Sunday, December 21, 2014

ದೇವನೂರು, ಸಾಹಿತ್ಯ ಸಮ್ಮೇಳನ ಮತ್ತು ಕನ್ನಡ ಮಾಧ್ಯಮ

ದೇವನೂರು ಮಹಾದೇವರು ಸಕಾರಣಕ್ಕಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿರಾಕರಿಸಿದ್ದಾರೆ. ಹಳ್ಳಿಯಲ್ಲಿ ಹುಟ್ಟಿ, ಕನ್ನಡ ಮಾಧ್ಯಮದಲ್ಲಿ ಕಲಿತು, ಬೆಂಗಳೂರಿನಲ್ಲಿ ನೆಲೆಸಿರುವ ನನ್ನಂತವರಿಗೆ ದೇವನೂರರ ಮಾತುಗಳು ಆದರ್ಶ ಅಷ್ಟೇ ಅಲ್ಲ ವ್ಯವಸ್ಥೆ ಸರಿಪಡಿಸಲು ಇರುವ ಪ್ರಮುಖ ಅಸ್ತ್ರವಾಗಿ ಕಂಡುಬರುತ್ತೆ. ಆದರೆ ವ್ಯವಸ್ಥೆ ಸರಿಯಾಗುತ್ತೆ ಅಂತ ನಾವು ಕನಸು ಕಾಣುವಷ್ಟು ಅಪ್ಯಾಯಮಾನವಾಗಿಲ್ಲ ಈಗಿನ ಪರಿಸ್ಥಿತಿ. ಆದರೂ ಕನ್ನಡಕ್ಕಾಗಿ ಮೊಳಗುವ ಗಟ್ಟಿ ದನಿ ನನ್ನಂತವರಿಗಂತೂ ಆಶಾದಾಯಕ.

ಒಂದರಿಂದ ಹತ್ತನೇ ತರಗತಿವರೆಗಿನ ಶಿಕ್ಷಣ ಮಾತೃಭಾಷೆಯಲ್ಲಿ ನಡೆಯಬೇಕು ಅನ್ನೋ ಕೂಗು ಇಂದು ನಿನ್ನೆಯದಲ್ಲ. ಕನ್ನಡ ಸಾಹಿತ್ಯ ಲೋಕದಲ್ಲಿ ಅನೇಕ ಸಾಹಿತಿಗಳು ಈ ವಿಚಾರವನ್ನು ಅನೇಕ ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಸಾಲಿನಲ್ಲಿ ಈ ವಿಚಾರ ಅಗ್ರಸ್ಥಾನ ಪಡೆದುಕೊಳ್ಳುತ್ತೆ. ಸಮ್ಮೇಳನಾಧ್ಯಕ್ಷರು ವಾಡಿಕೆಯೆಂಬಂತೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಮಾಧ್ಯಮ ಕಡ್ಡಾಯಗೊಳ್ಳಬೇಕು. ಆಂಗ್ಲ ಮಾಧ್ಯಮ ಹಾವಳಿಯನ್ನು ತಪ್ಪಿಸಬೇಕು ಎಂಬಿತ್ಯಾದಿ ಮಾತುಗಳನ್ನು ಹೇಳುತ್ತಲೇ ಬಂದಿದ್ದಾರೆ. ಹೀಗೆ ಹೇಳಿರುವ ಎಲ್ಲಾ ಸಮ್ಮೇಳನಾಧ್ಯಕ್ಷರಿಗೂ ಕನ್ನಡದ ಬಗ್ಗೆ ಅದೇ ಪ್ರೀತಿ, ಕಾಳಜಿ ಇತ್ತು ಅನ್ನೋದನ್ನು ಅಲ್ಲಗಳೆಯಲಾಗದು. ಇಷ್ಟೆಲ್ಲಾ ಇದ್ದರೂ, ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯವಾಗಿ ಸರ್ವಾನುಮತದಿಂದ ಅಂಗೀಕಾರಗೊಂಡರೂ ನಮ್ಮ ಆಳುವ ಸರ್ಕಾರಗಳು ಇದರ ಬಗ್ಗೆ ಸೊಲ್ಲೆತ್ತದೆ ಇರೋದು ಯಾಕೆ? ಇದಕ್ಕೆ ಕಾರಣ ಕೇವಲ ಶಿಕ್ಷಣ ಲಾಬಿಯೇ? ನಮ್ಮಲ್ಲಿರುವ ಕಮರ್ಷಿಯಲ್‌ ಮೈಂಡ್‌ ಸೆಟ್ಟೇ? ಜಾಗತಿಕ ಪೈಪೋಟಿಯ ನಡುವೆ ನಮ್ಮ ಮಕ್ಕಳು ಹಿಂದೆ ಬೀಳಬಾರದು ಅನ್ನೋ ಮುಂದಾಲೋಚನೆಯೇ? ಈ ರೀತಿಯ ಹಲವು ಪ್ರಶ್ನೆಗಳು ಹಲವು ಸಂದರ್ಭಗಳಲ್ಲಿ ಹುಟ್ಟಿ ದೊಡ್ಡ ಚರ್ಚೆಯಾಗಿವೆ. ಆದರೆ ಇದಕ್ಕಿನ್ನೂ ಇದಮಿತ್ತಂ ಅನ್ನೋ ಉತ್ತರ ಸಿಕ್ಕಿಲ್ಲ.

ಈಗಲೇ ನಾವು ನಿರ್ಧಾರವಾಗಿ ಹೇಳಬಹುದು. ಹಾಸನದ ಶ್ರವಣಬೆಳಗೊಳದಲ್ಲಿ ನಡೆಯಲಿರುವ ಸಮ್ಮೇಳನದಲ್ಲೂ ಇದೇ ವಿಚಾರದ ಮೇಲೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗುತ್ತದೆ. ಇದರಲ್ಲಿ ನಮಗೆ ಯಾವುದೇ ಅನುಮಾನಬೇಕಿಲ್ಲ. ಹಾಗಿದ್ದರೆ ದೇವನೂರು ಮಹಾದೇವರು ಯಾಕೆ ಅಧ್ಯಕ್ಷತೆ ನಿರಾಕರಿಸಿದ್ರು. ಇದರಿಂದ ಏನು ಸಾಧನೆ ಮಾಡಿದಂತಾಗುತ್ತೆ ಅನ್ನೋ ಮಾತುಗಳ ಬಗ್ಗೆಯೂ ಈಗಾಗಲೇ ಚರ್ಚೆಯಾಗಿದೆ. ದೇವನೂರು ಹೇಳಿರುವ ಮಾತುಗಳನ್ನು ಬೆಂಬಲಿಸುತ್ತಲೇ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಬೇಕು ಅನ್ನೋ ಒತ್ತಾಸೆಯನ್ನು ಅನೇಕ ಹಿರಿಯರು ಪ್ರಾಮಾಣಿಕವಾಗಿ ವ್ಯಕ್ತಪಡಿಸಿದ್ದಾರೆ. ಕಾಳಜಿ ತೋರಿದ್ದಾರೆ. ದೇವನೂರು ನೇತೃತ್ವದಲ್ಲೇ ಕನ್ನಡ ಮಾಧ್ಯಮ ಪರವಾದ ಹೋರಾಟ ಶುರುವಾಗಲಿ ಎಂಬಿತ್ಯಾದಿ ಮಾತಗಳು ವ್ಯಕ್ತವಾಗಿ ಹೋಗಿವೆ. ಆದರೆ ದೇವನೂರು ನನ್ನಂತವರನ್ನು ನಿರಾಶೆ ಮಾಡಿಲ್ಲ. ಅವರ ನಿಲುವಿನಲ್ಲಿ ಬದಲಾವಣೆ ಆಗಿಲ್ಲ.

ಆದರೆ ಈಗ ಅದೇಕೋ ಸಾಹಿತ್ಯ ವಲಯದ ಹಿರಿಯ ಸಾಹಿತಿಗಳ ಸಾಲಿನಲ್ಲಿ ದೇವನೂರು ಮಹಾದೇವ ಅವರದ್ದು ಒಂಟಿ ಧ್ವನಿ ಅಂತ ಅನ್ನಿಸುತ್ತದೆ. ಯಾಕಂದ್ರೆ ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ನೃಪತುಂಗ ಪ್ರಶಸ್ತಿಯನ್ನು ದೇವನೂರು ಮಹಾದೇವ ನಿರಾಕರಿಸಿದ್ರು. ಇದು ಐದು ಲಕ್ಷ ರುಪಾಯಿಯ ದೊಡ್ಡ ಮೊತ್ತವನ್ನು ಒಳಗೊಂಡಿರುವ ಪ್ರಶಸ್ತಿ. ನೃಪತುಂಗನ ಹೆಸರಿನ ಜೊತೆಗೆ ದೊಡ್ಡ ಮೊತ್ತ ಸೇರಿಕೊಂಡಿದೆ. ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಶಸ್ತಿ. ಹೀಗಾಗಿ ಇದು ಕನ್ನಡದ ಪಾಲಿಗೆ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿ ನೀಡುವ ನಿರ್ಧಾರ ಪ್ರಕಟವಾದ ಸಂದರ್ಭದಲ್ಲಿ ನಾನು ವರದಿ ಮಾಡಿದ್ದೆ. ಆಗ ವ್ಯಕ್ತವಾದ ಅಭಿಪ್ರಾಯ ಐದು ಲಕ್ಷದ ಒಂದು ರುಪಾಯಿ ನಗದು ಮೊತ್ತವನ್ನು ಹೊಂದಿರುವ ಈ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿಗಿಂತಲೂ ಸ್ವಲ್ಪ ದೊಡ್ಡದ್ದೇ ಅನ್ನೋದು. ಅದೇನೇ ಇರಲಿ. ಪ್ರಶಸ್ತಿಗಳು ಬರುತ್ತವೆ ಹೋಗುತ್ತವೆ. ಯಾವುದೇ ಸಾಹಿತಿಗೆ ಪ್ರಶಸ್ತಿ ಬಂದರೂ ನನ್ನಂತ ಓದುಗರಿಗೆ ಖುಷಿಯೇ. ಇಂತಿಪ್ಪ ಪ್ರತಿಷ್ಟಿತ ಪ್ರಶಸ್ತಿಯನ್ನು ದೇವನೂರು ನಿರಾಕರಿಸಿದ್ರು. ಆಗಲೂ ಅವರು ಹೇಳಿದ್ದು ಕನ್ನಡ ಒಂದರಿಂದ ಹತ್ತನೇ ತರಗತಿವರೆಗೆ ಕಲಿಕಾ ಮಾಧ್ಯಮವಾಗುವವರೆಗೆ ನಾನು ಇದನ್ನು ಸ್ವೀಕರಿಸೋದಿಲ್ಲ ಅಂತ. ತಮಾಷೆ ಅಂದ್ರೆ ದೇವನೂರು ನಿರಾಕರಿಸಿದ ಮೇಲೂ ಸಾಹಿತಿಗಳು ಅದೇ ಪ್ರಶಸ್ತಿಯನ್ನು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಜೊತೆಗೆ ಕಲಿಕಾ ಮಾಧ್ಯಮವಾಗಿ ಕನ್ನಡ ಜಾರಿಗೊಳ್ಳಬೇಕು ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿದವರು ಮತ್ತು ಅದನ್ನು ನಿರಾಕರಿಸಿದ ದೇವನೂರು ನಡುವಿನ ವ್ಯತ್ಯಾಸವನ್ನು ಮತ್ತೊಮ್ಮೆ ಹೇಳಬೇಕಿಲ್ಲ. ಎಲ್ಲದಕ್ಕೂ ಒಂದೊಂದು ವಿವರಣೆಗೆಳು ಇದ್ದೇ ಇರುತ್ತವೆ.

ಈಗಲೂ ಅಷ್ಟೇ ದೇವನೂರು ನಿರಾಕರಿಸಿದ ತಕ್ಷಣ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಂತು ಹೋಗುವುದಿಲ್ಲ. ಸಾಹಿತ್ಯದ ಜಾತ್ರೆ ಯಥಾ ಪ್ರಕಾರ ಅದ್ದೂರಿಯಾಗಿ ನಡೆಯುತ್ತದೆ. ದೇವನೂರು ಬದಲು ಇನ್ನೊಬ್ಬ ಹಿರಿಯ ಸಾಹಿತಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾರೆ. ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಗಳು ಆರಂಭವಾಗಿವೆ. ಅವರೂ ಕೂಡ ದೇವನೂರು ರೀತಿಯಲ್ಲಿ ನಿರಾಕರಿಸಲಿ ಅಂತ ನಾವು ನಿರೀಕ್ಷಿಸುವುದು ತಪ್ಪಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಈಗಾಗ್ಲೇ ದೇವನೂರು ವಿಚಾರದ ಸುತ್ತಲೇ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಟಿಗಳನ್ನು ನಡೆಸುವ ಆಶಯ ವ್ಯಕ್ತಪಡಿಸಿದ್ದಾರೆ. ಕನ್ನಡ ಮಾಧ್ಯಮ ಜಾರಿಗಾಗಿ ಆಮರಣಾಂತ ಉಪವಾಸ ಸೇರಿದಂತೆ ಹೋರಾಟದ ಘೋಷಣೆ ಮಾಡಿದ್ದಾರೆ. ಅದೆಲ್ಲಾ ಮುಂದೆ ನಡೆಯಬಹುದಾದ ವಿಚಾರಗಳು. ಅದಕ್ಕೆ ನಾವು ಕಾಯಬೇಕು.

ಹಾಗಿದ್ದರೂ ದೇವನೂರು ಮಹಾದೇವ ವ್ಯಕ್ತಪಡಿಸಿರುವ ವಿಚಾರ ಅಷ್ಟು ಸುಲಭದಲ್ಲಿ ಕಾರ್ಯರೂಪಕ್ಕೆ ಬರುವಂತದ್ದಲ್ಲ. ಹಾಗಂತ ನಾವು ನಿರಾಶಾವಾದಿಗಳಾಗಬೇಕಿಲ್ಲ. ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು ಅನ್ನೋ ವಿಚಾರದಲ್ಲಿ ಸರ್ಕಾರದ ಮೇಲಿನ ಒತ್ತಡ ನಿರಂತರವಾಗಿ ಮುಂದುವರೆಯಲೇಬೇಕು. ಮಾತೃಭಾಷಾ ಶಿಕ್ಷಣ ಕಡ್ಡಾಯಗೊಳ್ಳಲೇಬೇಕು.