Monday, June 2, 2014

'ರಾಮಂದ್ರ'ದ ನಗೆಬುಗ್ಗೆಗಳು

ರಾಮಂದ್ರ. ಇದನ್ನು ಕೇಳಿದಾಗ ನನ್ನಂತವರಿಗೆ ಸೀಮಾಂಧ್ರದ ರೀತಿಯಲ್ಲೇ ಭಾಸವಾಗತೊಡಗುತ್ತದೆ. ಆದರೆ ಬಯಲು ಸೀಮೆಯ ಮಂದಿ ಇದು ರಾಮಮಂದಿರ ಅನ್ನೋದನ್ನು ಥಟ್ಟಂತ ಹೇಳಿಯ ಉತ್ತರದಂತೆ ಹೇಳಿಬಿಡುತ್ತಾರೆ. ಅಂದಹಾಗೆ ನಾನು ಥಟ್ಟಂತ ಹೇಳಲು ಹೊರಟಿರುವ ರಾಮಂದ್ರ - ಹರಿಪ್ರಸಾದರ ಪ್ರಬಂಧಗಳ  ಬಗ್ಗೆ.

ಮಜಾ ಕೇಳಿ. ಹರಿಪ್ರಸಾದ್‌ ಪ್ರಬಂಧಗಳು ಅಂತಿದೆ ಮುಖಪುಟ. ಪುಸ್ತಕ ನೋಡಿದ ನನ್ನಕ್ಕ 'ಇದೆಂತಾ ನೀನ್ ಪುಸ್ತಕ ಬರೆದದ್ದಾ..?' ಅಂತ ಕೇಳಿದ್ದಳು. ಆಫೀಸಿನಲ್ಲಿ ಕುಳಿತು ಪುಸ್ತಕ ಓದುತ್ತಿದ್ದರೆ ಗೆಳೆಯರು - 'ಇದೇನು ನಿಂದಾ ಪುಸ್ತಕ ?' ಅಂತ ಕೇಳತೋಡಗಿದ್ದು ಒಂತರಾ ಖುಷಿಕೊಟ್ಟಿತ್ತು. ಅವ್ರಿಗೆಲ್ಲಾ ಇದು ನಾನಲ್ಲ. ನನ್ನದೇ ಹೆಸರಿನ ಇನ್ನೊಂದು ಹರಿಪ್ರಸಾದ ಅಂತ ಓದಿನ ನಡುವೆ ಸಣ್ಣದೊಂದು ಬ್ರೇಕ್ ತಕಂಡು ಹೇಳ್ತಿದ್ದೆ. ಅಂತೂ ಹರಿಪ್ರಸಾದರ ದಯೆಯಿಂದ ಪುಸ್ತಕ ಓದುವ ಎರಡು ದಿನ ಕೆಲವರ ಬಾಯಲ್ಲಿ ನಾನೂ ಬರಹಗಾರನಾಗುವ ಬಿಟ್ಟಿ ಅವಕಾಶ ಸಿಕ್ಕಿತು. ಇದೂ ಒಂಥರಾ ಥ್ರಿಲ್‌ ಕೊಡುತ್ತೆ. ಆದರೆ ಯಾರದ್ದೋ ಮಗುವಿಗೆ, ಇದು ನಿಮ್ಮ ಮಗುವಾ ಅಂತ ಕೇಳಿದಾಗ ಆಗುವ ಕಸಿವಿಸಿಯನ್ನು ನಾನು ಅನುಭವಿಸಿದ್ದು ಸುಳ್ಳಲ್ಲ.

ಇದೆಲ್ಲಾ ಇರಲಿ. ವಿಷಯಕ್ಕೆ ಬರುತ್ತೇನೆ. ಹರಿಪ್ರಸಾದ್‌, ನಿರಂತರ ಫೌಂಡೇಷನ್‌ನ ಸ್ಥಾಪಕ ಸದಸ್ಯರಲ್ಲೊಬ್ಬರು. ನನ್ನ ಹಿರಿಯ ಮಿತ್ರ ಜಯ ನಾಣಯ್ಯ ಅದೆಷ್ಟೋ ಬಾರಿ ನಿರಂತರದ ಬಗ್ಗೆ ಹೇಳುತ್ತಿರುತ್ತಾರೆ. ಹರಿಪ್ರಸಾದ್ ಬರೆಯುತ್ತಿದ್ದ ಬರಹಗಳ ಲಿಂಕ್‌ಅನ್ನು ಕಳಿಸಿ ' ಓದೋ ' ಅಂತ ದಬಾಯಿಸುತ್ತಿದ್ದರು. ಅವರು ದಬಾಯಿಸುತ್ತಿದ್ದರು ಓದುವಾಗ ಸಿಗುವ ಖುಷಿ ಮಾತ್ರ ನನ್ನದಾಗಿರುತ್ತಿತ್ತು. ಈ ನಿರಂತರದ ಬಗ್ಗೆ ಒಂದೆರಡು ಮಾತು ಹೇಳಿ ಮುಂದೆ ಪುಸ್ತಕದ ವಿಚಾರ ಹೇಳುತ್ತೇನೆ. - ಇದೇನು ಒಳ್ಳೆ ಭಾಷಣ ಬಿಗೀತಾನೆ ಅಂತ ನಿಮಗೆ ಅನ್ನಿಸಿದ್ರೂ ಮನ್ನಿಸಿ ಮುಂದೆ ಓದಿ - ನಾನು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯುವಾಗ ಒಂದು ಡಿಸೆರ್ಟೇಷನ್‌ ಮಾಡೋದು ಕಡ್ಡಾಯವಾಗಿತ್ತು. ಆಗ ನಾನು ಆಯ್ಕೆ ಮಾಡಿಕೊಂಡಿದ್ದು, ' ಸಂವಹನ ಮಾಧ್ಯಮವಾಗಿ ಬೀದಿ ನಾಟಕಗಳು' ಅನ್ನೋ ವಿಷಯವನ್ನು. ಇದಕ್ಕಾಗಿ ಮಾಹಿತಿ ಸಂಗ್ರಹಿಸಲು ಪುಸ್ತಕಗಳನ್ನು ತಡಕುತ್ತಾ ಕುಳಿತಾಗ ಸಿಕ್ಕಿದ್ದು ನನಗೆ ನಿರಂತರ ಪ್ರಕಾಶನದ ' ಬೀದಿ' ಪುಸ್ತಕ. ಪ್ರಸಾದ್‌ ಕುಂದೂರ್ ಸಂಪಾದಿಸಿರುವ ಈ ಪುಸ್ತಕದಲ್ಲಿ ಕರ್ನಾಟಕದ ಬೀದಿ ನಾಟಕದ ಬಗ್ಗೆ ಉಪಯುಕ್ತ ಮಾಹಿತಿ ಸಿಕ್ಕಿತ್ತು. ಈ ಪುಸ್ತಕ ಇಲ್ಲದೇ ಇರುತ್ತಿದ್ದರೆ ಬಹುಷಃ ನಾನು ನನ್ನ ಡಿಸೆರ್ಟೇಷನ್‌ಅನ್ನು ಸಮರ್ಪಕವಾಗಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಆ ಡಿಸೆರ್ಟೇಷನ್‌ಗಾಗಿ ಪ್ರಸಾದ್‌ ಕುಂದೂರರನ್ನು ಅವರ ಬೋಗಾದಿಯ ಮನೆಯಲ್ಲಿ ಸಂದರ್ಶನ ಕೂಡ ಮಾಡಿದ್ದೆ. ಹೀಗೆ ನಿರಂತರದ ಜೊತೆಗೆ ಸಂಪರ್ಕವಾಗಿದ್ದು.

ಹರಿಪ್ರಸಾದ್ ಬರೆದಿರುವ ಈ ಪುಸ್ತಕ ಒಳ್ಳೆಯ ಲಲಿತ ಪ್ರಬಂಧಗಳಿಂದ ಕೂಡಿದೆ. 'ನಮ್ಮಮ್ಮನ ಡಾಕ್ಟರ್‌ಗಳು ' ಪ್ರಬಂಧ ಓದಿದಾಗಲಂತೂ ಬಿದ್ದೂ ಬಿದ್ದೂ ನಗಾಡಿದ್ದೆ. ತಮ್ಮ ಅಜ್ಜನ ಬಗ್ಗೆ ತಮ್ಮ ತಾಯಿಯ ಮಾತುಗಳಲ್ಲಿ ಹರಿಪ್ರಸಾದ್‌ ವಿವರಿಸುತ್ತಾ ಹೋಗುತ್ತಿದ್ದಂತೆ ನಗೆಬುಗ್ಗೆಯೊಡೆಯುತ್ತದೆ. ನಿಜ ಅವರೇ ಹೇಳಿದಂತೆ ಗುರುರಾಜುಲು ನಾಯ್ಡು ಹರಿಕಥೆಯ ಶೈಲಿಯಲ್ಲಂತೂ ಇದನ್ನು ಪರಿಭಾವಿಸಿ ಓದಿದರೆ ನಗು ಇನ್ನಷ್ಟು ಜೋರಾಗುತ್ತೆ. ಲಲಿತ ಪ್ರಬಂಧವೊಂದು ಖುಷಿ ಕೊಡೋದು ಇಲ್ಲೇ.  'ಕದ್ದಾಲಿಕೆ ' ಪ್ರಬಂಧವಂತೂ ನಾಟಕದ ಶೈಲಿಯಲ್ಲೇ ನಡೆದರೂ ಒಂದು ಸಂಬಂಧದ ಬಗ್ಗೆ ಗೆಳೆಯರ ನಡುವಿನ ಸಂಭಾಷಣೆಯನ್ನು ನಿರೂಪಿಸಿದ ರೀತಿ ಅದ್ಭುತ. ಹಾಗೆಯೇ ಇದರಲ್ಲಿ ಸಂಬಂಧಗಳ ಬಗ್ಗೆ ವಿಷಣ್ಣ ಭಾವ ಮೂಡುತ್ತದೆ. 'ದೇವಾನೂರು ಪೋಸ್ಟ್‌  ' ಹಾಗೂ 'ರಾಮಂದ್ರ', ತೆಳು ಹಾಸ್ಯದ ನಡುವೆಯೇ ವಿಷಾದವನ್ನು ಮೂಡಿಸುತ್ತೆ.

ಇನ್ನು ತಮ್ಮ ಮಗಳ ಹೆಸರಿಡುವ ವಿಚಾರದ ಬಗ್ಗೆ ಹರಿಪ್ರಸಾದ್‌ ಬರೆದಿರುವ 'ಹೆಸರೇನೇ ಹುಡುಗಿ' ಹೆಸರಿಡುವ ತಾಪತ್ರಯಗಳನ್ನು ಮುಂದಿಡುತ್ತೆ. ಇದು ಕೇವಲ ಹರಿಪ್ರಸಾದ್‌ ಒಬ್ಬರದ್ದೇ ಅನುಭವವಲ್ಲ. ಬಹುಷಃ ಅನೇಕರು ಅನೇಕ ಸಂದರ್ಭಗಳಲ್ಲಿ ಇದೇ ಮಾದರಿಯ ಅನುಭವಗಳಿಗೆ ಒಳಗಾಗಿರುತ್ತಾರೆ. - ನಾನಿನ್ನೂ ಅದಕ್ಕೆ ಒಳಗಾಗಿಲ್ಲ - ' ಊರುಗಳೂ, ಚೀಟಿಗಳೂ' ಮಾತ್ರ ನನ್ನ ಮೇಲೆ ಗಾಢ ಪ್ರಭಾವವನ್ನು ಬೀರಿದೆ. ಕಾರಣ ಒಂದು - ನಾನು ಕೂಡ ಚೀಟಿ ಹಾಕಿ ಅನಿವಾರ್ಯ ಸಂದರ್ಭದಲ್ಲಿ ಚೀಟಿ ಕೂಗುವಾಗ ಅದರ ಏರಿಳಿತ ಕಂಡು ಜರ್ಜರಿತನಾಗಿದ್ದೇನೆ. ಹಾಗೆಯೇ ಅನೇಕ ಸಂದರ್ಭಗಳಲ್ಲಿ ಚೀಟಿಯಿಂದ ಮೋಸ ಹೋದ ಅನೇಕರ ಮಾತುಗಳನ್ನು, ನೋವುಗಳನ್ನು ಕಣ್ಣಾರೆ ಕಂಡಿದ್ದೇನೆ, ಕಿವಿಯಾರೆ ಕೇಳಿದ್ದೇನೆ. ಹಾಗೆಯೇ ಹಾವುಗಳ ಬಗ್ಗೆ ಹರಿಪ್ರಸಾದ್‌ ಬರೆದಿರುವ ಪ್ರಬಂಧ ನಿಜಕ್ಕೂ ಬಾಲ್ಯಕ್ಕೆ ತಂದು ನಿಲ್ಲಿಸಿತ್ತು. ಹಳ್ಳಿಯ ಹಿನ್ನೆಲೆಯಿಂದ ಬಂದ ಪ್ರತಿಯೊಬ್ಬರಿಗೂ ಇಂತಹ ಅನುಭವಗಳು ಇದ್ದೇ ಇರುತ್ತೆ. ಆದರೆ ಇತ್ತೀಚೆಗೆ ಹಳ್ಳಿಯ ಮಕ್ಕಳೂ ಕೂಡ ನನಗೆ ಒಂದೊಂದು ಸಲ ಸಿಟಿ ಮಕ್ಕಳ ತದ್ರೂಪದಂತೆ ಕಾಣುತ್ತಿದೆ. ಹೀಗಾಗಿ ಈಗಿನ ಹಳ್ಳಿ ಮಕ್ಕಳು ಈ ಅನುಭವಗಳಿಂದ ಸ್ವಲ್ಪ ದೂರವಾಗುತ್ತಿದ್ದರೆ ಅದು ಅವರ ತಪ್ಪಲ್ಲ ಬಿಡಿ.

ಒಂದೊಂದು ಪ್ರಬಂಧದ್ದೂ ಒಂದೊಂದು ಹದ. ಒಂದಷ್ಟು ಏರುಪೇರುಗಳಿವೆ ಅನ್ನಿಸುತ್ತೆ.ಆದರೆ ಕೊನೆಯಲ್ಲಿ ನಾನು ಪುಸ್ತಕದ ಮುನ್ನುಡಿಯಲ್ಲಿ ರಹಮತ್‌ ತರೀಕೆರೆಯವರು ಬರೆದಿರುವ ಸಾಲುಗಳನ್ನು ಉಲ್ಲೇಖಿಸುತ್ತೇನೆ. ' ಈ ಒಳ್ಳೆಯ ಪ್ರಬಂಧಗಳನ್ನು ಓದಿ ನಾನು ಪಟ್ಟಿರುವ ಸಂತೋಷ ಓದುಗರದ್ದೂ ಆಗಲಿದೆಯೆಂದು ಭಾವಿಸುತ್ತೇನೆ.' ಇದು ನನ್ನ ಭಾವನೆಯೂ ಹೌದು.