Monday, September 26, 2011

ಕಂಬಾರ, ಕನ್ನಡ ಮತ್ತು ಸರ್ಕಾರ

ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ನಾವೆಲ್ಲಾ ಸಂಭ್ರಮಿಸಿದ್ದೂ ಆಗಿದೆ. ಡಾ.ಚಂದ್ರಶೇಖರ ಕಂಬಾರರು ಕನ್ನಡ ತಾಯಿಯ ಮುಕುಟಕ್ಕೆ ಎಂಟನೇ ಜ್ಞಾನಪೀಠದ ಗರಿಯನ್ನು ತೊಡಿಸಿದಾಗ ಕನ್ನಡಿಗರೆಲ್ಲಾ ಒಕ್ಕೊರಲಿನಿಂದ ಖುಷಿ ಪಡೋದು ಸಹಜ. ಸಾರಸ್ವತ ಲೋಕದ ಅಲ್ಲೊಂದು - ಇಲ್ಲೊಂದು ಭಿನ್ನ ಧ್ವನಿಯ ಸಾಮಾನ್ಯ ಜನರ ಸಂತಸಕ್ಕೆ ಯಾವುದೇ ತಡೆ ಆಗಿಲ್ಲ.

ಜ್ಞಾನಪೀಠ ಬರೋದ್ರ ಜೊತೆಗೆ ಅದ್ರ ವಿಜೇತರ ಮಾತುಗಳಿಗೆ ಹೆಚ್ಚಿನ ತೂಕ ಬರುತ್ತೆ. ಹೀಗಾಗಿ ಚಂದ್ರಶೇಖರ ಕಂಬಾರರು ಸದ್ಯ ಹೇಳುತ್ತಿರುವ ಕೆಲ ವಿಚಾರಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ. ಅದ್ರಲ್ಲೂ ನನ್ನಂತ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛಂದವಾಗಿ ಕಲಿತು ಬೆಂಗಳೂರಿನಂತಹ ಮಹಾನಗರಗಳನ್ನು ನೋಡುತ್ತಿರುವವರಿಗೆ ಕಂಬಾರರ ಮಾತು ಹೆಚ್ಚು ಆಪ್ತವಾಗುವುದು ಸಹಜ. ಆದರೂ ಈ ಆಪ್ತತೆಯನ್ನು ಹೊರಗಿಟ್ಟು ನೋಡಿದ್ರೂ ಕಂಬಾರರ ಮಾತಿನಲ್ಲಿ ಹೆಚ್ಚಿನ ಅರ್ಥವನ್ನು ಹುಡುಕಿಕೊಳ್ಳಬಹುದು. ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದಾಗ ಮೊದಲಿಗೆ ಹೋಗಿ ನಮ್ಮ ಚಾನೆಲ್ ಗೆ ಅವ್ರನ್ನು ಮಾತನಾಡಿಸುವ ಸುಯೋಗ ನನಗೆ ಸಿಕ್ಕಿತ್ತು. ಸಣ್ಣದೊಂದು ಚಿಟ್ ಚ್ಯಾಟ್ ಮಾಡಿದಾಗ ಕಂಬಾರರು ತಮ್ಮ ಮೃದು ಧ್ವನಿಯಲ್ಲೇ ಗಹನವಾದ ವಿಚಾರ ಹೇಳಿದ್ದರು. ಅದೇ ಎಲ್ ಕೆ ಜಿಯಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣವನ್ನು ರಾಜ್ಯ ಸರ್ಕಾರವೇ ಕಡ್ಡಾಯವಾಗಿ ಕೊಡಬೇಕು ಎಂದು ಅವತ್ತು ಕಂಬಾರರು ಹೇಳಿದ್ದರು. ಇದೇನು ಅವ್ರು ಮೊದಲ ಬಾರಿಗೆ ಹೇಳುತ್ತಿರುವ ವಿಚಾರವಲ್ಲ. ಆದ್ರೆ ಜ್ಞಾನಪೀಠ ಪ್ರಶಸ್ತಿ ಬಂದ್ಮೇಲೆ ಅವ್ರು ಹೇಳ್ತಿರೋದ್ರಿಂದ ಇದಕ್ಕೆ ಹೆಚ್ಚಿನ ತೂಕ ಬಂದಿದೆ.

ಕಂಬಾರರ ಹೇಳಿಕೆಗೆ ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿದೆ ಎಂಬ ಭರವಸೆಯನ್ನೂ ನೀಡಿದ್ದಾರೆ. ಜೊತೆಗೆ ಕಾಗೇರಿಯವ್ರು ಮಾತೃಭಾಷೆಯ ಬೋಧನೆ ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದ್ದಾರೆ. ಇಷ್ಟಾದ್ರೂ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿ ಎಲ್ ಕೆಜಿಯಿಂದ ಹತ್ತನೇ ತರಗತಿವರೆಗೆ ಸರ್ಕಾರವೇ ಶಿಕ್ಷಣ ಕೊಡುತ್ತೆ ಅನ್ನೋದನ್ನು ಈಗಲೂ ನಂಬಲು ಅಸಾಧ್ಯ. ಈಗಿರುವ ವ್ಯವಸ್ಥೆಯಲ್ಲಿ ಅದು ಜಾರಿಗೆ ಬರೋದು ಕನಸಿನ ಮಾತು.

ಜುಲೈ ತಿಂಗಳ ಫ್ರಂಟ್ ಲೈನ್ ಪತ್ರಿಕೆಯಲ್ಲಿ ಒಂದು ಕವರ್ ಸ್ಟೋರಿ ಬಂದಿತ್ತು.' A long way to go' ಎಂಬ ಶೀರ್ಷಿಕೆಯಡಿ ಬಂದಿರುವ ಸಂಚಿಕೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಣದ ಒಳಹೊರಗನ್ನು ವಿಶ್ಲೇಷಿಸಲಾಗಿದೆ. ಅದರ ಅಗ್ರ ಲೇಖನದಲ್ಲಿ " ತಮಿಳುನಾಡಿನ ಈರೋಡ್ ಜಿಲ್ಲಾಧಿಕಾರಿ ಡಾ. ಆರ್.ಆನಂದಕುಮಾರ್ ಮತ್ತವರ ಪತ್ನಿ ಡಾ.ಎಂ.ಶ್ರೀವಿದ್ಯಾ ಜಿಲ್ಲಾಧಿಕಾರಿ ಕಚೇರಿಯ ಸಮೀಪದ ಕುಮಲನಕುಟ್ಟಿಯಲ್ಲಿರುವ ತಮಿಳು ಮಾಧ್ಯಮದ ಸರ್ಕಾರಿ ಶಾಲೆಗೆ ಹೋಗಿ ಇತರೆ ಮಕ್ಕಳ ಪಾಲಕರ ಜೊತೆಗೆ ಕ್ಯೂನಲ್ಲಿ ನಿಂತು ತಮ್ಮ ಮಗಳು ಗೋಪಿಕಾಳನ್ನು ಶಾಲೆಗೆ ಅಡ್ಮಿಷನ್ ಮಾಡಿಸಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ರಾಣಿ ಅವ್ರಿಗೆ, ನಮ್ಮ ಮಗಳು ಕೂಡ ಶಾಲೆಯಲ್ಲಿ ಕೊಡುವ ಮಧ್ಯಾಹ್ನದ ಬಿಸಿಯೂಟವನ್ನೇ ಊಟ ಮಾಡ್ತಾಳೆ. ಮನೆಯಿಂದ ಊಟ ತರೋದಿಲ್ಲ ಎಂದಿದ್ದಾರೆ." ಎಂಬ ವಿಚಾರವಿದೆ.

ಆದ್ರೆ ನಮ್ಮ ರಾಜ್ಯದ ಸ್ಥಿತಿಯನ್ನು ಕಲ್ಪಿಸಿಕೊಳ್ಳೋಣ. ಸರ್ಕಾರದ ಅಂಕಿಅಂಶಗಳನ್ನು ನೋಡಿದ್ರೆ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಕೊಡುವ ಒಟ್ಟು ಶಾಲೆಗಳಲ್ಲಿ ಶೇ.75ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ಅಂದಾಜು ಶೇ. 70ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲೇ ಓದುತ್ತಿದ್ದಾರೆ. ಆದ್ರೆ ಇನ್ನುಳಿದ ಶೇ. 30ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಮತ್ತು ಕೇಂದ್ರೀಯ ಪಠ್ಯಕ್ರಮಗಳಲ್ಲಿ ವ್ಯಾಸಾಂಗ ಮಾಡ್ತಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದರೂ ಮಾತೃಭಾಷಾ ಶಿಕ್ಷಣಕ್ಕಾಗಿ ಹೋರಾಡುವ ಸ್ಥಿತಿ ಎದುರಾಗಿದೆ. ಇದಕ್ಕೆ ಮುಖ್ಯಕಾರಣ ಬೆಂಗಳೂರಿನಂತಹ ಮಹಾನಗರಗಳಿಂದ ಹಿಡಿದು ಇತರೆ ನಗರಗಳ ನಂತ್ರ ಈಗ ಗ್ರಾಮಾಂತರ ಪ್ರದೇಶಗಳಲ್ಲೂ ಇತ್ತೀಚೆಗೆ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲೂ ಮಕ್ಕಳು ಇಂಗ್ಲಿಷ್ ಪಠ್ಯಕ್ರಮದಲ್ಲಿ ಓದಿದ್ರೆ ಮಾತ್ರ ಬುದ್ಧಿವಂತರಾಗ್ತಾರೆ ಎಂಬ ಭ್ರಮೆ ಶುರುವಾಗಿದೆ.

ಈರೋಡ್ ನ ಜಿಲ್ಲಾಧಿಕಾರಿಯಂತೆ ನಮ್ಮ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವ್ರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸಿದ್ದಾರೆ. ಅವ್ರು ಸಚಿವರಾಗೋದಿಕ್ಕೂ ಮೊದಲೇ ಅವ್ರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದರು. ಸಚಿವರಾದ್ಮೇಲು ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸೋದ್ರ ಮೂಲಕ ಸಚಿವರು ಮಾದರಿಯಾಗಿರುವುದು ನಿಜ. ಆದ್ರೆ ಕೇವಲ ಕಾಗೇರಿ ಒಬ್ರಿಂದ ಅಥವಾ ಈರೋಡ್ ನ ಜಿಲ್ಲಾಧಿಕಾರಿಯಿಂದ ಮಾತ್ರ ಮಾತೃಭಾಷಾ ಮಾಧ್ಯಮದ ಶಿಕ್ಷಣಕ್ಕೆ ಉತ್ತೇಜನ ಸಿಕ್ಕರೆ ಸಾಕಾಗೋದಿಲ್ಲ.
ಈಗಿರುವ ಶಿಕ್ಷಣದ ವ್ಯವಸ್ಥೆಯಲ್ಲೇ ನಮ್ಮ ಮುಖ್ಯಮಂತ್ರಿಯಿಂದ ಹಿಡಿದು ಸಚಿವರು, ಶಾಸಕರು ಸೇರಿದಂತೆ ಎಲ್ಲ ಸ್ಥರಗಳ ಜನಪ್ರತಿನಿಧಿಗಳ ಕುಟುಂಬ ವರ್ಗಗಳವರ ಮಕ್ಕಳು- ಮೊಮ್ಮಕ್ಕಳನ್ನು, ಸರ್ಕಾರದ ಉನ್ನತ ಅಧಿಕಾರಿಗಳ ಮಕ್ಕಳು - ಮೊಮ್ಮಕ್ಕಳನ್ನು, ಎಲ್ಲ ಸ್ಥರಗಳ ಅಧಿಕಾರಿಗಳ ಮಕ್ಕಳು - ಮೊಮ್ಮಕ್ಕಳನ್ನು, ಅಧ್ಯಾಪಕ ವೃಂದದವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ವ್ಯವಸ್ಥೆ ನಮ್ಮಲ್ಲಿ ಬರೋದಿಕ್ಕೆ ಸಾಧ್ಯವೇ ? ಹಾಗೆ ಒಂದು ವೇಳೆ ಇವ್ರೆಲ್ಲಾ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದ್ದೇ ಹೌದೌದ್ರೆ ಸರ್ಕಾರಿ ಶಾಲೆಗಳ ವ್ಯವಸ್ಥೆ ತನ್ನಿಂದ ತಾನೇ ಬದಲಾಗುತ್ತದೆ. ಖಾಲಿಯಾಗಿರುವ ಶಿಕ್ಷಕರ ಹುದ್ದೆ, ಮಕ್ಕಳಿಗೆ ಪೂರೈಕೆಯಾಗಬೇಕಾದ ಪಠ್ಯಪುಸ್ತಕ, ಸಮವಸ್ತ್ರ, ಇಂಗ್ಲಿಷ್ ಸೇರಿದಂತೆ ಪ್ರತಿಯೊಂದು ಸಬ್ಜೆಕ್ಟ್ ಪಾಠ ಮಾಡುವ ನುರಿತ ಶಿಕ್ಷಕರು, ಪಾಠ ಮಾಡಲು ಮೈಗಳ್ಳತನ ಪ್ರದರ್ಶಿಸುವ ಶಿಕ್ಷಕರು, ಪದೇ ಪದೇ ಶಿಕ್ಷಣ ಪದ್ಧತಿಯಲ್ಲಿ ಆಗುವ ಅವೈಜ್ಞಾನಿಕ ಬದಲಾವಣೆಗಳು ಹೀಗೆ ಪ್ರತಿಯೊಂದು ಸಮಸ್ಯೆಯೂ ಸುಲಭವಾಗಿ ಪರಿಹಾರ ಆಗುತ್ತೆ.

ಸರ್ಕಾರಿ ಶಾಲೆಗಳ ಶಿಕ್ಷಣ ಹಳಿ ತಪ್ಪಲು ಮುಖ್ಯ ಕಾರಣ ಸರ್ಕಾರದ ಕಾನೂನು ರೂಪಿಸುವವರು ಮತ್ತು ಅದನ್ನು ಅನುಷ್ಟಾನಕ್ಕೆ ತರುವವರ ಕುಟುಂಬವರ್ಗದವರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿಲ್ಲ. ಅವ್ರ ಮಕ್ಕಳೇನಿದರೂ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೀತಿದ್ದಾರೆ. ( ಎಲ್ಲೋ ಅಲ್ಲೊಂದು ಇಲ್ಲೊಂದು ಅಪವಾದಗಳನ್ನು ಹೊರತುಪಡಿಸಿ) ಹೀಗಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳು ಅಧಿಕಾರಸ್ಥರಿಗೆ ಆಗ್ತಿಲ್ಲ. ಅದೇ ಅವ್ರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದರೆ ಸರ್ಕಾರದ ಎಲ್ಲಾ ಯೋಜನೆಗಳು ನಿಯಮಬದ್ಧವಾಗಿ ಪಾಲನೆ ಆಗೋದಲ್ಲದೆ ಶಿಕ್ಷಣದ ಮಟ್ಟ ತನ್ನಿಂತಾನೆ ಸರಿಯಾಗುತ್ತೆ. ಒಮ್ಮೆ ಸರ್ಕಾರಿ ಶಾಲೆಗಳು ತಮ್ಮ ಸದ್ಯದ ಅವವಸ್ಥೆಗಳನ್ನು ಸರಿಪಡಿಸಿಕೊಂಡು ಮೈಕೊಡವಿ ನಿಂತ್ರೆ ಸಹಜವಾಗೇ ಖಾಸಗಿ ಶಾಲೆಗಳ ಜೊತೆ ಸವಾಲೊಡ್ಡಬಹುದು. ಅಲ್ಲದೆ ಸರ್ಕಾರಿ ಶಾಲೆಗಳ ಮಕ್ಕಳೂ ಸುಲಲಿತವಾಗಿ ಇಂಗ್ಲಿಷ್ ಗುಮ್ಮನನ್ನು ಓಡಿಸಿ ಆ ಭಾಷೆಯಲ್ಲಿ ಮಾತಾಡಲು ಸಾಧ್ಯ.

ಇಷ್ಟೆಲ್ಲಾ ಆದ್ರೂ ಕಂಬಾರರ ಮಾತಿನಂತೆ ಎಲ್ ಕೆಜಿಯಿಂದ ಹತ್ತನೇ ಕ್ಲಾಸ್ ವರೆಗೆ ಶಿಕ್ಷಣದ ರಾಷ್ಟ್ರೀಕರಣ ಮಾಡಿ ಸರ್ಕಾರವೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುವುದು ಸಾಧ್ಯವೇ ? ಕಾಲವೇ ಇದಕ್ಕೆಲ್ಲಾ ಉತ್ತರಿಸಬೇಕಷ್ಟೆ.

Wednesday, September 14, 2011

ಶ್ರೀರಾಮುಲು ರಾಜೀನಾಮೆ ಪ್ರಹಸನ

ಬಳ್ಳಾರಿಯ ಬಿ. ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದಾಗ ಏನೋ ದೊಡ್ಡ ಸಾಧನೆ ಮಾಡಲು ಹೊರಟವರ ಮೂಡ್ ನಲ್ಲಿದ್ದರು. ಅವ್ರ ಸುತ್ತಲಿದ್ದ ಜನರೂ ಅಂತದ್ದೇ ನಿರೀಕ್ಷೆಯಲ್ಲಿದ್ದರು.
ಕರ್ನಾಟಕದ ಪಾಲಿಗೆ ಶಾಸಕರು ರಾಜೀನಾಮೆ ಕೊಡೋದು ಹೊಸತಲ್ಲ. 2008ರ ನಂತ್ರವಂತೂ ಆಪರೇಷನ್ ಕಮಲದ ಹೆಸರಿನಲ್ಲಿ ಹದಿನಾಲ್ಕು ಜನ ಕಾಂಗ್ರೆಸ್ - ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದಕ್ಕೆ ರಾಜ್ಯದ ಜನ ಸಾಕ್ಷಿಯಾಗಿದ್ದಾರೆ. ಆದ್ರೆ ಶ್ರೀರಾಮುಲು ರಾಜೀನಾಮೆ ಕೊಡೋದಿಕ್ಕೆ ಹೊರಟಾಗ ಇದ್ದ ಒಂದೇ ಒಂದು ಚೇಂಜ್ ಅಂದ್ರೆ ಅವ್ರು ಬಿಜೆಪಿಗೆ ಸೇರಿದವರು ಅನ್ನೋದಷ್ಟೇ. 'ಶ್ರೀರಾಮುಲು ರಾಜೀನಾಮೆ ಅಂಗೀಕಾರ ಆಗೋದಿಲ್ಲ' ಅನ್ನೋ ಮಾತು ಅವ್ರು ಬೆಂಗಳೂರಿನಿಂದ ಮಡಿಕೇರಿಯತ್ತ ಹೊರಟು ನಿಂತಾಗಲೇ ಬಿಜೆಪಿಯ ಅಂಗಳದಿಂದ ಕೇಳಿಬಂದಿತ್ತು.
ಹಾಗೆ ನೋಡಿದ್ರೆ ಬಿಜೆಪಿಯಲ್ಲಿ ಆರಂಭವಾದ ಆಪರೇಷನ್ ಕಮಲದ ರುವಾರಿ ಬಿ.ಶ್ರೀರಾಮುಲು. 2008ರ ಚುನಾವಣೆಯ ನಂತ್ರ ಸ್ಪಷ್ಟ ಬಹುಮತಕ್ಕಿಂತ ಮೂರು ಸೀಟು ಕಡಿಮೆ ಇದ್ದ ಬಿಜೆಪಿ ಆರು ಜನ ಪಕ್ಷೇತರರ ನೆರವಿನಿಂದ ಅಧಿಕಾರದ ಗದ್ದುಗೆ ಏರಿತು. ಆದ್ರೆ ಬಿಜೆಪಿಯೇ ಪೂರ್ಣ ಬಹುಮತ ಪಡ್ಕೋಬೇಕು ಎಂಬ ಹಪಹಪಿ ಪಕ್ಷದ ನಾಯಕರಲ್ಲಿತ್ತು. ಹಾಗಾಗಿಯೇ ಮೊದಲಿಗೆ ಮೂವರು ಶಾಸಕರ ರಾಜೀನಾಮೆ ಕೊಡಿಸಲಾಯಿತು. ಜೆಡಿಎಸ್ ನಿಂದ ಆಯ್ಕೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಮತ್ತು ಶಿವನಗೌಡ ನಾಯಕ್ ಹಾಗೂ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಆನಂದ್ ಅಸ್ನೋಟಿಕರ್ ರಾಜೀನಾಮೆ ಕೊಡಿಸಲಾಯಿತು. ಅವತ್ತು ರಾಜೀನಾಮೆ ಕೊಟ್ಟ ಈ ಮೂವರು ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದು ಶ್ರೀರಾಮುಲು ಅವ್ರ ಸೆವೆನ್ ಮಿನಿಸ್ಚರ್ಸ್ ಕ್ವಾಟ್ರಸ್ ನಲ್ಲೇ. ಅವತ್ತು ಬಿಳಿ ಬಣ್ಣದ ಜುಬ್ಬಾದ ಮೇಲೆ ಕಡುಕಪ್ಪು ಬಣ್ಣದ ಓವರ್ ಕೋಟ್ ಹಾಕ್ಕೊಂಡು ಶ್ರೀರಾಮುಲು ಮಿಂಚುತ್ತಿದ್ದರು. ಮೂವರು ಶಾಸಕರ ರಾಜೀನಾಮೆ ಕೊಡಿಸಿ ಕಮಲದ ತೆಕ್ಕೆಗೆ ಅವ್ರನ್ನು ಕರೆತಂದ ಹೆಮ್ಮೆ ಅವ್ರ ಮುಖದಲ್ಲಿತ್ತು. ಏನೋ ದೊಡ್ಡ ಸಾಧನೆ ಮಾಡಿದಂತೆ ಅವ್ರು ಕಾಣುತ್ತಿದ್ದರು.
ಆದ್ರೆ ಕೇವಲ ಮೂರೇ ವರ್ಷದ ಅಂತರದಲ್ಲಿ ಅದೇ ಶ್ರೀರಾಮುಲು ಬಿಜೆಪಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದರು. ಹೀಗೆ ರಾಜೀನಾಮೆ ಕೊಡಲು ಹೊರಟಾಗ ಅವ್ರ ಮುಖದಲ್ಲಿ ಯುದ್ಧೋನ್ಮಾದ ಇತ್ತು. ಅದೇ ಉನ್ಮಾದದಲ್ಲೇ ಅವ್ರು ಸೆಪ್ಟಂಬರ್ ನಾಲ್ಕರಂದು ಮಡಿಕೇರಿಗೆ ಹೋಗಿದ್ದರು.
ಮಾರನೇ ದಿನ ಚಿತ್ರಣ ಸಂಪೂರ್ಣ ಅದಲು ಬದಲಾಗಿತ್ತು. ಶ್ರೀರಾಮುಲು ರಾಜೀನಾಮೆಯ ತಂತ್ರಗಾರಿಕೆ ಮಾಡಿದ್ದ ಗಣಿಧಣಿ ಜನಾರ್ಧನ ರೆಡ್ಡಿ ಸಿಬಿಐನ ವಶದಲ್ಲಿದ್ದರು. ಯುದ್ಧಕ್ಕೆ ಹೊರಟ ಶ್ರೀರಾಮುಲು ರಣರಂಗ ಪ್ರವೇಶಕ್ಕೂ ಅವಕಾಶ ಸಿಗದೆ ಅರಮನೆಗೆ (ಬಳ್ಳಾರಿಗೆ) ದೌಡಾಯಿಸಿದ್ದರು.
ಇಷ್ಟೆಲ್ಲಾ ಆಗಿ ಇಪ್ಪತ್ತು ದಿನ ಕಳೆದಿದೆ. ಆದ್ರೆ ಶ್ರೀರಾಮುಲು ರಾಜೀನಾಮೆ ಅಂಗೀಕಾರ ಇನ್ನೂ ಆಗಿಲ್ಲ. ತಮ್ಮ ರಾಜೀನಾಮೆ ಹಿಂಪಡೆಯೋದಿಲ್ಲ ಎಂದು ರಾಮುಲು ಬಹಿರಂಗವಾಗಿ ಹೇಳ್ಕೊಂಡಿದ್ದಾರೆ. ರಾಜೀನಾಮೆ ವಿಚಾರದಲ್ಲಿ ಅವ್ರ ಮನವೊಲಿಸುವ ಪ್ರಯತ್ನ ನಡೆದಿದೆ ಅನ್ನೋ ಮಾತನ್ನು ಬಿಜೆಪಿ ನಾಯಕರು ಹೇಳಿದ್ದಾರೆ.
2008ರ ವಿಧಾನಸಭಾ ಚುನಾವಣೆಯ ನಂತ್ರ ರಾಜ್ಯದಲ್ಲಿ ಇದುವರೆಗೆ ಹದಿನಾಲ್ಕು ಜನ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಹೀಗೆ ರಾಜೀನಾಮೆ ಕೊಟ್ಟವರೆಲ್ಲಾ ಆಮೇಲೆ ಕಮಲ ಪಾಳಯ ಸೇರಿದ್ದಾರೆ. ಅವ್ರ ರಾಜೀನಾಮೆಗಳನ್ನು ಕೆ.ಜಿ.ಬೋಪಯ್ಯ ತತಕ್ಷಣವೇ ಅಂಗೀಕರಿಸಿ ಸ್ಥಾನ ತೆರವಿಗೆ ಅವಕಾಶ ಮಾಡ್ಕೊಟ್ಟಿದ್ದರು. ಶ್ರೀರಾಮುಲು ವಿಷಯದಲ್ಲಿ ಮಾತ್ರ ರಾಜೀನಾಮೆ ಅಂಗೀಕರಿಸಲು ಅಥವಾ ಅದನ್ನು ತಿರಸ್ಕರಿಸಲು ಸ್ಪೀಕರ್ ಬೋಪಯ್ಯ ಅವ್ರಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ.
ಕರ್ನಾಟಕದ ರಾಜಕಾರಣ ಅನೇಕ ಸಂದರ್ಭಗಳಲ್ಲಿ ರಾಷ್ಟ್ರಕ್ಕೆ ಮಾದರಿಯಾದ ಉದಾಹರಣೆಗಳಿವೆ. ಆದ್ರೆ ಸ್ಪೀಕರ್ ಕೆ.ಜಿ.ಬೋಪಯ್ಯ ಮತ್ತು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಬೇರೆ ಬೇರೆ ಸಂದರ್ಭಗಳಲ್ಲಿ ಇದಕ್ಕೆ ವ್ಯತಿರಿಕ್ತ ನಿದರ್ಶನಗಳನ್ನು ತೋರಿಸಿಕೊಟ್ಟಿದ್ದಾರೆ. ಸದ್ಯ ಅದ್ರ ಮುಂದುವರಿದ ಭಾಗವನ್ನು ಸ್ಪೀಕರ್ ಪರಿಚಯಿಸುತ್ತಿದ್ದಾರೆ.
ಶ್ರೀರಾಮುಲು ರಾಜೀನಾಮೆ ಪ್ರಹಸನದ ಕ್ಲೈಮಾಕ್ಸ್ ಹೇಗಾಗುತ್ತೆ ಅನ್ನುವ ಕುತೂಹಲ ಜನರಲ್ಲಿದೆ. ರಾಜೀನಾಮೆ ಅಂಗೀಕಾರ ಆದ್ರೂ ತಿರಸ್ಕಾರ ಆದ್ರೂ ಅದೊಂದು ದಾಖಲೆಯೇ...!

Saturday, September 3, 2011

ಕಲಿಸಿದ ಗುರುವಿಗೆ ವಂದನೆ...

ಶಿಕ್ಷಕರ ದಿನಾಚರಣೆ ಅಂದಾಕ್ಷಣ ತಕ್ಷಣ ನೆನಪಿಗೆ ಬರೋದು ನಾವು ಸ್ಕೂಲ್ ಗೆ ಹೋಗ್ತಿದ್ದಾಗ ಶಿಕ್ಷಣ ಇಲಾಖೆಯಿಂದ ಕೊಡುತ್ತಿದ್ದ ಒಂದು ಸ್ಟ್ಯಾಂಪ್. ಪ್ರೊ. ರಾಧಾಕೃಷ್ಣ ಅವ್ರ ಪೇಟಾ ಕಟ್ಟಿಕೊಂಡಿರುವ ಸ್ಟ್ಯಾಂಪ್ ಕೊಡೋದೇ ಶಿಕ್ಷಕರ ದಿನಾಚರಣೆ.
ಆದ್ರೆ ನಮ್ಮ ಬದುಕನ್ನು ರೂಪಿಸಿದ ಶಿಕ್ಷಕರನ್ನು ನೆನೆಯುವುದು ನಮ್ಮೆಲ್ಲರ ಜವಾಬ್ದಾರಿ ಅನ್ನೋದು ನನ್ನ ಭಾವನೆ. ಕನಿಷ್ಟ ಈ ಒಂದು ದಿನವಾದ್ರೂ ಅವ್ರಿಗೆ ಥ್ಯಾಂಕ್ಸ್ ಹೇಳಲೇ ಬೇಕು.
ನನ್ನು ವಿದ್ಯಾಭ್ಯಾಸ ಆರಂಭವಾಗಿದ್ದು ನನ್ನೂರಿನ ಅಡ್ಪಂಗಾಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಆಗ ಕೇವಲ ನಾಲ್ಕನೇ ಕ್ಲಾಸ್ ವರೆಗೆ ಮಾತ್ರ ಆ ಶಾಲೆಯಲ್ಲಿತ್ತು. ಆದ್ರೆ ಮುಂದೆ ಅದು ಪ್ರಾಥಮಿಕ ಶಾಲೆಯಾಗಿ ಭಡ್ತಿ ಪಡೆದು ನಾನು ಅಲ್ಲೇ ಏಳನೇ ಕ್ಲಾಸೂ ಮುಗಿಸಿದ್ದು. ನಮ್ ಶಾಲೇಲಿ ಆಗ ಇದ್ದಿದ್ದು ಇಬ್ರೇ ಮೇಷ್ಟ್ರುಗಳು. ಜನಾರ್ದನ ಮಾಸ್ತರ್ ಮತ್ತು ಜಯರಾಮ್ ಶೆಟ್ರು. ಜನಾರ್ದನ ಮೇಸ್ಟ್ರನ್ನು ದಪ್ಪ ಫ್ರೇಂನ ಕನ್ನಡ ಹಾಕ್ಕೊಂಡು ಬಿಳಿ ಕೂದಲು ಇದ್ದಿದ್ರಿಂದ ಅವ್ರನ್ನು ನಾವು ಅಜ್ಜ ಮಾಸ್ಟ್ರು ಅಂತ ಕರೀತಿದ್ದೆವು. ಅವ್ರು ಕಿವಿಗಳಿಗೆ ಬಿಳಿ ಹರಳಿನ ಟಿಕ್ಕಿ ಹಾಕುತ್ತಿದ್ದರು. ಅದನ್ನು ನೋಡಿ ಒಂದನೇ ಕ್ಲಾಸ್ ನಲ್ಲಿದ್ದಾಗ್ಲೇ ಹಠ ಹಿಡಿದಿದ್ದೆ. " ಅಜ್ಜ ಮಾಸ್ಟ್ರಂಗೆ ನಂಗೂ ಕೆಬಿಗೆ ಟಿಕ್ಕಿ ಬೇಕೂ" ಅಂತ ಅಪ್ಪ ಅವ್ವನ ಮುಂದೆ ಹಠ ಮಾಡ್ತಿದ್ದೆ. ಹೀಗಾಗಿ ಅಪ್ಪ ನನ್ನ ಕಿವಿಗೆ ಟಿಕ್ಕಿ ಹಾಕಿಸಿದ್ದರು. ಐದೋ ಆರನೇ ಕ್ಲಾಸ್ ಗೆ ಹೋದ್ಮೇಲೆ ಇದು ಹಳೇ ಫ್ಯಾಷನ್ ಅನ್ಸಿಯೋ ಏನೋ ಅದನ್ನು ತೆಗೆದು ಬಿಟ್ಟಿದ್ದೆ. ನನ್ನ ಬದುಕಲ್ಲಿ ಪ್ರಭಾವ ಬೀರಿದ ಮೊದಲ ವ್ಯಕ್ತಿ ಅವ್ರೇ. ಅವರ ಕನ್ನಡದ ಸ್ಪಷ್ಟ ಉಚ್ಛರಣೆ, ಏರು ಧ್ವನಿ, ಪಾಠ ಮಕ್ಕಳ ಮನಸ್ಸಿನೊಳಗೆ ಅಚ್ಚಳಿಯದೆ ಉಳಿಯುವಂತೆ ಮಾಡುತ್ತಿತ್ತು.
ಆದ್ರೆ ನನ್ನ ಬದುಕಲ್ಲಿ ಹೆಚ್ಚಿನ ಪ್ರಭಾವ ಬೀರಿದ್ದು ರುಕ್ಮಿಣಿ ಟೀಚರ್. ನಾನು ನಾಲ್ಕನೇ ಕ್ಲಾಸ್ ನಲ್ಲಿದ್ದಾಗ ಅವ್ರು ಅಡ್ಪಂಗಾಯ ಶಾಲೆಗೆ ಬಂದಿದ್ರು. ಅವ್ರು ಮಾಡುತ್ತಿದ್ದ ಪಾಠ ಹೆಚ್ಚು ಆಸಕ್ತಿದಾಯಕವಾಗಿರುತ್ತಿತ್ತು. ಗಣಿತ ಸಬ್ಜೆಕ್ಟ್ ನನಗೆ ಇಷ್ಟ ಆಗೋದಿಕ್ಕೆ ಅವ್ರೇ ಕಾರಣ. ಹಾಗೆಯೇ ಕನ್ನಡದ ಕಾಗುಣಿತ, ವ್ಯಾಕರಣಗಳನ್ನು ತುಂಬ ಚೆನ್ನಾಗಿ ವಿವರಿಸಿ ಹೇಳಿಕೊಟ್ಟಿದ್ದರು. ಇವತ್ತಿಗೂ ನಾನು ಬಳಸುವ ಕನ್ನಡ ಸ್ವಲ್ಪ ಉತ್ತಮವಾಗಿರೋದಿಕ್ಕೆ ಅವರೇ ಕಾರಣ.
ನನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ್ದು ಸರ್ಕಾರಿ ಪ್ರೌಢ ಶಾಲೆ ಅಜ್ಜಾವರದಲ್ಲಿ. ಅದು ನಮ್ಮ ಅಡ್ಪಂಗಾಯ ಶಾಲೆ ಇರೋ ಕಾಂಪೌಂಡ್ ನಲ್ಲೇ ಇರೋದು. ಸುಳ್ಯ ತಾಲೂಕಿನ ಉತ್ತಮ ಪ್ರೌಢ ಶಾಲೆಗಳಲ್ಲಿ ಅಜ್ಜಾವರ ಶಾಲೆಗೂ ಒಳ್ಳೆಯ ಹೆಸರಿತ್ತು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ನಮ್ಮ ಶಾಲೆಯಲ್ಲಿ ಉತ್ತಮ ಪ್ರೋತ್ಸಾಹ ಸಿಗುತ್ತಿತ್ತು. ಪೀಟಿ ಮೇಸ್ಟ್ರಾಗಿದ್ದ ಸುಂದರ ಗೌಡರು ಮೂರು ವರ್ಷ ನಮ್ಗೆ ಕ್ಲಾಸ್ ಟೀಚರ್ ಆಗಿದ್ದರು. ನಮ್ಮ ಹೆಡ್ ಮಾಸ್ಟರ್ ಆಗಿದ್ದ ಗಂಗೇಮಾರೇ ಗೌಡರು ವಿದ್ಯಾರ್ಥಿಗಳ ಬರಹ ಸುಂದರ ಆಗಿರಬೇಕು ಅನ್ನೋದ್ರ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಅವ್ರು ಕೈಬರಹ ತುಂಬಾ ಚೆನ್ನಾಗಿತ್ತು. ಹೀಗಾಗಿ ಮಕ್ಕಳಿಂದಲೂ ಅದನ್ನೇ ನಿರೀಕ್ಷಿಸುತ್ತಿದ್ದರು. ಬೋರ್ಡ್ ನಲ್ಲಿ ಬರೆದು ತೋರಿಸಿ ಅದೇ ರೀತಿ ಬರೆಯುವಂತೆ ಹುರಿದುಂಬಿಸುತ್ತಿದ್ದರು. ಇದರಿಂದಾಗಿ ನನ್ನ ಕೈ ಬರಹ ಇವತ್ತೂ ಅವರು ಹೇಳಿಕೊಟ್ಟ ರೀತಿಯಲ್ಲೇ ಇದೆ. ಆಗೆಲ್ಲಾ ಅವ್ರು ಕಾಪಿ ಬರೆಯೋಕೆ ಹೇಳಿದ್ರೆ ಸರಿಯಾಗೆ ಬರೆಯದೆ ಅವ್ರಿಂದ ಏಟು ತಿಂದಿದ್ದೂ ಇದೆ. ಆದ್ರ ಇದು ಮುಂದೆ ಅಕ್ಷರ ಬರೆಯುವಾಗ ಹೆಚ್ಚು ಗಮನ ಕೊಡುವಲ್ಲಿ ಸಹಕಾರಿಯಾಗಿತ್ತು.

ಇನ್ನು ಪಿಯುಸಿ ಕಲಿತಿದ್ದು ಸರ್ಕಾರಿ ಪದವಿ ಪೂರ್ವ ಕಾಲೇಜು ಸುಳ್ಯದಲ್ಲಿ. ಪಿಯುನಲ್ಲಿ ಸೈನ್ಸ್ ಸಬ್ಜೆಕ್ಟ್ ತಗೊಂಡ ನಾನು ಸೆಕೆಂಡ್ ಪಿಯುನಲ್ಲಿ ಫೇಲಾಗಿದ್ದೆ. ಆದ್ರೆ ಪಿಯುನಲ್ಲಿದ್ದಾಗ ಕನ್ನಡ ಲೆಕ್ಚರರ್ ನಂದಾ ಅವ್ರು ವೈಚಾರಿಕ ಚಿಂತನೆಗಳ ಬಗ್ಗೆ ಪ್ರಭಾವ ಬೀರಿದ್ದರು. ಆದ್ರೆ ಆಗ ಅದನ್ನು ನಾನು ಆಗ ಅಷ್ಟು ಇಷ್ಟಪಟ್ಟಿರಲಿಲ್ಲ. ಮುಂದೆ ಪಿಯುನಲ್ಲಿ ಫೇಲಾಗಿ ಒಂದು ವರ್ಷ ಮನೇಲಿ ಕುಳಿತು ಮಾರನೇ ವರ್ಷ ಪಾಸಾಗಿ ಬಿಎಸ್ ಸಿ ಸೇರಿದೆ. ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯದಲ್ಲಿ ಮೂರು ವರ್ಷ ಡಿಗ್ರಿ ಕಲಿಯುವ ಸಂದರ್ಭದಲ್ಲೇ ನಾನು ಜರ್ನಲಿಸ್ಟ್ ಆಗಬೇಕೆಂದು ಕನಸು ಕಂಡಿದ್ದು.
ಎನ್ಎಂಸಿಯಲ್ಲಿ ಮೆಥೆಮೆಟಿಕ್ಸ್ ಪಾಠ ಮಾಡುತ್ತಿದ್ದ ಸುರೇಖಾ ಮೇಡಂ ಮತ್ತು ಉಷಾ ಮೇಡಂ ಅವ್ರ ಉಪನ್ಯಾಸ ಹೆಚ್ಚು ಇಷ್ಟವಾಗ್ತಿತ್ತು. ಅದ್ರಲ್ಲೂ ಸುರೇಖಾ ಮೇಡಂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿಗಳಂದ್ರೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸೋದು ಕಡಿಮೆ. ಅವ್ರೇನಿದ್ರೂ ಪುಸ್ತಕದ ಹುಳಗಳು ಎಂದೇ ಉಳಿದ ವಿದ್ಯಾರ್ಥಿಗಳು ಕರೀತಿದ್ದದ್ದು. ಆದ್ರೆ ನಮ್ಮ ಬ್ಯಾಚ್ ಅದೆಲ್ಲವನ್ನೂ ಬ್ರೇಕ್ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಾಂಪಿಯನ್ ಆಗ್ತಿತ್ತು. ಆಗೆಲ್ಲಾ ಮೇಡಂ ನಮಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಹಾಗೆಯೇ ನಮಗೆ ಏನೇ ಸಮಸ್ಯೆ ಇದ್ರೂ ಅವ್ರ ಜೊತೆ ಹೇಳ್ಕೊಳ್ಳೋದಿಕ್ಕೆ ಅವಕಾಶ ಸಿಗುತ್ತಿತ್ತು. ಹದಿಹರೆಯದ ಅಂತಿಮ ಘಟ್ಟದಲ್ಲಿದ್ದ ವಿದ್ಯಾರ್ಥಿಗಳು ದಾರಿ ತಪ್ಪದಂತೆ ಅವರು ಕೊಡುತ್ತಿದ್ದ ಎಚ್ಚರಿಕೆಯ ಮಾತುಗಳು ನನ್ನ ಬದುಕನ್ನು ರೂಪಿಸಲು ದೀವಿಗೆಯಾಗಿದ್ದು ಸುಳ್ಳಲ್ಲ.
ಇನ್ನು ಅಲ್ಲಿ ಕನ್ನಡ ಲೆಕ್ಚರರ್ ಆಗಿದ್ದ ಪೂವಪ್ಪ ಗೌಡರು ನನ್ನ ಬದುಕಿನಲ್ಲಿ ವಿಶೇಷ ಪ್ರಭಾವ ಬೀರಿದ್ದಾರೆ. ಅವ್ರು 'ದ್ರೌಪದಿಯ ಶ್ರೀಮುಡಿ' ಪಾಠವನ್ನು ಸುಮಾರು ಮೂರು ತಿಂಗಳು ಪಾಠ ಮಾಡಿದ್ರು. ಆದ್ರೆ ಪಾಠಕ್ಕಿಂತಲೂ ಜೀವನದಲ್ಲಿ ಅಯ್ಯೋ ಇದು ನನ್ನ ಹಣೆಬರಹ ಅಂತ ಪ್ರತಿಯೊಂದಕ್ಕೂ ಹೇಳ್ತಾ ಕಾಲ ಕಳೀಬಾರದು ಅನ್ನೋದನ್ನು ಹೇಳಿಕೊಟ್ಟರು. ವಿಮರ್ಶೆಯ ನಾನಾ ದಿಕ್ಕುಗಳನ್ನು ತೋರಿಸಿದ್ರು. ಅವರಿಂದಾಗಿ ಇವತ್ತಿಗೂ ವಿಮರ್ಶೆ ಅಂದ್ರೆ ತುಂಬ ಇಷ್ಟ. ಹಾಗೆಯೇ ವೈಚಾರಿಕ ಚಿಂತನೆ ಬಗ್ಗೆ ಹೆಚ್ಚು ಪ್ರಭಾವ ಬೀರಿದ್ರು. ಪಿಯುನಲ್ಲಿ ನಂದಾ ಮೇಡಂ ಹೇಳುತ್ತಿದ್ದುದನ್ನು ಒಪ್ಪದವನು ನಿಧಾನಕ್ಕೆ ಅದರತ್ತ ಒಲವು ಹೆಚ್ಚಾಯಿತು. ದೇವರ ಮೇಲಿನ ಅತಿಯಾದ ನಂಬಿಕೆಗಳು ದೂರವಾಗಿದ್ದು ಆಗಲೇನೇ. ದೇವರ ಮೇಲೆ ಎಲ್ಲಾ ಭಾರ ಹಾಕೋದ್ರ ಬದಲು ನಮ್ಮ ಶ್ರಮದ ಮೇಲೆ ಹೆಚ್ಚು ನಂಬಿಕೆ ಇಡೋದು ಮುಖ್ಯ ಅನ್ನೋದನ್ನು ಅಲ್ಲಿ ಕಲಿತುಕೊಂಡೆ.
ಬಿಎಸ್ ಸಿ ಡಿಗ್ರಿ ಮುಗಿಸಿದ ಮೇಲೆ ಪತ್ರಿಕೋದ್ಯಮದಲ್ಲಿ ಎಂಎ ಮಾಡಬೇಕೆಂದು ಮೊದಲೇ ನಿರ್ಧರಿಸಿದ್ದೆ. ಅದ್ರಂತೆ ಮಂಗಳೂರು ವಿವಿಯಲ್ಲಿ ಎಂಸಿಜೆ ಗೆ ಸೇರಿಕೊಂಡೆ. ಜರ್ನಲಿಸಂ ಬಗ್ಗೆ ಕೋರ್ಸ್ ನ ಮೂಲಕ ತಿಳಿದುಕೊಳ್ಳೋದು ಏನೂ ಇಲ್ಲ ಅನ್ನೋದು ನನ್ನ ನಂಬಿಕೆ. ಆದ್ರೆ ಯುನಿವರ್ಸಿಟಿಯ ಕ್ಯಾಂಪಸ್ ನಲ್ಲಿ ಓದೋದು ಇದೆಯಲ್ಲಾ. ಯಾವುದೇ ವಿದ್ಯಾರ್ಥಿಯ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಲು ಯುನಿವರ್ಸಿಟಿ ಕ್ಯಾಂಪಸ್ ಸಹಕಾರಿ. ಯುನಿವರ್ಸಿಟಿ ಕ್ಯಾಂಪಸ್ ನಿನಗೇನು ಕೊಟ್ಟಿತು ಅಂತ ಕೇಳಿದ್ರೆ ಬದಕಲು ಕಲಿಸಿದೆ ಅಂತ ಹೇಳಬಹುದು. ಪ್ರೊ.ಕೆ.ವಿ. ನಾಗರಾಜ್, ಡಾ. ಜಿ.ಪಿ.ಶಿವರಾಂ, ಡಾ.ಪೂರ್ಣಾನಂದ ಜರ್ನಲಿಸಂ ಬಗ್ಗೆ ಹೇಳ್ಕೊಟ್ಟರು. ಅದ್ರಲ್ಲೂ ಡಾ.ಪೂರ್ಣನಂದ ಅವ್ರು ಮಾಡ್ತಿದ್ದ ಸಿನಿಮಾ ಬಗೆಗಿನ ಕ್ಲಾಸ್ ಗಳು, ತೋರಿಸುತ್ತಿದ್ದ ಜಗತ್ತಿನ ಅತ್ಯುತ್ತಮ ಸಿನಿಮಾಗಳನ್ನು ಮರೆಯೋಕೆ ಸಾಧ್ಯವಿಲ್ಲ. ಹಾಗೇನೇ ಕೋರ್ಸ್ ಮುಗಿಸಿದ ನಂತ್ರ ಒಬ್ಬ ಜರ್ನಲಿಸ್ಟ್ ಆಗಿ ಕೆಲಸ ಮಾಡುವಾಗ್ಲೂ ಪೂರ್ಣಾನಂದರ ಮಾತುಗಳು ಅನೇಕ ಸಂದರ್ಭಗಳಲ್ಲಿ ದಾರಿ ತೋರಿಸಿವೆ.

ಟೀಚರ್ಸ್ ಡೇ ದಿನ ಕಲಿಸಿದ ನನ್ನೆಲ್ಲಾ ಗುರುಗಳಿಗೂ ವಂದನೆ. ಇಲ್ಲಿ ಎಲ್ಲರ ಹೆಸರು ಬರೆದಿಲ್ಲ. ಆದ್ರೆ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ನನ್ನ ಬದುಕು ರೂಪಿಸಲು ಸಹಾಕಾರಿಯಾಗಿದ್ದಾರೆ.