Wednesday, October 26, 2011

ದೀಪಾವಳಿಯ ಮೆಲುಕುಗಳು...

ದೀಪಾವಳಿ.
ತಕ್ಷಣ ನೆನಪಾಗೋದು ಕತ್ತಲು. ಜೊತೆಗೆ ಮನೆಯ ಜಗಲಿ, ತುಳಸಿ ಕಟ್ಟೆಯ ತುಂಬ ಬೆಳಗುತ್ತಿದ್ದ ಹಣತೆ. ಬಹುಷಃ ಮನುಷ್ಯ ಬೆಳೀತಾ ಬೆಳೀತಾ ದೀಪಾವಳಿಯ ಸಂಭ್ರಮ ಕಡಿಮೆಯಾಗುತ್ತದೆಯೋ ಏನೋ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬ ಅಂದ್ರೆ ಅದು ದೀಪಾವಳಿ ಮಾತ್ರ ಅನ್ಸುತ್ತೆ. ಹಬ್ಬಕ್ಕೆ ಬರುತ್ತೇನೆ ಅಂದ್ರೆ ದೀಪಾವಳಿಗೆ ಬರುತ್ತೇನೆ ಅಂತಾನೇ ಅರ್ಥ. ಕರ್ನಾಟಕದ ಉಳಿದ ಭಾಗಗಳಲ್ಲಿ ಹಬ್ಬಗಳ ಆಚರಣೆ ಜಾಸ್ತಿ ಇದೆ. ನಾಗರಪಂಚಮಿಯಿಂದ ಆರಂಭವಾಗಿ ಒಂದಾದಮೇಲೊಂದು ಹಬ್ಬ ಬರುತ್ತಾನೆ ಇರುತ್ತೆ. ಆದ್ರೆ ದ.ಕ ಜಿಲ್ಲೆಯಲ್ಲಿ ದೀಪಾವಳಿ ಬಿಟ್ರೆ ಬಿಸು. ನಡುವೆ ಕೆಡ್ಡಾಸ. ಆದ್ರೆ ಸಂಭ್ರಮ, ಹಬ್ಬದ ಕಳೆ ಎಲ್ಲಾ ಇರೋದು ದೀಪಾವಳಿಗೆ ಮಾತ್ರ.
ಚಿಕ್ಕವರಿದ್ದಾಗ ದೀಪಾವಳಿ ಬಂತಂದ್ರೆ ನಮಗೆಲ್ಲಾ ನಾಲ್ಕು ಕಾಲಾಗ್ತಿತ್ತು ಅನ್ಸುತ್ತೆ. ಯಾಕಂದ್ರೆ ಹಬ್ಬದ ದಿನ ಹತ್ರ ಬರುತ್ತಿದ್ದಂತೆ ದೀಪಾವಳಿಗೆ ತಯಾರಿ ಜೋರಾಗಿರುತ್ತಿತ್ತು. ಅದ್ರಲ್ಲೂ ಎರಡು ಬಲಿಯೇಂದ್ರ ಮರ ( ಅಂದ್ರೆ ಮರದ ಕಂದು, ತುಂಡು) ನೆಟ್ಟು ಅದಕ್ಕೆ ಶೃಂಗಾರ ಮಾಡೋದು ಸುಳ್ಯ ತಾಲೂಕಿನ ದೀಪಾವಳಿ ಆಚರಣೆಯ ಪ್ರಮುಖ ಭಾಗ. ಒಂದು ಗಂಡು ಮರ ಅಂದ್ರೆ ಸ್ಪಲ್ಪ ದಪ್ಪ ಮತ್ತು ಎತ್ತರದ್ದು, ಇನ್ನೊಂದು ಹೆಣ್ಣು - ಸ್ಪಲ್ಪ ತೆಳ್ಳಗೆ ಮತ್ತು ತಗ್ಗಿನ ಮರವನ್ನು ಮನೆಯ ಮುಂಭಾಗದಲ್ಲಿ ಗಟ್ಟಿಯಾಗಿ ನೆಡುತ್ತಿದ್ದೆವು. ಅದು ನರಕ ಚತುರ್ದಶಿ ದಿವಸ. ಆದ್ರೆ ಮರೆ ನಡೋದಿಕ್ಕೂ ಮೊದಲು ಮರದ ಶೃಂಗಾರಕ್ಕೆ ಬೇರೆ ಬೇರೆ ಮಾಲೆ ಮಾಡ್ತಿದ್ದೆವು. ಹಂದಿ ಬಳ್ಳಿಕಾಯಿ, ಕೇನೆ ಕಾಯಿ, ಪಾದೆ ಹೂ, ಚೆಂಡು ಹೂ, ಬೇರೆ ಬೇರೆ ಹೂಗಳ ಮಾಲೆ, ಇದೆಲ್ಲಾ ಕಾಂಪಿಟೀಷನ್ ಮೇಲೆ ಕಟ್ಟುತ್ತಿದ್ದೆವು. ಬಲಿಯೇಂದ್ರ ಮರ ನೆಡುತ್ತಿದ್ದಂತೆ ಈ ಹೂ - ಕಾಯಿಗಳ ಮಾಲೆಯಿಂದ ಅದಕ್ಕೆ ಅಲಂಕಾರ ಮಾಡ್ತಿದ್ದೆವು. ಆ ಸಂಭ್ರಮವನ್ನು ಇಲ್ಲಿ ಅಕ್ಷರ ರೂಪದಲ್ಲಿ ಹೇಳೋದು ಕಷ್ಟ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿತ್ತು ಆಗಿನ ಆನಂದ.

ಇನ್ನು ದೀಪಾವಳಿ ಸಂದರ್ಭದಲ್ಲೇ ದೈವಗಳಿಗೆ( ಭೂತಗಳಿಗೆ) ತಂಬಿಲ. ದೈವಗಳಿಗೆ ಕೋಳಿ ಬಲಿ ಕೊಡುತ್ತಿದ್ದುದು. ಆಗ ನಡೀತಿದ್ದ ಚರ್ಚೆ. ಕೋಳಿ ಕೊರಳನ್ನು ಸ್ವಲ್ಪ ಜಾಸ್ತಿ ಎಳೆದು ಪೂಜಾರಿ ಕೊಯ್ಯುತ್ತಾರೆ ಅನ್ನೋದಕ್ಕೆ ಬರೀ ತಲೆ ಮಾತ್ರ ಸಿಗುವಂತೆ ಹಿಡ್ಕೊಳ್ಳುತ್ತಿದ್ದ ನಮ್ಮವರು. ಇದೆಲ್ಲಾ ಹಾಸ್ಯ, ವಿನೋದಕ್ಕೆ ಕಾರಣವಾಗ್ತಿತ್ತು. ಆದ್ರೆ ನಮ್ಮದು ದೊಡ್ಡ ಕುಟುಂಬ ( ಫ್ಯಾಮಿಲಿ) ಆಗಿದ್ದ ಕಾರಣ ಹೆಚ್ಚಾಗಿ ದೀಪಾವಳಿ ಸಂದರ್ಭದಲ್ಲೇ ಸೂತಕ ಬಂದು ಹಬ್ಬಕ್ಕೆ ಬ್ರೇಕ್ ಕೊಡುತ್ತಿದ್ದುದೂ ಉಂಟು.
ಬಲಿ ಪಾಡ್ಯಮಿ ದಿನ ಬಲಿಯೇಂದ್ರನನ್ನು ಕರೆಯುವ ವಿಧಾನ ಕೂಡ ಅಷ್ಟೇ ಆಕರ್ಷಕ. ಆಗ ಬಲಿ ಚಕ್ರವರ್ತಿಯ ವೈಭವವನ್ನು ವರ್ಣಿಸುವ ಪದಗಳನ್ನು ಅಪ್ಪ ಹೇಳುತ್ತಿದ್ದರು. ಆದ್ರೆ ಈಗ ಅವ್ರು ಹೇಳುತ್ತಿದ್ದ ಪದ ಮರೆತುಹೋಗಿದೆ. ಹೀಗೆ ಬಲಿಯೇಂದ್ರನ್ನು ಆಲುವ ಅಂದರೆ ಕರೆಯುವಾಗ ಚಕ್ರವರ್ತಿ ಬಲಿ ಪಾತಾಳದಿಂದ ಬಂದು ಬೆಳಕಿನ ರೂಪದಲ್ಲಿ ತನ್ನ ಸಾಮ್ರಾಜ್ಯವನ್ನು ವೀಕ್ಷಿಸುತ್ತಾನೆ ಅನ್ನೋದು ನಂಬಿಕೆ.
ದೀಪಾವಳಿ ಹಬ್ಬಾಂತ ಹೇಳಿದ ಮೇಲೆ ಪಟಾಕಿ ಇರಲೇ ಬೇಕು. ನಾನಿನ್ನೂ ಪ್ರೈಮರಿ ಸ್ಕೂಲಲ್ಲಿ ಓದುತ್ತಿದ್ದಾಗ ಅನ್ಸುತ್ತೆ. ಅಪ್ಪ ಪಟಾಕಿಯ ಕಟ್ಟನ್ನು ಓಪನ್ ಮಾಡೋದೇ ನಮಗೊಂದು ಕುತೂಹಲ. ಅಪ್ಪ ನಿಧಾನಕ್ಕೆ ಪಟಾಕಿಯ ಕಟ್ಟುಗಳನ್ನು ಓಪನ್ ಮಾಡ್ತಿದ್ರು. ಅದ್ರಲ್ಲಿ ಬೀಡಿ, ಪಟಾಕಿ, ಓಲೆ ಪಟಾಕಿ, ಲಕ್ಷ್ಮಿ ಪಟಾಕಿ, ಸುರು ಸುರು ಕಡ್ಡಿ, ಮಾಲೆ ಪಟಾಕಿ, ನೆಲ ಚಕ್ರ, ದುರುಸು ಬಾಣ ( ಹೂ ಕುಂಡ), ಹೀಗೆ ಬೇರೆ ಬೇರೆ ಪಟಾಕಿಗಳಿರುತ್ತಿದ್ದವು. ಇನ್ನು ಅದೊಂದು ಮಾತ್ರೆಯ ರೀತಿಯ ಪಟಾರಿ ಇರುತ್ತಿತ್ತು. ಅದನ್ನು ಉರಿಸಿದ್ರೆ ಉದ್ದಕ್ಕೆ ಹಾವು ತರ ಬೆಳೀತಿತ್ತು. ಇದನ್ನೆಲ್ಲಾ ಸುಡೋದ್ರಲ್ಲಿ ಅದೇನೋ ಮಜಾ. ನೆಲ ಚಕ್ರ ಬಿಟ್ಟರಂತೂ ಅದನ್ನು ಫುಟ್ಬಾಲ್ ತರ ಅಂಗಳದ ತುಂಬಾ ಓಡಿಸುತ್ತಿದ್ದೆವು. ಅಬ್ಬಬ್ಬಾ ಈಗ ಅದನ್ನೆಲ್ಲಾ ನೆನೆಸ್ಕೊಂಡ್ರೆ ಮೈ ಜುಮ್ಮೆನ್ನಿಸುತ್ತೆ. ಮನಸ್ಸು ಮಗುವಾಗುತ್ತದೆ. ರಾತ್ರಿಯ ಅಂಗಳದಲ್ಲಿ ಓಡಾಡಿ ಪಟಾಕಿ ಹಚ್ಚಿ ಸಂಭ್ರಮಿಸಬೇಕು ಅನ್ನಿಸುತ್ತಿದೆ. ಪಟಾಕಿ ಸುಡೋದ್ರಿಂದ ಮಾಲಿನ್ಯ ಹೆಚ್ಚಾಗುತ್ತೆ ಅಂತ ಗೊತ್ತಿದ್ರೂ ಪಟಾಕಿಯ ಜೊತೆಗಿನ ಬಾಲ್ಯದ ನಂಟು ಢಂ ಅನ್ನಿಸಬೇಕು ಅಂತ ಪ್ರೇರೇಪಿಸುತ್ತದೆ.

ಹೀಗೆ ಒಂದೆಡೆ ಪಟಾಕಿ ಸುಡುತ್ತಿದ್ದರೆ ಅಪ್ಪ - ಅಣ್ಣ ಕರೀತಿದ್ರು. ಹೋಗಿ ದನಗಳಿಗೆ ಹಬ್ಬ ಕೊಟ್ಟು ಬನ್ನಿ ಅಂತ. ಪಟಾಕಿ ಹೊಡೆಯುವ ಖುಷಿಯ ನಡುವೆ ಇದೊಂದು ಬ್ರೇಕ್. ಆಗ ಹಟ್ಟಿಗೆ ಹೋಗಿ ಎತ್ತು ಹಸುಗಳ ಕಾಲುಗಳನ್ನು ತೊಳೆದು, ಅವುಗಳ ಹಣೆಗೆ ಕುಂಕುಮ ಹಚ್ಚಿ ಪಾದೆ ಹೂವಿನ ಮಾಲೆಯನ್ನು ಅವುಗಳ ಕೊರಳಿಗೆ ಕಟ್ಟುತ್ತಿದ್ದೆವು. ನಂತ್ರ " ವರ್ಷಕ್ಕೊಂದು ಹಬ್ಬ ಬೆಳಕು ನೋಡು ಬೆಳಕು ನೋಡು" ಅಂತ ಹೇಳ್ತಾ ಮೊರದಲ್ಲಿ ಇಟ್ಟಿದ್ದ ದೀಪದ ಬೆಳಕು ತೋರಿಸಿ ಅವಕ್ಕೆ ತವುಡು, ಬಾಳೆ ಹಣ್ಣು, ದೋಸೆ ಮೀಕ್ಸ್ ಮಾಡಿದ ತಿನಿಸನ್ನು ತಿನ್ನಿಸುತ್ತಿದ್ದೆವು. ಎಷ್ಟೋ ಸಲ ಈ ಕೆಲಸ ಪಟಾಕಿಯ ಸಂಭ್ರಮದ ನಡುವೆ ಅರ್ಜೆಂಟ್ ಅರ್ಜೆಂಟಾಗಿ ನಡೆದುಹೋಗುತ್ತಿತ್ತು.

ಇಷ್ಟೆಲ್ಲಾ ಆಗೋವಾಗ ರಾತ್ರಿ ದೋಸೆ, ಅಪ್ಪದಿಟ್ಟು, ಇಡ್ಲಿ ಮಾಡಿರುತ್ತಿದ್ರು. ಅವ್ವ, ಅಕ್ಕಂದಿರಿಗೆ ಹಬ್ಬ ಅಂದ್ರೆ ಬಹುಪಾಲು ಅಡಿಗೆ ಮನೆಯಲ್ಲೇ ಕಳೆದುಹೋಗುತ್ತಿತ್ತು. ತಿಂಡಿ ರೆಡಿ ಮಾಡೋದ್ರಲ್ಲೇ ಅವ್ರು ಬ್ಯುಸಿ ಆಗಿರುತ್ತಿದ್ರು. ಆದ್ರೆ ಅಷ್ಟೊತ್ತಿಗೆ ನಮಗೆ ಪಟಾಕಿಯ ಸಂಭ್ರಮ ಎಲ್ಲಾ ಮುಗಿದು ಕಣ್ಣು ನಿದ್ದೆಯತ್ತ ಜಾರುತ್ತಿತ್ತು. ಮತ್ತೆ ತೂಕಡಿಸುತ್ತಾ ದೋಸೆಯೋ, ಇಡ್ಲಿಯೋ ತಿಂದು ನಿದ್ರೆಗೆ ಜಾರುತ್ತಿದ್ದೆ.

ಹೀಗೆ ದೀಪಾವಳಿ ಹಬ್ಬ ನೆನೆಸ್ಕೊಂಡ್ರೆ ಬಾಲ್ಯ ಕೂಡ ನೆನಪಾಗುತ್ತೆ. ಆದ್ರೆ ಏನ್ ಮಾಡೋದು ಕೆಲಸಕ್ಕೆ ಸೇರಿದ್ಮೇಲೆ ದೀಪಾವಳಿಗೆ ಊರಿಗೆ ಹೋಗೋದೆ ಕಷ್ಟ ಆಗ್ಬಿಟ್ಟಿದೆ. ಕಳೆದ ನಾಲ್ಕು ವರ್ಷಗಳಿಂದ ಊರಲ್ಲಿ ಆಚರಿಸುವ ದೀಪಾವಳಿಯ ಸಂಭ್ರಮದಲ್ಲಿ ಮನೆ ಮಂದಿ ಜೊತೆ ಸೇರೋದಿಕ್ಕೆ ಸಾಧ್ಯವಾಗಿಲ್ಲ.
ಆದ್ರೂ ಬೆಂಗಳೂರಿನ ಸಿಟೀಲಿ ಕುಳಿತು ಯೋಚಿಸುವಾಗೆಲ್ಲಾ ಮನಸ್ಸು ನನ್ನೂರು ಅಡ್ಪಂಗಾಯದ ಮನೆ ಮತ್ತು ಅಂಗಳದ ತುಂಬ ಓಡಾಡುತ್ತೆ. ನೆನಪುಗಳ ಸುರುಳಿಯಲ್ಲಿ.

Tuesday, October 4, 2011

ಧ್ವನಿ ಇಲ್ಲದವರು...

ಮಾತು ಮಾತು ಮಾತು ಮಾತು
ದಿನಬೆಳಗಾದರೆ ಮಾತೇ ಮಾತು
ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ
ಎಲ್ಲೆಡೆಯಿಂದಲೂ ಮಾತೇ ಮಾತು

ಸುದ್ದಿಯ ಮೇಲೆ ಸುದ್ದಿಯ ಅದ್ದಿ
ನಾಳೆಗೆ ರದ್ದಿ ಆದರೂ ಸುದ್ದಿ
ಮುಗಿಯುವುದಿಲ್ಲ, ಮುಗಿಸುವುದಿಲ್ಲ
ಸುದ್ದಿ ಸುದ್ದಿ ಸುದ್ದಿ ಸುದ್ದಿ

ರಾಜಕಾರಣಿಯ ಹಗರಣದಿಂದ
ರಾಜಕೀಯದ ಕೆಸರೆರೆಚಾಟಗಳಿಂದ
ಎದ್ದರು, ಬಿದ್ದರು, ಕೂತರು, ನಿಂತರು
ಮುಗಿಯುವದಿಲ್ಲ ಸುದ್ದಿಯ ಗುದ್ದು

ಸಾಪ್ಪ್ ವೇರಿಗನ ದುರಂತ ಸಾವು
ಟೆಕ್ಕಿಗೆ ಬಂದ ಮನಸಿನ ನೋವು
ಬಿಟಿಯವರ ಖಿನ್ನತೆ ಕಾವು

ಬಾರ್ ಗರ್ಲ್ ಗಳ ಥಕಥೈ ಕುಣಿತ
ಕಾಲ್ ಗರ್ಲ್ ಗಳ ಸಾವಿನ ಸರಸ
ರೌಡಿಗಳ ಗ್ಯಾಂಗ್ ವಾರ್ ಗಳ ಸುತ್ತ
ಹರಿದಿದೆ ನೋಡಿ ಸುದ್ದಿಯ ಕೋಡಿ

ಮನೆಯಲಿ ತೊಂದರೆ ನೂರೊಂದಿದ್ದರು
ಬಿಡುವಿಲ್ಲದೆಯೇ ದುಡಿಯುತಲಿದ್ದರು
ಖಿನ್ನತೆಯಾಳದಿ ಮುಳುಗೇಳುತಿದ್ದರು
ಹೇಳಲಾಗದೆ ಕೊರಗುವರಿವರು

ಜಗತ್ತಿನ ಸಮಸ್ಯೆಗೆ ಧ್ವನಿಯಾದವರು!