Tuesday, August 20, 2019

ಮಂತ್ರಿಯಾಗದ ಅಂಗಾರ..!


2008ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲು ದಿನ ನಿಗದಿಯಾಗಿತ್ತು. ರೇಸ್ ಕೋರ್ಸ್ ರಸ್ತೆಯಲ್ಲಿದ್ದ ಯಡಿಯೂರಪ್ಪ ನಿವಾಸಕ್ಕೆ ಮಂತ್ರಿ ಆಕಾಂಕ್ಷಿಗಳ ದಂಡು ಹರಿದು ಬಂದಿತ್ತು. ಆಗೆಲ್ಲಾ ಬಿಜೆಪಿ ಶಾಸಕರಲ್ಲಿ ಒಂದು ಬಾರಿ, ಎರಡು ಬಾರಿ, ಮೂರು ಬಾರಿ ಆಯ್ಕೆಯಾಗಿದ್ದ ಶಾಸಕರ ದಂಡು ಹೆಚ್ಚಿತ್ತು. ನಾಲ್ಕು ಬಾರಿ, ಐದು ಬಾರೆ ಗೆದ್ದವರು ಕೆಲವರಷ್ಟೇ ಇದ್ದರು. ಮೊದಲ ಬಾರಿ ಗೆದ್ದವರೇ ಮಂತ್ರಿಯಾಗಲು ಲಾಬಿ ಶುರು ಮಾಡಿದ್ದರು. ಹೀಗೆ ಒಬ್ಬೊಬ್ಬರೇ ಶಾಸಕರ ಜೊತೆ ಮಾತಾಡುತ್ತಿದ್ದೆ.  ನಮ್ಮ ತಾಲೂಕು ಸುಳ್ಯ ಕ್ಷೇತ್ರದ ಶಾಸಕ ಎಸ್. ಅಂಗಾರ ಆಗಲೇ ನಾಲ್ಕು ಬಾರಿ ಶಾಸಕರಾಗಿದ್ದರು.  ಹೀಗಾಗಿ ಅವ್ರಿಗೆ ಕರೆ ಮಾಡಿ 'ನೀವೂ ಆಕಾಂಕ್ಷಿ ಇದ್ದೀರಾ?' ಎಂದು ಸಹಜವಾಗಿ ಪ್ರಶ್ನಿಸಿದ್ದೆ. ಆಗಲೇ ಸಂಭಾವ್ಯರ ಪಟ್ಟಿಯಲ್ಲಿ ಅಂಗಾರರ ಹೆಸರು ಹರಿದಾಡಿತ್ತು. ಆದರೆ ಅಂಗಾರರಿಗೆ ಮಂತ್ರಿಯಾಗುವ ನಿರೀಕ್ಷೆಯೂ ಇರಲಿಲ್ಲ. ಆಸೆಯೂ ಇದ್ದಂತೆ ಕಾಣಲಿಲ್ಲ. ಅವರು ಮಂತ್ರಿ ಲಾಬಿಯ ಗೋಜಿಗೂ ಹೋಗದೆ ಶಾಸಕರ ಭವನದಲ್ಲಿ ಹಂಚಿಕೆಯಾಗುವ ಹೊಸ ಕೊಠಡಿಯ ಕಡೆಗೆ ನಡೆದಿದ್ದರು.

ಈ ಬಾರಿ ಅಂಗಾರ ಆರನೇ ಬಾರಿಯ ಶಾಸಕ. ದಕ್ಷಿಣ ಕನ್ನಡ ಜಿಲ್ಲೆಯಿಂದ ಆಯ್ಕೆಯಾದ ಏಳು ಶಾಸಕರಲ್ಲಿ ಆರು ಮಂದಿ ಮೊದಲ ಬಾರಿಯ ಎಂಎಲ್ಎಗಳು. 2013ರಲ್ಲಿ ದಕ್ಷಿಣ ಕನ್ನಡದಲ್ಲಿ ಎಂಟರಲ್ಲಿ ಏಳು ಸ್ಥಾನಗಳಲ್ಲಿ ಕಾಂಗ್ರೆಸ್ ಗೆದ್ದಾಗಲೂ ಸುಳ್ಯದಿಂದ ಅಂಗಾರ ಗೆದ್ದು ಬಂದಿದ್ದರು. ಹೀಗಾಗಿ ಅಂಗಾರ ಮಂತ್ರಿ ಮಂಡಲಕ್ಕೆ ಸಹಜ ಆಯ್ಕೆಯಾಗಿ ಸೇರುವ ನಿರೀಕ್ಷೆಯಿತ್ತು. ಅಂಗಾರರಲ್ಲೂ ಆ ವಿಶ್ವಾಸ ಇತ್ತು.

ಆದರೆ ಅಂಗಾರ ಮಂತ್ರಿಯಾಗಿಲ್ಲ. 2008ರಲ್ಲೇ ನಾನೂ ಆಕಾಂಕ್ಷಿ ಅಂತ ಸಣ್ಣದಾಗಿ ಧ್ವನಿ ಎತ್ತುತ್ತಿದ್ದರೆ ಈಗಲಾದ್ರೂ ಮಂತ್ರಿಯಾಗುತ್ತಿದ್ದರು. ಪಕ್ಷ ನಿಷ್ಠೆ, ಸರಳತೆ ಮೈಗೂಡಿಸಿದ್ದಾರೆ. ಆರು ಬಾರಿ ಶಾಸಕರಾಗಿದ್ದರೂ ವಿಧಾನಸಭೆಯಲ್ಲಿ ಚರ್ಚೆಗಳಲ್ಲಿ ಭಾಗಿಯಾಗಿದ್ದು ಕಡಿಮೆ. ಹಿರಿತನದ ಜೊತೆಗೆ ತನ್ನ ಜೀವನಾನುಭವದ ಆಧಾರದಲ್ಲಿ ಶಾಸನಸಭೆಯ ಚರ್ಚೆಗಳಲ್ಲಿ ಭಾಗಿಯಾಗುವ ವಿಫುಲ ಅವಕಾಶ ಅಂಗಾರರಿಗಿತ್ತು. ಲಾಬಿ ನಡೆಸಲು ಶಕ್ತಿ ಇಲ್ಲದವರು ತಮ್ಮನ್ನು ಕೈಬಿಡಲು ಸಾಧ್ಯವಿಲ್ಲ ಅನ್ನೋದನ್ನು ವಿಧಾನಸಭೆಯಲ್ಲಿ ಭಾಗವಹಿಸುವಿಕೆ  ಮೂಲಕ ತೋರಿಸಿಕೊಡಬೇಕಾಗುತ್ತದೆ.   'ನನಗಿದು ಸಿಗಬೇಕು' ಎಂದು ಕೇಳದಿದ್ದರೆ ರಾಜಕಾರಣದಲ್ಲಿ ಹುದ್ದೆಗಳು ಸುಮ್ಮನೆ ಹುಡುಕಿಕೊಂಡು ಬರೋದಿಲ್ಲ ಎನ್ನುವುದೂ ವಾಸ್ತವ.



Friday, March 8, 2019

ಕತ್ತಲೋಡಿಸದ ಬೆಳಕು




ನಿದನಿಧಾನ ಸಾಗುವ ರಸ್ತೆ
ಇದರ ತಳುಕೇನು? ಬಳುಕೇನು?
ಸುತ್ತು ಸುತ್ತಲೇ ಹತ್ತಿ ಹೋಗುವ ಸುಸ್ತು
ಮನಕೋಟೆಯ ಮುಂದೆ ತಲೆಎತ್ತಿದ ಘಾಟಿ

ಕತ್ತಲಾವರಿಸಿತು. ಘಾಟಿಗೇನು? ಘಾಟಿ 'ಘಾಟಿ'ಯೇ
ಹೆಸರೇ ಕೃಷ್ಣ. ಕಪ್ಪು ಕತ್ತಲು.
ಸುತ್ತಲೂ ಝಗಮಗಿಸುತಿದೆ ಬೆಳಕು. ಮನೆಗಳು.. 
ಒಂದು, ಎರಡು, ಮೂರು.. ನೂರು, ಇನ್ನೂರು.. 
ಸಾವಿರವೇ? ದಾಟಿರಬೇಕು. ಎಣಿಸುವುದು ಇತ್ತಲೋ? 
ಅತ್ತಲೋ...?

ಅತ್ತಲೆಂದರೆ ಅತ್ತಲೇ. ಇತ್ತಲಿಂದಲೇ ಹೋದ ಅತ್ತಲಿಂದಲೇ ತೂರಿ ಬರುತಿದೆ ಬೆಳಕು. ಕತ್ತಲೋಡಿಸಲು
ಆವರಿಸಿದೆ ಅಲ್ಲೂ.. ಇಲ್ಲೂ


ಅತ್ತಲಿಂದಿತ್ತ ಇತ್ತಿಲಿಂದ ಹೋಗುತಿದೆ ಅತ್ತಕೂ.. ಬೆಳಕಿಗೆಲ್ಲಿದೆ ಬೇಲಿ? 
ಬೇಲಿಯೇ? ಬೇಲಿಯೂ ಇದೆ ನಡುವೆ. ಬೇಲಿಗೂ ಬೆಳಕು. ನಸುನಕ್ಕು ಬೆಳಕು ಬೀರುತಿದೆ ಬೆಳಕು. ನಸುನಕ್ಕಿದ್ದು ಹೌದೋ? ಹೌದೆಂದಿತು ಮನ. ಅಲ್ಲವೋ? ಅಲ್ಲದೆಯೂ ಇರಬಹುದು. ನಿರ್ಲಿಪ್ತ. ನನಗೇನಿದೆ ಹಂಗು? ನಗುವೂ ಇಲ್ಲ ಅಳುವೂ..

ಬೇಲಿ ಬೆಳಕುಗಳ ಮೀರಿ ಹಾರಿ ಬರುತಲಿದೆ 
ಸಿಡಿತಲೆಯ ಮದ್ದು ಗುಂಡು
ಢಂ.. ಢಮಾರ್.. ಅಬ್ಬರ.. ಸದ್ದಡಗುವ ನಡುವೆ ಚೀತ್ಕಾರ
ಕಷ್ಣಘಾಟಿಯ ಮಡಿಲ ಮಕ್ಕಳ ಕೂಗು

ಚೆಲ್ಲಿದ ರಕ್ತಕ್ಕೆ ಪ್ರತೀಕಾರದ ಪ್ರತಿಜ್ಞೆ
ಹಾರಲೇಬೇಕು ಸಿಡಿತಲೆಯ ಮದ್ದು
ಸಿಡಿಯಲೇಬೇಕು ಗುಂಡು.. ಚೆಲ್ಲಬೇಕು ರಕ್ತ
ರಕ್ತಕ್ಕೆ ರಕ್ತವೇ ಉತ್ತರ.. ಹಾ ಹಾ.. ರಕ್ತವೇ ಉತ್ತರ.
ಹಾರಿಹೋಗಿದ್ದು ರಕ್ತ ಬೇಕಿಲ್ಲದವರ ಪ್ರಾಣ
ಈಗಲಾದರು ಹರಿಯುವುದು ನಿಲ್ಲುತ್ತಾ ರಕ್ತ? ಇಲ್ಲ?

ನಗು ಮರೆತು ನಿರ್ಲಿಪ್ತವಾಗಿ ಬೆಳಕು ಬೀರುತಿದೆ ಬೇಲಿ
ಮೈಲುದ್ದದವರೆಗೂ ನೆರಳಾಗಿ ಕಾಡುತಿದೆ ಭಯ
ಯಾವುದರ ಗೊಡವೆಯಿಲ್ಲದೆ ನಿದ್ರೆಗೆ ಜಾರುತಿದೆ ಘಾಟಿ
ಕೃಷ್ಣಘಾಟಿ.

- ಹರಿಪ್ರಸಾದ್ ಅಡ್ಪಂಗಾಯ

(ಮನಕೋಟೆಯಿಂದ ಕೃಷ್ಣಘಾಟಿ ಹತ್ತಿಳಿದು ಪೂಂಚ್ ಗೆ ಬರುವ ಹಾದಿಯಲ್ಲಿ ಬರೆದಿದ್ದು)