Friday, November 16, 2012

Not ; Note ಆಗಿದ್ದು..

ಇದೊಂದು ತುಂಬ ಇಂಟ್ರೆಸ್ಟಿಂಗ್ ಸ್ಟೋರಿ. ನಮ್ಮ ಬ್ಯುರೋಕ್ರಸಿ ಯಾವ ರೀತಿಯಲ್ಲಿ ಕೆಲಸ ಮಾಡುತ್ತೆ ಅನ್ನೋದಿಕ್ಕೆ ಒಳ್ಳೆಯ ಸಾಕ್ಷಿ. ಅಂದಾಗ ರಾಜ್ಯ ಸರ್ಕಾರದಲ್ಲಿ ಉನ್ನತ ಹುದ್ದೆಯಲ್ಲಿರುವ ಹಿರಿಯ ಅಧಿಕಾರಿಯೊಬ್ಬರು ಹೇಳಿರುವ ನೈಜ ಘಟನೆಯಿದು.

ಸರ್ಕಾರಿ ಅಧಿಕಾರಿಗಳು ವಿದೇಶ ಯಾನಕ್ಕೆ ಬಯಸೋದು ಸಾಮಾನ್ಯ. ಯಾವುದಾದರು ಅವಕಾಶ ಸಿಕ್ಕಾಗ ವಿಮಾನ ಹತ್ತೋದಿಕ್ಕೆ ಕನಸು ಕಾಣುವ ಅಧಿಕಾರಿಗಳ ಸಂಖ್ಯೆಯೇ ಹೆಚ್ಚು. ಆದ್ರೆ ಹೀಗೆ ವಿದೇಶ ಯಾತ್ರೆ ಮಾಡಬೇಕಾದ್ರೆ ಅವರ ಮೇಲಾಧಿಕಾರಿಯ ಅನುಮತಿ ಬೇಕಾಗುತ್ತದೆ. ಅನುಮತಿ ಇದ್ರೆ ಮಾತ್ರ ಪ್ರವಾಸಕ್ಕೆ ಅವಕಾಶ ಸಿಗುತ್ತದೆ.

ಅದೊಮ್ಮೆ ಒಬ್ಬ ಸರ್ಕಾರಿ ಅಧಿಕಾರಿಗೆ ಕಾರ್ಯ ನಿಮಿತ್ತ ವಿದೇಶ ಪ್ರವಾಸದ ಅವಕಾಶ ಸಿಗುತ್ತದೆ. ಪ್ರವಾಸ ಹೊರಡಲು ಸಜ್ಜಾಗುತ್ತಿದ್ದ ಅಧಿಕಾರಿ ಇದಕ್ಕಾಗಿ ತಮ್ಮ ಮೇಲಾಧಿಕಾರಿ ( ಇಲಾಖೆಯ ಪ್ರಧಾನ ಕಾರ್ಯದರ್ಶಿ)ಯವ್ರ ಅನುಮತಿ ಕೇಳ್ತಾರೆ. ಇದಕ್ಕಾಗಿ ತಾವು ಹೋಗಬೇಕಿರುವ ಪ್ರವಾಸದ ಉದ್ದೇಶದ ಟಿಪ್ಪಣಿಯನ್ನು ಕಳಿಸಿಕೊಟ್ಟಿರುತ್ತಾರೆ. ಪ್ರವಾಸದ ಫೈಲ್ ಅನ್ನು ಪರಿಶೀಲಿಸಿದ ಮೇಲಾಧಿಕಾರಿಯವ್ರು ಅದ್ರ ಮೇಲೆ ತಮ್ಮದೊಂದು ಷರಾ ಬರೀತಾರೆ. ಅದು ಹೀಗಿತ್ತು :
Not allowed

ಆದ್ರೆ ಯಾವ ಕಾರಣಕ್ಕಾಗಿ ಪ್ರವಾಸಕ್ಕೆ ಅನುಮತಿ ಸಿಗಲಿಲ್ಲ ಅನ್ನೋದು ಕೆಳಗಿನ ಅಧಿಕಾರಿಗೆ ಗೊತ್ತಿರೋದಿಲ್ಲ. ಅವ್ರು ಈ ಬಗ್ಗೆ ಕೆಲವರನ್ನು ವಿಚಾರಸ್ತಾರೆ. ಹಾಗಿದ್ರೂ ನಿಖರ ಕಾರಣ ಸಿಗೋದಿಲ್ಲ. ಕೊನೆಗೆ ಮೇಲಾಧಿಕಾರಿಯವ್ರನ್ನೇ ಕೇಳೋ ಪ್ರಯತ್ನ ಮಾಡ್ತಾರೆ. ಆಗ, ' ನೀವ್ ಪ್ರವಾಸಕ್ಕೆ ಹೋದ್ರೆ ನಮ್ಗೇನ್ರೀ ಪ್ರಯೋಜನ' ಅನ್ನೋ ರೀತಿಯ ಉತ್ತರ ಮೇಲಾಧಿಕಾರಿಯಿಂದ ಬರುತ್ತದೆ. ತಕ್ಷಣ ಅನುಮತಿ ನಿರಾಕರಣೆಯ ಗುಟ್ಟು ಗೊತ್ತಾದ ಕೆಳ ಅಧಿಕಾರಿ ತಮ್ಮಿಂದ ಕೊಡಬಹುದಾದ ಕಾಣಿಕೆಯನ್ನು ಮೇಲಾಧಿಕಾರಿಗೆ ಸಮರ್ಪಿಸುತ್ತಾರೆ. ತಕ್ಷಣ ಅದೇ ಟಿಪ್ಪಣಿಯ ಮೇಲೆ ಅಧಿಕಾರಿಯ ಷರಾ ಜಸ್ಟ್ ಚೇಂಜ್ ಆಗುತ್ತೆ :
Note : Allowed

ಸರ್ಕಾರಿ ಫೈಲ್ ಗಳಲ್ಲಿ ಏನೇನು ಮಹಿಮೆಗಳು ನಡೀಬಹುದು ಅನ್ನೋದಕ್ಕೆ ಇದೊಂದು ಸ್ಯಾಂಪಲ್ ಅಷ್ಟೆ ಅಂತ ಮಾತು ಮುಗಿಸಿದ್ರು ಈ ವಿಚಾರ ಹಂಚಿಕೊಂಡು ಉನ್ನತ ಅಧಿಕಾರಿ !

Thursday, August 30, 2012

ಮಾತು

ನಾಲಗೆ ಸಡಿಲಾಗಿ
ಮಾತು ಹಗುರಾದಾಗ
ಗಳಿಸಿದ್ದೆಲ್ಲಾ ಮಣ್ಣುಪಾಲು !

Friday, August 24, 2012

ದೂರ ಸರಿದವರು...

ಶಾಂತಿನಗರದ ರಸ್ತೆಗಳಲ್ಲಿ ನಿತ್ಯ ಕಾಣುತ್ತಿದ್ದ ಆ ಮುಖಗಳು ಕಾಣಿಸುತ್ತಿಲ್ಲ. ಬೆಳಗ್ಗೆ 6ರಿಂದ ರಾತ್ರಿ 11 ಗಂಟೆಯ ನಡುವೆ ಇಲ್ಲಿನ ಗಲ್ಲಿಗಳಲ್ಲಿ ನಡೀತಿದ್ರೆ  ಆ ಮುಖಗಳು ಕಾಣಿಸುತ್ತಿದ್ದು ಕಾಮನ್. ಆದ್ರೆ ಈಗ ಹಾಗಿಲ್ಲ.
ಈಶಾನ್ಯ ಭಾರತದ ಅದೆಷ್ಟೋ ಸಾವಿರ ವಿದ್ಯಾರ್ಥಿಗಳು, ಉದ್ಯೋಗಿಗಳು ಬೆಂಗಳೂರಿನಿಂದ ವಾಪಸ್ ತಮ್ಮೂರುಗಳಿಗೆ ಗುಳೇ ಹೋಗಿದ್ದಾರೆ. ಹೀಗಾಗಿ ಸದಾ ಈಶಾನ್ಯ ಭಾರತದ ಯಾವುದೋ ನಗರದ ಬೀದಿಗಳಂತೆ ಕಂಡುಬರುತ್ತಿದ್ದ ಬೆಂಗಳೂರಿನ ಶಾಂತಿನಗರದ ಗಲ್ಲಿಗಳು ಈಗ ತಮ್ಮ ಕಳೆ ಕಳೆದುಕೊಂಡಿವೆ. ಪುಟ್ಟ ಕಣ್ಣುಗಳ ಹುಡುಗ ಹುಡುಗಿಯರಿಂದ ತುಂಬಿರುತ್ತಿದ್ದ 'ಲಿಟಲ್ ಟಿಬೇಟ್ ಕಿಚನ್' ಹೋಟೆಲ್ಲಿನಲ್ಲಿ ಒಲೆ ಹಚ್ಚದೆ ವಾರ ಕಳೀತಾ ಬಂದಿದೆ. ಹೋಟೆಲ್ಲಿನ ಕ್ಲೋಸ್ ಆಗಿರುವ ಶೆಟರ್ ತಮ್ಮವರ ಬರುವಿಕೆಗಾಗಿ ಕಾಯುತ್ತಿದೆ. ಸದಾ ಗುಂಪುಗುಂಪಾಗಿ ಹರಟುತ್ತಾ, ನಗುತ್ತಾ, ಪುಟಪುಟನೆ ಓಡಾಡುತ್ತಿದ್ದವ್ರು ಕಾಣಿಸುತ್ತಿಲ್ಲ.
ವಾರಕ್ಕೆ ಮೊದಲು ಇಲ್ಲಿನ ಗಲ್ಲಿಗಳಲ್ಲಿ ಈಶಾನ್ಯ ರಾಜ್ಯಗಳ ಜನರು ಹೆಚ್ಚಾಗಿ ಓಡಾಡುತ್ತಿದ್ದರು. ರಾತ್ರಿ ಹನ್ನೊಂದು ಗಂಟೆಯಾದ್ರೂ ಹುಡುಗ ಹುಡುಗಿಯರು ಆರಾಮಾಗಿ ರಸ್ತೆಯಲ್ಲಿ ನಿಂತ್ಕೊಂಡು ಹರಟುತ್ತಿದ್ದರು. ಈಗ ಅಲ್ಲೊಬ್ಬ ಇಲ್ಲೊಬ್ಬರಂತೆ ಎಷ್ಟೊ ಗಂಟೆಗಳಿಗೆ ಒಬ್ಬರು ಓಡಾಡುತ್ತಾರೆ. ಹಾಗೆ ಓಡಾಡುವವರ ಮುಖದಲ್ಲೂ ಅದೇನೋ ಆತಂಕದ ಗೆರೆ ಸುಳಿದಾಡುತ್ತಿರುತ್ತದೆ. ರಾತ್ರಿ ಕವಿದ ಮೇಲಂತೂ ಹುಡುಕಿದ್ರೂ ಕಾಣಸಿಗಲ್ಲ.
ಬೆಂಗಳೂರಿನಲ್ಲಿ ವಾರದ ಹಿಂದೆದ್ದ ವದಂತಿಗಳು ಇಲ್ಲಿದ್ದ ಈಶಾನ್ಯದ ಜನರನ್ನು ಗುಳೆ ಹೋಗುವಂತೆ ಮಾಡಿತ್ತು. ಹಾಗಿದ್ರೂ ಸದ್ಯ ಇದು ಸ್ವಲ್ಪ ತಣ್ಣಗಾಗಿದೆ. ವದಂತಿಗಳಿಗೆ ಹೆದರಿ ತಮ್ಮೂರಿಗೆ ಹೋದವ್ರು ವಾಪಸ್ ಬೆಂಗಳೂರಿನತ್ತ ಮುಖ ಮಾಡುತ್ತಿದ್ದಾರೆ. ಹಾಗಿದ್ರೂ ಇಷ್ಟು ದಿನ ಉದ್ಯಾನ ನಗರಿಯಲ್ಲಿ ನೆಮ್ಮದಿಯಾಗಿ ವಾಸಿಸುತ್ತಿದ್ದ ಈಶಾನ್ಯ ಭಾರತೀಯರಿಗೆ ಮುಖ್ಯ ವಾಹಿನಿಯಲ್ಲಿ ಬೆರೆಯಲಾಗದೆ ' ದೂರ ಸರಿ..' ಅಂತ ಹೇಳಿಸಿಕೊಂಡಿದ್ದಾಗಿದೆ. ಸರ್ಕಾರ, ಮಾಧ್ಯಮಗಳ ನಿರಂತರ ಮನವಿ ನಂತ್ರ ಗುಳೆ ಹೋದವರು ಮರಳಿ ಬರಬಹುದು.
ಹಾಗಿದ್ರೂ ದೂರ ಸರಿದವರು ಮತ್ತೆ ಒಗ್ಗೂಡಲು ಮತ್ತಷ್ಟು ಸಮಯ ಬೇಕಾಗಬಹುದು !

Friday, February 10, 2012

ಬ್ರೇಕಿಂಗ್ ನ್ಯೂಸ್ ಮತ್ತು ರಾಜೀನಾಮೆ

ರಾಜ್ಯ ರಾಜಕೀಯದ ಇತ್ತೀಚಿನ ಅತಿದೊಡ್ಡ ಬ್ರೇಕಿಂಗ್ ನ್ಯೂಸ್ ಇಬ್ಬರು ಸಚಿವರು ಸದನದಲ್ಲಿ ಕುಳಿತುಕೊಂಡೇ ಸೆಕ್ಸ್ ವೀಡಿಯೋ ವೀಕ್ಷಿಸಿದ್ದು. ಈ ಬ್ರೇಕಿಂಗ್ ನ್ಯೂಸ್ ಮೂವರು ಸಚಿವರನ್ನು ಬಲಿತೆಗೆದುಕೊಂಡಿತು. ಅಷ್ಟು ವೇಗವಾಗಿ ಮೂವರು ಸಚಿವರ ರಾಜೀನಾಮೆಯನ್ನು ಏಕಕಾಲದಲ್ಲಿ ಕೊಟ್ಟಿದ್ದು ಇದೇ ಮೊದಲು ಅನ್ಸುತ್ತೆ.
ಈ ಬ್ರೇಕಿಂಗ್ ನ್ಯೂಸ್ ನಿಜಕ್ಕೂ ರಾಜ್ಯ ರಾಜಕೀಯದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲ ಸೃಷ್ಟಿಸಿತು. ರಾಜಕಾರಣಿಗಳ ನೈತಿಕತೆಯನ್ನು ಪ್ರಶ್ನಿಸಿತು. ವಿಧಾನಸೌಧದ, ವಿಧಾನಮಂಡಲದ ಘನತೆಯನ್ನು ಅರಿತುಕೊಳ್ಳದವರು ಅಲ್ಲಿ ಕುಳಿತು ರಾಜ್ಯಭಾರ ಮಾಡುತ್ತಿದ್ದಾರೆ ಅನ್ನೋದನ್ನು ತೋರಿಸಿಕೊಟ್ಟಿತು. ಸದನದ ಗೌರವದ ಬಗ್ಗೆ ಕನಿಷ್ಟ ಜ್ಞಾನ ಇರುತ್ತಿದ್ದರೆ ಖಂಡಿತ ಇಂತಹ ಪ್ರಸಂಗ ಉದ್ಭವಿಸುತ್ತಿರಲಿಲ್ಲ. ಜನರ ಕಣ್ಣಿನಲ್ಲಿ ದೇಗುಲವಾಗಿ ಕಾಣುವ ವಿಧಾನಸಭೆ, ಶಾಸಕರ ಕಣ್ಣಲ್ಲಿ ಅದ್ಯಾವ ರೀತಿ ಕಾಣುತ್ತಿದೆ ಅನ್ನೋದಕ್ಕೆ ಇದೊಂದು ಸಣ್ಣ ಎಕ್ಸಾಂಪಲ್ ಅಷ್ಟೆ.
ನಿಜ. ವಿಧಾನಸಭೆಯಲ್ಲಿರುವ ಎಲ್ಲಾ ಶಾಸಕರು ತಪ್ಪು ಮಾಡಿಲ್ಲ. ಮಾಡಿ ಸಿಕ್ಕಿಬಿದ್ದವರು ಮೂವರು ಮಾತ್ರ. ಅದಕ್ಕಾಗಿ ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಅವ್ರನ್ನು ಶಾಸಕ ಸ್ಥಾನದಿಂದ ವಜಾಗೊಳಿಸಬೇಕೆಂಬ ಒತ್ತಾಯದಲ್ಲೂ ಹುರುಳಿದೆ. ಕರ್ನಾಟಕ ವಿಧಾನಸಭೆಯ ಘನತೆಯನ್ನು ಎತ್ತಿಹಿಡಿಯಬೇಕೆಂದರೆ ಇಂತಹ ಕಠಿಣ ನಿರ್ಧಾರ ಅತ್ಯಗತ್ಯ. ಆದ್ರೆ ಒಂದು ವಿಷಯವನ್ನು ನಾವಿಲ್ಲಿ ಮರೀಬಾರದು. ಕಳೆದ ಎರಡು ಮೂರು ವಿಧಾನಮಂಡಲ ಅಧಿವೇಶನ ಸಂದರ್ಭಗಳಲ್ಲಿ ವಿಶೇಷವಾಗಿ ವಿಧಾನಸಭೆಯೊಳಗೆ ಮೊಬೈಲ್ ಬಳಕೆ ನಿರಂತರವಾಗಿ ನಡೆದಿದೆ. ಕೆಲ ಶಾಸಕರು ಕದ್ದುಮುಚ್ಚಿ ಮೊಬೈಲ್ ಗಳಲ್ಲಿ ಮಾತಾಡ್ತಿದ್ದುದು ನಮ್ಮ ಕ್ಯಾಮರಾ ಕಣ್ಣುಗಳಲ್ಲಿ ಸೆರಿಯಾಗಿದ್ದವು. ಟಿವಿ9 ಸೇರಿದಂತೆ ಉಳಿದ ಚಾನೆಲ್ ಗಳೂ ಇದನ್ನು ಟೆಲಿಕಾಸ್ಟ್ ಮಾಡಿದ್ದವು. ಆದ್ರೆ ಶಾಸಕರು ತಮ್ಮ ತಪ್ಪನ್ನು ತಿದ್ದಿಕೊಳ್ಳುವ ಕೆಲಸ ಮಾಡಲೇ ಇಲ್ಲ. ಪ್ರತಿನಿತ್ಯ ಅದನ್ನು ನಾವು ಸೆರೆಹಿಡಿದು ಸುದ್ದಿ ಮಾಡಿದ್ರೂ ಸ್ಪೀಕರ್, ಮುಖ್ಯಮಂತ್ರಿ, ಸಂಸದೀಯ ವ್ಯವಹಾರ ಸಚಿವರು, ಮೂರೂ ಪಕ್ಷಗಳ ಸಚೇತಕರು, ಪ್ರತಿಪಕ್ಷ ನಾಯಕರು, ಸದನದ ನಾಯಕರು, ಯಾರೊಬ್ಬರೂ ಇದ್ರ ಬಗ್ಗೆ ತಲೆಕೆಡಿಸಿಕೊಳ್ಳಲಿಲ್ಲ. ಇದ್ರಿಂದಾಗಿ ಶಾಸಕರ ಮೊಬೈಲ್ ಬಳಕೆ ಎಗ್ಗಿಲ್ಲದೆ ಸಾಗಿತ್ತು.
ಆದ್ರೆ ಸುದ್ದಿ ಮಾಧ್ಯಮದ ಕ್ಯಾಮರಾ ಮನ್ ಗಳಿಗೆ ಶಾಸಕರ ಇಂತಹ ಚಟುವಟಿಕೆಗಳು ಯಾವತ್ತೂ ನಿರ್ಲಕ್ಷಿಸುವ ವಿಚಾರ ಆಗಲೇ ಇಲ್ಲ. ಶಾಸಕರ ಮೊಬೈಲ್ ಬಳಕೆ ಬಗ್ಗೆ ನಿರಂತರ ಕಣ್ಣಿಟ್ಟಿದ್ದರು. ನಮ್ಮ ಟಿವಿ9 ನ ಕ್ಯಾಮರಾಮನ್ ಗಳಾದ ಶ್ರೀನಿವಾಸ್ ಕುಲಕರ್ಣಿ, ಮಂಜುನಾಥ್, ಸಂದೇಶ್, ವಿನೋದ್ ಇವ್ರೆಲ್ಲರೂ ಪ್ರತಿದಿನ ಒಂದಲ್ಲ ಒಂದ್ಸಲ ಆ ಎಂಎಲ್ಎ ಇವತ್ತು ಹೀಗೆ ಮಾಡ್ತಿದ್ರು ಅಂತ ನಮಗೆ ಹೇಳುತ್ತಿರುತ್ತಿದ್ದರು. ಆದ್ರೆ ಫೆ.6ರಂದು ಮಾತ್ರ ಗೆಳೆಯ ಶ್ರೀನಿವಾಸ್ ಕುಲಕರ್ಣಿ ಕ್ಯಾಮರಾದಿಂದ ನಿಜಕ್ಕೂ ಅದ್ಭುತವನ್ನು ತೋರಿಸಿಕೊಟ್ರು. ಶಾಸಕರು ಸದನದೊಳಗೆ ಮಾಡ್ತಿರೋ ಕೆಲಸ ಸರಿಯಲ್ಲ ಅನ್ನೋದನ್ನು ಪ್ರತಿಯೊಬ್ಬರ ಮುಖಕ್ಕೆ ರಾಚುವಂತೆ ಕ್ಯಾಮರಾದಲ್ಲಿ ಸೆರೆ ಹಿಡಿದು ತೋರಿಸಿದ್ರು. ವಿಧಾನಸಭೆಯ ಘನತೆಯನ್ನು ಶಾಸಕರಿಗೆ ನೆನಪಿಸಿಕೊಟ್ರು. ಇದ್ರಿಂದಾಗಿ ಲಕ್ಷ್ಮಣ್ ಸವದಿ, ಸಿಸಿ ಪಾಟೀಲ್ ಮತ್ತು ಕೃಷ್ಣ ಪಾಲೇಮಾರ್ ಕುರ್ಚಿ ಕಳೆದುಕೊಂಡ್ರು.
ಮೊದಲೇ ತಪ್ಪನ್ನು ತಿದ್ದಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದರೆ ಇಷ್ಟೊತ್ತಿಗೆ ಶಾಸಕರು ಸದನಕ್ಕೆ ಮೊಬೈಲ್ ತರೋದಕ್ಕೆ ಬ್ರೇಕ್ ಬಿದ್ದಿರುತ್ತಿತ್ತು. ಆದ್ರೆ ಅಷ್ಟು ಸುಲಭವಾಗಿ ತಪ್ಪು ತಿದ್ದಿಕೊಳ್ಳಲು ಅವ್ರು ರಾಜಕಾರಣಿಗಳು. ತಪ್ಪಿಸಿಕೊಳ್ಳಲು ಸಬೂಬು ಹುಡುಕುತ್ತಾರೆಯೇ ಹೊರತು ತಪ್ಪು ಅರ್ಥವಾಗೋದಿಲ್ಲ.
ಇದೆಲ್ಲದರ ಪರಿಣಾಮ ಈ ಬ್ರೇಕಿಂಗ್ ನ್ಯೂಸ್ ಮತ್ತು ರಾಜೀನಾಮೆ.

Tuesday, January 10, 2012

ಬಂಗಾರಪ್ಪ ಬಗ್ಗೆ ಒಂದಿಷ್ಟು...

ಬಂಗಾರಪ್ಪ!
ಈಗ ಭೌತಿಕವಾಗಿ ಇಲ್ಲ. ಆದ್ರೆ ಅದನ್ನು ಒಪ್ಪಿಕೊಳ್ಳೋದಿಕ್ಕೆ ಈಗಲೂ ಸ್ವಲ್ಪ ಕಷ್ಟವಾಗ್ತಿದೆ. ಯಾಕಂದ್ರೆ ಬಂಗಾರಪ್ಪ ಬದುಕಿದ್ದೇ ಹಾಗೆ. ಆ ಹೆಸರಲ್ಲೊಂದು ಖದರ್ ಇದೆ. ಸ್ವಾಭಿಮಾನ ಇದೆ. ಹಠಮಾರಿತನ ಇದೆ. ಜೊತೆಗೆ ಚಂಚಲತೆಯೂ ಸೇರಿಕೊಂಡಿದೆ.

ಪಕ್ಷದಿಂದ ಪಕ್ಷಕ್ಕೆ ಹಾರಿದ್ರು ಬಂಗಾರಪ್ಪ. ಹೊಸ ಹೊಸ ಪಕ್ಷ ಕಟ್ಟಿದ್ರು. ಕಟ್ಟಿದ ಪಕ್ಷಕ್ಕಾಗಿ ಅವಿರತವಾಗಿ ದುಡಿದ್ರು. ಹೊಸ ಹೊಸ ಅವಕಾಶಗಳನ್ನು ಹುಡುಕುತ್ತಾ ಸಾಗಿದ್ರು. ಅವ್ರು ಅಧಿಕಾರಕ್ಕಾಗಿ ಪಕ್ಷಾಂತರ ಮಾಡ್ತಿದ್ರು ಅನ್ನೋ ಮಾತನ್ನು ಜನ ಹೇಳ್ತಿದ್ರು. ಆದ್ರೆ ನಲ್ವತ್ನಾಲ್ಕು ವರ್ಷಗಳ ರಾಜಕೀಯ ಬದುಕಿನಲ್ಲಿ ಅವ್ರು ಹತ್ತು ವರ್ಷ ಕೂಡ ಸರಿಯಾಗಿ ಅಧಿಕಾರ ಅನುಭವಿಸಲಿಲ್ಲ. ಅವರು ಬಯಸುತ್ತಿದ್ದ ಅಧಿಕಾರ ಅವ್ರಿಗೆ ಸಿಗುತ್ತಲೇ ಇರಲಿಲ್ಲ. ಹಾಗಿದ್ರೂ ಸ್ವಾಭಿಮಾನಿಯಾಗೇ ಕೊನೆವರೆಗೂ ಬಂಗಾರಪ್ಪ ಉಳಿದಿದ್ರು.
ಬಂಗಾರಪ್ಪ ಇಷ್ಟೊಂದು ಸ್ವಾಭಿಮಾನಿಯಾಗಿ ರಾಜಕೀಯ ಮಾಡೋದಿಕ್ಕೆ ಹೇಗೆ ಸಾಧ್ಯವಾಗ್ತಿತ್ತು ಅನ್ನೋ ಕುತೂಹಲ ನನಗಿತ್ತು. ಆದ್ರೆ ಅವ್ರ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ ನೋಡಿದಾಗ ನಿಜಕ್ಕೂ ಬಂಗಾರಪ್ಪ ಅವ್ರ ಸ್ವಾಭಿಮಾನದ ತಿರುಳು ಸ್ವಲ್ಪ ಅರ್ಥವಾಗಿತ್ತು.

ಯಾವುದೇ ವ್ಯಕ್ತಿಯ ಜನಪ್ರಿಯತೆ ಗೊತ್ತಾಗೋದು ಆತ ಸಾವನ್ನಪ್ಪಿದಾಗ ಅನ್ಸುತ್ತೆ. ಬಂಗಾರಪ್ಪ ಅವ್ರ ಬಗ್ಗೆ ಜನರಿಗಿದ್ದ ಅಭಿಮಾನ ಅಂದು ವ್ಯಕ್ತವಾಗಿತ್ತು. ಕುಬಟೂರಿನ ಅವರ ನಿವಾಸದಲ್ಲಿ ಸುತ್ತಮುತ್ತಲ ಹಳ್ಳಿಗಳ ಸಾವಿರಾರು ಜನ ತಂಡೋಪತಂಡವಾಗಿ ಬಂದು ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದಿದ್ದರು. ಹಾಗೆ ಬಂದ ಜನರ ಮನಸ್ಸಿನಲ್ಲಿ ಬಂಗಾರಪ್ಪ ಬಗ್ಗೆ ನೂರಾರು ನೆನಪುಗಳಿದ್ದವು. ಅಲ್ಲಿದ್ದ ಹೆಚ್ಚಿನ ಜನ ಒಂದಲ್ಲ ಒಂದು ರೀತಿಯಲ್ಲಿ ನೇರವಾಗಿ ಬಂಗಾರಪ್ಪ ಅವ್ರಿಂದ ಸಹಾಯ ಪಡೆದವರಿದ್ದರು. ಮನೆ ಮದುವೆ, ಸಾವು - ನೋವು, ಕಷ್ಟ - ಸುಖ ಹೀಗೆ ಇದೆಲ್ಲಕೂ ಸ್ಪಂದಿಸುವ ಗುಣ ಬಂಗಾರಪ್ಪಗೆ ಇತ್ತು ಅನ್ನೋದನ್ನು ಅಲ್ಲಿದ್ದ ಜನ ಒಂದೊಂದು ರೀತಿಯಲ್ಲಿ ಬಣ್ಣಿಸುತ್ತಿದ್ದರು.

ಕುಬಟೂರಿನಿಂದ ಸೊರಬಕ್ಕೆ ಅವ್ರ ಪಾರ್ಥೀವ ಶರೀರವನ್ನು ಕರೆತಂದಾಗ ಜನ ಸಾಗರ ಹರಿದುಬಂದಿತ್ತು. ಸುಮಾರು ೨೫ ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಬರೋ ಪ್ರತಿಯೊಂದು ಹಳ್ಳಿಯಲ್ಲೂ ನೂರಾರು - ಸಾವಿರಾರು ಜನ ಜಮಾಯಿಸಿ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದ್ರು. ಸೊರಬ ಪಟ್ಟಣದಲ್ಲೂ ಅಷ್ಟೇ.. ಹರಿದಬರುತ್ತಿದ್ದ ಜನಸ್ತೋಮ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಬಂಗಾರಪ್ಪ ಅವ್ರ ಪ್ರತಿಯೊಬ್ಬರ ಮನಸ್ಸಿನಲ್ಲೂ ಅಚ್ಚಳಿಯದಂತಹ ನೆನಪುಗಳನ್ನು ಬಿತ್ತಿದ್ದರು. ಅದನ್ನೆಲ್ಲಾ ನೊಡುತ್ತಿದ್ದಾಗ ಇಳಿ ವಯಸ್ಸಿನ ವ್ಯಕ್ತಿಯೊಬ್ಬ ಎತ್ತಿದ ಉದ್ಘಾರ ನೆನಪಾಗುತ್ತೆ. ಆತ ಹೇಳುತ್ತಿದ್ರು.. ' ೪೦ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದೊ.. ಬಂಗಾರದ ಕಿರೀಟ.. ಇವತ್ತು ಅದೂ ಹೊಯ್ತು..' ಇಷ್ಟು ಪ್ರೀತಿ ಯಾರಿಗೆ ಸಿಗುತ್ತೆ ಹೇಳಿ.
ಜನರ ಈ ಪ್ರೀತಿಯೇ ಬಂಗಾರಪ್ಪರ ಅಷ್ಟು ಎತ್ತರಕ್ಕೆ ಬೆಳೆಸಿದ್ದು. ಸ್ವಾಭಿಮಾನಿಯಾಗಿಸಿದ್ದು. ಅವ್ರ ಪಕ್ಷಾಂತರಗಳಿಗೆ ಕಾರಣವಾಗಿದ್ದೂ ಜನರ ಇದೇ ಪ್ರೀತಿಯೇ. ಯಾಕಂದ್ರೆ ಸೊರಬದಲ್ಲಿ ಬಂಗಾರಪ್ಪ ಎಂದೂ ಸೋಲಲೇ ಇಲ್ಲ. ಅವ್ರು ಲೋಕಸಭೆ ಚುನಾವಣೆಗಳಲ್ಲಿ ಸೋತಾಗ್ಲೂ ಸೊರಬದಲ್ಲಿ ಅವ್ರಿಗೆ ಮುನ್ನಡೆ ಸಿಗುತ್ತಿತ್ತು. ಯಾವತ್ತು ಸ್ವಕ್ಷೇತ್ರದ ಜನ ಎಂತ ಪರಿಸ್ಥಿತಿಯಲ್ಲೂ ತಮ್ಮ ಕೈಬಿಡೋದಿಲ್ಲ ಎಂಬ ನಂಬಿಕೆ ಇರುತ್ತೋ ರಾಜಕಾರಣಿಯಾದವರು ಹೆಚ್ಚು ಸ್ವಾಭಿಮಾನಿಯಾಗ್ತಾ ಸಾಗೋದಿಕ್ಕೆ ಸಹಾಯವಾಗುತ್ತೆ. ಈ ಭಾಗ್ಯ ರಾಜ್ಯದಲ್ಲಿ ಹೊಸ ಪಕ್ಷಗಳನ್ನು ಕಟ್ಟಿದ ಬೇರೆ ಯಾವುದೇ ರಾಜಕಾರಣಿಗಳಿಗೂ ಇರಲಿಲ್ಲ. ದೇವೇಗೌಡರನ್ನೂ ಸೇರಿಸಿ. ಅದಕ್ಕೇ ಅವ್ರೆಲ್ಲಾ ಒಂದಕ್ಕಿಂತ ಹೆಚ್ಚು ಪಕ್ಷಗಳನ್ನು ಬದಲಿಸುವ, ಪಕ್ಷ ಕಟ್ಟುವ ಗೋಜಿಗೆ ಕೈಹಾಕಲಿಲ್ಲ.

ಬಂಗಾರಪ್ಪ ತಾವು ಸಿಎಂ ಆಗಿದ್ದಾಗ ಬಡವರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಿದ್ರು. ಅದ್ರಲ್ಲೂ ಅವ್ರು ಆರಂಭಿಸಿದ ಆಶ್ರಯ ಯೋಜನೆ ಇವತ್ತು ಪ್ರತಿಯೊಂದು ರಾಜಕೀಯ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಮುಖ ಸ್ಥಾನವನ್ನು ಪಡ್ಕೊಂಡಿದೆ. ಇನ್ನು ಆರಾಧನಾ ಯೋಜನೆ ಬಂಗಾರಪ್ಪ ಅವ್ರ ಕಳಕಳಿಗೆ ಸಾಕ್ಷಿ. 1973ರ ಅವಧಿಯಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಬಂಗಾರಪ್ಪ ವಿಧಾನಸಭೆಯಲ್ಲಿ ಬಡವರ ದೇವರ ಬಗ್ಗೆ ಭಾಷಣ ಮಾಡಿದ್ದರು. ಬಡವರು ಆರಾಧ್ಯ ದೇವರಗಳ ಗುಡಿಗಳನ್ನು ಉದ್ಧಾರ ಮಾಡುವಲ್ಲಿ ಸರ್ಕಾರ ನಿರ್ಲಕ್ಷ್ಯವಹಿಸುತ್ತಿದೆ ಎಂದು ಆರೋಪಿಸಿದ್ದರು. ಆದ್ರೆ ಅವತ್ತು ತಾವು ಮಾಡಿದ್ದ ಭಾಷಣಕ್ಕೆ ಬಂಗಾರಪ್ಪ ಎಷ್ಟು ಬದ್ಧರಾಗಿದ್ದರೆಂದರೆ ಕೊನೆಗೆ ತಾವು ಸಿಎಂ ಆಗಿದ್ದಾಗ ಆರಾಧನಾ ಯೋಜನೆ ಆರಂಭಿಸಿ ಹಳ್ಳಿಗಾಡಿನಲ್ಲಿದ್ದ ಬಡ ದೇವರುಗಳ ಗುಡಿಗಳು ಜೀರ್ಣೋದ್ಧಾರವಾಗುವಂತೆ ನೋಡಿಕೊಂಡ್ರು. ಹಿಂದುತ್ವದ ಬಗ್ಗೆ ಉದ್ದುದದ ಭಾಷಣ ಮಾಡದೇನೇ ಬಂಗಾರಪ್ಪ ಇದನ್ನು ಸಾಧಿಸಿದ್ದರು. ಬಡವರ ಬಗ್ಗೆ ಅವ್ರ ಕಾಳಜಿ ಹೇಗಿತ್ತು ಅನ್ನೋದಕ್ಕೆ ಇದು ಉತ್ತಮ ಉದಾಹರಣೆ. ಇನ್ನು ಗ್ರಾಮೀಣ ಕೃಪಾಂಕ, ವಿಶ್ವ, ಹೀಗೆ ಬಂಗಾರಪ್ಪ ಎರಡು ವರ್ಷಗಳ ಸಿಎಂ ಅವಧಿಯಲ್ಲಿ ನಾಡಿನ ಜನರು ನೆನಪಿಡುವಂತಹ ಹಲವು ಯೋಜನೆಗಳನ್ನು ಕೊಟ್ಟಿದ್ದು ಕೂಡ ಅವ್ರು ಸ್ವಾಭಿಮಾನದಿಂದ ರಾಜಕೀಯ ಮಾಡಲು ಪ್ರೇರಣೆಯಾಗಿತ್ತು. ಆದ್ರೆ ಇವತ್ತು ಸ್ವಾಭಿಮಾನದ ಬಗ್ಗೆ ಮಾತಾಡುವ ರಾಜಕೀಯ ನಾಯಕರ ವಿಚಾರಕ್ಕೂ ಬಂಗಾರಪ್ಪರ ಸ್ವಾಭಿಮಾನಕ್ಕೂ ತುಲನೆ ಮಾಡಲು ಸಾಧ್ಯವಿಲ್ಲ.

ಸಮಾಜವಾದಿಯಾಗಿದ್ದ ಬಂಗಾರಪ್ಪ ಕೂಡ ವಂಶಪಾರಂಪರ್ಯ ರಾಜಕಾರಣಕ್ಕೆ ಅವಕಾಶ ಮಾಡಿಕೊಟ್ರು. ತಮ್ಮ ಮಗ ಕುಮಾರ್ ಬಂಗಾರಪ್ಪರನ್ನು ರಾಜಕೀಯಕ್ಕೆ ಕರೆತಂದು ಶಾಸಕನನ್ನಾಗಿ ಮಾಡಿ ಮಂತ್ರಿ ಮಾಡಿಸಿದ್ರು. ಆದ್ರೆ ಅದೇ ಬಂಗಾರಪ್ಪ ತಮ್ಮ ಇನ್ನೊಬ್ಬ ಮಗ ಮಧು ಬಂಗಾರಪ್ಪರನ್ನೇ ಕುಮಾರ್ ವಿರುದ್ಧ ನಿಲ್ಲಿಸಿ ಇಬ್ಬರೂ ಮಕ್ಕಳು ಸೋಲುವುದನ್ನೂ ನೋಡಿದ್ರು. ಇದೆಲ್ಲದರ ಮುಂದುವರಿದ ಭಾಗವಾಗಿ ಬಂಗಾರಪ್ಪರ ಅಂತ್ಯ ಸಂಸ್ಕಾರದ ನಂತ್ರ ಸಹೋದರರ ನಡುವೆ ಕಲಹ ನಡೆದಿದೆ. ಅದು ಕೌಟುಂಬಿಕ ವಿಚಾರವೇ ಇರಬಹುದು. ಆದ್ರೆ ಅದು ಬೀದಿಗೆ ಬಂದಿದೆ. ಇಲ್ಲಿ ಯಾರದ್ದು ಸರಿ ಯಾರದ್ದು ತಪ್ಪು ಅನ್ನೋದರ ಚರ್ಚೆ ಅನವಶ್ಯಕ.

ಸೊರಬ ಪಟ್ಟಣದ ಸಂಜೆಗತ್ತಲಿನ ನಡುವೆ ಬಂಗಾರಪ್ಪ ಪಂಚಭೂತಗಳಲ್ಲಿ ಲೀನವಾದಾಗ ಅವ್ರ ಅಭಿಮಾನಿಗಳಲ್ಲಿ ಮಾತ್ರ ಮರಳಿ ಪಡೆಯಲಾಗದ್ದನ್ನು ಕಳೆದುಕೊಂಡ ನೋವಿತ್ತು. ಬಾಗಲಕೋಟೆಯ ಯಾವುದೋ ಹಳ್ಳಿಯ ಜೋಳಿಗೆ ಹಾಕ್ಕೊಂಡಿದ್ದ ಇಳಿ ವಯಸ್ಸಿನ ರೈತನೊಬ್ಬ ಬಂಗಾರಪ್ಪರ ಚಿತೆಯನ್ನೇ ನೋಡುತ್ತಾ ನಿಂತಿದ್ದ. ಅವನಲ್ಲಿ ಅದೇನೇನು ನೆನಪುಗಳು ಹೊರಳುತ್ತಿದ್ದವೋ.. ಕೇಳುವ ಮನಸ್ಸಾಗಲಿಲ್ಲ. ಆದ್ರೆ ಮುಖದಲ್ಲಿನ ನೋವು ಸ್ಪಷ್ಟವಾಗಿ ಗೋಚರಿಸುತ್ತಿತ್ತು !

Sunday, January 1, 2012

ಕಳೆದು ಹೋದ ವರ್ಷದ ನೆನಪಲ್ಲಿ..

ಹೊಸ ವರ್ಷ ಬಂದಿದೆ. ಅದೇ ಸಂಭ್ರಮ, ಸಡಗರ ಮನೆ ಮಾಡಿದೆ.
ಜೊತೆಗೆ ಹಳೆ ವರ್ಷದ ನೆನಪುಗಳು ಮತ್ತೆ ಉಕ್ಕುಕ್ಕಿ ಬರುತ್ತವೆ.
೨೦೧೧ ಅನೇಕ ಅದ್ಭುತಗಳನ್ನು ತೆರೆದಿಟ್ಟ ವರ್ಷ. ಅನೇಕ ಸಾಧ್ಯತೆಗಳನ್ನು ತೋರಿಸಿಕೊಟ್ಟ ವರ್ಷ. ದುಡ್ಡು ಮತ್ತು ಅಧಿಕಾರ ಇದ್ದರೆ ಯಾರು ಏನ್ ಬೇಕಾದ್ರೂ ಮಾಡ್ಬಹುದು. ಕಾನೂನು ಯಾವತ್ತಿದ್ದರೂ ಅಧಿಕಾರಸ್ಥರ, ಶ್ರೀಮಂತರ ಪರ. ಕಾನೂನು ದೇವತೆಯ ಕಣ್ಣಿಗೆ ಕಟ್ಟಿರುವ ಕಪ್ಪುಪಟ್ಟಿಯನ್ನು ದುಡ್ಡಿದ್ದವರು ತಮಗೆ ಬೇಕಾದಂತೆ ಬಳಸಿಕೊಳ್ಳಬಹುದು ಅಂತೆಲ್ಲಾ 2010ರ ವರೆಗೆ ಬಹುತೇಕ ಜನ ಅಂದ್ಕೊಂಡಿದ್ದರು. ಆದ್ರೆ ಅದನ್ನೆಲ್ಲಾ ೨೦೧೧ ಅನ್ನೋ ಅದ್ಭುತ ವರ್ಷ ಸುಳ್ಳಾಗಿಸಿದೆ. ಎ. ರಾಜಾ ರಿಂದ ಆರಂಭವಾಗಿ ಯಡಿಯೂರಪ್ಪ, ಜನಾರ್ದನ ರೆಡ್ಡಿವರೆಗೆ ಘಟಾನುಘಟಿಗಳು ಜೈಲು ಕಂಬಿಯನ್ನು ಎಣಿಸಿದ್ದಾರೆ.
ಇದು ದೇಶ ರಾಜ್ಯದ ಕಥೆಯಾದ್ರೆ.. ಹೋಸ್ನಿ ಮುಬಾರಕ್, ಗಡಾಫಿಯಂತ ಸರ್ವಾಧಿಕಾರಿಗಳು ಕಾಲಚಕ್ರದಡಿಗೆ ಸಿಲುಕಿ ಕಾಲಗರ್ಭ ಸೇರಿದ್ದಾರೆ. ಇರಾಕ್ ನಿಂದ ಕೊನೆಗೂ ಅಮೇರಿಕಾ ಮಿತ್ರಕೂಟದ ಪಡೆಗಳು ವಾಪಸ್ಸಾಗಿವೆ. ಜಗತ್ತಿನ ಹಲವು ದೇಶಗಳಲ್ಲಿ ಪ್ರಜಾಪ್ರಭುತ್ವದ ಕೂಗು ಜೋರಾಗುತ್ತಿದೆ. ನಿರಂಕುಶ ಪ್ರಭುತ್ವಕ್ಕೆ ೨೦೧೧ ಅಂಕುಶ ಹಾಕುವ ಕೆಲಸ ಮಾಡಿದೆ.
ಭಾರತದಲ್ಲೂ ಜಾಳಾಗುತ್ತಿರುವ ಪ್ರಜಾಪ್ರಭುತ್ವದ ಬೇರುಗಳು ಮತ್ತೆ ಗಟ್ಟಿಗೊಳ್ಳುವ ಲಕ್ಷಣವನ್ನು ೨೦೧೧ ತೋರಿಸಿಕೊಟ್ಟಿದೆ. 2010ರವೆರೆಗೆ ದೇಶದ ಜನತೆಗೆ ಅಷ್ಟಾಗಿ ಗೊತ್ತಿಲ್ಲದೇ ಇದ್ದ ಅಣ್ಣಾ ಹಜಾರೆ ಇವತ್ತು ಭಾರತೀಯರ ಕಣ್ಮಣಿಯಾಗಿದ್ದಾರೆ. ಅವ್ರ ಜೊತೆಗಿನ ಪಟಾಲಂ ಬಗ್ಗೆ ಏನೇ ಅನುಮಾನಗಳಿದ್ದರೂ ಅಣ್ಣಾ ಹೋರಾಟ ದೇಶಕ್ಕೆ ಮತ್ತೆ ಅಹಿಂಸಾ ತತ್ವದ ಚಳವಳಿಯ ಅವಶ್ಯಕತೆಯನ್ನು ತೋರಿಸಿಕೊಟ್ಟಿದೆ. ಅದ್ರ ಮೌಲ್ಯವನ್ನೂ ಪರಿಚಯಿಸಿದೆ. ಜೊತೆಗೆ ಜಡ್ಡುಗಟ್ಟಿರುವ ರಾಜಕೀಯ ವ್ಯವಸ್ಥೆಗೆ ಗುದ್ದು ಕೊಡುವಲ್ಲಿ ಅಣ್ಣಾ ಯಶಸ್ವಿಯಾಗಿದ್ದಾರೆ. ಹಾಗಿದ್ರೂ ಅಣ್ಣಾ ಹೋರಾಟದ ಜೊತೆಗೆ ಸಂಧಾನದ ಬಗ್ಗೆಯೂ ವಿಶ್ವಾಸ ಹೊಂದಿದ್ದರೆ ಅವ್ರ ಅಹಿಂಸಾ ಹೋರಾಟಕ್ಕೆ ಮತ್ತಷ್ಟು ಫಲ ಸಿಗುತ್ತಿತ್ತೇನೋ...
ಕರ್ನಾಟಕದ ರಾಜಕೀಯ ಮತ್ತಷ್ಟು ಅಧಃಪತನದೆಡೆಗೆ ಸಾಗುವ ಮುನ್ಸೂಚನೆಯನ್ನೂ ೨೦೧೧ ತೋರಿಸಿಕೊಟ್ಟಿದೆ. ಅಧಿಕಾರ ಲಾಲಸೆ, ಅಧಿಕಾರದಲ್ಲಿರುವ ಪಕ್ಷವನ್ನು ಹೇಗಾದ್ರೂ ಮಾಡಿ ಅವಧಿ ಮೊದಲೇ ಉರುಳಿಸಬೇಕೆಂಬ ಹಪಹಪಿ. ಉಪಚುನಾವಣೆಗಳ ನಿರಂತರ ಹಾವಳಿ. ಹೀಗೆ ರಾಜ್ಯ ರಾಜಕೀಯದಲ್ಲಿ ಜನಕ್ಕೆ ಅಸಹನೆ ಹುಟ್ಟಿಸುವ ಕಾರ್ಯಗಳೇ ಕಳೆದು ಹೋದ ವರ್ಷದಲ್ಲಿ ಹೆಚ್ಚಾಗಿ ನಡೆದಿವೆ.
ಮತ್ತೆ ಕನ್ನಡಕ್ಕೊಂದು ಜ್ಞಾನಪೀಠ ಬಂದಿದೆ. ಕಂಬಾರರು ಕನ್ನಡ ತಾಯಿಯನ್ನು ಜ್ಞಾನಪೀಠದ ಮೇಲೆ ಕುಳ್ಳಿರಿಸಿದ್ದಾರೆ. ಜೊತೆಗೆ ಎಸ್.ಎಲ್.ಭೈರಪ್ಪ ಕನ್ನಡಾಂಬೆಗೆ 'ಸರಸ್ವತಿ ಸಮ್ಮಾನ' ಮಾಡಿಸಿದ್ದಾರೆ. ಕನ್ನಡ ಸಾರಸ್ವತ ಲೋಕಕ್ಕೆ ಇದು ನಿಜಕ್ಕೂ ದೊಡ್ಡ ಸಂಸತದ ವಿಷಯ. ಜೊತೆಗೆ ಕನ್ನಡ ರಾಜ್ಯೋತ್ಸವಕ್ಕೆ ಅವಮಾನಿಸಿದೆ ಬೆಳಗಾವಿ ಪಾಲಿಕೆ ಮೇಯರ್ - ಉಪಮೇಯರ್ ಮೇಲೆ ಗಧಾಪ್ರಹಾರ ಮಾಡಿ ರಾಜ್ಯ ಸರ್ಕಾರ ಭೇಷ್ ಅನ್ನಿಸಿಕೊಂಡಿದೆ. ಇಷ್ಟೆಲ್ಲಾ ಇದ್ದರೂ ಮಕ್ಕಳಿಲ್ಲದ ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರದಲ್ಲಿ ರಾಜ್ಯ ಸರ್ಕಾರ ವಸ್ತುಸ್ಥಿತಿಯತ್ತ ಗಂಭೀರ ಚರ್ಚೆ ನಡೆಸಬೇಕಿದೆ. ಮುಚ್ಚಿದ ಮೇಲಾದ ಪರಿಣಾಮಗಳ ಬಗ್ಗೆ ಪರಿತಪಿಸುವ ಬದಲು ಮುಚ್ಚುವ ಮೊದಲೇ ವಿವೇಚಿಸಿದರೆ ಹೆಚ್ಚು ಉಪಯುಕ್ತ.
ಇದೆಲ್ಲದರ ನಡುವೆ ನಾಡು ಕಂಡ ಇಬ್ಬರು ಅಪರೂಪದ ಮತ್ತು ಶ್ರೇಷ್ಠರ ಸಾಲಿನಲ್ಲಿ ನಿಲ್ಲುವ ರಾಜಕಾರಣಿಗಳನ್ನು 2011ರಲ್ಲಿ ಕಳೆದುಕೊಂಡಿದ್ದೇವೆ. ವರ್ಷದ ಆರಂಭದಲ್ಲಿ ಎಂ.ಪಿ.ಪ್ರಕಾಶ್ ದೂರವಾದ್ರು. ಸಜ್ಜನಿಕೆಯ, ಸಾತ್ವಿಕ ಮನೋಭಾವದ ಆಜಾತಶತ್ರು ಎಂ.ಪಿ. ಪ್ರಕಾಶ್. ಅವ್ರು ರಾಜಕೀಯದೊಳಗೆ ಸಾಂಸ್ಕೃತಿಕ ಲೋಕದ ಪ್ರತಿನಿಧಿಯಂತಿದ್ದವರು. ವರ್ಷದ ಕೊನೆಗೆ ಅಂದ್ರೆ ಡಿಸೆಂಬರ್ 26ರಂದು ಸಾರೆಕೊಪ್ಪ ಬಂಗಾರಪ್ಪ ಕೂಡ ಭೌತಿಕವಾಗಿ ಇಲ್ಲವಾದ್ರು. ಸ್ವಾಭಿಮಾನಿ, ಛಲದಂಕಮಲ್ಲ, ಬಡವರ ಬಂಗಾರವಾಗಿದ್ದವರು ಬಂಗಾರಪ್ಪ. ನಲ್ವತ್ತು ವರ್ಷ ಸಕ್ರಿಯ ರಾಜಕಾರಣದಲ್ಲಿ ತೊಡಗಿದ್ದ ಬಂಗಾರಪ್ಪಗೆ ಅದ್ಯಾಕೋ ಕಾಂಪ್ರಮೈಸ್ ರಾಜಕಾರಣದ ಮೇಲೆ ನಂಬಿಕೆಯೇ ಇದ್ದಂತಿರಲಿಲ್ಲ. ಅವ್ರದ್ದೇನಿದ್ರೂ ಸ್ವಾಭಿಮಾನದ ರಾಜಕಾರಣವಾಗಿಬಿಟ್ಟಿತ್ತು. ಇದೇ ಕಾರಣಕ್ಕೆ ಪಕ್ಷಗಳನ್ನು ಬಿಟ್ಟು ಪಕ್ಷಗಳನ್ನು ಕಟ್ಟಿ, ಕೆಡಿವಿ, ಅಧಿಕಾರ ಅನುಭವಿಸಿ, ಅಧಿಕಾರದಿಂದ ದೂರವಿದ್ದು ತಾವು ನಡೆದಿದ್ದೇ ದಾರಿ ಎಂಬಂತಿದ್ದರೂ ಬಂಗಾರಪ್ಪ ಯಾವತ್ತೂ ಜನರಿಂದ ದೂರವಿರಲಿಲ್ಲ. ಬಡವರ, ಹಳ್ಳಿಯ ಜನರ, ರೈತರ ವಿಚಾರದಲ್ಲಿ ಅವ್ರ ನಿಲುವಿನಲ್ಲಿ ಎಂದೂ ಬದಲಾಗಲಿಲ್ಲ. ಇದಕ್ಕೆ ಬಂಗಾರಪ್ಪ ಇತರೆ ಎಲ್ಲಾ ರಾಜಕಾರಣಿಗಳಿಂತ ವಿಭಿನ್ನ ಸ್ಥಾನದಲ್ಲಿ ನಿಲ್ಲುತ್ತಿದ್ದುದು.

ಹೀಗೆ ಕಳೆದು ಹೋದ ವರ್ಷವನ್ನು ಮೆಲುಕು ಹಾಕುತ್ತಾ ಹೋದ್ರೆ ಹಲವು ನೆನಪುಗಳು ಮರುಕಳಿಸುತ್ತವೆ. ಇದ್ರ ಜೊತೆಗೆ ನಾನು ಬರವಣಿಗೆ ಆರಂಭಿಸುತ್ತಿದ್ದ ದಿನಗಳಲ್ಲಿ ' ನೀ ಎಂತ ಬರಿಯದು ಚಿಕ್ಕಪ್ಪಾ' ಅಂತಾ ತೊದಲು ನುಡಿಗಳಲ್ಲಿ ಕೇಳುತ್ತಿದ್ದ ಮಗಳು ಗಾನಶ್ರೀ ದೂರವಾಗಿ ಜ.1ಕ್ಕೆ ಎರಡು ವರ್ಷವಾದ್ರೂ ಅವಳ ನೆನಪು ಚಿರಂತನ.
ಮತ್ತೆ ಹೊಸ ವರ್ಷದೆಡೆಗೆ ಹೊಸ ಆಶೆಗಳಿಂದ ನೋಡುತ್ತಿದ್ದೇವೆ. ಕನಸುಗಳು ನೂರಾರಿವೆ. ಏನೇನಾಗಿದೆತೆ ಅನ್ನೋ ಲೆಕ್ಕಾಚಾರ ಮತ್ತೆ ವರ್ಷದ ಕೊನೆಗೆ ಹಾಕಬೇಕು. ಅಲ್ಲವರೆಗೆ ಕನಸುಗಳಿಗೆ ಕಡಿವಾಣ ಹಾಕೋದೇಕೆ. ಅಲ್ವಾ?