Sunday, April 10, 2016

ಸುಂಟರಗಾಳಿಯಲ್ಲಿದೆ ಹಿತ ಅನುಭುವ!



ಅದು ಅಂತಿಂಥಾ ಸುಂಟರಗಾಳಿಯಲ್ಲ. ಆ ಸುಂಟರಗಾಳಿಯ ಹೊಡೆತಕ್ಕೆ ವಿಶಾಲ ಕಡಲಲ್ಲಿ ಹಡಗಿನಲ್ಲಿ ಸಂತಸದ ಅಲೆಯ ಮೇಲೆ ತೇಲುತ್ತಿದ್ದವರೆಲ್ಲಾ ಛಿದ್ರ ಛಿದ್ರ. ಆದರೆ ಅದು ಯಾರೊಬ್ಬರ ಪ್ರಾಣ ತೆಗೆವ ಸುಂಟರಗಾಳಿಯಲ್ಲ. ಅದು ಬದುಕನ್ನು ಕೂಡಿಸಿದ ಸುಂಟರಗಾಳಿ. ತಪ್ಪನ್ನು ಸರಿಪಡಿಸಿದ ಸುಂಟರಗಾಳಿ. ಮಾನವೀಯತೆಯನ್ನು ಬಿತ್ತಿದ ಸುಂಟರಗಾಳಿ. ರಂಗದ ಮೇಲೆ ಬೀಸಿದ ರಂಗದ ಮೇಲೆ ಬೀಸಿದ ಆ ಸುಂಟರಗಾಳಿಯೇ ಧಾಂ.. ಧೂಂ... ಸುಂಟರಗಾಳಿ!

ಶೇಕ್ಸ್‌ಪಿಯರ್‌ನ ಟೆಂಪೆಸ್ಟ್‌ ನಾಟಕವನ್ನು ಕನ್ನಡಕ್ಕೆ ತಂದು ಕನ್ನಡದ್ದೇ ಸೊಗಡಿನಲ್ಲಿ ಕಟ್ಟಿಕೊಟ್ಟಿದ್ದು ವೈದೇಹಿ. ಈ ನಾಟಕದ ಪಾತ್ರಗಳಿಗೆ ಜೀವ ತುಂಬಿದ್ದು ಮೂಡಬಿದಿರೆಯ ಆಳ್ವಾಸ್‌ ಕಾಲೇಜಿನ ಪಿಯು ವಿದ್ಯಾರ್ಥಿಗಳು. ರಂಗದ ಮೇಲೊಂದು ಅದ್ಭುತ ಲೋಕವನ್ನು ಸೃಷ್ಟಿಸಿದ್ದು ರಂಗ ನಿರ್ದೇಶಕ ಜೀವನ್‌ರಾಂ ಸುಳ್ಯ !

ಜೀವನ್‌ ರಾಂ ಸುಳ್ಯ ನನ್ನ ಇಷ್ಟದ ರಂಗ ನಿರ್ದೇಶಕ. ಸುಳ್ಯದ ಎನ್‌ಎಂಸಿಯಲ್ಲಿ ವಿದ್ಯಾರ್ಥಿಯಾಗಿದ್ದಾಗ ಜೀವನ್‌ ರಾಂ ನಿರ್ದೇಶಿಸಿ ಅಭಿನಯಿಸಿದ್ದ - ಏಡ್ಸ್‌ ಬಂತು ಏಡ್ಸ್‌...! ಬೀದಿನಾಟಕವನ್ನು ಮೊದಲ ಬಾರಿಗೆ ನೋಡಿದ್ದೆ. ಅದು ನಾನು ನೋಡಿದ ಮೊದಲ ಬೀದಿನಾಟಕ. ಆ ಬೀದಿನಾಟಕದ ಪ್ರಭಾವ ಎಷ್ಟರ ಮಟ್ಟಿಗೆ ನನ್ನ ಮೇಲಾಗಿತ್ತೆಂದರೆ ಮುಂದೆ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯ ಪ್ರೌಢಪ್ರಬಂಧಕ್ಕೆ - ಸಂವಹನ ಮಾಧ್ಯಮವಾಗಿ ಬೀದಿನಾಟಕಗಳು ವಿಷಯವನ್ನು ಆಯ್ಕೆ ಮಾಡಿಕೊಂಡು ಭಾರತ ಹಾಗೂ ಕನ್ನಡದಲ್ಲಿ ಬೀದಿನಾಟಕಗಳ ಹುಟ್ಟು ಬೆಳವಣಿಗೆಯ ಮೇಲೆ ಕನ್ನಡದ ಹೆಸರಾಂತ ನಾಟಕ ನಿರ್ದೇಶಕರನ್ನು ಸಂದರ್ಶನ ಮಾಡಿ ಆ ಪ್ರೌಢ ಪ್ರಬಂಧ ರಚಿಸಿದ್ದೆ. ರಂಗಭೂಮಿಯ ಬಗ್ಗೆ ಸೆಳೆತ ಶುರುವಾಗಿದ್ದು ಅಲ್ಲಿಂದಲೇ. ನನ್ನಂತೆಯೇ ಅನೇಕ ವಿದ್ಯಾರ್ಥಿಗಳಲ್ಲಿ ರಂಗಭೂಮಿಯ ಮೋಹ ಬೆಳೆಸಿದ್ದು ಜೀವನ್‌ ರಾಂ ಸುಳ್ಯ. ಅವರಿಂದು ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ನಾಟಕ ನಿರ್ದೇಶನ ಮಾಡುವ ಕಾಯಕದಲ್ಲೇ ತೊಡಗಿದ್ದಾರೆ. ಅವರ ಕೈಕೆಳಗೆ ಕಲಿಯುವ ಅವಕಾಶ ಪಡೆದ ವಿದ್ಯಾರ್ಥಿಗಳು ನಿಜಕ್ಕೂ ಧನ್ಯರು.

ಜೀವನ್‌ ರಾಂ ನಿರ್ದೇಶಿಸುವ ನಾಟಕಗಳ ವಿಶೇಷತೆಯೆಂದರೆ ಅದ್ಭುತ ರಂಗ ಸಜ್ಜಿಕೆ. ಅಷ್ಟೇ ಆಕರ್ಷಕ ಪ್ರಸಾದನ. ರಂಗದ ಮೇಲೆ ಎದೆ ಝಲ್ಲೆನ್ನಿಸುವ ಪ್ರದರ್ಶನ. ಧಾಂ ಧೂಂ ಸುಂಟರಗಾಳಿಯಲ್ಲೂ ಇಂತಹ ಹಲವು ಅಚ್ಚರಿಗಳಿವೆ. ಕಣ್ಮನ ತಣಿಸುವಂತಹ ಪ್ರದರ್ಶನವಿದು. ಕಲಾವಿದರೆಲ್ಲರೂ ಆಳ್ವಾಸ್‌ ಕಾಲೇಜಿನ ಪಿಯು ವಿದ್ಯಾರ್ಥಿಗಳು. ಅಲ್ಲೊಂದು ಇಲ್ಲೊಂದು ಸಣ್ಣ ಲೋಪಗಳನ್ನು ಹೊರತುಪಡಿಸಿದ್ರೆ ರಾಷ್ಟ್ರೀಯ ಮಟ್ಟದ ಪ್ರದರ್ಶನಕ್ಕೆ ಸರಿಸಾಟಿಯಾದ ನಾಟಕವಿದು.

ರಂಗದ ಮೇಲೆ ಮಂತ್ರಬುದ್ದಿಯಾಗಿ ಅಭಿನಯಿಸಿದ ವಿದ್ಯಾರ್ಥಿ ಒಬ್ಬ ಪರ್ಫೆಕ್ಟ್‌ ರಂಗ ಕಲಾವಿದ. ಆತನ ಆರ್ಭಟ, ಸಿಟ್ಟು, ಸೆಡವು, ಪ್ರತೀಕಾರದ ಛಲ, ಕಾಡುವ ಅಂತಃಕರಣ, ಮಾನವೀಯ ಮುಖ ಎಲ್ಲವನ್ನೂ ಪಾತ್ರಕ್ಕೆ ಒಪ್ಪುವ ರೀತಿಯಲ್ಲಿ ಅಭಿನಯಿಸಿದ್ದಾನೆ. ಹಾಗೆಯೇ ಗಾಳಿ ಕಿನ್ನರ ಪಾತ್ರದಲ್ಲಿ ಕಾಣಿಸಿಕೊಂಡ ವಿದ್ಯಾರ್ಥಿ ರಂಗದ ಮೇಲೆ ನಿಜಕ್ಕೂ ಚಮತ್ಕಾರ ಮಾಡಿತೋರಿಸಿದ್ದಾನೆ. ನಿಜಕ್ಕೂ ಗಾಳಿಯಲ್ಲೇ ತೇಲುವ ರೀತಿಯ ಅಭಿನಯವದು. ಇನ್ನು ರಂಗದ ಮೇಲೆ ಜಾದೂ ನಡೆಯುತ್ತೆ. ಹುಡುಗಿ ಸುಮಾರು ಕೆಲ ನಿಮಿಷಗಳ ಕಾಲ ಗಾಳಿಯಲ್ಲಿ ತೇಲುತ್ತಾಳೆ. ಮಂತ್ರಬುದ್ಧಿ ಕೈ, ಕಾಲು ಕಟ್‌ ಆಗುತ್ತೆ. ಈ ಜಾದೂ ಪ್ರೇಕ್ಷಕರನ್ನು ಮಂತ್ರಮುಗ್ಧವಾಗಿಸುತ್ತದೆ
 



( ಮಂತ್ರಬುದ್ಧಿಯ ಪಾತ್ರಧಾರಿ- ಜೀವನ್‌ರಾಂ ಸುಳ್ಯ ಆಲ್ಬಮ್‌ನಿಂದ)

ಈ ಬಾರಿ ಧಾಂ ಧೂಂ ಸುಂಟರಗಾಳಿ ಆಳ್ವಾಸ್‌ ರಂಗಯಾತ್ರೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಬೀಸಿದೆ. ಈ ರಂಗಯಾತ್ರೆ ಇಡೀ ರಾಜ್ಯದಲ್ಲಿ ಸಂಚರಿಸಿದ್ರೆ ರಂಗಾಸಕ್ತರಿಗೆ ಸುಗ್ಗಿ. ಈ ನಾಟಕ ನೋಡುವ ಅವಕಾಶ ಸಿಕ್ಕಲ್ಲಿ ಮಿಸ್‌ ಮಾಡ್ಕೋಬೇಡಿ. ಎಷ್ಟು ದುಡ್ಡು ಕೊಟ್ಟರೂ ಸಾಲದು ಅನ್ನುವಷ್ಟು ಉತ್ತಮವಾದ ಈ ನಾಟಕವನ್ನು ಉಚಿತ ಪ್ರದರ್ಶನದ ಮೂಲಕ ತೋರಿಸಿದ್ದಾರೆ. ನಾಟಕಗಳನ್ನು ಉಚಿತವಾಗಿ ನೋಡಬಾರದು, ತೋರಿಸಬಾರದು ಅನ್ನೋದು ನನ್ನ ಅಚಲ ನಂಬಿಕೆ.

ಧಾಂ ಧೂಂ ಸುಂಟರಗಾಳಿಯಿಂದ ಸಿಕ್ಕ ಹಿತ ಅನುಭವ ಮತ್ತೆ ಮತ್ತೆ ನೆನಪಾಗುವಂತದ್ದು!