Wednesday, September 5, 2018

ಧೈರ್ಯ ತುಂಬಿದ ಭಾಷಣ..!


ಹಲೋ..
ಹಲೋ..
ಹರಿಪ್ರಸಾದ್‌.. ?
ಹೌದು.. ಹಲೋ..
ಹಲೋ.. ಗೊತ್ತಾಯ್ತಾ ಯಾರೂ ಅಂತ..
ಹೆಚ್‌ಎಂ ಸರ್‌..
ಹಾಂ.. ಗುರುತು ಹಿಡಿದೆ..
ಮೊನ್ನೆಯಷ್ಟೇ ಹೆಚ್‌ಎಂ ಫೋನ್‌ ಮಾಡಿದಾಗ ನಮ್ಮಿಬ್ಬರ ನಡುವಿನ ಮಾತು ಶುರುವಾಗಿದ್ದು ಹೀಗೆ. ಹೆಚ್‌ಎಂ ಈಗ ರಾಮನಗರದ ಡಿಡಿಪಿಐ ಆಗಿದ್ದಾರೆ. ಆದ್ರೆ ನಮ್ಗೆ ಈಗ್ಲೂ ಅವ್ರು ಹೆಚ್‌ಎಂ.

ದಕ್ಷಿಣ ಕನ್ನಡ ಜಿಲ್ಲೆ, ಸುಳ್ಯ ತಾಲೂಕಿನ ಅಜ್ಜಾವರ ಪ್ರೌಢಶಾಲೆಗೆ ಹೆಚ್‌ಎಂ ಆಗಿ ಗಂಗಮಾರೇಗೌಡರು ಬಂದಾಗ ನಾನು ಎಂಟನೇ ಕ್ಲಾಸ್‌ನ ವಿದ್ಯಾರ್ಥಿ. ಆದ್ರೆ ಹೈಸ್ಕೂಲ್‌ನಲ್ಲೂ ವಿದ್ಯಾರ್ಥಿಗಳ ಕೈ ಬರಹ ತಿದ್ದಬಹುದು, ಅಕ್ಷರ ಚಂದ ಬರೆಯುವಂತೆ ಮಾಡಬಹುದು ಎನ್ನುವುದನ್ನು ಸಾಧಿಸಿ ತೋರಿಸಿದ್ದು ಗಂಗಮಾರೇಗೌಡರು. ಅದುವರೆಗೆ ಕಾಟಾಚಾರಕ್ಕೆ ಬರೀತಿದ್ದ ಕಾಪಿಯನ್ನು ತಿದ್ದಿ ತೀಡಿದ್ದು ಅವರೇ. ಬೋರ್ಡ್‌ ಮೇಲೆ ಗೆರೆ ಎಳೆದು ಅಲ್ಲೇ ಅ, , , .. ಬರೆದು, ,ಬಿ,ಸಿ,ಡಿ.. ಬರೆದು ಹೇಗೆ ಅಕ್ಷರಗಳನ್ನು ಚಂದಗೆ ಬರೀಬೇಕು ಅಂತ ತೋರಿಸಿಕೊಟ್ಟಿದ್ದರು. ಅವರ ಕೈ ಬರಹದಲ್ಲಿ ಕನ್ನಡದ ಅಕ್ಷರಗಳು ಬೋರ್ಡ್‌ ಮೇಲೆ ಅರಳಿದ ಹೂವುಗಳಂತೆಯೇ ಭಾಸವಾಗುತ್ತಿದ್ದವು. ಕನ್ನಡದ ಸ್ಪಷ್ಟ ಉಚ್ಛರಣೆ ಕಲಿಸಿದ್ದು ಪ್ರೈಮರಿಯಲ್ಲಿ ಜನಾರ್ಧನ ಮಾಷ್ಟ್ರು ಹಾಗೂ ರುಕ್ಮಿಣಿ ಟೀಚರ್‌. ಆದರೆ ಇವತ್ತಿಗೂ ಕಿವಿಯಲ್ಲಿರುವ ಕಂಚಿನ ಕಂಠ ಗಂಗಮಾರೇಗೌಡರದ್ದು.
ಕೆಲವೊಂದು ಸಂದರ್ಭಗಳಲ್ಲಿ ಯಾವುದೋ ಸಮಸ್ಯೆಯನ್ನು ಎದುರಿಸಲು ಹಿಂಜರಿಕೆಯಾದಾಗ ಸದಾ ನೆನಪಾಗುವುದು ಗಂಗಮಾರೇಗೌಡರು ಮಾಡಿದ್ದ ಒಂದು ಭಾಷಣ. ಅದು ನಮ್ಮ ಹೈಸ್ಕೂಲಿನ ವಾರ್ಷಿಕೋತ್ಸವದಲ್ಲಿ ಅವರು ಮಾಡಿದ್ದ ಭಾಷಣ. ಅನೇಕ ವರ್ಷಗಳ ನಂತರ ಅದೇ ಮೊದಲ ಬಾರಿಗೆ ನಮ್ಮ ಹೈಸ್ಕೂಲಿನಲ್ಲಿ ವಾರ್ಷಿಕೋತ್ಸವ ನಡೆದಿತ್ತು. ಈ ವಾರ್ಷಿಕೋತ್ಸವಕ್ಕೂ ಮೊದಲು ಅಜ್ಜಾವರ ಹೈಸ್ಕೂಲಿನ ವಿಶಾಲವಾದ ಗ್ರೌಂಡ್‌ನಲ್ಲಿ ಇದ್ದ ಏರು ತಗ್ಗುಗಳನ್ನು ಜೆಸಿಬಿ ತರಿಸಿ ರಾತ್ರಿ ಹಗಲು ಕೆಲಸದ ಮೂಲಕ ಸರಿ ಮಾಡಿಸಿದ್ದು ಗಂಗಮಾರೇಗೌಡರು ಹೆಚ್‌ಎಂ ಆಗಿದ್ದಾಗ. ಆದರೆ ಹೀಗೆ ಕೆಲಸ ಮಾಡಿದ್ದಕ್ಕೆ ಗಂಗಮಾರೇಗೌಡರ ವಿರುದ್ಧವೇ ಒಂದಷ್ಟು ಆಪಾದನೆಗಳನ್ನು ಮಾಡಿದ್ದರು ಎಂದು ನೆನಪು. ಇದರ ಜೊತೆಗೆ ನಮ್ಮ ಊರಲ್ಲಿ ಕಾಂಗ್ರೆಸ್‌-ಬಿಜೆಪಿ ಅಂತ ದೊಡ್ಡ ಮಟ್ಟದ ರಾಜಕಾರಣ ಬೇರೆ. ಇಂತಹ ಸಂದರ್ಭದಲ್ಲೇ ವಾರ್ಷಿಕೋತ್ಸವ ಆಚರಣೆಗೆ ಗಂಗಮಾರೇಗೌಡರು ನಿರ್ಧರಿಸಿದ್ದರು. ಆದರೆ ಅದನ್ನು ವಿರೋಧಿಸಿ ಒಂದು ಗುಂಪು ವಾರ್ಷಿಕೋತ್ಸವದ ದಿನ ಕಪ್ಪುಬಾವುಟ ಪ್ರದರ್ಶಿಸುವ ಬೆದರಿಕೆ ಹಾಕಿದ್ದರು. ಈ ಗುಸುಗುಸು ವಿದ್ಯಾರ್ಥಿಗಳಾಗಿದ್ದ ನಮಗೆಲ್ಲಾ ಒಂದು ರೀತಿಯ ಆತಂಕ ಸೃಷ್ಟಿಸಿತ್ತು. ಆದರೆ ವಿದ್ಯಾರ್ಥಿಗಳ ಮನಸ್ಸನ್ನು ತಿಳಿಗೊಳಿಸುವ ದೃಷ್ಟಿಯಿಂದಲೋ ಏನೋ (ಈಗ ಯೋಚಿಸುವಾಗ ಹಾಗನ್ನಿಸುತ್ತದೆ) ಕಲ್ಲಡ್ಕದ ಬೊಂಬೆಗಳು, ಕೀಲು ಕುದುರೆ ತರಿಸಿ ನೀಲಗಿರಿ ಅಡ್ಕದಿಂದ ಹೈಸ್ಕೂಲ್‌ವರೆಗೆ ಸುಮಾರು ಅರ್ಧ ಕಿಲೋಮೀಟರ್‌ ಉದ್ದಕ್ಕೆ ವಾರ್ಷಿಕೋತ್ಸವದ ಉದ್ಘಾಟನೆಗೂ ಮೊದಲು ಮೆರವಣಿಗೆ ನಡೆಸಿದ್ದರು.

ಇದಾದ ನಂತರ ವಾರ್ಷಿಕೋತ್ಸವದ ಉದ್ಘಾಟನೆ ವೇಳೆ ಶಾಲೆಯ ವರದಿಯನ್ನು ಮಂಡಿಸಿ ಗಂಗಮಾರೇಗೌಡರು ಅವತ್ತು ಒಂದು ಭಾಷಣ ಮಾಡಿದ್ದರು. ಕ್ಲಾಸ್‌ರೂಂನಲ್ಲಿ ಕೇಳುತ್ತಿದ್ದ ಕಂಚಿನ ಕಂಠ ಅವತ್ತು ಇನ್ನಷ್ಟು ಸ್ಪಷ್ಟವಾಗಿ, ಅಧಿಕಾರಯುತವಾಗಿ, ವಿಶ್ವಾಸದಿಂದ ಮೊಳಗಿತ್ತು. ‘ಒಬ್ಬ ಸರ್ಕಾರಿ ನೌಕರನಾಗಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ಕೆಲಸ ಮಾಡಲು ನಾನು ತಯಾರಿದ್ದೇನೆ...' ಎಂದು ಗೌಡರು ಹೇಳಿದ್ದರು. ಇದು ಕಪ್ಪುಬಾವುಟ ಪ್ರದರ್ಶಿಸುವ, ಚಿಲ್ರೆ ಪಾಲಿಟಿಕ್ಸ್‌ ಮಾಡುವವರಿಗೆ ಗಂಗಮಾರೇಗೌಡರು ಕೊಟ್ಟ ಎಚ್ಚರಿಕೆಯಂತಿತ್ತು. ಅಂದಿನ ನಂತರ ಮತ್ತೆಂದೂ ಗಂಗಮಾರೇಗೌಡರ ವಿರುದ್ಧ ಆಪಾದನೆ ಮಾಡುವ ಧೈರ್ಯ ಪ್ರದರ್ಶಿಸಿದ್ದು ನಾನು ಕಂಡಿಲ್ಲ. ಅವರ ಅವಧಿಯಲ್ಲೇ ತಾಲೂಕು ಮಟ್ಟದ ಕ್ರೀಡಾಕೂಟ, ಜಿಲ್ಲಾ ಮಟ್ಟದ ಯೋಗ ಸಮ್ಮೇಳನ, ಶಾಲಾ ವಾರ್ಷಿಕೋತ್ಸವ ಹೀಗೆ ಸಾಲು ಸಾಲು ಕಾರ್ಯಕ್ರಮಗಳು ನಡೆದಿದ್ದವು. ಒಂದು ರೀತಿಯಲ್ಲಿ ಅಜ್ಜಾವರ ಪ್ರೌಢಶಾಲೆಯ ಸುವರ್ಣ ದಿನಗಳವು. ಅದೇ ಸಂದರ್ಭದಲ್ಲಿ ನಾನು ಅಲ್ಲಿನ ವಿದ್ಯಾರ್ಥಿ.

ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಇದೆಲ್ಲಾ ನೆನಪಾಯಿತು. ಗಂಗಮಾರೇಗೌಡರ ರೀತಿಯಲ್ಲೇ ನನ್ನನ್ನು ತಿದ್ದಿತೀಡಿ ಪ್ರಭಾವಿಸಿದ ಎಲ್ಲಾ ಗುರುಗಳಿಗೂ ಶಿಕ್ಷಕರ ದಿನಾಚರಣೆಯ ಶುಭಾಶಯ.



Saturday, August 25, 2018

ಡಿಗ್ರಿ ದಿನಗಳ ಪ್ರಧಾನಿ..!



ಕಳೆದೊಂದು ವಾರದಿಂದ ವಾಜಪೇಯಿಯವರ ಕಾವ್ಯಲೋಕದಲ್ಲಿ ವಿಹಾರ ಮಾಡುವಂತಾಗಿದೆ. ‘ಗೀತ್‌ ನಹೀ ಗಾತಾ ಹೂಂ..' ನಿಂದು ಶುರುವಾಗಿ ‘ಗೀತ್‌ ನಯಾ ಗಾತಾ ಹೂಂ..' ಎನ್ನುವ ಕವಿಯ ಮನ. ಅದನ್ನು ಹೇಳುವಾಗ ಕವಿ ವಾಜಪೇಯಿಯವರ ಮುಖದ ಹಾವಭಾವ..!

ವ್ಯಕ್ತಿಗೆ ಸಾವಿದೆ. ಆದರೆ ಕವಿಗೆ ಸಾವಿಲ್ಲ. ಯಾಕಂದ್ರೆ ಕವಿಯ ಕವಿತೆ ಓದುವಾಗೆಲ್ಲಾ ಜೊತೆಗೆ ಕುಳಿತು ಓದಿಸುತ್ತಾನೆ. ಕವಿಯ ಭಾವನೆಗಳು ಜೀವಂತವಾಗಿರುತ್ತವೆ. ಅದರಲ್ಲಿ ಕವಿ ಜೀವಂತವಾಗಿರುತ್ತಾನೆ. ರಾಜಕಾರಣಿ ವಾಜಪೇಯಿ ಇಹಲೋಕ ತ್ಯಜಿಸಿರಬಹುದು. ಆದರೆ ಕವಿ ವಾಜಪೇಯಿಯ ಕವಿತೆಗಳು ಜೊತೆಗಿರುತ್ತವೆ. ‘ಕಾಲನ ಕಪಾಲದ ಮೇಲೆ ನನ್ನ ಭವಿಷ್ಯ ನಾನೇ ಬರೆಯುತ್ತೇನೆ' ಎಂಬ ಸಾಲುಗಳಲ್ಲಿರುವ ವಿಶ್ವಾಸವೇ ಇದು.

ನಾನು ಪಿಯು ಓದುವಾಗ ಶುರುವಾಗಿ ಡಿಗ್ರಿ ಮುಗಿಸಿ ಮೊದಲ ವರ್ಷದ ಪಿಜಿ ಮುಗಿಸುವವರೆಗೆ ಪ್ರಧಾನಮಂತ್ರಿಯಾಗಿದ್ದವರು ಅಟಲ್‌ ಬಿಹಾರಿ ವಾಜಪೇಯಿ. ಹೀಗಾಗಿ ನಮ್ಮ ಕಾಲೇಜು ದಿನಗಳ ಸಂದರ್ಭದಲ್ಲಿ ಪ್ರಧಾನಿಯಾಗಿದ್ದರಿಂದ ಸ್ಪಷ್ಟವಾಗಿ ಒಂದು ಸರ್ಕಾರ, ಪ್ರಧಾನಮಂತ್ರಿಯ ಕಾರ್ಯವೈಖರಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಿದ್ದ ಮೊದಲ ಪ್ರಧಾನಮಂತ್ರಿ ವಾಜಪೇಯಿ. ಬಸ್‌ ಏರಿ ಲಾಹೋರ್‌ಗೆ ಹೊರಟಿದ್ದ ವಾಜಪೇಯಿ ಅಚ್ಚರಿ ಮೂಡಿಸಿದ್ದರು. ‘ ಶಾಂತಿಗೆ ಬದ್ಧರಿದ್ದೇವೆ. ಆದರೆ ಯುದ್ಧಕ್ಕೂ ನಾವು ಸಿದ್ಧರಿದ್ದೇವೆ' ಎಂದು ವಾಜಪೇಯಿ ಕಾರ್ಗಿಲ್‌ ಯುದ್ಧದ ವೇಳೆ ಮಾಡಿದ್ದ ಘೋಷಣೆ ಈಗಲೂ ಮನಸಿನಾಳದಲ್ಲಿ ಹಸಿರಾಗಿದೆ. ಜೈ ಜವಾನ್‌, ಜೈ ಕಿಸಾನ್‌ ಎಂಬ ಘೋಷಣೆಗಳಿಗೆ ದೆಹಲಿಯ ಕೆಂಪು ಕೋಟೆಯ ಮೇಲೆ ನಿಂತು ಜೈ ವಿಜ್ಞಾನ್‌ ಎಂದು ಸೇರಿಸಿದಾಗ ವಿಜ್ಞಾನದ ವಿದ್ಯಾರ್ಥಿಯಾಗಿದ್ದ ನನಗಾಗಿದ್ದ ಆನಂದ ಅಷ್ಟಿಷ್ಟಲ್ಲ.

ಡಿಗ್ರಿಯಲ್ಲಿದ್ದಾಗ ಒಂದು ಕವಿತೆ ಬರೆದಿದ್ದೆ. ಆ ಕವಿತೆಯನ್ನು ನಾನು ಬರೆದಿದ್ದು ಪ್ರಧಾನಿ ವಾಜಪೇಯಿಯವರು ದೆಹಲಿಯಲ್ಲಿ ವಿಪರೀತಿ ಚಳಿ, ಹಿಮಪಾತದ ಸಂದರ್ಭದಲ್ಲಿ ಒಂದು ವಾರದ ಮಟ್ಟಿಗೋ ಏನೋ ವಿಶ್ರಾಂತಿಗೆಂದು ಗೋವಾಗೆ ತೆರಳಿದ್ದರು. ಅದನ್ನು ಟೀಕಿಸಿ ಆ ಕವಿತೆಯನ್ನು ಬರೆದಿದ್ದೆ. ಅದನ್ನು ಓದಿದ್ದ ನಮ್ಮ ಎನ್ನೆಂಸಿಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಶಿವಣ್ಣ ಸರ್ ತುಂಬಾ ಚೆನ್ನಾಗಿ ಬರೆದಿದ್ದಿ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾನು ಬರೆದಿದ್ದ ಕವಿತೆಗೆ ಅವರಿಂದ ಸಿಕ್ಕ ಮೊದಲ ಪ್ರಶಂಸೆ ಅದಾಗಿತ್ತು.

ವಾಜಪೇಯಿ ಪ್ರಧಾನಿ ಹುದ್ದೆಯ ಅಂತಿಮ ದಿನಗಳಲ್ಲಿ ಮೊಣಕಾಲಿನ ಆಪರೇಷನ್‌ ಆದ ನಂತರ ನಡೆಯುವಾಗ ತುಂಬ ಕಷ್ಟಪಡುತ್ತಿದ್ದರು. ಮಾತುಗಳಲ್ಲಿ ಹಳೆಯ ವೈಖರಿಯಲ್ಲಿ ತರಲು ಪ್ರಯಾಸಪಡುತ್ತಿದ್ದರು. ಮುಂದೆ 2004ರ ಚುನಾವಣೆಯಲ್ಲಿ ‘ಇಂಡಿಯಾ ಶೈನಿಂಗ್‌' ಕ್ಯಾಂಪೇನ್‌ ಮಾಡಿದ್ರೂ ವಾಪಸ್‌ ಅಧಿಕಾರಕ್ಕೇರಲು ಸಾಧ್ಯವಾಗಿರಲಿಲ್ಲ. ಅಲ್ಲಿಂದ ನಂತರ ನಿಧಾನಕ್ಕೆ ಅನಾರೋಗ್ಯಕ್ಕೆ ಒಳಗಾದ ವಾಜಪೇಯಿ ಕಳೆದು ಒಂದು ದಶಕದಿಂದ ಹೊರಗೆ ಕಾಣಿಸಿಕೊಂಡಿರಲಿಲ್ಲ. ಅವರ ಭಾಷಣಗಳನ್ನು ಕಳೆದೊಂದು ದಶಕದ ಯುವಕರಿಗೆ ಕೇಳಿಸಿಕೊಳ್ಳುವ ಸೌಭಾಗ್ಯ ಸಿಕ್ಕಿರಲಿಲ್ಲ.

ವಾಜಪೇಯಿ ಸ್ವತಂತ್ರ ಭಾರತದ ಶ್ರೇಷ್ಠ ನಾಯಕರ ಸಾಲಿನಲ್ಲಿ ಸದಾ ನಿಂತಿರುತ್ತಾರೆ. ಅದು ಕೇವಲ ಅವರು ಪ್ರಧಾನಮಂತ್ರಿಯಾಗಿದ್ದರು ಎಂಬ ಕಾರಣಕ್ಕೋ, ಪ್ರಧಾನಮಂತ್ರಿಯಾಗಿ ಮಾಡಿದ ಕೆಲಸದಿಂದಲೋ ಮಾತ್ರವಲ್ಲ. ಓರ್ವ ಅಪ್ಪಟ ನಾಯಕನಾಗಿ. ನೇತಾರನಾಗಿ. ಸಂಸದೀಯ ಪಟುವಾಗಿ. ದೇಶದ ಕಟ್ಟಾಳುವಾಗಿ, ಚಿಂತಕನಾಗಿ. ಮಾರ್ಗದರ್ಶಿಯಾಗಿ. ಕವಿಯಾಗಿ.

ಅದೇಕೋ ಏನೋ, ವಾಜಪೇಯಿ ಅಂತಿಮ ದರ್ಶನದ ವೇಳೆ ತುಂಬಾ ಕಾಡಿದ್ದು ಎಲ್‌.ಕೆ.ಅಡ್ವಾಣಿ.