Monday, August 31, 2020

ಸರಳ ಭಾಷೆಯಲ್ಲಿ ಅರಳಿದ ಬಂದೂಕು ಹಿಡಿದವರ ನಾಡಿಮಿಡಿತ!


 

ಗೆಳೆಯ ಮೇ.ಡಾ. ಕುಶ್ವಂತ್‌ ಕೋಳಿಬೈಲು ಮೊದಲ ಎಸೆತದಲ್ಲಿಯೇ ಸಿಕ್ಸರ್‌ ಭಾರಿಸಿದ್ದಾನೆ. ಅವನಿಗೆ ಸಿಕ್ಸರ್‌ ಹೊಡೆಯುವುದು ಹೊಸದಲ್ಲ ಬಿಡಿ. ಆದರೆ ಇದು ಪುಸ್ತಕ ರೂಪದಲ್ಲಿ ಭಾರಿಸಿರುವ ಸಿಕ್ಸರ್‌ ಎನ್ನುವುದು ವಿಶೇಷ. ಮುಂದಿರುವುದು ಪುಸ್ತಕದ ಬಗೆಗಿನ ನನ್ನ ಅನಿಸಿಕೆಗಳು.


ಕೂರ್ಗ್‌ ರೆಜಿಮಂಟ್‌ ಪುಸ್ತಕ ಕೈಸೇರುತ್ತಿದ್ದಂತೆ ಓದಿ ಮುಗಿಸಿದೆ. ಬಂದೂಕು ಹಿಡಿದವರ ನಾಡಿಮಿಡಿತವನ್ನು ಬಹುಚೆನ್ನಾಗಿ ಬರಹ ರೂಪದಲ್ಲಿ ಕಟ್ಟಿಕೊಡುವಲ್ಲಿ ಕುಶ್ವಂತ್‌ ಯಶಸ್ವಿಯಾಗಿದ್ದಾರೆ. ಇಲ್ಲಿರುವ ಪುಟ್ಟ ಪುಟ್ಟ ಕಥೆಗಳು ಕೊಡಗು ಮತ್ತು ಕಾಶ್ಮೀರದ ನಡುವಿನ ಗಾಢವಾದ ನಂಟನ್ನು ಗಟ್ಟಿಯಾಗಿ ಹಿಡಿದಿಟ್ಟಿವೆ. ಕೊಡಗಿನ ಕಲಿಗಳು ಯುದ್ಧರಂಗದಲ್ಲಿ ಮಾಡಿರುವ ಸಾಧನೆಗಳು ಇಡೀ ದೇಶಕ್ಕೆ ಗೊತ್ತಿದೆ. ತಲೆಬಾಗಿ ನಮಿಸಿದೆ. ಆದರೆ ಆ ವೀರ ಸೈನಿಕರ ಕುಟುಂಬದವರ ಮಿಡಿತಗಳು, ತಲ್ಲಣಗಳು, ದೇಶದ ಗಡಿ ಕಾಯುವ ಸೇವೆಯಲ್ಲಿ ಯಶಸ್ವಿಯಾದವರು ನಿವೃತ್ತರಾದ ನಂತರ ತಮ್ಮದೇ ಸ್ವಂತ ಜಾಗದ ಗಡಿ ಕಾಯುವಾಗ ಅನುಭವಿಸುವ ಸಂಕಷ್ಟಗಳು ಅಷ್ಟಾಗಿ ಗೊತ್ತಾಗುವುದಿಲ್ಲ.


‘ಇಝತ್‌ ಓ ಇಕ್ಬಾಲ್‌' ಕಥೆಯಲ್ಲಿ ಸುಬೇದಾರ್‌ ಮೇಜರ್‌ ಕುಶಾಲಪ್ಪ ಬಗ್ಗೆ ಹೇಳುತ್ತಲೇ ‘ ಬಹುಶಃ ಸಮಾಜಕ್ಕೆ ಆಕರ್ಷಕವಾಗಿ ಕಾಣುವುದು ಶೌರ್ಯ ಮತ್ತು ಯುದ್ಧವೇ ಇರಬೇಕು. ಹತ್ತು ಜನ ಶತ್ರು ರಾಷ್ಟ್ರದವರ ತಲೆ ತೆಗೆದ ವಿಷಯದಲ್ಲಿ ಉಂಟಾಗುವ ಉತ್ಸಾಹ ನಮ್ಮ ಸೈನಿಕರು ಗಡಿಯಿಂದ ಸುರಕ್ಷಿತವಾಗಿ ಊರಿಗೆ ಮರಳಿದಾಗ ಯಾಕೆ ಉಂಟಾಗುವುದಿಲ್ಲ ಎಂದು ಕುಶಾಲಪ್ಪ ಯೋಚಿಸಿದ. ಬಹುಶಃ ಕ್ರೌರ್ಯವನ್ನು ಹತ್ತಿರದಿಂದ ನೋಡಿದವರು ಮಾತ್ರ ಯುದ್ಧಕ್ಕಿಂತ ಜಾಸ್ತಿ ಬದುಕಿನ ಬಗ್ಗೆ ಮಾತಾಡುತ್ತಾರೆ.' ಎಂದು ಡಾ. ಕುಶ್ವಂತ್‌ ಬರೆದಿರುವ ಸಾಲುಗಳು ನಿಜಕ್ಕೂ ಸೈನಿಕರ ವಿಚಾರದಲ್ಲಿ ನಮ್ಮ ಸಮಾಜ ಹೊಂದಿರುವ ದೃಷ್ಟಿಕೋನಕ್ಕೆ ಸಾಕ್ಷಿ. ಹಲವು ನಿವೃತ್ತ ಸೈನಿಕರು ತಮ್ಮ ಮನೆಯನ್ನು ಉಳಿಸಿಕೊಳ್ಳಲು ಪರದಾಡುವ ಸುದ್ದಿಗಳನ್ನು ಆಗೊಮ್ಮೆ ಈಗೊಮ್ಮೆ ಓದುವ ನಮಗೆ, ಅದೇ ಸೈನಿಕರ ಬಲಿದಾನವಾದಾಗ ಮಾತ್ರ ‘ಹೀರೋ' ಎಂದು ಹೊಗಳುತ್ತೇವೆ. ಇದಕ್ಕೆ ಉತ್ತರವೆಂಬಂತೆ ಮೊದಲ ಕಥೆಯಲ್ಲಿ ಬರುವ ಸಾಲುಗಳನ್ನು ಗಮನಿಸಬೇಕು.


ಕೂರ್ಗ್‌ ರೆಜಿಮೆಂಟ್‌ ಕಥೆಯಲ್ಲಿ ಕಾವೇರಿಯ ಮನದ ತಲ್ಲಣಗಳನ್ನು ಕಟ್ಟಿಕೊಡುವಾಗ ಬರುವ ಈ ಸಾಲುಗಳು ನಿಜಕ್ಕೂ ದೇಶಪ್ರೇಮದ ಬಗ್ಗೆ ಬರೀ ಭಾಷಣ ಬಿಗಿಯುವವರಿಗೆ ಸರಿಯಾಗಿ ಅನ್ವಯಿಸುತ್ತದೆ. ಅಲ್ಲಿ ಕುಶ್ವಂತ್‌ ಬರೆಯುತ್ತಾರೆ, ‘ ಬಹುಶಃ ಊರಿನವರಿಗೆ ಒಬ್ಬ ಹೀರೋ ಬೇಕಾಗಿತ್ತು? ಭಾಷಣದಲ್ಲಿ ಪ್ರಸ್ತಾಪಿಸಲು, ರಸ್ತೆಗೆ ಹೆಸರಿಡಲು. ಮುಡಿಗೇರಿಸಿದ್ದ ಹೂವಿನಲ್ಲಿ ಸಂತೃಪ್ತಿ ಪಟ್ಟುಕೊಳ್ಳುವ ಹೆಣ್ಣಿಗೆ ಆ ರೀತಿಯ ಆಸೆಗಳಿರಲಿಲ್ಲ.' ಇದಕ್ಕಿಂತ ಚೆನ್ನಾಗಿ ಸೈನಿಕರ ಜತೆ ಬಾಳು ಹಂಚಿಕೊಂಡ ಹೆಣ್ಣಿನ ಬಗ್ಗೆ ವರ್ಣಿಸಲು ಸಾಧ್ಯವಿಲ್ಲವೇನೋ. ಕೇವಲ ಒಂದು ಪ್ರಶ್ನಾರ್ಥಕ ಚಿಹ್ನೆ, ಒಂದು ಅಲ್ಪ ವಿರಾಮ ಎರಡು ಫುಲ್‌ಸ್ಟಾಪ್‌ಗಳಲ್ಲಿ ಮುಗಿಯುವ ಈ ಸಾಲುಗಳು ಮನಸ್ಸಿನಲ್ಲಿ ಮೂಡಿಸುವ ಚಿತ್ರಣ ದೊಡ್ಡದು. ಇದೇ ಕಥೆಯಲ್ಲಿ ಇನ್ನೊಂದು ಮಾತು ಬರುತ್ತದೆ. ‘ಒಂದನೇ ಮಹಾಯುದ್ಧದಿಂದ ಇಂದಿನವರೆಗೆ ಈ ಮನೆಯಲ್ಲಿ ಹುಟ್ಟಿದ ಗಂಡು ಮಕ್ಕಳನ್ನೆಲ್ಲ ತಾಯಂದಿರು ಕೂರ್ಗ್‌ ರೆಜಿಮೆಂಟಿಗೆ ಬರೆದುಕೊಟ್ಟಂತಿತ್ತು. ಆ ಮನೆಯ ಹೆಣ್ಣುಮಕ್ಕಳು ಗಂಡನಿಲ್ಲದೆ ಬದುಕಲು ಮಾಡಬೇಕಾಗಿದ್ದ ಸಂಘರ್ಷಕ್ಕಾಗಿ ಮೆಡಲುಗಳನ್ನು ಕೊಡುವುದಿದ್ದರೆ ರವಿಕೆಯ ಮೇಲೆ ಅಂಟಿಸಲು ಜಾಗವೇ ಸಾಲುತ್ತಿರಲಿಲ್ಲವೇನೋ?' ಇಷ್ಟು ಸರಳವಾಗಿ ಹೆಣ್ಣಿನ ತ್ಯಾಗವನ್ನು ಎತ್ತಿ ತೋರಿಸುವುದು ವೈದ್ಯರಾಗಿರುವ ಕುಶ್ವಂತ್‌ ಬರಹದಲ್ಲಿ ಅನಾಯಾಸವಾಗಿ ಬಂದುಹೋಗುತ್ತದೆ.


‘ಕೂರ್ಗ್‌ ರೆಜಿಮೆಂಟ್‌' ಪುಸ್ತಕದ ಕಥೆಗಳು ಒಂದಕ್ಕಿಂತ ಒಂದು ಭಿನ್ನ ರೂಪದಲ್ಲಿ ಓದುಗನನ್ನು ಕಾಡುವುದು ನಿಶ್ಚಿತ. ‘ಗಣಿ ಬೋಪಣ್ಣ' ಬದುಕು ಮನಸ್ಸನ್ನು ಆರ್ದ್ರಗೊಳಿಸುತ್ತದೆ. ‘ಮುತ್ತಿನಹಾರ' ಮನಸ್ಸಿಗೆ ಮುದಕೊಡುತ್ತದೆ. ‘ಸ್ವರ್ಗಕ್ಕೆ ಏಣಿ' ದಾಯಾದಿಗಳ ನಡುವಿನ ಜಾಗದ ಗಲಾಟೆಯ ಕರಾಳ ರೂಪಕ್ಕೆ ಸಾಕ್ಷಿಯಂತಿದೆ. ಹೀಗೆ ಒಂದೊಂದು ಕಥೆಗಳೂ ಓದುಗರಿಗೆ ಆಪ್ತವಾಗುವುದರಲ್ಲಿ ಅನುಮಾನವಿಲ್ಲ.


ಅದೇಕೋ ಗೊತ್ತಿಲ್ಲ. ನಮ್ಮ ಡಾಕ್ಟರ್‌ಗೆ ಬಾರ್‌ಗಳ ಸುತ್ತಲೇ ಕಥೆ ಹೆಣೆಯುವುದು ಹೆಚ್ಚು ಖುಷಿಕೊಟ್ಟಂತಿದೆ! ಬಂದೂಕು, ಕೃಷಿಯ ಜತೆಗೆ ಕುಡಿತವೂ ಇಲ್ಲಿನ ಕಥೆಗಳ ಪ್ರಧಾನ ಅಂಗ. ಬೇಟೆಯೂ ಅಷ್ಟೇ. ಇವೆಲ್ಲವೂ ಕೊಡಗಿನ ಪರಿಸರದಲ್ಲಿ ನಡೆಯುವ ಸಾಮಾನ್ಯ ಅಂಶ ಎನ್ನುವುದನ್ನು ಮರೆಯಬಾರದು. ಕಥೆಗಳನ್ನು ಅನವಶ್ಯಕವಾಗಿ ಲಂಬಿಸದೆ, ಎಷ್ಟು ಸರಳವಾಗಿ ಕಟ್ಟಿಕೊಡಲು ಸಾಧ್ಯವೋ ಅಷ್ಟು ಸರಳವಾಗಿ ಒಂದಿಷ್ಟು ಚಂದದ ಡೈಲಾಗ್‌ಗಳ ಮೂಲಕ ಕುಶ್ವಂತ್‌ ಹೇಳಿಮುಗಿಸುತ್ತಾರೆ.


ಕುಶ್ವಂತ್‌ ಪುಸ್ತಕ ಬಿಡುಗಡೆ ಹೇಳಿಕೊಂಡಾಗಲೇ ಗೂಗಲ್‌ಪೇ ಮಾಡಿ ಪುಸ್ತಕಕ್ಕೆ ಆರ್ಡರ್‌ ಮಾಡಿದ್ದೆ. ಪುಸ್ತಕದ ಬಗ್ಗೆ ಬರೆದು ಅವನಿಗೆ ಸರ್ಪ್ರೈಸ್‌ ಕೊಡಬೇಕು ಎನ್ನುವುದು ನನ್ನ ಆಸೆಯಾಗಿತ್ತು. ಆದ್ರೆ ಅದಕ್ಕೂ ಮೊದಲೇ ಅವನಿಗೆ ನಾನು ಪುಸ್ತಕ ಪಡೆದಿರುವುದು ಗೊತ್ತಾಗಿಬಿಟ್ಟಿದೆ. ಇರಲಿ, ಪುಸ್ತಕವನ್ನು ಖರೀದಿಸಿ ಓದಿ. ಮುಂದೆ ಕುಶ್ವಂತ್‌ ಇನ್ನಷ್ಟು ಕಥೆಗಳನ್ನು ಹೇಳುವ ಹುಮ್ಮಸ್ಸು ಬರಲಿ. ಬರೆಯುವ ಶ್ರಮ ಅವನದ್ದು. ಓದುವ ಖುಷಿ ನಮ್ಮದು.


  • ಹರಿಪ್ರಸಾದ್‌ ಅಡ್ಪಂಗಾಯ

No comments: