ಶಿಕ್ಷಕರ ದಿನಾಚರಣೆ ಅಂದಾಕ್ಷಣ ತಕ್ಷಣ ನೆನಪಿಗೆ ಬರೋದು ನಾವು ಸ್ಕೂಲ್ ಗೆ ಹೋಗ್ತಿದ್ದಾಗ ಶಿಕ್ಷಣ ಇಲಾಖೆಯಿಂದ ಕೊಡುತ್ತಿದ್ದ ಒಂದು ಸ್ಟ್ಯಾಂಪ್. ಪ್ರೊ. ರಾಧಾಕೃಷ್ಣ ಅವ್ರ ಪೇಟಾ ಕಟ್ಟಿಕೊಂಡಿರುವ ಸ್ಟ್ಯಾಂಪ್ ಕೊಡೋದೇ ಶಿಕ್ಷಕರ ದಿನಾಚರಣೆ.
ಆದ್ರೆ ನಮ್ಮ ಬದುಕನ್ನು ರೂಪಿಸಿದ ಶಿಕ್ಷಕರನ್ನು ನೆನೆಯುವುದು ನಮ್ಮೆಲ್ಲರ ಜವಾಬ್ದಾರಿ ಅನ್ನೋದು ನನ್ನ ಭಾವನೆ. ಕನಿಷ್ಟ ಈ ಒಂದು ದಿನವಾದ್ರೂ ಅವ್ರಿಗೆ ಥ್ಯಾಂಕ್ಸ್ ಹೇಳಲೇ ಬೇಕು.
ನನ್ನು ವಿದ್ಯಾಭ್ಯಾಸ ಆರಂಭವಾಗಿದ್ದು ನನ್ನೂರಿನ ಅಡ್ಪಂಗಾಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ. ಆಗ ಕೇವಲ ನಾಲ್ಕನೇ ಕ್ಲಾಸ್ ವರೆಗೆ ಮಾತ್ರ ಆ ಶಾಲೆಯಲ್ಲಿತ್ತು. ಆದ್ರೆ ಮುಂದೆ ಅದು ಪ್ರಾಥಮಿಕ ಶಾಲೆಯಾಗಿ ಭಡ್ತಿ ಪಡೆದು ನಾನು ಅಲ್ಲೇ ಏಳನೇ ಕ್ಲಾಸೂ ಮುಗಿಸಿದ್ದು. ನಮ್ ಶಾಲೇಲಿ ಆಗ ಇದ್ದಿದ್ದು ಇಬ್ರೇ ಮೇಷ್ಟ್ರುಗಳು. ಜನಾರ್ದನ ಮಾಸ್ತರ್ ಮತ್ತು ಜಯರಾಮ್ ಶೆಟ್ರು. ಜನಾರ್ದನ ಮೇಸ್ಟ್ರನ್ನು ದಪ್ಪ ಫ್ರೇಂನ ಕನ್ನಡ ಹಾಕ್ಕೊಂಡು ಬಿಳಿ ಕೂದಲು ಇದ್ದಿದ್ರಿಂದ ಅವ್ರನ್ನು ನಾವು ಅಜ್ಜ ಮಾಸ್ಟ್ರು ಅಂತ ಕರೀತಿದ್ದೆವು. ಅವ್ರು ಕಿವಿಗಳಿಗೆ ಬಿಳಿ ಹರಳಿನ ಟಿಕ್ಕಿ ಹಾಕುತ್ತಿದ್ದರು. ಅದನ್ನು ನೋಡಿ ಒಂದನೇ ಕ್ಲಾಸ್ ನಲ್ಲಿದ್ದಾಗ್ಲೇ ಹಠ ಹಿಡಿದಿದ್ದೆ. " ಅಜ್ಜ ಮಾಸ್ಟ್ರಂಗೆ ನಂಗೂ ಕೆಬಿಗೆ ಟಿಕ್ಕಿ ಬೇಕೂ" ಅಂತ ಅಪ್ಪ ಅವ್ವನ ಮುಂದೆ ಹಠ ಮಾಡ್ತಿದ್ದೆ. ಹೀಗಾಗಿ ಅಪ್ಪ ನನ್ನ ಕಿವಿಗೆ ಟಿಕ್ಕಿ ಹಾಕಿಸಿದ್ದರು. ಐದೋ ಆರನೇ ಕ್ಲಾಸ್ ಗೆ ಹೋದ್ಮೇಲೆ ಇದು ಹಳೇ ಫ್ಯಾಷನ್ ಅನ್ಸಿಯೋ ಏನೋ ಅದನ್ನು ತೆಗೆದು ಬಿಟ್ಟಿದ್ದೆ. ನನ್ನ ಬದುಕಲ್ಲಿ ಪ್ರಭಾವ ಬೀರಿದ ಮೊದಲ ವ್ಯಕ್ತಿ ಅವ್ರೇ. ಅವರ ಕನ್ನಡದ ಸ್ಪಷ್ಟ ಉಚ್ಛರಣೆ, ಏರು ಧ್ವನಿ, ಪಾಠ ಮಕ್ಕಳ ಮನಸ್ಸಿನೊಳಗೆ ಅಚ್ಚಳಿಯದೆ ಉಳಿಯುವಂತೆ ಮಾಡುತ್ತಿತ್ತು.
ಆದ್ರೆ ನನ್ನ ಬದುಕಲ್ಲಿ ಹೆಚ್ಚಿನ ಪ್ರಭಾವ ಬೀರಿದ್ದು ರುಕ್ಮಿಣಿ ಟೀಚರ್. ನಾನು ನಾಲ್ಕನೇ ಕ್ಲಾಸ್ ನಲ್ಲಿದ್ದಾಗ ಅವ್ರು ಅಡ್ಪಂಗಾಯ ಶಾಲೆಗೆ ಬಂದಿದ್ರು. ಅವ್ರು ಮಾಡುತ್ತಿದ್ದ ಪಾಠ ಹೆಚ್ಚು ಆಸಕ್ತಿದಾಯಕವಾಗಿರುತ್ತಿತ್ತು. ಗಣಿತ ಸಬ್ಜೆಕ್ಟ್ ನನಗೆ ಇಷ್ಟ ಆಗೋದಿಕ್ಕೆ ಅವ್ರೇ ಕಾರಣ. ಹಾಗೆಯೇ ಕನ್ನಡದ ಕಾಗುಣಿತ, ವ್ಯಾಕರಣಗಳನ್ನು ತುಂಬ ಚೆನ್ನಾಗಿ ವಿವರಿಸಿ ಹೇಳಿಕೊಟ್ಟಿದ್ದರು. ಇವತ್ತಿಗೂ ನಾನು ಬಳಸುವ ಕನ್ನಡ ಸ್ವಲ್ಪ ಉತ್ತಮವಾಗಿರೋದಿಕ್ಕೆ ಅವರೇ ಕಾರಣ.
ನನ್ನ ಹೈಸ್ಕೂಲ್ ವಿದ್ಯಾಭ್ಯಾಸ ಮುಗಿಸಿದ್ದು ಸರ್ಕಾರಿ ಪ್ರೌಢ ಶಾಲೆ ಅಜ್ಜಾವರದಲ್ಲಿ. ಅದು ನಮ್ಮ ಅಡ್ಪಂಗಾಯ ಶಾಲೆ ಇರೋ ಕಾಂಪೌಂಡ್ ನಲ್ಲೇ ಇರೋದು. ಸುಳ್ಯ ತಾಲೂಕಿನ ಉತ್ತಮ ಪ್ರೌಢ ಶಾಲೆಗಳಲ್ಲಿ ಅಜ್ಜಾವರ ಶಾಲೆಗೂ ಒಳ್ಳೆಯ ಹೆಸರಿತ್ತು. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಿಗೆ ನಮ್ಮ ಶಾಲೆಯಲ್ಲಿ ಉತ್ತಮ ಪ್ರೋತ್ಸಾಹ ಸಿಗುತ್ತಿತ್ತು. ಪೀಟಿ ಮೇಸ್ಟ್ರಾಗಿದ್ದ ಸುಂದರ ಗೌಡರು ಮೂರು ವರ್ಷ ನಮ್ಗೆ ಕ್ಲಾಸ್ ಟೀಚರ್ ಆಗಿದ್ದರು. ನಮ್ಮ ಹೆಡ್ ಮಾಸ್ಟರ್ ಆಗಿದ್ದ ಗಂಗೇಮಾರೇ ಗೌಡರು ವಿದ್ಯಾರ್ಥಿಗಳ ಬರಹ ಸುಂದರ ಆಗಿರಬೇಕು ಅನ್ನೋದ್ರ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದರು. ಅವ್ರು ಕೈಬರಹ ತುಂಬಾ ಚೆನ್ನಾಗಿತ್ತು. ಹೀಗಾಗಿ ಮಕ್ಕಳಿಂದಲೂ ಅದನ್ನೇ ನಿರೀಕ್ಷಿಸುತ್ತಿದ್ದರು. ಬೋರ್ಡ್ ನಲ್ಲಿ ಬರೆದು ತೋರಿಸಿ ಅದೇ ರೀತಿ ಬರೆಯುವಂತೆ ಹುರಿದುಂಬಿಸುತ್ತಿದ್ದರು. ಇದರಿಂದಾಗಿ ನನ್ನ ಕೈ ಬರಹ ಇವತ್ತೂ ಅವರು ಹೇಳಿಕೊಟ್ಟ ರೀತಿಯಲ್ಲೇ ಇದೆ. ಆಗೆಲ್ಲಾ ಅವ್ರು ಕಾಪಿ ಬರೆಯೋಕೆ ಹೇಳಿದ್ರೆ ಸರಿಯಾಗೆ ಬರೆಯದೆ ಅವ್ರಿಂದ ಏಟು ತಿಂದಿದ್ದೂ ಇದೆ. ಆದ್ರ ಇದು ಮುಂದೆ ಅಕ್ಷರ ಬರೆಯುವಾಗ ಹೆಚ್ಚು ಗಮನ ಕೊಡುವಲ್ಲಿ ಸಹಕಾರಿಯಾಗಿತ್ತು.
ಇನ್ನು ಪಿಯುಸಿ ಕಲಿತಿದ್ದು ಸರ್ಕಾರಿ ಪದವಿ ಪೂರ್ವ ಕಾಲೇಜು ಸುಳ್ಯದಲ್ಲಿ. ಪಿಯುನಲ್ಲಿ ಸೈನ್ಸ್ ಸಬ್ಜೆಕ್ಟ್ ತಗೊಂಡ ನಾನು ಸೆಕೆಂಡ್ ಪಿಯುನಲ್ಲಿ ಫೇಲಾಗಿದ್ದೆ. ಆದ್ರೆ ಪಿಯುನಲ್ಲಿದ್ದಾಗ ಕನ್ನಡ ಲೆಕ್ಚರರ್ ನಂದಾ ಅವ್ರು ವೈಚಾರಿಕ ಚಿಂತನೆಗಳ ಬಗ್ಗೆ ಪ್ರಭಾವ ಬೀರಿದ್ದರು. ಆದ್ರೆ ಆಗ ಅದನ್ನು ನಾನು ಆಗ ಅಷ್ಟು ಇಷ್ಟಪಟ್ಟಿರಲಿಲ್ಲ. ಮುಂದೆ ಪಿಯುನಲ್ಲಿ ಫೇಲಾಗಿ ಒಂದು ವರ್ಷ ಮನೇಲಿ ಕುಳಿತು ಮಾರನೇ ವರ್ಷ ಪಾಸಾಗಿ ಬಿಎಸ್ ಸಿ ಸೇರಿದೆ. ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯದಲ್ಲಿ ಮೂರು ವರ್ಷ ಡಿಗ್ರಿ ಕಲಿಯುವ ಸಂದರ್ಭದಲ್ಲೇ ನಾನು ಜರ್ನಲಿಸ್ಟ್ ಆಗಬೇಕೆಂದು ಕನಸು ಕಂಡಿದ್ದು.
ಎನ್ಎಂಸಿಯಲ್ಲಿ ಮೆಥೆಮೆಟಿಕ್ಸ್ ಪಾಠ ಮಾಡುತ್ತಿದ್ದ ಸುರೇಖಾ ಮೇಡಂ ಮತ್ತು ಉಷಾ ಮೇಡಂ ಅವ್ರ ಉಪನ್ಯಾಸ ಹೆಚ್ಚು ಇಷ್ಟವಾಗ್ತಿತ್ತು. ಅದ್ರಲ್ಲೂ ಸುರೇಖಾ ಮೇಡಂ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಯಲ್ಲಿ ತೊಡಗಿಕೊಳ್ಳಲು ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದರು. ಕಾಲೇಜಿನಲ್ಲಿ ಬಿಎಸ್ಸಿ ವಿದ್ಯಾರ್ಥಿಗಳಂದ್ರೆ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸೋದು ಕಡಿಮೆ. ಅವ್ರೇನಿದ್ರೂ ಪುಸ್ತಕದ ಹುಳಗಳು ಎಂದೇ ಉಳಿದ ವಿದ್ಯಾರ್ಥಿಗಳು ಕರೀತಿದ್ದದ್ದು. ಆದ್ರೆ ನಮ್ಮ ಬ್ಯಾಚ್ ಅದೆಲ್ಲವನ್ನೂ ಬ್ರೇಕ್ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಚಾಂಪಿಯನ್ ಆಗ್ತಿತ್ತು. ಆಗೆಲ್ಲಾ ಮೇಡಂ ನಮಗೆ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಹಾಗೆಯೇ ನಮಗೆ ಏನೇ ಸಮಸ್ಯೆ ಇದ್ರೂ ಅವ್ರ ಜೊತೆ ಹೇಳ್ಕೊಳ್ಳೋದಿಕ್ಕೆ ಅವಕಾಶ ಸಿಗುತ್ತಿತ್ತು. ಹದಿಹರೆಯದ ಅಂತಿಮ ಘಟ್ಟದಲ್ಲಿದ್ದ ವಿದ್ಯಾರ್ಥಿಗಳು ದಾರಿ ತಪ್ಪದಂತೆ ಅವರು ಕೊಡುತ್ತಿದ್ದ ಎಚ್ಚರಿಕೆಯ ಮಾತುಗಳು ನನ್ನ ಬದುಕನ್ನು ರೂಪಿಸಲು ದೀವಿಗೆಯಾಗಿದ್ದು ಸುಳ್ಳಲ್ಲ.
ಇನ್ನು ಅಲ್ಲಿ ಕನ್ನಡ ಲೆಕ್ಚರರ್ ಆಗಿದ್ದ ಪೂವಪ್ಪ ಗೌಡರು ನನ್ನ ಬದುಕಿನಲ್ಲಿ ವಿಶೇಷ ಪ್ರಭಾವ ಬೀರಿದ್ದಾರೆ. ಅವ್ರು 'ದ್ರೌಪದಿಯ ಶ್ರೀಮುಡಿ' ಪಾಠವನ್ನು ಸುಮಾರು ಮೂರು ತಿಂಗಳು ಪಾಠ ಮಾಡಿದ್ರು. ಆದ್ರೆ ಪಾಠಕ್ಕಿಂತಲೂ ಜೀವನದಲ್ಲಿ ಅಯ್ಯೋ ಇದು ನನ್ನ ಹಣೆಬರಹ ಅಂತ ಪ್ರತಿಯೊಂದಕ್ಕೂ ಹೇಳ್ತಾ ಕಾಲ ಕಳೀಬಾರದು ಅನ್ನೋದನ್ನು ಹೇಳಿಕೊಟ್ಟರು. ವಿಮರ್ಶೆಯ ನಾನಾ ದಿಕ್ಕುಗಳನ್ನು ತೋರಿಸಿದ್ರು. ಅವರಿಂದಾಗಿ ಇವತ್ತಿಗೂ ವಿಮರ್ಶೆ ಅಂದ್ರೆ ತುಂಬ ಇಷ್ಟ. ಹಾಗೆಯೇ ವೈಚಾರಿಕ ಚಿಂತನೆ ಬಗ್ಗೆ ಹೆಚ್ಚು ಪ್ರಭಾವ ಬೀರಿದ್ರು. ಪಿಯುನಲ್ಲಿ ನಂದಾ ಮೇಡಂ ಹೇಳುತ್ತಿದ್ದುದನ್ನು ಒಪ್ಪದವನು ನಿಧಾನಕ್ಕೆ ಅದರತ್ತ ಒಲವು ಹೆಚ್ಚಾಯಿತು. ದೇವರ ಮೇಲಿನ ಅತಿಯಾದ ನಂಬಿಕೆಗಳು ದೂರವಾಗಿದ್ದು ಆಗಲೇನೇ. ದೇವರ ಮೇಲೆ ಎಲ್ಲಾ ಭಾರ ಹಾಕೋದ್ರ ಬದಲು ನಮ್ಮ ಶ್ರಮದ ಮೇಲೆ ಹೆಚ್ಚು ನಂಬಿಕೆ ಇಡೋದು ಮುಖ್ಯ ಅನ್ನೋದನ್ನು ಅಲ್ಲಿ ಕಲಿತುಕೊಂಡೆ.
ಬಿಎಸ್ ಸಿ ಡಿಗ್ರಿ ಮುಗಿಸಿದ ಮೇಲೆ ಪತ್ರಿಕೋದ್ಯಮದಲ್ಲಿ ಎಂಎ ಮಾಡಬೇಕೆಂದು ಮೊದಲೇ ನಿರ್ಧರಿಸಿದ್ದೆ. ಅದ್ರಂತೆ ಮಂಗಳೂರು ವಿವಿಯಲ್ಲಿ ಎಂಸಿಜೆ ಗೆ ಸೇರಿಕೊಂಡೆ. ಜರ್ನಲಿಸಂ ಬಗ್ಗೆ ಕೋರ್ಸ್ ನ ಮೂಲಕ ತಿಳಿದುಕೊಳ್ಳೋದು ಏನೂ ಇಲ್ಲ ಅನ್ನೋದು ನನ್ನ ನಂಬಿಕೆ. ಆದ್ರೆ ಯುನಿವರ್ಸಿಟಿಯ ಕ್ಯಾಂಪಸ್ ನಲ್ಲಿ ಓದೋದು ಇದೆಯಲ್ಲಾ. ಯಾವುದೇ ವಿದ್ಯಾರ್ಥಿಯ ಬದುಕನ್ನು ಉತ್ತಮ ರೀತಿಯಲ್ಲಿ ರೂಪಿಸಲು ಯುನಿವರ್ಸಿಟಿ ಕ್ಯಾಂಪಸ್ ಸಹಕಾರಿ. ಯುನಿವರ್ಸಿಟಿ ಕ್ಯಾಂಪಸ್ ನಿನಗೇನು ಕೊಟ್ಟಿತು ಅಂತ ಕೇಳಿದ್ರೆ ಬದಕಲು ಕಲಿಸಿದೆ ಅಂತ ಹೇಳಬಹುದು. ಪ್ರೊ.ಕೆ.ವಿ. ನಾಗರಾಜ್, ಡಾ. ಜಿ.ಪಿ.ಶಿವರಾಂ, ಡಾ.ಪೂರ್ಣಾನಂದ ಜರ್ನಲಿಸಂ ಬಗ್ಗೆ ಹೇಳ್ಕೊಟ್ಟರು. ಅದ್ರಲ್ಲೂ ಡಾ.ಪೂರ್ಣನಂದ ಅವ್ರು ಮಾಡ್ತಿದ್ದ ಸಿನಿಮಾ ಬಗೆಗಿನ ಕ್ಲಾಸ್ ಗಳು, ತೋರಿಸುತ್ತಿದ್ದ ಜಗತ್ತಿನ ಅತ್ಯುತ್ತಮ ಸಿನಿಮಾಗಳನ್ನು ಮರೆಯೋಕೆ ಸಾಧ್ಯವಿಲ್ಲ. ಹಾಗೇನೇ ಕೋರ್ಸ್ ಮುಗಿಸಿದ ನಂತ್ರ ಒಬ್ಬ ಜರ್ನಲಿಸ್ಟ್ ಆಗಿ ಕೆಲಸ ಮಾಡುವಾಗ್ಲೂ ಪೂರ್ಣಾನಂದರ ಮಾತುಗಳು ಅನೇಕ ಸಂದರ್ಭಗಳಲ್ಲಿ ದಾರಿ ತೋರಿಸಿವೆ.
ಟೀಚರ್ಸ್ ಡೇ ದಿನ ಕಲಿಸಿದ ನನ್ನೆಲ್ಲಾ ಗುರುಗಳಿಗೂ ವಂದನೆ. ಇಲ್ಲಿ ಎಲ್ಲರ ಹೆಸರು ಬರೆದಿಲ್ಲ. ಆದ್ರೆ ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ನನ್ನ ಬದುಕು ರೂಪಿಸಲು ಸಹಾಕಾರಿಯಾಗಿದ್ದಾರೆ.
Saturday, September 3, 2011
Subscribe to:
Post Comments (Atom)
1 comment:
ಬರಹ ಚೆನ್ನಾಗಿದೆ ಹರಿ. ಶಾಲಾ ದಿನಗಳ ನೆನಪು ಅಚ್ಚಳಿಯದ್ದು.ನಾವು ಈಗ ಏನೇನಾಗಿದ್ದೇವೋ ಅದಕ್ಕೆಲ್ಲ ನಮ್ಮ ಶಾಲೆಗಳು ಮತ್ತು ಮೇಸ್ಟ್ರುಗಳೇ ಕಾರಣ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಅಂತಹ ಅಧ್ಯಾಪಕರು ಸಿಗದೇ ಹೋಗಿದ್ರೆ ನಾವಿಂದು ಎಲ್ಲಿರ್ತಿದ್ವೋ, ಏನಾಗಿರ್ತಿದ್ವೋ ಗೊತ್ತಿಲ್ಲ. However, "ಜರ್ನಲಿಸಂ ಬಗ್ಗೆ ಕೋರ್ಸ್ ನ ಮೂಲಕ ತಿಳಿದುಕೊಳ್ಳೋದು ಏನೂ ಇಲ್ಲ" ಅನ್ನೋ ಮಾತು ಮಾತ್ರ ಯಾಕೋ ನಂಗೆ ಸಮ್ಮತ ಅನ್ನಿಸ್ಲಿಲ್ಲ. ಯಾವುದೇ ಕೋರ್ಸು ನಮ್ಗೆ ಏನೂ ಹೇಳ್ಕೊಡೋದಿಲ್ಲ ಅಂದ್ರೆ ಅಂಥಾ ಕೋರ್ಸುಗಳ ಅಗತ್ಯವೇ ಇಲ್ಲ ಅಲ್ವಾ? "ಜರ್ನಲಿಸಂ ಬಗ್ಗೆ ಕೋರ್ಸ್ ನ ಮೂಲಕ ತಿಳಿದುಕೊಳ್ಳೋದು ಏನೂ ಇಲ್ಲ" ಅಂದ್ರೆ ಪ್ರಪಂಚದಲ್ಲಿ ಇಷ್ಟೊಂದು ಕಾಲೇಜುಗಳು, ವಿ.ವಿ.ಗಳು ಪತ್ರಿಕೋದ್ಯಮವನ್ನು ಒಂದು ಜನಪ್ರಿಯ ಕೋರ್ಸಾಗಿ introduce ಮಾಡೋ ಸಂದರ್ಭಾನೇ ಬರ್ತಿರ್ಲಿಲ್ಲ. Conscious ಆಗಿಯೋ unconscious ಆಗಿಯೋ ನಾವು ಕಲಿತದ್ದು, ಕಲಿಯುವುದು ತುಂಬ ಇದೆ. ವಿಷಯ ಏನಂದ್ರೆ ಪ್ರೈಮರಿ ಹೈಸ್ಕೂಲುಗಳಲ್ಲಿ ನಮ್ಮ ಗಮನ ನಮ್ಮ ಕ್ಲಾಸು, ಸ್ಕೂಲು, ಮೇಸ್ಟ್ರು, ಇವಿಷ್ಟರ ನಡುವೆಯೇ ಹರಿದಾಡುತ್ತಿರುತ್ತೆ. ದೊಡ್ಡ ಕ್ಲಾಸುಗಳಿಗೆ ಹೋದಂತೆ ನಮ್ಮ ಯೋಚನೆ, ಚಟುವಟಿಕೆ, ಓದು, ಆದ್ಯತೆಗಳು ವಿಸ್ತಾರಗೊಳ್ಳೋದ್ರಿಂದ ಕ್ಲಾಸು, ಸ್ಕೂಲು, ಮೇಸ್ಟ್ರುಗಳ ಪ್ರಭಾವ ಅಷ್ಟು ಸುಲಭವಾಗಿ ಆಗೋಲ್ಲ. ಅಥವಾ ಅದು conscious ಆಗಿ ಎದ್ದು ಕಾಣೋಲ್ಲ. ಅಲ್ವಾ? However, ನೀನು ಗುರುಗಳನ್ನು ನೆನೆದ ರೀತಿ ಇಷ್ಟವಾಯ್ತು. ಗುಡ್.
Post a Comment