Tuesday, August 20, 2019

ಮಂತ್ರಿಯಾಗದ ಅಂಗಾರ..!


2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ದಿನ ನಿಗದಿಯಾಗಿತ್ತು. ರೇಸ್ ಕೋರ್ಸ್ ರಸ್ತೆಯಲ್ಲಿದ್ದ ಯಡಿಯೂರಪ್ಪ ನಿವಾಸಕ್ಕೆ ಮಂತ್ರಿ ಆಕಾಂಕ್ಷಿಗಳ ದಂಡು ಹರಿದು ಬಂದಿತ್ತು. ಆಗೆಲ್ಲಾ ಬಿಜೆಪಿ ಶಾಸಕರಲ್ಲಿ ಒಂದು ಬಾರಿ, ಎರಡು ಬಾರಿ, ಮೂರು ಬಾರಿ ಆಯ್ಕೆಯಾಗಿದ್ದ ಶಾಸಕರ ದಂಡು ಹೆಚ್ಚಿತ್ತು. ನಾಲ್ಕು ಬಾರಿ, ಐದು ಬಾರೆ ಗೆದ್ದವರು ಕೆಲವರಷ್ಟೇ ಇದ್ದರು. ಮೊದಲ ಬಾರಿ ಗೆದ್ದವರೇ ಮಂತ್ರಿಯಾಗಲು ಲಾಬಿ ಶುರು ಮಾಡಿದ್ದರು. ಹೀಗೆ ಒಬ್ಬೊಬ್ಬರೇ ಶಾಸಕರ ಜೊತೆ ಮಾತಾಡುತ್ತಿದ್ದೆ.  ನಮ್ಮ ತಾಲೂಕು ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರ ಆಗಲೇ ನಾಲ್ಕು ಬಾರಿ ಶಾಸಕರಾಗಿದ್ದರು.  ಹೀಗಾಗಿ ಅವ್ರಿಗೆ ಕರೆ ಮಾಡಿ 'ನೀವೂ ಆಕಾಂಕ್ಷಿ ಇದ್ದೀರಾ?' ಎಂದು ಸಹಜವಾಗಿ ಪ್ರಶ್ನಿಸಿದ್ದೆ. ಆಗಲೇ ಸಂಭಾವ್ಯರ ಪಟ್ಟಿಯಲ್ಲಿ ಅಂಗಾರರ ಹೆಸರು ಹರಿದಾಡಿತ್ತು. ಆದರೆ ಅಂಗಾರರಿಗೆ ಮಂತ್ರಿಯಾಗುವ ನಿರೀಕ್ಷೆಯೂ ಇರಲಿಲ್ಲ. ಆಸೆಯೂ ಇದ್ದಂತೆ ಕಾಣಲಿಲ್ಲ. ಅವರು ಮಂತ್ರಿ ಲಾಬಿಯ ಗೋಜಿಗೂ ಹೋಗದೆ ಶಾಸಕರ ಭವನದಲ್ಲಿ ಹಂಚಿಕೆಯಾಗುವ ಹೊಸ ಕೊಠಡಿಯ ಕಡೆಗೆ ನಡೆದಿದ್ದರು.

ಈ ಬಾರಿ ಅಂಗಾರ ಆರನೇ ಬಾರಿಯ ಶಾಸಕ. ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಳು ಶಾಸಕರಲ್ಲಿ ಆರು ಮಂದಿ ಮೊದಲ ಬಾರಿಯ ಎಂಎಲ್ಎಗಳು. 2013ರಲ್ಲಿ ದಕ್ಷಿಣ ಕನ್ನಡದಲ್ಲಿ ಎಂಟರಲ್ಲಿ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಾಗಲೂ ಸುಳ್ಯದಿಂದ ಅಂಗಾರ ಗೆದ್ದು ಬಂದಿದ್ದರು. ಹೀಗಾಗಿ ಅಂಗಾರ ಮಂತ್ರಿ ಮಂಡಲಕ್ಕೆ ಸಹಜ ಆಯ್ಕೆಯಾಗಿ ಸೇರುವ ನಿರೀಕ್ಷೆಯಿತ್ತು. ಅಂಗಾರರಲ್ಲೂ ಆ ವಿಶ್ವಾಸ ಇತ್ತು.

ಆದರೆ ಅಂಗಾರ ಮಂತ್ರಿಯಾಗಿಲ್ಲ. 2008ರಲ್ಲೇ ನಾನೂ ಆಕಾಂಕ್ಷಿ ಅಂತ ಸಣ್ಣದಾಗಿ ಧ್ವನಿ ಎತ್ತುತ್ತಿದ್ದರೆ ಈಗಲಾದ್ರೂ ಮಂತ್ರಿಯಾಗುತ್ತಿದ್ದರು. ಪಕ್ಷ ನಿಷ್ಠೆ, ಸರಳತೆ ಮೈಗೂಡಿಸಿದ್ದಾರೆ. ಆರು ಬಾರಿ ಶಾಸಕರಾಗಿದ್ದರೂ ವಿಧಾನಸಭೆಯಲ್ಲಿ ಚರ್ಚೆಗಳಲ್ಲಿ ಭಾಗಿಯಾಗಿದ್ದು ಕಡಿಮೆ. ಹಿರಿತನದ ಜೊತೆಗೆ ತನ್ನ ಜೀವನಾನುಭವದ ಆಧಾರದಲ್ಲಿ ಶಾಸನಸಭೆಯ ಚರ್ಚೆಗಳಲ್ಲಿ ಭಾಗಿಯಾಗುವ ವಿಫುಲ ಅವಕಾಶ ಅಂಗಾರರಿಗಿತ್ತು. ಲಾಬಿ ನಡೆಸಲು ಶಕ್ತಿ ಇಲ್ಲದವರು ತಮ್ಮನ್ನು ಕೈಬಿಡಲು ಸಾಧ್ಯವಿಲ್ಲ ಅನ್ನೋದನ್ನು ವಿಧಾನಸಭೆಯಲ್ಲಿ ಭಾಗವಹಿಸುವಿಕೆ  ಮೂಲಕ ತೋರಿಸಿಕೊಡಬೇಕಾಗುತ್ತದೆ.   'ನನಗಿದು ಸಿಗಬೇಕು' ಎಂದು ಕೇಳದಿದ್ದರೆ ರಾಜಕಾರಣದಲ್ಲಿ ಹುದ್ದೆಗಳು ಸುಮ್ಮನೆ ಹುಡುಕಿಕೊಂಡು ಬರೋದಿಲ್ಲ ಎನ್ನುವುದೂ ವಾಸ್ತವ.