Tuesday, January 14, 2014

ಮಲ್ಲಿಕಾರ್ಜುನ ಬಂಡೆಯವರ ನೆನೆದು...

ಗುಲ್ಬರ್ಗಾ ದಕ್ಷಿಣ ಮತಕ್ಷೇತ್ರದ ಉಪಚುನಾವಣೆಯ ಮತದಾನಕ್ಕೆ ಒಂದು ದಿನ ಬಾಕಿ ಇತ್ತು. ಹೀಗಾಗಿ ಚುನಾವಣೆಯ ಹಿಂದಿನ ಎರಡು ರಾತ್ರಿಗಳ ವಿವರ ಹೇಳಬೇಕಿಲ್ಲ. ಹಣ ಮತ್ತು ಹೆಂಡದ ಹೊಳೆ ನೇರವಾಗಿ ಮತದಾರರ ಮನೆಗಳತ್ತಲೇ ಹರಿಯೋದು ಈ ರಾತ್ರಿಗಳಲ್ಲಿ. ಸಹಜವಾಗೇ ಟಿವಿ ಪತ್ರಕರ್ತರಿಗೆ ಇಂತ ರಾತ್ರಿಗಳಲ್ಲಿ ಏನಾದ್ರೂ ಎಕ್ಸ್‌ಕ್ಲೂಸಿವ್ ದೃಶ್ಯ ಸಿಗುತ್ತಾ ಅನ್ನೋ ಕುತೂಹಲ ಹೆಚ್ಚು. ಇದಕ್ಕಾಗಿ ಅವತ್ತು ನಾವು ನೈಟ್‌ ರೌಂಡ್ಸ್‌ಗೆ ಹೊರಟಿದ್ವಿ. ನಾನು, ಕುಲಕರ್ಣಿ ಮತ್ತು ಗುಲ್ಬರ್ಗಾ ಕ್ಯಾಮರಾಮನ್ ಗಂಗಾಧರ್.

ರಾತ್ರಿ ಎಲ್ಲಾ ಸುಮಾರು ಕಡೆ ಸುತ್ತಾಡಿ ಕೊನೆಗೆ ನಾವು ಬಂದಿದ್ದು ಗುಲ್ಬರ್ಗಾದ ಶರಣ ಬಸವೇಶ್ವರ ದೇಗುಲದ ಹತ್ತಿರ. ಅಷ್ಟೊತ್ತಿಗೆ ಅಲ್ಲಿ ನಮಗೆ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಒಬ್ರು ಎದುರಾದ್ರೂ. ನಮ್‌ ಗಂಗಾಧರ್ ಅವರನ್ನು ಪರಿಚಯಿಸಿದ. ಹಾಗೆ ಅವತ್ತಿನ ರಾತ್ರಿ ಸಿಕ್ಕವರೇ ಮಲ್ಲಿಕಾರ್ಜುನ್ ಬಂಡೆ. ತೆಳು ನೀಲಿ ಬಣ್ಣದ ಟೀ ಶರ್ಟ್‌ ಹಾಕ್ಕೊಂಡಿದ್ರು ಬಂಡೆ. ಕಟ್ಟುಮಸ್ತಾದ ಮೈಕಟ್ಟು. ಖಡಕ್ ಆಫೀಸರ್ ಗೆ ಬೇಕಾದ ವ್ಯಕ್ತಿತ್ವ ಅವರಿಗಿತ್ತು. ಹಾಗೇ ಸುಮ್ಮನೆ ಎಲೆಕ್ಷನ್ ವಿಚಾರದಲ್ಲಿ ಒಂದಷ್ಟು ಹೊತ್ತು ಹರಟೆ ಹೊಡ್ಕೊಂಡು ನಿಂತಿದ್ವಿ. ಅವರ ಮಾತುಗಳಲ್ಲಿ ಚುನಾವಣೆಯಲ್ಲಿ ಹರಿಯುವ ಹಣದ ಹೊಳೆಯ ಬಗ್ಗೆ ತೀವ್ರ ಅಸಮಾಧಾನವಿತ್ತು. ಹೀಗೇ ಡಿಪಾರ್ಟ್‌ಮೆಂಟ್ ವಿಚಾರ - ಅದೂ ಇದೂ ಅಂತ ಮಾತಾಡ್ತಿದ್ವಿ. ಅಷ್ಟೊತ್ತಲ್ಲಿ ಅಲ್ಲೊಂದು ಕಾರ್‌ ಬಂದಿತ್ತು.

ಅದು ವಿಧಾನ ಪರಿಷತ್ ಸದಸ್ಯರೊಬ್ಬರ ಕಾರು. ಸ್ವತಃ ಆ ಶಾಸಕ ಕೂಡ ಅದೇ ಕಾರಿನಲ್ಲಿದ್ರು. ಗುಲ್ಬರ್ಗಾದ ಉಪಚುನಾವಣೆಯಲ್ಲಿ ಅವರು ವಿಶೇಷ ಜವಾಬ್ದಾರಿ ನಿಭಾಯಿಸುತ್ತಿದ್ದವರು. ಹೀಗಾಗಿ ಅವರ ಕಾರಿನಲ್ಲೇನಾದ್ರೂ ಹಣ ಸಾಗಾಟ ಇರಬಹುದಾ ಅನ್ನೋ ಅನುಮಾನ ನಮಗೆ ಕಾಡಿತ್ತು. ಹೇಗಿದ್ರೂ ಜೊತೇಲಿ ಬಂಡೆ ಇದ್ರಲ್ಲಾ. ಅವರ ಜೊತನೇ ಇದನ್ನು ಹೇಳಿದ್ವಿ. ತಕ್ಷಣ ಬಂಡೆ ಕಾರ್ಯಪ್ರವೃತ್ತರಾದ್ರು. ಹೋಗಿ ಶಾಸಕರ ಇನೋವಾ ಕಾರನ್ನು ತಡೆದು ನಿಲ್ಲಿಸಿದ್ರು. ಶಾಸಕರನ್ನು ಕಾರಿಂದ ಕೆಳಗಿಳಿಸಿ ಸಂಪೂರ್ಣ ತಪಾಸಣೆ ನಡೆಸಿದ್ರು. ಆ ಕಾರಿನಲ್ಲಿ ಹಣ ಇರಲಿಲ್ಲ. ಆದ್ರೆ ಚುನಾವಣೆಯ ಸಂದರ್ಭದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ನಿಷ್ಟುರತೆ ಇಷ್ಟವಾಯಿತು. ಯಾವುದೇ ಮುಲಾಜಿಲ್ಲದೆ ಗುಲ್ಬರ್ಗಾದ ಆ ಪ್ರಭಾವಿ ಶಾಸಕರ ಕಾರನ್ನು ತಪಾಸಣೆ ಮಾಡಿದ್ದು. ಅದೂ ಕ್ಯಾಮರಾ ಮುಂದೆ ಮಾಡೋದು ಇದೆಯಲ್ಲಾ. ಅಧಿಕಾರಿ ದಕ್ಷನಾಗಿದ್ದರೆ ಮಾತ್ರ ಇಂತದ್ದೆಲ್ಲಾ ಮಾಡಲು ಸಾಧ್ಯ. ( ಬೇರೆ ಚುನಾವಣೆಗಳ ಸಂದರ್ಭದಲ್ಲಿ ಬೇಕೆ ಪೊಲೀಸ್ ಅಧಿಕಾರಿಗಳ ಹತ್ತಿರ ನಾವು ಇಂತದ್ದೇ ಅನುಮಾನ ಹೇಳಿದಾಗ ಹಲವು ಸಬೂಬು ಹೇಳಿದ ಉದಾಹರಣೆಗಳು ನಮ್ಮ ಮುಂದಿವೆ.)  ಮಲ್ಲಿಕಾರ್ಜುನ ಬಂಡೆಗೆ ರಾಜಕಾರಣಿಗಳನ್ನು ಓಲೈಸುವ ಮನೋಭಾವ ಇರಲಿಲ್ಲ ಅನ್ನೋದನ್ನು ಇದು ಎತ್ತಿ ತೋರಿಸುತ್ತಿತ್ತು.

ಇದಾದ್ಮೇಲೂ ಒಂದಷ್ಟು ಹೊತ್ತು ಮಾತಾಡಿದ್ವಿ. ಮಲ್ಲಿಕಾರ್ಜುನ ಬಂಡೆ ಮೊದಲ ಭೇಟಿಯಲ್ಲೇ ತುಂಬ ಇಷ್ಟವಾದ್ರು. ಅವರ ಬಗ್ಗೆ ಒಂದು ವಿಶೇಷ ಗೌರವ ಮೂಡಿತ್ತು. ನಮ್ ಗಂಗಾಧರ್ ಕೂಡ ಬಂಡೆಯ ಹಲವು ಸಾಹಸಗಳ ಬಗ್ಗೆ ಅವತ್ತು ರಾತ್ರಿ ಹೇಳ್ತಿದ್ದ. ರಾಜಕಾರಣಿಗಳ ಬಗ್ಗೆ ಹಾಗೂ ಅಪರಾಧಿಗಳ ಬಗ್ಗೆ ಹೆಚ್ಚು ನಿಷ್ಠುರವಾಗಿರುತ್ತಿದ್ದ ಮಲ್ಲಿಕಾರ್ಜುನ್ ಬಂಡೆ ಸಾಮಾನ್ಯ ಜನರ ಬಗ್ಗೆ ಅಷ್ಟೇ ಪ್ರೀತಿಯಿಂದ ವರ್ತಿಸುತ್ತಿದ್ದರು.

ಮೊನ್ನೆ ರೌಡಿ ಮುನ್ನಾನ ಬಲಿಹಾಕಲು ಇದೇ ಸಾಹಸಿ ಮಲ್ಲಿಕಾರ್ಜುನ ಬಂಡೆ ತಮ್ಮ ತಂಡದೊಂದಿಗೆ ಹೋಗಿದ್ದರು. ಕಳೆದ ರಾತ್ರಿ ಬಂಡೆ ಇಹಲೋಕದ ಸಂಬಂಧ ಕಡಿದುಕೊಂಡಿದ್ದಾರೆ. ಬಂಡೆ ನಿಧನರಾದ ಸುದ್ದಿ ಕೇಳಿ ಗುಲ್ಬರ್ಗಾದ ಜನ ತೀವ್ರ ಶೋಕ ತಪ್ತರಾಗಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ಜನರ ಪ್ರೀತಿಯನ್ನು ಗಳಿಸೋದು ಸುಲಭವಲ್ಲ. ಕರ್ನಾಟಕ ಇಂತಹ ಹಲವು ದಕ್ಷ ಅಧಿಕಾರಿಗಳನ್ನು ಕಂಡಿದೆ. ಜನ ಪ್ರೀತಿಯಿಂದ ಈಗಲೂ ಹಲವು ಪೊಲೀಸ್ ಅಧಿಕಾರಿಗಳನ್ನು ನೆನೆಯುತ್ತಾರೆ. ಅಂತವರ ಸಾಲಿಗೆ ನಿಸ್ಸಂಶಯವಾಗಿ ಬಂಡೆ ಸೇರುತ್ತಾರೆ.

ಮಲ್ಲಿಕಾರ್ಜುನ ಬಂಡೆ ವ್ಯಕ್ತಿತ್ವ ಛಾಪು ಮೂಡಿಸಿದ ನೆನಪುಗಳು ಅವರ ಸಂಪರ್ಕಕ್ಕೆ ಬಂದವರ ಮನದಲ್ಲಿ ಸದಾ ಹಸಿರಾಗಿರಲಿದೆ. ಆದರೆ ಅವರ ಕುಟುಂಬಕ್ಕೆ ಆದ ನಷ್ಟವನ್ನು ತುಂಬಲು ಅಸಾಧ್ಯ.


2 comments:

Unknown said...

Great, Bande is in fact a true Karnataka Ratna!As a mark of respect to Bande the police department should put their entire energy in removing the anti social elements from the society.
Hariprasad is not only good anchor, he is also a good writer. His narration recreated the incidents in front of my eyes.
Dr.S.R.Keshava, Bangalore University

Hariprasada. A said...

ಧನ್ಯವಾದ ಸರ್ ತಮ್ಮ ಪ್ರತಿಕ್ರಿಯೆಗೆ..