Wednesday, November 19, 2014

ಅಭಿಮನ್ಯು ಸಿನಿಮಾ ನೋಡುತ್ತಾ...

ಶಿಕ್ಷಣ ರಾಷ್ಟ್ರೀಕರಣಗೊಳ್ಳಬೇಕು. ಅಭಿಮನ್ಯು ಸಿನಿಮಾದಲ್ಲಿ ಅರ್ಜುನ್ ಸರ್ಜಾ ಈ ಡೈಲಾಗ್‌ ಹೇಳುತ್ತಿದ್ದಂತೆ ನನ್ನ ನೆನಪು ಚಿತ್ರದುರ್ಗದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಡೆಗೆ ಹೋಗಿತ್ತು. ಕಂಚಿನ ಕಂಠದ ಮಾತುಗಾರ ಪ್ರೊ.ಎಲ್‌.ಬಸವರಾಜು ಅವರು ಆಡಿದ್ದ ಮಾತುಗಳು ಮತ್ತೆ ಮತ್ತೆ ಕಿವಿಯಲ್ಲಿ ಗುಂಯ್‌ಗುಟ್ಟಿದಂತಾಯ್ತು.

ಅವತ್ತು ಸಮ್ಮೇಳಾನಾಧ್ಯಕ್ಷರಾಗಿದ್ದ ಪ್ರೊ.ಎಲ್‌.ಬಸವರಾಜು ಆಡಿದ್ದ ಮಾತುಗಳಿವು. ಶಿಕ್ಷಣ ರಾಷ್ಟ್ರೀಕರಣಗೊಳ್ಳಬೇಕು. ಶಿಕ್ಷಣದಲ್ಲಿ ಖಾಸಗೀಕರಣಬೇಡ. ಶಿಕ್ಷಣ ರಾಷ್ಟ್ರೀಕರಣಗೊಂಡರೆ ದೇಶದಲ್ಲಿ ಶೈಕ್ಷಣಿಕ ವ್ಯವಸ್ಥೆ ಬದಲಾಗುತ್ತೆ ಅನ್ನೋ ಆಶಯವನ್ನು ಸಮ್ಮೇಳನಾಧ್ಯಕ್ಷರು ಅವತ್ತು ವ್ಯಕ್ತಪಡಿಸಿದ್ದರು. ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರು ಮುದ್ರಿತ ಭಾಷಣವನ್ನು ಓದುತ್ತಾರೆ. ಆದರೆ ಪ್ರೊ. ಎಲ್‌.ಬಸವರಾಜು ತಮ್ಮ ಸಿದ್ಧ ಭಾಷಣವನ್ನು ಓದಲಿಲ್ಲ. ನನ್ನ ಭಾಷಣವನ್ನು ಮಂಡಿಸಿದ್ದೇನೆ. ಇದನ್ನು ಹೇಗಿದ್ರೂ ಮಾಧ್ಯಮದವರು ಪ್ರಕಟಿಸುತ್ತಾರೆ. ಆದರೆ ಇದರಲ್ಲಿನ ಕೆಲ ಮುಖ್ಯ ವಿಚಾರಗಳನ್ನಷ್ಟೇ ನಾನು ಈಗ ಹೇಳುತ್ತೇನೆ ಅಂತ ನೇರವಾಗಿ ಮಾತಿಗಳಿದಿದ್ದರು. ಅವರು ಪ್ರಮುಖವಾಗಿ ಹೇಳಿದ್ದು ಶಿಕ್ಷಣದ ರಾಷ್ಟ್ರೀಕರಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಒಂದು ತಲೆಮಾರಿನ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣ ಕೊಡಬೇಕು ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ತು ಮತ್ತು ಧಾರವಾಡದ ಕರ್ನಾಟಕ ವಿದ್ಯಾವರ್ದಕ ಸಂಘವನ್ನು ಸ್ವಾಯತ್ತ ಸಂಸ್ಥೆಗಳಾಗಿ ರೂಪಿಸಬೇಕು ಎಂದು ಹೇಳಿದ್ದರು.

ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನದಲ್ಲಿ ಆಂಗ್ಲಭಾಷೆಯಿಂದಾಗಿ ಕನ್ನಡಕ್ಕೆ ಆಪತ್ತು ಬಂದಿದೆ. ಹೀಗಾಗಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆ ಕನ್ನಡದಲ್ಲೇ ಕೊಡಬೇಕು ಅನ್ನೋ ಸಿದ್ಧ ಆದರೆ ವೈಯಕ್ತಿಕವಾಗಿ ಬಹುತೇಕರು ಜಾರಿಗೊಳಿಸದ ವಿಚಾರವನ್ನು ಪ್ರೊ.ಎಲ್‌.ಬಸವರಾಜು ಪ್ರಸ್ತಾಪಿಸಿರಲಿಲ್ಲ. ಅವತ್ತು ವೇದಿಕೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇದ್ದರು ಅಂತ ನೆನಪು. ಆದರೆ ಅಂದು ಮುಖ್ಯಮಂತ್ರಿಗಳಿಂದಾಗಲಿ ಅಥವಾ ಸರ್ಕಾರದಿಂದಾಗಲೀ ಸಮ್ಮೇಳನಾಧ್ಯಕ್ಷರ ಮಾತುಗಳಿಗೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಸಿಗಲಿಲ್ಲ. ಅದು ಮುಂದೆಯೂ ಜಾರಿಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ವಿಪರ್ಯಾಸವೆಂದರೆ ಅಂದು ಸಮ್ಮೇಳನದ ಸಂದರ್ಭದಲ್ಲಿ ಪ್ರೊ.ಎಲ್‌.ಬಸವರಾಜು ಹೇಳಿದ್ದ ಇಂತಹ ಗಂಭೀರ ವಿಚಾರದ ಬದಲು ಒಂದು ಜಾತಿಯವರು ಅವರು ಆದಿಕವಿ ಪಂಪನ ಬಗ್ಗೆ ತಮ್ಮ ವ್ಯಾಪಕ ಅಧ್ಯಯನದ ಆಧಾರದಲ್ಲಿ ಲಘು ಹಾಸ್ಯದ ಮೂಲಕ ಹೇಳಿದ್ದ ಮಾತುಗಳನ್ನೇ ಇಟ್ಟುಕೊಂಡು ಮಾರನೇ ದಿನ ಗಲಾಟೆ ಎಬ್ಬಿಸಿದ್ದರು. ಪ್ರತಿಭಟನೆ ನಡೆಸಿ ಪ್ರೊ.ಎಲ್.ಬಸವರಾಜು ಕ್ಷಮೆಯಾಚಿಸಬೇಕು ಅಂತೆಲ್ಲಾ ಬೊಬ್ಬೆ ಹೊಡೆದಿದ್ದರು. ಆದರೆ ಅವರು ಪ್ರಸ್ತಾಪಿಸಿದ್ದ ಗಂಭೀರ ವಿಚಾರಗಳಿಗೆ ಸಾರಸ್ವತ ಲೋಕದ ದಿಗ್ಗಜರಿಂದಲೇ ಒಕ್ಕೊರಲಿನ ದನಿ ಮೂಡಿ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯಲಿಲ್ಲ. ವಿಶೇಷ ಅಂದ್ರೆ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲೂ ಪ್ರೊ.ಎಲ್‌.ಬಸವರಾಜು ಇದೇ ಒತ್ತಾಯವನ್ನು ಮಾಡಿದ್ದರು. ಒಂದರ್ಥದಲ್ಲಿ ಅದು ಸಮ್ಮೇಳನದಲ್ಲಿ ಒಂಟಿ ಧ್ವನಿಯಾಗಿತ್ತು.

ಶಿಕ್ಷಣದ ರಾಷ್ಟ್ರೀಕರಣ ಅಷ್ಟು ಸುಲಭವಾಗಿ ಜಾರಿಗೊಳ್ಳುವ ವಿಚಾರವಲ್ಲ. ಅದರಲ್ಲೂ 1991ರ ನಂತರ ದೇಶದಲ್ಲಿ ಬದಲಾಗಿರುವ ಆರ್ಥಿಕ ನೀತಿಯ ಸಂದರ್ಭದಲ್ಲಿ ಇದು ಮತ್ತಷ್ಟು ಕಷ್ಟ ಸಾಧ್ಯ. ಇವತ್ತು ಟಾಯ್ಲೆಟ್‌ ನಿರ್ಮಾಣಕ್ಕೂ ಪಿಪಿಪಿ ಮಾಡೆಲ್‌ ಯೋಚಿಸುವ ಸರ್ಕಾರಗಳು ಶಾಲೆಗಳನ್ನು ರಾಷ್ಟ್ರೀಕರಣಗೊಳಿಸಿ ಆ ಭಾರವನ್ನು ಮೈಮೇಲೆ ಹಾಕಿಕೊಳ್ಳುತ್ತವೆಯೇ? ವಾಸ್ತವದ ನೆಲೆಗಟ್ಟಿನಲ್ಲಿ ಹೇಳೋದಿದ್ದರೆ ಇದು ಸಾಧ್ಯವಿಲ್ಲದ ಮಾತು. ಇಂದು ಶಿಕ್ಷಣ ಲಾಭಿಯಾಗಿ ಪರಿವರ್ತನೆಗೊಂಡು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೇ ದೇಶದ ಬಹುತೇಕ ರಾಜ್ಯಗಳಲ್ಲಿ ರಾಜಕೀಯವಾಗಿ ಬಲಾಢ್ಯರಾಗಿದ್ದಾರೆ. ಹೀಗಾಗಿ ಶಿಕ್ಷಣದ ರಾಷ್ಟ್ರೀಕರಣ ಸುಲಭ ಸಾಧ್ಯವಲ್ಲ
 
ಅದಿರಲಿ. ಈಗ ಮತ್ತೆ ಅಭಿಮನ್ಯು ಸಿನಿಮಾ ವಿಚಾರಕ್ಕೆ ಬರುತ್ತೇನೆ. ಸಿನಿಮಾದಲ್ಲಿ ಸಹಜವಾಗಿ ಹೀರೋ ಹೇಳುವ ಮಾತು ಹೊಸ ಐಡಿಯಾವಾಗಿ ಕಾಣಿಸಿಕೊಳ್ಳುತ್ತದೆ. ಇದೊಂದು ಹೊಸ ಕಾನ್ಸೆಪ್ಟ್‌ ಅನ್ನೋದು ಸಿನಿಮಾದ ಒಕ್ಕಣೆ. ಇದೆಲ್ಲಾ ಸಹಜ ಬಿಡಿ. ಆದರೆ ಈ ಕಾನ್ಸೆಪ್ಟ್‌ ಹೇಳುವ ಭರದಲ್ಲಿ ಅದಕ್ಕೆ ವ್ಯಕ್ತವಾಗುವ ವಿರೋಧದ ಬಗ್ಗೆಯೇ ಸಿನಿಮಾ ಬಹುಪಾಲು ಓಡುತ್ತೆ. ವಿಷಯವನ್ನು ಸರಳವಾಗಿ ಹೇಳುತ್ತಾ ಹೋಗುವಲ್ಲಿ ಅರ್ಜುನ್‌ ಸರ್ಜಾ ಸ್ಪಲ್ಪ ಎಡವಿದ್ದಾರೆ. ಸಿನಿಮಾಗೆ ಕಮರ್ಷಿಯಲ್‌ ಟಚ್‌ ನೀಡುವ ಭರದಲ್ಲಿ ಮೂಲ ಎಳೆಯಾಗಿ ಹರಿಯಬೇಕಿದ್ದ ಶಿಕ್ಷಣ ರಾಷ್ಟ್ರೀಕರಣ ಮರೆತುಬಿಟ್ಟಿದ್ದಾರೆ. ಕಮರ್ಷಿಯಲ್‌ ಅಂಶ ಹೆಚ್ಚು ರಾರಾಜಿಸುತ್ತಾ ಹೋಗುತ್ತೆ. ಹೀಗಾಗಿ ಸಿನಿಮಾ ಹೆಚ್ಚು ಕಾಡೋದಿಲ್ಲ. ವಿಷಯ ಗಂಭೀರವಾಗಿದ್ದು ಅದನ್ನು ಕಮರ್ಷಿಯಲ್‌ ಆಗಿಯೂ ಕೊಡಬೇಕು ಅನ್ನೋ ಆಯ್ಕೆಯಲ್ಲಿ ಕಮರ್ಷಿಯಲ್‌ ಮಾತ್ರ ಉಳಿದು ರವಾನೆಯಾಗಬೇಕಿದ್ದ ಸಂದೇಶ ಅರ್ಧದಲ್ಲೇ ಉಳಿದು ಬಿಟ್ಟಿದೆ.

ಹಾಗಿದ್ರೂ ಕನ್ನಡದಲ್ಲಿ ಒಂದು ಒಳ್ಳೆಯ ಸಿನಿಮಾ ಕೊಡಲು ಅರ್ಜುನ್‌ ಸರ್ಜಾ ಮಾಡಿರುವ ಪ್ರಯತ್ನಕ್ಕೆ ಮೆಚ್ಚಲೇಬೇಕು.