Tuesday, January 10, 2012

ಬಂಗಾರಪ್ಪ ಬಗ್ಗೆ ಒಂದಿಷ್ಟು...

ಬಂಗಾರಪ್ಪ!
ಈಗ ಭೌತಿಕವಾಗಿ ಇಲ್ಲ. ಆದ್ರೆ ಅದನ್ನು ಒಪ್ಪಿಕೊಳ್ಳೋದಿಕ್ಕೆ ಈಗಲೂ ಸ್ವಲ್ಪ ಕಷ್ಟವಾಗ್ತಿದೆ. ಯಾಕಂದ್ರೆ ಬಂಗಾರಪ್ಪ ಬದುಕಿದ್ದೇ ಹಾಗೆ. ಆ ಹೆಸರಲ್ಲೊಂದು ಖದರ್ ಇದೆ. ಸ್ವಾಭಿಮಾನ ಇದೆ. ಹಠಮಾರಿತನ ಇದೆ. ಜೊತೆಗೆ ಚಂಚಲತೆಯೂ ಸೇರಿಕೊಂಡಿದೆ.

ಪಕ್ಷದಿಂದ ಪಕ್ಷಕ್ಕೆ ಹಾರಿದ್ರು ಬಂಗಾರಪ್ಪ. ಹೊಸ ಹೊಸ ಪಕ್ಷ ಕಟ್ಟಿದ್ರು. ಕಟ್ಟಿದ ಪಕ್ಷಕ್ಕಾಗಿ ಅವಿರತವಾಗಿ ದುಡಿದ್ರು. ಹೊಸ ಹೊಸ ಅವಕಾಶಗಳನ್ನು ಹುಡುಕುತ್ತಾ ಸಾಗಿದ್ರು. ಅವ್ರು ಅಧಿಕಾರಕ್ಕಾಗಿ ಪಕ್ಷಾಂತರ ಮಾಡ್ತಿದ್ರು ಅನ್ನೋ ಮಾತನ್ನು ಜನ ಹೇಳ್ತಿದ್ರು. ಆದ್ರೆ ನಲ್ವತ್ನಾಲ್ಕು ವರ್ಷಗಳ ರಾಜಕೀಯ ಬದುಕಿನಲ್ಲಿ ಅವ್ರು ಹತ್ತು ವರ್ಷ ಕೂಡ ಸರಿಯಾಗಿ ಅಧಿಕಾರ ಅನುಭವಿಸಲಿಲ್ಲ. ಅವರು ಬಯಸುತ್ತಿದ್ದ ಅಧಿಕಾರ ಅವ್ರಿಗೆ ಸಿಗುತ್ತಲೇ ಇರಲಿಲ್ಲ. ಹಾಗಿದ್ರೂ ಸ್ವಾಭಿಮಾನಿಯಾಗೇ ಕೊನೆವರೆಗೂ ಬಂಗಾರಪ್ಪ ಉಳಿದಿದ್ರು.
ಬಂಗಾರಪ್ಪ ಇಷ್ಟೊಂದು ಸ್ವಾಭಿಮಾನಿಯಾಗಿ ರಾಜಕೀಯ ಮಾಡೋದಿಕ್ಕೆ ಹೇಗೆ ಸಾಧ್ಯವಾಗ್ತಿತ್ತು ಅನ್ನೋ ಕುತೂಹಲ ನನಗಿತ್ತು. ಆದ್ರೆ ಅವ್ರ ಅಂತಿಮ ದರ್ಶನಕ್ಕೆ ಹರಿದು ಬಂದ ಜನಸಾಗರ ನೋಡಿದಾಗ ನಿಜಕ್ಕೂ ಬಂಗಾರಪ್ಪ ಅವ್ರ ಸ್ವಾಭಿಮಾನದ ತಿರುಳು ಸ್ವಲ್ಪ ಅರ್ಥವಾಗಿತ್ತು.

ಯಾವುದೇ ವ್ಯಕ್ತಿಯ ಜನಪ್ರಿಯತೆ ಗೊತ್ತಾಗೋದು ಆತ ಸಾವನ್ನಪ್ಪಿದಾಗ ಅನ್ಸುತ್ತೆ. ಬಂಗಾರಪ್ಪ ಅವ್ರ ಬಗ್ಗೆ ಜನರಿಗಿದ್ದ ಅಭಿಮಾನ ಅಂದು ವ್ಯಕ್ತವಾಗಿತ್ತು. ಕುಬಟೂರಿನ ಅವರ ನಿವಾಸದಲ್ಲಿ ಸುತ್ತಮುತ್ತಲ ಹಳ್ಳಿಗಳ ಸಾವಿರಾರು ಜನ ತಂಡೋಪತಂಡವಾಗಿ ಬಂದು ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದಿದ್ದರು. ಹಾಗೆ ಬಂದ ಜನರ ಮನಸ್ಸಿನಲ್ಲಿ ಬಂಗಾರಪ್ಪ ಬಗ್ಗೆ ನೂರಾರು ನೆನಪುಗಳಿದ್ದವು. ಅಲ್ಲಿದ್ದ ಹೆಚ್ಚಿನ ಜನ ಒಂದಲ್ಲ ಒಂದು ರೀತಿಯಲ್ಲಿ ನೇರವಾಗಿ ಬಂಗಾರಪ್ಪ ಅವ್ರಿಂದ ಸಹಾಯ ಪಡೆದವರಿದ್ದರು. ಮನೆ ಮದುವೆ, ಸಾವು - ನೋವು, ಕಷ್ಟ - ಸುಖ ಹೀಗೆ ಇದೆಲ್ಲಕೂ ಸ್ಪಂದಿಸುವ ಗುಣ ಬಂಗಾರಪ್ಪಗೆ ಇತ್ತು ಅನ್ನೋದನ್ನು ಅಲ್ಲಿದ್ದ ಜನ ಒಂದೊಂದು ರೀತಿಯಲ್ಲಿ ಬಣ್ಣಿಸುತ್ತಿದ್ದರು.

ಕುಬಟೂರಿನಿಂದ ಸೊರಬಕ್ಕೆ ಅವ್ರ ಪಾರ್ಥೀವ ಶರೀರವನ್ನು ಕರೆತಂದಾಗ ಜನ ಸಾಗರ ಹರಿದುಬಂದಿತ್ತು. ಸುಮಾರು ೨೫ ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಬರೋ ಪ್ರತಿಯೊಂದು ಹಳ್ಳಿಯಲ್ಲೂ ನೂರಾರು - ಸಾವಿರಾರು ಜನ ಜಮಾಯಿಸಿ ತಮ್ಮ ನೆಚ್ಚಿನ ನಾಯಕನ ಅಂತಿಮ ದರ್ಶನ ಪಡೆದ್ರು. ಸೊರಬ ಪಟ್ಟಣದಲ್ಲೂ ಅಷ್ಟೇ.. ಹರಿದಬರುತ್ತಿದ್ದ ಜನಸ್ತೋಮ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಬಂಗಾರಪ್ಪ ಅವ್ರ ಪ್ರತಿಯೊಬ್ಬರ ಮನಸ್ಸಿನಲ್ಲೂ ಅಚ್ಚಳಿಯದಂತಹ ನೆನಪುಗಳನ್ನು ಬಿತ್ತಿದ್ದರು. ಅದನ್ನೆಲ್ಲಾ ನೊಡುತ್ತಿದ್ದಾಗ ಇಳಿ ವಯಸ್ಸಿನ ವ್ಯಕ್ತಿಯೊಬ್ಬ ಎತ್ತಿದ ಉದ್ಘಾರ ನೆನಪಾಗುತ್ತೆ. ಆತ ಹೇಳುತ್ತಿದ್ರು.. ' ೪೦ ವರ್ಷಗಳಿಂದ ಕಾಪಾಡಿಕೊಂಡು ಬಂದಿದ್ದೊ.. ಬಂಗಾರದ ಕಿರೀಟ.. ಇವತ್ತು ಅದೂ ಹೊಯ್ತು..' ಇಷ್ಟು ಪ್ರೀತಿ ಯಾರಿಗೆ ಸಿಗುತ್ತೆ ಹೇಳಿ.
ಜನರ ಈ ಪ್ರೀತಿಯೇ ಬಂಗಾರಪ್ಪರ ಅಷ್ಟು ಎತ್ತರಕ್ಕೆ ಬೆಳೆಸಿದ್ದು. ಸ್ವಾಭಿಮಾನಿಯಾಗಿಸಿದ್ದು. ಅವ್ರ ಪಕ್ಷಾಂತರಗಳಿಗೆ ಕಾರಣವಾಗಿದ್ದೂ ಜನರ ಇದೇ ಪ್ರೀತಿಯೇ. ಯಾಕಂದ್ರೆ ಸೊರಬದಲ್ಲಿ ಬಂಗಾರಪ್ಪ ಎಂದೂ ಸೋಲಲೇ ಇಲ್ಲ. ಅವ್ರು ಲೋಕಸಭೆ ಚುನಾವಣೆಗಳಲ್ಲಿ ಸೋತಾಗ್ಲೂ ಸೊರಬದಲ್ಲಿ ಅವ್ರಿಗೆ ಮುನ್ನಡೆ ಸಿಗುತ್ತಿತ್ತು. ಯಾವತ್ತು ಸ್ವಕ್ಷೇತ್ರದ ಜನ ಎಂತ ಪರಿಸ್ಥಿತಿಯಲ್ಲೂ ತಮ್ಮ ಕೈಬಿಡೋದಿಲ್ಲ ಎಂಬ ನಂಬಿಕೆ ಇರುತ್ತೋ ರಾಜಕಾರಣಿಯಾದವರು ಹೆಚ್ಚು ಸ್ವಾಭಿಮಾನಿಯಾಗ್ತಾ ಸಾಗೋದಿಕ್ಕೆ ಸಹಾಯವಾಗುತ್ತೆ. ಈ ಭಾಗ್ಯ ರಾಜ್ಯದಲ್ಲಿ ಹೊಸ ಪಕ್ಷಗಳನ್ನು ಕಟ್ಟಿದ ಬೇರೆ ಯಾವುದೇ ರಾಜಕಾರಣಿಗಳಿಗೂ ಇರಲಿಲ್ಲ. ದೇವೇಗೌಡರನ್ನೂ ಸೇರಿಸಿ. ಅದಕ್ಕೇ ಅವ್ರೆಲ್ಲಾ ಒಂದಕ್ಕಿಂತ ಹೆಚ್ಚು ಪಕ್ಷಗಳನ್ನು ಬದಲಿಸುವ, ಪಕ್ಷ ಕಟ್ಟುವ ಗೋಜಿಗೆ ಕೈಹಾಕಲಿಲ್ಲ.

ಬಂಗಾರಪ್ಪ ತಾವು ಸಿಎಂ ಆಗಿದ್ದಾಗ ಬಡವರಿಗೆ ವಿಶೇಷ ಸೌಲಭ್ಯಗಳನ್ನು ಒದಗಿಸುವ ಕೆಲಸ ಮಾಡಿದ್ರು. ಅದ್ರಲ್ಲೂ ಅವ್ರು ಆರಂಭಿಸಿದ ಆಶ್ರಯ ಯೋಜನೆ ಇವತ್ತು ಪ್ರತಿಯೊಂದು ರಾಜಕೀಯ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಮುಖ ಸ್ಥಾನವನ್ನು ಪಡ್ಕೊಂಡಿದೆ. ಇನ್ನು ಆರಾಧನಾ ಯೋಜನೆ ಬಂಗಾರಪ್ಪ ಅವ್ರ ಕಳಕಳಿಗೆ ಸಾಕ್ಷಿ. 1973ರ ಅವಧಿಯಲ್ಲಿ ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಬಂಗಾರಪ್ಪ ವಿಧಾನಸಭೆಯಲ್ಲಿ ಬಡವರ ದೇವರ ಬಗ್ಗೆ ಭಾಷಣ ಮಾಡಿದ್ದರು. ಬಡವರು ಆರಾಧ್ಯ ದೇವರಗಳ ಗುಡಿಗಳನ್ನು ಉದ್ಧಾರ ಮಾಡುವಲ್ಲಿ ಸರ್ಕಾರ ನಿರ್ಲಕ್ಷ್ಯವಹಿಸುತ್ತಿದೆ ಎಂದು ಆರೋಪಿಸಿದ್ದರು. ಆದ್ರೆ ಅವತ್ತು ತಾವು ಮಾಡಿದ್ದ ಭಾಷಣಕ್ಕೆ ಬಂಗಾರಪ್ಪ ಎಷ್ಟು ಬದ್ಧರಾಗಿದ್ದರೆಂದರೆ ಕೊನೆಗೆ ತಾವು ಸಿಎಂ ಆಗಿದ್ದಾಗ ಆರಾಧನಾ ಯೋಜನೆ ಆರಂಭಿಸಿ ಹಳ್ಳಿಗಾಡಿನಲ್ಲಿದ್ದ ಬಡ ದೇವರುಗಳ ಗುಡಿಗಳು ಜೀರ್ಣೋದ್ಧಾರವಾಗುವಂತೆ ನೋಡಿಕೊಂಡ್ರು. ಹಿಂದುತ್ವದ ಬಗ್ಗೆ ಉದ್ದುದದ ಭಾಷಣ ಮಾಡದೇನೇ ಬಂಗಾರಪ್ಪ ಇದನ್ನು ಸಾಧಿಸಿದ್ದರು. ಬಡವರ ಬಗ್ಗೆ ಅವ್ರ ಕಾಳಜಿ ಹೇಗಿತ್ತು ಅನ್ನೋದಕ್ಕೆ ಇದು ಉತ್ತಮ ಉದಾಹರಣೆ. ಇನ್ನು ಗ್ರಾಮೀಣ ಕೃಪಾಂಕ, ವಿಶ್ವ, ಹೀಗೆ ಬಂಗಾರಪ್ಪ ಎರಡು ವರ್ಷಗಳ ಸಿಎಂ ಅವಧಿಯಲ್ಲಿ ನಾಡಿನ ಜನರು ನೆನಪಿಡುವಂತಹ ಹಲವು ಯೋಜನೆಗಳನ್ನು ಕೊಟ್ಟಿದ್ದು ಕೂಡ ಅವ್ರು ಸ್ವಾಭಿಮಾನದಿಂದ ರಾಜಕೀಯ ಮಾಡಲು ಪ್ರೇರಣೆಯಾಗಿತ್ತು. ಆದ್ರೆ ಇವತ್ತು ಸ್ವಾಭಿಮಾನದ ಬಗ್ಗೆ ಮಾತಾಡುವ ರಾಜಕೀಯ ನಾಯಕರ ವಿಚಾರಕ್ಕೂ ಬಂಗಾರಪ್ಪರ ಸ್ವಾಭಿಮಾನಕ್ಕೂ ತುಲನೆ ಮಾಡಲು ಸಾಧ್ಯವಿಲ್ಲ.

ಸಮಾಜವಾದಿಯಾಗಿದ್ದ ಬಂಗಾರಪ್ಪ ಕೂಡ ವಂಶಪಾರಂಪರ್ಯ ರಾಜಕಾರಣಕ್ಕೆ ಅವಕಾಶ ಮಾಡಿಕೊಟ್ರು. ತಮ್ಮ ಮಗ ಕುಮಾರ್ ಬಂಗಾರಪ್ಪರನ್ನು ರಾಜಕೀಯಕ್ಕೆ ಕರೆತಂದು ಶಾಸಕನನ್ನಾಗಿ ಮಾಡಿ ಮಂತ್ರಿ ಮಾಡಿಸಿದ್ರು. ಆದ್ರೆ ಅದೇ ಬಂಗಾರಪ್ಪ ತಮ್ಮ ಇನ್ನೊಬ್ಬ ಮಗ ಮಧು ಬಂಗಾರಪ್ಪರನ್ನೇ ಕುಮಾರ್ ವಿರುದ್ಧ ನಿಲ್ಲಿಸಿ ಇಬ್ಬರೂ ಮಕ್ಕಳು ಸೋಲುವುದನ್ನೂ ನೋಡಿದ್ರು. ಇದೆಲ್ಲದರ ಮುಂದುವರಿದ ಭಾಗವಾಗಿ ಬಂಗಾರಪ್ಪರ ಅಂತ್ಯ ಸಂಸ್ಕಾರದ ನಂತ್ರ ಸಹೋದರರ ನಡುವೆ ಕಲಹ ನಡೆದಿದೆ. ಅದು ಕೌಟುಂಬಿಕ ವಿಚಾರವೇ ಇರಬಹುದು. ಆದ್ರೆ ಅದು ಬೀದಿಗೆ ಬಂದಿದೆ. ಇಲ್ಲಿ ಯಾರದ್ದು ಸರಿ ಯಾರದ್ದು ತಪ್ಪು ಅನ್ನೋದರ ಚರ್ಚೆ ಅನವಶ್ಯಕ.

ಸೊರಬ ಪಟ್ಟಣದ ಸಂಜೆಗತ್ತಲಿನ ನಡುವೆ ಬಂಗಾರಪ್ಪ ಪಂಚಭೂತಗಳಲ್ಲಿ ಲೀನವಾದಾಗ ಅವ್ರ ಅಭಿಮಾನಿಗಳಲ್ಲಿ ಮಾತ್ರ ಮರಳಿ ಪಡೆಯಲಾಗದ್ದನ್ನು ಕಳೆದುಕೊಂಡ ನೋವಿತ್ತು. ಬಾಗಲಕೋಟೆಯ ಯಾವುದೋ ಹಳ್ಳಿಯ ಜೋಳಿಗೆ ಹಾಕ್ಕೊಂಡಿದ್ದ ಇಳಿ ವಯಸ್ಸಿನ ರೈತನೊಬ್ಬ ಬಂಗಾರಪ್ಪರ ಚಿತೆಯನ್ನೇ ನೋಡುತ್ತಾ ನಿಂತಿದ್ದ. ಅವನಲ್ಲಿ ಅದೇನೇನು ನೆನಪುಗಳು ಹೊರಳುತ್ತಿದ್ದವೋ.. ಕೇಳುವ ಮನಸ್ಸಾಗಲಿಲ್ಲ. ಆದ್ರೆ ಮುಖದಲ್ಲಿನ ನೋವು ಸ್ಪಷ್ಟವಾಗಿ ಗೋಚರಿಸುತ್ತಿತ್ತು !

No comments: