Sunday, August 24, 2014

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾವು



ನಮಗೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಭಾರತೀಯರಿಗೆ ಕಲ್ಪಿಸಿರುವ ಅಮೂಲ್ಯ ಹಕ್ಕಿದು. ಎಲ್ಲ ವಿಚಾರಗಳ ಬಗ್ಗೆ ನಾವು ಯಾವುದೇ ನಿರ್ಭಿಡೆಯಿಲ್ಲದೆ ನಮ್ಮ ಅಭಿಪ್ರಾಯವನ್ನು ದಾಖಲಿಸಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಬಹುದೊಡ್ಡ ಆಸ್ತಿ. ಇದರಿಂದಾಗಿಯೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಿ ರೂಪುಗೊಂಡಿರುವುದು. ರೂಪುಗೊಳ್ಳುತ್ತಿರುವುದು.

ಅದರಲ್ಲೂ ಈಗ ಅಭಿವ್ಯಕ್ತಿಯ ಯುಗ. ನಮ್ಮ ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಅದು ಕೇವಲ ಗೆಳೆಯರ ಜೊತೆ ಮಾತಿನ ಕಟ್ಟೆಯಲ್ಲಿ ಕುಳಿತು ಆಡುವ ಮಾತಿಗಷ್ಟೇ ಸೀಮಿತವಾಗಿಲ್ಲ. ಯಾವುದೇ ಮಾಧ್ಯಮದವರ ಹಂಗೂ ಬೇಕಿಲ್ಲ. ಯಾರ ಒಪ್ಪಿಗೆಯೂ ಬೇಕಿಲ್ಲ. ಅಪ್ಪಣೆಗೂ ಕಾಯಬೇಕಿಲ್ಲ. ನಮಗನ್ನಿಸಿದನ್ನು ಬಹಳ ಮುಕ್ತವಾಗಿ ಚರ್ಚಿಸಬಹುದು. ನಮಗನ್ನಿಸಿದನ್ನು ದಾಖಲಿಸಬಹುದು. ಇಷ್ಟವಿದ್ದವರು ಓದಿ ಖುಷಿಪಡುತ್ತಾರೆ. ಇಷ್ಟವಿಲ್ಲದವರು ಓದಿ ಉರಿ ಪಟ್ಟುಕೊಳ್ಳುತ್ತಾರೆ. ಅಷ್ಟೇ. ಅಷ್ಟೊಂದು ಮುಕ್ತ ವೇದಿಕೆಯನ್ನು ಸಾಮಾಜಿಕ ತಾಣಗಳು ತೆರೆದುಕೊಟ್ಟಿವೆ. ನವಮಾಧ್ಯಮದ ಶಕ್ತಿಯೇ ಅದು. ಇದು ಸಾಮಾನ್ಯ ಜನರ ಅಭಿವ್ಯಕ್ತಿಗೂ ಮುಕ್ತ ಮಾರುಕಟ್ಟೆಯನ್ನು ಒದಗಿಸಿದೆ. ಪ್ರತಿಯೊಬ್ಬರಿಗೂ ಮಾತಾಡುವ ಅವಕಾಶ ಕೊಟ್ಟಿದೆ. ಬರೆಯಲು ಪ್ರೋತ್ಸಾಹಿಸಿದೆ. ಅಭಿವ್ಯಕ್ತಿಗೆ ಇಲ್ಲಿ ಸಂಪೂರ್ಣ ಸ್ವಾತಂತ್ರ್ಯ.

ಇಂದು ನಾವು ಯಾವುದೇ ಭೀತಿಯಿಲ್ಲದೆ ಯಾವುದೇ ವ್ಯಕ್ತಿಯ ಬಗ್ಗೆಯೂ ಟೀಕಿಸಬಹುದು. ಆತನ ಪೂರ್ವಾಪರ ಸಂಪೂರ್ಣ ತಿಳಿದುಕೊಳ್ಳಲೇಬೇಕಂತೇನು ಇಲ್ಲ. ಆತ ಹೇಳಿದ ಯಾವುದೋ ಒಂದು ಮಾತು, ಆತನ ತೆಗೆದುಕೊಂಡು ಯಾವುದೋ ನಿಲುವು, ಆತ ಬರೆದ ಯಾವುದೇ ಬರಹ, ಆತನ ಯಾವುದೋ ಸಂಬಂಧದ ಬಗ್ಗೆ ನಮಗೆ ಇಷ್ಟವಾಗದಿದ್ದರೆ ಸಾಕು. ಅದು ನಾವು ನಂಬಿರುವ ಸಿದ್ಧಾಂತಕ್ಕೆ, ನಮ್ಮ ನಂಬಿಕೆೆಗೆ ವಿರುದ್ಧವಾಗಿದ್ದರೆ ಯಾವುದೇ ಮುಲಾಜಿಲ್ಲದೆ ವಿರೋಧಿಸಬಹುದು. ಹೀಗೆ ವಿರೋಧ ವ್ಯಕ್ತಪಡಿಸೋದಿಕ್ಕೆ ಯಾರ ಅನುಮತಿಯೂ ಬೇಕಿಲ್ಲ. ವಿರೋಧಕ್ಕೆ ಪುಷ್ಟಿ ಕೊಡಲು ನಮಗೆ ಯಾವುದೇ ಆಧಾರಗಳು ಬೇಕಿಲ್ಲ. ಅದಕ್ಕೆ ಭಾಷೆಯ ಮೇಲೆ ಹಿಡಿತ, ಸರಿಯಾದ ವ್ಯಾಕರಣ ಯಾವುದೂ ಬೇಕಿಲ್ಲ. ಆ ಕ್ಷಣದಲ್ಲಿ ಅನ್ನಿಸಿದನ್ನು ನಿರ್ಭಿಡೆಯಿಂದ ಬರೆಯುವ ಧೈರ್ಯವಿದ್ದರೆ ಸಾಕು. ಒಂದು ವೇಳೆ ಆ ಧೈರ್ಯವಿಲ್ಲದಿದ್ದರೂ ಆಗುತ್ತೆ. ಅನ್ಯರ ಹೆಸರು ಬಳಸುವ, ಫೋಟೋ ಹಾಕುವ, ಫೇಕ್ ಅಕೌಂಟ್‌ಗಳನ್ನು ಸೃಷ್ಟಿಸುವ ಕಲೆ ಗೊತ್ತಿದ್ದರೂ ನಡೆಯುತ್ತದೆ.

ಪೀಠಿಕೆ ಸ್ವಲ್ಪ ದೊಡ್ಡದೇ ಅನ್ನಿಸಬಹುದು. ಆದರೆ ಕಳೆದೆರಡು ದಿನಗಳಿಂದ ಅನ್ಸಿಸಿದ ಕೆಲವೊಂದು ವಿಚಾರಗಳನ್ನು ತಿಳಿಸಲು ಇದರ ಅವಶ್ಯಕತೆ ಖಂಡಿತ ಇದೆ. ಡಾ. ಯು. ಆರ್. ಅನಂತಮೂರ್ತಿ ಬದುಕಿದ್ದಾಗ ಅವರನ್ನು ವಿರೋಧಿಸಲು ಅನೇಕ ಕಾರಣಗಳು ಅನೇಕರಿಗೆ ಇದ್ದಿರಬಹುದು. ಒಬ್ಬ ಸಾಹಿತಿ, ಬರಹಗಾರ, ಚಿಂತಕನ ಎಲ್ಲಾ ವಿಚಾರಧಾರೆಗಳನ್ನು ಎಲ್ಲರೂ, ಎಲ್ಲಾ ಕಾಲಕ್ಕೂ ಒಪ್ಪಿಕೊಳ್ಳಬೇಕು ಅಂತೇನು ಇಲ್ಲ. ಅದು ಅನಂತಮೂರ್ತಿಯವರಿಗೂ ಅನ್ವಯಿಸುತ್ತದೆ. ಆದರೆ ಒಬ್ಬ ವ್ಯಕ್ತಿ ಸತ್ತಾಗ ಆತನಿಗೊಂದು ಶ್ರದ್ಧಾಂಜಲಿ, ನಿಟ್ಟುಸಿರು, ಆತನಿಗೊಂದು ಗೌರವ ಸಲ್ಲಿಸೋದು ಮನುಷ್ಯ ಧರ್ಮ. ಕಾಗೆಗಳು ತಮ್ಮ ಸಿಕ್ಕಿರುವ ಆಹಾರದ ವಿಚಾರಕ್ಕೆ ಕೆಲವೊಮ್ಮೆ ಒಂದು ಇನ್ನೊಂದರ ಮೇಲೆ ಸಿಟ್ಟಾಗಿ ಎರಗಬಹುದು. ಆದರೆ ಒಂದು ಕಾಗೆ ಸತ್ತರೆ ಉಳಿದೆಲ್ಲಾ ಕಾಗೆಗಳು ಕಾ.. ಕಾ.. ಕಾ.. ಅಂತ ಹಾರಾಡಿ ಬರುವುದು ಅವುಗಳ ಬಳಗದಲ್ಲಿ ಸಂಭವಿಸಿದ ಸಾವಿಗೆ ಮರುಗುವುದಕ್ಕಾಗಿ. ಆದರೆ ಮನುಷ್ಯರಿಗೆ ಸತ್ತ ಮೇಲೂ ಮುಂದುವರೆಯುವ ದ್ವೇಷಕ್ಕೆ ಕಾರಣಗಳೇ ಗೊತ್ತಾಗುವುದಿಲ್ಲ.

ಮೋದಿ ವಿರುದ್ಧ ಮಾತಾಡಿದ ಅನಂತಮೂರ್ತಿ ಅಂತಹ ಘನಘೋರ ಅಪರಾಧ ಎಸಗಿದರೆ ? ಅದು ಅವರ ಎಲ್ಲ ಬರಹಗಳನ್ನು ಮರೆಸುವಷ್ಟು ದೊಡ್ಡ ಅಪರಾಧವೇ? ಎಲ್ಲರೂ ಬಯಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಅವರಿಗೆ ಇರಲಿಲ್ಲವೇ? ಅವರು ಆ ಮಾತನ್ನು ಹೇಳಿದ ಸಂದರ್ಭದಲ್ಲಿ ವಾಚಾಮಗೋಚರವಾಗಿ ಅವರನ್ನು ನಿಂದಿಸಿ ಬರೆದರು. ಪಾಕಿಸ್ತಾನಕ್ಕೆ ಹೋಗಲು ಟಿಕೇಟ್ ಕಳಿಸಿದರು. ಆದರೆ ಇಷ್ಟಕ್ಕೆ ತೃಪ್ತರಾಗದ ಕೆಲವರು ಅವರು ಇಹಲೋಕ ತ್ಯಜಿಸಿದ ಮೇಲೂ ಸಂಭ್ರಮಿಸಿದರು. ಖುಷಿಪಟ್ಟರು. ಆದರೆ ಯಾರ ಕಾರಣಕ್ಕಾಗಿ ಅನಂತಮೂರ್ತಿಯವರ ವಿರುದ್ಧ ಕೂಗಾಡಿದರೋ ಅದೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಅನಂತಮೂರ್ತಿ ಸಾವಿನಿಂದ ಕನ್ನಡ ಸಾಹಿತ್ಯಕ್ಕಾದ ನಷ್ಟವೆಂದು ಟ್ವೀಟ್ ಮಾಡಿದ್ದರು. ಇದಕ್ಕೆ ಮೋದಿಯವರ ದೊಡ್ಡತನ ಎನ್ನಬೇಕೋ ? ಅನಂತಮೂರ್ತಿಯವರ ಸಾಧನೆ ಕಾರಣ ಎನ್ನಬೇಕೋ ?

ಸಾವಿನ ಸಂದರ್ಭದಲ್ಲೂ ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾದ ಕೆಲ ಪ್ರತಿಕ್ರಿಯೆಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಅಣಕ ಮಾಡಿದಂತೆ ಭಾಸವಾಗುತ್ತಿದೆ.