Saturday, December 14, 2013

ದ್ಯಾವ್ರೇ ಭಟ್ರು ಇಷ್ಟು ಚಂದ ನಟಿಸ್ತಾರಾ...!!!

ಇಷ್ಟು ದಿನ ಯೋಗರಾಜ ಭಟ್ಟರು ಒಳ್ಳೆಯ ಸಿನಿಮಾ ನಿರ್ದೇಶಕ, ಚಿತ್ರ ಸಾಹಿತ್ಯ ರಚನೆಕಾರ, ಇನ್ನೂ ಏನೇನೋ ಆಗಿದ್ದರು. ಒಂದು ಒಳ್ಳೆಯ ಸಿನಿಮಾದ ಪಾಕ ಬಡಿಸಲು ಏನೇನು ಬೇಕೋ ಅದೆಲ್ಲವನ್ನೂ ಭಟ್ರು ಅಚ್ಚುಕಟ್ಟಾಗಿ ಮಾಡ್ತಿದ್ರು. ಆದರೆ ಅವರೊಬ್ಬ ಒಳ್ಳೆಯ ನಟ ಅನ್ನೋದು ಗೊತ್ತಾಗಿದ್ದು ದ್ಯಾವ್ರೇ ನೋಡಿದಾಗಲೇ. ಶಿಷ್ಯನ ಸಿನಿಮಾಗೆ ಗುರುವಿನಿಂದ ಇದಕ್ಕಿಂತ ದೊಡ್ಡ ಬೆಂಬಲ ಸಿಗೋದಿಕ್ಕೆ ಸಾಧ್ಯವಿಲ್ಲ. ಗಡ್ಡ ವಿಜಿ ಆಕ್ಷನ್ ಕಟ್ ಹೇಳಿದ್ದಕ್ಕೆ ಭಟ್ರು ಚಂದಗೆ ಅಭಿನಯಿಸಿದ್ದಾರೆ.

ದ್ಯಾವ್ರೇ ಸಿನಿಮಾ ನೋಡಿದಾಗಿನಿಂದ ಮನಸ್ಸಿನಲ್ಲಿ ಹಲವು ಪಾತ್ರಗಳು ಅಚ್ಚಾಗಿ ಉಳಿದಿವೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು. ಎಲ್ಲವೂ ಜೈಲಿನಲ್ಲಿ ಆರಂಭವಾದ್ರೂ ಒಬ್ಬೊಬ್ಬರದ್ದು ಒಂದೊಂದು ಕಥೆ. ಒಂದೊಂದು ವ್ಯಥೆ. ಇದು ಒಬ್ಬ ನಾಯಕನ ಸುತ್ತ ಹೆಣೆದ ಕಥೆಯಲ್ಲ. ಸಿನಿಮಾದಲ್ಲಿ ಹೆಚ್ಚಿನ ಭಾಗ ಯೋಗರಾಜ ಭಟ್ಟರು ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಅವರನ್ನು ಹೀರೋ ಅನ್ನಬಹುದೇನೋ. ಆದರೆ ಅವರೊಬ್ಬರೇ ಹೀರೋ ಅಲ್ಲ. ಚೀಂಕ್ರನಾಗಿ ಕಾಣಿಸಿಕೊಂಡ ನೀನಾಸಂ ಸತೀಶ ಪಾತ್ರಕ್ಕೆ ಜೀವ ತುಂಬಿದ ರೀತಿ ಅದ್ಭುತ. ಪರಾಕಾಯ ಪ್ರವೇಶ ಅಂದ್ರೆ ಇದೇನಾ...? ಇಷ್ಟವಾಗುವ ಇನ್ನಷ್ಟು ಪಾತ್ರಗಳು ದ್ಯಾವ್ರೇಗೆ ಜೀವತುಂಬಿವೆ. ಎಲೆಕ್ಷನ್ ಗೆ ನಿಂತು ಎಂಎಲ್ಎ ಆಗುವ ಕನಸುಕಾಣುತ್ತಲೇ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿರುವ ಚಿಕ್ಕರಸ ಪಾತ್ರ ಸಿನಿಮಾ ಮುಗಿದ ಮೇಲೂ ಕಾಡುತ್ತದೆ. ಇಂಗ್ಲಿಷ್ ಗೋಡೆ, ಜಗ್ಗ ಹೀಗೆ  ಸಿನಿಮಾದ ಹೀರೋಗಳ ಸಂಖ್ಯೆ ಬೆಳೆಯುತ್ತದೆ.

ಮುವತ್ತು ವರ್ಷ ಜೈಲಲ್ಲಿದ್ದು ಹೊರಬಂದ ದ್ಯಾವಣ್ಣನಿಗೆ ಹೊರಪ್ರಪಚಂದಲ್ಲಾದ ಬದಲಾವಣೆಗಳೇ ಗೊತ್ತಿಲ್ಲ. ಗುದ್ದಲಿ, ಸಲಕೆಗಳನ್ನು ರೆಡಿ ಮಾಡಿ ಕೆಲಸಕ್ಕೆ ಹೊರಡುವ ಅವನಿಗೆ ಬುಲ್ಡೋಜರ್ ಗಳು ಬಂದಿರೋದು ಹೇಗೆ ತಾನೇ ಗೊತ್ತಾಗಬೇಕು. ಜೈಲಲ್ಲಿದ್ದು ಬಂದ ಅಮಾಯಕ ದ್ಯಾವಣ್ಣನಿಗೆ ಹೊರ ಪ್ರಪಚಂದ ಬದುಕು ದುಸ್ತರವಾಗುತ್ತಾ ಹೋಗುತ್ತದೆ. ಪಾತ್ರ ಸಣ್ಣದು. ಆದರೆ ಸೃಷ್ಟಿಸುವ ಭಾವನೆಗಳು ದೊಡ್ಡದು. ಒಂಥರಾ ಚಿತ್ರಕ್ಕೆ ಟೈಟಲ್ ನಂತಿರುವ ಪಾತ್ರ ದ್ಯಾವಣ್ಣನದ್ದು.

ಇಷ್ಟೆಲ್ಲಾ ಹೇಳಿದ್ಮೇಲೆ ಒಂದು ಪಾತ್ರ ಹೇಳಲೇ ಬೇಕು. ಅದು ಇನ್ಸ್ ಪೆಕ್ಟರ್ ಸಾವಂತ್ ನದ್ದು. 'ಆ ದಿನಗಳು' ಚಿತ್ರದಲ್ಲಿ ಸರ್ದಾರ್ ಪಾತ್ರದಲ್ಲಿ ಮಿಂಚಿದ್ದ ಸತ್ಯ ಈಗ ಸರ್ದಾರ್ ಸತ್ಯ ಆಗಿದ್ದಾರೆ. ಯಾಕಂದ್ರೆ ಅದು ಅವರು ಜೀವತುಂಬಿದ್ದ ಪಾತ್ರ. ಈಗ ಸರ್ದಾರ್ ಸತ್ಯ ಸಾವಂತನಾಗಿ ಕಾಣಿಸಿಕೊಂಡಿದ್ದಾರೆ. ಅಟ್ಟಹಾಸ ಹಾಗೂ ವಿಕಟ ನಗು ಈ ಪಾತ್ರದ ಜೀವಾಳ. ಎರಡನ್ನೂ ಸರ್ದಾರ್ ಅದ್ಭುತವಾಗಿ ನಿಭಾಯಿಸಿದ್ದಾರೆ.

ಮತ್ತೆ ಭಟ್ಟರ ಕಡೆಗೆ ಬರಲೇಬೇಕು. ಜೈಲರ್ ಭಟ್ಟರು ಇಡೀ ಚಿತ್ರದಲ್ಲಿ ಬೆರೆತುಹೋಗಿದ್ದಾರೆ. ಗೋಡೇೇೇೇೇ.... ಎಂದು ಅವರು ಚೀತ್ಕರಿಸುವ ರೀತಿ ಹೃದಯ ಕಲಕುತ್ತದೆ. ಪಾತ್ರದ ಆಳವನ್ನು ಹೆಚ್ಚಿಸುತ್ತದೆ. ಯೋಗರಾಜ ಭಟ್ಟರ ಇತರೆ ಸಿನಿಮಾಗಳಂತೆ ಉಡಾಫೆ ಶೈಲಿಯಲ್ಲಿ ನೀತಿ ಹೇಳುವ ಪರಿಪಾಠ ದ್ಯಾವ್ರೇಯಲ್ಲೂ ಮುಂದುವರಿದಿದೆ. ಗುರುವಿನಿಂದ ಶಿಷ್ಯನಿಗೆ ಬಂದಿರುವ ಬಳುವಳಿ ಇದು.

ದ್ಯಾವ್ರೇಯಲ್ಲಿ ಆಗಲೇ ಹೇಳಿದಂತೆ ಹೀರೋ ಪಾತ್ರಗಳು ಹಲವಿವೆ. ಜೊತೆಗೆ ಪುಟಾಣಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹೀರೋಯಿನ್ ಗಳ ಜೊತೆಗೆ ಒಳ್ಳೆಯ ಹಾಡುಗಳು, ಅದಕ್ಕೊಪ್ಪುವ ಸಂಗೀತ. ಚಂದನೆಯ ಸಿನಿಮಾಟೋಗ್ರಫಿ, ಸ್ಕ್ರೀನ್ ಪ್ಲೇ.. ಹೀಗೆ ದ್ಯಾವ್ರೆಯಲ್ಲಿ ಪ್ರತಿಯೊಂದು ಅಂಶವೂ ಹೀರೋಯಿನ್ ಸ್ಥಾನವನ್ನು ತುಂಬುತ್ತವೆ. ಒಂದು ಒಳ್ಳೆಯ ಸಿನಿಮಾವನ್ನು ಗಡ್ಡ ವಿಜಯ್ ಕೊಟ್ಟಿದ್ದಾರೆ.

ದ್ಯಾವ್ರೇೇೇೇೇೇ..... ಇಂತಾ ಸಿನಿಮಾಗಳು ನಿಜಕ್ಕೂ ಗೆಲ್ಲಬೇಕು.!






Friday, September 20, 2013

ಕೆಳಗಿನವರ ಲೋಕದಲ್ಲಿ ಏನೆಲ್ಲಾ ಉಂಟು...!

ಅದು ಶುರುವಾಗುವುದು ಹೀಗೆ.
ಬೆಳಗು ಇನ್ನೂ ಹರಿದಿರಲಿಲ್ಲ. ಒಂದೆಡೆ ಕೊರೆಯುವ ಚಳಿ. ಆದರೆ ಚಳಿಯೆಂದು ಕುಳಿತರೆ ಹೊಟ್ಟೆ ಹೊರೆಯುವುದು ಹೇಗೆ. ಎದ್ದು ಹೋಗಲೇ ಬೇಕು. ಚಿಂದಿ ಆಯೋದಕ್ಕೆ. ಮಲಗುವ ಗೂಡುಗಳಿಂದ ಹೊರಬಂದು ಕೊರೆಯುವ ಚಳಿಯಲ್ಲಿ ಕೆಲವರು ಚಿಂದಿ ಅರಸಿ ಹೋರಹೋಗುತ್ತಾರೆ. ಹುಡುಗಿಯ ಕಳ್ಳಸಂಬಂಧಿ ಗುಡಿ ಹೊದ್ದು ಹೊರಗೋಡುತ್ತಾನೆ. ರೋಗಗ್ರಸ್ತೆ ಹೆಂಗಸು ಕೆಮ್ಮುತ್ತಾ ನರಳುತ್ತಾಳೆ. ಆಕೆಯ ಗಂಡ ಹೆಂಡತಿ ಸತ್ತರೆ ಸಾಕೆಂದು ಆಶಿಸುವಂತೆ ತನ್ನದೇ ಕೆಲಸದಲ್ಲಿ ನಿರತನಾಗಿದ್ದಾನೆ. ಕೆಲಸ ಮಾಡದ ಸೋಮಾರಿಗಳು ತಮ್ಮದೇ ಹರಟೆಯಲ್ಲಿ ತೊಡಗಿದ್ದಾರೆ. ಕೆಳಗಿನವರ ಲೋಕದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗುತ್ತದೆ.

ಇದು ಎನ್ಎಸ್ ಡಿಯ ಬೆಂಗಳೂರು ಚಾಪ್ಟರ್ ನಲ್ಲಿ ತರಬೇತಿ ಪಡೆದ ಮೊದಲ ತಂಡ ಪ್ರಸ್ತುತಪಡಿಸಿದ ' ಈ ಕೆಳಗಿನವರು' ನಾಟಕ.  ರಷ್ಯನ್ ಸಾಹಿತಿ ಮ್ಯಾಕ್ಸಿಂ ಗೋರ್ಕಿಯ lower depths ನಾಟಕವನ್ನು ಕನ್ನಡಕ್ಕೆ ರೂಪಂತರಿಸಿದ ನಾಟಕವಿದು. ಇದನ್ನು ಅದೆಷ್ಟು ಚೆನ್ನಾಗಿ ಕನ್ನಡಕ್ಕೆ ಬಿ.ಟಿ.ದೇಸಾಯಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆಂದರೆ ಇಡೀ ನಾಟಕ ಕನ್ನಡದ್ದೇ ಮಣ್ಣಿನ ಕಥೆಯಂತಿದೆ. ಅದರ ಭಾಷೆ, ಶೈಲಿ, ವಸ್ತು, ಇತಿಹಾಸ ಎಲ್ಲದರಲ್ಲೂ ಕರ್ನಾಟಕ, ಕನ್ನಡ ಮತ್ತು ಭಾರತದ ಒಳಗಿನ ಕಥೆಯಾಗಿ ಮಾರ್ಪಟ್ಟಿದೆ. ರಷ್ಯಾದ ಬರಹಗಾರನ ಒಟ್ಟು ಆಶಯವನ್ನು ಕನ್ನಡದ ಪರಿಸರದೊಳಗೆ ಬೆರೆಸಿ ತೋರಿಸಲಾಗಿದೆ.

ನಾಟಕ್ಕಾಗಿ ತುಂಬಾ ಅದ್ಭುತ ಸೆಟ್ ಹಾಕಲಾಗಿದೆ. ಅದೇ ಸೆಟ್ ನಲ್ಲಿ ಕೆಳಗಿನವರ ಲೋಕ ನಿಧಾನಕ್ಕೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಅಲ್ಲಿನ ವಾಸಿಗಳಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಕಥೆ. ಕೆಲವರು ಜೈಲಿಗೂ ಹೋಗಿ ಬಂದವರು. ಮನೆ ಬಿಟ್ಟು ಬಂದವರು. ಪರಿವಾರ ತೊರೆದು ಪರದೇಶಿಗಳಾದವರು.  ಅವರ ನಡುವೆ ಜಗಳವಿದೆ. ಕೋಪ ತಾಪಗಳು ಆಗಾಗ್ಗೆ ನಡೆಯುತ್ತವೆ. ಆದರೆ ಅದೆಲ್ಲವನ್ನೂ ಮೀರಿದ ಅನ್ಯೋನ್ಯತೆಯಿದೆ. ಸಮಾಜದ ಅಂಕುಡೊಂಕುಗಳ ಬಗ್ಗೆ ಈ ಕೆಳಗಿನವರು ಒಂದು ಪ್ರಬುದ್ಧ ದೃಷ್ಟಿಕೋನವನ್ನೂ ಹೊಂದಿದ್ದಾರೆ.

ಅಲ್ಲಿಗೆ ಬರುವ ಅಜ್ಜಯ್ಯ ತನ್ನದೇ ಕಲ್ಯಾಣ ರಾಜ್ಯ ಹುಡುಕುತ್ತಾ ಹೊರಟವನು. ಇಂದು ಅಲ್ಲಿಗೆ ಬಂದಿದ್ದನಷ್ಟೆ.  ಅವರ ಬದುಕಿನ ಮೇಲೆ ಅಜ್ಜಯ್ಯ ಪ್ರಭಾವ ಬೀರುತ್ತಾನೆ. ಅವರ ಕಥೆಗಳಿಗೆ ಕಿವಿಯಾಗುತ್ತಾನೆ. ಅವರ ಭಾವನೆಗಳಿಗೆ ಮಾತಾಗುತ್ತಾನೆ. ಅವರ ಬದುಕಿಗೆ ದಾರಿಯಾದಂತೆ ಕಾಣುತ್ತಾನೆ.

ಸುಮಾರು ಎರಡೂವರೆಗಂಟೆಗಳ ಸುದೀರ್ಘನಾಟಕವಿದು. ಬದುಕಿನ ಸಂಕೀರ್ಣತೆಯನ್ನು ಮನಸ್ಸಿಗೆ ನಾಟುವಂತೆ ತೆರದಿಡಲಾಗಿದೆ. ನಾಟಕದಲ್ಲಿ ಹಾಸ್ಯವಿದೆ. ಗಂಭೀರ ಚಿಂತನೆಯಿದೆ. ನಗುವಿದೆ. ಅಳುವಿದೆ. ಸಂಗೀತವಿದೆ. ಒಂದು ಅದ್ಭುತ ಲೋಕದ ಅನಾವರಣಗೊಳಿಸಲಾಗಿದೆ.


Sunday, September 8, 2013

ಢುಂಢಿ ಕಾದಂಬರಿ ಸುತ್ತ..

ಢುಂಢಿ ಈಗಾಗ್ಲೇ ಕೋಲಾಹಲ ಎಬ್ಬಿಸಿದ್ದಾನೆ. ಢುಂಢಿಯ ಸೃಷ್ಟಿಕರ್ತ ಪೊಲೀಸರ ಅತಿಥಿಯಾಗಿ ಹೊರಬಂದಿದ್ದಾರೆ. ಯೋಗೇಶ್ ಮಾಸ್ಟರ್ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದ ಪ್ರಕರಣ ದಾಖಲಾಗಿದೆ.

ನಿಜಕ್ಕೂ ಒಂದು ಕೃತಿಯಿಂದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಲು ಸಾಧ್ಯವೇ? ಹೊಸದಾಗಿ ಬಂದಿರುವ ಕಾದಂಬರಿಯೊಂದಕ್ಕೆ ನಮ್ಮ ಇದುವರೆಗಿನ ಎಲ್ಲಾ ನಂಬಿಕೆಗಳನ್ನು ತೊಡೆದುಹಾಕುವ ಶಕ್ತಿ ಇರುತ್ತದೆಯೇ? ಅಷ್ಟೊಂದು ದುರ್ಬಲವೇ ನಮ್ಮ ಧಾರ್ಮಿಕ ಭಾವನೆಗಳು?

ಇಷ್ಟಕ್ಕೂ ಪುರಾಣದ ಕೃತಿಯನ್ನು ಸಾಮಾಜಿಕ ನೆಲೆಗಟ್ಟಿನಲ್ಲಿ ನೋಡಿದ ಮೊದಲ ಕಾದಂಬರಿಯೇನಲ್ಲ ಢುಂಢಿ. ಪುರಾಣದ ವೈಭವಗಳ ಬದಲು ಸಾಮಾನ್ಯ ದೃಷ್ಟಿಕೋನದಿಂದ ರಾಮಾಯಣ ಮಹಾಭಾರತಗಳನ್ನು ಹಲವು ಕೃತಿಗಳಲ್ಲಿ ಚಿತ್ರಿಸಲಾಗಿದೆ. ಢುಂಢಿಯಲ್ಲೂ ಇದನ್ನೇ ಮಾಡಲಾಗಿದೆ. ಸಾಮಾಜಿಕ ದೃಷ್ಟಿಕೋನದಿಂದ ದೇವತ್ವಕ್ಕೆ ಏರುವ ವ್ಯಕ್ತಿಯ ವ್ಯಕ್ತಿತ್ವವನ್ನುಪರಿಚಯಿಸುವ ಕೆಲಸ ಈ ಕೃತಿ ಮಾಡಿದೆ. ಢುಂಢಿಯಾಗಿದ್ದವನು ಗುಣೇಶನಾಗಿ, ಗಣೇಶನಾಗಿ, ಗಣಪತಿಯಾಗಿ ಮಹಾಗಣಪತಿಯಾಗುವ ಹಂತಗಳನ್ನು ಕೃತಿಯಲ್ಲಿ ಚಿತ್ರಿಸಲಾಗಿದೆ.

ವಿವಾದಗಳಿಂದಾಗಿ ಢುಂಢಿಯ ಬಗ್ಗೆ ಕುತೂಹಲ ಹೆಚ್ಚಾಗಿದೆ. ಅದರಲ್ಲಿ ಹಾಗೆ ಚಿತ್ರಿಸಲಾಗಿದೆಯಂತೆ. ಗಣಪತಿಯನ್ನು ರೌಡಿಯಂತೆ ಬಿಂಬಿಸಲಾಗಿದೆಯಂತೆ. ಪಾರ್ವತಿಯನ್ನು ಕೆಟ್ಟದಾಗಿ ತೋರಿಸಲಾಗಿದೆಯಂತೆ ಅಂತೆಲ್ಲಾ ಕಾಮೆಂಟ್ ಗಳು ಬರುತ್ತಿವೆ. ಅಂತದ್ದೇನೂ ಕೃತಿಯಲ್ಲಿ ಇಲ್ಲ. ಒಬ್ಬ ಅರಣ್ಯಕನಾಗಿದ್ದ ಢುಂಢಿ ಮುಂದೆ ಪಾರ್ವತಿಯ ಪುತ್ರನಾಗಿ ಗಣಪತಿಯಾಗುತ್ತಾನೆ. ಆರಂಭದಲ್ಲಿ ರುದ್ರ ಪಾರ್ವತಿಯ ಸಂಭೋಗದ ಬಗ್ಗೆ ಸ್ವಲ್ಪ ವಿಸ್ತೃತವಾಗಿ ಯೋಗೇಶ್ ಮಾಸ್ಟರ್ ಬರೆದಿದ್ದಾರೆ. ಇದು ಮುಖ್ಯ ಕಥೆಗೆ ಅವಶ್ಯವಾಗಿದ್ದ ವಿವರಣೆಗಳೇನಲ್ಲ.  ಯೋಗೇಶ್ ಮಾಸ್ಟರ್ ಕೆಲವೇ ವಾಕ್ಯಗಳಲ್ಲಿ ಆ ತೀವ್ರತೆಯನ್ನು ಬರೆಯಬಹುದಿತ್ತು. ಅಷ್ಟೊಂದು ಲಂಭಿಸುವುದರಿಂದ ಕಲ್ಪನೆಯನ್ನು ಕಟ್ಟಿಕೊಡುವ ಬದಲು ಅಸಹ್ಯ ಅನ್ನಿಸುವುದೂ ಇದೆ. ಆದರೆ ಮುಂದೆ ಶಿವ ಪಾರ್ವತಿಯರ ಬಗ್ಗೆ ಅಷ್ಟೇ ಪ್ರೌಢವಾಗಿ ಬರೆಯಲಾಗಿದೆ. ಬರಹದ ಮೇಲೆ ಇನ್ನಷ್ಟು ಹಿಡಿತ ಸಾಧಿಸುತ್ತಿದ್ದರೆ ಹೆಚ್ಚು ಸಾಹಿತ್ಯಿಕವಾಗಿ ಕೃತಿ ಹೊರಬರಲು ಸಾಧ್ಯವಿತ್ತು. ಢುಂಢಿಯನ್ನು ಅರಣ್ಯಕನ ಹಿನ್ನೆಲೆಯಿಂದ ಪರಿಗಣಿಸಿದ್ದರಿಂದ ಆತ ಕ್ರೂರಿಯಾಗಿದ್ದ, ಯಾಗಗಳನ್ನು ಧ್ವಂಸ ಮಾಡುತ್ತಿದ್ದ ಅನ್ನುವುದಕ್ಕೆಲ್ಲಾ ಕಾದಂಬರಿಯಲ್ಲಿ ಸಕಾರಣಗಳು ದೊರೆಯುತ್ತವೆ. ಆರ್ಯ ಮತ್ತು ಅನಾರ್ಯರ ನಡುವಿನ ತಿಕ್ಕಾಟದ ಬಗೆಗಿನ ವಿವರಗಳು ಢುಂಢಿಯನ್ನು ಹೆಚ್ಚು ಆಪ್ತನನ್ನಾಗಿಸುತ್ತದೆ.


ಒಂದು ಕಾದಂಬರಿಯಾಗಿ ಮಾತ್ರ ಢುಂಢಿಯನ್ನು ಓದಿದ್ರೆ ಅದರಲ್ಲಿ ಖುಷಿಪಡುವ ಹಲವು ಅಂಶಗಳಿವೆ. ಹಾಗೆಯೇ ಕೃತಿಯನ್ನು ಆಕ್ಷೇಪಿಸಲೂ ಸಾಕಷ್ಟು ಅಂಶಗಳಿವೆ. ಆದರೆ ಎಲ್ಲವನ್ನೂ ಧಾರ್ಮಿಕ ನಂಬಿಕೆಗಳೊಂದಿಗೆ ತಳುಕುಹಾಕಿ ನೋಡುತ್ತಾ ಹೋದ್ರೆ ವಿವಾದ ಮಾತ್ರ ಕಣ್ಣಿಗೆ ಕಾಣುತ್ತದೆ.


ಕೃತಿಯೊಂದರಿಂದ ಒಂದು ಧರ್ಮದ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ ಅಂತಾದರೆ ಅದೇ ಧರ್ಮ ಸಹಸ್ರಾರು ವರ್ಷಗಳಿಂದ ಸದೃಢವಾಗಿ ಬೆಳೆದು ನಿಲ್ಲಲು ಸಾಧ್ಯವಾಗುತ್ತಿರಲಿಲ್ಲ. ಈಗ ಬೊಬ್ಬೆ ಹೊಡೆಯುವವರಿಂದ ಅದನ್ನು ರಕ್ಷಿಸಲೂ ಸಾಧ್ಯವಿಲ್ಲ. ಅದೇನಿದ್ದರೂ ಅನುಸರಣೆಯಲ್ಲಿ ಉಳಿಯುವಂತದ್ದು. ಬೆಳೆಯುವಂತದ್ದು. ಬೆಳಗುವಂತದ್ದು !

Saturday, September 7, 2013

ಮೆಕ್ಕಾ ದಾರಿಯೆಂಬ ಅದ್ಭುತ ಲೋಕ

ಮೆಕ್ಕಾಗೆ ದಾರಿ ತೋರಿಸಿದ್ದಾರೆ ಪ್ರಸನ್ನ !

ಇದು ಸೌದಿಯಲ್ಲಿನ ಮೆಕ್ಕಾ ಅಲ್ಲ. ದಕ್ಷಿಣ ಆಫ್ರಿಕಾದ ಮೆಕ್ಕಾ. ಈ ಮೆಕ್ಕಾವನ್ನು ನೇರವಾಗಿ ಕನ್ನಡಕ್ಕೆ ಕರೆತಂದು ರವೀಂದ್ರ ಕಲಾಕ್ಷೇತ್ರದಲ್ಲಿ ತೆರೆದಿಟ್ಟರು.
ದಕ್ಷಿಣ ಆಫ್ರಿಕಾದ ಒಂದು ನೈಜ ಕಥೆಯನ್ನು ಆಧರಿಸಿದ ನಾಟಕವಿದು. ವೃದ್ಧೆ ಹೆಲೆನ್ ಳ ತೊಳಲಾಟ. ಗಂಡನ ಸಾವಿನ ನಂತರ ಆಕೆಯನ್ನು ಆವರಿಸಿದ ಕತ್ತಲು. ಅದು ಧರ್ಮ ಹೇರಿದ ಕತ್ತಲೂ ಹೌದು. ಆ ಕತ್ತಲನ್ನು ಮೆಟ್ಟಿ ನಿಲ್ಲಲು ಆಕೆ ಸೃಷ್ಟಿಸಿದ ಮೆಕ್ಕಾ. ಕತ್ತಲಾದಾಗ ಬೆಳಗುವ ಬೆಳಕಲ್ಲಿ ಜಗಮಗಿಸುವ ಲೋಕವದು. ತನ್ನೆಲ್ಲಾ ನೋವನ್ನು ಏಕತಾನತೆಯನ್ನು ಮರೆಯಲು ಆಕೆ ಸೃಷ್ಟಿಸುವ ಪ್ರತಿಮೆಗಳು. ಆ ಪ್ರತಿಮೆ ಕೇವಲ ಆಕೆಯ ತೊಳಲಾಟವನ್ನು ದೂರ ಮಾಡುವುದಷ್ಟೇ ಅಲ್ಲ. ಅದು ಆಕೆಯೊಳಗಿನ ಪ್ರತಿಭಟನೆಯನ್ನು ಅಭಿವ್ಯಕ್ತಿಸುತ್ತವೆ. ಅದು ಆಕೆಯ ಸ್ವಾತಂತ್ರ್ಯದ ಪ್ರತೀಕವಾಗುತ್ತದೆ.

ಇಡೀ ನಾಟಕದಲ್ಲಿ ಬರೋದು ಮೂರೇ ಪಾತ್ರ. ಹೆಲೆನ್ , ಎಲ್ಸಾ ಮತ್ತು ಚರ್ಚ್ ನ ಪಾದ್ರಿ ಮಾರಿಯಟ್ . ಹೆಲೆನ್ ಕೇಪ್ ಟೌನ್ ನಿಂದ ಸುಮಾರು 800 ಮೈಲಿ ದೂರದಲ್ಲಿರುವ ಹಳ್ಳಿಯೊಂದರ ಮುದುಕಿ. ಆಕೆ ಅಲ್ಲೇ ತನ್ನ ಬದುಕನ್ನು ಸವೆಸಿದವಳು. ಆಕೆಯ ಗಂಡ ಸತ್ತು ಆಗಲೇ ಹದಿನೈದು ವರ್ಷ ಕಳೆದಿದ್ದು. ಆಕೆ ಉಳಿದಿರುವ ಸ್ನೇಹಿತೆಯೊಬ್ಬಳೇ.. ಎಲ್ಸಾ.  ಕೇಪ್ ಟೌನ್ ನಲ್ಲಿ ಟೀಚರ್ ಆಗಿರುವ ಎಲ್ಸಾ ಐದು ವರ್ಷಗಳಿಂದ ಹೆಲೆನ್ ಗೆ ಸ್ನೇಹಿತೆ. ಎಲ್ಸಾ ಒಬ್ಬ ವಿಚಾರವಾದಿ ಹೆಣ್ಣು. ದಕ್ಷಿಣ ಆಫ್ರಿಕಾದ ಕರಿಯರ ಬವಣೆಗೆ ಮರಗುತ್ತಾಳೆ. ಚರ್ಚ್ ನ ನೀತಿಗಳನ್ನು ಆಕೆ ವಿರೋಧಿಸುತ್ತಾಳೆ. ವಿದ್ಯಾವಂತೆ ಎಲ್ಸಾಗೆ ಹಳ್ಳಿಯಲ್ಲಿ ತನ್ನದೇ ಲೋಕವನ್ನು ಸೃಷ್ಟಿಸಿಕೊಂಡಿರುವ ಹೆಲೆನ್ ಗೆಳತಿಯಾಗುತ್ತಾಳೆ. ಹೆಲೆನ್ ಮತ್ತು ಎಲ್ಸಾ ನಡುವೆ ಒಂದು ಅನ್ಯೋನ್ಯ ಬಾಂಧವ್ಯ ಬೆಳೆಯುತ್ತೆ. ಹೆಲೆನ್ ಸೃಷ್ಟಿಸಿದ ಮೆಕ್ಕಾ ಅರ್ಥವಾಗುವುದು ಎಲ್ಸಾಗೆ ಮಾತ್ರ. ಉಳಿದವರೆಲ್ಲಾ ಆಕೆಯನ್ನು ಹುಚ್ಚಿಯೆಂಬಂತೆ ಬಿಂಬಿಸಲು ಪ್ರಯತ್ನಿಸುತ್ತಾರೆ. ಚರ್ಚ್ ನವರು ಕೂಡ ಇದೇ ಕಾರಣಕ್ಕೆ ಹೆಲೆನ್ ಳನ್ನು ವೃದ್ಧಾಶ್ರಮಕ್ಕೆ ಸೇರಿಸುವ ಹುನ್ನಾರ ನಡೆಸುತ್ತಾರೆ. ಚರ್ಚ್ ನ ಪಾದ್ರಿ ಮಾರಿಯಟ್ ಹೆಲೆನ್ ಗೆ ಸ್ನೇಹಿತ. ಆತನ ಜೊತೆಗೆ ಹೆಲೆನ್ ಗೆ ಸಲಿಗೆಯಿರುತ್ತೆ. ಆದರೆ ಆತ ತನ್ನ ಮಾತಿನಲ್ಲಿ ಮೋಡಿ ಮಾಡುವವನು. ಅವನ ಮಾತಿಗೆ ಪ್ರತ್ಯುತ್ತರ ಕೊಡೋದು ಅನೇಕ ಬಾರಿ ಹೆಲೆನ್ ಗೆ ಕಷ್ಟವಾಗುತ್ತೆ. ವೃದ್ಧಾಶ್ರಮಕ್ಕೆ ಸೇರಿಸುವ ಅರ್ಜಿಯನ್ನು ಅದೇ ಮಾರಿಯಟ್ ತುಂಬಿರುತ್ತಾನೆ. ಆದ್ರೆ ಅದಕ್ಕೆ ಸಹಿ ಹಾಕಲು ಹೆಲೆನ್ ಗೆ ಒತ್ತಡ ಹೇರುತ್ತಾನೆ. ಹೆಲೆನ್ ಗೆ ತನ್ನ ಮೆಕ್ಕಾ ಬಿಟ್ಟು ವೃದ್ಧಾಶ್ರಮ ಸೇರಲು ಮನಸ್ಸಿಲ್ಲ. ಹಾಗಂತ ಮಾರಿಯಟ್ ನ ಮಾತಿಗೆ ಇಲ್ಲ ಅಂತ ಖಂಡಿತವಾಗಿ ಹೇಳೋದಿಕ್ಕೂ ಸಾಧ್ಯವಾಗದೆ ತೊಳಲಾಡುತ್ತಾಳೆ ಹೆಲೆನ್.
ಅಂದಹಾಗೆ ದಕ್ಷಿಣ ಆಫ್ರಿಕಾದ ನಾಟಕಕಾರ. ಕಾದಂಬರಿಕಾರ ಅಥೊಲ್ ಫುಗಾರ್ಡ್ ಬರೆದಿರುವ ನಾಟಕವನ್ನು ಕನ್ನಡಕ್ಕೆ ಭಾಷಾಂತರಿಸಿ ನಿರ್ದೇಶಿಸಿದ್ದು ಹಿರಿಯ ರಂಗಕರ್ಮಿ ಪ್ರಸನ್ನ. ಇಡೀ ನಾಟಕ ಎರಡು ಅಂಕಗಳಲ್ಲಿ ಮುಗಿದುಹೋಗುತ್ತೆ. ಪ್ರಸನ್ನ ಹೆಚ್ಚಿನ ರಂಗಸಜ್ಜಿಕೆಗಳನ್ನು ನಾಟಕದಲ್ಲಿ ಬಳಸಿಲ್ಲ. ಸಂಭಾಷಣೆ ಮತ್ತು ಅಭಿನಯವೇ ನಾಟಕದ ಜೀವಾಳ. ಅದರ ಮೂಲಕ ಕಲ್ಪನಾ ಲೋಕವನ್ನೇ ನೋಡುಗನ ಮನಸ್ಸಿನಲ್ಲಿ ಸೃಷ್ಟಿಸುವ ಕೆಲಸವನ್ನು ಪ್ರಸನ್ನ ಮಾಡಿದ್ದಾರೆ. ಕೇವಲ ರಂಗಸಜ್ಜಿಕೆಯನ್ನು ಹಾಕಿ ಅದರ ಸೀಮಿತ ಚೌಕಟ್ಟಿನಲ್ಲಿ ನಾಟಕದ ವ್ಯಾಪ್ತಿಯನ್ನು ಮಿತಿಗೊಳಿಸುವ ಬದಲು ನೋಡುಗನ ಕಲ್ಪನೆಗೆ ಅದೆಲ್ಲವನ್ನೂ ಬಿಟ್ಟಿದ್ದಾರೆ. ತರಿಕಿಟ ತಂಡದ ಕಲಾವಿದರು ಇದನ್ನು ಮನೋಜ್ಞವಾಗಿ ರಂಗದ ಮೇಲೆ ಪ್ರದರ್ಶಿಸಿದ್ದಾರೆ.
ಮೆಕ್ಕಾದ ದಾರಿಯ ಅದ್ಭುತ ಲೋಕವನ್ನು ರಂಗದ ಮೇಲೆ ನೋಡುವುದು ಒಂದು ಸುಂದರ ಅನುಭವ !

Sunday, March 3, 2013

'ನಮ್ಮ ರಾಬರ್ಟ್ ಕ್ಲೈವ್' ತೆರೆದಿಡುವ ಕಟುಸತ್ಯ

ರಾಬರ್ಟ್ ಕ್ಲೈವ್...!
ಈಸ್ಟ್ ಇಂಡಿಯಾ ಕಂಪನಿಯ ಅಧಿಕಾರಿ. ಪ್ಲಾಸಿ ಕದನದಲ್ಲಿ ಸಿರಾಜ್ ಉದ್ ದೌಲನಿಗೂ ರಾಬರ್ಟ್ ಕ್ಲೈವ್ ನೇತೃತ್ವದ ಬ್ರಿಟಿಷ್ ಪಡೆಗೂ ಯುದ್ದ ನಡೆದು ಸಿರಾಜ್ ಉದ್ ದೌಲ ಸೋತು ಹೋದ. ಸಿರಾಜ್ ಉದ್ ದೌಲನ ಸೇನಾಪತಿಯಾಗಿದ್ದ ಮೀರ್ ಜಾಫರ್ ಮೋಸದಿಂದ ಯುದ್ಧ ಸೋಲುವಂತೆ ನೋಡಿಕೊಂಡ. ಮುಂದೆ ಮೀರ್ ಜಾಫರನೇ ನವಾಬನಾದ. ಶಾಲೆಯಲ್ಲಿ ಇತಿಹಾಸದ ಪಾಠದಲ್ಲಿ ಓದಿದ್ದ ಘಟನೆಗಳಿವು.
ಆದ್ರೆ ರಾಬರ್ಟ್ ಕ್ಲೈವನನ್ನು ರಂಗಭೂಮಿಗೆ ಎಳೆದು ತಂದು ಆತನ ಬಾಯಿಂದಲೇ ಅವನ ಕಥೆಯನ್ನು ಹೇಳಿಸಿದ್ದು ಮಾತ್ರವಲ್ಲ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿ ಹೇಗೆ ದೇಶದ ಆಡಳಿತ ಸೂತ್ರ ಹಿಡಿಯಿತು ಅನ್ನೋದನ್ನು ಬಿಡಿಸಿಟ್ಟಿರೋದು ಪ್ರಕಾಶ್ ಬೆಳವಾಡಿ. 'ನಮ್ಮ ರಾಬರ್ಟ್ ಕ್ಲೈವ್' ಬೆಳವಾಡಿ ರಚಿಸಿ, ನಿರ್ದೇಶಿಸಿರುವ ಕಥಾನಕ.
ಇತ್ತೀಚೆಗೆ ಭಾರತದಲ್ಲಿ ಭ್ರಷ್ಟಾಚಾರದ ಬಗ್ಗೆ ಎಲ್ಲರೂ ಮಾತಾಡ್ತಾರೆ. ಭಾರತದ ರಾಜಕಾರಣಿಗಳು ಭ್ರಷ್ಟರು. ಅಧಿಕಾರಿಗಳು ಭ್ರಷ್ಟರು. ಅಷ್ಟೇ ಅಲ್ಲ ಜನರು ಕೂಡ ಭ್ರಷ್ಟರು ಅನ್ನೋ ಮಾತು ಸಹಜ ಕೋಪದೊಂದಿಗೆ ವ್ಯಕ್ತವಾಗುತ್ತಿದೆ.  'ಹಿಂದೆ ಎಲ್ಲವೂ ಸರಿ ಇತ್ತು. ಈಗ ಎಲ್ಲಾ ಹಾಳಾಗೋಗಿದೆ' ಅಂತ ಗೋಗರೆಯೋದು ಮಾಮೂಲಾಗಿದೆ. ಆದ್ರೆ ಇದು ಕೇವಲ ಇಂದಿನ ಸೃಷ್ಟಿಯಲ್ಲ. ಇದು ಎಲ್ಲವೂ ಒಪ್ಪತಕ್ಕ ವಿಚಾರ. ಆದ್ರೆ ಇತಿಹಾಸವನ್ನು ಕೆದಕೋದು ಮಾತಾಡಿದಷ್ಟು ಸುಲಭವಲ್ಲ. ಆ ಕೆಲಸ ಮಾಡಿದ್ದಾರೆ ಪ್ರಕಾಶ್ ಬೆಳವಾಡಿ.
ಇತಿಹಾಸಕ್ಕೆ ಬೆಳಕು ಚೆಲ್ಲಿ, ರಾಬರ್ಟ್ ಕ್ಲೈವ್ ಮತ್ತು ಆತನ ಹಿಂದೆ ನಡೆದ ಘಟನೆಗಳೇ ನಾಟಕದ ವಸ್ತು. ಇಂಗ್ಲೆಂಡ್ ನಿಂದ ಇಂಡಿಯಾಗೆ ವ್ಯಾಪಾರಕ್ಕೆ ಬಂದ ಕಂಪನಿಯವರು, ಲಾಭ ನಷ್ಟದ ಲೆಕ್ಕಾಚಾರ ಹಾಕ್ಕೊಂಡು ಬಂದವರು. ಭಾರತದೊಳಗೆ ಬಂದ ನಂತರ ಇಲ್ಲಿನ ದೊರೆಗಳು, ನವಾಬರು, ನಿಜಾಮರು, ಸುಬೇದಾರರನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಪಳಗಿಸಿಕೊಳ್ಳುತ್ತಾರೆ. ಇದೆಲ್ಲೆದಕ್ಕೂ ನೆರವಾಗೋದು ದಲ್ಲಾಳಿ ಸೇಠ್ ಗಳು.. ಸೇಠುಗಳಲ್ಲಿ ವ್ಯಕ್ತಿಗಳು ಬದಲಾಗಬಹುದು. ಆದ್ರೆ ಪಾತ್ರ ಬದಲಾಗೋದಿಲ್ಲ. ಇದನ್ನು ಮನೋಜ್ಞವಾಗಿ ನಾಟಕದಲ್ಲಿ ನಿರೂಪಿಸಲಾಗಿದೆ.
' ಭಾರತದಲ್ಲಿ ಅಧಿಕಾರ ಸಿಗುವ ಮೊದಲು ಆತ ತಾವು ಹೇಳಿದಂತೆ ಕೇಳುತ್ತಾರೆ.. ಆದ್ರೆ ಒಮ್ಮೆ ಗದ್ದುಗೆ ಏರಿದ ಮೇಲೆ ಎದೆ ಸೆಟೆಸಿ ತಮಗೇ ಸವಾಲಾಗುತ್ತಾರೆ ..' ಅನ್ನೋ ರೀತಿಯ ಮಾತೊಂದು ಬರುತ್ತದೆ. ಇದು ಅಂದಿಗೂ ನಿಜ. ಇಂದಿಗೂ ನಿಜ.
ದೇಶದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರಕ್ಕೆ ಮೂಲಧಾತುವಿನಂತಿದೆ ರಾಬರ್ಟ್ ಕ್ಲೈವ್ ಮತ್ತಾತನ ಕಂಪನಿ ಆಡಳಿತ ಕಾಲದ ಕಥೆ. ಚಕ್ರವರ್ತಿ, ನವಾಬ, ನಿಜಾಮ, ಸುಬೇದಾರರ ನಡುವೆ ಕಂಪನಿಯ ಅಧಿಕಾರಿಗಳು. ಜೊತೆಗೆ ಇವರೆಲ್ಲರ ನಡುವೆ ತಮ್ಮ ಹಿತ ಕಾಯ್ದುಕೊಳ್ಳುವ ದಲ್ಲಾಳಿಗಳು. ಪ್ರತಿಯೊಬ್ಬರೂ ತಮ್ಮ ಮೂಗಿನ ನೇರಕ್ಕೆ, ತಮ್ಮ ಅನುಕೂಲಕ್ಕೆ ತಕ್ಕಂತೆ ನಿಯಮಗಳನ್ನು ರೂಪಿಸುವವರು.  ತಮ್ಮ ಲಾಭ ನಷ್ಟದ ಬಗ್ಗೆ ಚಿಂತಿಸುವವರು. ಹೀಗೆ ಪ್ರತಿಯೊಂದು ಸ್ತರದಲ್ಲೂ ತಾಂಡವವಾಡುವ ಲಂಚಗುಳಿತನವನ್ನು ಬಿಂಬಿಸಲಾಗಿದೆ.
ನಾಟಕದಲ್ಲಿ ಇತಿಹಾಸವನ್ನು ಹೇಳುತ್ತಾ ಹೋಗೋದ್ರಿಂದ ಎಲ್ಲಾ ಮಾಹಿತಿಯನ್ನು ನೋಡುಗ ನೆನಪಿಟ್ಟುಕೊಳ್ಳೋದು ಕಷ್ಟ. ಇಷ್ಟಕ್ಕೂ ಎಲ್ಲವನ್ನೂ ನೆನಪಿಟ್ಟುಕೊಳ್ಳಬೇಕಂತೇನಿಲ್ಲವಲ್ಲ. ಆದ್ರೆ ಇವೆಲ್ಲಾ ಮೆಲುಕಾಗಿ - ನಮ್ಮ ಮುಂದೆ ನಮ್ಮ ಇತಿಹಾಸದ ಕಟುಸತ್ಯಗಳನ್ನು ತೆರೆದಿಡುತ್ತದೆ. ಈ ಕೆಲಸವನ್ನು ಪ್ರಕಾಶ್ ಬೆಳವಾಡಿ ಅಚ್ಚುಕಟ್ಟಾಗಿ ಮಾಡಿದ್ದಾರೆ.
ಅವಕಾಶ ಸಿಕ್ಕಾಗ ಮಿಸ್ ಮಾಡಿಕೊಳ್ಳದೆ ನೋಡಲೇಬೇಕಾದ ನಾಟಕ ಇದು.