Thursday, August 30, 2012

ಮಾತು

ನಾಲಗೆ ಸಡಿಲಾಗಿ
ಮಾತು ಹಗುರಾದಾಗ
ಗಳಿಸಿದ್ದೆಲ್ಲಾ ಮಣ್ಣುಪಾಲು !

Friday, August 24, 2012

ದೂರ ಸರಿದವರು...

ಶಾಂತಿನಗರದ ರಸ್ತೆಗಳಲ್ಲಿ ನಿತ್ಯ ಕಾಣುತ್ತಿದ್ದ ಆ ಮುಖಗಳು ಕಾಣಿಸುತ್ತಿಲ್ಲ. ಬೆಳಗ್ಗೆ 6ರಿಂದ ರಾತ್ರಿ 11 ಗಂಟೆಯ ನಡುವೆ ಇಲ್ಲಿನ ಗಲ್ಲಿಗಳಲ್ಲಿ ನಡೀತಿದ್ರೆ  ಆ ಮುಖಗಳು ಕಾಣಿಸುತ್ತಿದ್ದು ಕಾಮನ್. ಆದ್ರೆ ಈಗ ಹಾಗಿಲ್ಲ.
ಈಶಾನ್ಯ ಭಾರತದ ಅದೆಷ್ಟೋ ಸಾವಿರ ವಿದ್ಯಾರ್ಥಿಗಳು, ಉದ್ಯೋಗಿಗಳು ಬೆಂಗಳೂರಿನಿಂದ ವಾಪಸ್ ತಮ್ಮೂರುಗಳಿಗೆ ಗುಳೇ ಹೋಗಿದ್ದಾರೆ. ಹೀಗಾಗಿ ಸದಾ ಈಶಾನ್ಯ ಭಾರತದ ಯಾವುದೋ ನಗರದ ಬೀದಿಗಳಂತೆ ಕಂಡುಬರುತ್ತಿದ್ದ ಬೆಂಗಳೂರಿನ ಶಾಂತಿನಗರದ ಗಲ್ಲಿಗಳು ಈಗ ತಮ್ಮ ಕಳೆ ಕಳೆದುಕೊಂಡಿವೆ. ಪುಟ್ಟ ಕಣ್ಣುಗಳ ಹುಡುಗ ಹುಡುಗಿಯರಿಂದ ತುಂಬಿರುತ್ತಿದ್ದ 'ಲಿಟಲ್ ಟಿಬೇಟ್ ಕಿಚನ್' ಹೋಟೆಲ್ಲಿನಲ್ಲಿ ಒಲೆ ಹಚ್ಚದೆ ವಾರ ಕಳೀತಾ ಬಂದಿದೆ. ಹೋಟೆಲ್ಲಿನ ಕ್ಲೋಸ್ ಆಗಿರುವ ಶೆಟರ್ ತಮ್ಮವರ ಬರುವಿಕೆಗಾಗಿ ಕಾಯುತ್ತಿದೆ. ಸದಾ ಗುಂಪುಗುಂಪಾಗಿ ಹರಟುತ್ತಾ, ನಗುತ್ತಾ, ಪುಟಪುಟನೆ ಓಡಾಡುತ್ತಿದ್ದವ್ರು ಕಾಣಿಸುತ್ತಿಲ್ಲ.
ವಾರಕ್ಕೆ ಮೊದಲು ಇಲ್ಲಿನ ಗಲ್ಲಿಗಳಲ್ಲಿ ಈಶಾನ್ಯ ರಾಜ್ಯಗಳ ಜನರು ಹೆಚ್ಚಾಗಿ ಓಡಾಡುತ್ತಿದ್ದರು. ರಾತ್ರಿ ಹನ್ನೊಂದು ಗಂಟೆಯಾದ್ರೂ ಹುಡುಗ ಹುಡುಗಿಯರು ಆರಾಮಾಗಿ ರಸ್ತೆಯಲ್ಲಿ ನಿಂತ್ಕೊಂಡು ಹರಟುತ್ತಿದ್ದರು. ಈಗ ಅಲ್ಲೊಬ್ಬ ಇಲ್ಲೊಬ್ಬರಂತೆ ಎಷ್ಟೊ ಗಂಟೆಗಳಿಗೆ ಒಬ್ಬರು ಓಡಾಡುತ್ತಾರೆ. ಹಾಗೆ ಓಡಾಡುವವರ ಮುಖದಲ್ಲೂ ಅದೇನೋ ಆತಂಕದ ಗೆರೆ ಸುಳಿದಾಡುತ್ತಿರುತ್ತದೆ. ರಾತ್ರಿ ಕವಿದ ಮೇಲಂತೂ ಹುಡುಕಿದ್ರೂ ಕಾಣಸಿಗಲ್ಲ.
ಬೆಂಗಳೂರಿನಲ್ಲಿ ವಾರದ ಹಿಂದೆದ್ದ ವದಂತಿಗಳು ಇಲ್ಲಿದ್ದ ಈಶಾನ್ಯದ ಜನರನ್ನು ಗುಳೆ ಹೋಗುವಂತೆ ಮಾಡಿತ್ತು. ಹಾಗಿದ್ರೂ ಸದ್ಯ ಇದು ಸ್ವಲ್ಪ ತಣ್ಣಗಾಗಿದೆ. ವದಂತಿಗಳಿಗೆ ಹೆದರಿ ತಮ್ಮೂರಿಗೆ ಹೋದವ್ರು ವಾಪಸ್ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಹಾಗಿದ್ರೂ ಇಷ್ಟು ದಿನ ಉದ್ಯಾನ ನಗರಿಯಲ್ಲಿ ನೆಮ್ಮದಿಯಾಗಿ ವಾಸಿಸುತ್ತಿದ್ದ ಈಶಾನ್ಯ ಭಾರತೀಯರಿಗೆ ಮುಖ್ಯ ವಾಹಿನಿಯಲ್ಲಿ ಬೆರೆಯಲಾಗದೆ ' ದೂರ ಸರಿ..' ಅಂತ ಹೇಳಿಸಿಕೊಂಡಿದ್ದಾಗಿದೆ. ಸರ್ಕಾರ, ಮಾಧ್ಯಮಗಳ ನಿರಂತರ ಮನವಿ ನಂತ್ರ ಗುಳೆ ಹೋದವರು ಮರಳಿ ಬರಬಹುದು.
ಹಾಗಿದ್ರೂ ದೂರ ಸರಿದವರು ಮತ್ತೆ ಒಗ್ಗೂಡಲು ಮತ್ತಷ್ಟು ಸಮಯ ಬೇಕಾಗಬಹುದು !