Wednesday, July 22, 2015

ರೈತರ ಆತ್ಮಹತ್ಯೆ, ವರದಿ, ಲಾಬಿ ಮತ್ತು ಸರ್ಕಾರ !

ದಿನಕ್ಕೊಂದು ಊರಲ್ಲಿ ದಿನಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಈ ಸುದ್ದಿ ಓದಿದಾಗಲೆಲ್ಲಾ ಮನಸ್ಸಿಗೆ ದಿಗಲಾಗುತ್ತಿದೆ. ಈ ಸಾವಿನ ಸರಣಿಗೆ ಕೊನೆ ಎಂದು? ಒಮ್ಮೆ ರೈತರ ಆತ್ಮಹತ್ಯೆಯ ಸರಣಿ ಶುರುವಾದ್ರೆ ಅದು ಅಷ್ಟು ಬೇಗ ನಿಲ್ಲೋದಿಲ್ಲ. ಒಬ್ಬರಾದ ಮೇಲೊಬ್ಬರು ಸಾವಿನ ಮನೆಯ ಕದ ತಟ್ಟಲು ಆರಂಭಿಸುತ್ತಾರೆ. ಸಾವು ಸಮಸ್ಯೆಗೆ ಪರಿಹಾರ ಎಂದು ಕಂಡ ಮೇಲೆ ಉಳಿದೆಲ್ಲಾ ಪರಿಹಾರಗಳ ಕಡೆಗೆ ಮನಸ್ಸು ಹೊರಳುವುದಿಲ್ಲ.

ನಮ್ಮಲ್ಲೇ ಏಕೆ ರೈತರು ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಪದೇ ಪದೇ ನಿರ್ಮಾಣವಾಗುತ್ತಾ ಹೋಗುತ್ತದೆ? ರೈತರು ಸತ್ತಾಕ್ಷಣ ರಾಜಕೀಯ ಪಕ್ಷಗಳು ಆಳುವ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತವೆ. ದೇಶದ ಎಲ್ಲಾ ರಾಜ್ಯಗಳಲ್ಲೂ ಇದೇ ಪರಿಸ್ಥಿತಿ ಈಗ ಕಂಡುಬರುತ್ತಿದೆ. ಎಲ್ಲಾ ಪಕ್ಷಗಳು ಆಳುವ ರಾಜ್ಯಗಳಲ್ಲೂ ರೈತರು ಸಾಲಬಾಧೆಗೆ ಸಿಲುಕಿ ಆತ್ಮಹತ್ಯೆಯ ಹಾದಿ ತುಳಿಯುತ್ತಿದ್ದಾರೆ. ಒಂದು ಅಧ್ಯಯನದ ಪ್ರಕಾರ ಭಾರತದಲ್ಲಿ 1997ರಿಂದ 2005ರ ನಡುವೆ ಪ್ರತಿ 32 ನಿಮಿಷಕ್ಕೊಬ್ಬ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಗಂತ ಇಂದಿಗೂ ಪರಿಸ್ಥಿತಿ ಸುಧಾರಿಸಿಲ್ಲ. ರೈತರ ಆತ್ಮಹತ್ಯೆ ಸರಣಿ ಮುಂದುವರಿಯುತ್ತಲೇ ಇದೆ. ಕಳೆದ ಇಪ್ಪತ್ತು ವರ್ಷಗಳಲ್ಲಿ ಸುಮಾರು ಮೂರು ಲಕ್ಷಕ್ಕೂ ಹೆಚ್ಚು ರೈತರನ್ನು ನಾವು ಆತ್ಯಹತ್ಯೆಯ ಕಾರಣಕ್ಕೆ ಕಳೆದುಕೊಂಡಿದ್ದೇವೆ

ನಮ್ಮದು ಕೃಷಿ ಪ್ರಧಾನ ದೇಶ. ಕೃಷಿ ನಮ್ಮ ದೇಶದ ಬೆನ್ನೆಲುಬು. ರೈತ ದೇಶದ ಅನ್ನದಾತ. ಇವೆಲ್ಲಾ ಪ್ರಾಥಮಿಕ ಶಾಲಾ ಹಂತದಲ್ಲಿ ನಾವು ಕಲಿತಿರುವ ಪಾಠ. ಹಾಗಿದ್ರೆ ಅನ್ನದಾತ ಯಾಕೆ ವಿಷ ಉಣ್ಣುವ, ನೇಣುಬಿಗಿಯುವ, ಬೆಂಕಿಗೆ ಹಾರುವ ಪರಿಸ್ಥಿತಿ ಬಂದೊದಗಿದೆ? ದೇಶದ ಬೆನ್ನೆಲುಬಾಗಿದ್ದ ಕೃಷಿ ಇಂದೇಕೆ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತಿದೆ? ಕೃಷಿ ಪ್ರಧಾನ ದೇಶದಲ್ಲಿ ಕೃಷಿಕನೇಕೆ ಸಾಯುವ ಪರಿಸ್ಥಿತಿ ನಿರ್ಮಾಣವಾಗಿದೆ? ದೇಶಕ್ಕೆ ಸ್ವಾತಂತ್ರ್ಯ ಬಂದು ಇಷ್ಟೂ ವರ್ಷಗಳವರೆಗೆ ನಡೆದ ಎಲ್ಲಾ ಚುನಾವಣೆಗಳ ಸಂದರ್ಭದಲ್ಲೂ ಕೃಷಿಗೆ ಉತ್ತೇಜನ, ರೈತ ಪರ ಅಂತ ಪ್ರತಿಯೊಂದು ರಾಜಕೀಯ ಪಕ್ಷ ಬಿಂಬಿಸಿಕೊಂಡು ಬಂದಿವೆ. ಯಾರು ನಾವು ಕೃಷಿಗೆ ಆದ್ಯತೆ ಕೊಡೋದಿಲ್ಲ ಅನ್ನೋ ಮಾತನ್ನು ಎಂದೂ ಹೇಳಿಲ್ಲ. ಹಾಗಿದ್ದರೂ ರೈತರು ಸಾಯುವುದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಾಗಂತ ಭಾರತದಲ್ಲಿ ಮಾತ್ರ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಅಂತಲ್ಲ. ಅಮೇರಿಕಾ, ಇಂಗ್ಲೆಂಡ್‌, ಫ್ರಾನ್ಸ್‌ ಹೀಗೆ ಮುಂದುವರಿದ ದೇಶಗಳಲ್ಲೂ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.

ರೈತರು ಆತ್ಮಹತ್ಯೆಗೆ ಶರಣಾಗಲು ಕಾರಣವೇನು ಅನ್ನೋದನ್ನು ಹುಡುಕಲು ಈಗಾಗ್ಲೇ ಹಲವು ಅಧ್ಯಯನಗಳು ನಡೆದಿವೆ. ಈಗಿನ ಸರ್ಕಾರಗಳೂ ಮತ್ತಷ್ಟು ಹೊಸ ಅಧ್ಯಯನ ಮಾಡಿಸಲು ಮುಂದಾಗುತ್ತಿವೆ. ಆದರೆ ದುರಂತ ಎಂದರೆ ಈ ಯಾವ ಅಧ್ಯಯನ ವರದಿಗಳೂ ಸರಿಯಾಗಿ ಅನುಷ್ಟಾನಕ್ಕೆ ಬರೋದಿಲ್ಲ. ಯಾವ ವರದಿ ಸಂಪೂರ್ಣ ರೈತ ಪರವಾಗಿದ್ದು ರೈತರ ಆಶಯಗಳನ್ನು ಈಡೇರಿಸುವಂತಹ ಸಲಹೆಗಳು ಇದ್ದ ವರದಿಗಳು ವರ್ಷಾನುಗಟ್ಟಲೆ ಕೊಳೆಯುತ್ತಿರುತ್ತವೆ. ಅದೇ ರೈತರ ಹೆಸರಿನಲ್ಲಿ ನಡೆಸಿದ ವರದಿಯಲ್ಲಿ ಕಾರ್ಖಾನೆಗಳು, ಗ್ರಾಹಕರು, ಕಂಪನಿಗಳ ಹಿತಾಸಕ್ತಿಗಳು ಇದ್ದಲ್ಲಿ ಅವು ಬಹುಬೇಗನೆ ಜಾರಿಗೆ ಬರುತ್ತವೆ. ಇತ್ತೀಚೆಗೆ ಕಬ್ಬಿಗೆ ಸಂಬಂಧಿಸಿದಂತೆ ಬಂದಿರುವ ರಂಗರಾಜನ್‌ ಸಮಿತಿಯ ವರದಿ ಇದಕ್ಕೊಂದು ತಾಜಾ ಉದಾಹರಣೆ. ಎಲ್ಲಿ ಲಾಬಿ ಕೆಲಸ ಮಾಡುತ್ತಿದೆಯೋ ಅಲ್ಲಿ ಸರ್ಕಾರದಿಂದ ಕೆಲಸವಾಗುತ್ತೆ. ಆದರೆ ಲಾಬಿ ಮಾಡುವ ಶಕ್ತಿ ನಮ್ಮ ರೈತರಿಗೆ ಇಲ್ವಲ್ಲ.

ಈಗ ಸಾವಯವ ಕೃಷಿ ಕ್ಷೇತ್ರಕ್ಕೆ ಬರೋಣ. ನಮ್ಮ ದೇಶದಲ್ಲಿ ಬಹುತೇಕ 1960ರ ದಶಕದವರೆಗೂ ರೈತರು ಮಾಡ್ತಿದ್ದಿದ್ದು ಸಾವಯವ ಕೃಷಿಯನ್ನೇ. ಆದರೆ ನಮ್ಮ ಸರ್ಕಾರಗಳು ರೈತರು ಹೆಚ್ಚಿನ ಬೆಳೆ ತೆಗೆಯಲು, ಹೆಚ್ಚು ಉತ್ಪಾದನೆ ಮಾಡಲು ರಾಸಾಯನಿಕ ಗೊಬ್ಬರ ಮತ್ತು ಹೈಬ್ರೀಡ್‌ ಬೀಜಗಳನ್ನು ರೈತರ ಕೈಗಿತ್ತಿದ್ದು ಇದೇ ಸರ್ಕಾರಗಳು. ಆದರೀಗ ಉತ್ಪಾದನೆ ಹೆಚ್ಚುತ್ತಿದೆ ರೈತನಿಗೆ ಸರಿಯಾದ ಮಾರುಕಟ್ಟೆ ಒದಗಿಸುವಲ್ಲಿ ಸರ್ಕಾರ ವಿಫಲವಾಗುತ್ತಿದೆ. ದಲ್ಲಾಳಿಗಳು ಮಾರುಕಟ್ಟೆಯನ್ನು ಆಳುತ್ತಿದ್ದಾರೆ. ಸರ್ಕಾರಕ್ಕೆ ರೈತರ ಉತ್ಪಾದನೆಗಿಂತ ಹೆಚ್ಚಾಗಿ ಕೈಗಾರಿಕೆಗಳ ಉತ್ಪಾದನೆಯ ಕಡೆಗೆ ಆಸಕ್ತಿ ಬೆಳೆದಿದೆ. ಜನರಿಗೆ ಉದ್ಯೋಗ ಕೊಡಿಸುವ ಹೆಸರಿನಲ್ಲಿ ರೈತರ ಹೊಲ ಗದ್ದೆಗಳಲ್ಲಿರುವ ಕೆಲಸಗಳನ್ನು ಕೆಲಸವೇ ಅಲ್ಲ ಎಂದು ಬಿಂಬಿಸುವ ಧೋರಣೆ ಬೆಳೀತಿದೆ. ಇದರ ನಡುವೆ ಸಾವಯವ ಕೃಷಿಯ ಬಗ್ಗೆ ಕ್ಯಾಂಪೇನ್‌ ಶುರುವಾಗಿದೆ. ಬುದ್ಧಿವಂತ ರೈತರು ಸಾವಯವದ ಕಡೆಗೆ ಹೊರಳುತ್ತಿದ್ದಾರೆ. ಸಾವಯವ ಬೆಳೆಗೆ ನಗರ ಪ್ರದೇಶದಲ್ಲಿ ಸಂಘಟಿತ ಮಾರುಕಟ್ಟೆ ರೂಪಿಸುವ ಕೆಲಸ ಕೂಡ ಸದ್ದಿಲ್ಲದೆ ನಡೀತಿದೆ. ದಲ್ಲಾಳಿಗಳ ಹಾವಳಿಯನ್ನು ಇಲ್ಲಿ ತಪ್ಪಿಸುವ ಪ್ರಯತ್ನವನ್ನು ರೈತರು ಮಾಡಿಕೊಂಡಿದ್ದಾರೆ. ಆದರೆ ಹಳ್ಳಿಯಲ್ಲಿರುವ ಒಂದೆಕರೆ, ಎರಡೆಕರೆ ಇರುವ ಅತಿಸಣ್ಣ ರೈತರಿಗೆ ಇನ್ನೂ ಈ ಮಾರುಕಟ್ಟೆಯ ವಿಶಾಲತೆ ಗೊತ್ತಾಗುತ್ತಿಲ್ಲ. ಸರ್ಕಾರ ಇಲ್ಲೂ ರೈತರ ಕೈ ಹಿಡಿಯುವ ಕೆಲಸ ಮಾಡುತ್ತಿಲ್ಲ.

ಆದರೆ ರೈತರ ಆತ್ಮಹತ್ಯೆ ಆದಾಗ, ಚುನಾವಣೆಗಳು ಹತ್ತಿರ ಬಂದಾಗ ನಮ್ಮೆಲ್ಲಾ ರಾಜಕಾರಣಿಗಳು ನಾನೂ ರೈತನ ಮಗನೇ, ನಾನೂ ರೈತರ ಪರವೇ ಅಂತ ಮಾತುಗಳನ್ನು ಹೇಳೋದಿಕ್ಕೆ ಮರೆಯೋದಿಲ್ಲ. ಕೃಷಿ ಆದ್ಯತೆಯ ವಲಯ ಅನ್ನೋದನ್ನು ಹೇಳೋದಿಕ್ಕೂ ಮರೆಯೋದಿಲ್ಲ. ಇಷ್ಟೆಲ್ಲಾ ಇವರು ಹೇಳುತ್ತಿದ್ದರೂ ರೈತರು ಆತ್ಮಹತ್ಯೆಯನ್ನು ಮಾಡುವ ಪರಿಸ್ಥಿತಿ ಪದೇ ಪದೇ ನಿರ್ಮಾಣವಾಗುತ್ತಿರೋದೇಕೆ? ಉತ್ತರ ರಾಜಕೀಯ ಪಕ್ಷಗಳಿಗೆ ಗೊತ್ತಿದ್ದರೂ ಹೊಸ ಹೊಸ ಅಧ್ಯಯನದ ವರದಿಗಳನ್ನು ಪಡೆಯುವ ಕೆಲಸ ಮಾಡುತ್ತಲೇ ಇವೆ.

ರೈತರು ಅನ್ನ ಬೆಳೆಯುವುದನ್ನು ನಿಲ್ಲಿಸಿದ ಮೇಲೆ ಸರ್ಕಾರಗಳು ವರದಿ ತರಿಸಿಕೊಳ್ಳುವುದನ್ನು ನಿಲ್ಲಿಸಬಹುದೇನೋ?







Monday, July 20, 2015

ಡೆನ್ನನ ಡೆನ್ನಾನಾ... ಹ್ಯಾಟ್ಸಪ್‌ ಅನುಪ್‌ ಭಂಡಾರಿ...!

ಒಂದು ಸಿನಿಮಾ ನೋಡೋದಕ್ಕೆ ಅಷ್ಟೊಂದು ಸಲ ಹೋಗಿದ್ದು ಇದೇ ಮೊದಲು. ಕಪಾಲಿ, ಪಿವಿಆರ್‌.. ಊಹೂಂ ಟಿಕೇಟ್‌ ಸಿಗ್ಲಿಲ್ಲ. ಮತ್ತೆ ಮಾರ್ನಿಂಗ್‌ ಷೋ ಟೈಮ್‌ಗೆ ಕಪಾಲಿಗೆ ಹೋಗ್ಬೇಕಾಯ್ತು. ಯಾಕಂದ್ರೆ ಸಂಡೇ ಎಲ್ಲಾ ಮಲ್ಟಿಪ್ಲೆಕ್ಸ್‌ಲೂ ಟಿಕೇಟ್‌ ಸೋಲ್ಡ್‌ ಔಟ್‌ ಆಗಿತ್ತು. ಅಂದಹಾಗೆ ನೋಡೋಕೆ ಹೋಗಿದ್ದು ರಂಗೀತರಂಗ ಸಿನೇಮಾಕ್ಕೆ.

ಸಿನಿಮಾ ರಿಲೀಸ್‌ ಆದ ವಾರದಲ್ಲೇ ನೋಡ್ಬೇಕು ಅನ್ನೋವಷ್ಟು ಸಿನಿಮಾ ನೋಡೋ ಕ್ರೇಜ್‌ ನಂಗಿಲ್ಲ. ಸಾಮಾನ್ಯವಾಗಿ ಎರಡು ಮೂರು ವಾರ ಬಿಟ್ಟು ಸಿನಿಮಾ ನೋಡೋದು ಅಭ್ಯಾಸ. ಆಗ ಟಿಕೇಟ್‌ ಆರಾಮಾಗಿ ಸಿಗುತ್ತೆ ಅನ್ನೋದು ಇದ್ಕೆ ಕಾರಣ. ರಂಗೀತರಂಗ ಸಿನಿಮಾ ವಿಷ್ಯದಲ್ಲೂ ಹಾಗೇ ಮೂರು ವಾರ ಬಿಟ್ಟು ನೋಡೋಕೆ ಹೋದ್ರೆ ಟಿಕೇಟ್‌ ಭರ್ತಿ ಮಾರಾಯ್ರೇ ! ಹೌಸ್‌ ಫುಲ್‌. ಅದೂ ಬಾಹುಬಲಿ ಅನ್ನೋ ತೆಲುಗು ಸಿನಿಮಾ ಕರ್ನಾಟಕದ ಮೂಲೆ ಮೂಲೆಯಲ್ಲಿ ಅಬ್ಬರಿಸುತ್ತಿರೋ ಕಾಲದಲ್ಲಿ. ಆ ಸಿನಿಮಾ ಬಿಟ್ಟು ನಮ್‌ ಕನ್ನಡದ ಸಿನಿಮಾ ನೋಡೋಕೆ ಜನ ಹೀಗೆ ದಂಡು ಕಟ್ಟಿಕೊಂಡು ಬರೋದನ್ನು ನೋಡೋದಿದ್ಯಲ್ಲಾ. ಅದು ನಿಜಕ್ಕೂ ಅದ್ಭುತ. 250 ಕೋಟಿ ರುಪಾಯಿಯ ಸಿನಿಮಾ ಎಲ್ಲಿ. ಕನ್ನಡದ ಸ್ಟಾರ್‌ಗಿರಿಯ ಹೀರೋಗಳಿಲ್ಲದ ಸಿನಿಮಾ ಎಲ್ಲಿ ! ಆದ್ರೆ ಕನ್ನಡಿಗರು ಒಳ್ಳೆಯ ಸಿನಿಮಾ ಬಂದಾಗ ಅಷ್ಟೇ ಪ್ರೀತಿಯಿಂದ ಒಪ್ಕೊಳ್ತಾರೆ ಅನ್ನೋದಕ್ಕೆ ಬೇರೆ ಉದಾಹರಣೆ ಬೇಕೆ- ರಂಗೀತರಂಗಕ್ಕಿಂತ ? ಹ್ಯಾಟ್ಸಪ್‌ ಅನೂಪ್‌ ಭಂಡಾರಿ !


ಅನೇಕ ಗೆಳೆಯರು ಅದಾಗಲೇ ರಂಗೀತರಂಗದ ಬಗ್ಗೆ ಬರೆದಿದ್ದಾರೆ. ಕೆಲವೊಬ್ಬರು ಕೆಲವೊಂದು ಸಣ್ಣಪುಟ್ಟ ಲೋಪದ ನಡುವೆಯೂ ಒಳ್ಳೆಯ ಸಿನಿಮಾ ಅಂತ ಹೊಗಳಿದ್ದಾರೆ. ಆದ್ರೆ ಸಿನಿಮಾ ಎಂಜಾಯ್‌ ಮಾಡೋಕೆ ಕೂತಾಗ ಅಂತ ಯಾವ ಸಣ್ಣಪುಟ್ಟ ಲೋಪ ಕೂಡ ಈ ಸಿನಿಮಾದಲ್ಲಿ ಕಾಣಿಸೋದಿಲ್ಲ. ಅಷ್ಟೊಂದು ಚಂದಗಿದೆ ಸ್ಕ್ರೀನ್‌ ಪ್ಲೇ, ಡೈಲಾಗ್ಸ್‌, ಹಾಡು, ಕ್ಯಾಮರಾ, ನಟನೆ. ಬಹುಷಃ ನಾನು ಮಲಯಾಳಂ ಸಿನಿಮಾಗಳನ್ನು ಹೆಚ್ಚು ನೋಡುವುದಕ್ಕೋ ಏನೋ. ರಂಗೀತರಂಗ ಸಿನಿಮಾ ಮಲಯಾಳಂ ಸಿನಿಮಾಗಳ ರೀತಿಯಲ್ಲಿ ನೇಟಿವಿಟಿಯನ್ನು ಕಟ್ಟುಕೊಡುವಲ್ಲಿ ಯಶಸ್ವಿಯಾಗಿದೆ ಅಂತ ಅನ್ನಿಸಿತು.

ಅನೂಪ್‌ ಭಂಡಾರಿ ಒಂದು ಒಳ್ಳೆಯ ಸಿನಿಮಾವನ್ನು ಕನ್ನಡದಲ್ಲಿ ಮಾಡಿದ್ದಾರೆ. ನಿರೂಪ್‌ ಭಂಡಾರಿ ನಟನೆಯಲ್ಲಿ ಗೆದ್ದಿದ್ದಾರೆ. ಜೊತೆಗೆ ಆವಂತಿಕಾ ಶೆಟ್ಟಿ ಹಾಗೂ ರಾಧಿಕಾ ಚಂದನ್‌ ನಟನೆಗೂ ಫುಲ್‌ ಮಾರ್ಕ್ಸ್‌ ಕೊಡ್ಲೇಬೇಕು.

ಇನ್ನೂ ನೋಡದೇ ಇರೋರು ಒಂದೊಳ್ಳೆ ಸಿನಿಮಾವನ್ನು ಮಿಸ್‌ ಮಾಡ್ಕೊಬೇಡಿ. ಕನ್ನಡದಲ್ಲಿ ರಿಮೇಕ್‌ಗಳ ಅಬ್ಬರದ ನಡುವೆ, ಹಳೇ ಸೀಕ್ವೆನ್ಸ್‌ಗಳ ಭರಾಟೆಯ ನಡುವೆ, ರಂಗೀತರಂಗ ರಸದೌತಣ ಬಡಿಸುವ ಚೆಂದನೆಯ ಸಿನಿಮಾ.
ಡೆನ್ನನ ಡೆನ್ನಾನಾ... .. ಡೆನ್ನನ ಡೆನ್ನಾನಾ....