Thursday, December 1, 2011

ರೆಡಿಮೇಡ್ ನಾಯಕರು ಬೇಕು...

ಕುಮಾರಸ್ವಾಮಿ ಮತ್ತೊಮ್ಮೆ ರಾಜಕೀಯದ ವಿಚಿತ್ರ ಹೆಜ್ಜೆ ಇಟ್ಟಿದ್ದಾರೆ. ಶ್ರೀರಾಮುಲು ಬೆಂಬಲಿಸುವ ಮೂಲಕ.
ಅಕಸ್ಮಿಕವಾಗಿ ನಾನು ಮುಖ್ಯಮಂತ್ರಿಯಾಗಿ ಒಳ್ಳೆ ಕೆಲಸ ಮಾಡಿದೆ ಅನ್ನೋ ಮಾತನ್ನು ಕುಮಾರಸ್ವಾಮಿ ಆಗಾಗ್ಗೆ ಹೇಳುತ್ತಲೇ ಬಂದಿದ್ದಾರೆ. ನಿಜ. ಅವ್ರು ಸಿಎಂ ಆಗಿದ್ದು ಅಕಸ್ಮಿಕವಾಗಿ. ಅಪವಿತ್ರ ಮೈತ್ರಿಯಲ್ಲಿ ಹುಟ್ಟಿದ ಸರ್ಕಾರದ ಮೇಲೆ ಜನ ಹೆಚ್ಚೇನೂ ನಿರೀಕ್ಷೆ ಇಟ್ಟುಕೊಂಡೂ ಇರಲಿಲ್ಲ. ಆದ್ರೆ ಇಪ್ಪತ್ತು ತಿಂಗಳ ಬಹುತೇಕ ಹದಿನೆಂಟು ತಿಂಗಳ ಅವಧಿಯಲ್ಲಿ ಕುಮಾರಸ್ವಾಮಿ ಒಬ್ಬ ಒಳ್ಳೆಯ ಆಡಳಿತಗಾರ ಎನಿಸಿಕೊಂಡಿದ್ದರು. ಜಾತಿ, ಪ್ರದೇಶವನ್ನು ಮೀರಿದ ವರ್ಚಸ್ಸು ಅವ್ರಿಗೆ ಸಿಕ್ಕಿತ್ತು.

ಇದೆಲ್ಲಾ ಸರಿ. ಆದ್ರೆ ಕುಮಾರಸ್ವಾಮಿ ಈಗ ಮಾಡ್ತಿರೋದೇನು? ಕಳೆದ ಎರಡೂವರೆ ವರ್ಷದಲ್ಲಿ ಕುಮಾರಸ್ವಾಮಿ ಹಲವು ಬಾರಿ ಸರ್ಕಾರದ ವಿರುದ್ಧ ಜನಾಂದೋಲನ ರೂಪಿಸುವ, ಹೋರಾಟ ಮಾಡುವ ಘೋಷಣೆಗಳನ್ನು ಮಾಡಿದ್ದಾರೆ. ಬೀದರ್ ನಿಂದ ಚಾಮರಾಜನಗರದವರೆಗೆ ಪಾದಯಾತ್ರೆಯೋ, ಬಸ್ ಯಾತ್ರೆಯೋ ಯಾವುದೋ ವಿಶಿಷ್ಟ ಯಾತ್ರೆ ಮಾಡೋದಾಗಿ ಘೋಷಿಸಿಕೊಂಡಿದ್ದರು. ಆದ್ರೆ ಯಾವಾಗ ಕಾಂಗ್ರೆಸ್ ಕಳೆದ ವರ್ಷ ಬಳ್ಳಾರಿವರೆಗೆ ಪಾದಯಾತ್ರೆ ಮಾಡ್ತೋ ಆಗ ಇದ್ದಕ್ಕಿದ್ದಂತೆ ಕುಮಾರಸ್ವಾಮಿ ತಮ್ಮ ಐಡಿಯಾವನ್ನು ಕಾಂಗ್ರೆಸ್ ನಾಯಕರು ಹೈಜಾಕ್ ಮಾಡಿದ್ರು ಅಂತ ಹೇಳ್ಕೊಂಡ್ರು. ಹೀಗೆ ಹೇಳುತ್ತಾ ಕಾಲ ಕಳೆದ್ರೇ ಹೊರತು ಕುಮಾರಸ್ವಾಮಿ ಯಾವುದೇ ಯಾತ್ರೆಗೆ ಮನಸ್ಸು ಮಾಡ್ಲಿಲ್ಲ. ಇಷ್ಟಕ್ಕೂ ಪಾದಯಾತ್ರೆಗೆ ಯಾರೂ ಪೇಟೆಂಟ್ ಪಡ್ಕೊಂಡಿಲ್ಲ.
ಆದ್ರೆ ಕಳೆದ ಒಂದೂವರೆ ವರ್ಷದಿಂದ ಕುಮಾರಸ್ವಾಮಿ ಹೆಚ್ಚು ಆಕ್ಟಿವ್ ಆಗಿದ್ದುದು ಯಡಿಯೂರಪ್ಪ ವಿರುದ್ಧದ ದಾಖಲೆಗಳನ್ನು ಬಿಡುಗಡೆ ಮಾಡೋದ್ರಲ್ಲಿ. ಯಡಿಯೂರಪ್ಪರನ್ನ ಖೆಡ್ಡಾಗೆ ಬೀಳಿಸೋದ್ರಲ್ಲಷ್ಟೇ ಕುಮಾರಸ್ವಾಮಿಯವ್ರಿಗೆ ಆಸಕ್ತಿ ಇತ್ತು. ಹಾಗಿದ್ರೂ ಕೊನೆಗೆ ಯಡಿಯೂರಪ್ಪ ಜೈಲಿಗೆ ಹೋದಾಗ ಅವ್ರ ಬಗ್ಗೆ ಅನುಕಂಪದ ಮಳೆಗೆರೆದು ನಾಯಕತ್ವದ ಒಣ ಪ್ರದರ್ಶನಕ್ಕೆ ಮುಂದಾದ್ರು.
ಇಷ್ಟೆಲ್ಲಾ ಆದ್ಮೇಲೆ ಕುಮಾರಸ್ವಾಮಿಗೆ ಇದ್ದಕ್ಕಿದ್ದಂತೆ ಶ್ರೀರಾಮುಲು ಕಡೆಗೆ ಒಲವು ಹೆಚ್ಚಾಯ್ತು. ನಾಯಕ ಸಮುದಾಯದ ವೋಟ್ ಬ್ಯಾಂಕ್ ಮೇಲೆ ಕಣ್ಣಿಟ್ಟೇ ಇಂತದ್ದೊಂದು ನಿರ್ಧಾರಕ್ಕೆ ಕುಮಾರಸ್ವಾಮಿ ಬಂದಿದ್ದಾರೆ ಅನ್ನೋದು ಗುಟ್ಟಾಗಿ ಉಳಿದಿಲ್ಲ. ಹೇಗಾದ್ರೂ ಮಾಡಿ ಬಿಜೆಪಿ ಸರ್ಕಾರವನ್ನು ಕೆಡವಿ ಚುನಾವಣೆಗೆ ಹೋಗಿ ಐವತ್ತರವತ್ತು ಸೀಟ್ ಗೆದ್ರೆ ಮುಂದೆ ರಾಜ್ಯ ರಾಜಕೀಯದಲ್ಲಿ ಪ್ರಮುಖ ಪಾತ್ರ ನಿಭಾಯಿಸಬಹುದು ಅನ್ನೋ ಲೆಕ್ಕಾಚಾರ ಜೆಡಿಎಸ್ ಪಾಳಯದಲ್ಲಿದೆ. ಇದಕ್ಕೆ ಜೆಡಿಎಸ್ ಗೆ ಸದ್ಯ ರೆಡಿಮೇಡ್ ನಾಯಕರು ಬೇಕು. ಶ್ರೀರಾಮುಲು ಇಂತ ಒಬ್ಬ ರೆಡಿಮೇಡ್ ನಾಯಕ. ಅವ್ರ ಮೂಲಕ ಕೆಲ ಜಿಲ್ಲೆಗಳಲ್ಲಿ ಜೆಡಿಎಸ್ ಗೆ ನೇರ ಅಥವಾ ಪರೋಕ್ಷ ಸಹಾಯ ಆಗುತ್ತೆ ಅನ್ನೋ ಲೆಕ್ಕಾಚಾರ ಜೆಡಿಎಸ್ ನದ್ದು.
ಹಾಗಾದ್ರೆ ಕಳೆದ ಮೂರೂವರೆ ವರ್ಷದಿಂದ ಜೆಡಿಎಸ್ ನ ನಾಯಕರು ಪಕ್ಷ ಕಟ್ಟುವ ಕೆಲಸಕ್ಕೆ ಪ್ರಾಮಾಣಿಕವಾಗಿ ಏನ್ ಕೆಲ್ಸ ಮಾಡಿದ್ದಾರೆ. ಯಡಿಯೂರಪ್ಪ ವಿರುದ್ಧ ದಾಖಲೆಗಳನ್ನು ಸರಣಿಯಾಗಿ ಬಿಡುಗಡೆ ಮಾಡಿದ ಕುಮಾರಸ್ವಾಮಿ ಉಳಿದಂತೆ ಮಾಡಿದ್ದೇನು. ಮಾಜಿ ಸಿಎಂ ಆಗಿದ್ದ ಕುಮಾರಸ್ವಾಮಿ ರಾಜ್ಯದ ಯಾವುದೇ ವಿಧಾನಸಭಾ ಕ್ಷೇತ್ರಕ್ಕೆ ಹೋದ್ರೂ ಒಂದಷ್ಟು ಅಭಿಮಾನಿಗಳ ದಂಡಿತ್ತು. ಆದ್ರೆ ಕ್ಷೇತ್ರಗಳ ಪ್ರವಾಸದ ಬಗ್ಗೆ ಬೆಂಗಳೂರಿನಲ್ಲಿ ಕುಳಿತು ಮೀಡಿಯಾ ಮುಂದೆ ಹೇಳ್ಕೊಂಡ್ರೇ ಹೊರತು ವಾಸ್ತವವಾಗಿ ವಿಷಯಾಧಾರಿತ ಪ್ರವಾಸ ಮಾಡಲು ಹೋಗಲೇ ಇಲ್ಲ.
ಹಾಗೆ ನೋಡಿದ್ರೆ ಪ್ರಾದೇಶಿಕ ಪಕ್ಷಗಳನ್ನು ಕಟ್ಟಿ ಬೆಳೆಸಲು ಅದ್ರ ನಾಯಕರಿಗೆ ಹಠ ಮತ್ತು ಸತತ ಪರಿಶ್ರಮ ಬೇಕು. ಪಶ್ಚಿಮ ಬಂಗಾಳದಲ್ಲಿ ಇವತ್ತು ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿದ್ರೆ ಅದಕ್ಕೆ ಅವರ ನಿರಂತರ ಪರಿಶ್ರಮ ಕಾರಣ. ಎಡಪಕ್ಷಗಳಂತಹ ಕಾರ್ಯಕರ್ತರ ಆಧಾರಿತ ಪಕ್ಷವನ್ನು ಬುಡಮೇಲು ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಿದ್ದರು ಮಮತಾ. ವಿಷಯಾಧಾರಿತವಾಗಿ ಹೋರಾಟ ನಡೆಸುತ್ತಲೇ ಸಾಗಿದ್ರು. ಅವಕಾಶ ಸಿಕ್ಕಾಗ ಕೇಂದ್ರದಲ್ಲಿ ಮಂತ್ರಿಯಾಗಿ ಕೆಲಸ ಮಾಡಿದ್ರು. ಅದೇ ಅವ್ರನ್ನು ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆಯ ಮೇಲೆ ತಂದು ಕೂರಿಸಿದ್ದು.
ಆದ್ರೆ ಸದಾಶಿವನಗರದ ಗೆಸ್ಟ್ ಹೌಸ್ ನಲ್ಲಿ ಕುಳಿತೇ ಬಹುಕಾಲ ಕಳೆಯುವ ಕುಮಾರಸ್ವಾಮಿ ಕಳೆದ ನಾಲ್ಕು ವರ್ಷದ ಅವಧಿಯಲ್ಲಿ ಒಂದಷ್ಟು ತೂಕ ಹೆಚ್ಚಿಸಿಕೊಂಡಿದ್ದು ಬಿಟ್ಟರೆ ಇದುವರೆಗೆ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ನಡೆಸಲೇ ಇಲ್ಲ. ಉತ್ತರ ಕರ್ನಾಟಕದ ನೆರೆ ಪೀಡಿತ ಪ್ರದೇಶಗಳಲ್ಲಿ ವಾಸ್ತವ್ಯ ಹೂಡೋದಾಗಿ ಘೋಷಿಸಿದ್ದು ಬಿಟ್ಟರೆ ಅತ್ತ ತಲೆಹಾಕಿ ಮಲಗಲಿಲ್ಲ. ಯಡಿಯೂರಪ್ಪ ವಿರುದ್ಧದ ದಾಖಲೆ ಬಿಡುಗಡೆ ಮಾಡಿದ್ದನ್ನೇ ದೊಡ್ಡ ಹೋರಾಟ ಎಂಬಂತೆ ಬಿಂಬಿಸಿಕೊಂಡಿದ್ದಾರೆ. ಅವ್ರ ಅಕ್ಕಪಕ್ಕದಲ್ಲಿ ಕುಳಿತವರು ಅದನ್ನೇ ಸಾಧನೆ ಎಂಬಂತೆ ಹೇಳುತ್ತಿದ್ದಾರೆ.
ಹೀಗಾಗಿ ಚುನಾವಣೆ ಹತ್ತಿರವಾಗುತ್ತಿರುವಾಗ ಕುಮಾರಸ್ವಾಮಿಯವ್ರಿಗೆ ಅರ್ಜೆಂಟಾಗಿ ರೆಡಿಮೇಡ್ ನಾಯಕರು ಬೇಕು. ಈಗ ಶ್ರೀರಾಮುಲು. ಮುಂದೆ ಇನ್ಯಾರೋ. .
ಯಾವನಿಗ್ಗೊತ್ತು?

Monday, November 28, 2011

ಪ್ರೀತಿ..

ಅರೆ ಹೊಟ್ಟೆಯಲ್ಲಿದ್ದಾಗಿನ
ಪ್ರೀತಿ - ಹೊಟ್ಟೆ ತುಂಬಿದ ಮೇಲೆ
ಹುಟ್ಟುವುದೇ ಇಲ್ಲ...!!!

Wednesday, October 26, 2011

ದೀಪಾವಳಿಯ ಮೆಲುಕುಗಳು...

ದೀಪಾವಳಿ.
ತಕ್ಷಣ ನೆನಪಾಗೋದು ಕತ್ತಲು. ಜೊತೆಗೆ ಮನೆಯ ಜಗಲಿ, ತುಳಸಿ ಕಟ್ಟೆಯ ತುಂಬ ಬೆಳಗುತ್ತಿದ್ದ ಹಣತೆ. ಬಹುಷಃ ಮನುಷ್ಯ ಬೆಳೀತಾ ಬೆಳೀತಾ ದೀಪಾವಳಿಯ ಸಂಭ್ರಮ ಕಡಿಮೆಯಾಗುತ್ತದೆಯೋ ಏನೋ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಬ್ಬ ಅಂದ್ರೆ ಅದು ದೀಪಾವಳಿ ಮಾತ್ರ ಅನ್ಸುತ್ತೆ. ಹಬ್ಬಕ್ಕೆ ಬರುತ್ತೇನೆ ಅಂದ್ರೆ ದೀಪಾವಳಿಗೆ ಬರುತ್ತೇನೆ ಅಂತಾನೇ ಅರ್ಥ. ಕರ್ನಾಟಕದ ಉಳಿದ ಭಾಗಗಳಲ್ಲಿ ಹಬ್ಬಗಳ ಆಚರಣೆ ಜಾಸ್ತಿ ಇದೆ. ನಾಗರಪಂಚಮಿಯಿಂದ ಆರಂಭವಾಗಿ ಒಂದಾದಮೇಲೊಂದು ಹಬ್ಬ ಬರುತ್ತಾನೆ ಇರುತ್ತೆ. ಆದ್ರೆ ದ.ಕ ಜಿಲ್ಲೆಯಲ್ಲಿ ದೀಪಾವಳಿ ಬಿಟ್ರೆ ಬಿಸು. ನಡುವೆ ಕೆಡ್ಡಾಸ. ಆದ್ರೆ ಸಂಭ್ರಮ, ಹಬ್ಬದ ಕಳೆ ಎಲ್ಲಾ ಇರೋದು ದೀಪಾವಳಿಗೆ ಮಾತ್ರ.
ಚಿಕ್ಕವರಿದ್ದಾಗ ದೀಪಾವಳಿ ಬಂತಂದ್ರೆ ನಮಗೆಲ್ಲಾ ನಾಲ್ಕು ಕಾಲಾಗ್ತಿತ್ತು ಅನ್ಸುತ್ತೆ. ಯಾಕಂದ್ರೆ ಹಬ್ಬದ ದಿನ ಹತ್ರ ಬರುತ್ತಿದ್ದಂತೆ ದೀಪಾವಳಿಗೆ ತಯಾರಿ ಜೋರಾಗಿರುತ್ತಿತ್ತು. ಅದ್ರಲ್ಲೂ ಎರಡು ಬಲಿಯೇಂದ್ರ ಮರ ( ಅಂದ್ರೆ ಮರದ ಕಂದು, ತುಂಡು) ನೆಟ್ಟು ಅದಕ್ಕೆ ಶೃಂಗಾರ ಮಾಡೋದು ಸುಳ್ಯ ತಾಲೂಕಿನ ದೀಪಾವಳಿ ಆಚರಣೆಯ ಪ್ರಮುಖ ಭಾಗ. ಒಂದು ಗಂಡು ಮರ ಅಂದ್ರೆ ಸ್ಪಲ್ಪ ದಪ್ಪ ಮತ್ತು ಎತ್ತರದ್ದು, ಇನ್ನೊಂದು ಹೆಣ್ಣು - ಸ್ಪಲ್ಪ ತೆಳ್ಳಗೆ ಮತ್ತು ತಗ್ಗಿನ ಮರವನ್ನು ಮನೆಯ ಮುಂಭಾಗದಲ್ಲಿ ಗಟ್ಟಿಯಾಗಿ ನೆಡುತ್ತಿದ್ದೆವು. ಅದು ನರಕ ಚತುರ್ದಶಿ ದಿವಸ. ಆದ್ರೆ ಮರೆ ನಡೋದಿಕ್ಕೂ ಮೊದಲು ಮರದ ಶೃಂಗಾರಕ್ಕೆ ಬೇರೆ ಬೇರೆ ಮಾಲೆ ಮಾಡ್ತಿದ್ದೆವು. ಹಂದಿ ಬಳ್ಳಿಕಾಯಿ, ಕೇನೆ ಕಾಯಿ, ಪಾದೆ ಹೂ, ಚೆಂಡು ಹೂ, ಬೇರೆ ಬೇರೆ ಹೂಗಳ ಮಾಲೆ, ಇದೆಲ್ಲಾ ಕಾಂಪಿಟೀಷನ್ ಮೇಲೆ ಕಟ್ಟುತ್ತಿದ್ದೆವು. ಬಲಿಯೇಂದ್ರ ಮರ ನೆಡುತ್ತಿದ್ದಂತೆ ಈ ಹೂ - ಕಾಯಿಗಳ ಮಾಲೆಯಿಂದ ಅದಕ್ಕೆ ಅಲಂಕಾರ ಮಾಡ್ತಿದ್ದೆವು. ಆ ಸಂಭ್ರಮವನ್ನು ಇಲ್ಲಿ ಅಕ್ಷರ ರೂಪದಲ್ಲಿ ಹೇಳೋದು ಕಷ್ಟ. ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿತ್ತು ಆಗಿನ ಆನಂದ.

ಇನ್ನು ದೀಪಾವಳಿ ಸಂದರ್ಭದಲ್ಲೇ ದೈವಗಳಿಗೆ( ಭೂತಗಳಿಗೆ) ತಂಬಿಲ. ದೈವಗಳಿಗೆ ಕೋಳಿ ಬಲಿ ಕೊಡುತ್ತಿದ್ದುದು. ಆಗ ನಡೀತಿದ್ದ ಚರ್ಚೆ. ಕೋಳಿ ಕೊರಳನ್ನು ಸ್ವಲ್ಪ ಜಾಸ್ತಿ ಎಳೆದು ಪೂಜಾರಿ ಕೊಯ್ಯುತ್ತಾರೆ ಅನ್ನೋದಕ್ಕೆ ಬರೀ ತಲೆ ಮಾತ್ರ ಸಿಗುವಂತೆ ಹಿಡ್ಕೊಳ್ಳುತ್ತಿದ್ದ ನಮ್ಮವರು. ಇದೆಲ್ಲಾ ಹಾಸ್ಯ, ವಿನೋದಕ್ಕೆ ಕಾರಣವಾಗ್ತಿತ್ತು. ಆದ್ರೆ ನಮ್ಮದು ದೊಡ್ಡ ಕುಟುಂಬ ( ಫ್ಯಾಮಿಲಿ) ಆಗಿದ್ದ ಕಾರಣ ಹೆಚ್ಚಾಗಿ ದೀಪಾವಳಿ ಸಂದರ್ಭದಲ್ಲೇ ಸೂತಕ ಬಂದು ಹಬ್ಬಕ್ಕೆ ಬ್ರೇಕ್ ಕೊಡುತ್ತಿದ್ದುದೂ ಉಂಟು.
ಬಲಿ ಪಾಡ್ಯಮಿ ದಿನ ಬಲಿಯೇಂದ್ರನನ್ನು ಕರೆಯುವ ವಿಧಾನ ಕೂಡ ಅಷ್ಟೇ ಆಕರ್ಷಕ. ಆಗ ಬಲಿ ಚಕ್ರವರ್ತಿಯ ವೈಭವವನ್ನು ವರ್ಣಿಸುವ ಪದಗಳನ್ನು ಅಪ್ಪ ಹೇಳುತ್ತಿದ್ದರು. ಆದ್ರೆ ಈಗ ಅವ್ರು ಹೇಳುತ್ತಿದ್ದ ಪದ ಮರೆತುಹೋಗಿದೆ. ಹೀಗೆ ಬಲಿಯೇಂದ್ರನ್ನು ಆಲುವ ಅಂದರೆ ಕರೆಯುವಾಗ ಚಕ್ರವರ್ತಿ ಬಲಿ ಪಾತಾಳದಿಂದ ಬಂದು ಬೆಳಕಿನ ರೂಪದಲ್ಲಿ ತನ್ನ ಸಾಮ್ರಾಜ್ಯವನ್ನು ವೀಕ್ಷಿಸುತ್ತಾನೆ ಅನ್ನೋದು ನಂಬಿಕೆ.
ದೀಪಾವಳಿ ಹಬ್ಬಾಂತ ಹೇಳಿದ ಮೇಲೆ ಪಟಾಕಿ ಇರಲೇ ಬೇಕು. ನಾನಿನ್ನೂ ಪ್ರೈಮರಿ ಸ್ಕೂಲಲ್ಲಿ ಓದುತ್ತಿದ್ದಾಗ ಅನ್ಸುತ್ತೆ. ಅಪ್ಪ ಪಟಾಕಿಯ ಕಟ್ಟನ್ನು ಓಪನ್ ಮಾಡೋದೇ ನಮಗೊಂದು ಕುತೂಹಲ. ಅಪ್ಪ ನಿಧಾನಕ್ಕೆ ಪಟಾಕಿಯ ಕಟ್ಟುಗಳನ್ನು ಓಪನ್ ಮಾಡ್ತಿದ್ರು. ಅದ್ರಲ್ಲಿ ಬೀಡಿ, ಪಟಾಕಿ, ಓಲೆ ಪಟಾಕಿ, ಲಕ್ಷ್ಮಿ ಪಟಾಕಿ, ಸುರು ಸುರು ಕಡ್ಡಿ, ಮಾಲೆ ಪಟಾಕಿ, ನೆಲ ಚಕ್ರ, ದುರುಸು ಬಾಣ ( ಹೂ ಕುಂಡ), ಹೀಗೆ ಬೇರೆ ಬೇರೆ ಪಟಾಕಿಗಳಿರುತ್ತಿದ್ದವು. ಇನ್ನು ಅದೊಂದು ಮಾತ್ರೆಯ ರೀತಿಯ ಪಟಾರಿ ಇರುತ್ತಿತ್ತು. ಅದನ್ನು ಉರಿಸಿದ್ರೆ ಉದ್ದಕ್ಕೆ ಹಾವು ತರ ಬೆಳೀತಿತ್ತು. ಇದನ್ನೆಲ್ಲಾ ಸುಡೋದ್ರಲ್ಲಿ ಅದೇನೋ ಮಜಾ. ನೆಲ ಚಕ್ರ ಬಿಟ್ಟರಂತೂ ಅದನ್ನು ಫುಟ್ಬಾಲ್ ತರ ಅಂಗಳದ ತುಂಬಾ ಓಡಿಸುತ್ತಿದ್ದೆವು. ಅಬ್ಬಬ್ಬಾ ಈಗ ಅದನ್ನೆಲ್ಲಾ ನೆನೆಸ್ಕೊಂಡ್ರೆ ಮೈ ಜುಮ್ಮೆನ್ನಿಸುತ್ತೆ. ಮನಸ್ಸು ಮಗುವಾಗುತ್ತದೆ. ರಾತ್ರಿಯ ಅಂಗಳದಲ್ಲಿ ಓಡಾಡಿ ಪಟಾಕಿ ಹಚ್ಚಿ ಸಂಭ್ರಮಿಸಬೇಕು ಅನ್ನಿಸುತ್ತಿದೆ. ಪಟಾಕಿ ಸುಡೋದ್ರಿಂದ ಮಾಲಿನ್ಯ ಹೆಚ್ಚಾಗುತ್ತೆ ಅಂತ ಗೊತ್ತಿದ್ರೂ ಪಟಾಕಿಯ ಜೊತೆಗಿನ ಬಾಲ್ಯದ ನಂಟು ಢಂ ಅನ್ನಿಸಬೇಕು ಅಂತ ಪ್ರೇರೇಪಿಸುತ್ತದೆ.

ಹೀಗೆ ಒಂದೆಡೆ ಪಟಾಕಿ ಸುಡುತ್ತಿದ್ದರೆ ಅಪ್ಪ - ಅಣ್ಣ ಕರೀತಿದ್ರು. ಹೋಗಿ ದನಗಳಿಗೆ ಹಬ್ಬ ಕೊಟ್ಟು ಬನ್ನಿ ಅಂತ. ಪಟಾಕಿ ಹೊಡೆಯುವ ಖುಷಿಯ ನಡುವೆ ಇದೊಂದು ಬ್ರೇಕ್. ಆಗ ಹಟ್ಟಿಗೆ ಹೋಗಿ ಎತ್ತು ಹಸುಗಳ ಕಾಲುಗಳನ್ನು ತೊಳೆದು, ಅವುಗಳ ಹಣೆಗೆ ಕುಂಕುಮ ಹಚ್ಚಿ ಪಾದೆ ಹೂವಿನ ಮಾಲೆಯನ್ನು ಅವುಗಳ ಕೊರಳಿಗೆ ಕಟ್ಟುತ್ತಿದ್ದೆವು. ನಂತ್ರ " ವರ್ಷಕ್ಕೊಂದು ಹಬ್ಬ ಬೆಳಕು ನೋಡು ಬೆಳಕು ನೋಡು" ಅಂತ ಹೇಳ್ತಾ ಮೊರದಲ್ಲಿ ಇಟ್ಟಿದ್ದ ದೀಪದ ಬೆಳಕು ತೋರಿಸಿ ಅವಕ್ಕೆ ತವುಡು, ಬಾಳೆ ಹಣ್ಣು, ದೋಸೆ ಮೀಕ್ಸ್ ಮಾಡಿದ ತಿನಿಸನ್ನು ತಿನ್ನಿಸುತ್ತಿದ್ದೆವು. ಎಷ್ಟೋ ಸಲ ಈ ಕೆಲಸ ಪಟಾಕಿಯ ಸಂಭ್ರಮದ ನಡುವೆ ಅರ್ಜೆಂಟ್ ಅರ್ಜೆಂಟಾಗಿ ನಡೆದುಹೋಗುತ್ತಿತ್ತು.

ಇಷ್ಟೆಲ್ಲಾ ಆಗೋವಾಗ ರಾತ್ರಿ ದೋಸೆ, ಅಪ್ಪದಿಟ್ಟು, ಇಡ್ಲಿ ಮಾಡಿರುತ್ತಿದ್ರು. ಅವ್ವ, ಅಕ್ಕಂದಿರಿಗೆ ಹಬ್ಬ ಅಂದ್ರೆ ಬಹುಪಾಲು ಅಡಿಗೆ ಮನೆಯಲ್ಲೇ ಕಳೆದುಹೋಗುತ್ತಿತ್ತು. ತಿಂಡಿ ರೆಡಿ ಮಾಡೋದ್ರಲ್ಲೇ ಅವ್ರು ಬ್ಯುಸಿ ಆಗಿರುತ್ತಿದ್ರು. ಆದ್ರೆ ಅಷ್ಟೊತ್ತಿಗೆ ನಮಗೆ ಪಟಾಕಿಯ ಸಂಭ್ರಮ ಎಲ್ಲಾ ಮುಗಿದು ಕಣ್ಣು ನಿದ್ದೆಯತ್ತ ಜಾರುತ್ತಿತ್ತು. ಮತ್ತೆ ತೂಕಡಿಸುತ್ತಾ ದೋಸೆಯೋ, ಇಡ್ಲಿಯೋ ತಿಂದು ನಿದ್ರೆಗೆ ಜಾರುತ್ತಿದ್ದೆ.

ಹೀಗೆ ದೀಪಾವಳಿ ಹಬ್ಬ ನೆನೆಸ್ಕೊಂಡ್ರೆ ಬಾಲ್ಯ ಕೂಡ ನೆನಪಾಗುತ್ತೆ. ಆದ್ರೆ ಏನ್ ಮಾಡೋದು ಕೆಲಸಕ್ಕೆ ಸೇರಿದ್ಮೇಲೆ ದೀಪಾವಳಿಗೆ ಊರಿಗೆ ಹೋಗೋದೆ ಕಷ್ಟ ಆಗ್ಬಿಟ್ಟಿದೆ. ಕಳೆದ ನಾಲ್ಕು ವರ್ಷಗಳಿಂದ ಊರಲ್ಲಿ ಆಚರಿಸುವ ದೀಪಾವಳಿಯ ಸಂಭ್ರಮದಲ್ಲಿ ಮನೆ ಮಂದಿ ಜೊತೆ ಸೇರೋದಿಕ್ಕೆ ಸಾಧ್ಯವಾಗಿಲ್ಲ.
ಆದ್ರೂ ಬೆಂಗಳೂರಿನ ಸಿಟೀಲಿ ಕುಳಿತು ಯೋಚಿಸುವಾಗೆಲ್ಲಾ ಮನಸ್ಸು ನನ್ನೂರು ಅಡ್ಪಂಗಾಯದ ಮನೆ ಮತ್ತು ಅಂಗಳದ ತುಂಬ ಓಡಾಡುತ್ತೆ. ನೆನಪುಗಳ ಸುರುಳಿಯಲ್ಲಿ.

Tuesday, October 4, 2011

ಧ್ವನಿ ಇಲ್ಲದವರು...

ಮಾತು ಮಾತು ಮಾತು ಮಾತು
ದಿನಬೆಳಗಾದರೆ ಮಾತೇ ಮಾತು
ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ
ಎಲ್ಲೆಡೆಯಿಂದಲೂ ಮಾತೇ ಮಾತು

ಸುದ್ದಿಯ ಮೇಲೆ ಸುದ್ದಿಯ ಅದ್ದಿ
ನಾಳೆಗೆ ರದ್ದಿ ಆದರೂ ಸುದ್ದಿ
ಮುಗಿಯುವುದಿಲ್ಲ, ಮುಗಿಸುವುದಿಲ್ಲ
ಸುದ್ದಿ ಸುದ್ದಿ ಸುದ್ದಿ ಸುದ್ದಿ

ರಾಜಕಾರಣಿಯ ಹಗರಣದಿಂದ
ರಾಜಕೀಯದ ಕೆಸರೆರೆಚಾಟಗಳಿಂದ
ಎದ್ದರು, ಬಿದ್ದರು, ಕೂತರು, ನಿಂತರು
ಮುಗಿಯುವದಿಲ್ಲ ಸುದ್ದಿಯ ಗುದ್ದು

ಸಾಪ್ಪ್ ವೇರಿಗನ ದುರಂತ ಸಾವು
ಟೆಕ್ಕಿಗೆ ಬಂದ ಮನಸಿನ ನೋವು
ಬಿಟಿಯವರ ಖಿನ್ನತೆ ಕಾವು

ಬಾರ್ ಗರ್ಲ್ ಗಳ ಥಕಥೈ ಕುಣಿತ
ಕಾಲ್ ಗರ್ಲ್ ಗಳ ಸಾವಿನ ಸರಸ
ರೌಡಿಗಳ ಗ್ಯಾಂಗ್ ವಾರ್ ಗಳ ಸುತ್ತ
ಹರಿದಿದೆ ನೋಡಿ ಸುದ್ದಿಯ ಕೋಡಿ

ಮನೆಯಲಿ ತೊಂದರೆ ನೂರೊಂದಿದ್ದರು
ಬಿಡುವಿಲ್ಲದೆಯೇ ದುಡಿಯುತಲಿದ್ದರು
ಖಿನ್ನತೆಯಾಳದಿ ಮುಳುಗೇಳುತಿದ್ದರು
ಹೇಳಲಾಗದೆ ಕೊರಗುವರಿವರು

ಜಗತ್ತಿನ ಸಮಸ್ಯೆಗೆ ಧ್ವನಿಯಾದವರು!

Monday, September 26, 2011

ಕಂಬಾರ, ಕನ್ನಡ ಮತ್ತು ಸರ್ಕಾರ

ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ನಾವೆಲ್ಲಾ ಸಂಭ್ರಮಿಸಿದ್ದೂ ಆಗಿದೆ. ಡಾ.ಚಂದ್ರಶೇಖರ ಕಂಬಾರರು ಕನ್ನಡ ತಾಯಿಯ ಮುಕುಟಕ್ಕೆ ಎಂಟನೇ ಜ್ಞಾನಪೀಠದ ಗರಿಯನ್ನು ತೊಡಿಸಿದಾಗ ಕನ್ನಡಿಗರೆಲ್ಲಾ ಒಕ್ಕೊರಲಿನಿಂದ ಖುಷಿ ಪಡೋದು ಸಹಜ. ಸಾರಸ್ವತ ಲೋಕದ ಅಲ್ಲೊಂದು - ಇಲ್ಲೊಂದು ಭಿನ್ನ ಧ್ವನಿಯ ಸಾಮಾನ್ಯ ಜನರ ಸಂತಸಕ್ಕೆ ಯಾವುದೇ ತಡೆ ಆಗಿಲ್ಲ.

ಜ್ಞಾನಪೀಠ ಬರೋದ್ರ ಜೊತೆಗೆ ಅದ್ರ ವಿಜೇತರ ಮಾತುಗಳಿಗೆ ಹೆಚ್ಚಿನ ತೂಕ ಬರುತ್ತೆ. ಹೀಗಾಗಿ ಚಂದ್ರಶೇಖರ ಕಂಬಾರರು ಸದ್ಯ ಹೇಳುತ್ತಿರುವ ಕೆಲ ವಿಚಾರಗಳು ಹೆಚ್ಚು ಮಹತ್ವ ಪಡೆದುಕೊಳ್ಳುತ್ತಿವೆ. ಅದ್ರಲ್ಲೂ ನನ್ನಂತ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಸ್ವಚ್ಛಂದವಾಗಿ ಕಲಿತು ಬೆಂಗಳೂರಿನಂತಹ ಮಹಾನಗರಗಳನ್ನು ನೋಡುತ್ತಿರುವವರಿಗೆ ಕಂಬಾರರ ಮಾತು ಹೆಚ್ಚು ಆಪ್ತವಾಗುವುದು ಸಹಜ. ಆದರೂ ಈ ಆಪ್ತತೆಯನ್ನು ಹೊರಗಿಟ್ಟು ನೋಡಿದ್ರೂ ಕಂಬಾರರ ಮಾತಿನಲ್ಲಿ ಹೆಚ್ಚಿನ ಅರ್ಥವನ್ನು ಹುಡುಕಿಕೊಳ್ಳಬಹುದು. ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದಾಗ ಮೊದಲಿಗೆ ಹೋಗಿ ನಮ್ಮ ಚಾನೆಲ್ ಗೆ ಅವ್ರನ್ನು ಮಾತನಾಡಿಸುವ ಸುಯೋಗ ನನಗೆ ಸಿಕ್ಕಿತ್ತು. ಸಣ್ಣದೊಂದು ಚಿಟ್ ಚ್ಯಾಟ್ ಮಾಡಿದಾಗ ಕಂಬಾರರು ತಮ್ಮ ಮೃದು ಧ್ವನಿಯಲ್ಲೇ ಗಹನವಾದ ವಿಚಾರ ಹೇಳಿದ್ದರು. ಅದೇ ಎಲ್ ಕೆ ಜಿಯಿಂದ ಹತ್ತನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣವನ್ನು ರಾಜ್ಯ ಸರ್ಕಾರವೇ ಕಡ್ಡಾಯವಾಗಿ ಕೊಡಬೇಕು ಎಂದು ಅವತ್ತು ಕಂಬಾರರು ಹೇಳಿದ್ದರು. ಇದೇನು ಅವ್ರು ಮೊದಲ ಬಾರಿಗೆ ಹೇಳುತ್ತಿರುವ ವಿಚಾರವಲ್ಲ. ಆದ್ರೆ ಜ್ಞಾನಪೀಠ ಪ್ರಶಸ್ತಿ ಬಂದ್ಮೇಲೆ ಅವ್ರು ಹೇಳ್ತಿರೋದ್ರಿಂದ ಇದಕ್ಕೆ ಹೆಚ್ಚಿನ ತೂಕ ಬಂದಿದೆ.

ಕಂಬಾರರ ಹೇಳಿಕೆಗೆ ಮುಖ್ಯಮಂತ್ರಿ ಸದಾನಂದ ಗೌಡ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಧನಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿದೆ ಎಂಬ ಭರವಸೆಯನ್ನೂ ನೀಡಿದ್ದಾರೆ. ಜೊತೆಗೆ ಕಾಗೇರಿಯವ್ರು ಮಾತೃಭಾಷೆಯ ಬೋಧನೆ ಕಡ್ಡಾಯಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದಾಗಿ ತಿಳಿಸಿದ್ದಾರೆ. ಇಷ್ಟಾದ್ರೂ ಕನ್ನಡ ಮಾಧ್ಯಮ ಕಡ್ಡಾಯಗೊಳಿಸಿ ಎಲ್ ಕೆಜಿಯಿಂದ ಹತ್ತನೇ ತರಗತಿವರೆಗೆ ಸರ್ಕಾರವೇ ಶಿಕ್ಷಣ ಕೊಡುತ್ತೆ ಅನ್ನೋದನ್ನು ಈಗಲೂ ನಂಬಲು ಅಸಾಧ್ಯ. ಈಗಿರುವ ವ್ಯವಸ್ಥೆಯಲ್ಲಿ ಅದು ಜಾರಿಗೆ ಬರೋದು ಕನಸಿನ ಮಾತು.

ಜುಲೈ ತಿಂಗಳ ಫ್ರಂಟ್ ಲೈನ್ ಪತ್ರಿಕೆಯಲ್ಲಿ ಒಂದು ಕವರ್ ಸ್ಟೋರಿ ಬಂದಿತ್ತು.' A long way to go' ಎಂಬ ಶೀರ್ಷಿಕೆಯಡಿ ಬಂದಿರುವ ಸಂಚಿಕೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಣದ ಒಳಹೊರಗನ್ನು ವಿಶ್ಲೇಷಿಸಲಾಗಿದೆ. ಅದರ ಅಗ್ರ ಲೇಖನದಲ್ಲಿ " ತಮಿಳುನಾಡಿನ ಈರೋಡ್ ಜಿಲ್ಲಾಧಿಕಾರಿ ಡಾ. ಆರ್.ಆನಂದಕುಮಾರ್ ಮತ್ತವರ ಪತ್ನಿ ಡಾ.ಎಂ.ಶ್ರೀವಿದ್ಯಾ ಜಿಲ್ಲಾಧಿಕಾರಿ ಕಚೇರಿಯ ಸಮೀಪದ ಕುಮಲನಕುಟ್ಟಿಯಲ್ಲಿರುವ ತಮಿಳು ಮಾಧ್ಯಮದ ಸರ್ಕಾರಿ ಶಾಲೆಗೆ ಹೋಗಿ ಇತರೆ ಮಕ್ಕಳ ಪಾಲಕರ ಜೊತೆಗೆ ಕ್ಯೂನಲ್ಲಿ ನಿಂತು ತಮ್ಮ ಮಗಳು ಗೋಪಿಕಾಳನ್ನು ಶಾಲೆಗೆ ಅಡ್ಮಿಷನ್ ಮಾಡಿಸಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿ ಶಾಲೆಯ ಮುಖ್ಯೋಪಾಧ್ಯಾಯಿನಿ ಎಸ್.ರಾಣಿ ಅವ್ರಿಗೆ, ನಮ್ಮ ಮಗಳು ಕೂಡ ಶಾಲೆಯಲ್ಲಿ ಕೊಡುವ ಮಧ್ಯಾಹ್ನದ ಬಿಸಿಯೂಟವನ್ನೇ ಊಟ ಮಾಡ್ತಾಳೆ. ಮನೆಯಿಂದ ಊಟ ತರೋದಿಲ್ಲ ಎಂದಿದ್ದಾರೆ." ಎಂಬ ವಿಚಾರವಿದೆ.

ಆದ್ರೆ ನಮ್ಮ ರಾಜ್ಯದ ಸ್ಥಿತಿಯನ್ನು ಕಲ್ಪಿಸಿಕೊಳ್ಳೋಣ. ಸರ್ಕಾರದ ಅಂಕಿಅಂಶಗಳನ್ನು ನೋಡಿದ್ರೆ ರಾಜ್ಯದಲ್ಲಿ ಪ್ರಾಥಮಿಕ ಶಿಕ್ಷಣ ಕೊಡುವ ಒಟ್ಟು ಶಾಲೆಗಳಲ್ಲಿ ಶೇ.75ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ಅಂದಾಜು ಶೇ. 70ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲೇ ಓದುತ್ತಿದ್ದಾರೆ. ಆದ್ರೆ ಇನ್ನುಳಿದ ಶೇ. 30ರಷ್ಟು ವಿದ್ಯಾರ್ಥಿಗಳು ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಮತ್ತು ಕೇಂದ್ರೀಯ ಪಠ್ಯಕ್ರಮಗಳಲ್ಲಿ ವ್ಯಾಸಾಂಗ ಮಾಡ್ತಿದ್ದಾರೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲೇ ಓದುತ್ತಿದ್ದರೂ ಮಾತೃಭಾಷಾ ಶಿಕ್ಷಣಕ್ಕಾಗಿ ಹೋರಾಡುವ ಸ್ಥಿತಿ ಎದುರಾಗಿದೆ. ಇದಕ್ಕೆ ಮುಖ್ಯಕಾರಣ ಬೆಂಗಳೂರಿನಂತಹ ಮಹಾನಗರಗಳಿಂದ ಹಿಡಿದು ಇತರೆ ನಗರಗಳ ನಂತ್ರ ಈಗ ಗ್ರಾಮಾಂತರ ಪ್ರದೇಶಗಳಲ್ಲೂ ಇತ್ತೀಚೆಗೆ ಇಂಗ್ಲಿಷ್ ಮೀಡಿಯಂ ಸ್ಕೂಲ್ ಗಳ ಸಂಖ್ಯೆ ನಿಧಾನವಾಗಿ ಹೆಚ್ಚುತ್ತಿವೆ. ಗ್ರಾಮಾಂತರ ಪ್ರದೇಶಗಳಲ್ಲೂ ಮಕ್ಕಳು ಇಂಗ್ಲಿಷ್ ಪಠ್ಯಕ್ರಮದಲ್ಲಿ ಓದಿದ್ರೆ ಮಾತ್ರ ಬುದ್ಧಿವಂತರಾಗ್ತಾರೆ ಎಂಬ ಭ್ರಮೆ ಶುರುವಾಗಿದೆ.

ಈರೋಡ್ ನ ಜಿಲ್ಲಾಧಿಕಾರಿಯಂತೆ ನಮ್ಮ ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿಯವ್ರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸಿದ್ದಾರೆ. ಅವ್ರು ಸಚಿವರಾಗೋದಿಕ್ಕೂ ಮೊದಲೇ ಅವ್ರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದರು. ಸಚಿವರಾದ್ಮೇಲು ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸೋದ್ರ ಮೂಲಕ ಸಚಿವರು ಮಾದರಿಯಾಗಿರುವುದು ನಿಜ. ಆದ್ರೆ ಕೇವಲ ಕಾಗೇರಿ ಒಬ್ರಿಂದ ಅಥವಾ ಈರೋಡ್ ನ ಜಿಲ್ಲಾಧಿಕಾರಿಯಿಂದ ಮಾತ್ರ ಮಾತೃಭಾಷಾ ಮಾಧ್ಯಮದ ಶಿಕ್ಷಣಕ್ಕೆ ಉತ್ತೇಜನ ಸಿಕ್ಕರೆ ಸಾಕಾಗೋದಿಲ್ಲ.
ಈಗಿರುವ ಶಿಕ್ಷಣದ ವ್ಯವಸ್ಥೆಯಲ್ಲೇ ನಮ್ಮ ಮುಖ್ಯಮಂತ್ರಿಯಿಂದ ಹಿಡಿದು ಸಚಿವರು, ಶಾಸಕರು ಸೇರಿದಂತೆ ಎಲ್ಲ ಸ್ಥರಗಳ ಜನಪ್ರತಿನಿಧಿಗಳ ಕುಟುಂಬ ವರ್ಗಗಳವರ ಮಕ್ಕಳು- ಮೊಮ್ಮಕ್ಕಳನ್ನು, ಸರ್ಕಾರದ ಉನ್ನತ ಅಧಿಕಾರಿಗಳ ಮಕ್ಕಳು - ಮೊಮ್ಮಕ್ಕಳನ್ನು, ಎಲ್ಲ ಸ್ಥರಗಳ ಅಧಿಕಾರಿಗಳ ಮಕ್ಕಳು - ಮೊಮ್ಮಕ್ಕಳನ್ನು, ಅಧ್ಯಾಪಕ ವೃಂದದವರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸುವ ವ್ಯವಸ್ಥೆ ನಮ್ಮಲ್ಲಿ ಬರೋದಿಕ್ಕೆ ಸಾಧ್ಯವೇ ? ಹಾಗೆ ಒಂದು ವೇಳೆ ಇವ್ರೆಲ್ಲಾ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸಿದ್ದೇ ಹೌದೌದ್ರೆ ಸರ್ಕಾರಿ ಶಾಲೆಗಳ ವ್ಯವಸ್ಥೆ ತನ್ನಿಂದ ತಾನೇ ಬದಲಾಗುತ್ತದೆ. ಖಾಲಿಯಾಗಿರುವ ಶಿಕ್ಷಕರ ಹುದ್ದೆ, ಮಕ್ಕಳಿಗೆ ಪೂರೈಕೆಯಾಗಬೇಕಾದ ಪಠ್ಯಪುಸ್ತಕ, ಸಮವಸ್ತ್ರ, ಇಂಗ್ಲಿಷ್ ಸೇರಿದಂತೆ ಪ್ರತಿಯೊಂದು ಸಬ್ಜೆಕ್ಟ್ ಪಾಠ ಮಾಡುವ ನುರಿತ ಶಿಕ್ಷಕರು, ಪಾಠ ಮಾಡಲು ಮೈಗಳ್ಳತನ ಪ್ರದರ್ಶಿಸುವ ಶಿಕ್ಷಕರು, ಪದೇ ಪದೇ ಶಿಕ್ಷಣ ಪದ್ಧತಿಯಲ್ಲಿ ಆಗುವ ಅವೈಜ್ಞಾನಿಕ ಬದಲಾವಣೆಗಳು ಹೀಗೆ ಪ್ರತಿಯೊಂದು ಸಮಸ್ಯೆಯೂ ಸುಲಭವಾಗಿ ಪರಿಹಾರ ಆಗುತ್ತೆ.

ಸರ್ಕಾರಿ ಶಾಲೆಗಳ ಶಿಕ್ಷಣ ಹಳಿ ತಪ್ಪಲು ಮುಖ್ಯ ಕಾರಣ ಸರ್ಕಾರದ ಕಾನೂನು ರೂಪಿಸುವವರು ಮತ್ತು ಅದನ್ನು ಅನುಷ್ಟಾನಕ್ಕೆ ತರುವವರ ಕುಟುಂಬವರ್ಗದವರ ಮಕ್ಕಳು ಸರ್ಕಾರಿ ಶಾಲೆಗಳಲ್ಲಿ ವ್ಯಾಸಾಂಗ ಮಾಡುತ್ತಿಲ್ಲ. ಅವ್ರ ಮಕ್ಕಳೇನಿದರೂ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೀತಿದ್ದಾರೆ. ( ಎಲ್ಲೋ ಅಲ್ಲೊಂದು ಇಲ್ಲೊಂದು ಅಪವಾದಗಳನ್ನು ಹೊರತುಪಡಿಸಿ) ಹೀಗಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆಗಳು ಅಧಿಕಾರಸ್ಥರಿಗೆ ಆಗ್ತಿಲ್ಲ. ಅದೇ ಅವ್ರ ಮಕ್ಕಳೇ ಸರ್ಕಾರಿ ಶಾಲೆಗಳಲ್ಲಿ ಓದುತ್ತಿದ್ದರೆ ಸರ್ಕಾರದ ಎಲ್ಲಾ ಯೋಜನೆಗಳು ನಿಯಮಬದ್ಧವಾಗಿ ಪಾಲನೆ ಆಗೋದಲ್ಲದೆ ಶಿಕ್ಷಣದ ಮಟ್ಟ ತನ್ನಿಂತಾನೆ ಸರಿಯಾಗುತ್ತೆ. ಒಮ್ಮೆ ಸರ್ಕಾರಿ ಶಾಲೆಗಳು ತಮ್ಮ ಸದ್ಯದ ಅವವಸ್ಥೆಗಳನ್ನು ಸರಿಪಡಿಸಿಕೊಂಡು ಮೈಕೊಡವಿ ನಿಂತ್ರೆ ಸಹಜವಾಗೇ ಖಾಸಗಿ ಶಾಲೆಗಳ ಜೊತೆ ಸವಾಲೊಡ್ಡಬಹುದು. ಅಲ್ಲದೆ ಸರ್ಕಾರಿ ಶಾಲೆಗಳ ಮಕ್ಕಳೂ ಸುಲಲಿತವಾಗಿ ಇಂಗ್ಲಿಷ್ ಗುಮ್ಮನನ್ನು ಓಡಿಸಿ ಆ ಭಾಷೆಯಲ್ಲಿ ಮಾತಾಡಲು ಸಾಧ್ಯ.

ಇಷ್ಟೆಲ್ಲಾ ಆದ್ರೂ ಕಂಬಾರರ ಮಾತಿನಂತೆ ಎಲ್ ಕೆಜಿಯಿಂದ ಹತ್ತನೇ ಕ್ಲಾಸ್ ವರೆಗೆ ಶಿಕ್ಷಣದ ರಾಷ್ಟ್ರೀಕರಣ ಮಾಡಿ ಸರ್ಕಾರವೇ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಕೊಡುವುದು ಸಾಧ್ಯವೇ ? ಕಾಲವೇ ಇದಕ್ಕೆಲ್ಲಾ ಉತ್ತರಿಸಬೇಕಷ್ಟೆ.

Wednesday, September 14, 2011

ಶ್ರೀರಾಮುಲು ರಾಜೀನಾಮೆ ಪ್ರಹಸನ

ಬಳ್ಳಾರಿಯ ಬಿ. ಶ್ರೀರಾಮುಲು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ಮುಂದಾದಾಗ ಏನೋ ದೊಡ್ಡ ಸಾಧನೆ ಮಾಡಲು ಹೊರಟವರ ಮೂಡ್ ನಲ್ಲಿದ್ದರು. ಅವ್ರ ಸುತ್ತಲಿದ್ದ ಜನರೂ ಅಂತದ್ದೇ ನಿರೀಕ್ಷೆಯಲ್ಲಿದ್ದರು.
ಕರ್ನಾಟಕದ ಪಾಲಿಗೆ ಶಾಸಕರು ರಾಜೀನಾಮೆ ಕೊಡೋದು ಹೊಸತಲ್ಲ. 2008ರ ನಂತ್ರವಂತೂ ಆಪರೇಷನ್ ಕಮಲದ ಹೆಸರಿನಲ್ಲಿ ಹದಿನಾಲ್ಕು ಜನ ಕಾಂಗ್ರೆಸ್ - ಜೆಡಿಎಸ್ ಶಾಸಕರು ರಾಜೀನಾಮೆ ಕೊಟ್ಟಿದ್ದಕ್ಕೆ ರಾಜ್ಯದ ಜನ ಸಾಕ್ಷಿಯಾಗಿದ್ದಾರೆ. ಆದ್ರೆ ಶ್ರೀರಾಮುಲು ರಾಜೀನಾಮೆ ಕೊಡೋದಿಕ್ಕೆ ಹೊರಟಾಗ ಇದ್ದ ಒಂದೇ ಒಂದು ಚೇಂಜ್ ಅಂದ್ರೆ ಅವ್ರು ಬಿಜೆಪಿಗೆ ಸೇರಿದವರು ಅನ್ನೋದಷ್ಟೇ. 'ಶ್ರೀರಾಮುಲು ರಾಜೀನಾಮೆ ಅಂಗೀಕಾರ ಆಗೋದಿಲ್ಲ' ಅನ್ನೋ ಮಾತು ಅವ್ರು ಬೆಂಗಳೂರಿನಿಂದ ಮಡಿಕೇರಿಯತ್ತ ಹೊರಟು ನಿಂತಾಗಲೇ ಬಿಜೆಪಿಯ ಅಂಗಳದಿಂದ ಕೇಳಿಬಂದಿತ್ತು.
ಹಾಗೆ ನೋಡಿದ್ರೆ ಬಿಜೆಪಿಯಲ್ಲಿ ಆರಂಭವಾದ ಆಪರೇಷನ್ ಕಮಲದ ರುವಾರಿ ಬಿ.ಶ್ರೀರಾಮುಲು. 2008ರ ಚುನಾವಣೆಯ ನಂತ್ರ ಸ್ಪಷ್ಟ ಬಹುಮತಕ್ಕಿಂತ ಮೂರು ಸೀಟು ಕಡಿಮೆ ಇದ್ದ ಬಿಜೆಪಿ ಆರು ಜನ ಪಕ್ಷೇತರರ ನೆರವಿನಿಂದ ಅಧಿಕಾರದ ಗದ್ದುಗೆ ಏರಿತು. ಆದ್ರೆ ಬಿಜೆಪಿಯೇ ಪೂರ್ಣ ಬಹುಮತ ಪಡ್ಕೋಬೇಕು ಎಂಬ ಹಪಹಪಿ ಪಕ್ಷದ ನಾಯಕರಲ್ಲಿತ್ತು. ಹಾಗಾಗಿಯೇ ಮೊದಲಿಗೆ ಮೂವರು ಶಾಸಕರ ರಾಜೀನಾಮೆ ಕೊಡಿಸಲಾಯಿತು. ಜೆಡಿಎಸ್ ನಿಂದ ಆಯ್ಕೆಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಮತ್ತು ಶಿವನಗೌಡ ನಾಯಕ್ ಹಾಗೂ ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಆನಂದ್ ಅಸ್ನೋಟಿಕರ್ ರಾಜೀನಾಮೆ ಕೊಡಿಸಲಾಯಿತು. ಅವತ್ತು ರಾಜೀನಾಮೆ ಕೊಟ್ಟ ಈ ಮೂವರು ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿದ್ದು ಶ್ರೀರಾಮುಲು ಅವ್ರ ಸೆವೆನ್ ಮಿನಿಸ್ಚರ್ಸ್ ಕ್ವಾಟ್ರಸ್ ನಲ್ಲೇ. ಅವತ್ತು ಬಿಳಿ ಬಣ್ಣದ ಜುಬ್ಬಾದ ಮೇಲೆ ಕಡುಕಪ್ಪು ಬಣ್ಣದ ಓವರ್ ಕೋಟ್ ಹಾಕ್ಕೊಂಡು ಶ್ರೀರಾಮುಲು ಮಿಂಚುತ್ತಿದ್ದರು. ಮೂವರು ಶಾಸಕರ ರಾಜೀನಾಮೆ ಕೊಡಿಸಿ ಕಮಲದ ತೆಕ್ಕೆಗೆ ಅವ್ರನ್ನು ಕರೆತಂದ ಹೆಮ್ಮೆ ಅವ್ರ ಮುಖದಲ್ಲಿತ್ತು. ಏನೋ ದೊಡ್ಡ ಸಾಧನೆ ಮಾಡಿದಂತೆ ಅವ್ರು ಕಾಣುತ್ತಿದ್ದರು.
ಆದ್ರೆ ಕೇವಲ ಮೂರೇ ವರ್ಷದ ಅಂತರದಲ್ಲಿ ಅದೇ ಶ್ರೀರಾಮುಲು ಬಿಜೆಪಿಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲು ನಿರ್ಧರಿಸಿದ್ದರು. ಹೀಗೆ ರಾಜೀನಾಮೆ ಕೊಡಲು ಹೊರಟಾಗ ಅವ್ರ ಮುಖದಲ್ಲಿ ಯುದ್ಧೋನ್ಮಾದ ಇತ್ತು. ಅದೇ ಉನ್ಮಾದದಲ್ಲೇ ಅವ್ರು ಸೆಪ್ಟಂಬರ್ ನಾಲ್ಕರಂದು ಮಡಿಕೇರಿಗೆ ಹೋಗಿದ್ದರು.
ಮಾರನೇ ದಿನ ಚಿತ್ರಣ ಸಂಪೂರ್ಣ ಅದಲು ಬದಲಾಗಿತ್ತು. ಶ್ರೀರಾಮುಲು ರಾಜೀನಾಮೆಯ ತಂತ್ರಗಾರಿಕೆ ಮಾಡಿದ್ದ ಗಣಿಧಣಿ ಜನಾರ್ಧನ ರೆಡ್ಡಿ ಸಿಬಿಐನ ವಶದಲ್ಲಿದ್ದರು. ಯುದ್ಧಕ್ಕೆ ಹೊರಟ ಶ್ರೀರಾಮುಲು ರಣರಂಗ ಪ್ರವೇಶಕ್ಕೂ ಅವಕಾಶ ಸಿಗದೆ ಅರಮನೆಗೆ (ಬಳ್ಳಾರಿಗೆ) ದೌಡಾಯಿಸಿದ್ದರು.
ಇಷ್ಟೆಲ್ಲಾ ಆಗಿ ಇಪ್ಪತ್ತು ದಿನ ಕಳೆದಿದೆ. ಆದ್ರೆ ಶ್ರೀರಾಮುಲು ರಾಜೀನಾಮೆ ಅಂಗೀಕಾರ ಇನ್ನೂ ಆಗಿಲ್ಲ. ತಮ್ಮ ರಾಜೀನಾಮೆ ಹಿಂಪಡೆಯೋದಿಲ್ಲ ಎಂದು ರಾಮುಲು ಬಹಿರಂಗವಾಗಿ ಹೇಳ್ಕೊಂಡಿದ್ದಾರೆ. ರಾಜೀನಾಮೆ ವಿಚಾರದಲ್ಲಿ ಅವ್ರ ಮನವೊಲಿಸುವ ಪ್ರಯತ್ನ ನಡೆದಿದೆ ಅನ್ನೋ ಮಾತನ್ನು ಬಿಜೆಪಿ ನಾಯಕರು ಹೇಳಿದ್ದಾರೆ.
2008ರ ವಿಧಾನಸಭಾ ಚುನಾವಣೆಯ ನಂತ್ರ ರಾಜ್ಯದಲ್ಲಿ ಇದುವರೆಗೆ ಹದಿನಾಲ್ಕು ಜನ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಹೀಗೆ ರಾಜೀನಾಮೆ ಕೊಟ್ಟವರೆಲ್ಲಾ ಆಮೇಲೆ ಕಮಲ ಪಾಳಯ ಸೇರಿದ್ದಾರೆ. ಅವ್ರ ರಾಜೀನಾಮೆಗಳನ್ನು ಕೆ.ಜಿ.ಬೋಪಯ್ಯ ತತಕ್ಷಣವೇ ಅಂಗೀಕರಿಸಿ ಸ್ಥಾನ ತೆರವಿಗೆ ಅವಕಾಶ ಮಾಡ್ಕೊಟ್ಟಿದ್ದರು. ಶ್ರೀರಾಮುಲು ವಿಷಯದಲ್ಲಿ ಮಾತ್ರ ರಾಜೀನಾಮೆ ಅಂಗೀಕರಿಸಲು ಅಥವಾ ಅದನ್ನು ತಿರಸ್ಕರಿಸಲು ಸ್ಪೀಕರ್ ಬೋಪಯ್ಯ ಅವ್ರಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ.
ಕರ್ನಾಟಕದ ರಾಜಕಾರಣ ಅನೇಕ ಸಂದರ್ಭಗಳಲ್ಲಿ ರಾಷ್ಟ್ರಕ್ಕೆ ಮಾದರಿಯಾದ ಉದಾಹರಣೆಗಳಿವೆ. ಆದ್ರೆ ಸ್ಪೀಕರ್ ಕೆ.ಜಿ.ಬೋಪಯ್ಯ ಮತ್ತು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಬೇರೆ ಬೇರೆ ಸಂದರ್ಭಗಳಲ್ಲಿ ಇದಕ್ಕೆ ವ್ಯತಿರಿಕ್ತ ನಿದರ್ಶನಗಳನ್ನು ತೋರಿಸಿಕೊಟ್ಟಿದ್ದಾರೆ. ಸದ್ಯ ಅದ್ರ ಮುಂದುವರಿದ ಭಾಗವನ್ನು ಸ್ಪೀಕರ್ ಪರಿಚಯಿಸುತ್ತಿದ್ದಾರೆ.
ಶ್ರೀರಾಮುಲು ರಾಜೀನಾಮೆ ಪ್ರಹಸನದ ಕ್ಲೈಮಾಕ್ಸ್ ಹೇಗಾಗುತ್ತೆ ಅನ್ನುವ ಕುತೂಹಲ ಜನರಲ್ಲಿದೆ. ರಾಜೀನಾಮೆ ಅಂಗೀಕಾರ ಆದ್ರೂ ತಿರಸ್ಕಾರ ಆದ್ರೂ ಅದೊಂದು ದಾಖಲೆಯೇ...!

Saturday, September 3, 2011

ಕಲಿಸಿದ ಗುರುವಿಗೆ ವಂದನೆ...

ಶಿಕ್ಷಕರ ದಿನಾಚರಣೆ ಅಂದಾಕ್ಷಣ ತಕ್ಷಣ ನೆನಪಿಗೆ ಬರೋದು ನಾವು ಸ್ಕೂಲ್ ಗೆ ಹೋಗ್ತಿದ್ದಾಗ ಶಿಕ್ಷಣ ಇಲಾಖೆಯಿಂದ ಕೊಡುತ್ತಿದ್ದ ಒಂದು ಸ್ಟ್ಯಾಂಪ್. ಪ್ರೊ. ರಾಧಾಕೃಷ್ಣ ಅವ್ರ ಪೇಟಾ ಕಟ್ಟಿಕೊಂಡಿರುವ ಸ್ಟ್ಯಾಂಪ್ ಕೊಡೋದೇ ಶಿಕ್ಷಕರ ದಿನಾಚರಣೆ.
ಆದ್ರೆ ನಮ್ಮ ಬದುಕನ್ನು ರೂಪಿಸಿದ ಶಿಕ್ಷಕರನ್ನು ನೆನೆಯುವುದು ನಮ್ಮೆಲ್ಲರ ಜವಾಬ್ದಾರಿ ಅನ್ನೋದು ನನ್ನ ಭಾವನೆ. ಕನಿಷ್ಟ ಈ ಒಂದು ದಿನವಾದ್ರೂ ಅವ್ರಿಗೆ ಥ್ಯಾಂಕ್ಸ್ ಹೇಳಲೇ ಬೇಕು.
ನನ್ನು ವಿದ್ಯಾಭ್ಯಾಸ ಆರಂಭವಾಗಿದ್ದು ನನ್ನೂರಿನ ಅಡ್ಪಂಗಾಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಆಗ ಕೇವಲ ನಾಲ್ಕನೇ ಕ್ಲಾಸ್ ವರೆಗೆ ಮಾತ್ರ ಆ ಶಾಲೆಯಲ್ಲಿತ್ತು. ಆದ್ರೆ ಮುಂದೆ ಅದು ಪ್ರಾಥಮಿಕ ಶಾಲೆಯಾಗಿ ಭಡ್ತಿ ಪಡೆದು ನಾನು ಅಲ್ಲೇ ಏಳನೇ ಕ್ಲಾಸೂ ಮುಗಿಸಿದ್ದು. ನಮ್ ಶಾಲೇಲಿ ಆಗ ಇದ್ದಿದ್ದು ಇಬ್ರೇ ಮೇಷ್ಟ್ರುಗಳು. ಜನಾರ್ದನ ಮಾಸ್ತರ್ ಮತ್ತು ಜಯರಾಮ್ ಶೆಟ್ರು. ಜನಾರ್ದನ ಮೇಸ್ಟ್ರನ್ನು ದಪ್ಪ ಫ್ರೇಂನ ಕನ್ನಡ ಹಾಕ್ಕೊಂಡು ಬಿಳಿ ಕೂದಲು ಇದ್ದಿದ್ರಿಂದ ಅವ್ರನ್ನು ನಾವು ಅಜ್ಜ ಮಾಸ್ಟ್ರು ಅಂತ ಕರೀತಿದ್ದೆವು. ಅವ್ರು ಕಿವಿಗಳಿಗೆ ಬಿಳಿ ಹರಳಿನ ಟಿಕ್ಕಿ ಹಾಕುತ್ತಿದ್ದರು. ಅದನ್ನು ನೋಡಿ ಒಂದನೇ ಕ್ಲಾಸ್ ನಲ್ಲಿದ್ದಾಗ್ಲೇ ಹಠ ಹಿಡಿದಿದ್ದೆ. " ಅಜ್ಜ ಮಾಸ್ಟ್ರಂಗೆ ನಂಗೂ ಕೆಬಿಗೆ ಟಿಕ್ಕಿ ಬೇಕೂ" ಅಂತ ಅಪ್ಪ ಅವ್ವನ ಮುಂದೆ ಹಠ ಮಾಡ್ತಿದ್ದೆ. ಹೀಗಾಗಿ ಅಪ್ಪ ನನ್ನ ಕಿವಿಗೆ ಟಿಕ್ಕಿ ಹಾಕಿಸಿದ್ದರು. ಐದೋ ಆರನೇ ಕ್ಲಾಸ್ ಗೆ ಹೋದ್ಮೇಲೆ ಇದು ಹಳೇ ಫ್ಯಾಷನ್ ಅನ್ಸಿಯೋ ಏನೋ ಅದನ್ನು ತೆಗೆದು ಬಿಟ್ಟಿದ್ದೆ. ನನ್ನ ಬದುಕಲ್ಲಿ ಪ್ರಭಾವ ಬೀರಿದ ಮೊದಲ ವ್ಯಕ್ತಿ ಅವ್ರೇ. ಅವರ ಕನ್ನಡದ ಸ್ಪಷ್ಟ ಉಚ್ಛರಣೆ, ಏರು ಧ್ವನಿ, ಪಾಠ ಮಕ್ಕಳ ಮನಸ್ಸಿನೊಳಗೆ ಅಚ್ಚಳಿಯದೆ ಉಳಿಯುವಂತೆ ಮಾಡುತ್ತಿತ್ತು.
ಆದ್ರೆ ನನ್ನ ಬದುಕಲ್ಲಿ ಹೆಚ್ಚಿನ ಪ್ರಭಾವ ಬೀರಿದ್ದು ರುಕ್ಮಿಣಿ ಟೀಚರ್. ನಾನು ನಾಲ್ಕನೇ ಕ್ಲಾಸ್ ನಲ್ಲಿದ್ದಾಗ ಅವ್ರು ಅಡ್ಪಂಗಾಯ ಶಾಲೆಗೆ ಬಂದಿದ್ರು. ಅವ್ರು ಮಾಡುತ್ತಿದ್ದ ಪಾಠ ಹೆಚ್ಚು ಆಸಕ್ತಿದಾಯಕವಾಗಿರುತ್ತಿತ್ತು. ಗಣಿತ ಸಬ್ಜೆಕ್ಟ್ ನನಗೆ ಇಷ್ಟ ಆಗೋದಿಕ್ಕೆ ಅವ್ರೇ ಕಾರಣ. ಹಾಗೆಯೇ ಕನ್ನಡದ ಕಾಗುಣಿತ, ವ್ಯಾಕರಣಗಳನ್ನು ತುಂಬ ಚೆನ್ನಾಗಿ ವಿವರಿಸಿ ಹೇಳಿಕೊಟ್ಟಿದ್ದರು. ಇವತ್ತಿಗೂ ನಾನು ಬಳಸುವ ಕನ್ನಡ ಸ್ವಲ್ಪ ಉತ್ತಮವಾಗಿರೋದಿಕ್ಕೆ ಅವರೇ ಕಾರಣ.
ನನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ್ದು ಸರ್ಕಾರಿ ಪ್ರೌಢ ಶಾಲೆ ಅಜ್ಜಾವರದಲ್ಲಿ. ಅದು ನಮ್ಮ ಅಡ್ಪಂಗಾಯ ಶಾಲೆ ಇರೋ ಕಾಂಪೌಂಡ್ ನಲ್ಲೇ ಇರೋದು. ಸುಳ್ಯ ತಾಲೂಕಿನ ಉತ್ತಮ ಪ್ರೌಢ ಶಾಲೆಗಳಲ್ಲಿ ಅಜ್ಜಾವರ ಶಾಲೆಗೂ ಒಳ್ಳೆಯ ಹೆಸರಿತ್ತು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ನಮ್ಮ ಶಾಲೆಯಲ್ಲಿ ಉತ್ತಮ ಪ್ರೋತ್ಸಾಹ ಸಿಗುತ್ತಿತ್ತು. ಪೀಟಿ ಮೇಸ್ಟ್ರಾಗಿದ್ದ ಸುಂದರ ಗೌಡರು ಮೂರು ವರ್ಷ ನಮ್ಗೆ ಕ್ಲಾಸ್ ಟೀಚರ್ ಆಗಿದ್ದರು. ನಮ್ಮ ಹೆಡ್ ಮಾಸ್ಟರ್ ಆಗಿದ್ದ ಗಂಗೇಮಾರೇ ಗೌಡರು ವಿದ್ಯಾರ್ಥಿಗಳ ಬರಹ ಸುಂದರ ಆಗಿರಬೇಕು ಅನ್ನೋದ್ರ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಅವ್ರು ಕೈಬರಹ ತುಂಬಾ ಚೆನ್ನಾಗಿತ್ತು. ಹೀಗಾಗಿ ಮಕ್ಕಳಿಂದಲೂ ಅದನ್ನೇ ನಿರೀಕ್ಷಿಸುತ್ತಿದ್ದರು. ಬೋರ್ಡ್ ನಲ್ಲಿ ಬರೆದು ತೋರಿಸಿ ಅದೇ ರೀತಿ ಬರೆಯುವಂತೆ ಹುರಿದುಂಬಿಸುತ್ತಿದ್ದರು. ಇದರಿಂದಾಗಿ ನನ್ನ ಕೈ ಬರಹ ಇವತ್ತೂ ಅವರು ಹೇಳಿಕೊಟ್ಟ ರೀತಿಯಲ್ಲೇ ಇದೆ. ಆಗೆಲ್ಲಾ ಅವ್ರು ಕಾಪಿ ಬರೆಯೋಕೆ ಹೇಳಿದ್ರೆ ಸರಿಯಾಗೆ ಬರೆಯದೆ ಅವ್ರಿಂದ ಏಟು ತಿಂದಿದ್ದೂ ಇದೆ. ಆದ್ರ ಇದು ಮುಂದೆ ಅಕ್ಷರ ಬರೆಯುವಾಗ ಹೆಚ್ಚು ಗಮನ ಕೊಡುವಲ್ಲಿ ಸಹಕಾರಿಯಾಗಿತ್ತು.

ಇನ್ನು ಪಿಯುಸಿ ಕಲಿತಿದ್ದು ಸರ್ಕಾರಿ ಪದವಿ ಪೂರ್ವ ಕಾಲೇಜು ಸುಳ್ಯದಲ್ಲಿ. ಪಿಯುನಲ್ಲಿ ಸೈನ್ಸ್ ಸಬ್ಜೆಕ್ಟ್ ತಗೊಂಡ ನಾನು ಸೆಕೆಂಡ್ ಪಿಯುನಲ್ಲಿ ಫೇಲಾಗಿದ್ದೆ. ಆದ್ರೆ ಪಿಯುನಲ್ಲಿದ್ದಾಗ ಕನ್ನಡ ಲೆಕ್ಚರರ್ ನಂದಾ ಅವ್ರು ವೈಚಾರಿಕ ಚಿಂತನೆಗಳ ಬಗ್ಗೆ ಪ್ರಭಾವ ಬೀರಿದ್ದರು. ಆದ್ರೆ ಆಗ ಅದನ್ನು ನಾನು ಆಗ ಅಷ್ಟು ಇಷ್ಟಪಟ್ಟಿರಲಿಲ್ಲ. ಮುಂದೆ ಪಿಯುನಲ್ಲಿ ಫೇಲಾಗಿ ಒಂದು ವರ್ಷ ಮನೇಲಿ ಕುಳಿತು ಮಾರನೇ ವರ್ಷ ಪಾಸಾಗಿ ಬಿಎಸ್ ಸಿ ಸೇರಿದೆ. ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯದಲ್ಲಿ ಮೂರು ವರ್ಷ ಡಿಗ್ರಿ ಕಲಿಯುವ ಸಂದರ್ಭದಲ್ಲೇ ನಾನು ಜರ್ನಲಿಸ್ಟ್ ಆಗಬೇಕೆಂದು ಕನಸು ಕಂಡಿದ್ದು.
ಎನ್ಎಂಸಿಯಲ್ಲಿ ಮೆಥೆಮೆಟಿಕ್ಸ್ ಪಾಠ ಮಾಡುತ್ತಿದ್ದ ಸುರೇಖಾ ಮೇಡಂ ಮತ್ತು ಉಷಾ ಮೇಡಂ ಅವ್ರ ಉಪನ್ಯಾಸ ಹೆಚ್ಚು ಇಷ್ಟವಾಗ್ತಿತ್ತು. ಅದ್ರಲ್ಲೂ ಸುರೇಖಾ ಮೇಡಂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿಗಳಂದ್ರೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸೋದು ಕಡಿಮೆ. ಅವ್ರೇನಿದ್ರೂ ಪುಸ್ತಕದ ಹುಳಗಳು ಎಂದೇ ಉಳಿದ ವಿದ್ಯಾರ್ಥಿಗಳು ಕರೀತಿದ್ದದ್ದು. ಆದ್ರೆ ನಮ್ಮ ಬ್ಯಾಚ್ ಅದೆಲ್ಲವನ್ನೂ ಬ್ರೇಕ್ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಾಂಪಿಯನ್ ಆಗ್ತಿತ್ತು. ಆಗೆಲ್ಲಾ ಮೇಡಂ ನಮಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಹಾಗೆಯೇ ನಮಗೆ ಏನೇ ಸಮಸ್ಯೆ ಇದ್ರೂ ಅವ್ರ ಜೊತೆ ಹೇಳ್ಕೊಳ್ಳೋದಿಕ್ಕೆ ಅವಕಾಶ ಸಿಗುತ್ತಿತ್ತು. ಹದಿಹರೆಯದ ಅಂತಿಮ ಘಟ್ಟದಲ್ಲಿದ್ದ ವಿದ್ಯಾರ್ಥಿಗಳು ದಾರಿ ತಪ್ಪದಂತೆ ಅವರು ಕೊಡುತ್ತಿದ್ದ ಎಚ್ಚರಿಕೆಯ ಮಾತುಗಳು ನನ್ನ ಬದುಕನ್ನು ರೂಪಿಸಲು ದೀವಿಗೆಯಾಗಿದ್ದು ಸುಳ್ಳಲ್ಲ.
ಇನ್ನು ಅಲ್ಲಿ ಕನ್ನಡ ಲೆಕ್ಚರರ್ ಆಗಿದ್ದ ಪೂವಪ್ಪ ಗೌಡರು ನನ್ನ ಬದುಕಿನಲ್ಲಿ ವಿಶೇಷ ಪ್ರಭಾವ ಬೀರಿದ್ದಾರೆ. ಅವ್ರು 'ದ್ರೌಪದಿಯ ಶ್ರೀಮುಡಿ' ಪಾಠವನ್ನು ಸುಮಾರು ಮೂರು ತಿಂಗಳು ಪಾಠ ಮಾಡಿದ್ರು. ಆದ್ರೆ ಪಾಠಕ್ಕಿಂತಲೂ ಜೀವನದಲ್ಲಿ ಅಯ್ಯೋ ಇದು ನನ್ನ ಹಣೆಬರಹ ಅಂತ ಪ್ರತಿಯೊಂದಕ್ಕೂ ಹೇಳ್ತಾ ಕಾಲ ಕಳೀಬಾರದು ಅನ್ನೋದನ್ನು ಹೇಳಿಕೊಟ್ಟರು. ವಿಮರ್ಶೆಯ ನಾನಾ ದಿಕ್ಕುಗಳನ್ನು ತೋರಿಸಿದ್ರು. ಅವರಿಂದಾಗಿ ಇವತ್ತಿಗೂ ವಿಮರ್ಶೆ ಅಂದ್ರೆ ತುಂಬ ಇಷ್ಟ. ಹಾಗೆಯೇ ವೈಚಾರಿಕ ಚಿಂತನೆ ಬಗ್ಗೆ ಹೆಚ್ಚು ಪ್ರಭಾವ ಬೀರಿದ್ರು. ಪಿಯುನಲ್ಲಿ ನಂದಾ ಮೇಡಂ ಹೇಳುತ್ತಿದ್ದುದನ್ನು ಒಪ್ಪದವನು ನಿಧಾನಕ್ಕೆ ಅದರತ್ತ ಒಲವು ಹೆಚ್ಚಾಯಿತು. ದೇವರ ಮೇಲಿನ ಅತಿಯಾದ ನಂಬಿಕೆಗಳು ದೂರವಾಗಿದ್ದು ಆಗಲೇನೇ. ದೇವರ ಮೇಲೆ ಎಲ್ಲಾ ಭಾರ ಹಾಕೋದ್ರ ಬದಲು ನಮ್ಮ ಶ್ರಮದ ಮೇಲೆ ಹೆಚ್ಚು ನಂಬಿಕೆ ಇಡೋದು ಮುಖ್ಯ ಅನ್ನೋದನ್ನು ಅಲ್ಲಿ ಕಲಿತುಕೊಂಡೆ.
ಬಿಎಸ್ ಸಿ ಡಿಗ್ರಿ ಮುಗಿಸಿದ ಮೇಲೆ ಪತ್ರಿಕೋದ್ಯಮದಲ್ಲಿ ಎಂಎ ಮಾಡಬೇಕೆಂದು ಮೊದಲೇ ನಿರ್ಧರಿಸಿದ್ದೆ. ಅದ್ರಂತೆ ಮಂಗಳೂರು ವಿವಿಯಲ್ಲಿ ಎಂಸಿಜೆ ಗೆ ಸೇರಿಕೊಂಡೆ. ಜರ್ನಲಿಸಂ ಬಗ್ಗೆ ಕೋರ್ಸ್ ನ ಮೂಲಕ ತಿಳಿದುಕೊಳ್ಳೋದು ಏನೂ ಇಲ್ಲ ಅನ್ನೋದು ನನ್ನ ನಂಬಿಕೆ. ಆದ್ರೆ ಯುನಿವರ್ಸಿಟಿಯ ಕ್ಯಾಂಪಸ್ ನಲ್ಲಿ ಓದೋದು ಇದೆಯಲ್ಲಾ. ಯಾವುದೇ ವಿದ್ಯಾರ್ಥಿಯ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಲು ಯುನಿವರ್ಸಿಟಿ ಕ್ಯಾಂಪಸ್ ಸಹಕಾರಿ. ಯುನಿವರ್ಸಿಟಿ ಕ್ಯಾಂಪಸ್ ನಿನಗೇನು ಕೊಟ್ಟಿತು ಅಂತ ಕೇಳಿದ್ರೆ ಬದಕಲು ಕಲಿಸಿದೆ ಅಂತ ಹೇಳಬಹುದು. ಪ್ರೊ.ಕೆ.ವಿ. ನಾಗರಾಜ್, ಡಾ. ಜಿ.ಪಿ.ಶಿವರಾಂ, ಡಾ.ಪೂರ್ಣಾನಂದ ಜರ್ನಲಿಸಂ ಬಗ್ಗೆ ಹೇಳ್ಕೊಟ್ಟರು. ಅದ್ರಲ್ಲೂ ಡಾ.ಪೂರ್ಣನಂದ ಅವ್ರು ಮಾಡ್ತಿದ್ದ ಸಿನಿಮಾ ಬಗೆಗಿನ ಕ್ಲಾಸ್ ಗಳು, ತೋರಿಸುತ್ತಿದ್ದ ಜಗತ್ತಿನ ಅತ್ಯುತ್ತಮ ಸಿನಿಮಾಗಳನ್ನು ಮರೆಯೋಕೆ ಸಾಧ್ಯವಿಲ್ಲ. ಹಾಗೇನೇ ಕೋರ್ಸ್ ಮುಗಿಸಿದ ನಂತ್ರ ಒಬ್ಬ ಜರ್ನಲಿಸ್ಟ್ ಆಗಿ ಕೆಲಸ ಮಾಡುವಾಗ್ಲೂ ಪೂರ್ಣಾನಂದರ ಮಾತುಗಳು ಅನೇಕ ಸಂದರ್ಭಗಳಲ್ಲಿ ದಾರಿ ತೋರಿಸಿವೆ.

ಟೀಚರ್ಸ್ ಡೇ ದಿನ ಕಲಿಸಿದ ನನ್ನೆಲ್ಲಾ ಗುರುಗಳಿಗೂ ವಂದನೆ. ಇಲ್ಲಿ ಎಲ್ಲರ ಹೆಸರು ಬರೆದಿಲ್ಲ. ಆದ್ರೆ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ನನ್ನ ಬದುಕು ರೂಪಿಸಲು ಸಹಾಕಾರಿಯಾಗಿದ್ದಾರೆ.

Tuesday, August 23, 2011

ಅಣ್ಣಾಗೆ ವಂದಿಸುತ್ತಾ..


ಅಣ್ಣಾ
ಹಜಾರೆ ಹೋರಾಟಕ್ಕೆ ದೇಶ ವ್ಯಾಪಿ ಬೆಂಬಲ ವ್ಯಕ್ತವಾಗಿದೆ. ನಿಜಕ್ಕೂ ಈ ದೇಶದಲ್ಲಿ ಇಂತದ್ದೊಂದು ಚಳವಳಿಯ ಅವಶ್ಯಕತೆ ಇತ್ತು. ಇಡೀ ದೇಶ ಒಂದಾಗಿ ಹೋರಾಟ ನಡೆಸುವ ಶಕ್ತಿಯನ್ನು ಈಗಲೂ ಹೊಂದಿದೆ ಅನ್ನೋದನ್ನು ಅಣ್ಣಾ ಹೋರಾಟ ತೋರಿಸಿಕೊಟ್ಟಿದೆ.

ಅಣ್ಣಾ ಹೋರಾಟವನ್ನು ಎರಡನೆ ಸ್ವಾತಂತ್ರ್ಯ ಸಂಗ್ರಾಮ ಎಂದೇ ಬಿಂಬಿಸಲಾಗುತ್ತಿದೆ. ಜಯಪ್ರಕಾಶ್ ನಾರಾಯಣ್ ತುರ್ತು ಪರಿಸ್ಥಿತಿ ವಿರುದ್ದ ನಡೆಸಿದ ಸಂಪೂರ್ಣ ಕ್ರಾಂತಿ ಹೋರಾಟವನ್ನು ನೋಡದಿದ್ದ ನಮ್ಮ ಪಾಲಿಗೆ ಇದು ಎರಡನೇ ಸ್ವಾತಂತ್ರ್ಯ ಸಂಗ್ರಾಮವೇ. ಈಗ ದೇಶದ ಉದ್ದಗಲಕ್ಕೆ ಎಲ್ಲರು ಅಣ್ಣಾ ಭಜನೆ ಮಾಡುತ್ತಿದ್ದಾರೆ. ಅಣ್ಣಾ ನಮಗೆಲ್ಲ ಆಧುನಿಕ ಗಾಂಧಿಯಾಗಿ ತೋರುತ್ತಿದ್ದಾರೆ. ಖಂಡಿತವಾಗಿಯೂ ಅಣ್ಣಾ ಒಬ್ಬ ನಿಜವಾದ ಗಾಂಧಿವಾದಿ. ಎಲ್ಲೂ ತಾವು ನಡೆಸುತ್ತಿರುವ ಹೋರಾಟ ಹಿಂಸೆಯ ರೂಪ ಪಡೆದುಕೊಳ್ಳದಂತೆ ಎಚ್ಚರವಹಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಹೋರಾಟ ನಡೆದರು ದೇಶದಲ್ಲಿ ಶಾಂತಿ ಕದಡಿಲ್ಲ. ಅಹಿಂಸೆಯ ಹಾದಿಯಲ್ಲೇ ಹೋರಾಟ ಹೆಜ್ಜೆ ಹಾಕಿದೆ. ಒಂದು ದೇಶವನ್ನು ಈ ರೀತಿ ಅಹಿಂಸೆಯ ಹಾದಿಯಲ್ಲಿ ಹೋರಾಟಕ್ಕೆ ಸಂಘಟಿಸೋದು ಅಷ್ಟು ಸುಲಭವಲ್ಲ. ಆದ್ರೆ ಅಣ್ಣಾ ಅದರಲ್ಲಿ ಯಶಸ್ವಿಯಾಗಿದ್ದಾರೆ.

ಖಂಡಿತವಾಗಿಯೂ
ಇಂದಿನ ಪಾರ್ಲಿಮೆಂಟರಿ ಸಿಸ್ಟಮ್ ಗೆ ಮಹತ್ತರ ಬದಲಾವಣೆಯ ಅವಶ್ಯಕತೆ ಇದೆ. ಕಳೆದ ೬೫ ವರ್ಷಗಳಿಂದ ನಮ್ಮ ಸಂಸತ್ತು, ಶಾಸನ ಸಭೆಗಳು ಯಾವುದೇ ಮಸೂದೆಯ ಹಣೆಬರಹ ಬರೆಯುತ್ತಿವೆ. ಲೋಕಪಾಲ್ ಮಸೂದೆ ಸುಮಾರು ೪೦ ವರ್ಷಗಳಿಂದ ಜಾರಿಗೆ ಬರದೆ ಇರೋದು ಇದಕ್ಕೆ ಸಾಕ್ಷಿ. ಆದ್ರೆ ಇದೆ ಮೊದಲ ಬಾರಿಗೆ ಸಂಸತ್ತಿನ ಮುಂದೆ ಒಂದು ಮಸೂದೆ ಇಂತಿಷ್ಟೇ ಸಮಯದೊಳಗೆ ಬರಬೇಕೆಂದು ದೇಶದ ಜನ ಹಕ್ಕೊತ್ತಾಯ ಮಾಡಿರುವುದು ನಿಜಕ್ಕೂ ಪ್ರಜಾಪ್ರಭುತ್ವದ ಬೇರುಗಳನ್ನು ಮತ್ತಷ್ಟು ಬಲಿಷ್ಠಗೊಳಿಸಲಿದೆ. ವೋಟು ಕೊಟ್ಟು ಕಳಿಸಿದ ಜನ ೫ ವರ್ಷದವರೆಗೆ ತಮ್ಮ ಪ್ರತಿನಿಧಿಗಳನ್ನು ಪ್ರಶ್ನಿಸೋದಿಕ್ಕೆ ಇದುವರೆಗೆ ಅವಕಾಶ ಇಲ್ಲವೇನೋ ಎಂದು ನಾವೆಲ್ಲಾ ಅಂದುಕೊಂಡಿದ್ದೆವು. ಆದ್ರೆ ಈಗ 'ನಾವ್ ಹೇಳೋದನ್ನು ಸ್ವಲ್ಪ ಕೇಳಿ' ಅಂತ ಜನಪ್ರತಿಧಿಗಳನ್ನು ಪ್ರಶ್ನಿಸುವ ಹಕ್ಕನ್ನು ಅಣ್ಣಾ ನೆನಪಿಸಿಕೊಟ್ಟಿದ್ದಾರೆ. ಸಂಸತ್ತಿನಲ್ಲಿ ಜನಲೋಕಪಾಲ್ ಬಗ್ಗೆ ಚರ್ಚೆ ನಡೆಯೋದ್ರ ಮೂಲಕ ಇತಿಹಾಸ ಸೃಷ್ಟಿಯಾಗಿದೆ.

ಇದೆಲ್ಲ ಸರಿ. ಅಣ್ಣಾ ಜನರಲ್ಲಿ ಹೋರಾಟದ ಕೆಚ್ಚನ್ನು ತುಂಬಿದ್ದಾರೆ. ಆದ್ರೆ ಕೇಂದ್ರ ಸರ್ಕಾರ, ಪ್ರಧಾನಮಂತ್ರಿ, ಸಂಸತ್ತು, ರಾಜಕೀಯ ಪಕ್ಷಗಳ ಮುಖಂಡರೆಲ್ಲಾ ಪದೇ ಪದೆ ಅಣ್ಣಾ ನಿರಶನ ಕೈಬಿಡಬೇಕೆಂದು ಒತ್ತಾಯಿಸಿದ್ರೂ ಹಜಾರೆ ಉಪವಾಸವನ್ನು ನಿಲ್ಲಿಸಿಲ್ಲ. ಸಂಸತ್ತಿನಲ್ಲಿ ತಾವು ಹೇಳಿದ ವಿಚಾರಗಳ ಬಗ್ಗೆ ಅಂತಿಮ ರೆಸೆಲ್ಯೂಷನ್ ಹೊರಬರುವವರೆಗೆ ಉಪವಾಸ ಕೈಬಿಡೋದಿಲ್ಲ ಅನ್ನೋ ನಿಲುವ ಹಠಮಾರಿತನ ಅನ್ನಿಸದೆ ಇರದು. ಪ್ರಜಾಪ್ರಭುತ್ವದಲ್ಲಿ ಹೋರಾಟದ ಮೇಲೆ ಇರುವಷ್ಟೇ ನಂಬಿಕೆ ಮಾತುಕತೆಯ ಮೇಲೂ ಇರಬೇಕು. ಸಂಸತ್ತಿನಲ್ಲಿ ನೀಡುವ ಭರವಸೆಯಿಂದ ಯಾರೂ ಸುಲಭವಾಗಿ ನುಣುಚಿಕೊಳ್ಳಲು ಸಾಧ್ಯವಿಲ್ಲ. ಒಂದು ವೇಳೆ ಕೇಂದ್ರ ಸರ್ಕಾರ ತಾನು ಹೇಳಿದಂತೆ ನಡೆದುಕೊಳ್ಳದಿದ್ದರೆ ಅದಕ್ಕೆ ತಕ್ಕ ಪಾಠ ಕಲಿಸಲು ಜನತೆ ಇದ್ದೇ ಇದ್ದಾರೆ. ಇನ್ನೂ ಒಂದು ಅಂಶವೆದ್ರೆ ಲೋಕಸಭೆಯಲ್ಲಿ ಜನ ಲೋಕಪಾಲ್ ಗೆ ಸಂಬಂಧಿಸಿದಂತೆ ಚರ್ಚೆ ಆರಂಭವಾಗುತ್ತಿದ್ದಂತೆ ಅಣ್ಣಾ ಹಜಾರೆ ರಾಮ್ ಲೀಲಾ ಮೈದಾನದಲ್ಲಿ ಮಾತನಾಡಿದ್ರು. ಜನ್ ಲೋಕಪಾಲ್ ವಿರೋಧಿಸುವವರನ್ನು ಮುಂದಿನ ಚುನಾವಣೆಯಲ್ಲಿ ಲೋಕಸಭೆಗೆ ಆರಿಸಿ ಕಳಿಸಬಾರದು ಎಂದು ಅಣ್ಣಾ ಹೇಳಿದ್ರು. ನಿಜಕ್ಕೂ ಇದು ಆಶ್ಚರ್ಯದ ಸಂಗತಿ. ಯಾಕಂದ್ರೆ ತಾವು ಸಿದ್ದಪಡಿಸಿದ ಮಸೂದೆಯನ್ನೇ ಎಲ್ಲರೂ ಒಪ್ಪಿಕೊಳ್ಳಬೇಕು. ಇದನ್ನು ವಿರೋಧಿಸುವಂತಿಲ್ಲ ಅನ್ನೋ ನಿಲುವು ಯಾರಿದಂಲೂ ಬರಬಾರದು. ಯಾಕಂದ್ರೆ ಪ್ರಜಾಪ್ರಭುತ್ವದ ವಿಶೇಷತೆ ಅಡಗಿರುವುದೇ ಕೊಡು ಕೊಳ್ಳುವಿಕೆಯಲ್ಲಿ. ಹೇರಿಕೆಯಲ್ಲಿ ಅಲ್ಲ.

ಏನೇ ಆದ್ರೂ ಅಣ್ಣಾ ಹೋರಾಟ ದೇಶದಲ್ಲಿ ಜನರಲ್ಲಿ ಹೊಸ ಸಂಚಲನ ಮೂಡಿಸಿರೋದಂತೂ ಸತ್ಯ.

Wednesday, July 20, 2011

ಬಾರದೂರಿಗೆ ಹೋದವನ ನೆನೆದು...

ಇವತ್ತಿಗೆ ಸರಿಯಾಗಿ ಒಂದು ತಿಂಗಳಾಯ್ತು. ಗೆಳೆಯ ಬಾರದೂರಿಗೆ ತೆರಳಿ.

ಅವತ್ತು ಜೂನ್ 19. ಬೆಳಗ್ಗೆ ಒಂಭತ್ತು ಗಂಟೆಗೆ ನ್ಯೂಸ್ ಒದ್ತಿದ್ದೆ. ಅದ್ರಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹೊಸ ಚಿತ್ರದ ಆಡಿಯೋ ರಿಲೀಸ್ ಗೆ ಆಟೋ ಓಡಿಸುತ್ತಿದ್ದ ಸುದ್ದಿಯಿತ್ತು. ರಾಜಾರಾಜೇಶ್ವರಿ ನಗರದ ತಮ್ಮ ನಿವಾಸದಿಂದ ದರ್ಶನ್ ರಾಜಾಜಿನಗರದ ರಾಮಮಂದಿರ ಗ್ರೌಂಡ್ ವರೆಗೆ ಆಟೋ ಚಾಲನೆ ಮಾಡ್ತಾ ಬಂದ ಸುದ್ದಿಯದು. ಅದನ್ನು ಓದ್ತಿರೋವಾಗ ಗೆಳೆಯ ಸುನಾಮಿ ಮನಸ್ಸಲ್ಲೇ ಬೈಯ್ಯುತ್ತಿದ್ದೆ. ' ಅಲ್ಲಾ ಇವ್ನ ಬಾಸ್ ದು ಪ್ರೋಗ್ರಾಂ ಇದ್ದೂ ಇವನ್ಯಾಕೆ ಮಡಿಕೇರಿಗೆ ಹೋದ... ಸಂಜೆ ಬರಲಿ ವಿಚಾರಿಸಿಕೊಳ್ಬೇಕು' ಅಂದಕ್ಕೊಂಡಿದ್ದೆ. ಆದ್ರೆ ನನಗೇನು ಗೊತ್ತಿತ್ತು ಅವನು ಬಾರದ ಊರಿಗೆ ಆಗಲೇ ಹೊರಟಿದ್ದ ಅಂತ.
ನ್ಯೂಸ್ ಮುಗಿಸಿ ಸ್ವಲ್ಪ ಹೊತ್ತಿಗೆ ಗೆಳೆಯ ಮುರಳಿ ಫೋನ್ ಮಾಡಿದ್ದ. ' ಲೋ.. ನಿಂಗೇನಾದ್ರೂ ಶೇಖರ್ ನಿನ್ನೆ ಫೋನ್ ಮಾಡಿದ್ನಾ.. ಮಡಿಕೇರಿಗೆ ಹೋಗ್ತೀನಂತಾ' ಅವನ ಮಾತಿನಲ್ಲಿ ಆತಂಕವಿತ್ತು.

ಹೌದು ಫೋನ್ ಮಾಡಿದ್ದ. ಏನ್ ಸಮಾಚಾರ. ಅಂದೆ

ಅವ್ನು ಹೋಗ್ ಬಿಟ್ನಂತೆ ಕಣೋ.. ನೀರಲ್ಲಿ.. ಬೆಳಗ್ಗೆ ನದಿಗೆ ಮುಖ ತೊಳಿಯೋಕೆ ಹೋಗಿದ್ನಂತೆ. ಕೊಚ್ಚಿಕೊಂಡು ಹೋದ್ನಂತೆ. ಅವ್ನ ಜೊತೆಗೆ ಹೋದವ್ರು ಹೇಳ್ತಿದ್ದಾರೆ. ಏನ್ ಮಾಡ್ಬೇಕು ಗೊತ್ತಾಗ್ತಿಲ್ಲ. ಒಂದೇ ಸಮನೆ ಮುರಳಿ ಹೇಳ್ತಿದ್ರೆ. ನಂಗೆ ಏನ್ ಮಾತಾಡ್ಬೇಕೋ ಗೊತ್ತಾಗಿರಲಿಲ್ಲ. ಯಾಕಂದ್ರೆ ಅಷ್ಟೊತ್ತಿಗೆ ವಾಸ್ತವ ಸ್ಥಿತಿ ಅರ್ಥವಾಗಿತ್ತು. ಗೆಳೆಯ ಶೇಖರ ಇನ್ನು ಜೀವಂತ ಸಿಗೋದಿಲ್ಲ ಎಂದು ಮನಸ್ಸು ಹೇಳತೊಡಗಿತು. ಆದ್ರೂ ಎಲ್ಲೋ ನದಿ ದಡ ಸೇರಿರಬಹುದು ಎಂಬ ಆಸೆ ಇದ್ದೇ ಇತ್ತು.

ಶೇಖರ್ ನನ್ನು ನಾವೆಲ್ಲಾ ಪ್ರೀತಿಯಿಂದ ಕರೀತಾ ಇದ್ದಿದ್ದು ಸುನಾಮಿ ಅಂತ. ಅವ್ನ ಮಾರುತಿ ಓಮ್ನಿ ಕಾರ್ ನಲ್ಲಿ ಬಂತಾ ಸುನಾಮಿ ಅಂತ ದೊಡ್ಡ ಅಕ್ಷರಗಳಲ್ಲಿ ಬರೆದುಕೊಂಡಿದ್ದ. ಹೀಗಾಗಿ ಅವನೇ ನಮಗೆ ಸುನಾಮಿ ಆಗಿದ್ದ. ಒಬ್ಬ ಒಳ್ಳೆಯ ಸ್ನೇಹಿತ. ತುಂಬ ಬಡತನದಿಂದ ಬಂದಿದ್ದ. ಆದ್ರೆ ಅದನ್ನೆಲ್ಲವನ್ನೂ ಮರೆಸುವ ಲವಲವಿಕೆ ಇತ್ತು. ಗೆಳೆಯರ ದೊಡ್ಡ ಬಳಗ ಅವನದಾಗಿತ್ತು. ಗೆಳೆಯರ ವಿಚಾರದಲ್ಲಿ ಅವನು ನಿಜಕ್ಕೂ ಶ್ರೀಮಂತ!

ಮೂಲತಃ ಕೋಲಾರದವನದ್ರೂ ಬೆಂಗಳೂರಿನಲ್ಲೇ ಬೆಳೆದ ಹುಡುಗ. ಸುನಾಮಿ ಓದಿದ್ದು ಹತ್ತನೇ ಕ್ಲಾಸ್ ವರೆಗೆ. ನಂತ್ರ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿದ ನಂತ್ರ ಸ್ವಂತದ್ದೊಂದು ಓಮ್ನಿ ಕಾರು ತಗೊಂಡು ಕುಟುಂಬಕ್ಕೆ ಆಧಾರವಾಗಿದ್ದ. ಛಾಲೆಂಜಿಂಗ್ ಸ್ಟಾರ್ ದರ್ಶನ್ ರ ಕಟ್ಟಾ ಅಭಿಮಾನಿ. ಆರಂಭದಲ್ಲಿ ಬಂತಾ ಸುನಾಮಿ ಅಂತ ಕಾರ್ ನ ಹಿಂಭಾಗದಲ್ಲಿ ಬರೆದುಕೊಂಡಿದ್ದವನು ನಂತ್ರ ಅದನ್ನು 'ನಾ ದರ್ಶನ್ ಪ್ರೇಮಿ' ಅಂತ ಬದಲಾಯಿಸಿಕೊಂಡಿದ್ದ. ದರ್ಶನ್ ಹುಟ್ಟಹಬ್ಬದ ದಿನ ಅನಾಥ ಮಕ್ಕಳಿಗಾಗಿ ಯಾವುದಾದ್ರೂ ಕಾರ್ಯಕ್ರಮ ಆಯೋಜಿಸುತ್ತಿದ್ದ. ಬಡಮಕ್ಕಳ ವಿದ್ಯಾಭ್ಯಾಸಕ್ಕೆ ನೆರವಾಗಲು ಮುಂದಾಗುತ್ತಿದ್ದ. ಕಾರ್ಯಕ್ರಮಗಳನ್ನು ಆಯೋಜಿಸಲು ಅದೆಲ್ಲೆಲ್ಲಿಂದ ಹಣ ಸಂಗ್ರಹಿಸುತ್ತಿದ್ದನೋ ಅನ್ನೋದು ಇವತ್ತಿಗೂ ನನಗೆ ಸೋಜಿಗದ ಪ್ರಶ್ನೆ. ಆದ್ರೆ ಆತ ಮಾತ್ರ ಯಾವುದಕ್ಕೂ ಟೆನ್ಷನ್ ತಗೊಳ್ಳದೆ ಅದ್ಭುತವಾಗಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದ.

ಜೀವನದಲ್ಲಿ ಏನನ್ನಾದ್ರೂ ಸಾಧನೆ ಮಾಡ್ಬೇಕು ಅನ್ನೋ ಹಪಹಪಿ ಅವನಲ್ಲಿತ್ತು. ಅದಕ್ಕಾಗಿ ಅವನ ಜೊತೆ ಡಿಗ್ರಿ ಕರೆಸ್ಪಾಂಡೆಂಟ್ ಆಗಿ ಕಟ್ಟೋ ಅಂತ ಸಲಹೆ ಕೊಟ್ಟಿದ್ದೆ. ಅದಕ್ಕೆ ಒಪ್ಪಿ ಬೆಂಗಳೂರು ಯುನಿವರ್ಸಿಟಿಯಲ್ಲಿ ಕರೆಸ್ಪಾಂಡೆಂಟ್ ಪದವಿಯ ಎರಡು ವರ್ಷ ಮುಗಿಸಿದ್ದ. ಫೈನಲ್ ಇಯರ್ ಎಕ್ಸಾಮ್ ಮುಂದಿನ ವರ್ಷ ಬರೀಬೇಕಿತ್ತು. ಇದ್ರ ನಡುವೆ ಕ್ಯಾಮರಾ ಟ್ರೈನಿಂಗ್ ಪಡ್ಕೊಂಡು ಸಮಯ ನ್ಯೂಸ್ ಚಾನೆಲ್ ನಲ್ಲಿ ಕ್ಯಾಮರಾಮನ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದ. ಏನನ್ನಾದ್ರೂ ಸಾಧಿಸಬೇಕು ಎಂಬ ಆಸೆಯೇ ಅವನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿತ್ತು.


ಜೂನ್ 18ರಂದು ರಾತ್ರಿ ಎಂಟು ಗಂಟೆ ಹೊತ್ತಿಗೆ ಅವನಿಗೆ ಫೋನ್ ಮಾಡಿದ್ದೆ. ಯಾವುದೋ ಕಾರಣಕ್ಕೆ ಸ್ವಲ್ಪ ಅಪ್ ಸೆಟ್ ಆಗಿದ್ದ. 'ಆದ್ರೆ ಅದಕ್ಕೆಲ್ಲಾ ತಲೆಕೆಡಿಸ್ಕೋಬೇಡಾ ಕಣೋ. ಜೀವನದಲ್ಲಿ ನೀನು ಇನ್ನೂ ದೊಡ್ಡ ಸಾಧನೆಗಳನ್ನು ಮಾಡ್ಬೇಕು' ಎಂದು ಹುರಿದುಂಬಿಸಿದ್ದೆ. ಅವನೂ ಸಮಾಧಾನಗೊಂಡಿದ್ದ. ಇವತ್ತು ನೈಟ್ ಫ್ರೆಂಡ್ಸ್ ಜೊತೆ ಮಡಿಕೇರಿಗೆ ಹೋಗ್ತಿದ್ದೀನಿ. ನಾಳೆ ಸಂಜೆ ಬಂದ್ಮೇ ಲೆ ಫೋನ್ ಮಾಡ್ತೀನಿ ಅಂದಿದ್ದ. ಹಾಗೇ ಏನೋ ತಮಾಷೆ ಮಾಡ್ತಾ ಫೋನಿಟ್ಟಿದ್ದೆ. ಆದ್ರೆ ಯಾರಿಗೆ ಗೊತ್ತಿತ್ತು ಅದೇ ಅವನ ಜೊತೆಗಿನ ಕೊನೆಯ ಸಂಭಾಷಣೆ ಆಗುತ್ತೆ ಅಂತ.

ಮಾರನೇ ದಿನ ಅಂದ್ರೆ ಜೂನ್ 19ರಂದು ಬೆಳಗ್ಗೆ ಮಡಿಕೇರಿ ಸಮೀಪದ ಬಲಮುರಿಯಲ್ಲಿ ಕಾವೇರಿ ನದಿಯಲ್ಲಿ ಮುಖ ತೊಳೆಯಲು ಗೆಳೆಯರೊಂದಿಗೆ ಇಳಿದವನು ನದಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದಾನೆ. ಮೂರು ದಿನ ಹುಡುಕಾಟದ ನಂತ್ರ ಶವವಾಗಿ ಪತ್ತೆಯಾದ.
ಎಷ್ಟೋ ಬಾರಿ ಸುನಾಮಿ ಹೇಳ್ತಿದ್ದ ಮಾತು ನೆನಪಾಗುತ್ತೆ. ಅದೆಲ್ಲಾ ಅವನು ತಮಾಷೆಗಾಗಿ ಹೇಳ್ತಿದ್ದಿದ್ದು. 'ಸಾರ್.. ಲೈಫ್ ನಲ್ಲಿ ಹಿಂಗೆ ಇರೋವಾಗ್ಲೇ ಸತ್ತೋಗ್ಬೇಕು. ಮುವತ್ತು ವರ್ಷಕ್ಕೆಲ್ಲಾ ಸತ್ತೋಗ್ಬೇಕು. ಏನಿರುತ್ತೆ ಸಾರ್ ಲೈಫ್ ನಲ್ಲಿ. ಜನ ಸುಮ್ ಸುಮ್ಮನೆ ಅದು ಬೇಕು ಇದೂ ಬೇಕು ಅಂತ ಬಡಿದಾಡುತ್ತಾರೆ.' ಅಂತ ಹೇಳ್ಕೊಂಡು ನಗಾಡ್ತಿದ್ದ.

ಹೇಳಿದಂತೆ ಅವನು ಬಾರದೂರಿಗೆ ಹೋಗಿಯೇ ಬಿಟ್ಟ !

ಅವನನ್ನು ನಂಬಿದ್ದ ಕುಟುಂಬ ದಿಕ್ಕೇ ತೋಚದೆ ಕುಳಿತಿದೆ. ಗೆಳೆಯರ ಬಳಗದಲ್ಲಿ ತುಂಬಲಾರದ ಶೂನ್ಯ ಉಳಿಸಿಟ್ಟು ಹೋದ. ಬರೀ ನೆನಪನ್ನು ಉಳಿಸಿ.

Monday, June 13, 2011

ಬಾಲ್ಯದ ನೆನಪುಗಳ ಸುತ್ತ...!

ಬಾಲ್ಯದ ನೆನಪುಗಳು ಮನಸಸಿಗೆ ಅತ್ಯಂತ ಮುದ ನೀಡುತ್ತವೆ . ಹಳ್ಳಿಗಾಡಿನಲ್ಲಿ ಬೆಳೆದವರ ನೆನಪಿನ ಬುತ್ತಿಯಲ್ಲಿ ಇಂತಹ ಮೊಗೆದಷ್ಟು ಮುಗಿಯದ ಕಥೆಗಳಿರುತ್ತವೆ.
ಆಗಿನ್ನೂ ನಾನು ನಾಲ್ಕೋ -ಐದೋ ವರ್ಷದವನು. ಶಾಲೆಗೆ ಇನ್ನೂ ಸೇರಿರಲಿಲ್ಲ ಅಂತ ನೆನಪು. ಅವತ್ತು ನಮ್ಮಲ್ಲಿ ತೆಂಗಿನ ಮರಗಳಿಂದ ತೆಂಗಿನ ಕಾಯಿ ಕೀಳುತ್ತಿದ್ದರು. ಹಾಗೆ ಕಿತ್ತು ತಂದ ತೆಂಗಿನ ಕಾಯಿ ರಾಶಿ ಮನೆ ಅಂಗಳದಲ್ಲಿತ್ತು. ದೊಡ್ಡಣ್ಣ ಮೆಟ್ಟಿಲ ಮೇಲೆ ಕುಳಿತಿದ್ದ. ನಾನು ಒಂದು ಕಡ್ಪತ್ತಿ ( ಸೊಪ್ಪು ತರಿಯಲು ಬಳಸುವ ಕತ್ತಿ) ಹಿಡ್ಕೊಂಡು ತೆಂಗಿನ ಕಾಯಿ ಇಲ್ಲದ ಕಿಲೆಯನ್ನು ಕಡೀತಾ ಇದ್ದೆ. ದೊಡ್ಡಣ್ಣ ಮನೆ ಮೆಟ್ಟಿಲಲ್ಲೇ ಕುಳಿತು ಹಾಗೆ ಕಡೀಬೇಡ ಅಂತ ಬಯ್ಯುತ್ತಾ ಇದ್ದ. ಆದ್ರೆ ನಾನು ಅಣ್ಣನ ಮಾತಿಗೆ ಕ್ಯಾರೇ ಅನ್ನದೆ ನನ್ನ ಪಾಡಿಗೆ ಕಡೀತಾ ಇದ್ದೆ. ಅದೂ ಎತ್ತೊದಿಕ್ಕೆ ಸಾಧ್ಯವಿಲ್ಲದ ಭಾರವಾಗಿದ್ದ ಕತ್ತಿಯನ್ನು ಎತ್ತಿಕೊಂಡು. ಆಗ ಇದ್ದಕ್ಕಿದ್ದಂತೆ ನಾನು ಕಡೀತಿದ್ದ ಕತ್ತಿ ತಾಗಿದ್ದು ನನ್ನ ಎಡಗೈ ಹೆಬ್ಬರಳಿಗೆ. "ಅವ್ವಾ... " ಎಂದು ಜೋರಾಗಿ ಅಳೋದಿಕ್ಕೆ ಶುರು ಮಾಡಿದೆ. ರಕ್ತ ಚಿಮ್ಮಿ ಬರುತ್ತಿತ್ತು. ನೋಡಿದ್ರೆ ಎಡಗೈ ಹೆಬ್ಬೆರಳಿನ ಎಲುಬು ಅರ್ಧ ಕಟ್ ಆಗಿ ನೇತಾಡುತ್ತಿತತ್ತು. ಅಳುತ್ತಿದ್ದ ನನ್ನನ್ನು ಸಮಾಧಾನಿಸೋದು ಅವ್ವ, ಅಣ್ಣಂದಿರು ಹಾಗೂ ಅಕ್ಕಂದಿರಿಗೆ ಸಾಧ್ಯವಾಗದ ಕೆಲಸವಾಗಿತ್ತು.
ಮನೆಯಿಂದ ನನ್ನನ್ನು ಎತ್ತಿಕೊಂಡೇ ಅಜ್ಜಾವರದಲ್ಲಿರುವ ಡಾಕ್ಟರ್ ಕ್ಲಿನಿಕ್ ಗೆ ಕರಕೊಂಡು ಹೋದ್ರು. ಡಾಕ್ಟ್ರು ಅದ್ಯಾವುದೋ ವಕ್ರವಾಗಿರುವ ಸೂಜಿಗೆ ನೂಲು ಹಾಕಿ ಆರೋ - ಏಳೋ ಸ್ಟಿಚ್ ಹಾಕಿದ್ರು. ಹೆಬ್ಬರಳಿನ ಸುತ್ತ ದೊಡ್ಡ ಬ್ಯಾಂಡೇಜ್ ಬೇರೆ ಕಟ್ಟಿದ್ರು. ಅವತ್ತು ಅನುಭವಿಸಿದ ನೋವು ಈಗಲೂ ಮನಸ್ಸಿನ ಮೂಲೆಯಲ್ಲಿ ಹಾಗೆಯೇ ನೆನಪಲ್ಲಿ ಉಳಿದಿದೆ.
ಆದ್ರೆ ಅದಕ್ಕಿಂತಲೂ ಹೆಚ್ಚು ನೆನಪಲ್ಲಿರೋದು ರತ್ನೋಜಿ ಅಣ್ಣನ ಹೊಟೇಲ್ ನಲ್ಲಿ ತಿನ್ನುತ್ತಿದ್ದ ಶೀರಾ( ಕೇಸರಿಬಾತ್) ಮತ್ತು ಚಾ. ಬೆರಳಿಗೆ ಕಟ್ಟಿದ್ದ ಬ್ಯಾಂಡೇಜ್ ಬಿಚ್ಚುವವರೆಗೂ ಅಪ್ಪ ನನ್ನನ್ನು ಕರೆದುಕೊಂಡು ಅಜ್ಜಾವರಕ್ಕೆ ಹೋಗುತ್ತಿದ್ದರು. ಆಗೆಲ್ಲಾ ಅಲ್ಲಿ ಡಾಕ್ಟರ್ ಹತ್ರ ಹೋಗಿ ಬಂದ್ಮೇಲೆ ಅಲ್ಲೇ ಇರುವ ರತ್ನೋಜಿ ಅಣ್ಣನ ಹೊಟೇಲ್ ನಲ್ಲಿ ಕುಳಿತು ಅಪ್ಪ ಶೀರಾ ತಿನ್ನಿಸ್ತಿದ್ರು. ನಮ್ಮ ಮನೇಲಿ ಶೀರಾ ಮಾಡ್ತಿದ್ದುದು ವರ್ಷದಲ್ಲಿ ಒಂದೇ ದಿನ. ಅದು ನನ್ನ ಬರ್ತ್ ಡೇ ದಿನದಂದು ಮಾತ್ರ. ಅದನ್ನು ಬಿಟ್ರೆ ಶೀರಾ ಟೇಸ್ಟ್ ಮಾಡುವ ಅವಕಾಶ ಸಿಗುತ್ತಿದ್ದುದು ರತ್ನೋಜಿ ಅಣ್ಣನ ಹೊಟೇಲ್ ನಲ್ಲಿ ಮಾತ್ರ. ಮೊನ್ನೆ ಊರಿಗೆ ಹೋಗಿದ್ದಾಗ ಅಪ್ಪನ ಜೊತೆ ರತ್ನೋಜಿ ಅಣ್ಣನ ಹೊಟೇಲ್ ಗೂ ಹೋಗಿದ್ದೆ. ಆಗ ಈ ಎಲ್ಲಾ ನೆನಪುಗಳು ಮನಸ್ಸಲ್ಲಿ ಸುಳಿದುಹೋದವು. ಸುಮಾರು ೨೫ ವರ್ಷಗಳ ನಂತ್ರವೂ ಅವ್ರು ಅದೇ ಉತ್ಸಾಹದಲ್ಲಿ ಅಜ್ಜಾವರದಲ್ಲಿ ಹೊಟೇಲ್ ನಡೆಸುತ್ತಿದ್ದಾರೆ.
ಇನ್ನು ಬಾಲ್ಯದ ದಿನಗಳಲ್ಲಿ ಮೀನಿಗೆ ಗಾಳ ಹಾಕುತ್ತಿದ್ದ ಮಜಾನೇ ಬೇರೆ. ಜಾರುತ್ತಿದ್ದ ಚಡ್ಡಿಯನ್ನು ಎತ್ತಿಕಟ್ಟಿಕೊಂಡು ಕೆಸುವಿನ ಬುಡಗಳಲ್ಲಿ ಇರುತ್ತಿದ್ದ ಎರೆಹುಳು ಹಿಡೀತಿದ್ದೆವು. ನಂಗೂ ಶಾಮಣ್ಣಗೂ ಇದೇ ಕೆಲಸ. ಒಮ್ಮೊಮ್ಮೆ ಅಪ್ಪ ನನ್ನ ಸಹಾಯಕ್ಕೆ ಬರುತ್ತಿದ್ದುದೂ ಇತ್ತು. ಎರೆಹುಳು ಸಿಗದಿದ್ರೆ ಕಪ್ಪೆ ಹಿಡಿದು ಅದನ್ನೇ ಗಾಳಕ್ಕೆ ಕಟ್ಟುತ್ತಿದ್ದೆವು. ಆ ಕಪ್ಪೆ ಹಿಡಿಯೋದಿಕ್ಕೆ ಅದ್ರ ಸುತ್ತ ತಿರುಗಣಿ ತರ ಕೈ ಸುತ್ತಿಸೋದು. ಆಗ ಕಪ್ಪೆಗೂ ತಲೆ ತಿರುಗುತ್ತೆ ಅನ್ನೋದು ನಮ್ಮ ನಂಬಿಕೆ. ಆಗೆ ಕೈ ಸುತ್ತಾಡಿಸ್ತಾ ಇದ್ರೆ ಕಪ್ಪೆ ಕದಲದೆ ಸುಮ್ಮನೆ ಕುಳಿತಿರುತ್ತಿತ್ತು. ಆಗ ಗಬಕ್ಕನೆ ಅದನ್ನು ಹಿಡ್ಕೊಳ್ಳುತ್ತಿದ್ದೆವು. ಆಮೇಲೆ ಅದ್ರ ಬೆನ್ನಿಗೆ ಗಾಳ ಚುಚ್ಚುತ್ತಿದ್ದೆವು. ಏರೆ ಹುಳವನ್ನಾದ್ರೆ ಗಾಳಕ್ಕೆ ಪೈಪ್ ಹಾಕುವಂತೆ ಅದನ್ನು ಚುಚ್ಚುತ್ತಿದ್ದೆವು. ನಮ್ಮ ಅಡ್ಪಂಗಾಯ ಹೊಳೆಯಲ್ಲಿ ಮಳೆ ಬಂದು ಕೆಂಪು ನೀರು ಬಂದ್ರೆ ಸಾಕು ನಾವು ಸ್ಕೂಲ್ ಮುಗಿಸ್ಕೊಂಡು ಬಂದು ಗಾಳ ಹಾಕೋದ್ರಲ್ಲೇ ಬ್ಯುಸಿ. ಜೋರಾಗಿ ಸುಳಿಯುತ್ತಿದ್ದ ಮಳೆ. ಆಗ ಕೊಡೆಯೋ, ಅಥವಾ ಪ್ಲಾಸ್ಟಿಕ್ ಗೊರಬನ್ನೋ ಹಾಕ್ಕೊಂಡು ಓಟೆ ಹಿಂಡಲಿನ ಹತ್ರ ಮೀನಿಗೆ ಗಾಳ ಹಾಕ್ಕೊಂಡು ಕುಳಿತಿರುತ್ತಿದ್ದೆ. ಮಳೆ ಇಲ್ಲದಾಗ್ಲೂ ಗಾಳ ಹಾಕ್ಕೊಂಡು ಮೀನು ಈಗ ಬೀಳುತ್ತೆ, ಸ್ವಲ್ಪ ಹೊತ್ತಲ್ಲಿ ಬೀಳುತ್ತೆ ಅಂತ ಕಾಯುತ್ತಿದ್ದೆವು. ಇನ್ನೇನು ಬಿದ್ದೇ ಬೀಳುತ್ತೆ ಅಂತ ಕಾಯೋದು. ಇವತ್ತು ಎಲ್ಲಾದ್ರೂ ದೊಡ್ಡ ಮೀನು ಗಾಳಕ್ಕೆ ಕಚ್ಕೊಂಡ್ರೆ ಹೆಂಗಪ್ಪಾ ಅಂತ ಯೋಚಿಸೋದು. ದೊಡ್ಡ ಮೀನು ಕಚ್ಚಿದ್ರೆ ವೊಟೆಯ ಕೋಲಿಗೆ ಕಟ್ಟಿರೋ ನನ್ನ ಗಾಳವನ್ನೂ ಅದು ಕಚ್ಚಿಕೊಂಡು ಹೋಗೇ ಬಿಡುತ್ತೇನೋ ಎಂಬ ಭಯ ಬೇರೆ. ಅದ್ರ ಮಧ್ಯೆ ನೀರಿನಲ್ಲಿ ಒಳ್ಳೆ ಹಾವಿನ ಕಾಟ. ಕೆಲವೊಮ್ಮೆ ಅವು ಗಾಳಕ್ಕೆ ಬಾಯಿ ಹಾಕುವ ಅಪಾಯಾನೂ ಇರ್ತಿತ್ತು. ಇಷ್ಟೆಲ್ಲಾ ಆದ್ರೂ ನಂಗೆ ಮೀನು ಸಿಕ್ಕಿದ್ದು ಬಾರಿ ಕಡಿಮೆ. ನಂಗೆ ನೆನಪಿರುವ ಹಾಗೆ ಒಂದೇ ಒಂದು ಸಲ ಒಂದು ಸಣ್ಣ ಮೀನು ಸಿಕ್ಕಿತ್ತು. ಇನ್ನೊಂದ್ಸಲ ಒಂದು ಹಾವು ಮೀನು ಗಾಳವನ್ನು ಕಚ್ಕೊಂಡು ಹೊರಟೇ ಹೋಗಿತ್ತು. ಹಾಗಿದ್ರೂ ಮೀನಿಗಾಗಿ ಗಾಳ ಹಾಕಿ ಕುಳಿತುಕೊಂಡು ಕಾಯುವ ಆಸೆ ಮಾತ್ರ ಯಾವತ್ತೂ ಕಡಿಮೆ ಆಗಿರಲಿಲ್ಲ. ಮೀನು ಸಿಗಲಿ ಬಿಡಲಿ ಮೀನಿಗೆ ಗಾಳ ಹಾಕಿ ಮಗ್ನರಾಗಿ ಕುಳಿತುಕೊಳ್ಳುವಾಗಿನ ಸುಖವೇ ಬೇರೆ. ಅದನ್ನು ಬಣ್ಣಿಸೋದು ಕಷ್ಟ.
ಇನ್ನು ಗದ್ದೆಯಲ್ಲಿ ಸಿಗುತ್ತಿದ್ದ ನರ್ತೆ ಹಿಡಿದು ಅದನ್ನು ಬೆಂಕಿಯಲ್ಲಿ ಸುಟ್ಟು, ಒಡೆದು ಅದ್ರಲ್ಲಿದ್ದ ಚೂರೇ ಚೂರು ಮಾಂಸವನ್ನು ತಿನ್ನುತ್ತಿದ್ದೆವು. ಇದಕ್ಕೆ ಮಲ್ಲಿ, ರೇಖು, ಸಂಧ್ಯಕ್ಕ ಎಲ್ರೂ ಸಾಥ್ ಕೊಡ್ತಿದ್ರು. ಇನ್ನು ಮನೆ ಮುಂದಿದ್ದ ಚೋಡಿಯಲ್ಲಿ ( ನೀರು ಹರಿಯುವ ಸಣ್ಣ ಕಣಿ) ಏಡಿ ಹಿಡಿಯೋದ್ರ ಥ್ರಿಲ್ ಬೇರೇನೆ ಇರುತ್ತಿತ್ತು. ಮನೆಗೆ ಮೀನು ತಂದ್ರೆ ಅದ್ರ ವೇಸ್ಟ್ ಅನ್ನು ಒಂದು ಕೋಲಿನ ತುದಿಗೆ ಕಟ್ಟಿಕೊಳ್ಳುತ್ತಿದ್ದೆವು. ಆ ಕೋಲು ಒಂದು ಕೈಲಿ. ಇನ್ನೊಂದು ಕೈಲಿ ಕತ್ತಿ. ಅಲ್ಲಿಗೆ ನಾವು ಏಡಿ ಬೇಟೆಗೆ ರೆಡಿ ಅಂತ ಲೆಕ್ಕ. ನಂತ್ರ ಮಾಂಸದ ತುಣುಕು ಕಟ್ಟಿದ್ದ ಕೋಲನ್ನು ಏಡಿಗಳು ಇರುತ್ತಿದ್ದ ಬಿಲದ ಮುಂದೆ ಹಿಡೀತಿದ್ದೆವು. ಸ್ವಲ್ಪ ಹೊತ್ತು ಕಾದಮೇಲೆ ಏಡಿ ನಿಧಾನಕ್ಕೆ ಬಿಲದಿಂದ ಹೊರಕ್ಕೆ ಬರುತ್ತಿತ್ತು. ಆಗ ಕೋಲನ್ನು ಮತ್ತಷ್ಟು ಹೊರಗೆ ತಂದ್ರೆ ಏಡಿ ಮತ್ತಷ್ಟು ಹೊರಗೆ ಬರುತ್ತಿತ್ತು. ಆದ್ರೆ ಹೊರಗೆ ಯಾರೋ ನಿಂತಿದ್ದಾರೆ ಅನ್ನೋದು ಗೊತ್ತಾದ್ರೆ ಏಡಿ ಮತ್ತೆ ಬಿಲದೊಳಗೆ ಸೇರಿಕೊಳ್ಳುತ್ತಿತ್ತು. ಹೀಗಾಗಿ ಅದನ್ನು ಹೊರಗೆ ತರೊದಂದ್ರೆ ಅದೊಂಥರಾ ಹಗ್ಗಜಗ್ಗಾಟ. ಅದು ಹೊರಗೆ ಬರಲ್ಲ. ನಾವು ಬಿಡಲ್ಲ. ಕೊನೆಗೆ ಆಹಾರದ ಆಸೆಗೆ ಏಡಿ ನಿಧಾನವಾಗಿ ಹೊರಗೆ ಬರುತ್ತಿತ್ತು. ಆಗ ಇನ್ನೊಂದು ಕೈಲಿದ್ದ ಕತ್ತಿಯಲ್ಲಿ ಏಡಿಯ ಬೆನ್ನಿಗೆ ಜೋರಾಗಿ ಚುಚ್ಚೋದು. ಅಲ್ಲಿಗೆ ಏಡಿ ಬೇಟೆ ಮುಕ್ತಾಯ. ಏಡಿ ತನ್ನ ಹತ್ತು ಕಾಲುಗಳನ್ನು ಆಡಿಸ್ತಾ ಇದ್ರೆ ನಮಗೆ ಬೇಟೆ ಮುಗಿಸಿದ ಖುಷಿ.
ಹಾಗೆ ಹಿಡಿದ ಏಡಿಯನ್ನು ಬೆಂಕಿಯಲ್ಲಿ ಸುಡುತ್ತಿದ್ದೆವು. ಏಡಿಯ ಬೆರಳುಗಳು, ದೇಹ ಬೆಂಕೀಲಿ ಬೇಯುತ್ತಿದ್ದಂತೆ ಖರಂ ಖುರುಂ ಅಂತ ಅದನ್ನು ತಿನ್ತಿದ್ದೆವು. ಈಗ ಅದನ್ನೆಲ್ಲಾ ನೆನೆಸ್ಕೊಂಡ್ರೆ ಅಯ್ಯೋ ಹಿಂಗೆಲ್ಲಾ ಮಾಡ್ತಿದ್ವಲ್ಲಾ ಅನ್ಸುತ್ತೆ. ಆದ್ರೆ ಆಗ ಅದ್ರಲ್ಲೇ ಖುಷಿಯಿತ್ತು.

ಆದ್ರೆ ನಮ್ಮೂರಿನಲ್ಲೂ ಈಗ ನಮ್ಮ ರೀತಿಯಲ್ಲಿ ಏಡಿ, ಮೀನು ಹಿಡಿಯುವ ಮಕ್ಕಳನ್ನು ಕಾಣೋಕೆ ಸಾಧ್ಯವಿಲ್ಲ. ಗದ್ದೆಗಳೇ ಇಲ್ಲದಿರೋದ್ರಿಂದ ನರ್ತೆಯಂತೂ ಕಾಣೋಕೂ ಸಿಗೋದಿಲ್ಲ. ಎಲ್ಲವೂ ಬದಲಾಗುತ್ತಿದೆ. ಹಾಗೆಯೇ ನಮ್ಮ ಹಳ್ಳಿಯ ಮಕ್ಕಳ ಬಾಲ್ಯದ ಸುಖವೂ ಬದಲಾಗಿದೆ !

Friday, March 4, 2011

ಮತ್ತದೇ ಪುನರಾವರ್ತನೆ

ಮತ್ತೊಬ್ಬ ಎಂಎಲ್ಎ ರಾಜೀನಾಮೆ ಸಲ್ಲಿಸಿದ್ದಾರೆ. ಕಾರಣ ಕ್ಷೇತ್ರದ ಅಭಿವೃದ್ಧಿ. ಕೊಪ್ಪಳ ಶಾಸಕ ಕರಡಿ ಸಂಗಣ್ಣ ಈಗ ಮಾಜಿಯಾಗಿದ್ದಾರೆ.
ಬಿಜೆಪಿ ಒಪ್ಪಲಿ ಬಿಡಲಿ. ರಾಜೀನಾಮೆ ಕೊಟ್ಟ ಶಾಸಕರೆಲ್ಲ ಆಮೇಲೆ ಸೇರಿದ್ದು ಕಮಲ ಪಾಳಯಕ್ಕೆ. ಇಲ್ಲಿ ದುಡ್ಡು ಕಾಸಿನ ವ್ಯವಹಾರ ನಡೆದಿದೆ ಅನ್ನೋ ಆರೋಪ ಮೇಲ್ನೋಟಕ್ಕೆ ಸಾಕ್ಷ್ಯ ಒದಗಿಸುತ್ತೆ. ಪ್ರತಿ ಮೂರೂ ತಿಂಗಳು, ಆರು ತಿಂಗಳಿಗೆ ಒಂದು ಚುನಾವಣೆ ರಾಜ್ಯದಲ್ಲಿ ನಡೀತಿದೆ. ಜನಕ್ಕೆ ಬೇಡದೆ ಇದ್ರೂ ಬಿಜೆಪಿಗೆ ಸಧ್ಯ ಚುನಾವಣೆ ಬೇಕು. ಪದೇ ಪದೆ ಜನರು ತಮ್ಮ ಬೆಂಬಲಕ್ಕೆ ಇದ್ದರೋ ಇಲ್ಲವೋ ಅನ್ನೋದನ್ನು ಬಿಜೆಪಿ ಪರೀಕ್ಷಿಸುತ್ತಲೇ ಇದೆ.
ಇದಕ್ಕೆ ಕೊನೆ ಎಂದು ಅನ್ನೋ ಮಾತನ್ನು ಪ್ರತಿಯೊಬ್ಬರೂ ಕೇಳುತ್ತಲೇ ಇದ್ದಾರೆ. ಮತದಾರು ಭ್ರಷ್ಟರಾಗಿದ್ದಾರೆ ಅನ್ನೋದನ್ನು ಉಪಚುನಾವಣೆಗಳಲ್ಲಿ ಸೋತವರು ಹೇಳ್ತಾರೆ. ಆದ್ರೆ ಮತದಾರರನ್ನು ಭ್ರಷ್ಟರನ್ನಾಗಿಸಿದ್ದು ಯಾರು ಎಂಬ ಪ್ರಶ್ನೆಗೆ ಯಾವುದೇ ಒಂದು ಪಕ್ಷದ ಕಡೆಗೆ ಮಾತ್ರ ಬೆರಳು ತೋರಿಸೋದು ಕಷ್ಟ.
ಆದ್ರೆ ಜನ ಇಂಥ ಅವಸ್ಥೆಗೆ ಯಾವಾಗ ಪಾಠ ಕಳಿಸುತ್ತಾರೆ ಅನ್ನೋದು ಸಧ್ಯ ಉತ್ತರ ಇಲ್ಲದ ಪ್ರಶ್ನೆಯಾಗಿದೆ.

Thursday, February 17, 2011

ಕಾಲದ ಒಡಲು

ಕಾಲದ ಒಡಲಲಿ ಎಲ್ಲವು ಒಂದು
ಅಂದು, ಇಂದು, ಎಂದೂ, ಮುಂದು
ನಾಳೆಗೆ ಬೇಡ ಇಂದಿನ ಹಂಗು
ಕಾಲದ ವೇಗಕೆ ತಡೆಯೇ ಇಲ್ಲ
ಉರುಳಿದ ತಲೆಗೆ ಲೆಕ್ಕವೇ ಇಲ್ಲ

ಬುದ್ಧನು ಬಂದ, ಬಸವಣ್ಣನು ಹೋದ
ಗಾಂಧಿ, ವಿವೇಕರು ಫೋಟೋದಲಿ ಚಂದ
ಅಂಗುಲಿಮಾಲ ಬುದ್ದಿಯ ಕಲಿತರು
ಬುದ್ಧಮಾತು ಬರಿ ಪಾಠ
ಬಸವಣ್ಣನ ಸುಧಾರಣೆ, ಗಾಂಧಿಯ ತತ್ವ
ವಿವೇಕರ ನಡೆನುಡಿ ಬೇಕೇಬೇಕು
ಪಾಲನೆಗಲ್ಲ, ಆಲಾಪನೆಗಷ್ಟೇ.
*****
ಕಾಲದ ಉರುಳಿಗೆ ಸಿಗದವರಿಲ್ಲ
ಕಳ್ಳರು, ಸುಳ್ಳರು, ಎಲ್ಲವ ಬಲ್ಲರು
ಬಲ್ಲವರಾರು ಉಳಿಯೋದಿಲ್ಲ
ಉಳಿದದ್ದೆಲ್ಲ ಬಲ್ಲವರಿಲ್ಲ
ಬಲ್ಲವರಿದ್ದರು ತಿಳಿಯುವುದಿಲ್ಲ
ಅಳಿದ ಮೇಲೆ ಹೊಗಳುವರೆಲ್ಲ

ಮಹಾಪುರುಷರ ಮಾತುಗಳೆಲ್ಲ
ಕಾಲಕ್ಕೆ ತಕ್ಕಂತೆ ಬದಲಾಗುವುವು ಇಲ್ಲಿ
ಅಣ್ಣನ ವಚನ, ಅಕ್ಕನ ವಚನ
ಭ್ರಷ್ಟರ ಬಾಯಲಿ ನಿತ್ಯವೂ ಗಾಯನ
ಹೇಳುವುದೊಂದು, ಮಾಡುವುದೊಂದು
ಒಂದಕ್ಕೊಂದು ಹೊಂದಾಣಿಕೆಯಿಲ್ಲ
ಆವಕ್ಕಾಗಿ ನೋಡುವರೆಲ್ಲ
ಮತವನು ಕೊಟ್ಟ ಜನರೆಲ್ಲಾ
ಯಾವುದು ಸತ್ಯ, ಯಾವುದು ಸುಳ್ಳು
ಒಂದೂ ಇಲ್ಲಿ ಗೊತ್ತಾಗೋದಿಲ್ಲ

ಕಾಲದ ಒಡಲಲಿ ಎಲ್ಲವು ಒಂದು
ಬಲ್ಲವರಾರು ಇದನಿಂದು !

Friday, February 11, 2011

ಮರೆಯಾಗದು ಪ್ರಕಾಶ...!

ಎಂ.ಪಿ. ಪ್ರಕಾಶ್ ಇನ್ನಿಲ್ಲ.
ಇದನ್ನು ಒಪ್ಪಿಕೊಳ್ಳೋದು ಕಷ್ಟ. ಹೌದು ಭೌತಿಕವಾಗಿ ಅವರು ಇನ್ನಿರಲಾರು. ಆದ್ರೆ ಅವರು ಮಾಡಿದ ಕೆಲಸಗಳು. ಅವರ ಕೊಡುಗೆಗಳು. ರಾಜಕಾರಣಿಯಾಗಿ ತೋರಿಸಿ ಕೊಟ್ಟ ಹಾದಿ. ಇದು ಎಂದೆಂದಿಗೂ ಚಿರನೂತನ.
ಎಂಪಿ ಪ್ರಕಾಶ್ ನಿಜ ಅರ್ಥದಲ್ಲೂ ಜನನಾಯಕ. ಒಬ್ಬ ಒಳ್ಳೆಯ ರಾಜತಾಂತ್ರಿಕ. ಅವರು ನಿಧನರಾದ ದಿನ ಬೆಂಗಳೂರಿನ ಸ್ವಾತಂತ್ರ್ಯ ಉಧ್ಯಾನಕ್ಕೆ ಸಾವಿರಾರು ಜನ ಹರಿದು ಬಂದಿದ್ರು. ಒಬ್ಬರಲ್ಲೂ ಒಂದೊಂದು ಭಾವನೆ. ರಾಜಕಾರಣಿಗಳು, ಸಾಹಿತಿಗಳು, ರಂಗಕರ್ಮಿಗಳು, ಸಂಗೀತಗಾರರು, ವಿಧ್ಯಾರ್ಥಿಗಳು. ಒಬ್ಬಬ್ಬರು ಒಂದೊಂದು ರೀತಿ ಪ್ರಕಾಶರನ್ನು ನೆನಪು ಮಾಡಿಕೊಂಡರು.
ಅವರಲ್ಲೊಬ್ಬ ವಿದ್ಯಾರ್ಥಿ ಸಿಕ್ಕಿದ್ದ. ಹಡಗಲಿಯವ. ಪಾಲಿಟೆಕ್ನಿಕ್ ಮುಗಿಸಿದ್ದ. ಸರ್.. ನಾನು ಓದೋದಿಕ್ಕೆ ಇವರೇ ಸರ್ ಕಾರಣ. ಸುಮಾರು ಇಪ್ಪತ್ತರ ಆಸುಪಾಸಿನ ಅವನ ಕಣ್ಣುಗಳಲ್ಲಿ ನೋವು ಮಡುಗಟ್ಟಿತ್ತು. ಒಬ್ಬ ರಾಜಕಾರಣಿ ಪ್ರಕಾಶ್ ಹಡಗಲಿಯಲ್ಲಿ ಶಾಲೆ, ಕಾಲೇಜು, ಇಂಜಿನಿಯರಿಂಗ್ ಕಾಲೇಜು ಆರಂಭಿಸಲು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಅದರಲ್ಲೂ ಇಂಜಿನಿಯರಿಂಗ್ ಕಾಲೇಜನ್ನು ಹಡಗಲಿಯಲ್ಲಿ ಉಳಿಸಿಕೊಳ್ಳಲು ಸರ್ಕಾರದ ಮೇಲೆ ಇನ್ನಿಲ್ಲದ ಒತ್ತಡ ಹೇರಬೇಕಾದ ಸಂಧರ್ಭ ಎದುರಾದಾಗ ಶಾಸಕರಲ್ಲದಿದ್ದರು ಬೆಳಗಾವಿ ಅಧಿವೇಶನ ಸಂದರ್ಭದಲ್ಲಿ ಅಲ್ಲೂ ಹೋಗಿ ಸರ್ಕಾರವನ್ನು ಒತ್ತಾಯಿಸಿದ್ದರು. ತಾಲೂಕು ಕೇಂದ್ರದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಉಳಿಸಿಕೊಳ್ಳಲು ಹರಸಾಹಸಪಟ್ಟಿದ್ದರು. ಇಂತ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಸುಂದರ ಭವಿಷ್ಯ ರೂಪಿಸುವ ಕನಸು ಕಂಡಿದ್ದರು.
ವಿಧ್ಯಾರ್ಥಿ ತನ್ನ ಶಿಕ್ಷಣದ ಬಗ್ಗೆ ಹೇಳಿದ್ರೆ ಸಾಹಿತಿ ಚಂದ್ರಶೇಖರ ಕಂಬಾರರು ಹಂಪಿ ಕನ್ನಡ ವಿಶ್ವವಿದ್ಯಾಲಯ ಸ್ಥಾಪಿಸಲು, ಅದನ್ನು ಒಂದು ಮಾದರಿ ವಿವಿ ಆಗಿ ರೂಪಿಸಲು ಪ್ರಕಾಶರ ಕೊಡುಗೆಗಳನ್ನು ನೆನಪಿಸಿಕೊಂಡರು. ಹಂಪಿಗೆ ಎಂಪಿ ಕೊಡುಗೆ ಇಷ್ಟೇ ಅಲ್ಲ. ಹಂಪಿ ಉತ್ಸವವನ್ನು ಅವರು ರೂಪಿಸಿದರು. ಹಂಪಿಯ ಕಲ್ಲುಗಳಿಗೆ ಉತ್ಸವದ ಮೂಲಕ ಜೀವ ತುಂಬಿದರು ಎಂಪಿ ಪ್ರಕಾಶ್. ಈಗ ಅದು ರಾಜಕೀಯ ಪ್ರತಿಷ್ಠೆಯ ಉತ್ಸವ ಆಗಿರೋದು ವಿಪರ್ಯಾಸ.
ಪ್ರಕಾಶರ ಬಗ್ಗೆ ಕೆಲವೊಂದು ಅಂಶಗಳನ್ನು ಹೇಳಲೇ ಬೇಕು. ಆಗ ಪ್ರಕಾಶ್ ಜೆಡಿಎಸ್ ತೊರೆಯುವ ಹಂತ ತಲುಪಿದ್ದರು. ಅದು ರಾಜ್ಯದ ರಾಜಕೀಯದಲ್ಲಿ ವತ್ತು. ಜೆಡಿಎಸ್, ಬಿಜೆಪಿಗೆ ಕೈಕೊಟ್ಟಾಗಿತ್ತು. ಆಗ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜಕೀಯ ಪಕ್ಷದ ಕಾರ್ಯಕಾರಿಣಿ ಸಭೆ ನಡೆಸಿತ್ತು. ಆ ಸಭೆಗೆ ಪ್ರಕಾಶ್ ಮತ್ತು ಅವರ ಬೆಂಬಲಿಗರು ಹೋಗಿರಲಿಲ್ಲ. ಅವತ್ತು ಸಂಜೆ ಅವರದೊಂದು ಪ್ರತಿಕ್ರಿಯೆ ತೆಗೆದುಕೊಳ್ಳಲು ಹೋಗಿದ್ದೆ. ಆಗ ಅವರು ಬಳಸಿದ ವಾಕ್ಯ ಅತ್ಯಂತ ಅರ್ಥಗರ್ಭಿತವಾಗಿತ್ತು. ಅವತ್ತು ಪ್ರಕಾಶ್ ಹೇಳಿದ್ದು : ' ಕರೆಸಿದ ಜನಗಳ ಮುಂದೆ ಕುಳಿತು ಸಭೆ ನಡೆಸಿದರೆ ಅದು ಕಾರ್ಯಕಾರಿಣಿ ಸಭೆ ಆಗುತ್ತಾ?...' ಜೆಡಿಎಸ್ ನಡೆಸಿದ ಅಂದಿನ ಕಾರ್ಯಕಾರಿಣಿಗೆ ಇದಕ್ಕಿಂತ ಉತ್ತಮ ವಿಶ್ಲೇಷಣೆ ಮಾಡೋದಿಕ್ಕೆ ಸಾಧ್ಯ ಇರಲಿಲ್ಲ.
ಪ್ರಕಾಶ್ ರಿಂದ ರಾಜಕೀಯ ಪಾಠ ಕೇಳುವ ಅವಕಾಶ ನನಗೆ ಸಿಕ್ಕಿದ್ದು ನನ್ನ ಅದೃಷ್ಟ. ಗೆಳೆಯ ಚೇತನ್ ಇದಕ್ಕೆ ಅವಕಾಶ ಮಾಡ್ಕೊಟ್ಟಿದ್ದ. ಸ್ವಾತಂತ್ರ್ಯ ನಂತರ ಭಾರತ ಹಾಗು ರಾಜ್ಯ ರಾಜಕೀಯದಲ್ಲಿ ಆದ ಬೆಳವಣಿಗೆಗಳ ಬಗ್ಗೆ ಪ್ರಕಾಶ್ ಅವತ್ತು ಸುಮಾರು ಮೂರು ಗಂಟೆಗಳ ಕಾಲ ಹೇಳ್ಕೊಟ್ಟಿದ್ದರು. ಯಾವುದೇ ಪುಸ್ತಕ ಓದಿದರೆ ಸಿಗದಷ್ಟು ಮಾಹಿತಿಯನ್ನು ಅವರು ನೀಡಿದ್ದರು.
ಈಗ ಪ್ರಕಾಶ್ ಇಲ್ಲ. ಅವರು ನೆನಪು ಮಾತ್ರ. ಆದರೆ ಜೀವನದ ಉದ್ದಕ್ಕೂ ಸಮಾಜದ ಮೇಲೆ ಅವರು ಬೀರಿದ ಪ್ರಕಾಶ ಮರೆಯಾಗದು.

Sunday, January 23, 2011

ಬದಲಾದ ಬದುಕು

ನಮ್ಮೂರು ಬದಲಾಗಿದೆ. ಹತ್ತು ಹದಿನೈದು ವರ್ಷಗಳ ಹಿಂದೆ ಹೀಗಿರಲಿಲ್ಲ. ಬದಲಾವಣೆಯಾಗಿದ್ದು ಬರೀ ಊರು ಮಾತ್ರ ಅಲ್ಲ. ನಮ್ಮೂರ ಜನರ ಬದುಕು ಕೂಡ.
ಅಂದಹಾಗೆ ನಮ್ಮೂರ ಹೆಸರು ಅಡ್ಪಂಗಾಯ. ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಹಳ್ಳಿಗಳ ಎಲ್ಲ ಲಕ್ಷಣ ನಮ್ಮೂರಿಗೂ ಇದೆ. ಹಾಗಾಗಿ ಇಲ್ಲಾದ ಬದಲಾವಣೆ ಜಿಲ್ಲೆಯ ಬಹುಭಾಗದಲ್ಲೂ ಆಗಿದೆ ಅಂತ ಹೇಳೋದಿಕ್ಕೆ ಅಡ್ಡಿಯಿಲ್ಲ.
ಆಗೆಲ್ಲ ಭತ್ತದ ಗದ್ದೆಗಳು ಊರಿಗೆ ಬಂದವರನ್ನು ಸ್ವಾಗತಿಸುತ್ತಿದ್ದವು. ಗದ್ದೆ ಉಳುಮೆ, ನೇಜಿ ಕಾಲದಲ್ಲಿ ನಾವು ಪಡುತ್ತಿದ್ದಂತ ಸಂಭ್ರಮ ಸ್ವರ್ಗಕ್ಕೆ ಕಿಚ್ಚು ಹಚ್ಚೆಂಬಂತಿತ್ತು. ಅಪ್ಪನಿಂದ ಸಿಗುತ್ತಿದ್ದ ಬೈಗಳ. ಅದಕ್ಕೆ ಅವ್ವ ಕೊಡುತ್ತಿದ್ದ ಸಾಥ್. ಇದೆಲ್ಲ ಸ್ವಲ್ಪ ಹೊತ್ತು ಬೇಜಾರ್ ಮಾಡುತ್ತಿದ್ದರು ಅವ್ರು ಹೇಳೋದು ನಮ್ ಒಳ್ಳೇದಕ್ಕೆ ಅನ್ನೋದು ಆಮೇಲೆ ಅರ್ಥ ಆಗ್ತಿತ್ತು. ಬೆಳಗ್ಗಿನ ಚಳಿಯಲ್ಲಿ ಎದ್ದು ಎತ್ತುಗಳಿಗೆ ಮಡ್ಡಿ ಕೊಟ್ಟು ಗದ್ದೆಗೆ ಇಳಿಸುವ ಹೊತ್ತಿಗೆ ಬೇಜಾರು ಮಾಯವಾಗಿ ಕೆಲಸದ ಖುಷಿ ಸಿಗುತ್ತಿತ್ತು. ಇನ್ನು ಗದ್ದೆ ಗೋರಿ ದಿನಗಳಲ್ಲಂತೂ ಸಂಭ್ರಮ ಹೇಳತೀರದು. ಆ ದಿನ ನಮ್ಮ ಗದ್ದೆಗೆ ಬೇರೆಯವರ ಎತ್ತುಗಳು ಬರುತ್ತಿದ್ದವು. ಅವ್ರ ಮನೆಯ ಎತ್ತುಗಳನ್ನು ಹೊಡಕೊಂಡು ಬರುತ್ತಿದ್ದ ನನ್ನ ಸಹಪಾಟಿಗಳಾದ ಶಿವ, ಅವನ ಅಣ್ಣ ದಯಾ, ಲವರನ್ನು ಬೆಳಗ್ಗೆ ನಮ್ಮನೆಗೆ ತಿಂಡಿಗೆ ಕರ್ಕೊಂಡು ಹೋಗೋದು ಅಂದ್ರೆ ಅದು ಸಾಹಸದ ಕೆಲಸ. ತಿಂಡಿಗೆ ಕರೆದರೆ ಸಾಕು ಎಲ್ಲರು ತಪ್ಪಿಸಿಕೊಂಡು ಹೋಗೋದು. ಆಮೇಲೆ ಒತ್ತಾಯ ಮಾಡ್ಕೊಂಡು ಕರ್ಕೊಂಡು ಬರೋದು. ಅವ್ರ ಗದ್ದೆಗೆ ನಮ್ಮ ಎತ್ತು ಕೊಂಡೊಯ್ಯುವಾಗುಲು ನಮ್ಮದು ಅದೇ ಆಟ. ಮನಸ್ಸಿನಲ್ಲಿ ಅವರ ಮನೆಗೆ ಹೋಗಿ ತಿಂಡಿ ತಿನ್ನುವ ಆಸೆ ಇದ್ದರು, ತಪ್ಪಿಸಿಕೊಳ್ಳುವ ಪ್ರಯತ್ನ ನಿಲ್ತಿರಲಿಲ್ಲ. ಇನ್ನು ನೇಜಿ ನೆಡುವಾಗ ಹಾಡುತ್ತಿದ್ದ 'ರಾವೋ ರಾವು ಕೊರಂಗು', 'ದೂಜಿ ಕೆಮ್ಮಯೇ' ಹಾಡುಗಳ ನಡುವೆ ಗದ್ದೆ ಕೆಲಸದ ಆಯಾಸ ಮಾಯವಾಗ್ತಿತ್ತು.
ನಮ್ಮಂತ ಮಕ್ಕಳಿಗೆ ಭತ್ತದ ಕೊಯಿಲಾದ ಮೇಲೆ ಅವೇ ಗದ್ದೆಗಳು ಕ್ರಿಕೆಟ್ ಗ್ರೌಂಡ್ ಗಳಾಗಿಯೂ ಮಾರ್ಪಡುತ್ತಿದ್ದವು. ಎಲ್ಲರ ಸಂಭ್ರಮದ ಜೊತೆಗೆ ಒಂದು ಮನೆಯವರು ಇನ್ನೊಂದು ಮನೆಯವರ ನಡುವೆ ಕೊಡುಕೊಳ್ಳುವ ಬಾಂಧವ್ಯ ಇರ್ತಿತ್ತು. ಕೆಲಸ ಮುಗಿದ ಮೇಲೆ ಸಂಜೆ ಒಬ್ಬರ ಮನೆಗೆ ಇನ್ನೊಬ್ಬರು ಹೋಗಿ ಬರ್ತಿದ್ದೆವು. ಅದಕ್ಕೆ ಇಂತದ್ದೆ ಕಾರಣ ಬೇಕು ಅಂತಿರಲಿಲ್ಲ. ಸುಮ್ಮನೆ ಒಂದು ಹರಟೆ, ತಮಾಷೆ ಎಲ್ಲವು ಅಲ್ಲಿ ಮನೆ ಮಾಡಿರುತ್ತಿತ್ತು. ಕೈಯಲ್ಲಿ ದುಡ್ಡು ಜಾಸ್ತಿ ಇಲ್ಲದಿದ್ರು ಖುಷಿ ಪಡಲು ನೂರು ಕಾರಣಗಳು ಇರುತ್ತಿದ್ದವು.
ಈಗ ಹಾಗಿಲ್ಲ. ಭತ್ತದ ಗದ್ದೆಗಳು ಸುಮಾರು ಹತ್ತು ಹದಿನೈದು ವರ್ಷಗಳ ಹಿಂದೆ ಬತ್ತಿ ಹೋಗಿವೆ. ಭತ್ತದ ಗದ್ದೆಗಳ ತುಂಬಾ ಅಡಿಕೆ ಮರಗಳು ಎದ್ದು ನಿಂತಿವೆ. ಹಿಂದೆ ದೂರ ದೊರದಲ್ಲಿ ಕಾಣುತ್ತಿದ್ದ ಮನೆಗಳು ಅಡಿಕೆ ತೋಟದಿಂದಾಗಿ ಕಾಣಿಸುತ್ತಿಲ್ಲ. ಅಡಿಕೆಗೆ ಒಳ್ಳೆಯ ರೇಟು ಸಿಕ್ಕ ಮೇಲಂತೂ ಮುಕ್ತವಾಗಿ ಮಾತಾಡೋದೇ ಕಷ್ಟವಾಗಿದೆ. ಒಬ್ಬರ ಮೇಲೆ ಇನ್ನೊಬ್ಬರಿಗೆ ವಿಶ್ವಾಸ ಇಲ್ಲ. ಟಿವಿ ಮುಂದೆ ಕುಳಿತು ಯಾರದೋ ಮನೆಗಳ ಕಥೆಯಂತಿರುವ ಧಾರಾವಾಹಿಗಳು ಮಾತನ್ನು ಮತ್ತಷ್ಟು ಕಡಿಮೆ ಮಾಡಿವೆ.
ಗದ್ದೆಗಳಲ್ಲಿ ಹಾಡುತ್ತಿದ್ದ ' ರಾವೋ ರಾವು ಕೊರಂಗು' ಕಾಣದಂತೆ ಎಲ್ಲೋ ಹಾರಿ ಹೋಗಿದೆ. ಜೊತೆಗೆ ನಮ್ಮೂರ ಜನರ ಬದುಕು ಕೂಡ! ಈಗಿನ ಮಕ್ಕಳಿಗೆ ಭತ್ತ ಹೇಗೆ ಬೆಳಿತಾರೆ ಅನ್ನೋದರ ಬಗ್ಗೆ ಸ್ಪಷ್ಟವಾಗಿ ಗೊತ್ತಾಗ್ತಿಲ್ಲ.

Friday, January 14, 2011

ಕಲಾಪದ ಆಲಾಪ

ವಿಧಾನಸಭೆಯ ಕಲಾಪಗಳು ಚರ್ಚೆಯಿಲ್ಲದೆ ಮುಕ್ತಾಯವಾಗಿವೆ. ಹತ್ತು ದಿನಗಳ ಅಧಿವೇಶನ ಆರೇ ದಿನಕ್ಕೆ ಅಂತ್ಯಗೊಂಡಿದೆ.
ಈ ಬಾರಿ ಅಧಿವೇಶನ ಆರಂಭವಾದಾಗ ಹಲವಾರು ನಿರೀಕ್ಷೆಗಳನ್ನು ಜನ ಇಟ್ಟುಕೊಂಡಿದ್ದರು. ಅದು ಹಗರಣಗಳ ವಿಷಯದಿಂದ ಹಿಡಿದು ಕೃಷ್ಣಾ ನದಿ ನೀರಿನ ಲಭ್ಯತೆಯ ಸದ್ಭಳಕೆವರೆಗೆ ಹಲವಾರು ವಿಚಾರಗಳು ಸದನದ ಮುಂದಿದ್ದವು. ಆದ್ರೆ ಅದ್ಯಾವುದಕ್ಕೂ ಅವಕಾಶ ಸಿಗಲೇ ಇಲ್ಲ.
ಆರು ದಿನ ನಡೆದ ಕಲಾಪದಲ್ಲಿ ಮೊದಲ ದಿನ ರಾಜ್ಯಪಾಲರ ಭಾಷಣಕ್ಕೆ ಸೀಮಿತವಾಯಿತು. ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಸುಳ್ಳು ಸಾಧನೆಗಳ ಭಾಷಣ ಓದಬಾರದು ಅಂತ ಪ್ರತಿಪಕ್ಷಗಳು ಸದನದಲ್ಲಿ ಅಡ್ಡಿಪಡಿಸಿದರು. ಹೀಗಾಗಿ ರಾಜ್ಯಪಾಲರು ಓದದೆಯೇ ಸದನದಲ್ಲಿ ಭಾಷಣ ಮಂಡನೆಯಾಯಿತು. ಇದರ ಮಾರನೆ ದಿನ ನಡೆದ ಸಂತಾಪ ಸೂಚನೆ ಕಲಾಪ ಮಾತ್ರ ಯಾವುದೇ ಅಡ್ಡಿಯಿಲ್ಲದೆ ನಡೆದಿದ್ದು. ಸೋಮವಾರದಿಂದ ಗುರುವಾರದ ತನಕ ನಾಲ್ಕು ದಿನ ನಡೆದಿದ್ದು ಬರೀ ಆಲಾಪ ಅಷ್ಟೆ.
ಸದನ ಅನಿರ್ಧಿಷ್ಟಾವಧಿಗೆ ಮುಂದಕ್ಕೆ ಹೋಗಿದ್ದಕ್ಕೆ ಆಡಳಿತ ಹಾಗು ಪ್ರತಿಪಕ್ಷಗಳು ಪರಸ್ಪರರ ಮೇಲೆ ಬೊಟ್ಟು ಮಾಡುತ್ತಿದ್ದಾರೆ. ಆದರೆ ಇದರಲ್ಲಿ ಎರಡೂ ಕಡೆಯವರ ಪಾಲು ಸಮಾನವಾಗಿದೆ ಅನ್ನೋದು ಸಾಮಾನ್ಯ ಜನರಿಗೂ ಅರ್ಥವಾಗುವಂತದ್ದು. ಇಲ್ಲಿ ಯಾರು ಸರಿ ಯಾರು ತಪ್ಪು ಅನ್ನೋದಕ್ಕಿಂತಲೂ ನಷ್ಟವಾಗಿದ್ದು ಮಾತ್ರ ರಾಜ್ಯದ ಜನತೆಗೆ.
ಹಿಂದೆಲ್ಲ ಗಲಾಟೆಗೆ ಬಿಹಾರದತ್ತ ಬೊಟ್ಟು ಮಾಡುತಿದ್ದರು. ಆದ್ರೆ ಕಳೆದ ೫ ವರ್ಷಗಳಿಂದ ಬಿಹಾರ ದೇಶಕ್ಕೆ ಮಾದರಿಯಾಗುವ ಹಾದಿ ತುಳಿಯುತ್ತಿದೆ. ಆದ್ರೆ ಸದಾ ಮಾದರಿ ಆಗಿರುತ್ತಿದ್ದ ಕರ್ನಾಟಕ ಎತ್ತ ಸಾಗುತ್ತಿದೆ ?