Friday, September 5, 2014

ತುರ್ತುಪರಿಸ್ಥಿತಿಯ ಕರಾಳ ನೆನಪು : ಪುತ್ರ ಶೋಕ

'ರಾಜನ್ ಮನೆಗೆ ಬಂದೇ ಬರುತ್ತಾನೆ ಎಂದು ದೃಢವಾಗಿ ನಂಬಿಕೊಂಡೆ. ರಾತ್ರಿ ವೇಳೆ ಮಗ ಹಸಿದು ಬಂದರೆ ಊಟವಿರಲಿ ಎಂದು ಪತ್ನಿಗೆ ತಿಳಿಸಿ ಊಟ ಇಟ್ಟುಕೊಂಡು ಕಾಯುತ್ತಿದ್ದೆ. ಹಸಿರಾದ ಚಿಗುರು ಬಾಳೆ ಎಲೆಯ ಮೇಲೆ ಅವನಿಗಾಗಿ ಹರಡಿದ ಹಬೆಯಾಡುತ್ತಿದ್ದ ಬಿಸಿಬಿಸಿ ಅನ್ನ ಆರಿ ತಣ್ಣಗಾಯಿತೆ ಹೊರತು ಮಗ ಮಾತ್ರ ಮನೆಗೆ ಬರಲಿಲ್ಲ. ಪ್ರತಿ ರಾತ್ರಿ ನಿದ್ದೆಗೆಟ್ಟು ಮಗನಿಗಾಗಿ ಬಾಗಿಲು ತೆರೆದು ಕಾಯುತ್ತಿದ್ದೆ. ಹೊರಗಡೆ ನಾಯಿಗಳು ಬೊಗಳುವ ಶಬ್ಧವಾದರೆ ಸಾಕು ಬಾಗಿಲ ಬಳಿ ಓಡೋಡಿ ಬರುತ್ತಿದ್ದೆ. ಎದೆಯೊಳಗೆ ಮಡುವುಗಟ್ಟಿದ ನೋವು ನಿಟ್ಟುಸಿರು ಇವುಗಳನ್ನು ತಾಳಲಾರದೆ ಒಮ್ಮೊಮ್ಮೆ "ಅಯ್ಯೋ ಮಗನೆ" ಎನ್ನುತ್ತಾ ಒಳಗೊಳಗೆ ಚೀರಿಡುತ್ತಾ ಗೋಳಿಡುತ್ತಿದ್ದೆ. ನಾನು ಮಗನ ಅಗಲಿಕೆಯ ಸಂಕಟವನ್ನು ತಾಳಲಾರದೆ ಗಟ್ಟಿಯಾಗಿ ಮನೆಯೊಳಗೆ ಅಳುವಂತಿರಲಿಲ್ಲ. ಏಕೆಂದರೆ ಮಗನ ಬಂಧನ ಸುದ್ದಿಯನ್ನಾಗಲಿ ಅಥವಾ ನಾಪತ್ತೆಯಾದ ಸಂಗತಿಯನ್ನಾಗಲಿ ಮನೆಯಲ್ಲಿ ಮಡದಿ ಮತ್ತು ಮಕ್ಕಳಿಗೆ ತಿಳಿಸಿರಲಿಲ್ಲ. ಒಡಲೊಳಗೆ ಬಾಯಿ ತೆರೆದಿದ್ದ ಅಗ್ನಿ ಪರ್ವತವನ್ನು ಹೊತ್ತುಕೊಂಡು ಹೊರಗಡೆ ತಣ್ಣನೆಯ ಹಿಮಪರ್ವತದಂತೆ ಮುಖ ಹೊತ್ತುಕೊಂಡು ಬದುಕುವ ಸ್ಥಿತಿ ನನ್ನದಾಗಿತ್ತು. '

ಪೊ.ಈಚಾರ ವಾರಿಯರ್‌ ಅವರ ಈ ಮಾತುಗಳನ್ನು ಓದುತ್ತಾ ಹೋದರೆ ಮಗನನ್ನು ಕಳಕೊಂಡು, ಮಗನಿಗಾಗಿ ಹುಡುಕುತ್ತಾ, ಮನೆಯವರಿಗೂ ತಿಳಿಸಲಾಗದೆ ತೊಳಲಾಡುತ್ತಾ ಸಾಗಿದ್ದ ಅವರ ಪರಿಸ್ಥಿತಿ ಎಂತಹ ಕಲ್ಲು ಹೃದಯವನ್ನೂ ಕರಗಿಸಬಹುದು. ಆದರೆ ಅಂದು ಪ್ರೊ.ಈಚಾರ ವಾರಿಯರ್ ಅನುಭವಿಸಿದ್ದ ನೋವು, ಅವರದ್ದೇ ಮುಂದೆ ಹಲವು ವರ್ಷಗಳ ಹಿಂದೆ ಕತ್ತಲ ರಾತ್ರಿಯಲ್ಲಿ ಪ್ರಾಣಭಿಕ್ಷೆಯನ್ನು ಬೇಡಿ ನಿಂತಿದ್ದ, ಮುಂದೆ ಕೇರಳದ ಮುಖ್ಯಮಂತ್ರಿಯಾದ ಅಚ್ಯುತ ಮೆನನ್‌ ಅವರಿಗೆ ಗೊತ್ತಾಗಲೇ ಇಲ್ಲ. ಕಮ್ಯುನಿಸ್ಟ್‌ ಸಿದ್ಧಾಂತದ ಪ್ರತಿಪಾದಕರಾಗಿ, ಕಟ್ಟಾ ಕಮ್ಯುನಿಸ್ಟ್‌ ಆಗಿ ಬೆಳೆದು, ಜನರ ಮಧ್ಯದಲ್ಲೇ ಇದ್ದ ಅಚ್ಯುತ ಮೆನನ್‌ ತಲೆಗೂ ಅಧಿಕಾರದ ಅಮಲು ಅಡರಿತ್ತು. ಹೀಗಾಗಿ ತಮ್ಮ ಮಗನನ್ನು ಹುಡುಕುತ್ತಾ ಹೋದ ಪ್ರೊ.ವಾರಿಯರ್‌ ಗೆ ಅಚ್ಯುತ ಮೆನನ್‌ರಿಂದ ಯಾವುದೇ ಸಹಕಾರ ಸಿಗಲಿಲ್ಲ. ಅಂದಹಾಗೆ ಇದೆಲ್ಲಾ ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲಿ ಕಳೆದು ಹೋದ ತನ್ನ ಮಗನನ್ನು ಹುಡುಕುತ್ತಾ ಹೋದ ಓರ್ವ ಹಿಂದಿ ಪ್ರೊಫೆಸರ್ ಅನುಭವಿಸಿದ ನೈಜ ಘಟನೆಗಳು.

ಡಾ.ಜಗದೀಶ್ ಕೊಪ್ಪ ಕನ್ನಡದ ಓದುಗರಿಗೆ ಬೇರೆ ಬೇರೆ ಭಾಷೆಗಳ ಅಮೂಲ್ಯ ಕೃತಿಗಳನ್ನು ಅನುವಾದಿಸಿ ಕೊಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ' ಮರುಭೂಮಿಯ ಹೂ' ಪುಸ್ತಕದ ಮೂಲಕ ವಾಸಿರ್‌ಳ ಬದುಕನ್ನು ಕನ್ನಡಕ್ಕೆ ತಂದಿದ್ದರು. ಹೆಸರಾಂತ ಮಾಡೆಲ್, ಜಗದ್ವಿಖ್ಯಾತಿ ಪಡೆದ ರೂಪದರ್ಶಿ ವಾಸಿರ್‌ಳನ್ನು ಕನ್ನಡಕ್ಕೆ ಪರಿಚಯಿಸಿದ್ದರು. ಅದೇ ರೀತಿಯ ಇನ್ನೊಂದು ಅದ್ಭುತ ಪುಸ್ತಕ ' ಪುತ್ರ ಶೋಕ'. ಇದು ಕೇರಳದ ಪ್ರೊ. ಈಚರ ವಾರಿಯರ್ ಅವರ ಬದುಕಿನ ಕಥೆ. ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲಿ ಕಳೆದು ಹೋದ ಮಗನನ್ನು ಹುಡುಕುತ್ತಾ ಸಾಗಿದ ಆ ಅಪ್ಪನ ತೊಳಲಾಟದ ಕಥೆ. ಹೋರಾಟದ ಕಥೆ. ಮುಖ್ಯಮಂತ್ರಿಯನ್ನು ರಾಜೀನಾಮೆ ಕೊಡಿಸಿದ ಕಥೆ. ಅಧಿಕಾರದಲ್ಲಿದ್ದವರ ಮದದ ಕಥೆ. ಸಾಮಾನ್ಯ ವ್ಯಕ್ತಿ ಇಡೀ ವ್ಯವಸ್ಥೆಗೆ ಬುದ್ಧಿ ಕಲಿಸಿದ ನೈಜ ಕಥೆ.

ತುರ್ತುಪರಿಸ್ಥಿತಿ. ಸ್ವತಂತ್ರ ಭಾರತದ ಒಂದು ಕರಾಳ ಅಧ್ಯಾಯ. ಬ್ರಿಟಿಷರ ವಿರುದ್ಧ ಹೋರಾಡಿ ಪಡೆದ ಸ್ವಾತಂತ್ರ್ಯವನ್ನು ತನ್ನ ಸರ್ವಾಧಿಕಾರಕ್ಕಾಗಿ ಪ್ರಧಾನಿ ಇಂದಿರಾಗಾಂಧಿ ಕಟ್ಟಿಹಾಕಿದ್ದರು. ಜನರ ಹಕ್ಕುಗಳನ್ನು ಕಿತ್ತುಕೊಂಡು ಸರ್ವಾಧಿಕಾರಿಯಾಗಿ ಮೆರೆದಿದ್ದರು. ಸುಪ್ರಿಂ ಕೋರ್ಟ್‌ನ ತೀರ್ಪು ತನ್ನ ವಿರುದ್ಧವಾಗುತ್ತಿದ್ದಂತೆ ಜನರ ಮೇಲೆ ತುರ್ತುಪರಿಸ್ಥಿತಿ ಹೇರಿದ್ದರು. ಭಾರತವನ್ನು ತನ್ನ ಬಿಗಿಮುಷ್ಟಿಯಲ್ಲಿಟ್ಟುಕೊಂಡಿದ್ದರು. ಆದರೆ ಒಬ್ಬ ಪ್ರಧಾನಿ ತನ್ನ ಅಧಿಕಾರಕ್ಕಾಗಿ ಮಾಡಿದ ತೀರ್ಮಾನ ಒಬ್ಬ ಅಪ್ಪ ತನ್ನ ಮಗನನ್ನು ಕಳೆದುಕೊಳ್ಳುವಂತೆ ಮಾಡಿತ್ತು. ಆ ಅಪ್ಪನಂತೆ ಅದೆಷ್ಟು ಅಪ್ಪಂದಿರು ಮಕ್ಕಳನ್ನು ಕಳೆದುಕೊಂಡಿದ್ದರೋ !

ತುರ್ತುಪರಿಸ್ಥಿತಿಯ ದಿನಗಳ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಆಗ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿತ್ತು. ಪ್ರತಿಪಕ್ಷಗಳ ನಾಯಕರನ್ನು ಬಂಧನದಲ್ಲಿಡಲಾಗಿತ್ತು. ಕಾಂಗ್ರೆಸ್‌ ವಿರುದ್ಧ ಮಾತಾಡಿದವರನ್ನು ಜೈಲಿಗಟ್ಟಲಾಗಿತ್ತು. ಅದರ ವಿರುದ್ಧ ಲೋಕನಾಯಕ ಜಯಪ್ರಕಾಶ್ ನಾರಾಯಣ್‌ ನೇತೃತ್ವದಲ್ಲಿ ಹೋರಾಟ ರೂಪಿಸಲಾಗಿತ್ತು. ಇದೆಲ್ಲ ನಿಜ. ಆದರೆ ಆಗಿನ ದಿನಗಳ ಕರಾಳತೆ ಜನಜೀವನದ ಮೇಲೆ ಎಂತಹ ಪರಿಣಾಮ ಬೀರಿತ್ತು ಅನ್ನೋದು ಅಷ್ಟೊಂದು ಸ್ಪಷ್ಟವಾಗಿ ಗೋಚರವಾಗಲ್ಲ. ಆದರೆ ಪ್ರೊ. ಈಚಾರ ವಾರಿಯರ್‌ ಅವರ ಬದುಕಿನ ಘಟನೆಗಳಿವೆಯಲ್ಲಾ. ತುರ್ತುಪರಿಸ್ಥಿತಿಯ ಬಗ್ಗೆ ಅರ್ಥಮಾಡಿಕೊಳ್ಳಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.

ಒನ್ಸ್‌ ಅಗೈನ್ ಅದ್ಭುತ ಪುಸ್ತಕವೊಂದನ್ನು ಕನ್ನಡದ ಓದುಗರ ಕೈಗಿತ್ತಿದ್ದಾರೆ ಡಾ.ಜಗದೀಶ್ ಕೊಪ್ಪ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದಾದ ಪುಸ್ತಕವಿದು. ಮರೀಬೇಡಿ. ಕೊಂಡು ಓದಿ.