ದೆವು. ಏರೆ ಹುಳವನ್ನಾದ್ರೆ ಗಾಳಕ್ಕೆ ಪೈಪ್ ಹಾಕುವಂತೆ ಅದನ್ನು ಚುಚ್ಚುತ್ತಿದ್ದೆವು. ನಮ್ಮ ಅಡ್ಪಂಗಾಯ ಹೊಳೆಯಲ್ಲಿ ಮಳೆ ಬಂದು ಕೆಂಪು ನೀರು ಬಂದ್ರೆ ಸಾಕು ನಾವು ಸ್ಕೂಲ್ ಮುಗಿಸ್ಕೊಂಡು ಬಂದು ಗಾಳ ಹಾಕೋದ್ರಲ್ಲೇ ಬ್ಯುಸಿ. ಜೋರಾಗಿ ಸುಳಿಯುತ್ತಿದ್ದ ಮಳೆ. ಆಗ ಕೊಡೆಯೋ, ಅಥವಾ ಪ್ಲಾಸ್ಟಿಕ್ ಗೊರಬನ್ನೋ ಹಾಕ್ಕೊಂಡು ಓಟೆ ಹಿಂಡಲಿನ ಹತ್ರ ಮೀನಿಗೆ ಗಾಳ ಹಾಕ್ಕೊಂಡು ಕುಳಿತಿರುತ್ತಿದ್ದೆ. ಮಳೆ ಇಲ್ಲದಾಗ್ಲೂ ಗಾಳ ಹಾಕ್ಕೊಂಡು ಮೀನು ಈಗ ಬೀಳುತ್ತೆ, ಸ್ವಲ್ಪ ಹೊತ್ತಲ್ಲಿ ಬೀಳುತ್ತೆ ಅಂತ ಕಾಯುತ್ತಿದ್ದೆವು. ಇನ್ನೇನು ಬಿದ್ದೇ ಬೀಳುತ್ತೆ ಅಂತ ಕಾಯೋದು. ಇವತ್ತು ಎಲ್ಲಾದ್ರೂ ದೊಡ್ಡ ಮೀನು ಗಾಳಕ್ಕೆ ಕಚ್ಕೊಂಡ್ರೆ ಹೆಂಗಪ್ಪಾ ಅಂತ ಯೋಚಿಸೋದು. ದೊಡ್ಡ ಮೀನು ಕಚ್ಚಿದ್ರೆ ವೊಟೆಯ ಕೋಲಿಗೆ ಕಟ್ಟಿರೋ ನನ್ನ ಗಾಳವನ್ನೂ ಅದು ಕಚ್ಚಿಕೊಂಡು ಹೋಗೇ ಬಿಡುತ್ತೇನೋ ಎಂಬ ಭಯ ಬೇರೆ. ಅದ್ರ ಮಧ್ಯೆ ನೀರಿನಲ್ಲಿ ಒಳ್ಳೆ ಹಾವಿನ ಕಾಟ. ಕೆಲವೊಮ್ಮೆ ಅವು ಗಾಳಕ್ಕೆ ಬಾಯಿ ಹಾಕುವ ಅಪಾಯಾನೂ ಇರ್ತಿತ್ತು. ಇಷ್ಟೆಲ್ಲಾ ಆದ್ರೂ ನಂಗೆ ಮೀನು ಸಿಕ್ಕಿದ್ದು ಬಾರಿ ಕಡಿಮೆ. ನಂಗೆ ನೆನಪಿರುವ ಹಾಗೆ ಒಂದೇ ಒಂದು ಸಲ ಒಂದು ಸಣ್ಣ ಮೀನು ಸಿಕ್ಕಿತ್ತು. ಇನ್ನೊಂದ್ಸಲ ಒಂದು ಹಾವು ಮೀನು ಗಾಳವನ್ನು ಕಚ್ಕೊಂಡು ಹೊರಟೇ ಹೋಗಿತ್ತು. ಹಾಗಿದ್ರೂ ಮೀನಿಗಾಗಿ ಗಾಳ ಹಾಕಿ ಕುಳಿತುಕೊಂಡು ಕಾಯುವ ಆಸೆ ಮಾತ್ರ ಯಾವತ್ತೂ ಕಡಿಮೆ ಆಗಿರಲಿಲ್ಲ. ಮೀನು ಸಿಗಲಿ ಬಿಡಲಿ ಮೀನಿಗೆ ಗಾಳ ಹಾಕಿ ಮಗ್ನರಾಗಿ ಕುಳಿತುಕೊಳ್ಳುವಾಗಿನ ಸುಖವೇ ಬೇರೆ. ಅದನ್ನು ಬಣ್ಣಿಸೋದು ಕಷ್ಟ.
ಇನ್ನು ಗದ್ದೆಯಲ್ಲಿ ಸಿಗುತ್ತಿದ್ದ ನರ್ತೆ ಹಿಡಿದು ಅದನ್ನು ಬೆಂಕಿಯಲ್ಲಿ ಸುಟ್ಟು, ಒಡೆದು ಅದ್ರಲ್ಲಿದ್ದ ಚೂರೇ ಚೂರು ಮಾಂಸವನ್ನು ತಿನ್ನುತ್ತಿದ್ದೆವು. ಇದಕ್ಕೆ ಮಲ್ಲಿ, ರೇಖು, ಸಂಧ್ಯಕ್ಕ ಎಲ್ರೂ ಸಾಥ್ ಕೊಡ್ತಿದ್ರು. ಇನ್ನು ಮನೆ ಮುಂದಿದ್ದ ಚೋಡಿಯಲ್ಲಿ ( ನೀರು ಹರಿಯುವ ಸಣ್ಣ ಕಣಿ) ಏಡಿ ಹಿಡಿಯೋದ್ರ ಥ್ರಿಲ್ ಬೇರೇನೆ ಇರುತ್ತಿತ್ತು. ಮನೆಗೆ ಮೀನು ತಂದ್ರೆ ಅದ್ರ ವೇಸ್ಟ್ ಅನ್ನು ಒಂದು ಕೋಲಿನ ತುದಿಗೆ ಕಟ್ಟಿಕೊಳ್ಳುತ್ತಿದ್ದೆವು. ಆ ಕೋಲು ಒಂದು ಕೈಲಿ. ಇನ್ನೊಂದು ಕೈಲಿ ಕತ್ತಿ. ಅಲ್ಲಿಗೆ ನಾವು ಏಡಿ ಬೇಟೆಗೆ ರೆಡಿ ಅಂತ ಲೆಕ್ಕ. ನಂತ್ರ ಮಾಂಸದ ತುಣುಕು ಕಟ್ಟಿದ್ದ ಕೋಲನ್ನು ಏಡಿಗಳು ಇರುತ್ತಿದ್ದ ಬಿಲದ ಮುಂದೆ ಹಿಡೀತಿದ್ದೆವು. ಸ್ವಲ್ಪ ಹೊತ್ತು ಕಾದಮೇಲೆ ಏಡಿ ನಿಧಾನಕ್ಕೆ ಬಿಲದಿಂದ ಹೊರಕ್ಕೆ ಬರುತ್ತಿತ್ತು. ಆಗ ಕೋಲನ್ನು ಮತ್ತಷ್ಟು ಹೊರಗೆ ತಂದ್ರೆ ಏಡಿ ಮತ್ತಷ್ಟು ಹೊರಗೆ ಬರುತ್ತಿತ್ತು. ಆದ್ರೆ ಹೊರಗೆ ಯಾರೋ ನಿಂತಿದ್ದಾರೆ ಅನ್ನೋದು ಗೊತ್ತಾದ್ರೆ ಏಡಿ ಮತ್ತೆ ಬಿಲದೊಳಗೆ ಸೇರಿಕೊಳ್ಳುತ್ತಿತ್ತು. ಹೀಗಾಗಿ ಅದನ್ನು ಹೊರಗೆ ತರೊದಂದ್ರೆ ಅದೊಂಥರಾ ಹಗ್ಗಜಗ್ಗಾಟ. ಅದು ಹೊರಗೆ ಬರಲ್ಲ. ನಾವು ಬಿಡಲ್ಲ. ಕೊನೆಗೆ ಆಹಾರದ ಆಸೆಗೆ ಏಡಿ ನಿಧಾನವಾಗಿ ಹೊರಗೆ ಬರುತ್ತಿತ್ತು. ಆಗ ಇನ್ನೊಂದು ಕೈಲಿದ್ದ ಕತ್ತಿಯಲ್ಲಿ ಏಡಿಯ ಬೆನ್ನಿಗೆ ಜೋರಾಗಿ ಚುಚ್ಚೋದು. ಅಲ್ಲಿಗೆ ಏಡಿ ಬೇಟೆ ಮುಕ್ತಾಯ. ಏಡಿ ತನ್ನ ಹತ್ತು ಕಾಲುಗಳನ್ನು ಆಡಿಸ್ತಾ ಇದ್ರೆ ನಮಗೆ ಬೇಟೆ ಮುಗಿಸಿದ ಖುಷಿ.
ಹಾಗೆ ಹಿಡಿದ ಏಡಿಯನ್ನು ಬೆಂಕಿಯಲ್ಲಿ ಸುಡುತ್ತಿದ್ದೆವು. ಏಡಿಯ ಬೆರಳುಗಳು, ದೇಹ ಬೆಂಕೀಲಿ ಬೇಯುತ್ತಿದ್ದಂತೆ ಖರಂ ಖುರುಂ ಅಂತ ಅದನ್ನು ತಿನ್ತಿದ್ದೆವು. ಈಗ ಅದನ್ನೆಲ್ಲಾ ನೆನೆಸ್ಕೊಂಡ್ರೆ ಅಯ್ಯೋ ಹಿಂಗೆಲ್ಲಾ ಮಾಡ್ತಿದ್ವಲ್ಲಾ ಅನ್ಸುತ್ತೆ. ಆದ್ರೆ ಆಗ ಅದ್ರಲ್ಲೇ ಖುಷಿಯಿತ್ತು.

ಆದ್ರೆ ನಮ್ಮೂರಿನಲ್ಲೂ ಈಗ ನಮ್ಮ ರೀತಿಯಲ್ಲಿ ಏಡಿ, ಮೀನು ಹಿಡಿಯುವ ಮಕ್ಕಳನ್ನು ಕಾಣೋಕೆ ಸಾಧ್ಯವಿಲ್ಲ. ಗದ್ದೆಗಳೇ ಇಲ್ಲದಿರೋದ್ರಿಂದ ನರ್ತೆಯಂತೂ ಕಾಣೋಕೂ ಸಿಗೋದಿಲ್ಲ. ಎಲ್ಲವೂ ಬದಲಾಗುತ್ತಿದೆ. ಹಾಗೆಯೇ ನಮ್ಮ ಹಳ್ಳಿಯ ಮಕ್ಕಳ ಬಾಲ್ಯದ ಸುಖವೂ ಬದಲಾಗಿದೆ !