Friday, November 16, 2012

Not ; Note ಆಗಿದ್ದು..

ಇದೊಂದು ತುಂಬ ಇಂಟ್ರೆಸ್ಟಿಂಗ್ ಸ್ಟೋರಿ. ನಮ್ಮ ಬ್ಯುರೋಕ್ರಸಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತೆ ಅನ್ನೋದಿಕ್ಕೆ ಒಳ್ಳೆಯ ಸಾಕ್ಷಿ. ಅಂದಾಗ ರಾಜ್ಯ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿರುವ ನೈಜ ಘಟನೆಯಿದು.

ಸರ್ಕಾರಿ ಅಧಿಕಾರಿಗಳು ವಿದೇಶ ಯಾನಕ್ಕೆ ಬಯಸೋದು ಸಾಮಾನ್ಯ. ಯಾವುದಾದರು ಅವಕಾಶ ಸಿಕ್ಕಾಗ ವಿಮಾನ ಹತ್ತೋದಿಕ್ಕೆ ಕನಸು ಕಾಣುವ ಅಧಿಕಾರಿಗಳ ಸಂಖ್ಯೆಯೇ ಹೆಚ್ಚು. ಆದ್ರೆ ಹೀಗೆ ವಿದೇಶ ಯಾತ್ರೆ ಮಾಡಬೇಕಾದ್ರೆ ಅವರ ಮೇಲಾಧಿಕಾರಿಯ ಅನುಮತಿ ಬೇಕಾಗುತ್ತದೆ. ಅನುಮತಿ ಇದ್ರೆ ಮಾತ್ರ ಪ್ರವಾಸಕ್ಕೆ ಅವಕಾಶ ಸಿಗುತ್ತದೆ.

ಅದೊಮ್ಮೆ ಒಬ್ಬ ಸರ್ಕಾರಿ ಅಧಿಕಾರಿಗೆ ಕಾರ್ಯ ನಿಮಿತ್ತ ವಿದೇಶ ಪ್ರವಾಸದ ಅವಕಾಶ ಸಿಗುತ್ತದೆ. ಪ್ರವಾಸ ಹೊರಡಲು ಸಜ್ಜಾಗುತ್ತಿದ್ದ ಅಧಿಕಾರಿ ಇದಕ್ಕಾಗಿ ತಮ್ಮ ಮೇಲಾಧಿಕಾರಿ ( ಇಲಾಖೆಯ ಪ್ರಧಾನ ಕಾರ್ಯದರ್ಶಿ)ಯವ್ರ ಅನುಮತಿ ಕೇಳ್ತಾರೆ. ಇದಕ್ಕಾಗಿ ತಾವು ಹೋಗಬೇಕಿರುವ ಪ್ರವಾಸದ ಉದ್ದೇಶದ ಟಿಪ್ಪಣಿಯನ್ನು ಕಳಿಸಿಕೊಟ್ಟಿರುತ್ತಾರೆ. ಪ್ರವಾಸದ ಫೈಲ್ ಅನ್ನು ಪರಿಶೀಲಿಸಿದ ಮೇಲಾಧಿಕಾರಿಯವ್ರು ಅದ್ರ ಮೇಲೆ ತಮ್ಮದೊಂದು ಷರಾ ಬರೀತಾರೆ. ಅದು ಹೀಗಿತ್ತು :
Not allowed

ಆದ್ರೆ ಯಾವ ಕಾರಣಕ್ಕಾಗಿ ಪ್ರವಾಸಕ್ಕೆ ಅನುಮತಿ ಸಿಗಲಿಲ್ಲ ಅನ್ನೋದು ಕೆಳಗಿನ ಅಧಿಕಾರಿಗೆ ಗೊತ್ತಿರೋದಿಲ್ಲ. ಅವ್ರು ಈ ಬಗ್ಗೆ ಕೆಲವರನ್ನು ವಿಚಾರಸ್ತಾರೆ. ಹಾಗಿದ್ರೂ ನಿಖರ ಕಾರಣ ಸಿಗೋದಿಲ್ಲ. ಕೊನೆಗೆ ಮೇಲಾಧಿಕಾರಿಯವ್ರನ್ನೇ ಕೇಳೋ ಪ್ರಯತ್ನ ಮಾಡ್ತಾರೆ. ಆಗ, ' ನೀವ್ ಪ್ರವಾಸಕ್ಕೆ ಹೋದ್ರೆ ನಮ್ಗೇನ್ರೀ ಪ್ರಯೋಜನ' ಅನ್ನೋ ರೀತಿಯ ಉತ್ತರ ಮೇಲಾಧಿಕಾರಿಯಿಂದ ಬರುತ್ತದೆ. ತಕ್ಷಣ ಅನುಮತಿ ನಿರಾಕರಣೆಯ ಗುಟ್ಟು ಗೊತ್ತಾದ ಕೆಳ ಅಧಿಕಾರಿ ತಮ್ಮಿಂದ ಕೊಡಬಹುದಾದ ಕಾಣಿಕೆಯನ್ನು ಮೇಲಾಧಿಕಾರಿಗೆ ಸಮರ್ಪಿಸುತ್ತಾರೆ. ತಕ್ಷಣ ಅದೇ ಟಿಪ್ಪಣಿಯ ಮೇಲೆ ಅಧಿಕಾರಿಯ ಷರಾ ಜಸ್ಟ್ ಚೇಂಜ್ ಆಗುತ್ತೆ :
Note : Allowed

ಸರ್ಕಾರಿ ಫೈಲ್ ಗಳಲ್ಲಿ ಏನೇನು ಮಹಿಮೆಗಳು ನಡೀಬಹುದು ಅನ್ನೋದಕ್ಕೆ ಇದೊಂದು ಸ್ಯಾಂಪಲ್ ಅಷ್ಟೆ ಅಂತ ಮಾತು ಮುಗಿಸಿದ್ರು ಈ ವಿಚಾರ ಹಂಚಿಕೊಂಡು ಉನ್ನತ ಅಧಿಕಾರಿ !