Tuesday, March 24, 2015

ಒಂದು ಸಾರ್ಥಕ ರಾತ್ರಿ...!

ಆ ರಾತ್ರಿಗಾಗಿ ಕಳೆದ ಐದು ವರ್ಷಗಳಿಂದ ಕಾದಿದ್ದೆ. ಅಂತೂ ಆ ಕಾಯುವಿಕೆ ಕೊನೆಯಾಯಿತು. ಜೀವನ ಸಾರ್ಥಕವಾಯಿತು. ಮುಂದೆ ಅದೇ ರಾತ್ರಿ ಮತ್ತೆ ಮರುಕಳಿಸಬಹುದು. ಆದರೆ ಆ ಮೊದಲ ರಾತ್ರಿಗಾಗಿ ಇದ್ದ ಕಾಯುವಿಕೆ ಇದೆಯೆಲ್ಲಾ. ಅದು ಅವರ್ಣನೀಯ. ಯಾಕೆಂದರೆ ಅದು ಮದುಮಗಳ ನಿರೀಕ್ಷೆ !

ಯಸ್‌. ಹಾಗೆೊಂದು ರಾತ್ರಿಯನ್ನು ಸಾರ್ಥಕಗೊಳಿಸಿದ್ದು 'ಮಲೆಗಳಲ್ಲಿ ಮದುಮಗಳು'. ರಂಗಭೂಮಿಯ ಮೇಲೆ ಮಲೆಗಳಲ್ಲಿ ಮದುಮಗಳು ಬಂದು ಐದು ವರ್ಷಗಳು ಕಳೆದಿದೆ. 2010ರಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲಿ ರಂಗ ಪ್ರಯೋಗ ಕಂಡ ಮದುಮಗಳು ಆಗಿಂದಲೂ ಕೈ ಬೀಸಿ ಕರೆಯುತ್ತಿದ್ದಳು. ಒಂದಿಲ್ಲೊಂದು ಕಾರಣಕ್ಕೆ ರಂಗಭೂಮಿಯ ಈ ಅದ್ಭುತವನ್ನು ನೋಡೋದಿಕ್ಕೆ ಕಾಲಾವಕಾಶ ಕೂಡಿ ಬಂದಿರಲೇ ಇಲ್ಲ. ಹೋಗಬೇಕು ಅಂತ ಪ್ಲಾನ್‌ ಮಾಡಿಕೊಂಡಿದ್ದು ಎಷ್ಟೋ ಸಲ. ಜಸ್ಟ್‌ ಮಿಸ್‌ ಆಗಿದ್ದು ಕೆಲವು ಸಲ. ಕೊನೆಗೂ ನೋಡಿದೆ ಮೊದಲ ಸಲ.

ನಿಜ. ರಂಗಭೂಮಿಯಲ್ಲಿ ಅನೇಕ ಪ್ರಯೋಗಗಳು ಕಾಲದಿಂದ ಕಾಲಕ್ಕೆ ನಡೆಯುತ್ತಲೇ ಬಂದಿವೆ. ಅನೇಕ ವಿಸ್ಮಯಗಳಿಗೆ ರಂಗಭೂಮಿ ತೆರೆದುಕೊಂಡಿದೆ. ಒಂದು ನಾಟಕವನ್ನು ಇಡೀ ರಾತ್ರಿ ನಡೆಸುವುದೂ ವಿಶೇಷವಲ್ಲ. ಯಕ್ಷಗಾನ ಬಯಲಾಟವನ್ನು ನೋಡುತ್ತಾ ಬೆಳೆದು ಬಂದವರಿಗೆ ಇಡೀ ರಾತ್ರಿ ನಾಟಕ ನಡೆಸುತ್ತಾರೆ ಅನ್ನೋದು ದೊಡ್ಡ ವಿಸ್ಮಯವಲ್ಲ. ಆದರೆ ಮಲೆಗಳಲ್ಲಿ ಮದುಮಗಳು ಅನ್ನೋ ಮಹಾ ಕಾದಂಬರಿಯನ್ನು ರಂಗರೂಪಕ್ಕೆ ಇಳಿಸಿ, ರಂಗದ ಮೇಲೆ ಆ ಮಲೆನಾಡ ಚಿತ್ರಣ ರೂಪಿಸಿ ಆ ಮಾಯಾಲೋಕಕ್ಕೆ ಕೊಂಡೊಯ್ದು, ಪ್ರೇಕ್ಷಕರನ್ನು ಇಡೀ ರಾತ್ರಿ ಅಲ್ಲೇ ತಿರುಗಾಡಿಸುವುದು ಇದೆಯಲ್ಲಾ ಅದು ನಿಜಕ್ಕೂ ಅದ್ಭುತ.

ಮಲೆಗಳಲ್ಲಿ ಮದುಮಗಳು ರಂಗರೂಪ ಪಡೆದ ಸಂದರ್ಭದಿಂದಲೂ ಈ ಕಾದಂಬರಿಯನ್ನು ಅದ್ಹೇಗಪ್ಪಾ ರಂಗಕ್ಕೆ ತಂದಿದ್ದಾರೆಂಬ ಕುತೂಹಲ ಇದ್ದೇ ಇತ್ತು. ಗೆಳೆಯರನೇಕರು ನಾಟಕ ನೋಡಿ ಬಂದು ಹೊಟ್ಟೆ ಉರಿಸಿದ್ದರು. ನಾಲ್ಕು ಬೇರೆ ಬೇರೆ ರಂಗಭೂಮಿಗಳಲ್ಲಿ ನಾಟಕ ಸಾಗುತ್ತೆ ಅಂತೆಲ್ಲಾ ಹೇಳಿದ್ದರು. ಇದು ಮತ್ತಷ್ಟು ಕಲ್ಪನೆಗಳು ಬೆಳೆಯೋಕೆ ಅವಕಾಶ ಕೊಟ್ಟಿತೇ ಹೊರತು ಕುತೂಹಲ ತಣಿಸಲಿಲ್ಲ. ಅಂತೂ ನಾಲ್ಕು ರಂಗಗಳ ಮೇಲೆ ರೂಪತಳೆದು ನಿಂತ 'ಮಲೆಗಳಲ್ಲಿ ಮದುಮಗಳ' ಸ್ವರೂಪ ಕಂಡಿದ್ದು ಅವರ್ಣನೀಯ ಅನುಭವ ಕಟ್ಟಿಕೊಟ್ಟಿತು.

ಮೊದಲಿಗೆ ಈ ಕಾದಂಬರಿಯನ್ನು ರಂಗರೂಪಕ್ಕೆ ತಂದ ನಾರಾಯಣಸ್ವಾಮಿಯವರಿಗೆ ಹ್ಯಾಟ್ಸಪ್‌ ಹೇಳಲೇ ಬೇಕು. ಇಡೀ ಕಾದಂಬರಿಯ ಮೂಲ ಧಾರೆಯನ್ನು ಹಾಗೆಯೇ ರಂಗದ ಮೇಲೆ ಹರಿಸಿದ್ದಾರೆ. ಇನ್ನು ಸಿ.ಬಸವಲಿಂಗಯ್ಯ. ಈ ಅದ್ಭುತ ನಾಟಕ ನಿರ್ದೇಶಕರ ಬಗ್ಗೆ ಏನು ಹೇಳಬೇಕೋ ಗೊತ್ತಿಲ್ಲ. ಯಾಕೆಂದರೆ ನಾನೊಬ್ಬ ಸಾಮಾನ್ಯ ಪ್ರೇಕ್ಷಕ. ಖಂಡಿತ ಬಸು ಅವರ ನಿರ್ದೇಶನದ ಬಗ್ಗೆ ಹೇಳೋದು ನನ್ನಂತವರಿಗೆ ಕಷ್ಟ. ಬೆಂಗಳೂರಿನ ಕಲಾಗ್ರಾಮದಲ್ಲಿ ಮಲೆನಾಡನ್ನೇ ಸೃಷ್ಟಿಸಿ ಪ್ರೇಕ್ಷಕರನ್ನು ಒಂಭತ್ತು ಗಂಟೆಗಳ ಕಾಲ ಬೇರೆಯದ್ದೇ ಲೋಕದಲ್ಲಿ ತೇಲಿಸಿದ ಮಾಯಗಾರ ಅನ್ನೋದು ಸರಿಯೇನೋ. ಆದರೆ ಬಸು ಅವರು ಮಾಯ ಮಂತ್ರಗಳನ್ನು ನಂಬುವುದಿಲ್ಲ ಅನ್ಸುತ್ತೆ. ಅವರಂತ ಅದ್ಭುತ ನಿರ್ದೇಶಕನನ್ನು ಪಡೆದ ನಾಡು ಧನ್ಯ.

ಈ ನಾಟಕದಲ್ಲಿ ಅಭಿನಯಿಸಿದ ಕಲಾವಿದರ ಎನರ್ಜಿಯನ್ನು ಮೆಚ್ಚಬೇಕು. ಆರಂಭದಿಂದ ಕೊನೆವರೆಗೆ ಅದೇ ಕಲಾವಿದರು ಹಲವು ಪಾತ್ರಗಳ ಮೂಲಕ ಕಾಣಿಸಿಕೊಂಡಾಗಲು ಪಾತ್ರಕ್ಕೆ ಒಪ್ಪುವ ಲವಲವಿಕೆ. ಗುತ್ತಿ ಹಾಗೂ ಹುಲಿಯಾ ಪಾತ್ರದಾರಿಗಳು ಇಡೀ ರಂಗದ ಉದ್ದಗಲಕ್ಕೂ ಓಡಾಡಿದರೂ ಅವರಿಗೆ ಕೊನೆವರೆಗೂ ಸುಸ್ತೆಂಬುದು ಕಾಣಿಸಲೇ ಇಲ್ಲ. ಕೊನೆಗೆ ಹರಿವ ಪ್ರವಾಹದಲ್ಲಿ ಹುಲಿಯನ್ನು ಕಳೆದುಕೊಂಡಾಗ ಗುತ್ತಿಯ 'ಹುಲಿಯಾ.....' ಎಂಬ ಆರ್ತನಾದ ಈಗಲೂ ಕಿವಿಯಲ್ಲಿ ಗುಂಯ್‌ಗುಡುತ್ತಿದೆ.

ಅಭಿನಯ, ಮೇಕಪ್‌, ಲೈಟ್‌, ಸಂಗೀತ, ರಂಗಗೀತೆ, ರಂಗಸಜ್ಜಿಕೆ, ಪ್ರಸಾದನ ಎಲ್ಲದರಲ್ಲೂ ಈ ನಾಟಕ ಅದ್ಭುತವಾಗಿದೆ. ಖಂಡಿತವಾಗ್ಲೂ ಈ ನಾಟಕ ನೋಡದೇ ಇದ್ದರೆ ಜೀವನದಲ್ಲಿ ಅದ್ಭುತ ಅನುಭವವನ್ನು ಮಿಸ್‌ ಮಾಡ್ಕೊಂಡಂತೆ. ಮುಂದಿನ ಬಾರಿ ನಾಟಕ ಪ್ರದರ್ಶನ ಕಂಡಾಗ ಬಿಡುವು ಮಾಡಿಕೊಂಡು ಮತ್ತೊಮ್ಮೆ ನೋಡಬೇಕು. ಹಾಗೆಯೇ ನೀವೂ ಕೂಡ ನೋಡಿ.








Monday, March 23, 2015

ಕೊನೆಗೂ ಸಿಬಿಐ ಅಂಗಳಕ್ಕೆ...

ಅಂತೂ ಇಂತೂ ಸರ್ಕಾರ ಡಿ.ಕೆ.ರವಿ ಸಾವು ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಸಿಎಂ ಸಿದ್ದರಾಮಯ್ಯ ಇವತ್ತು ವಿಧಾನಸಭೆಯಲ್ಲಿ ಇದನ್ನು ಘೋಷಿಸಿದ್ದಾರೆ. ಸಾರ್ವಜನಿಕರ ಭಾವನೆಗಳಿಗೆ ಬೆಲೆಕೊಟ್ಟು, ಡಿ.ಕೆ. ರವಿ ಹೆತ್ತವರ ಮನವಿಗೆ ಬೆಲೆಕೊಟ್ಟು ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸೋದಾಗಿ ಸಿದ್ದರಾಮಯ್ಯ ಘೋಷಿಸಿದ್ರು.

ಇವತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಕೇವಲ ಒಂದು ಸಾಲಿನಲ್ಲಿ ಸಿಬಿಐಗೆ ವಹಿಸಿಕೊಡೋದನ್ನು ಘೋಷಿಸಿಲ್ಲ. ಬದಲಿಗೆ ಪ್ರತಿಪಕ್ಷಗಳಿಗೆ ರಾಜಕೀಯ ಉತ್ತರವನ್ನು ಕೊಟ್ಟು ನಂತರ ಸಿಬಿಐಗೆ ಪ್ರಕರಣವನ್ನು ಕೊಡೋದಾಗಿ ಪ್ರಕಟಿಸಿದ್ರು. ಇದಕ್ಕೂ ಮೊದಲು ಸಿಎಂ ಪ್ರಸ್ತಾಪಿಸಿದ ಎರಡು ವಿಚಾರಗಳು ಬಹುಮುಖ್ಯ. ಅದರಲ್ಲಿ ಒಂದೆನೆಯದು  'ಹಿಂದೆ ಕೆಲವರು ಸಿಬಿಐಅನ್ನು ಕಾಂಗ್ರೆಸ್‌ ಬಚಾವೋ ಇನ್ಸ್‌ಟಿಟ್ಯೂಷನ್‌, ಚೋರ್‌ ಬಚಾವೋ ಇನ್ಸ್‌ಟಿಟ್ಯೂಷನ್‌ ಅಂತೆಲ್ಲಾ ಕರೆದಿದ್ದಾರೆ. ಆದರೆ ನಾನು ಯಾವತ್ತೂ ಸಿಬಿಐ ಬಗ್ಗೆ ಇಂತಹ ಹೇಳಿಕೆಯನ್ನು ನೀಡಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿರುವ ಎಲ್ಲಾ ಸಂಸ್ಥೆಗಳ ಬಗ್ಗೆ ನನಗೆ ಪೂರ್ಣ ಗೌರರವಿದೆ. ಸಿಬಿಐನಿಂದಲೂ ಸರಿಯಾದ ನಿಟ್ಟಿನಲ್ಲಿ ತನಿಖೆ ನಡೆಯುತ್ತೆ ಅನ್ನೋ ವಿಶ್ವಾಸವಿದೆ.' ಇದು ಸಿಎಂ ಹೇಳಿದ್ದ ಮಾತುಗಳು. ನಿಜ. ಸಿದ್ದರಾಮಯ್ಯ ಅತ್ಯಂತ ಜವಾಬ್ದಾರಿಯುತವಾಗಿ ವಿರೋಧಪಕ್ಷಗಳಿಗೆ ರಾಜಕೀಯ ಉತ್ತರವನ್ನು ನೀಡಿದ್ರು. ಹಿಂದೆ ವಿಧಾನಸಭೆಯಲ್ಲಿ ನಿಂತು ಬಿಜೆಪಿ ನಾಯಕರು ಅಕ್ರಮ ಗಣಿಗಾರಿಕೆಯನ್ನು ಸಿಬಿಐಗೆ ಒಪ್ಪಿಸಬೇಕೆಂದು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನವರು ಒತ್ತಾಯಿಸಿದಾಗ ಸಿಬಿಐ ಅಂದ್ರೆ ಕಾಂಗ್ರೆಸ್‌ ಬ್ಯೂರೋ ಆಫ್‌ ಇನ್ವೆಸ್ಟಿಗಗೇಷನ್‌, ಕಾಂಗ್ರೆಸ್‌ ಬಚಾವೋ ಇನ್ಸ್‌ಟಿಟ್ಯೂಷನ್ ಅಂತೆಲ್ಲಾ ಜರೆದಿದ್ದರು. ಕೇಂದ್ರದಲ್ಲಿ ಕಾಂಗ್ರೆಸ್‌ ಸರ್ಕಾರ ಇರೋದ್ರಿಂದ ಯಾವುದೇ ಕಾರಣಕ್ಕೂ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸೋದಿಲ್ಲ ಅಂತ ಘಂಟಾಘೋಷವಾಗಿ ಹೇಳಿದ್ದರು. ಇವತ್ತು ಸಿಬಿಐಗೆ ಪ್ರಕರಣವನ್ನು ಕೊಡಬೇಕೆಂದು ಆಗ್ರಹಿಸುತ್ತಿರುವ ಬಿಜೆಪಿಯವರು ಸಿಎಂ ನೀಡಿರುವ ಈ ಹೇಳಿಕೆಗೆ ಯಾವುದೇ ರೀತಿಯಲ್ಲೂ ಸಮರ್ಪಕವಾಗಿ ಪ್ರತ್ಯುತ್ತರ ನೀಡುವ ಸ್ಥೈರ್ಯ ಉಳಿಸಿಕೊಂಡಿಲ್ಲ. ಹಾಗೆಯೇ ಸಿಬಿಐಅನ್ನು ಚೋರ್‌ ಬಚಾವೋ ಇನ್ಸ್‌ಟಿಟ್ಯೂಷನ್‌ಅಂತ ಹಿಂದೆ ದೇವೇಗೌಡರು ಕರೆದಿದ್ದರು. ಇದೇ ಕಾರಣಕ್ಕಾಗಿ ಜೆಡಿಎಸ್‌ ಕೂಡ ಈ ವಿಚಾರದಲ್ಲಿ ಸಿದ್ದರಾಮಯ್ಯಗೆ ತಿರುಗೇಟು ನೀಡೋದಿಕ್ಕೆ ಸಾಧ್ಯವಾಗಿಲ್ಲ. ರಾಜಕಾರಣಿಗಳು ಯಾವುದೋ ಸಂದರ್ಭದಲ್ಲಿ ಹೇಳುವ ಮಾತು ಅವರನ್ನೇ ಬೇರೆ ಸಂದರ್ಭದಲ್ಲಿ ಹೇಗೆ ಬಾಯಿ ಮುಚ್ಚಿಸುತ್ತೆ ಅನ್ನೋದಕ್ಕೆ ಇದೊಂದು ಬೆಸ್ಟ್‌ ಎಕ್ಸಾಂಪಲ್‌.

ಎರಡನೆಯದು. ಸಿಎಂ ಸಿದ್ದರಾಮಯ್ಯ, ಈ ಪ್ರಕರಣವನ್ನು ಆರಂಭದಲ್ಲೇ ಸಿಬಿಐಗೆ ವಹಿಸುತ್ತಿದ್ದರೆ ನಮ್ಮ ಪೊಲೀಸರ ಆತ್ಮಸ್ಥೈರ್ಯ ಕುಗ್ಗುತ್ತಿತ್ತು ಅಂತೆಲ್ಲಾ ಹೇಳಿದ್ದಾರೆ. ಆದರೆ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಿದ ತಕ್ಷಣ ನಮ್ಮ ಪೊಲೀಸರು ದಕ್ಷರಲ್ಲ, ಅವರಿಗೆ ತನಿಖೆ ನಡೆಸೋದಿಕ್ಕೆ ಬರೋದಿಲ್ಲ ಅನ್ನುವ ಭಾವನೆಯನ್ನು ಹುಟ್ಟುಹಾಕುತ್ತದೆ ಅನ್ನೋದು ಅಷ್ಟು ಸಮಂಜಸವಲ್ಲ. ಯಾಕಂದ್ರೆ ಜನ ರಾಜ್ಯದ ಪೊಲೀಸರ ದಕ್ಷತೆಯನ್ನು ಪ್ರಶ್ನಿಸಿಲ್ಲ. ಆದ್ರೆ ಪೊಲೀಸರ ಕಾರ್ಯನಿರ್ವಹಣೆಯ ನಡುವೆ ರಾಜಕೀಯ ಹಸ್ತಕ್ಷೇಪದ ಸಾಧ್ಯತೆಯ ಬಗ್ಗೆ ಅನುಮಾನಿಸಿದ್ದರು. ಅದೇ ಕಾರಣಕ್ಕೆ ಸಿಬಿಐಗೆ ಒಪ್ಪಿಸಬೇಕೆಂದು ಪಟ್ಟುಹಿಡಿದಿದ್ದರು. ಹಾಗಂತ ಸಿಬಿಐ ಕೂಡ ಸಂಪೂರ್ಣ ಸರ್ವಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ. ಅದರಲ್ಲಿ ರಾಜಕೀಯ ಹಸ್ತಕ್ಷೇಪ ನಡೆಯೋದೇ ಇಲ್ಲ ಅನ್ನೋ ಪೂರ್ಣ ನಂಬಿಕೆ ಇಲ್ಲ. ಹಲವಾರು ಪ್ರಕರಣಗಳಲ್ಲಿ ಸಿಬಿಐನ ಮೇಲೂ ರಾಜಕೀಯ ಹಸ್ತಕ್ಷೇಪ ಆಗಿರುವ ಆರೋಪಗಳು ಕೇಳಿಬಂದಿವೆ. ಅದೇನೇ ಇದ್ದರೂ ಈ ಪ್ರಕರಣದಲ್ಲಿ ಸಿಬಿಐ ತನಿಖೆ ನಡೀಬೇಕು ಅನ್ನೋ ಅಭಿಪ್ರಾಯ ಸೃಷ್ಟಿಯಾಗಿತ್ತು. ಅದನ್ನು ತಡವಾಗಿ ಅರ್ಥೈಸಿಕೊಂಡ ಸರ್ಕಾರ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದೆ.

ಇನ್ನು ಈ ಪ್ರಕರಣದಲ್ಲಿ ರಾಜಕೀಯ ಲಾಭ ನಷ್ಟದ ಚರ್ಚೆ ಇದ್ದೇ ಇದೆ. ಎಷ್ಟೇ ಇಲ್ಲ ಇಲ್ಲ ಅನ್ನೋ ಸ್ಪಷ್ಟೀಕರಣವನ್ನು ಕೊಟ್ಟರೂ ವಿರೋಧ ಪಕ್ಷಗಳು ಇದರಲ್ಲಿ ರಾಜಕೀಯ ಲಾಭವನ್ನು ಪಡೆಯುವ ಕೆಲಸ ನಡೆದೇ ನಡೆಯುತ್ತದೆ. ಹಾಗಂತ ಈಗ ಕಾಂಗ್ರೆಸ್‌ನವರು ಪ್ರತಿಪಕ್ಷಗಳು ಪ್ರಕರಣದಲ್ಲಿ  ರಾಜಕೀಯ ಲಾಭ ಪಡೆದುಕೊಳ್ಳುತ್ತಿವೆ ಅಂತ ಟೀಕಿಸುವುದರಲ್ಲಿ ಅರ್ಥವಿಲ್ಲ. ಯಾಕಂದರೆ ಇಲ್ಲಿ ಪ್ರಕರಣವನ್ನು ಸಿಬಿಐಗೆ ಆರಂಭದಲ್ಲೇ ನೀಡಿರುತ್ತಿದ್ದರೆ ಪ್ರತಿಪಕ್ಷಗಳ ರಾಜಕೀಯ ಲಾಭದ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.

ಅದೇನೇ ಇದ್ದರೂ ಈ ಪ್ರಕರಣದಲ್ಲಿ ಸತ್ಯ ಹೊರಬರಬೇಕಿದೆ. ಸಿಬಿಐ ತನಿಖೆ ಶೀಘ್ರ ಮುಗಿಯಬೇಕು. ಸಿಎಂ ಈಗಾಗ್ಲೇ ಮೂರು ತಿಂಗಳಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಪತ್ರ ಬರೆಯುವ ಸೂಚನೆ ನೀಡಿದ್ದಾರೆ. ಯಾಕಂದ್ರೆ ಈ ಪ್ರಕರಣವನ್ನು ಹೆಚ್ಚು ಕಾಲದವರೆಗೆ ಎಳೆದಷ್ಟೂ ಇದರಲ್ಲಿ ರಾಜಕೀಯ ಹಸ್ತಕ್ಷೇಪಗಳಿಗೆ ಹೆಚ್ಚಿನ ಅವಕಾಶಗಳು ಲಭಿಸುತ್ತವೆ. ಇದು ತಪ್ಪಬೇಕು. ಸತ್ಯ ಹೊರಬರಬೇಕು.

Friday, March 20, 2015

ರವಿ ಸಾವು ಹಾಗೂ ಸರ್ಕಾರ

ಸಿಐಡಿ ಮೂಲಕವೇ ರವಿ ಸಾವಿನ ಕಾರಣಗಳ ಸತ್ಯ ಹೊರತರುತ್ತೇವೆ. ಸಿಬಿಐ ಹಾಗೂ ಸಿಐಡಿಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಇದೂ ತನಿಖಾ ಸಂಸ್ಥೆ. ಅದೂ ತನಿಖಾ ಸಂಸ್ಥೆ. ಇಲ್ಲೂ ಪೊಲೀಸರೇ ತನಿಖೆ ಮಾಡೋದು. ಅಲ್ಲೂ ಪೊಲೀಸರೇ ತನಿಖೆ ಮಾಡೋದು. ಸಿಎಂ ಸಿದ್ದರಾಮಯ್ಯ ಹೀಗೆ ಪುಂಖಾನುಪುಂಖವಾಗಿ ರವಿ ಅಸಹಜ ಸಾವನ್ನು ಸಿಬಿಐಗೆ ಒಪ್ಪಿಸದೇ ಇರೋದಕ್ಕೆ ಕಾರಣಗಳನ್ನು ಹೇಳುತ್ತಾ ಹೋಗಿದ್ದಾರೆ. ರವಿ ಅಪ್ಪ ಅಮ್ಮನ ಮುಂದೆಯೂ ಕುಳಿತು ಇದನ್ನೇ ಸಿದ್ದರಾಮಯ್ಯ ಹೇಳಿದ್ದರು.

ಯಾರೂ ಸಿಐಡಿ ಅಥವಾ ಸಿಬಿಐನಲ್ಲಿ ಪೊಲೀಸರ ಹೊರತಾಗಿ ಆಕಾಶದಿಂದ ಇಳಿದು ಬಂದ ವಿಶೇಷ ಕಾಯಗಳು ತನಿಖೆ ನಡೆಸುತ್ತವೆ ಅಂತ ಹೇಳುತ್ತಿಲ್ಲ. ಪ್ರತಿಯೊಬ್ಬರಿಗೂ ಗೊತ್ತಿದೆ. ಎರಡೂ ಕಡೆಯಲ್ಲಿ ಪುೊಲೀಸರೇ ತನಿಖೆ ನಡೆಸುತ್ತಾರೆ ಅಂತ. ಹಾಗೆಂದು ಸರ್ಕಾರದ ಯಾವುದೋ ಹಗರಣವನ್ನು ಈಗ ಸಿಬಿಐ ತನಿಖೆಗೆ ಒಪ್ಪಿಸಿ ಅಂತ ಜನ ಕೇಳುತ್ತಿಲ್ಲ. ಅರ್ಕಾವತಿ ಹಗರಣವನ್ನು ಸಿಬಿಐಗೆ ಕೊಡಿ ಅಂತ ಹೋರಾಡುತ್ತಿಲ್ಲ. ಇದೇ ಸಿದ್ದರಾಮಯ್ಯನವರು ಹಿಂದೆ ವಿಧಾನಸಭೆಯಲ್ಲಿ ನಿಂತು ಅಕ್ರಮ ಗಣಿಗಾರಿಕೆಯನ್ನು ಸಿಬಿಐ ತನಿಖೆಗೆ ಒಪ್ಪಿಸಿ ಅಂತ ಅಹೋರಾತ್ರಿ ಧರಣಿ ನಡೆಸಿದ್ದರು. ಆಗಲೂ ಆಗಿನ ಬಿಜೆಪಿ ಸರ್ಕಾರ ಸಿಬಿಐ ತನಿಖೆಗೆ ಒಪ್ಪಿರಲಿಲ್ಲ. ಇಂದು ಅರ್ಕಾವತಿ ಹಗರಣವನ್ನು ಸಿಬಿಐ ತನಿಖೆಗೆ ಕೇಳಿದ್ರೆ ಸಿದ್ದರಾಮಯ್ಯ ಅದನ್ನೂ ಒಪ್ಪಿಸುತ್ತಿಲ್ಲ. ಆದರೆ ಈಗ ಕೇಳುತ್ತಿರೋದು ಒಂದು ಸಾವಿನ ವಿಚಾರವನ್ನು. ರವಿ ಸಾವಿನ ಹಿಂದೆ ಮಾಫಿಯಾಗಳ ಕೈವಾಡ ಇದೆ ಅನ್ನೋದೇ ಎಲ್ಲರಿಗೆ ಕಾಡುತ್ತಿರುವ ಸಂಶಯ. ಅದಕ್ಕಾಗಿ ಯಾರೂ ಈ ಹಂತದಲ್ಲಿ ರಾಜ್ಯ ಸರ್ಕಾರದ ಹಸ್ತಕ್ಷೇಪ ಇರುವ ಸಿಐಡಿ ತನಿಖೆಯಿಂದ ಹೊರಬರುವ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಸಿದ್ದರಾಮಯ್ಯ ಒಂದು ವೇಳೆ ವಿರೋಧ ಪಕ್ಷದ ನಾಯಕರಾಗಿದ್ದರೆ ಅವರಿಂದಲೂ ಇದೇ ಮಾತು ವ್ಯಕ್ತವಾಗುತ್ತಿತ್ತು. ಇದರಲ್ಲಿ ಯಾರಿಗೂ ಎಳ್ಳಷ್ಟೂ ಅನುಮಾನವಿಲ್ಲ.

ಸಿಐಡಿಯಿಂದಲೇ ಸತ್ಯಾಂಶ ಹೊರಬರುತ್ತೆ ಅನ್ನುತ್ತಿರೋ ಸರ್ಕಾರ, ಯಾವುದೇ ಹಂತದಲ್ಲಿ, ಯಾವುದೇ ಪ್ರಕರಣದಲ್ಲಿ ಇದುವರೆಗೆ ಸಿಐಡಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿಯೇ ಇಲ್ಲ ಅಂತ ಆತ್ಮಸಾಕ್ಷಿಯಾಗಿ ಹೇಳಲಿ ನೋಡೋಣ. ಹಾಗೆಂದ ಮಾತ್ರಕ್ಕೆ ಸಿಬಿಐ ಕೂಡ ಸಂಪೂರ್ಣವಾಗಿ ರಾಜಕೀಯ ಹಸ್ತಕ್ಷೇಪದಿಂದ ಮುಕ್ತವಾಗಿದೆ ಅನ್ನೋದನ್ನು ಜನ ಒಪ್ಪಿಕೊಳ್ಳೋದಿಲ್ಲ. ಆದರೆ ಈಗ ನಡೆಯುತ್ತಿರುವ ಹೋಲಿಕೆ ವಿಶ್ವಾಸಾರ್ಹತೆಗೆ ಸಂಬಂಧಿಸಿದ್ದು. ಸಿಐಡಿಗೆ ಹೋಲಿಸಿದ್ರೆ ಸಿಬಿಐ ಹೆಚ್ಚು ವಿಶ್ವಾಸಾರ್ಹ ಅನ್ನೋದು ಜನರ ಭಾವನೆ.  ಯಾಕಂದ್ರೆ ಈ ಪ್ರಕರಣದಲ್ಲಿ ರಾಜ್ಯದ ಪ್ರಭಾವಿ ರಾಜಕಾರಣಿಗಳ ಮೇಲೆಯೇ ಅನುಮಾನಗಳು ವಿಧಾನಮಂಡಲದಲ್ಲೇ ವ್ಯಕ್ತವಾಗಿವೆ.

ಇನ್ನು ರಾಜ್ಯದಲ್ಲಿ ಐಎಸ್ಎಸ್‌ ಅಧಿಕಾರಿ ಸಾವನ್ನಪ್ಪಿದ್ರೆ ಸಿಬಿಐ ತನಿಖೆ ಕೇಳುತ್ತೀರಿ. ಕೇಂದ್ರ ಸರ್ಕಾರದ ಸೇವೆಯಲ್ಲಿರುವ ಐಎಎಸ್‌ ಅಧಿಕಾರಿ ಸಾವನ್ನಪ್ಪಿದ್ರೆ ಯಾವ ತನಿಖೆ ಕೇಳ್ತೀರಿ ಅನ್ನೋ ಪ್ರಶ್ನೆಗಳು ಉದ್ಭವಿಸಿವೆ. ಮುಂದೆ ಯಾವತ್ತೋ ಆಗೋ ಸಾವಿನ ಬಗ್ಗೆ ನಾವ್ಯಾಕೆ ಈಗಲೇ ಉತ್ತರಿಸೋಣ? ಈಗ ರಾಜ್ಯದಲ್ಲಿ ಸಂಭವಿಸಿರುವ ಸಾವಿನ ಹಿನ್ನೆಲೆಯಲ್ಲಿ ಮಾತಾಡೋಣ. ಈಗ ಆಗ್ರಹ ಇರೋದು ಈಗಿನ ಸಾವಿನ ಬಗ್ಗೆ. ಮುಂದೆ ಅಂತದ್ದು ಸಂಭವಿಸದೆ ಇರಲಿ ಅನ್ನೋದು ಸಹೃದಯರ ಆಶಯ.

ರವಿ ಸಾವಿನ ಬಗ್ಗೆ ಇಡೀ ರಾಜ್ಯದ ಜನ ಒಕ್ಕೊರಲಿನಿಂದ ಸಿಬಿಐ ತನಿಖೆಗೆ ಆಗ್ರಹಿಸುತ್ತಿದ್ದಾರೆ ಅಂದ್ರೆ ರಾಜ್ಯ ಸರ್ಕಾರದ ಕಡೆಯಿಂದ ಸಿಗುವ ಉತ್ತರ, ಇದೆಲ್ಲಾ ಜನಾಭಿಪ್ರಾಯವಲ್ಲ. ಜನಾಭಿಪ್ರಾಯ ಏನಿದ್ದರೂ ಚುನಾವಣೆಯಲ್ಲಿ ಮಾತ್ರ. ಮೂರು ನಾಲ್ಕು ಜಿಲ್ಲೆಗಳನ್ನು ಬಿಟ್ಟರೆ ಉಳಿದ ಕಡೆಗಳಲ್ಲಿ ಇಷ್ಟು ತೀವ್ರವಾಗಿ ಸಿಬಿಐ ತನಿಖೆಗೆ ಆಗ್ರಹ ಕೇಳಿಬರುತ್ತಿಲ್ಲ ಅಂತ. ಇದೇ ಜನ ಚುನಾವಣೆ ಸಂದರ್ಭದಲ್ಲಿ ಅವರ ಪಕ್ಷಗಳ ವಿರುದ್ಧ ವ್ಯಕ್ತವಾಗುವ ಚುನಾವಣಾ ಪೂರ್ವ ಸಮೀಕ್ಷೆಯ ಬಗ್ಗೆಯೂ ಇಂತದ್ದೇ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಆದರೆ ಅಂತಿಮವಾಗಿ ದೆಹಲಿಯಲ್ಲಾದಂತೆ ಖಾತೆ ತೆರೆಯದ ಸ್ಥಿತಿಗೆ ತಲುಪಿದಾಗಲೇ ವಸ್ತುಸ್ಥಿತಿ, ಜನಾಭಿಪ್ರಾಯ ಅಷ್ಟೇ ಅಲ್ಲ ಜನರ ನಾಡಿಮಿಡಿತವೂ ಇವರಿಗೆ ಅರ್ಥವಾಗುತ್ತೆ. ಆದರೆ ಆಗ ಕಾಲ ಮಿಂಚಿ ಹೋಗಿರುತ್ತೆ ಅನ್ನೋದನ್ನು ಅಧಿಕಾರ ಇವರ ಕೈಲಿರುವವರೆಗೆ ಅರ್ಥಮಾಡಿಸುವುದು ಕಷ್ಟ.

ರಾಜ್ಯ ಸರ್ಕಾರಕ್ಕೆ ಸಿಬಿಐಗೆ ಪ್ರಕರಣವನ್ನು ಹಸ್ತಾಂತರಿಸುವುದರಿಂದ ಎದುರಾಗುವ ಮುಜುಗರ ಸನ್ನಿವೇಶಗಳ ಬಗ್ಗೆ ಸ್ಪಷ್ಟ ಚಿತ್ರಣ ಸಿಕ್ಕಂತೆ ಕಾಣುತ್ತಿದೆ. ಅದಕ್ಕಾಗಿಯೇ ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತಿರೋದು ಸ್ಪಷ್ಟ. ಇದಕ್ಕಾಗಿ ರವಿ ವೈಯಕ್ತಿಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಪದೇ ಪದೇ ನಂಬಿಸುವ ಮಾತು ಕೇಳಿಬರುತ್ತಿದೆ. ಒಂದು ವೇಳೆ ವೈಯಕ್ತಿಕ ಕಾರಣಕ್ಕೇ ರವಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಅದೂ ಸಿಬಿಐ ತನಿಖೆಯಿಂದ ಹೊರಬರುತ್ತದಲ್ಲ. ಸರ್ಕಾರಕ್ಕೆ ಅಳುಕೇಕೆ? ಅರ್ಥವಾಗುತ್ತಿಲ್ಲ.





Wednesday, March 11, 2015

ಎಲ್ಲಿರಬೇಕು ಐಐಟಿ...?

ಕೇಂದ್ರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಐಐಟಿ ಘೋಷಣೆಯಾಗಿದೆ. ಇಷ್ಟು ದಿನ ಒಕ್ಕೊರಲಿನಿಂದ ಕರ್ನಾಟಕಕ್ಕೊಂದು ಐಐಟಿ ಬೇಕು ಅನ್ನೋ ಕೂಗು ಕೇಳುತ್ತಿತ್ತು. ಆದ್ರೀಗ ರಾಜ್ಯದ ನಾನಾ ಭಾಗಗಳಿಂದ ನಾನಾ ರೀತಿಯ ಒತ್ತಾಯಗಳು ಕೇಳಿಬರುತ್ತಿವೆ. ನಮ್ಮೂರಲ್ಲಿ ಐಐಟಿ ಬೇಕು ಅಂತ ರಾಜಕಾರಣಿಗಳು ಆಯಾ ಜಿಲ್ಲೆಗಳ ಪರವಾಗಿ ಬ್ಯಾಟಿಂಗ್‌ ಮಾಡ್ತಿದ್ದಾರೆ. ಐಐಟಿ ಬರೋದ್ರಿಂದ ತಮ್ಮ ಜಿಲ್ಲೆ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಜೊತೆಗೆ ಐಐಟಿ ನೆಪದೊಂದಿಗೆ ಆ ಭಾಗದಲ್ಲಿ ಅಭಿವೃದ್ಧಿಯಾಗುತ್ತದೆ. ಶಿಕ್ಷಣದ ಜೊತೆಜೊತೆಗೇ ಕೈಗಾರಿಕೆ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲೂ ಸ್ವಲ್ಪ ಮಟ್ಟಿನ ಆದ್ಯತೆಗಳು ಸಿಗುತ್ತವೆ. ಅಷ್ಟೇ ಅಲ್ಲದೆ ಅಲ್ಲಿಗೆ ಬಂದು ಸೇರುವ ಸುಮಾರು 5 ಸಾವಿರದಷ್ಟು ವಿದ್ಯಾರ್ಥಿಗಳು, ಉಪನ್ಯಾಸಕರು ಅವರ ಸಂಬಂಧಿಕರು, ಇತರೆ ಸಿಬ್ಬಂದಿ ಹೀಗೆ ಆ ಭಾಗದಲ್ಲಿ ಒಂದಷ್ಟು ವ್ಯಾಪಾರ ವಹಿವಾಟಿನಲ್ಲೂ ಚೇತರಿಕೆ ಕಂಡು ಬರುತ್ತದೆ. ಇದೆಲ್ಲವೂ ಈ ಒತ್ತಾಯ ಹಾಗೂ ಒತ್ತಾಸೆಯ ಹಿಂದೆ ಇದ್ದೇ ಇದೆ. ಖಂಡಿತ ರಾಜಕಾರಣಿಗಳ ಈ ಮಟ್ಟದ ಒತ್ತಡವನ್ನು ಮತ್ತು ಆಯಾ ಜಿಲ್ಲೆಗಳ ಜನರ ಒತ್ತಾಸೆಯನ್ನು ನಾವು ಗೌರವಿಸಬೇಕು.

ಐಐಟಿಯನ್ನು ಯಾವ ಕಾರಣಗಳಿಗಾಗಿ ಯಾವ ಪ್ರದೇಶದಲ್ಲಿ ಸ್ಥಾಪಿಸಬೇಕು ಅನ್ನೋದು ಮುಖ್ಯ. ಅಂದರೆ ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು, ರಾಜ್ಯದಲ್ಲಿ ಶಿಕ್ಷಣದ ಹಬ್‌ ಬೆಳೆಸುವ ದೃಷ್ಟಿಯಿಂದ ಐಐಟಿಯನ್ನು ಯಾವುದೇ ಒಂದು ಪ್ರದೇಶದಲ್ಲಿ ಸ್ಥಾಪಿಸಬೇಕೋ? ಅಥವಾ ಕರ್ನಾಟಕದಲ್ಲಿ ಸ್ಥಾಪನೆಯಾದ ಐಐಟಿ ದೇಶದಲ್ಲೇ ಅತ್ಯುತ್ತಮ ಐಐಟಿಗಳಲ್ಲಿ ಒಂದು ಅನ್ನೋ ರೀತಿಯಲ್ಲಿ ಅದಕ್ಕೆ ಗೌರವ ಸಿಗುವಂತೆ ನೋಡಿಕೊಳ್ಳಬೇಕೋ ಅನ್ನೋದು ಮುಖ್ಯವಾಗುತ್ತದೆ.

ಈಗಾಗ್ಲೇ ಕೆಲ ಜಿಲ್ಲೆಗಳಲ್ಲಿ ಐಐಟಿಗಾಗಿ ಇರುವ ಬೇಡಿಕೆಯ ಜೊತೆಗೆ ಐಐಟಿ ಕ್ಯಾಂಪಸ್‌ಗಾಗಿ ಐನೂರರಿಂದ ಸಾವಿರ ಎಕರೆವರೆಗೆ ಜಮೀನು ಕೂಡ ಮೀಸಲಿರುವ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಕ್ಯಾಂಪಸ್‌ಗೆ ವಿಶಾಲವಾದ ಜಾಗ, ವಿಶಿಷ್ಟ ಶೈಲಿಯ ವಾಸ್ತುಶಿಲ್ಪದ ಮೂಲಕ ಕಟ್ಟಿದ ಕಟ್ಟಡಗಳು, ಎಲ್ಲ ರೀತಿಯ ಅತ್ಯಾಧುನಿಕ ಮೂಲ ಸೌಕರ್ಯ ಇವುಗಳೆಲ್ಲ ಇದ್ದ ಮಾತ್ರಕ್ಕೆ ಐಐಟಿಗೆ ವರ್ಲ್ಡ್‌ ಕ್ಲಾಸ್‌ ಅಥವಾ ದೇಶದ ಶ್ರೇಷ್ಟ ಗುಣಮಟ್ಟದ ಸಂಸ್ಥೆ ಅನ್ನೋ ಶ್ರೇಯಸ್ಸು ಲಭಿಸೋದಿಲ್ಲ. ಅದು ಸಿಗುವಂತದ್ದು ಆ ಐಐಟಿಯಲ್ಲಿ ಇರುವ ಫ್ಯಾಕಲ್ಟಿಯನ್ನು ಅವಲಂಭಿಸಿದೆ. ಜಗತ್ತಿನ ಅತ್ಯುತ್ತಮ ಸಾಲಿನಲ್ಲಿ ನಿಲ್ಲುವ ಉಪನ್ಯಾಸಕರು, ಆಯಾ ಕ್ಷೇತ್ರದ ಜಾಗತಿಕ ಮಟ್ಟದ ತಜ್ಞರು ಆಗಾಗ್ಗೆ ಐಐಟಿ ಕೇಂದ್ರಕ್ಕೆ ಭೇಟಿ ಕೊಟ್ಟು ವಿಶೇಷ ಉಪನ್ಯಾಸಗಳನ್ನು ನೀಡಲು ಇರುವ ಅವಕಾಶ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯವಾಗಿ ಇರುವ ಕೈಗಾರಿಕೆ ಹಾಗೂ ಸಂಶೋಧನಾ ಕೇಂದ್ರಗಳಲ್ಲಿ ಸಂವಾದ ನಡೆಸಲು ಹಾಗೂ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ಐಐಟಿ ಕೇಂದ್ರದಲ್ಲಿರುವ ವಿದ್ಯಾರ್ಥಿಗಳಿಗೆ ಅವಕಾಶ ಲಭಿಸಬೇಕು. ಹಾಗಿದ್ದಾಗ ಮಾತ್ರ ಒಂದು ಐಐಟಿ ಕೇಂದ್ರ ಅತ್ಯಂತ ಶೀಘ್ರ ಗತಿಯಲ್ಲಿ ಬೆಳವಣಿಗೆಯಾಗಲು ಸಹಕಾರಿ. ಇಲ್ಲದೆ ಹೋದಲ್ಲಿ ಸರ್ಕಾರಗಳು ಎಷ್ಟೇ ದುಡ್ಡು ಸುರಿದ್ರೂ ಐಐಟಿ ತನ್ನ ಗುಣಮಟ್ಟದ ವಿಚಾರದಲ್ಲಿ ಕುಂಠುತ್ತಾ ಸಾಗಬೇಕಾಗುತ್ತದೆ.

ಸಾಮಾನ್ಯವಾಗಿ ಜಿಲ್ಲಾ ಕೇಂದ್ರಗಳಿಗೆ ಐಐಟಿ ಬರಬೇಕು ಅನ್ನುವ ಬೇಡಿಕೆಯನ್ನು ಮುಂದಿಡುವ ಅನೇಕರು ಖರಗ್‌ಪುರ್‌ ಹಾಗೂ ಕಾನ್ಪುರ ಐಐಟಿ ಸ್ಥಾಪನೆಯಾದಾಗ ಅಲ್ಲೇನಿತ್ತು ಅನ್ನುವ ಪ್ರಶ್ನೆ ಮುಂದಿಡುತ್ತಾರೆ. ಆದರೆ ಅವೆರಡು ಸಂಸ್ಥೆಗಳು ಇಡೀ ದೇಶಕ್ಕೆ ಮೊದಲಿನ ಎರಡು ಐಐಟಿ ಕೇಂದ್ರಗಳು. ಹೀಗಾಗಿ ಇಡೀ ದೇಶದ ಗಮನ ಅದರ ಕಡೆಗೆ ಕೇಂದ್ರೀಕೃತವಾಗಿತ್ತು. ದೇಶದ ಅತ್ಯುತ್ತಮ ಉಪನ್ಯಾಸಕರು ಅಲ್ಲಿ ಹೋಗಿ ನೆಲೆಸಲು ಸಾಧ್ಯವಾಗಿತ್ತು. ಆದ್ರೆ ಇವತ್ತು ಉಪನ್ಯಾಸಕರಿಗೆ ಸಾಕಷ್ಟು ಆಯ್ಕೆಗಳಿವೆ. ಹೀಗಾಗಿ ಆಯ್ಕೆಯ ವಿಚಾರಕ್ಕೆ ಬಂದಾಗ ತಮ್ಮ ಅನುಕೂಲಗಳಿಗೆ ಯಾವುದು ಸರಿಹೊಂದುತ್ತೋ ಆ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪತಿ ಪತ್ನಿಗೆ ಅಲ್ಲೇ ಸಮೀಪದಲ್ಲಿ ಸಿಗುವ ಉದ್ಯೋಗ ಅವಕಾಶ, ಮಕ್ಕಳ ಶಿಕ್ಷಣಕ್ಕೆ ಅತ್ತುತ್ತಮ ಶಾಲಾ-ಕಾಲೇಜು ಇರುವ ಪ್ರದೇಶ ಹಾಗೆಯೇ ಇತರೆ ಚಟುವಟಿಕೆಗಳಿಗೆ ಸಿಗುವ ಅವಕಾಶಗಳು ಹೀಗೆ ಉಪನ್ಯಾಸಕನೊಬ್ಬ ತನ್ನ ಎಲ್ಲ ಅವಶ್ಯಕತೆಗಳಲ್ಲಿ ಬಹುತೇಕ ಎಲ್ಲವನ್ನೂ ಯಾವ ಪ್ರದೇಶದಲ್ಲಿ ಪೂರೈಸಲು ಸಾಧ್ಯವಾಗುತ್ತೋ ಅಂತಹ ಕೇಂದ್ರದಲ್ಲಿ ಕೆಲಸ ಮಾಡಲು ನಿಶ್ಚಯಿಸುತ್ತಾನೆ. ಹಾಗೆಯೇ ದೇಶ ವಿದೇಶಗಳಿಂದ ಬಂದು ಹೋಗುವ ತಜ್ಞರು ಕೂಡ ತಮ್ಮ ಓಡಾಟಕ್ಕೆ ಇರುವ ಅನುಕೂಲವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ.

ಉದಾಹರಣೆಗೆ 2008ರ ನಂತರ ವಿವಿಧ ರಾಜ್ಯಗಳಲ್ಲಿ ಸ್ಥಾಪನೆಯಾಗಿರುವ ಐಐಟಿಗಳ ಪೈಕಿ ಗುವಾಹಟಿ, ಗಾಂಧಿನಗರ, ಭುವನೇಶ್ವರ, ಪಾಟ್ನಾ , ಹೈದ್ರಾಬಾದ್‌ ಹೀಗೆ ರಾಜಧಾನಿ ನಗರಗಳಲ್ಲಿ ಸ್ಥಾಪಿಸಿರುವ ಐಐಟಿಗಳು ಶೀಘ್ರವಾಗಿ ಪ್ರಗತಿಹೊಂದುತ್ತಿವೆ. ಆದ್ರೆ ಇಂಧೋರ್‌, ಮಂಡಿ, ರೊಪಾರ್‌ ಹೀಗೆ ಜಿಲ್ಲಾ ಕೇಂದ್ರಗಳಲ್ಲಿ ಆರಂಭಿಸಿರುವ ಐಐಟಿಗಳು ಕುಂಟುತ್ತಾ ಸಾಗಿವೆ.

ಐಐಟಿ ಕೇಂದ್ರದ ಸ್ಥಾಪನೆಯ ವಿಚಾರದಲ್ಲಿ ಯಾವುದೇ ಲಾಬಿಗಳಿಗೆ ಸರ್ಕಾರ ಮಣಿಯಬಾರದು. ರಾಜಕೀಯ ನಾಯಕರು ತಮ್ಮ ಜಿಲ್ಲೆಗಳಿಗೆ ಐಐಟಿ ಬೇಕೆಂದು ಎಷ್ಟೇ ಒತ್ತಡ ಹೇರಿದ್ರೂ ಕೇಂದ್ರ ಸ್ಥಾಪನೆ ಸಂಪೂರ್ಣವಾಗಿ ಅಕಾಡೆಮಿಕ್‌ ವಿಚಾರ ಆಗಿರೋದ್ರಿಂದ ಸಂಬಂಧಿತ ಕ್ಷೇತ್ರದ ತಜ್ಞರಿಗೇ ಎಲ್ಲಿ ಐಐಟಿ ಸ್ಥಾಪಿಸಬೇಕು ಅನ್ನೋದರ ಬಗ್ಗೆ ಪೂರ್ಣ ಅಧಿಕಾರ ನೀಡಬೇಕು. ಅವರಿಗೆ ಬೇಕಾದ ಹಿನ್ನೆಲೆಯ ಬೆಂಬಲವನ್ನು ಮಾತ್ರ ಸರ್ಕಾರ ನೀಡಬೇಕು. ಆಗ ಮಾತ್ರ ಕರ್ನಾಟಕದ ಐಐಟಿ ಐದರಿಂದ ಹತ್ತು ವರ್ಷಗಳ ಅವಧಿಯೊಳಗೆ ದೇಶಕ್ಕೇ ಅತ್ಯುತ್ತಮ ಐಐಟಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಬಹುದು. ಈಗಾಗ್ಲೇ ಕರ್ನಾಟಕದಲ್ಲಿರುವ ಐಐಎಂಬಿ, ಐಐಎಸ್‌ಸಿ, ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿ ದೇಶದ ಅತ್ಯುತ್ತಮ ಸಂಸ್ಥೆಗಳ ಸಾಲಿನಲ್ಲಿ ನಿಂತಿವೆ.

ಇದೇ ಹಾದಿಯಲ್ಲಿ ಐಐಟಿಯೂ ಸಾಗುವಂತಾಗಬೇಕು.


Thursday, March 5, 2015

ಇಂಡಿಯಾಸ್‌ ಡಾಟರ್‌ : ಮಾರುಕಟ್ಟೆಯ ಕೂಸು !

ಇಂಡಿಯಾಸ್‌ ಡಾಟರ್...!

ಜಾಗತಿಕ ಮಾರುಕಟ್ಟೆಯಲ್ಲಿ ಡಾಕ್ಯುಮೆಂಟರಿ ಬಿಕರಿಗೆ ಆರಿಸಿಕೊಂಡಿರುವ ಪಕ್ಕಾ ಮಾರ್ಕೆಟಿಂಗ್‌ ಸ್ಟ್ರಾಟಜಿಯ ಹೆಸರಿದು. ಅದೇ ರೀತಿ ಡಾಕ್ಯುಮೆಂಟರಿಯ ಸುತ್ತ ಎದ್ದಿರುವ ಕಾಂಟ್ರವರ್ಸಿ ಕೂಡ ಇದಕ್ಕೆ ದೊಡ್ಡ ಮಟ್ಟದ ಪಬ್ಲಿಸಿಟಿ ಕೊಟ್ಟಿದೆ. ಅದರ ಮೇಲೆ ಹೇರಿದ ನಿಷೇಧ ಡಾಕ್ಯುಮೆಂಟರಿಯನ್ನು ಮತ್ತಷ್ಟು ಅತಿರಂಜಕಗೊಳಿಸಿದೆ. ಹೆಚ್ಚಿನ ಆಕರ್ಷಣೆಗೆ ಕಾರಣವಾಗಿದೆ.
ಇನ್ನು ಅತ್ಯಾಚಾರಿ ಮನಸ್ಥಿತಿಯ ಬಗ್ಗೆ ಅರಿತುಕೊಳ್ಳುವ ಪ್ರಯತ್ನ ಇದು ಅಂತೆಲ್ಲಾ ಸಾಕ್ಷ್ಯಚಿತ್ರದ ನಿರ್ಮಾಪಕಿ ಲೆಸ್ಲಿ ಉಡ್ವಿನ್‌ ಹೇಳಿಕೊಂಡಿದ್ದಾರೆ. ಅಲ್ಲಿಗೆ ಇದೊಂದು ಎಜುಕೇಟಿವ್‌ ಸಂದೇಶ ಕೊಡುವ ಪ್ರಯತ್ನ. ಆದರೆ ಈ ಡಾಕ್ಯುಮೆಂಟರಿಯಲ್ಲಿ ಎಜುಕೇಟಿವ್ ಆಗೋ ಸಂಗತಿ ಏನಿದೆ? ಅತ್ಯಾಚಾರಿ ಹೇಳಿರುವ ಮಾತುಗಳು ಎಜುಕೇಟಿವ್‌ ಆಗಿದೆಯೇ? ಡಿಫೆನ್ಸ್‌ ಲಾಯರ್‌ ಹೇಳಿರುವ ಮಾತುಗಳು ಎಜುಕೇಟಿವ್‌ ಆಗಿವೆಯೇ? ಅಂದರೆ ಇದರ ಮೂಲಕ ಯಾರಿಗಾದರೂ ಜಾಗೃತಿ ಮೂಡಿ ಹೆಣ್ಣಮಕ್ಕಳು ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವೇ? ಈ ಮಾತುಗಳನ್ನು ಮುಂದಿಟ್ಟು ನೋಡಿದರೆ ಮತ್ತೆ ಹೆಣ್ಣು ಕೇವಲ ಅಡಿಗೆ ಮನೆಯ ಕೆಲಸದಾಳಾಗಬೇಕು ಅಷ್ಟೆ. ರಾತ್ರಿ 9ರ ನಂತರ ಗೆಳೆಯನ ಜೊತೆ ಅಥವಾ ಹುಡುಗನ ಜೊತೆ ಒಂದು ಹುಡುಗಿ ಕಂಡರೆ ಆಕೆ ಅತ್ಯಾಚಾರಕ್ಕೆ ಅರ್ಹಳು. ಅವಳು ಅತ್ಯಾಚಾರಕ್ಕೆ ಒಳಗಾದಾಗ ಪ್ರತಿಭಟಿಸಿದರೆ ಕೊಲೆಗೆ ಅರ್ಹಳು ಅನ್ನೋ ರೀತಿಯ ಸಮಜಾಯಿಷಿಯನ್ನು ಅತ್ಯಾಚಾರಿ ನೀಡುತ್ತಾನೆ. ಅಂದರೆ ಇಲ್ಲಿ ಯಾವುದು ಎಜುಕೇಟಿವ್‌ ಅಂಶ ಇದೆ. ಯಾರು ಇದರಿಂದ ಯಾವ ಅಂಶವನ್ನು ಕಲಿತುಕೊಳ್ಳಬೇಕು? ಅತ್ಯಾಚಾರಿಗಿಂತಲೂ ಹಾರಿಬಲ್‌ ಆಗಿರೋದು ಡಿಫೆನ್ಸ್‌ ಲಾಯರ್‌ ಹೇಳಿಕೆಗಳು. ಹೆಣ್ಣೆಂದರೆ ಅಮೂಲ್ಯ ರತ್ನ. ಅಮೂಲ್ಯ ವಜ್ರ ಅಂತೆಲ್ಲಾ ಹೇಳುವ ಆತ ಇದೇ ವಜ್ರವನ್ನು ಬೀದಿಯಲ್ಲಿಟ್ಟರೆ ನಾಯಿಗಳು ತಿನ್ನುತ್ತವೆ ಅಂತಾರೆ. ಇದನ್ನು ಜೋಪಾನವಾಗಿ ಇಟ್ಟುಕೊಳ್ಳೋದು ಮನೆಯವರ ಕರ್ತವ್ಯ. ಹೆಣ್ಣಿಗೆ ನಮ್ಮ ಸಂಸ್ಕೃತಿಯಲ್ಲಿ ಯಾವುದೇ ರೀತಿಯ ಸ್ಥಾನಮಾನವಿಲ್ಲ ಅನ್ನೋ ರೀತಿಯ ಅಭಿಪ್ರಾಯಕ್ಕೆ ಬರುತ್ತಾರೆ. ಅಷ್ಟೇ ಅಲ್ಲ. ಒಂದು ವೇಳೆ ತನ್ನ ಮಗಳೇ ಒಂದು ವೇಳೆ ವಿವಾಹ ಪೂರ್ವ ಸಂಬಂಧಗಳನ್ನು ಹೊಂದಿದ್ದರೆ ಆಕೆಯನ್ನು ಫಾರ್ಮ್‌ ಹೌಸ್‌ನಲ್ಲಿ ಮನೆಯವರ ಸಮ್ಮುಖ ಪೆಟ್ರೋಲ್‌ ಸುರಿದು ಬೆಂಕಿಹಚ್ಚೋದಾಗಿ ಹೇಳುತ್ತಾನೆ. ಅಲ್ಲಿಗೆ 'ಇಂಡಿಯಾಸ್‌ ಡಾಟರ್‌' ಪರಿಸ್ಥಿತಿ ಹೇಗಿರಬೇಡ?

ಭಾರತದಲ್ಲಿ ನಿರ್ಭಯಾ ಅತ್ಯಾಚಾರಕ್ಕೀಡದ ಮೊದಲ ಹೆಣ್ಣು ಮಗಳಲ್ಲ. ಅಥವಾ ಅದೇ ಕೊನೆಯೂ ಅಲ್ಲ. ಆದರೆ ನಿರ್ಭಯಾ ಅತ್ಯಾಚಾರ ಭಾರತದ ಅಂತಃಕರಣವನ್ನು ಕಲಕಿತ್ತು. ದೆಹಲಿಯಲ್ಲಿ ವಿದ್ಯಾರ್ಥಿ ಸಮುದಾಯ ಒಂದು ಗೂಡಿ ಹೋರಾಟ ರೂಪಿಸಿತ್ತು. ಪೊಲೀಸರ ಲಾಟಿಗೆ, ಬೂಟಿಗೆ, ಅಶ್ರುವಾಯು ಸಿಡಿತಕ್ಕೆ, ಗಾಳಿ ಗುಂಡಿನ ಮೊರೆತಕ್ಕೆ ಸವಾಲೊಡ್ಡಿ ನಿಂತಿದ್ದು ವಿದ್ಯಾರ್ಥಿಗಳು. ಬದಲಾವಣೆ ಬಯಸಿದ್ದ ಮನಸ್ಸುಗಳು. ಅತ್ಯಾಚಾರಿಗಳ ಅಟ್ಟಹಾಸಕ್ಕೆ ಅಂತ್ಯ ಹಾಡಬೇಕು ಅನ್ನೋ ತಾರ್ಕಿಕ ಹೋರಾಟ ರೂಪಿಸಿದವರು ಯಾರೂ ದೊಡ್ಡ ಹೆಸರಿನ ವ್ಯಕ್ತಿಗಳಲ್ಲ. ಭಾರತದ ಸಾಮಾನ್ಯ ಜನ. ಆದರೆ ನಿರ್ಭಯಾಗಳನ್ನು ತಮ್ಮ ಮಗಳೆಂಬ ರೀತಿಯಲ್ಲಿ ಇವರು ಕಂಡಿದ್ದರು ಅನ್ನೋ ಅರ್ಥದಲ್ಲಿ ಡಾಕ್ಯುಮೆಂಟರಿ ರೂಪುಗೊಂಡಿದ್ದರೆ ಈ ಹೆಸರಿಲ್ಲದ ಜನರ ಹೋರಾಟ ಡಾಕ್ಯುಮೆಂಟರಿಯ ಪ್ರಮುಖ ವಸ್ತುವಾಗಬೇಕಿತ್ತು. ಅದು ಬಿಟ್ಟು ಆ ಜನರ ಹೋರಾಟ ಒಂದೆರಡು ಸೌಂಡ್‌ ಬೈಟ್‌ಗಳು ಹಾಗೂ ಸಾಕ್ಷ್ಯಚಿತ್ರದ ನಡುವಿನ ಫ್ಲೋ ಗೆ ಮಾತ್ರ ಸೀಮಿತಗೊಳ್ಳುತ್ತಿರಲಿಲ್ಲ.

ನಿರ್ಭಯಾಳ ಅಪ್ಪ ಅಮ್ಮನ ಮಾತುಗಳು. ಆಕೆಯ ಗೆಳೆಯನ ಮಾತು. ಇದೆಲ್ಲವೂ ನಿರ್ಭಯಾಳ ಗಟ್ಟಿತನವನ್ನು ಪ್ರತಿಬಿಂಬಿಸಿದೆ ನಿಜ. ಆದರೆ ಅತ್ಯಾಚಾರಿಯೊಬ್ಬನ ಪತ್ನಿ ಹೇಳುವ ಮಾತುಗಳ ಪ್ರಕಾರ, ದೇಶದಲ್ಲಿ ಅನೇಕರು ಅತ್ಯಾಚಾರ ಮಾಡಿದ್ದರೂ ಅವರೆಲ್ಲರಿಗೆ ಆಗದಂತಹ ಗಲ್ಲುಶಿಕ್ಷೆಯನ್ನು ತನ್ನ ಪತಿಗೆ ವಿಧಿಸಿದ್ದೇಕೆಾ? ಅವರಿಲ್ಲದಿದ್ದರೆ ನನ್ನ ಮಗುವನ್ನು ನೋಡಿಕೊಳ್ಳೋರು ಯಾರು? ಒಂದು ಹೆಣ್ಣಾಗಿ ನಾನು ಈ ಸಮಾಜದಲ್ಲಿ ಬದುಕೋದು ಹೇಗೆ? ಅಂತ ಪ್ರಶ್ನಿಸುತ್ತಾಳೆ. ಇದನ್ನು ಅಮಾಯಕಿ ಹೆಣ್ಣೊಬ್ಬಳ ಮಾತುಗಳಿವು ಅಂತ ಇದನ್ನು ಅಲಕ್ಷಿಸಬೇಕೆ? ಅಪರಾಧಿಗಳ ಸಂಬಂಧಿಕರಿಗೆ ಅತ್ಯಾಚಾರದ ಬಗ್ಗೆ ಒಂದಿಷ್ಟೂ ಮರುಕವಿಲ್ಲ ಅಂತ ಹೇಳಬೇಕೆ? ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಅತ್ಯಾಚಾರಿಗಳ ಸಂಬಂಧಿಕರ ಮಾತುಗಳಿಂದಾಗಿ ಅತ್ಯಾಚಾರಿಗಳ ಬಗ್ಗೆ ಕನಿಕರ ಹುಟ್ಟುವಂತೆ ಮಾಡಿಬಿಡುತ್ತದೆ. ಇದರ ಎದುರು ನಿರ್ಭಯಾಳ ಅಪ್ಪ ಅಮ್ಮ ಹೇಳುವ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅನ್ನೋ ಮಾತುಗಳ ಹಿಂದಿರುವ ನ್ಯಾಯಕ್ಕಾಗಿನ ಹೋರಾಟ ಗೌಣವಾಗಿಬಿಡುತ್ತದೆ.

ಸಾಕ್ಷ್ಯಚಿತ್ರವೊಂದಕ್ಕೆ ಇರುವ ಇತಿಮಿತಿಗಳು ಏನೇ ಇರಬಹುದು. ಆದರೆ ಈ ಸಾಕ್ಷ್ಯಚಿತ್ರದಲ್ಲಿ ಅತ್ಯಾಚಾರಕ್ಕೆ ಪ್ರಮುಖ ಕಾರಣ ಅತ್ಯಾಚಾರಿಗಳ ಬಡತನ ಹಾಗೂ ದೆಹಲಿಯ ಕಣ್ಣುಕುಕ್ಕುವ ಶ್ರೀಮಂತಿಕೆಯಾಗಿ ತೋರುತ್ತದೆ. ಹಣದ ಮೂಲಕ ಧಕ್ಕದೆ ಇರೋದನ್ನು ಧೈರ್ಯದ ಮೂಲಕ ಧಕ್ಕಿಸಿಕೊಳ್ಳುತ್ತಾರೆ ಅನ್ನೋ ವಾದ ಪ್ರಮುಖವಾಗಿ ಕಾಣುತ್ತದೆ.

ಸಾಮಾಜಿಕ ಕಳಕಳಿಯ ಹೆಸರಿನ ಮೇಲೆ ಮಾರುಕಟ್ಟೆಯಲ್ಲಿ ಹಣಗಳಿಸುವ ಉದ್ದೇಶದ ಹೊರತಾಗಿ ಬೇರೇನೂ ಕಾಣುತ್ತಿಲ್ಲ. ನಿಷೇಧದ ಬಗ್ಗೆ  ಲೆಸ್ಲಿ ಹೇಳಿದ್ದು, " ಭಾರತದಲ್ಲಿ ನಿಷೇಧ ಹೇರಿದ್ದರಿಂದ ಜಾಗತಿಕ ಮಟ್ಟದಲ್ಲಿ ಭಾರತ ಐಸೋಲೇಟ್ ಆಗುತ್ತದೆ". ಆದ್ರೆ ಅದು ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರ. ಪ್ರಪಂಚದ ಇನ್ಯಾವುದೇ ಮೂಲೆಯಲ್ಲಿ ನಡೆದ ಅತ್ಯಾಚಾರದ ಬಗ್ಗೆ ಡಾಕ್ಯುಮಂಟರಿ ಮಾಡಿ ಅದಕ್ಕೆ ಆ ದೇಶದ ಡಾಟರ್‌ ಹೆಸರು ಕೊಟ್ಟಿದ್ದರೂ ಅಲ್ಲಿಯ ಅತ್ಯಾಚಾರಿಯ ಬಾಯಿಂದ ಇದಕ್ಕಿಂತ ಭಿನ್ನ ಮಾತುಗಳು ಹೊರಬೀಳುತ್ತಿರಲಿಲ್ಲ ! ಹಾಗೆಯೇ ನಿಷೇಧದ ಮೂಲಕ ಯಾವುದನ್ನೂ ತಡೆಯಲು ಸಾಧ್ಯವಿಲ್ಲ.