Wednesday, March 11, 2015

ಎಲ್ಲಿರಬೇಕು ಐಐಟಿ...?

ಕೇಂದ್ರದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ಐಐಟಿ ಘೋಷಣೆಯಾಗಿದೆ. ಇಷ್ಟು ದಿನ ಒಕ್ಕೊರಲಿನಿಂದ ಕರ್ನಾಟಕಕ್ಕೊಂದು ಐಐಟಿ ಬೇಕು ಅನ್ನೋ ಕೂಗು ಕೇಳುತ್ತಿತ್ತು. ಆದ್ರೀಗ ರಾಜ್ಯದ ನಾನಾ ಭಾಗಗಳಿಂದ ನಾನಾ ರೀತಿಯ ಒತ್ತಾಯಗಳು ಕೇಳಿಬರುತ್ತಿವೆ. ನಮ್ಮೂರಲ್ಲಿ ಐಐಟಿ ಬೇಕು ಅಂತ ರಾಜಕಾರಣಿಗಳು ಆಯಾ ಜಿಲ್ಲೆಗಳ ಪರವಾಗಿ ಬ್ಯಾಟಿಂಗ್‌ ಮಾಡ್ತಿದ್ದಾರೆ. ಐಐಟಿ ಬರೋದ್ರಿಂದ ತಮ್ಮ ಜಿಲ್ಲೆ ಹೆಗ್ಗಳಿಕೆಗೆ ಪಾತ್ರವಾಗುತ್ತದೆ. ಜೊತೆಗೆ ಐಐಟಿ ನೆಪದೊಂದಿಗೆ ಆ ಭಾಗದಲ್ಲಿ ಅಭಿವೃದ್ಧಿಯಾಗುತ್ತದೆ. ಶಿಕ್ಷಣದ ಜೊತೆಜೊತೆಗೇ ಕೈಗಾರಿಕೆ, ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲೂ ಸ್ವಲ್ಪ ಮಟ್ಟಿನ ಆದ್ಯತೆಗಳು ಸಿಗುತ್ತವೆ. ಅಷ್ಟೇ ಅಲ್ಲದೆ ಅಲ್ಲಿಗೆ ಬಂದು ಸೇರುವ ಸುಮಾರು 5 ಸಾವಿರದಷ್ಟು ವಿದ್ಯಾರ್ಥಿಗಳು, ಉಪನ್ಯಾಸಕರು ಅವರ ಸಂಬಂಧಿಕರು, ಇತರೆ ಸಿಬ್ಬಂದಿ ಹೀಗೆ ಆ ಭಾಗದಲ್ಲಿ ಒಂದಷ್ಟು ವ್ಯಾಪಾರ ವಹಿವಾಟಿನಲ್ಲೂ ಚೇತರಿಕೆ ಕಂಡು ಬರುತ್ತದೆ. ಇದೆಲ್ಲವೂ ಈ ಒತ್ತಾಯ ಹಾಗೂ ಒತ್ತಾಸೆಯ ಹಿಂದೆ ಇದ್ದೇ ಇದೆ. ಖಂಡಿತ ರಾಜಕಾರಣಿಗಳ ಈ ಮಟ್ಟದ ಒತ್ತಡವನ್ನು ಮತ್ತು ಆಯಾ ಜಿಲ್ಲೆಗಳ ಜನರ ಒತ್ತಾಸೆಯನ್ನು ನಾವು ಗೌರವಿಸಬೇಕು.

ಐಐಟಿಯನ್ನು ಯಾವ ಕಾರಣಗಳಿಗಾಗಿ ಯಾವ ಪ್ರದೇಶದಲ್ಲಿ ಸ್ಥಾಪಿಸಬೇಕು ಅನ್ನೋದು ಮುಖ್ಯ. ಅಂದರೆ ರಾಜ್ಯದಲ್ಲಿನ ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು, ರಾಜ್ಯದಲ್ಲಿ ಶಿಕ್ಷಣದ ಹಬ್‌ ಬೆಳೆಸುವ ದೃಷ್ಟಿಯಿಂದ ಐಐಟಿಯನ್ನು ಯಾವುದೇ ಒಂದು ಪ್ರದೇಶದಲ್ಲಿ ಸ್ಥಾಪಿಸಬೇಕೋ? ಅಥವಾ ಕರ್ನಾಟಕದಲ್ಲಿ ಸ್ಥಾಪನೆಯಾದ ಐಐಟಿ ದೇಶದಲ್ಲೇ ಅತ್ಯುತ್ತಮ ಐಐಟಿಗಳಲ್ಲಿ ಒಂದು ಅನ್ನೋ ರೀತಿಯಲ್ಲಿ ಅದಕ್ಕೆ ಗೌರವ ಸಿಗುವಂತೆ ನೋಡಿಕೊಳ್ಳಬೇಕೋ ಅನ್ನೋದು ಮುಖ್ಯವಾಗುತ್ತದೆ.

ಈಗಾಗ್ಲೇ ಕೆಲ ಜಿಲ್ಲೆಗಳಲ್ಲಿ ಐಐಟಿಗಾಗಿ ಇರುವ ಬೇಡಿಕೆಯ ಜೊತೆಗೆ ಐಐಟಿ ಕ್ಯಾಂಪಸ್‌ಗಾಗಿ ಐನೂರರಿಂದ ಸಾವಿರ ಎಕರೆವರೆಗೆ ಜಮೀನು ಕೂಡ ಮೀಸಲಿರುವ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಆದರೆ ಕ್ಯಾಂಪಸ್‌ಗೆ ವಿಶಾಲವಾದ ಜಾಗ, ವಿಶಿಷ್ಟ ಶೈಲಿಯ ವಾಸ್ತುಶಿಲ್ಪದ ಮೂಲಕ ಕಟ್ಟಿದ ಕಟ್ಟಡಗಳು, ಎಲ್ಲ ರೀತಿಯ ಅತ್ಯಾಧುನಿಕ ಮೂಲ ಸೌಕರ್ಯ ಇವುಗಳೆಲ್ಲ ಇದ್ದ ಮಾತ್ರಕ್ಕೆ ಐಐಟಿಗೆ ವರ್ಲ್ಡ್‌ ಕ್ಲಾಸ್‌ ಅಥವಾ ದೇಶದ ಶ್ರೇಷ್ಟ ಗುಣಮಟ್ಟದ ಸಂಸ್ಥೆ ಅನ್ನೋ ಶ್ರೇಯಸ್ಸು ಲಭಿಸೋದಿಲ್ಲ. ಅದು ಸಿಗುವಂತದ್ದು ಆ ಐಐಟಿಯಲ್ಲಿ ಇರುವ ಫ್ಯಾಕಲ್ಟಿಯನ್ನು ಅವಲಂಭಿಸಿದೆ. ಜಗತ್ತಿನ ಅತ್ಯುತ್ತಮ ಸಾಲಿನಲ್ಲಿ ನಿಲ್ಲುವ ಉಪನ್ಯಾಸಕರು, ಆಯಾ ಕ್ಷೇತ್ರದ ಜಾಗತಿಕ ಮಟ್ಟದ ತಜ್ಞರು ಆಗಾಗ್ಗೆ ಐಐಟಿ ಕೇಂದ್ರಕ್ಕೆ ಭೇಟಿ ಕೊಟ್ಟು ವಿಶೇಷ ಉಪನ್ಯಾಸಗಳನ್ನು ನೀಡಲು ಇರುವ ಅವಕಾಶ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯವಾಗಿ ಇರುವ ಕೈಗಾರಿಕೆ ಹಾಗೂ ಸಂಶೋಧನಾ ಕೇಂದ್ರಗಳಲ್ಲಿ ಸಂವಾದ ನಡೆಸಲು ಹಾಗೂ ಸಂಶೋಧನೆಯಲ್ಲಿ ಪಾಲ್ಗೊಳ್ಳಲು ಐಐಟಿ ಕೇಂದ್ರದಲ್ಲಿರುವ ವಿದ್ಯಾರ್ಥಿಗಳಿಗೆ ಅವಕಾಶ ಲಭಿಸಬೇಕು. ಹಾಗಿದ್ದಾಗ ಮಾತ್ರ ಒಂದು ಐಐಟಿ ಕೇಂದ್ರ ಅತ್ಯಂತ ಶೀಘ್ರ ಗತಿಯಲ್ಲಿ ಬೆಳವಣಿಗೆಯಾಗಲು ಸಹಕಾರಿ. ಇಲ್ಲದೆ ಹೋದಲ್ಲಿ ಸರ್ಕಾರಗಳು ಎಷ್ಟೇ ದುಡ್ಡು ಸುರಿದ್ರೂ ಐಐಟಿ ತನ್ನ ಗುಣಮಟ್ಟದ ವಿಚಾರದಲ್ಲಿ ಕುಂಠುತ್ತಾ ಸಾಗಬೇಕಾಗುತ್ತದೆ.

ಸಾಮಾನ್ಯವಾಗಿ ಜಿಲ್ಲಾ ಕೇಂದ್ರಗಳಿಗೆ ಐಐಟಿ ಬರಬೇಕು ಅನ್ನುವ ಬೇಡಿಕೆಯನ್ನು ಮುಂದಿಡುವ ಅನೇಕರು ಖರಗ್‌ಪುರ್‌ ಹಾಗೂ ಕಾನ್ಪುರ ಐಐಟಿ ಸ್ಥಾಪನೆಯಾದಾಗ ಅಲ್ಲೇನಿತ್ತು ಅನ್ನುವ ಪ್ರಶ್ನೆ ಮುಂದಿಡುತ್ತಾರೆ. ಆದರೆ ಅವೆರಡು ಸಂಸ್ಥೆಗಳು ಇಡೀ ದೇಶಕ್ಕೆ ಮೊದಲಿನ ಎರಡು ಐಐಟಿ ಕೇಂದ್ರಗಳು. ಹೀಗಾಗಿ ಇಡೀ ದೇಶದ ಗಮನ ಅದರ ಕಡೆಗೆ ಕೇಂದ್ರೀಕೃತವಾಗಿತ್ತು. ದೇಶದ ಅತ್ಯುತ್ತಮ ಉಪನ್ಯಾಸಕರು ಅಲ್ಲಿ ಹೋಗಿ ನೆಲೆಸಲು ಸಾಧ್ಯವಾಗಿತ್ತು. ಆದ್ರೆ ಇವತ್ತು ಉಪನ್ಯಾಸಕರಿಗೆ ಸಾಕಷ್ಟು ಆಯ್ಕೆಗಳಿವೆ. ಹೀಗಾಗಿ ಆಯ್ಕೆಯ ವಿಚಾರಕ್ಕೆ ಬಂದಾಗ ತಮ್ಮ ಅನುಕೂಲಗಳಿಗೆ ಯಾವುದು ಸರಿಹೊಂದುತ್ತೋ ಆ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಪತಿ ಪತ್ನಿಗೆ ಅಲ್ಲೇ ಸಮೀಪದಲ್ಲಿ ಸಿಗುವ ಉದ್ಯೋಗ ಅವಕಾಶ, ಮಕ್ಕಳ ಶಿಕ್ಷಣಕ್ಕೆ ಅತ್ತುತ್ತಮ ಶಾಲಾ-ಕಾಲೇಜು ಇರುವ ಪ್ರದೇಶ ಹಾಗೆಯೇ ಇತರೆ ಚಟುವಟಿಕೆಗಳಿಗೆ ಸಿಗುವ ಅವಕಾಶಗಳು ಹೀಗೆ ಉಪನ್ಯಾಸಕನೊಬ್ಬ ತನ್ನ ಎಲ್ಲ ಅವಶ್ಯಕತೆಗಳಲ್ಲಿ ಬಹುತೇಕ ಎಲ್ಲವನ್ನೂ ಯಾವ ಪ್ರದೇಶದಲ್ಲಿ ಪೂರೈಸಲು ಸಾಧ್ಯವಾಗುತ್ತೋ ಅಂತಹ ಕೇಂದ್ರದಲ್ಲಿ ಕೆಲಸ ಮಾಡಲು ನಿಶ್ಚಯಿಸುತ್ತಾನೆ. ಹಾಗೆಯೇ ದೇಶ ವಿದೇಶಗಳಿಂದ ಬಂದು ಹೋಗುವ ತಜ್ಞರು ಕೂಡ ತಮ್ಮ ಓಡಾಟಕ್ಕೆ ಇರುವ ಅನುಕೂಲವನ್ನು ಗಣನೆಗೆ ತೆಗೆದುಕೊಳ್ಳುತ್ತಾರೆ.

ಉದಾಹರಣೆಗೆ 2008ರ ನಂತರ ವಿವಿಧ ರಾಜ್ಯಗಳಲ್ಲಿ ಸ್ಥಾಪನೆಯಾಗಿರುವ ಐಐಟಿಗಳ ಪೈಕಿ ಗುವಾಹಟಿ, ಗಾಂಧಿನಗರ, ಭುವನೇಶ್ವರ, ಪಾಟ್ನಾ , ಹೈದ್ರಾಬಾದ್‌ ಹೀಗೆ ರಾಜಧಾನಿ ನಗರಗಳಲ್ಲಿ ಸ್ಥಾಪಿಸಿರುವ ಐಐಟಿಗಳು ಶೀಘ್ರವಾಗಿ ಪ್ರಗತಿಹೊಂದುತ್ತಿವೆ. ಆದ್ರೆ ಇಂಧೋರ್‌, ಮಂಡಿ, ರೊಪಾರ್‌ ಹೀಗೆ ಜಿಲ್ಲಾ ಕೇಂದ್ರಗಳಲ್ಲಿ ಆರಂಭಿಸಿರುವ ಐಐಟಿಗಳು ಕುಂಟುತ್ತಾ ಸಾಗಿವೆ.

ಐಐಟಿ ಕೇಂದ್ರದ ಸ್ಥಾಪನೆಯ ವಿಚಾರದಲ್ಲಿ ಯಾವುದೇ ಲಾಬಿಗಳಿಗೆ ಸರ್ಕಾರ ಮಣಿಯಬಾರದು. ರಾಜಕೀಯ ನಾಯಕರು ತಮ್ಮ ಜಿಲ್ಲೆಗಳಿಗೆ ಐಐಟಿ ಬೇಕೆಂದು ಎಷ್ಟೇ ಒತ್ತಡ ಹೇರಿದ್ರೂ ಕೇಂದ್ರ ಸ್ಥಾಪನೆ ಸಂಪೂರ್ಣವಾಗಿ ಅಕಾಡೆಮಿಕ್‌ ವಿಚಾರ ಆಗಿರೋದ್ರಿಂದ ಸಂಬಂಧಿತ ಕ್ಷೇತ್ರದ ತಜ್ಞರಿಗೇ ಎಲ್ಲಿ ಐಐಟಿ ಸ್ಥಾಪಿಸಬೇಕು ಅನ್ನೋದರ ಬಗ್ಗೆ ಪೂರ್ಣ ಅಧಿಕಾರ ನೀಡಬೇಕು. ಅವರಿಗೆ ಬೇಕಾದ ಹಿನ್ನೆಲೆಯ ಬೆಂಬಲವನ್ನು ಮಾತ್ರ ಸರ್ಕಾರ ನೀಡಬೇಕು. ಆಗ ಮಾತ್ರ ಕರ್ನಾಟಕದ ಐಐಟಿ ಐದರಿಂದ ಹತ್ತು ವರ್ಷಗಳ ಅವಧಿಯೊಳಗೆ ದೇಶಕ್ಕೇ ಅತ್ಯುತ್ತಮ ಐಐಟಿ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಬಹುದು. ಈಗಾಗ್ಲೇ ಕರ್ನಾಟಕದಲ್ಲಿರುವ ಐಐಎಂಬಿ, ಐಐಎಸ್‌ಸಿ, ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿ ದೇಶದ ಅತ್ಯುತ್ತಮ ಸಂಸ್ಥೆಗಳ ಸಾಲಿನಲ್ಲಿ ನಿಂತಿವೆ.

ಇದೇ ಹಾದಿಯಲ್ಲಿ ಐಐಟಿಯೂ ಸಾಗುವಂತಾಗಬೇಕು.


No comments: