Friday, February 10, 2012

ಬ್ರೇಕಿಂಗ್ ನ್ಯೂಸ್ ಮತ್ತು ರಾಜೀನಾಮೆ

ರಾಜ್ಯ ರಾಜಕೀಯದ ಇತ್ತೀಚಿನ ಅತಿದೊಡ್ಡ ಬ್ರೇಕಿಂಗ್ ನ್ಯೂಸ್ ಇಬ್ಬರು ಸಚಿವರು ಸದನದಲ್ಲಿ ಕುಳಿತುಕೊಂಡೇ ಸೆಕ್ಸ್ ವೀಡಿಯೋ ವೀಕ್ಷಿಸಿದ್ದು. ಈ ಬ್ರೇಕಿಂಗ್ ನ್ಯೂಸ್ ಮೂವರು ಸಚಿವರನ್ನು ಬಲಿತೆಗೆದುಕೊಂಡಿತು. ಅಷ್ಟು ವೇಗವಾಗಿ ಮೂವರು ಸಚಿವರ ರಾಜೀನಾಮೆಯನ್ನು ಏಕಕಾಲದಲ್ಲಿ ಕೊಟ್ಟಿದ್ದು ಇದೇ ಮೊದಲು ಅನ್ಸುತ್ತೆ.
ಈ ಬ್ರೇಕಿಂಗ್ ನ್ಯೂಸ್ ನಿಜಕ್ಕೂ ರಾಜ್ಯ ರಾಜಕೀಯದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ರಾಜಕಾರಣಿಗಳ ನೈತಿಕತೆಯನ್ನು ಪ್ರಶ್ನಿಸಿತು. ವಿಧಾನಸೌಧದ, ವಿಧಾನಮಂಡಲದ ಘನತೆಯನ್ನು ಅರಿತುಕೊಳ್ಳದವರು ಅಲ್ಲಿ ಕುಳಿತು ರಾಜ್ಯಭಾರ ಮಾಡುತ್ತಿದ್ದಾರೆ ಅನ್ನೋದನ್ನು ತೋರಿಸಿಕೊಟ್ಟಿತು. ಸದನದ ಗೌರವದ ಬಗ್ಗೆ ಕನಿಷ್ಟ ಜ್ಞಾನ ಇರುತ್ತಿದ್ದರೆ ಖಂಡಿತ ಇಂತಹ ಪ್ರಸಂಗ ಉದ್ಭವಿಸುತ್ತಿರಲಿಲ್ಲ. ಜನರ ಕಣ್ಣಿನಲ್ಲಿ ದೇಗುಲವಾಗಿ ಕಾಣುವ ವಿಧಾನಸಭೆ, ಶಾಸಕರ ಕಣ್ಣಲ್ಲಿ ಅದ್ಯಾವ ರೀತಿ ಕಾಣುತ್ತಿದೆ ಅನ್ನೋದಕ್ಕೆ ಇದೊಂದು ಸಣ್ಣ ಎಕ್ಸಾಂಪಲ್ ಅಷ್ಟೆ.
ನಿಜ. ವಿಧಾನಸಭೆಯಲ್ಲಿರುವ ಎಲ್ಲಾ ಶಾಸಕರು ತಪ್ಪು ಮಾಡಿಲ್ಲ. ಮಾಡಿ ಸಿಕ್ಕಿಬಿದ್ದವರು ಮೂವರು ಮಾತ್ರ. ಅದಕ್ಕಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಅವ್ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂಬ ಒತ್ತಾಯದಲ್ಲೂ ಹುರುಳಿದೆ. ಕರ್ನಾಟಕ ವಿಧಾನಸಭೆಯ ಘನತೆಯನ್ನು ಎತ್ತಿಹಿಡಿಯಬೇಕೆಂದರೆ ಇಂತಹ ಕಠಿಣ ನಿರ್ಧಾರ ಅತ್ಯಗತ್ಯ. ಆದ್ರೆ ಒಂದು ವಿಷಯವನ್ನು ನಾವಿಲ್ಲಿ ಮರೀಬಾರದು. ಕಳೆದ ಎರಡು ಮೂರು ವಿಧಾನಮಂಡಲ ಅಧಿವೇಶನ ಸಂದರ್ಭಗಳಲ್ಲಿ ವಿಶೇಷವಾಗಿ ವಿಧಾನಸಭೆಯೊಳಗೆ ಮೊಬೈಲ್ ಬಳಕೆ ನಿರಂತರವಾಗಿ ನಡೆದಿದೆ. ಕೆಲ ಶಾಸಕರು ಕದ್ದುಮುಚ್ಚಿ ಮೊಬೈಲ್ ಗಳಲ್ಲಿ ಮಾತಾಡ್ತಿದ್ದುದು ನಮ್ಮ ಕ್ಯಾಮರಾ ಕಣ್ಣುಗಳಲ್ಲಿ ಸೆರಿಯಾಗಿದ್ದವು. ಟಿವಿ9 ಸೇರಿದಂತೆ ಉಳಿದ ಚಾನೆಲ್ ಗಳೂ ಇದನ್ನು ಟೆಲಿಕಾಸ್ಟ್ ಮಾಡಿದ್ದವು. ಆದ್ರೆ ಶಾಸಕರು ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಕೆಲಸ ಮಾಡಲೇ ಇಲ್ಲ. ಪ್ರತಿನಿತ್ಯ ಅದನ್ನು ನಾವು ಸೆರೆಹಿಡಿದು ಸುದ್ದಿ ಮಾಡಿದ್ರೂ ಸ್ಪೀಕರ್, ಮುಖ್ಯಮಂತ್ರಿ, ಸಂಸದೀಯ ವ್ಯವಹಾರ ಸಚಿವರು, ಮೂರೂ ಪಕ್ಷಗಳ ಸಚೇತಕರು, ಪ್ರತಿಪಕ್ಷ ನಾಯಕರು, ಸದನದ ನಾಯಕರು, ಯಾರೊಬ್ಬರೂ ಇದ್ರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದ್ರಿಂದಾಗಿ ಶಾಸಕರ ಮೊಬೈಲ್ ಬಳಕೆ ಎಗ್ಗಿಲ್ಲದೆ ಸಾಗಿತ್ತು.
ಆದ್ರೆ ಸುದ್ದಿ ಮಾಧ್ಯಮದ ಕ್ಯಾಮರಾ ಮನ್ ಗಳಿಗೆ ಶಾಸಕರ ಇಂತಹ ಚಟುವಟಿಕೆಗಳು ಯಾವತ್ತೂ ನಿರ್ಲಕ್ಷಿಸುವ ವಿಚಾರ ಆಗಲೇ ಇಲ್ಲ. ಶಾಸಕರ ಮೊಬೈಲ್ ಬಳಕೆ ಬಗ್ಗೆ ನಿರಂತರ ಕಣ್ಣಿಟ್ಟಿದ್ದರು. ನಮ್ಮ ಟಿವಿ9 ನ ಕ್ಯಾಮರಾಮನ್ ಗಳಾದ ಶ್ರೀನಿವಾಸ್ ಕುಲಕರ್ಣಿ, ಮಂಜುನಾಥ್, ಸಂದೇಶ್, ವಿನೋದ್ ಇವ್ರೆಲ್ಲರೂ ಪ್ರತಿದಿನ ಒಂದಲ್ಲ ಒಂದ್ಸಲ ಆ ಎಂಎಲ್ಎ ಇವತ್ತು ಹೀಗೆ ಮಾಡ್ತಿದ್ರು ಅಂತ ನಮಗೆ ಹೇಳುತ್ತಿರುತ್ತಿದ್ದರು. ಆದ್ರೆ ಫೆ.6ರಂದು ಮಾತ್ರ ಗೆಳೆಯ ಶ್ರೀನಿವಾಸ್ ಕುಲಕರ್ಣಿ ಕ್ಯಾಮರಾದಿಂದ ನಿಜಕ್ಕೂ ಅದ್ಭುತವನ್ನು ತೋರಿಸಿಕೊಟ್ರು. ಶಾಸಕರು ಸದನದೊಳಗೆ ಮಾಡ್ತಿರೋ ಕೆಲಸ ಸರಿಯಲ್ಲ ಅನ್ನೋದನ್ನು ಪ್ರತಿಯೊಬ್ಬರ ಮುಖಕ್ಕೆ ರಾಚುವಂತೆ ಕ್ಯಾಮರಾದಲ್ಲಿ ಸೆರೆ ಹಿಡಿದು ತೋರಿಸಿದ್ರು. ವಿಧಾನಸಭೆಯ ಘನತೆಯನ್ನು ಶಾಸಕರಿಗೆ ನೆನಪಿಸಿಕೊಟ್ರು. ಇದ್ರಿಂದಾಗಿ ಲಕ್ಷ್ಮಣ್ ಸವದಿ, ಸಿಸಿ ಪಾಟೀಲ್ ಮತ್ತು ಕೃಷ್ಣ ಪಾಲೇಮಾರ್ ಕುರ್ಚಿ ಕಳೆದುಕೊಂಡ್ರು.
ಮೊದಲೇ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದರೆ ಇಷ್ಟೊತ್ತಿಗೆ ಶಾಸಕರು ಸದನಕ್ಕೆ ಮೊಬೈಲ್ ತರೋದಕ್ಕೆ ಬ್ರೇಕ್ ಬಿದ್ದಿರುತ್ತಿತ್ತು. ಆದ್ರೆ ಅಷ್ಟು ಸುಲಭವಾಗಿ ತಪ್ಪು ತಿದ್ದಿಕೊಳ್ಳಲು ಅವ್ರು ರಾಜಕಾರಣಿಗಳು. ತಪ್ಪಿಸಿಕೊಳ್ಳಲು ಸಬೂಬು ಹುಡುಕುತ್ತಾರೆಯೇ ಹೊರತು ತಪ್ಪು ಅರ್ಥವಾಗೋದಿಲ್ಲ.
ಇದೆಲ್ಲದರ ಪರಿಣಾಮ ಈ ಬ್ರೇಕಿಂಗ್ ನ್ಯೂಸ್ ಮತ್ತು ರಾಜೀನಾಮೆ.