Friday, April 25, 2014

ಇದು ಅಂತಿಂತಾ ಓಟವಲ್ಲ- ಸ್ವಾತಂತ್ರ್ಯದ ಓಟ!

" ಇದನ್ನು ರಿಟೈರ್‌ಮೆಂಟ್‌ ಆದ್ಮೇಲೆ ಓದೋಕೆಂದು ಬರೆದಿದ್ದಾ..?" ಪುಸ್ತಕದಂಗಡಿಯಲ್ಲಿ ಆ ಪುಸ್ತಕ ಎತ್ತಿಕೊಂಡಾಗ ತಮಾಷೆಗೆ ಹಾಗೆ ಹೇಳಿದ್ದೆ. ಯಾಕೆಂದರೆ ಪುಸ್ತಕದ ಗಾತ್ರ ಹಾಗಿತ್ತು. 200-300 ಪುಟದ ಪುಸ್ತಕವನ್ನೇ ಒಂದು ವಾರ ಓದುವ ನನಗೆ ಅನಾಮತ್ತು 1100ಕ್ಕೂ ಹೆಚ್ಚು ಪುಟಗಳ ಆ ಪುಸ್ತಕ ಕೈಗೆತ್ತಿಕೊಂಡಾಗ ಇದನ್ನು ಓದಿ ಮುಗಿಸೋದು ಯಾವಾಗ ಅನ್ನೋ ಪ್ರಶ್ನೆ ಕಾಡಿತ್ತು. ಕಾದಂಬರಿಯನ್ನು ನಿಧಾನವಾಗಿ ಓದಿದಷ್ಟೂ ಅದರ ಸುಖ ಜಾಸ್ತಿ. ಇನ್ನು ಈ ಪುಸ್ತಕ ಓದಿ ಮುಗಿಸಬೇಕೆಂದರೆ ನಾನು ರಿಟೈರ್ ಆದ ಮೇಲೆ ಮಾತ್ರ ಅಷ್ಟು ಟೈಂ ಸಿಗಬಹುದೇನೋ ಅನ್ನಿಸಿತ್ತು. ಅಂತೂ ಕೆಲಸದ ಬ್ಯುಸಿಯ ನಡುವೆ ಸುಮಾರು 2 ತಿಂಗಳ ಅಂತರದಲ್ಲಿ ಪುಸ್ತಕ ಓದಿ ಮುಗಿಸಿದೆ.

 ಅಂದಹಾಗೆ ಅದು - " ಸ್ವಾತಂತ್ರ್ಯದ ಓಟ". ಬೊಳುವಾರು ಮಹಮದ್ ಕುಂಞಿ ಬರೆದಿರುವ ಕಾದಂಬರಿ.

ಫೇಸ್‌ ಬುಕ್‌ನಲ್ಲಿ ಸ್ವಾತಂತ್ರ್ಯದ ಓಟದ ತುಣುಕುಗಳನ್ನು ಹಾಕಿ ಬೊಳುವಾರರು ಕಾದಂಬರಿಯ ಬಗ್ಗೆ ಹುಚ್ಚು ಹಿಡಿಸಿದ್ದರು. ಪುಸ್ತಕ ಓದಲೇ ಬೇಕೆಂದು ಡಿಸೈಡ್‌ ಮಾಡಿದ್ದೆ. ಈ ಬೊಳುವಾರರ ಕೃತಿಗಳು ಬಹುಬೇಗ ಮಾರಾಟವಾಗಿ ಹೋಗ್ತವೆ. ಅವರ ಹಳೆಯ ಪುಸ್ತಕಗಳಿಗಾಗಿ ಅದೆಷ್ಟೋ ಪುಸ್ತಕದಂಗಡಿಗಳಲ್ಲಿ ಹುಡುಕಾಡಿ ಪಾಡು ಪಟ್ಟಿದ್ದೇನೆ. ಇನ್ನು ಈ ಪುಸ್ತಕವೂ ಕೈ ತಪ್ಪಬಾರದೆಂದು ಕಾದಂಬರಿ ತಂದು ಕುಳಿತೆ.

ಪುಸ್ತಕದ ಗಾತ್ರ ಮೊದಲು ಹೆದರಿಸಿದ್ದರೂ ಓದಲು ಆರಂಭಿಸುತ್ತಿದ್ದಂತೆ ಓಟ ಶುರು. ಓಡುತ್ತಾ, ನಲಿಯುತ್ತಾ, ನಗುತ್ತಾ, ಕಿವುಚುತ್ತಾ, ಕರಗುತ್ತಾ, ಮರುಗುತ್ತಾ ಸಾಗಿದ ಈ ಓಟ ಮುಗಿದಾಗ ಮನಸ್ಸಿನ ತುಂಬಾ ವಿವರಿಸಲಾಗದ ವಿಶಿಷ್ಟ ಅನುಭೂತಿ.

ಕಾದಂಬರಿಯೊಂದು ತನ್ನ ಒಟ್ಟು ವಸ್ತುವಿನ ಮೂಲಕ ಯಾವುದೋ ಒಂದು ಕಾಲಘಟ್ಟದಲ್ಲಿ ಘಟಿಸುತ್ತದೆ. ಹಾಗೇನೇ ಆ ಸಮಯದ ಪ್ರಧಾನ ವಿಚಾರಧಾರೆಗಳ ಜೊತೆಗೆ ಸಂವಾದ ಅಲ್ಲಿನ ಪಾತ್ರಗಳ ಮೂಲಕ ನಡೆದುಹೋಗುವುದು ಸಾಮಾನ್ಯ. ಆದರೆ ಸ್ವಂತತ್ರ ಭಾರತದ ಅರ್ಧ ಶತಮಾನದುದ್ದಕ್ಕೂ ನಡೆಯುವ ಘಟನೆಗಳಿಗೆ ಸಾಕ್ಷಿಪ್ರಜ್ಞೆಯಾಗಿ ನಿಲ್ಲುವ ಕಾದಂಬರಿಯ ವಸ್ತುವೇ ಅಪೂರ್ವ.

ಎಲ್ಲಿಯ ಪಾಕಿಸ್ತಾನದ ಲಾಹೋರ್ ಸಮೀಪದ ಬಹವಾಲಪುರ ಎಲ್ಲಿಯ ಪುತ್ತೂರಿನ ಪಕ್ಕದಲ್ಲಿರುವ ಬೊಳುವಾರರ ಮುತ್ತುಪ್ಪಾಡಿ. ಎತ್ತಣದಿಂದೆತ್ತಣಕ್ಕೆ ಸಂಬಂಧವಯ್ಯ ಅಂತ ಅಚ್ಚರಿಯಾಗುತ್ತದೆ. ಆದರೆ ಬೊಳುವಾರರು ಸಂಬಂಧ ಹೆಣೆದಿದ್ದಾರೆ. ಸ್ವತಂತ್ರ ಭಾರತದಲ್ಲಿ ಘಟಿಸಿದ ಅನೇಕ ಘಟನೆಗಳು, ಅವು ಹಳ್ಳಿಗಳ ಜನಜೀವನದ ಮೇಲೆ ಬೀರುತ್ತಾ ಸಾಗಿದ ಪರಿಣಾಮಗಳು ಕಾದಂಬರಿಯಲ್ಲಿ ಘಟಿಸುತ್ತಾ ಹೋಗುತ್ತದೆ. ಅದೇ ಕಾರಣಕ್ಕೆ ಇದು ಕೇವಲ ಕಾದಂಬರಿಯಲ್ಲ. ಸ್ವತಂತ್ರ ಭಾರತದ ಅನೇಕ ಘಟನಾವಳಿಗಳನ್ನು ಕಾದಂಬರಿಯ ಮೂಲಕ ಹೇಳುತ್ತಾ ಸಾಗಿದ ಇತಿಹಾಸದ ಪುಸ್ತಕವೇನೋ ಅಂತ ಕೆಲವೊಮ್ಮೆ ಭಾಸವಾಗುತ್ತೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಘಟಿಸಿ ಹೋದ ಅನೇಕ ಘಟನೆಗಳು ಕಾಂದಬರಿಯ ಪಾತ್ರಗಳ ಜೊತೆಗೇ ಘಟಿಸುತ್ತದೆ. ಈ ಪಾತ್ರಗಳು ಅವಕ್ಕೆ ಸಾಕ್ಷಿ. ಹೀಗಾಗಿ ಇವರೆಲ್ಲರೂ ಇತಿಹಾಸದ  ಒಂದು ಭಾಗ.

ಸಾಮಾನ್ಯವಾಗಿ ಕಾದಂಬರಿಯಲ್ಲಿ ವಾಸ್ತವದಲ್ಲಿ ಇರದ ವ್ಯಕ್ತಿಗಳೇ ಪಾತ್ರಗಳಾಗುವುದು ಸಹಜ. ಅದಕ್ಕೆ ಕಾದಂಬರಿ ಅನ್ನೋದು. ಕಥೆಯಲ್ಲಾದರೂ ಅಷ್ಟೇ. ಆದರೆ ಸ್ವಾತಂತ್ರ್ಯದ ಓಟದಲ್ಲಿ ಹಾಗಲ್ಲ. ಇಲ್ಲಿ ಬಂದುಹೋಗುವ ಕೆಲವು ವ್ಯಕ್ತಿಗಳು ಪುತ್ತೂರಿನ ಸುತ್ತಮುತ್ತಲ ಪರಿಸರದಲ್ಲಿರುವ ವ್ಯಕ್ತಿಗಳು. ಹೀಗಾಗಿ ಕಾದಂಬರಿ ಸಮಾಕಾಲೀನ ಘಟನೆಗಳ ಜೊತೆಗೇ ಸಾಗುತ್ತದೆ.

ಕಾದಂಬರಿಯಲ್ಲಿ ಬಹುವಾಗಿ ಕಾಡುವುದು ಚಾಂದ್‌ ಅಲೀಯ ಪಾತ್ರ . ಚಾಂದ್ ಅಲೀ, ಚಾಂದಚ್ಚನಾಗಿ, ಚಾಂದಜ್ಜನಾಗುವವರೆಗೆ ಆತ ಇಡೀ ಕಾದಂಬರಿಯ ನಾಯಕ ಪಾತ್ರವಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕು, ಆತನ ನಡೆ ನುಡಿ ಇವೆಲ್ಲವೂ ಓದುಗನನ್ನು ಖಂಡಿತವಾಗಿ ವಿನೀತವಾಗಿಸುತ್ತೆ. ಹೆಚ್ಚು ಮೃದುವಾಗುವಂತೆ ಮಾಡುತ್ತೆ. ಅಪಾಯಗಳ ಸಂದರ್ಭದಲ್ಲೂ ತೋರಬೇಕಾದ ಸಮಚಿತ್ತವನ್ನು ತೋರಿಸಿಕೊಡುತ್ತೆ. ಆದರೆ ಆತನೊಳಗೆ ಬಚ್ಚಿಟ್ಟಿದ್ದ ಸತ್ಯಗಳನ್ನು ಯಾರ ಜೊತೆಯೂ ಹೇಳಲಾಗದೆ ಆತ ಪಡುವ ಪಾಡು ಮಾತ್ರ ಯಾರಿಗೂ ಬೇಡ ಅನ್ನಿಸುತ್ತೆ.

ಇನ್ನೊಂದು ಬಹುಮುಖ್ಯ ಪಾತ್ರ ಮಿಠಾಯಿ ಅವುಲಿಯಾ ಅಲಿಯಾಸ್ ಜೋಳಿಗೆ ಬಾಬಾ ಅಲಿಯಾಸ್ ಬದ್ರುದ್ದೀನ್‌ರದ್ದು. ಬಹುಷಃ ಧರ್ಮದ ನೆಲೆಗಟ್ಟಿನ ಆಧಾರದಲ್ಲಿ ನೋಡುತ್ತಾ ಹೋದಾಗ ಹಾಗೂ ಧರ್ಮ ಮತ್ತು ಬದುಕಿನ ವಾಸ್ತವಗಳಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಅನ್ನುವ ವಿಚಾರಗಳಲ್ಲಿ ಬಾಬಾನ ದೃಷ್ಟಿಕೋನ ಹೊಸ ನೋಟವನ್ನು ತೋರುತ್ತೆ. ಹೊಸ ದಾರಿದೀಪವಾಗುತ್ತಾ ಸಾಗುತ್ತೆ. ಆದರೆ ಮುಂದೆ ಘಟಿಸುವ ವಿಚಾರಗಳ ಬಗ್ಗೆಯೂ ಹೇಳಬಲ್ಲವರಂತೆ ಕಾಣುವ ಅವುಲಿಯಾ ಬಗ್ಗೆ ಕಾದಂಬರಿ ಓದಿ ಮುಗಿಸಿದಾಗ ನನ್ನ ಮನಸ್ಸಲ್ಲೊಂದು ಆಕ್ಷೇಪ ಹುಟ್ಟಿಕೊಂಡಿತ್ತು. ಅಷ್ಟೆಲ್ಲಾ ಗೊತ್ತಿದ್ದರೂ ಚಾಂದ್‌ ಅಲೀ ಹುಡುಕುತ್ತಿದ್ದ ತನ್ವೀರ್ ಹಾಗೂ ಮೊಹಿಂದರ್ ಎಲ್ಲಿದ್ದಾರೆಂದು ಬಾಬಾ ಯಾಕೆ ಹೇಳಲಿಲ್ಲಾ ಅನ್ನೋದೇ ನನ್ನ ಆಕ್ಷೇಪ. ಆದರೆ ಬೊಳುವಾರರು ಬಾಬಾನ ಬಾಯಲ್ಲಿ ಅಗತ್ಯ ಬಿದ್ದದ್ದನ್ನು ಮಾತ್ರ ಹೇಳಿಸಿ ಕಾದಂಬರಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಆಗಲೇ ಹೇಳಿದೆ ಇದು ಇತಿಹಾಸಕ್ಕೆ ಸಾಕ್ಷಿಯಾಗುತ್ತಾ ಸಾಗಿದ ಕಾದಂಬರಿ ಅನ್ನೋದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಇಂದಿರಾಗಾಂಧಿ ವಿರುದ್ಧ ಘೋಷಣೆ ಕೂಗಿದ್ದರಂತೆ. ಆ ಕಾರಣಕ್ಕೆ ವಿದ್ಯಾರ್ಥಿಗಳನ್ನು ಅರೆಸ್ಟ್‌ ಮಾಡಿ ಜೈಲಿಗಟ್ಟಿದ್ದರಂತೆ. ಆದರೆ ನಾನು ಈ ಕಾದಂಬರಿ ಓದುವವರೆಗೂ ನನಗೆ ಈ ವಿಚಾರ ತಿಳಿದಿರಲಿಲ್ಲ. ಕಾದಂಬರಿ ಓದುವಾಗಲೂ ಇದು ಕಾಲ್ಪನಿಕ ಇರಬಹುದು ಅಂತಷ್ಟೇ ಅಂದುಕೊಂಡಿದ್ದೆ. ಆದರೆ ಮೊನ್ನೆ ಒಬ್ಬರು ಇತಿಹಾಸ ಪ್ರೊಫೆಸರ್ ಜೊತೆ ಮಾತನಾಡುತ್ತಿದ್ದಾಗ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ರು. ವಿದ್ಯಾರ್ಥಿಗಳ ಆ ಒಂದು ಹೋರಾಟ ಬಿಟ್ಟರೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಅಂತಹ ದೊಡ್ಡ ಪ್ರತಿಭಟನೆಗಳು ನಡೆದಿರಲಿಲ್ಲ ಅಂತ ಅವರು ವಿವರಿಸುತ್ತಿದ್ದರು. ಹೀಗೆ ಇತಿಹಾಸದ ಘಟನೆಗಳು ಈ ಕಾದಂಬರಿಯ ಮೂಲಕ ನಮ್ಮನ್ನು ತಲುಪಿವೆ.

ನಾನು ಬೆಳೆದ ಪರಿಸರ ಹಾಗೂ ನನ್ನ ಬುದ್ಧಿ ಬೆಳೆಯುತ್ತಾ ಸಾಗಿದ ಅವಧಿ ರಾಮಜನ್ನಭೂಮಿಯ ಹೆಸರಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ಅವಧಿ. ಆಗ ನಮ್ಮ ಊರುಗಳಲ್ಲಿ ನಡೆದ ಅವಾಂತರಗಳು ಒಂದೆರಡಲ್ಲ. ಪುತ್ತೂರು ಮತ್ತು ಸುಳ್ಯ ಆಗ ಅಕ್ಷರಷಃ ಬೆಂದುಹೋಗಿತ್ತು. ಆದರೆ ಬೊಳುವಾರರ ಮುತ್ತುಪ್ಪಾಡಿಯಲ್ಲಿ ಚಾಂದ್ ಅಲೀ, ಅನಂತಣ್ಣ, ಪಂಡಿತರಂತಹ ಕೆಲವರು ಅದರಲ್ಲೂ ಇಸ್ಪೀಟ್ ಖಾದರ್ ಹಾಗೂ ಜೊಯಿಸರ ಮಗ ಸೇರಿಕೊಂಡು ಮಾಡಿದ ಕ್ರಮಗಳನ್ನು ಅದ್ಯಾಕೋ ನಮ್ಮ ಊರುಗಳಲ್ಲಿ ಮಾಡಲು ಸಾಧ್ಯವಾಗಲೇ ಇಲ್ಲ. ಅಂದು ನಮ್ಮ ಊರಲ್ಲಿ ಎಲ್ಲರಿಗೂ ಒಳ್ಳೆಯದನ್ನು ಬಯಸುವ, ಖಾಯಿಲೆಗಳಿಗೆ ಮಂತ್ರಿಸಿದ ನೀರನ್ನು ಕೊಡುತ್ತಿದ್ದ 'ಧರ್ಮತನ್ನಿ' ಎಂದೇ ಕರೆಸಿಕೊಳ್ಳುತ್ತಿದ್ದ ( ಅವರ ಹೆಸರು ಈಗಲೂ ನನಗೆ ನೆನಪಾಗುವುದಿಲ್ಲ) ಅವರ ಅಂಗಡಿ ಬೆಂಕಿ ಇಟ್ಟಿದ್ದರು. ಬಾಬರಿ ಮಸೀದಿ ಧ್ವಂಸ ಮಾಡಿದವರಿಗೆ ನಮ್ಮೂರಿನ ಧರ್ಮತನ್ನಿಯ ಅಂಗಡಿಗೆ ಬೆಂಕಿ ಹಚ್ಚಿದ್ದರಿಂದ ಏನು ಸಮಾಧಾನ ಸಿಕ್ಕಿತೋ ನನಗೆ ಈಗಲೂ ಅರ್ಥವಾಗುವುದಿಲ್ಲ. ಆದರೆ ಈ ಎಲ್ಲಾ ಘಟನೆಯಿಂದ ನಮ್ಮ ಊರುಗಳಲ್ಲಿ ಅದುವರೆಗೆ ಅನ್ಯೋನ್ಯವಾಗಿದ್ದ ಹಿಂದೂ ಮುಸಲ್ಮಾನರ ನಡುವೆ ಸಂಶಯದ ಬೀಜ ಬಿತ್ತಲು ಯಶಸ್ವಿಯಾದವರು ಇಂದು ಅದರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕಾದಂಬರಿ ಓದುತ್ತಿದ್ದಾಗ ಈ ಎಲ್ಲಾ ಘಟನೆಗಳು ಅದೇಕೋ ಮನಸ್ಸಿಗೆ ತುಂಬಾ ಕಾಡಲಾರಂಭಿಸಿತ್ತು.

ಕಾದಂಬರಿಯಲ್ಲಿ ಬರುವ ಒಂದು ಅಂಶವನ್ನು ಪ್ರಸ್ತಾಪಿಸಲೇಬೇಕು. ಅದು ಪ್ರವಾದಿಯವರ ಚಿತ್ರಪಟದ ಮಾರಾಟದ್ದು. ಪ್ರವಾದಿಯವರ ಚಿತ್ರಪಟವನ್ನು ಮುತ್ತುಪ್ಪಾಡಿಯಲ್ಲಿ ಹಂಚಿದ ಫಕೀರ ಅಲ್ಲಿಂದ ಕಾಲ್ಕಿತ್ತಿರುತ್ತಾನೆ. ಆದರೆ ಖರೀದಿ ಮಾಡಿದವರು ಚಿತ್ರಪಟ ಖರೀದಿಸಿದ್ದರಿಂದ ತಮಗೆ ಲಾಭವಾಗಿದೆ ಅಂದುಕೊಂಡಿರುತ್ತಾರೆ. ಇದರ ಬಗ್ಗೆ ಹಲವು ಚರ್ಚೆಗಳು ನಡೀತವೆ. ಅಂತಿಮವಾಗಿ ಸೂಫಿಯಜ್ಜ ಕೊಡುವ ಉದಾಹರಣೆ ಹೆಚ್ಚು ಮನಸ್ಸಿಗೆ ನಾಟುತ್ತದೆ. ಹಿಂದೂ ದೇವರುಗಳು ಅದೆಷ್ಟೋ ಸಾವಿರ ವರ್ಷಗಳ ಹಿಂದೆ ಇದ್ದರಂತೆ. ಅವರ ಚಿತ್ರಪಟಗಳನ್ನಿಟ್ಟು ಪೂಜೆ ಮಾಡುತ್ತಾರೆ. ಹಾಗಿರುವಾಗ ಕೇವರ ಸಾವಿರದೈನೂರು ವರ್ಷಗಳ ಹಿಂದೆ ಇದ್ದ ನಮ್ಮ ಪ್ರವಾದಿಯವರ ಚಿತ್ರಪಟ ಯಾಕಿರಬಾರದು ಎಂದು ಪ್ರಶ್ನಿಸಿ, ಅವರನ್ನು ಹಂಗಿಸಲು ಮುಂದಾದವರ ಬಾಯಿಮುಚ್ಚಿಸುತ್ತಾರೆ.

ಇಂತಹ ಅನೇಕ ಘಟನೆಗಳು ಈ ಕಾದಂಬರಿಯುದ್ದಕ್ಕೂ ಸಾಗುತ್ತವೆ. ಹಾಗೆಯೇ ಬೊಳುವಾರರ ಬರಹದಲ್ಲಿನ ಸೂಕ್ಷ್ಮತೆಯನ್ನು ಓದಿಯೇ ಅನುಭವಿಸಬೇಕು. 1082 ಪುಟಗಳ ಕಾದಂಬರಿಯಲ್ಲಿ ಸಣ್ಣಪುಟ್ಟ ವಸ್ತುಗಳು ಬದಲಾದಾಗಲೂ ಅದಕ್ಕೊಂದು ವಿವರಣೆ ಸಿಗುತ್ತದೆ. ಹಾಗೆಯೇ ಮಹಾಭಾರತದಲ್ಲೋ, ರಾಮಯಣದಲ್ಲೊ ಬರುವಷ್ಟು ಪಾತ್ರಗಳು ಈ ಬೃಹತ್ ಕಾಂದಬರಿಯಲ್ಲಿ ಬಂದು ಹೋಗುತ್ತವೆ. ಆ ಎಲ್ಲಾ ಪಾತ್ರಗಳು ಒಂದಕ್ಕಿಂತ ಒಂದು ಹೆಚ್ಚು ಪ್ರಾಮುಖ್ಯ, ಕಡಿಮ ಪ್ರಾಮುಖ್ಯ ಅನ್ನಿಸುವುದಿಲ್ಲ. ಮಲೆಗಳಲ್ಲಿ ಮದುಮಗಳು ಕಾದಂಬರಿಯ ಆರಂಭದಲ್ಲಿ ಕುವೆಂಪು - ಇಲ್ಲಿ ಎಲ್ಲರೂ ಸಮಾನರು ಅನ್ನುವಂತೆ; ಸ್ವಾತಂತ್ರ್ಯದ ಓಟದಲ್ಲಿನ ಎಲ್ಲ ಪಾತ್ರಗಳೂ ಸಮಾನವೇ. ಕಾದಂಬರಿಯ ಒಂದು ಕಡೆಯಲ್ಲಿ ಬರುವ ಸಾಲುಗಳು - ಸ್ವಾತಂತ್ರ್ಯದ ಓಟದಲ್ಲಿ ಎಲ್ಲರೂ ಸಮಾನರೇ. ಇಲ್ಲಿ ಮೇಲು ಕೀಳಿಲ್ಲ ಅನ್ನುವಂತೆ ಎಲ್ಲಾ ಪಾತ್ರಗಳೂ ಸಮಾನವೇ. ಚಾಂದ್‌ ಅಲೀ ಪಾತ್ರ ಇಡೀ ಕಾದಂಬರಿಯುದ್ದಕ್ಕೂ ಬರುವುದರಿಂದ ಅದು ನಾಯಕ ಪಾತ್ರವಾದರೂ ಸಿನಿಮಿಬ್ರಾಯಿಯನ್ನೋ, ಸುಮತಿಯಕ್ಕಳನ್ನೋ, ಬೂಬಮ್ಮಳನ್ನೋ, ಉಸ್ಮಾನ್ ಅಲಿಯಾಸ್ ಉಮೇಶನನ್ನೋ, ಸಕೀನಾಳನ್ನೋ ನಾವು ಕಡಿಮೆ ತೂಕದ ಪಾತ್ರ ಅನ್ನುವಂತಿಲ್ಲ. ಆದರೆ ಪ್ರತಿಯೊಂದು ಪಾತ್ರ ಬಂದಾಗಲೂ ಅವರನ್ನು ಕಾದಂಬರಿಕಾರ ಪರಿಚಯಿಸುವ ರೀತಿ ನಿಜಕ್ಕೂ ಖುಷಿಕೊಡುತ್ತದೆ. ಅದು ಒಂದು ಸಾಲಿನ ಪರಿಚಯವಾದರೂ ಆಗಬಹುದು ಒಂದು ಪುಟದ ಪರಿಚಯವಾದರೂ ಸರಿಯೇ. ಅವರ ಪಾತ್ರಕ್ಕೆ ಒಗ್ಗುವ ರೀತಿಯಲ್ಲಿ ಪರಿಚಯಿಸಿ ಮುಂದಕ್ಕೆ ಸಾಗುತ್ತಾರೆ.

ಕಾದಂಬರಿಯನ್ನು ಓದಿ ಮುಗಿಸಿದಾಗ ಅದನೋ ಅವ್ಯಕ್ತ ಭಾವನೆ ಮನಸ್ಸಲ್ಲಿ ಮೂಡುತ್ತದೆ. ಮನಸ್ಸನ್ನು ಹಗುರಗೊಳಿಸುತ್ತದೆ. ಜೊತೆಗೆ ಇತಿಹಾಸ ತುಂಬ ಕಾಡುತ್ತದೆ. ಬದುಕಿನ ವೈಚಿತ್ರ್ಯಗಳು ಬೆರಗುಗೊಳಿಸುತ್ತವೆ. ಹುಟ್ಟು ಸಾವಿನ ನಡುವೆ ಮನುಷ್ಯ ಆಡುವ ಆಟಗಳು ಅಸಹ್ಯ ಮೂಡಿಸುತ್ತವೆ. ನಮ್ಮ ಬದುಕಿಗೊಂದು ಹೊಸ ಬಣ್ಣ ಹಚ್ಚಿಕೊಳ್ಳಲು, ಹೊಸ ದಾರಿಯಲ್ಲಿ ಸಾಗಲು ಪ್ರೇರಣೆಯಾಗುತ್ತದೆ.

ಖಂಡಿತವಾಗಿ ಈ ಕಾದಂಬರಿ ಕನ್ನಡದ ಶ್ರೇಷ್ಟ ಕಾದಂಬರಿಗಳ ಸಾಲಿನಲ್ಲಿ ನಿಲ್ಲುತ್ತದೆ.

Wednesday, April 2, 2014

ಉಳಿದವರು ಕಂಡಂತೆ - ಕಂಡಿದ್ದು ಕಾಣದ್ದು

ಸಿನಿಮಾ ನೋಡಲು ಕುಳಿತವನಿಗೆ ಇದ್ದಕ್ಕಿದ್ದಂತೆ ರಷೋಮನ್ ನೆನಪಾಯಿತು. ಒಂದು ಕೊಲೆಯನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ಸೆರೆಹಿಡಿದ ಸಿನಿಮಾ ರಷೋಮನ್‌. ಅದು ಸಾರ್ವಕಾಲಿಕ ಕ್ಲಾಸಿಕ್‌ ಸಿನಿಮಾ. ಅಕಿರಾ ಕುರುಸೋವಾನ ಮಾಸ್ಟರ್ ಪೀಸ್. ಒಂದು ಕೊಲೆಯ ಸುತ್ತ ಹೆಣೆದ ಕುತೂಹಲಕರ ಕಥಾಹಂದರ ರಷೋಮನ್.

'ಉಳಿದವರು ಕಂಡಂತೆ' ಸಿನಿಮಾ ನೋಡುತ್ತಾ ಕುಳಿತಿದ್ದಾಗ ನೆನಪಾಗಿದ್ದು ರಷೋಮನ್‌. ಅದು ಆರಂಭದಲ್ಲಿ ಒಮ್ಮೆ ಮಾತ್ರ. ಕಾರಣ ಇಷ್ಟೇ. ಇಲ್ಲೂ ಒಂದು ಕೊಲೆಯನ್ನು ಉಳಿದವರು ಕಂಡಂತೆ ದಾಖಲಿಸಲಾಗಿದೆ. ಪತ್ರಕರ್ತೆಯಾಗಿ ಕಾಣಿಸಿಕೊಂಡಿರುವ ಶೀತಲ್ ಶೆಟ್ಟಿ ಕೊಲೆಯನ್ನು ಬೇರೆ ಬೇರೆಯವರ ದೃಷ್ಟಿಯಿಂದ ದಾಖಲಿಸುತ್ತಾ ಹೋಗುತ್ತಾರೆ. ಹೀಗಾಗಿ ಇದೂ ಕೂಡ ಒಂದು ಕೊಲೆಯ ಸುತ್ತ ಗಿರಕಿಹೊಡೆಯುವ ಸಿನಿಮಾ. ಆದರೆ ಇಲ್ಲಿ ಒಂದಕ್ಕಿಂತ ಹೆಚ್ಚು ಕೊಲೆ ನಡೆದಿದೆ. ಇದರಿಂದಾಗಿ ಉಳಿದವರು ಯಾವ ಕೊಲೆಯನ್ನು ಕಂಡರು ಅನ್ನೋದು ಸ್ವಲ್ಪ ಗೊಂದಲ ಹುಟ್ಟಿಸುತ್ತೆ.

ಸಿನಿಮಾದ ಪ್ಲಸ್‌ ಪಾಯಿಂಟ್‌ ರಕ್ಷಿತ್ ಶೆಟ್ಟಿ. ರಕ್ಷಿತ್‌ ಶೆಟ್ಟಿ ಕಾಣಿಸಿಕೊಂಡಾಗೆಲ್ಲಾ ನಗು ತೇಲಾಡುತ್ತೆ. ರಿಚ್ಚಿಯಾಗಿ ತಿಕ್ಕಲು ತಿಕ್ಕಲಾಗಿ ಕಾಣಿಸಿಕೊಳ್ಳುವ ರಕ್ಷಿತ್‌ ಶೆಟ್ಟಿ ಚಂದಗೆ ಅಭಿನಯಿಸಿದ್ದಾರೆ. ಇನ್ನು ಕಿಶೋರ್‌ ಕೂಡ ಎಂದಿನಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಬರುವ ಪಾತ್ರಗಳೆಲ್ಲವೂ ಸಣ್ಣವೇ. ಆದರೆ ಪ್ರತಿಯೊದು ಪಾತ್ರಕ್ಕೂ ತನ್ನದೇ ಆಳ ಅಗಲವಿದೆ. ಅಂತದ್ದೇ ಒಂದು ಪಾತ್ರ ಪುಟಾಣಿ ಹುಡುಗ ಡೆಮಾಕ್ರಸಿಯದ್ದು.

ಚಿತ್ರದ ಸಂಭಾಷಣೆ ಬಗ್ಗೆ ಹೇಳಲೇಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರದಲ್ಲಿ ನಡೆಯುವ ಕತೆ. ಅದಕ್ಕೆ ತಕ್ಕಂತೆ ಇಲ್ಲಿ ಭಾಷೆ ಬಳಕೆಯಾಗಿದೆ. ತುಳು - ಕನ್ನಡ - ಕುಂದಗನ್ನಡ ಸಂಭಾಷಣೆ ಆ ಪರಿಸರವನ್ನು ಪ್ರತಿಬಿಂಬಿಸುತ್ತೆ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಭಾಗದ ಕನ್ನಡವನ್ನು ಕಾಶೀನಾಥ್ ಸಿನಿಮಾಗಳಲ್ಲಿ ನೋಡಿದ್ದೇವೆ. ತೀರಾ ನಾಟಕೀಯವಾಗಿ ಕಾಶಿನಾಥ್‌ ಸಿನಿಮಾಗಳಲ್ಲಿ ದಕ್ಷಿಣ ಕನ್ನಡದ ಕನ್ನಡ ಬಳಕೆಯಾಗಿದೆ. ಉಪೇಂದ್ರರ ಬುದ್ಧಿವಂತ ಸಿನಿಮಾದಲ್ಲೂ ಅಷ್ಟೇ. ಆದರೆ ನಿರ್ದೇಶಕರೂ ಆಗಿರುವ ರಕ್ಷಿತ್‌ ಶೆಟ್ಟಿ ಅಲ್ಲಿನ ಭಾಷೆಯನ್ನು ಯಥಾವತ್ತಾಗಿ ಸಿನಿಮಾದ ಸಂಭಾಷಣೆಯಲ್ಲಿ ಬಳಸಿದ್ದಾರೆ. ಇದರಲ್ಲಿ ಭಾಷೆ ನಾಟಕೀಯವಾಗಿ ಕೇಳಿಸುವುದಿಲ್ಲ. ಬದಲಿಗೆ ಅವಿಭಜಿತ ದಕ್ಷಿಣ ಕನ್ನಡದ ಮಾತಿನ ಶೈಲಿಯನ್ನು ಅದೇ ರೀತಿಯಾಗಿ ಹಿಡಿದಿಟ್ಟಿದ್ದಾರೆ.  ರಕ್ಷಿತ್‌ ಶೆಟ್ಟಿಯ ಸೂಕ್ಷ್ಮತೆ ಇದರಲ್ಲಿ ಗೆದ್ದಿದೆ.

ಸಿನಿಮಾದ ನಿಧಾನವಾಗಿ ಸಾಗುತ್ತೆ. ಅಲ್ಲೊಮ್ಮೆ ಇಲ್ಲೊಮ್ಮೆ ಕೆಲವೊಂದು ಸೀನ್‌ಗಳು ತೀರಾ ನಾಟಕೀಯ ಅನ್ನಿಸೋದೂ ಇದೆ. ನಿಧಾನ ಗತಿಯಲ್ಲಿ ಸಾಗುವುದರಿಂದ ಕೆಲವೊಮ್ಮೆ ಬೋರ್‌ ಹೊಡೆಸುತ್ತೆ. ಹಾಗಂತ ಸಿನಿಮಾದಲ್ಲಿ ಮನರಂಜನೆಗೆ - ನಗುವಿಗೆ ಕೊರತೆಯಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಇದೊಂದು ವಿಭಿನ್ನ ಪ್ರಯೋಗ. ಕನ್ನಡ ಸಿನಿಮಾದಲ್ಲಿ ಹೊಸ ಪ್ರಯೋಗ ಮಾಡುವ ನಿರ್ದೇಶಕನಿಗೆ ಗಟ್ಟಿ ಗುಂಡಿಗೆ ಬೇಕು. ಯಾಕಂದರೆ ಹೊಸ ಪ್ರಯೋಗಗಳನ್ನು ಜನ ಹೋಗಲಿ ಸಿನಿಮಾದ ಬಗ್ಗೆ ವಿಮರ್ಶೆ ಬರೆಯುವವರೇ ಮೆಚ್ಚಿಕೊಳ್ಳುವುದು ಕಷ್ಟ. ಈ ಸಿನಿಮಾದ ಬಗ್ಗೆ ಬರೆದ ವಿಮರ್ಶೆಗಳಲ್ಲಿ ಕೆಲವರು ಸಿನಿಮಾ ನೋಡೋದೇ ವ್ಯರ್ಥ ಅಂತೆಲ್ಲಾ ಬರೆದಿದ್ದಾರೆ. ಬರೆಯೋದು ಸುಲಭ. ಆದರೆ ಸಿನಿಮಾ ಮಾಡೋದು ಕಷ್ಟದ ಕೆಲಸ. ನೋಡೋದು ಬಿಡೋದು ಜನರಿಗೆ ಬಿಟ್ಟಿದ್ದು. ಸಿನಿಮಾದ ಇಡೀ ಕತೆಯನ್ನೇ ವಿಮರ್ಷೆಯಲ್ಲಿ ಬರೆದು ಕೊನೆಗೆ ತಮ್ಮದೊಂದು ತೀರ್ಮಾನ ಬರೆಯೋದು ಸುಲಭ. ಆದರೆ ವಿಮರ್ಷಕನ ಕೆಲಸ ಅದಲ್ಲ.