Thursday, March 5, 2015

ಇಂಡಿಯಾಸ್‌ ಡಾಟರ್‌ : ಮಾರುಕಟ್ಟೆಯ ಕೂಸು !

ಇಂಡಿಯಾಸ್‌ ಡಾಟರ್...!

ಜಾಗತಿಕ ಮಾರುಕಟ್ಟೆಯಲ್ಲಿ ಡಾಕ್ಯುಮೆಂಟರಿ ಬಿಕರಿಗೆ ಆರಿಸಿಕೊಂಡಿರುವ ಪಕ್ಕಾ ಮಾರ್ಕೆಟಿಂಗ್‌ ಸ್ಟ್ರಾಟಜಿಯ ಹೆಸರಿದು. ಅದೇ ರೀತಿ ಡಾಕ್ಯುಮೆಂಟರಿಯ ಸುತ್ತ ಎದ್ದಿರುವ ಕಾಂಟ್ರವರ್ಸಿ ಕೂಡ ಇದಕ್ಕೆ ದೊಡ್ಡ ಮಟ್ಟದ ಪಬ್ಲಿಸಿಟಿ ಕೊಟ್ಟಿದೆ. ಅದರ ಮೇಲೆ ಹೇರಿದ ನಿಷೇಧ ಡಾಕ್ಯುಮೆಂಟರಿಯನ್ನು ಮತ್ತಷ್ಟು ಅತಿರಂಜಕಗೊಳಿಸಿದೆ. ಹೆಚ್ಚಿನ ಆಕರ್ಷಣೆಗೆ ಕಾರಣವಾಗಿದೆ.
ಇನ್ನು ಅತ್ಯಾಚಾರಿ ಮನಸ್ಥಿತಿಯ ಬಗ್ಗೆ ಅರಿತುಕೊಳ್ಳುವ ಪ್ರಯತ್ನ ಇದು ಅಂತೆಲ್ಲಾ ಸಾಕ್ಷ್ಯಚಿತ್ರದ ನಿರ್ಮಾಪಕಿ ಲೆಸ್ಲಿ ಉಡ್ವಿನ್‌ ಹೇಳಿಕೊಂಡಿದ್ದಾರೆ. ಅಲ್ಲಿಗೆ ಇದೊಂದು ಎಜುಕೇಟಿವ್‌ ಸಂದೇಶ ಕೊಡುವ ಪ್ರಯತ್ನ. ಆದರೆ ಈ ಡಾಕ್ಯುಮೆಂಟರಿಯಲ್ಲಿ ಎಜುಕೇಟಿವ್ ಆಗೋ ಸಂಗತಿ ಏನಿದೆ? ಅತ್ಯಾಚಾರಿ ಹೇಳಿರುವ ಮಾತುಗಳು ಎಜುಕೇಟಿವ್‌ ಆಗಿದೆಯೇ? ಡಿಫೆನ್ಸ್‌ ಲಾಯರ್‌ ಹೇಳಿರುವ ಮಾತುಗಳು ಎಜುಕೇಟಿವ್‌ ಆಗಿವೆಯೇ? ಅಂದರೆ ಇದರ ಮೂಲಕ ಯಾರಿಗಾದರೂ ಜಾಗೃತಿ ಮೂಡಿ ಹೆಣ್ಣಮಕ್ಕಳು ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವೇ? ಈ ಮಾತುಗಳನ್ನು ಮುಂದಿಟ್ಟು ನೋಡಿದರೆ ಮತ್ತೆ ಹೆಣ್ಣು ಕೇವಲ ಅಡಿಗೆ ಮನೆಯ ಕೆಲಸದಾಳಾಗಬೇಕು ಅಷ್ಟೆ. ರಾತ್ರಿ 9ರ ನಂತರ ಗೆಳೆಯನ ಜೊತೆ ಅಥವಾ ಹುಡುಗನ ಜೊತೆ ಒಂದು ಹುಡುಗಿ ಕಂಡರೆ ಆಕೆ ಅತ್ಯಾಚಾರಕ್ಕೆ ಅರ್ಹಳು. ಅವಳು ಅತ್ಯಾಚಾರಕ್ಕೆ ಒಳಗಾದಾಗ ಪ್ರತಿಭಟಿಸಿದರೆ ಕೊಲೆಗೆ ಅರ್ಹಳು ಅನ್ನೋ ರೀತಿಯ ಸಮಜಾಯಿಷಿಯನ್ನು ಅತ್ಯಾಚಾರಿ ನೀಡುತ್ತಾನೆ. ಅಂದರೆ ಇಲ್ಲಿ ಯಾವುದು ಎಜುಕೇಟಿವ್‌ ಅಂಶ ಇದೆ. ಯಾರು ಇದರಿಂದ ಯಾವ ಅಂಶವನ್ನು ಕಲಿತುಕೊಳ್ಳಬೇಕು? ಅತ್ಯಾಚಾರಿಗಿಂತಲೂ ಹಾರಿಬಲ್‌ ಆಗಿರೋದು ಡಿಫೆನ್ಸ್‌ ಲಾಯರ್‌ ಹೇಳಿಕೆಗಳು. ಹೆಣ್ಣೆಂದರೆ ಅಮೂಲ್ಯ ರತ್ನ. ಅಮೂಲ್ಯ ವಜ್ರ ಅಂತೆಲ್ಲಾ ಹೇಳುವ ಆತ ಇದೇ ವಜ್ರವನ್ನು ಬೀದಿಯಲ್ಲಿಟ್ಟರೆ ನಾಯಿಗಳು ತಿನ್ನುತ್ತವೆ ಅಂತಾರೆ. ಇದನ್ನು ಜೋಪಾನವಾಗಿ ಇಟ್ಟುಕೊಳ್ಳೋದು ಮನೆಯವರ ಕರ್ತವ್ಯ. ಹೆಣ್ಣಿಗೆ ನಮ್ಮ ಸಂಸ್ಕೃತಿಯಲ್ಲಿ ಯಾವುದೇ ರೀತಿಯ ಸ್ಥಾನಮಾನವಿಲ್ಲ ಅನ್ನೋ ರೀತಿಯ ಅಭಿಪ್ರಾಯಕ್ಕೆ ಬರುತ್ತಾರೆ. ಅಷ್ಟೇ ಅಲ್ಲ. ಒಂದು ವೇಳೆ ತನ್ನ ಮಗಳೇ ಒಂದು ವೇಳೆ ವಿವಾಹ ಪೂರ್ವ ಸಂಬಂಧಗಳನ್ನು ಹೊಂದಿದ್ದರೆ ಆಕೆಯನ್ನು ಫಾರ್ಮ್‌ ಹೌಸ್‌ನಲ್ಲಿ ಮನೆಯವರ ಸಮ್ಮುಖ ಪೆಟ್ರೋಲ್‌ ಸುರಿದು ಬೆಂಕಿಹಚ್ಚೋದಾಗಿ ಹೇಳುತ್ತಾನೆ. ಅಲ್ಲಿಗೆ 'ಇಂಡಿಯಾಸ್‌ ಡಾಟರ್‌' ಪರಿಸ್ಥಿತಿ ಹೇಗಿರಬೇಡ?

ಭಾರತದಲ್ಲಿ ನಿರ್ಭಯಾ ಅತ್ಯಾಚಾರಕ್ಕೀಡದ ಮೊದಲ ಹೆಣ್ಣು ಮಗಳಲ್ಲ. ಅಥವಾ ಅದೇ ಕೊನೆಯೂ ಅಲ್ಲ. ಆದರೆ ನಿರ್ಭಯಾ ಅತ್ಯಾಚಾರ ಭಾರತದ ಅಂತಃಕರಣವನ್ನು ಕಲಕಿತ್ತು. ದೆಹಲಿಯಲ್ಲಿ ವಿದ್ಯಾರ್ಥಿ ಸಮುದಾಯ ಒಂದು ಗೂಡಿ ಹೋರಾಟ ರೂಪಿಸಿತ್ತು. ಪೊಲೀಸರ ಲಾಟಿಗೆ, ಬೂಟಿಗೆ, ಅಶ್ರುವಾಯು ಸಿಡಿತಕ್ಕೆ, ಗಾಳಿ ಗುಂಡಿನ ಮೊರೆತಕ್ಕೆ ಸವಾಲೊಡ್ಡಿ ನಿಂತಿದ್ದು ವಿದ್ಯಾರ್ಥಿಗಳು. ಬದಲಾವಣೆ ಬಯಸಿದ್ದ ಮನಸ್ಸುಗಳು. ಅತ್ಯಾಚಾರಿಗಳ ಅಟ್ಟಹಾಸಕ್ಕೆ ಅಂತ್ಯ ಹಾಡಬೇಕು ಅನ್ನೋ ತಾರ್ಕಿಕ ಹೋರಾಟ ರೂಪಿಸಿದವರು ಯಾರೂ ದೊಡ್ಡ ಹೆಸರಿನ ವ್ಯಕ್ತಿಗಳಲ್ಲ. ಭಾರತದ ಸಾಮಾನ್ಯ ಜನ. ಆದರೆ ನಿರ್ಭಯಾಗಳನ್ನು ತಮ್ಮ ಮಗಳೆಂಬ ರೀತಿಯಲ್ಲಿ ಇವರು ಕಂಡಿದ್ದರು ಅನ್ನೋ ಅರ್ಥದಲ್ಲಿ ಡಾಕ್ಯುಮೆಂಟರಿ ರೂಪುಗೊಂಡಿದ್ದರೆ ಈ ಹೆಸರಿಲ್ಲದ ಜನರ ಹೋರಾಟ ಡಾಕ್ಯುಮೆಂಟರಿಯ ಪ್ರಮುಖ ವಸ್ತುವಾಗಬೇಕಿತ್ತು. ಅದು ಬಿಟ್ಟು ಆ ಜನರ ಹೋರಾಟ ಒಂದೆರಡು ಸೌಂಡ್‌ ಬೈಟ್‌ಗಳು ಹಾಗೂ ಸಾಕ್ಷ್ಯಚಿತ್ರದ ನಡುವಿನ ಫ್ಲೋ ಗೆ ಮಾತ್ರ ಸೀಮಿತಗೊಳ್ಳುತ್ತಿರಲಿಲ್ಲ.

ನಿರ್ಭಯಾಳ ಅಪ್ಪ ಅಮ್ಮನ ಮಾತುಗಳು. ಆಕೆಯ ಗೆಳೆಯನ ಮಾತು. ಇದೆಲ್ಲವೂ ನಿರ್ಭಯಾಳ ಗಟ್ಟಿತನವನ್ನು ಪ್ರತಿಬಿಂಬಿಸಿದೆ ನಿಜ. ಆದರೆ ಅತ್ಯಾಚಾರಿಯೊಬ್ಬನ ಪತ್ನಿ ಹೇಳುವ ಮಾತುಗಳ ಪ್ರಕಾರ, ದೇಶದಲ್ಲಿ ಅನೇಕರು ಅತ್ಯಾಚಾರ ಮಾಡಿದ್ದರೂ ಅವರೆಲ್ಲರಿಗೆ ಆಗದಂತಹ ಗಲ್ಲುಶಿಕ್ಷೆಯನ್ನು ತನ್ನ ಪತಿಗೆ ವಿಧಿಸಿದ್ದೇಕೆಾ? ಅವರಿಲ್ಲದಿದ್ದರೆ ನನ್ನ ಮಗುವನ್ನು ನೋಡಿಕೊಳ್ಳೋರು ಯಾರು? ಒಂದು ಹೆಣ್ಣಾಗಿ ನಾನು ಈ ಸಮಾಜದಲ್ಲಿ ಬದುಕೋದು ಹೇಗೆ? ಅಂತ ಪ್ರಶ್ನಿಸುತ್ತಾಳೆ. ಇದನ್ನು ಅಮಾಯಕಿ ಹೆಣ್ಣೊಬ್ಬಳ ಮಾತುಗಳಿವು ಅಂತ ಇದನ್ನು ಅಲಕ್ಷಿಸಬೇಕೆ? ಅಪರಾಧಿಗಳ ಸಂಬಂಧಿಕರಿಗೆ ಅತ್ಯಾಚಾರದ ಬಗ್ಗೆ ಒಂದಿಷ್ಟೂ ಮರುಕವಿಲ್ಲ ಅಂತ ಹೇಳಬೇಕೆ? ಆದರೆ ಅದೆಲ್ಲಕ್ಕಿಂತ ಮುಖ್ಯವಾಗಿ ಅತ್ಯಾಚಾರಿಗಳ ಸಂಬಂಧಿಕರ ಮಾತುಗಳಿಂದಾಗಿ ಅತ್ಯಾಚಾರಿಗಳ ಬಗ್ಗೆ ಕನಿಕರ ಹುಟ್ಟುವಂತೆ ಮಾಡಿಬಿಡುತ್ತದೆ. ಇದರ ಎದುರು ನಿರ್ಭಯಾಳ ಅಪ್ಪ ಅಮ್ಮ ಹೇಳುವ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಅನ್ನೋ ಮಾತುಗಳ ಹಿಂದಿರುವ ನ್ಯಾಯಕ್ಕಾಗಿನ ಹೋರಾಟ ಗೌಣವಾಗಿಬಿಡುತ್ತದೆ.

ಸಾಕ್ಷ್ಯಚಿತ್ರವೊಂದಕ್ಕೆ ಇರುವ ಇತಿಮಿತಿಗಳು ಏನೇ ಇರಬಹುದು. ಆದರೆ ಈ ಸಾಕ್ಷ್ಯಚಿತ್ರದಲ್ಲಿ ಅತ್ಯಾಚಾರಕ್ಕೆ ಪ್ರಮುಖ ಕಾರಣ ಅತ್ಯಾಚಾರಿಗಳ ಬಡತನ ಹಾಗೂ ದೆಹಲಿಯ ಕಣ್ಣುಕುಕ್ಕುವ ಶ್ರೀಮಂತಿಕೆಯಾಗಿ ತೋರುತ್ತದೆ. ಹಣದ ಮೂಲಕ ಧಕ್ಕದೆ ಇರೋದನ್ನು ಧೈರ್ಯದ ಮೂಲಕ ಧಕ್ಕಿಸಿಕೊಳ್ಳುತ್ತಾರೆ ಅನ್ನೋ ವಾದ ಪ್ರಮುಖವಾಗಿ ಕಾಣುತ್ತದೆ.

ಸಾಮಾಜಿಕ ಕಳಕಳಿಯ ಹೆಸರಿನ ಮೇಲೆ ಮಾರುಕಟ್ಟೆಯಲ್ಲಿ ಹಣಗಳಿಸುವ ಉದ್ದೇಶದ ಹೊರತಾಗಿ ಬೇರೇನೂ ಕಾಣುತ್ತಿಲ್ಲ. ನಿಷೇಧದ ಬಗ್ಗೆ  ಲೆಸ್ಲಿ ಹೇಳಿದ್ದು, " ಭಾರತದಲ್ಲಿ ನಿಷೇಧ ಹೇರಿದ್ದರಿಂದ ಜಾಗತಿಕ ಮಟ್ಟದಲ್ಲಿ ಭಾರತ ಐಸೋಲೇಟ್ ಆಗುತ್ತದೆ". ಆದ್ರೆ ಅದು ಜಾಗತಿಕ ಮಾರುಕಟ್ಟೆಯಲ್ಲಿ ಮಾತ್ರ. ಪ್ರಪಂಚದ ಇನ್ಯಾವುದೇ ಮೂಲೆಯಲ್ಲಿ ನಡೆದ ಅತ್ಯಾಚಾರದ ಬಗ್ಗೆ ಡಾಕ್ಯುಮಂಟರಿ ಮಾಡಿ ಅದಕ್ಕೆ ಆ ದೇಶದ ಡಾಟರ್‌ ಹೆಸರು ಕೊಟ್ಟಿದ್ದರೂ ಅಲ್ಲಿಯ ಅತ್ಯಾಚಾರಿಯ ಬಾಯಿಂದ ಇದಕ್ಕಿಂತ ಭಿನ್ನ ಮಾತುಗಳು ಹೊರಬೀಳುತ್ತಿರಲಿಲ್ಲ ! ಹಾಗೆಯೇ ನಿಷೇಧದ ಮೂಲಕ ಯಾವುದನ್ನೂ ತಡೆಯಲು ಸಾಧ್ಯವಿಲ್ಲ.

Sunday, December 21, 2014

ದೇವನೂರು, ಸಾಹಿತ್ಯ ಸಮ್ಮೇಳನ ಮತ್ತು ಕನ್ನಡ ಮಾಧ್ಯಮ

ದೇವನೂರು ಮಹಾದೇವರು ಸಕಾರಣಕ್ಕಾಗಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ನಿರಾಕರಿಸಿದ್ದಾರೆ. ಹಳ್ಳಿಯಲ್ಲಿ ಹುಟ್ಟಿ, ಕನ್ನಡ ಮಾಧ್ಯಮದಲ್ಲಿ ಕಲಿತು, ಬೆಂಗಳೂರಿನಲ್ಲಿ ನೆಲೆಸಿರುವ ನನ್ನಂತವರಿಗೆ ದೇವನೂರರ ಮಾತುಗಳು ಆದರ್ಶ ಅಷ್ಟೇ ಅಲ್ಲ ವ್ಯವಸ್ಥೆ ಸರಿಪಡಿಸಲು ಇರುವ ಪ್ರಮುಖ ಅಸ್ತ್ರವಾಗಿ ಕಂಡುಬರುತ್ತೆ. ಆದರೆ ವ್ಯವಸ್ಥೆ ಸರಿಯಾಗುತ್ತೆ ಅಂತ ನಾವು ಕನಸು ಕಾಣುವಷ್ಟು ಅಪ್ಯಾಯಮಾನವಾಗಿಲ್ಲ ಈಗಿನ ಪರಿಸ್ಥಿತಿ. ಆದರೂ ಕನ್ನಡಕ್ಕಾಗಿ ಮೊಳಗುವ ಗಟ್ಟಿ ದನಿ ನನ್ನಂತವರಿಗಂತೂ ಆಶಾದಾಯಕ.

ಒಂದರಿಂದ ಹತ್ತನೇ ತರಗತಿವರೆಗಿನ ಶಿಕ್ಷಣ ಮಾತೃಭಾಷೆಯಲ್ಲಿ ನಡೆಯಬೇಕು ಅನ್ನೋ ಕೂಗು ಇಂದು ನಿನ್ನೆಯದಲ್ಲ. ಕನ್ನಡ ಸಾಹಿತ್ಯ ಲೋಕದಲ್ಲಿ ಅನೇಕ ಸಾಹಿತಿಗಳು ಈ ವಿಚಾರವನ್ನು ಅನೇಕ ವೇದಿಕೆಗಳಲ್ಲಿ ಪ್ರಸ್ತಾಪಿಸಿದ್ದಾರೆ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಂಡ ನಿರ್ಣಯಗಳ ಸಾಲಿನಲ್ಲಿ ಈ ವಿಚಾರ ಅಗ್ರಸ್ಥಾನ ಪಡೆದುಕೊಳ್ಳುತ್ತೆ. ಸಮ್ಮೇಳನಾಧ್ಯಕ್ಷರು ವಾಡಿಕೆಯೆಂಬಂತೆ ಪ್ರಾಥಮಿಕ ಶಿಕ್ಷಣದಲ್ಲಿ ಮಾತೃಭಾಷೆ ಮಾಧ್ಯಮ ಕಡ್ಡಾಯಗೊಳ್ಳಬೇಕು. ಆಂಗ್ಲ ಮಾಧ್ಯಮ ಹಾವಳಿಯನ್ನು ತಪ್ಪಿಸಬೇಕು ಎಂಬಿತ್ಯಾದಿ ಮಾತುಗಳನ್ನು ಹೇಳುತ್ತಲೇ ಬಂದಿದ್ದಾರೆ. ಹೀಗೆ ಹೇಳಿರುವ ಎಲ್ಲಾ ಸಮ್ಮೇಳನಾಧ್ಯಕ್ಷರಿಗೂ ಕನ್ನಡದ ಬಗ್ಗೆ ಅದೇ ಪ್ರೀತಿ, ಕಾಳಜಿ ಇತ್ತು ಅನ್ನೋದನ್ನು ಅಲ್ಲಗಳೆಯಲಾಗದು. ಇಷ್ಟೆಲ್ಲಾ ಇದ್ದರೂ, ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯವಾಗಿ ಸರ್ವಾನುಮತದಿಂದ ಅಂಗೀಕಾರಗೊಂಡರೂ ನಮ್ಮ ಆಳುವ ಸರ್ಕಾರಗಳು ಇದರ ಬಗ್ಗೆ ಸೊಲ್ಲೆತ್ತದೆ ಇರೋದು ಯಾಕೆ? ಇದಕ್ಕೆ ಕಾರಣ ಕೇವಲ ಶಿಕ್ಷಣ ಲಾಬಿಯೇ? ನಮ್ಮಲ್ಲಿರುವ ಕಮರ್ಷಿಯಲ್‌ ಮೈಂಡ್‌ ಸೆಟ್ಟೇ? ಜಾಗತಿಕ ಪೈಪೋಟಿಯ ನಡುವೆ ನಮ್ಮ ಮಕ್ಕಳು ಹಿಂದೆ ಬೀಳಬಾರದು ಅನ್ನೋ ಮುಂದಾಲೋಚನೆಯೇ? ಈ ರೀತಿಯ ಹಲವು ಪ್ರಶ್ನೆಗಳು ಹಲವು ಸಂದರ್ಭಗಳಲ್ಲಿ ಹುಟ್ಟಿ ದೊಡ್ಡ ಚರ್ಚೆಯಾಗಿವೆ. ಆದರೆ ಇದಕ್ಕಿನ್ನೂ ಇದಮಿತ್ತಂ ಅನ್ನೋ ಉತ್ತರ ಸಿಕ್ಕಿಲ್ಲ.

ಈಗಲೇ ನಾವು ನಿರ್ಧಾರವಾಗಿ ಹೇಳಬಹುದು. ಹಾಸನದ ಶ್ರವಣಬೆಳಗೊಳದಲ್ಲಿ ನಡೆಯಲಿರುವ ಸಮ್ಮೇಳನದಲ್ಲೂ ಇದೇ ವಿಚಾರದ ಮೇಲೆ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗುತ್ತದೆ. ಇದರಲ್ಲಿ ನಮಗೆ ಯಾವುದೇ ಅನುಮಾನಬೇಕಿಲ್ಲ. ಹಾಗಿದ್ದರೆ ದೇವನೂರು ಮಹಾದೇವರು ಯಾಕೆ ಅಧ್ಯಕ್ಷತೆ ನಿರಾಕರಿಸಿದ್ರು. ಇದರಿಂದ ಏನು ಸಾಧನೆ ಮಾಡಿದಂತಾಗುತ್ತೆ ಅನ್ನೋ ಮಾತುಗಳ ಬಗ್ಗೆಯೂ ಈಗಾಗಲೇ ಚರ್ಚೆಯಾಗಿದೆ. ದೇವನೂರು ಹೇಳಿರುವ ಮಾತುಗಳನ್ನು ಬೆಂಬಲಿಸುತ್ತಲೇ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಿಕೊಳ್ಳಬೇಕು ಅನ್ನೋ ಒತ್ತಾಸೆಯನ್ನು ಅನೇಕ ಹಿರಿಯರು ಪ್ರಾಮಾಣಿಕವಾಗಿ ವ್ಯಕ್ತಪಡಿಸಿದ್ದಾರೆ. ಕಾಳಜಿ ತೋರಿದ್ದಾರೆ. ದೇವನೂರು ನೇತೃತ್ವದಲ್ಲೇ ಕನ್ನಡ ಮಾಧ್ಯಮ ಪರವಾದ ಹೋರಾಟ ಶುರುವಾಗಲಿ ಎಂಬಿತ್ಯಾದಿ ಮಾತಗಳು ವ್ಯಕ್ತವಾಗಿ ಹೋಗಿವೆ. ಆದರೆ ದೇವನೂರು ನನ್ನಂತವರನ್ನು ನಿರಾಶೆ ಮಾಡಿಲ್ಲ. ಅವರ ನಿಲುವಿನಲ್ಲಿ ಬದಲಾವಣೆ ಆಗಿಲ್ಲ.

ಆದರೆ ಈಗ ಅದೇಕೋ ಸಾಹಿತ್ಯ ವಲಯದ ಹಿರಿಯ ಸಾಹಿತಿಗಳ ಸಾಲಿನಲ್ಲಿ ದೇವನೂರು ಮಹಾದೇವ ಅವರದ್ದು ಒಂಟಿ ಧ್ವನಿ ಅಂತ ಅನ್ನಿಸುತ್ತದೆ. ಯಾಕಂದ್ರೆ ಈ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ನೃಪತುಂಗ ಪ್ರಶಸ್ತಿಯನ್ನು ದೇವನೂರು ಮಹಾದೇವ ನಿರಾಕರಿಸಿದ್ರು. ಇದು ಐದು ಲಕ್ಷ ರುಪಾಯಿಯ ದೊಡ್ಡ ಮೊತ್ತವನ್ನು ಒಳಗೊಂಡಿರುವ ಪ್ರಶಸ್ತಿ. ನೃಪತುಂಗನ ಹೆಸರಿನ ಜೊತೆಗೆ ದೊಡ್ಡ ಮೊತ್ತ ಸೇರಿಕೊಂಡಿದೆ. ಅಲ್ಲದೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ಪ್ರಶಸ್ತಿ. ಹೀಗಾಗಿ ಇದು ಕನ್ನಡದ ಪಾಲಿಗೆ ಪ್ರತಿಷ್ಟಿತ ಪ್ರಶಸ್ತಿ. ಈ ಪ್ರಶಸ್ತಿ ನೀಡುವ ನಿರ್ಧಾರ ಪ್ರಕಟವಾದ ಸಂದರ್ಭದಲ್ಲಿ ನಾನು ವರದಿ ಮಾಡಿದ್ದೆ. ಆಗ ವ್ಯಕ್ತವಾದ ಅಭಿಪ್ರಾಯ ಐದು ಲಕ್ಷದ ಒಂದು ರುಪಾಯಿ ನಗದು ಮೊತ್ತವನ್ನು ಹೊಂದಿರುವ ಈ ಪ್ರಶಸ್ತಿ ಜ್ಞಾನಪೀಠ ಪ್ರಶಸ್ತಿಗಿಂತಲೂ ಸ್ವಲ್ಪ ದೊಡ್ಡದ್ದೇ ಅನ್ನೋದು. ಅದೇನೇ ಇರಲಿ. ಪ್ರಶಸ್ತಿಗಳು ಬರುತ್ತವೆ ಹೋಗುತ್ತವೆ. ಯಾವುದೇ ಸಾಹಿತಿಗೆ ಪ್ರಶಸ್ತಿ ಬಂದರೂ ನನ್ನಂತ ಓದುಗರಿಗೆ ಖುಷಿಯೇ. ಇಂತಿಪ್ಪ ಪ್ರತಿಷ್ಟಿತ ಪ್ರಶಸ್ತಿಯನ್ನು ದೇವನೂರು ನಿರಾಕರಿಸಿದ್ರು. ಆಗಲೂ ಅವರು ಹೇಳಿದ್ದು ಕನ್ನಡ ಒಂದರಿಂದ ಹತ್ತನೇ ತರಗತಿವರೆಗೆ ಕಲಿಕಾ ಮಾಧ್ಯಮವಾಗುವವರೆಗೆ ನಾನು ಇದನ್ನು ಸ್ವೀಕರಿಸೋದಿಲ್ಲ ಅಂತ. ತಮಾಷೆ ಅಂದ್ರೆ ದೇವನೂರು ನಿರಾಕರಿಸಿದ ಮೇಲೂ ಸಾಹಿತಿಗಳು ಅದೇ ಪ್ರಶಸ್ತಿಯನ್ನು ತುಂಬು ಹೃದಯದಿಂದ ಸ್ವೀಕರಿಸಿದ್ದಾರೆ. ಜೊತೆಗೆ ಕಲಿಕಾ ಮಾಧ್ಯಮವಾಗಿ ಕನ್ನಡ ಜಾರಿಗೊಳ್ಳಬೇಕು ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿದವರು ಮತ್ತು ಅದನ್ನು ನಿರಾಕರಿಸಿದ ದೇವನೂರು ನಡುವಿನ ವ್ಯತ್ಯಾಸವನ್ನು ಮತ್ತೊಮ್ಮೆ ಹೇಳಬೇಕಿಲ್ಲ. ಎಲ್ಲದಕ್ಕೂ ಒಂದೊಂದು ವಿವರಣೆಗೆಳು ಇದ್ದೇ ಇರುತ್ತವೆ.

ಈಗಲೂ ಅಷ್ಟೇ ದೇವನೂರು ನಿರಾಕರಿಸಿದ ತಕ್ಷಣ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಿಂತು ಹೋಗುವುದಿಲ್ಲ. ಸಾಹಿತ್ಯದ ಜಾತ್ರೆ ಯಥಾ ಪ್ರಕಾರ ಅದ್ದೂರಿಯಾಗಿ ನಡೆಯುತ್ತದೆ. ದೇವನೂರು ಬದಲು ಇನ್ನೊಬ್ಬ ಹಿರಿಯ ಸಾಹಿತಿ ಅಧ್ಯಕ್ಷ ಸ್ಥಾನವನ್ನು ಅಲಂಕರಿಸುತ್ತಾರೆ. ಅಧ್ಯಕ್ಷರ ಆಯ್ಕೆಯ ಪ್ರಕ್ರಿಯೆಗಳು ಆರಂಭವಾಗಿವೆ. ಅವರೂ ಕೂಡ ದೇವನೂರು ರೀತಿಯಲ್ಲಿ ನಿರಾಕರಿಸಲಿ ಅಂತ ನಾವು ನಿರೀಕ್ಷಿಸುವುದು ತಪ್ಪಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಈಗಾಗ್ಲೇ ದೇವನೂರು ವಿಚಾರದ ಸುತ್ತಲೇ ಸಾಹಿತ್ಯ ಸಮ್ಮೇಳನದಲ್ಲಿ ಗೋಷ್ಟಿಗಳನ್ನು ನಡೆಸುವ ಆಶಯ ವ್ಯಕ್ತಪಡಿಸಿದ್ದಾರೆ. ಕನ್ನಡ ಮಾಧ್ಯಮ ಜಾರಿಗಾಗಿ ಆಮರಣಾಂತ ಉಪವಾಸ ಸೇರಿದಂತೆ ಹೋರಾಟದ ಘೋಷಣೆ ಮಾಡಿದ್ದಾರೆ. ಅದೆಲ್ಲಾ ಮುಂದೆ ನಡೆಯಬಹುದಾದ ವಿಚಾರಗಳು. ಅದಕ್ಕೆ ನಾವು ಕಾಯಬೇಕು.

ಹಾಗಿದ್ದರೂ ದೇವನೂರು ಮಹಾದೇವ ವ್ಯಕ್ತಪಡಿಸಿರುವ ವಿಚಾರ ಅಷ್ಟು ಸುಲಭದಲ್ಲಿ ಕಾರ್ಯರೂಪಕ್ಕೆ ಬರುವಂತದ್ದಲ್ಲ. ಹಾಗಂತ ನಾವು ನಿರಾಶಾವಾದಿಗಳಾಗಬೇಕಿಲ್ಲ. ಕನ್ನಡ ಶಿಕ್ಷಣ ಮಾಧ್ಯಮವಾಗಬೇಕು ಅನ್ನೋ ವಿಚಾರದಲ್ಲಿ ಸರ್ಕಾರದ ಮೇಲಿನ ಒತ್ತಡ ನಿರಂತರವಾಗಿ ಮುಂದುವರೆಯಲೇಬೇಕು. ಮಾತೃಭಾಷಾ ಶಿಕ್ಷಣ ಕಡ್ಡಾಯಗೊಳ್ಳಲೇಬೇಕು.


Wednesday, November 19, 2014

ಅಭಿಮನ್ಯು ಸಿನಿಮಾ ನೋಡುತ್ತಾ...

ಶಿಕ್ಷಣ ರಾಷ್ಟ್ರೀಕರಣಗೊಳ್ಳಬೇಕು. ಅಭಿಮನ್ಯು ಸಿನಿಮಾದಲ್ಲಿ ಅರ್ಜುನ್ ಸರ್ಜಾ ಈ ಡೈಲಾಗ್‌ ಹೇಳುತ್ತಿದ್ದಂತೆ ನನ್ನ ನೆನಪು ಚಿತ್ರದುರ್ಗದಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಡೆಗೆ ಹೋಗಿತ್ತು. ಕಂಚಿನ ಕಂಠದ ಮಾತುಗಾರ ಪ್ರೊ.ಎಲ್‌.ಬಸವರಾಜು ಅವರು ಆಡಿದ್ದ ಮಾತುಗಳು ಮತ್ತೆ ಮತ್ತೆ ಕಿವಿಯಲ್ಲಿ ಗುಂಯ್‌ಗುಟ್ಟಿದಂತಾಯ್ತು.

ಅವತ್ತು ಸಮ್ಮೇಳಾನಾಧ್ಯಕ್ಷರಾಗಿದ್ದ ಪ್ರೊ.ಎಲ್‌.ಬಸವರಾಜು ಆಡಿದ್ದ ಮಾತುಗಳಿವು. ಶಿಕ್ಷಣ ರಾಷ್ಟ್ರೀಕರಣಗೊಳ್ಳಬೇಕು. ಶಿಕ್ಷಣದಲ್ಲಿ ಖಾಸಗೀಕರಣಬೇಡ. ಶಿಕ್ಷಣ ರಾಷ್ಟ್ರೀಕರಣಗೊಂಡರೆ ದೇಶದಲ್ಲಿ ಶೈಕ್ಷಣಿಕ ವ್ಯವಸ್ಥೆ ಬದಲಾಗುತ್ತೆ ಅನ್ನೋ ಆಶಯವನ್ನು ಸಮ್ಮೇಳನಾಧ್ಯಕ್ಷರು ಅವತ್ತು ವ್ಯಕ್ತಪಡಿಸಿದ್ದರು. ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನಗಳಲ್ಲಿ ಸಮ್ಮೇಳನಾಧ್ಯಕ್ಷರು ಮುದ್ರಿತ ಭಾಷಣವನ್ನು ಓದುತ್ತಾರೆ. ಆದರೆ ಪ್ರೊ. ಎಲ್‌.ಬಸವರಾಜು ತಮ್ಮ ಸಿದ್ಧ ಭಾಷಣವನ್ನು ಓದಲಿಲ್ಲ. ನನ್ನ ಭಾಷಣವನ್ನು ಮಂಡಿಸಿದ್ದೇನೆ. ಇದನ್ನು ಹೇಗಿದ್ರೂ ಮಾಧ್ಯಮದವರು ಪ್ರಕಟಿಸುತ್ತಾರೆ. ಆದರೆ ಇದರಲ್ಲಿನ ಕೆಲ ಮುಖ್ಯ ವಿಚಾರಗಳನ್ನಷ್ಟೇ ನಾನು ಈಗ ಹೇಳುತ್ತೇನೆ ಅಂತ ನೇರವಾಗಿ ಮಾತಿಗಳಿದಿದ್ದರು. ಅವರು ಪ್ರಮುಖವಾಗಿ ಹೇಳಿದ್ದು ಶಿಕ್ಷಣದ ರಾಷ್ಟ್ರೀಕರಣ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಒಂದು ತಲೆಮಾರಿನ ವಿದ್ಯಾರ್ಥಿಗಳಿಗೆ ವಸತಿ ಶಿಕ್ಷಣ ಕೊಡಬೇಕು ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ತು ಮತ್ತು ಧಾರವಾಡದ ಕರ್ನಾಟಕ ವಿದ್ಯಾವರ್ದಕ ಸಂಘವನ್ನು ಸ್ವಾಯತ್ತ ಸಂಸ್ಥೆಗಳಾಗಿ ರೂಪಿಸಬೇಕು ಎಂದು ಹೇಳಿದ್ದರು.

ಸಾಮಾನ್ಯವಾಗಿ ಸಾಹಿತ್ಯ ಸಮ್ಮೇಳನದಲ್ಲಿ ಆಂಗ್ಲಭಾಷೆಯಿಂದಾಗಿ ಕನ್ನಡಕ್ಕೆ ಆಪತ್ತು ಬಂದಿದೆ. ಹೀಗಾಗಿ ಪ್ರಾಥಮಿಕ ಶಿಕ್ಷಣವನ್ನು ಮಾತೃಭಾಷೆ ಕನ್ನಡದಲ್ಲೇ ಕೊಡಬೇಕು ಅನ್ನೋ ಸಿದ್ಧ ಆದರೆ ವೈಯಕ್ತಿಕವಾಗಿ ಬಹುತೇಕರು ಜಾರಿಗೊಳಿಸದ ವಿಚಾರವನ್ನು ಪ್ರೊ.ಎಲ್‌.ಬಸವರಾಜು ಪ್ರಸ್ತಾಪಿಸಿರಲಿಲ್ಲ. ಅವತ್ತು ವೇದಿಕೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಇದ್ದರು ಅಂತ ನೆನಪು. ಆದರೆ ಅಂದು ಮುಖ್ಯಮಂತ್ರಿಗಳಿಂದಾಗಲಿ ಅಥವಾ ಸರ್ಕಾರದಿಂದಾಗಲೀ ಸಮ್ಮೇಳನಾಧ್ಯಕ್ಷರ ಮಾತುಗಳಿಗೆ ಯಾವುದೇ ಸ್ಪಷ್ಟ ಪ್ರತಿಕ್ರಿಯೆ ಸಿಗಲಿಲ್ಲ. ಅದು ಮುಂದೆಯೂ ಜಾರಿಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ. ವಿಪರ್ಯಾಸವೆಂದರೆ ಅಂದು ಸಮ್ಮೇಳನದ ಸಂದರ್ಭದಲ್ಲಿ ಪ್ರೊ.ಎಲ್‌.ಬಸವರಾಜು ಹೇಳಿದ್ದ ಇಂತಹ ಗಂಭೀರ ವಿಚಾರದ ಬದಲು ಒಂದು ಜಾತಿಯವರು ಅವರು ಆದಿಕವಿ ಪಂಪನ ಬಗ್ಗೆ ತಮ್ಮ ವ್ಯಾಪಕ ಅಧ್ಯಯನದ ಆಧಾರದಲ್ಲಿ ಲಘು ಹಾಸ್ಯದ ಮೂಲಕ ಹೇಳಿದ್ದ ಮಾತುಗಳನ್ನೇ ಇಟ್ಟುಕೊಂಡು ಮಾರನೇ ದಿನ ಗಲಾಟೆ ಎಬ್ಬಿಸಿದ್ದರು. ಪ್ರತಿಭಟನೆ ನಡೆಸಿ ಪ್ರೊ.ಎಲ್.ಬಸವರಾಜು ಕ್ಷಮೆಯಾಚಿಸಬೇಕು ಅಂತೆಲ್ಲಾ ಬೊಬ್ಬೆ ಹೊಡೆದಿದ್ದರು. ಆದರೆ ಅವರು ಪ್ರಸ್ತಾಪಿಸಿದ್ದ ಗಂಭೀರ ವಿಚಾರಗಳಿಗೆ ಸಾರಸ್ವತ ಲೋಕದ ದಿಗ್ಗಜರಿಂದಲೇ ಒಕ್ಕೊರಲಿನ ದನಿ ಮೂಡಿ ಸರ್ಕಾರದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯಲಿಲ್ಲ. ವಿಶೇಷ ಅಂದ್ರೆ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲೂ ಪ್ರೊ.ಎಲ್‌.ಬಸವರಾಜು ಇದೇ ಒತ್ತಾಯವನ್ನು ಮಾಡಿದ್ದರು. ಒಂದರ್ಥದಲ್ಲಿ ಅದು ಸಮ್ಮೇಳನದಲ್ಲಿ ಒಂಟಿ ಧ್ವನಿಯಾಗಿತ್ತು.

ಶಿಕ್ಷಣದ ರಾಷ್ಟ್ರೀಕರಣ ಅಷ್ಟು ಸುಲಭವಾಗಿ ಜಾರಿಗೊಳ್ಳುವ ವಿಚಾರವಲ್ಲ. ಅದರಲ್ಲೂ 1991ರ ನಂತರ ದೇಶದಲ್ಲಿ ಬದಲಾಗಿರುವ ಆರ್ಥಿಕ ನೀತಿಯ ಸಂದರ್ಭದಲ್ಲಿ ಇದು ಮತ್ತಷ್ಟು ಕಷ್ಟ ಸಾಧ್ಯ. ಇವತ್ತು ಟಾಯ್ಲೆಟ್‌ ನಿರ್ಮಾಣಕ್ಕೂ ಪಿಪಿಪಿ ಮಾಡೆಲ್‌ ಯೋಚಿಸುವ ಸರ್ಕಾರಗಳು ಶಾಲೆಗಳನ್ನು ರಾಷ್ಟ್ರೀಕರಣಗೊಳಿಸಿ ಆ ಭಾರವನ್ನು ಮೈಮೇಲೆ ಹಾಕಿಕೊಳ್ಳುತ್ತವೆಯೇ? ವಾಸ್ತವದ ನೆಲೆಗಟ್ಟಿನಲ್ಲಿ ಹೇಳೋದಿದ್ದರೆ ಇದು ಸಾಧ್ಯವಿಲ್ಲದ ಮಾತು. ಇಂದು ಶಿಕ್ಷಣ ಲಾಭಿಯಾಗಿ ಪರಿವರ್ತನೆಗೊಂಡು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರೇ ದೇಶದ ಬಹುತೇಕ ರಾಜ್ಯಗಳಲ್ಲಿ ರಾಜಕೀಯವಾಗಿ ಬಲಾಢ್ಯರಾಗಿದ್ದಾರೆ. ಹೀಗಾಗಿ ಶಿಕ್ಷಣದ ರಾಷ್ಟ್ರೀಕರಣ ಸುಲಭ ಸಾಧ್ಯವಲ್ಲ
 
ಅದಿರಲಿ. ಈಗ ಮತ್ತೆ ಅಭಿಮನ್ಯು ಸಿನಿಮಾ ವಿಚಾರಕ್ಕೆ ಬರುತ್ತೇನೆ. ಸಿನಿಮಾದಲ್ಲಿ ಸಹಜವಾಗಿ ಹೀರೋ ಹೇಳುವ ಮಾತು ಹೊಸ ಐಡಿಯಾವಾಗಿ ಕಾಣಿಸಿಕೊಳ್ಳುತ್ತದೆ. ಇದೊಂದು ಹೊಸ ಕಾನ್ಸೆಪ್ಟ್‌ ಅನ್ನೋದು ಸಿನಿಮಾದ ಒಕ್ಕಣೆ. ಇದೆಲ್ಲಾ ಸಹಜ ಬಿಡಿ. ಆದರೆ ಈ ಕಾನ್ಸೆಪ್ಟ್‌ ಹೇಳುವ ಭರದಲ್ಲಿ ಅದಕ್ಕೆ ವ್ಯಕ್ತವಾಗುವ ವಿರೋಧದ ಬಗ್ಗೆಯೇ ಸಿನಿಮಾ ಬಹುಪಾಲು ಓಡುತ್ತೆ. ವಿಷಯವನ್ನು ಸರಳವಾಗಿ ಹೇಳುತ್ತಾ ಹೋಗುವಲ್ಲಿ ಅರ್ಜುನ್‌ ಸರ್ಜಾ ಸ್ಪಲ್ಪ ಎಡವಿದ್ದಾರೆ. ಸಿನಿಮಾಗೆ ಕಮರ್ಷಿಯಲ್‌ ಟಚ್‌ ನೀಡುವ ಭರದಲ್ಲಿ ಮೂಲ ಎಳೆಯಾಗಿ ಹರಿಯಬೇಕಿದ್ದ ಶಿಕ್ಷಣ ರಾಷ್ಟ್ರೀಕರಣ ಮರೆತುಬಿಟ್ಟಿದ್ದಾರೆ. ಕಮರ್ಷಿಯಲ್‌ ಅಂಶ ಹೆಚ್ಚು ರಾರಾಜಿಸುತ್ತಾ ಹೋಗುತ್ತೆ. ಹೀಗಾಗಿ ಸಿನಿಮಾ ಹೆಚ್ಚು ಕಾಡೋದಿಲ್ಲ. ವಿಷಯ ಗಂಭೀರವಾಗಿದ್ದು ಅದನ್ನು ಕಮರ್ಷಿಯಲ್‌ ಆಗಿಯೂ ಕೊಡಬೇಕು ಅನ್ನೋ ಆಯ್ಕೆಯಲ್ಲಿ ಕಮರ್ಷಿಯಲ್‌ ಮಾತ್ರ ಉಳಿದು ರವಾನೆಯಾಗಬೇಕಿದ್ದ ಸಂದೇಶ ಅರ್ಧದಲ್ಲೇ ಉಳಿದು ಬಿಟ್ಟಿದೆ.

ಹಾಗಿದ್ರೂ ಕನ್ನಡದಲ್ಲಿ ಒಂದು ಒಳ್ಳೆಯ ಸಿನಿಮಾ ಕೊಡಲು ಅರ್ಜುನ್‌ ಸರ್ಜಾ ಮಾಡಿರುವ ಪ್ರಯತ್ನಕ್ಕೆ ಮೆಚ್ಚಲೇಬೇಕು.

Friday, September 5, 2014

ತುರ್ತುಪರಿಸ್ಥಿತಿಯ ಕರಾಳ ನೆನಪು : ಪುತ್ರ ಶೋಕ

'ರಾಜನ್ ಮನೆಗೆ ಬಂದೇ ಬರುತ್ತಾನೆ ಎಂದು ದೃಢವಾಗಿ ನಂಬಿಕೊಂಡೆ. ರಾತ್ರಿ ವೇಳೆ ಮಗ ಹಸಿದು ಬಂದರೆ ಊಟವಿರಲಿ ಎಂದು ಪತ್ನಿಗೆ ತಿಳಿಸಿ ಊಟ ಇಟ್ಟುಕೊಂಡು ಕಾಯುತ್ತಿದ್ದೆ. ಹಸಿರಾದ ಚಿಗುರು ಬಾಳೆ ಎಲೆಯ ಮೇಲೆ ಅವನಿಗಾಗಿ ಹರಡಿದ ಹಬೆಯಾಡುತ್ತಿದ್ದ ಬಿಸಿಬಿಸಿ ಅನ್ನ ಆರಿ ತಣ್ಣಗಾಯಿತೆ ಹೊರತು ಮಗ ಮಾತ್ರ ಮನೆಗೆ ಬರಲಿಲ್ಲ. ಪ್ರತಿ ರಾತ್ರಿ ನಿದ್ದೆಗೆಟ್ಟು ಮಗನಿಗಾಗಿ ಬಾಗಿಲು ತೆರೆದು ಕಾಯುತ್ತಿದ್ದೆ. ಹೊರಗಡೆ ನಾಯಿಗಳು ಬೊಗಳುವ ಶಬ್ಧವಾದರೆ ಸಾಕು ಬಾಗಿಲ ಬಳಿ ಓಡೋಡಿ ಬರುತ್ತಿದ್ದೆ. ಎದೆಯೊಳಗೆ ಮಡುವುಗಟ್ಟಿದ ನೋವು ನಿಟ್ಟುಸಿರು ಇವುಗಳನ್ನು ತಾಳಲಾರದೆ ಒಮ್ಮೊಮ್ಮೆ "ಅಯ್ಯೋ ಮಗನೆ" ಎನ್ನುತ್ತಾ ಒಳಗೊಳಗೆ ಚೀರಿಡುತ್ತಾ ಗೋಳಿಡುತ್ತಿದ್ದೆ. ನಾನು ಮಗನ ಅಗಲಿಕೆಯ ಸಂಕಟವನ್ನು ತಾಳಲಾರದೆ ಗಟ್ಟಿಯಾಗಿ ಮನೆಯೊಳಗೆ ಅಳುವಂತಿರಲಿಲ್ಲ. ಏಕೆಂದರೆ ಮಗನ ಬಂಧನ ಸುದ್ದಿಯನ್ನಾಗಲಿ ಅಥವಾ ನಾಪತ್ತೆಯಾದ ಸಂಗತಿಯನ್ನಾಗಲಿ ಮನೆಯಲ್ಲಿ ಮಡದಿ ಮತ್ತು ಮಕ್ಕಳಿಗೆ ತಿಳಿಸಿರಲಿಲ್ಲ. ಒಡಲೊಳಗೆ ಬಾಯಿ ತೆರೆದಿದ್ದ ಅಗ್ನಿ ಪರ್ವತವನ್ನು ಹೊತ್ತುಕೊಂಡು ಹೊರಗಡೆ ತಣ್ಣನೆಯ ಹಿಮಪರ್ವತದಂತೆ ಮುಖ ಹೊತ್ತುಕೊಂಡು ಬದುಕುವ ಸ್ಥಿತಿ ನನ್ನದಾಗಿತ್ತು. '

ಪೊ.ಈಚಾರ ವಾರಿಯರ್‌ ಅವರ ಈ ಮಾತುಗಳನ್ನು ಓದುತ್ತಾ ಹೋದರೆ ಮಗನನ್ನು ಕಳಕೊಂಡು, ಮಗನಿಗಾಗಿ ಹುಡುಕುತ್ತಾ, ಮನೆಯವರಿಗೂ ತಿಳಿಸಲಾಗದೆ ತೊಳಲಾಡುತ್ತಾ ಸಾಗಿದ್ದ ಅವರ ಪರಿಸ್ಥಿತಿ ಎಂತಹ ಕಲ್ಲು ಹೃದಯವನ್ನೂ ಕರಗಿಸಬಹುದು. ಆದರೆ ಅಂದು ಪ್ರೊ.ಈಚಾರ ವಾರಿಯರ್ ಅನುಭವಿಸಿದ್ದ ನೋವು, ಅವರದ್ದೇ ಮುಂದೆ ಹಲವು ವರ್ಷಗಳ ಹಿಂದೆ ಕತ್ತಲ ರಾತ್ರಿಯಲ್ಲಿ ಪ್ರಾಣಭಿಕ್ಷೆಯನ್ನು ಬೇಡಿ ನಿಂತಿದ್ದ, ಮುಂದೆ ಕೇರಳದ ಮುಖ್ಯಮಂತ್ರಿಯಾದ ಅಚ್ಯುತ ಮೆನನ್‌ ಅವರಿಗೆ ಗೊತ್ತಾಗಲೇ ಇಲ್ಲ. ಕಮ್ಯುನಿಸ್ಟ್‌ ಸಿದ್ಧಾಂತದ ಪ್ರತಿಪಾದಕರಾಗಿ, ಕಟ್ಟಾ ಕಮ್ಯುನಿಸ್ಟ್‌ ಆಗಿ ಬೆಳೆದು, ಜನರ ಮಧ್ಯದಲ್ಲೇ ಇದ್ದ ಅಚ್ಯುತ ಮೆನನ್‌ ತಲೆಗೂ ಅಧಿಕಾರದ ಅಮಲು ಅಡರಿತ್ತು. ಹೀಗಾಗಿ ತಮ್ಮ ಮಗನನ್ನು ಹುಡುಕುತ್ತಾ ಹೋದ ಪ್ರೊ.ವಾರಿಯರ್‌ ಗೆ ಅಚ್ಯುತ ಮೆನನ್‌ರಿಂದ ಯಾವುದೇ ಸಹಕಾರ ಸಿಗಲಿಲ್ಲ. ಅಂದಹಾಗೆ ಇದೆಲ್ಲಾ ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲಿ ಕಳೆದು ಹೋದ ತನ್ನ ಮಗನನ್ನು ಹುಡುಕುತ್ತಾ ಹೋದ ಓರ್ವ ಹಿಂದಿ ಪ್ರೊಫೆಸರ್ ಅನುಭವಿಸಿದ ನೈಜ ಘಟನೆಗಳು.

ಡಾ.ಜಗದೀಶ್ ಕೊಪ್ಪ ಕನ್ನಡದ ಓದುಗರಿಗೆ ಬೇರೆ ಬೇರೆ ಭಾಷೆಗಳ ಅಮೂಲ್ಯ ಕೃತಿಗಳನ್ನು ಅನುವಾದಿಸಿ ಕೊಡುತ್ತಿದ್ದಾರೆ. ಇತ್ತೀಚೆಗಷ್ಟೇ ಅವರು ' ಮರುಭೂಮಿಯ ಹೂ' ಪುಸ್ತಕದ ಮೂಲಕ ವಾಸಿರ್‌ಳ ಬದುಕನ್ನು ಕನ್ನಡಕ್ಕೆ ತಂದಿದ್ದರು. ಹೆಸರಾಂತ ಮಾಡೆಲ್, ಜಗದ್ವಿಖ್ಯಾತಿ ಪಡೆದ ರೂಪದರ್ಶಿ ವಾಸಿರ್‌ಳನ್ನು ಕನ್ನಡಕ್ಕೆ ಪರಿಚಯಿಸಿದ್ದರು. ಅದೇ ರೀತಿಯ ಇನ್ನೊಂದು ಅದ್ಭುತ ಪುಸ್ತಕ ' ಪುತ್ರ ಶೋಕ'. ಇದು ಕೇರಳದ ಪ್ರೊ. ಈಚರ ವಾರಿಯರ್ ಅವರ ಬದುಕಿನ ಕಥೆ. ತುರ್ತುಪರಿಸ್ಥಿತಿಯ ಕರಾಳ ದಿನಗಳಲ್ಲಿ ಕಳೆದು ಹೋದ ಮಗನನ್ನು ಹುಡುಕುತ್ತಾ ಸಾಗಿದ ಆ ಅಪ್ಪನ ತೊಳಲಾಟದ ಕಥೆ. ಹೋರಾಟದ ಕಥೆ. ಮುಖ್ಯಮಂತ್ರಿಯನ್ನು ರಾಜೀನಾಮೆ ಕೊಡಿಸಿದ ಕಥೆ. ಅಧಿಕಾರದಲ್ಲಿದ್ದವರ ಮದದ ಕಥೆ. ಸಾಮಾನ್ಯ ವ್ಯಕ್ತಿ ಇಡೀ ವ್ಯವಸ್ಥೆಗೆ ಬುದ್ಧಿ ಕಲಿಸಿದ ನೈಜ ಕಥೆ.

ತುರ್ತುಪರಿಸ್ಥಿತಿ. ಸ್ವತಂತ್ರ ಭಾರತದ ಒಂದು ಕರಾಳ ಅಧ್ಯಾಯ. ಬ್ರಿಟಿಷರ ವಿರುದ್ಧ ಹೋರಾಡಿ ಪಡೆದ ಸ್ವಾತಂತ್ರ್ಯವನ್ನು ತನ್ನ ಸರ್ವಾಧಿಕಾರಕ್ಕಾಗಿ ಪ್ರಧಾನಿ ಇಂದಿರಾಗಾಂಧಿ ಕಟ್ಟಿಹಾಕಿದ್ದರು. ಜನರ ಹಕ್ಕುಗಳನ್ನು ಕಿತ್ತುಕೊಂಡು ಸರ್ವಾಧಿಕಾರಿಯಾಗಿ ಮೆರೆದಿದ್ದರು. ಸುಪ್ರಿಂ ಕೋರ್ಟ್‌ನ ತೀರ್ಪು ತನ್ನ ವಿರುದ್ಧವಾಗುತ್ತಿದ್ದಂತೆ ಜನರ ಮೇಲೆ ತುರ್ತುಪರಿಸ್ಥಿತಿ ಹೇರಿದ್ದರು. ಭಾರತವನ್ನು ತನ್ನ ಬಿಗಿಮುಷ್ಟಿಯಲ್ಲಿಟ್ಟುಕೊಂಡಿದ್ದರು. ಆದರೆ ಒಬ್ಬ ಪ್ರಧಾನಿ ತನ್ನ ಅಧಿಕಾರಕ್ಕಾಗಿ ಮಾಡಿದ ತೀರ್ಮಾನ ಒಬ್ಬ ಅಪ್ಪ ತನ್ನ ಮಗನನ್ನು ಕಳೆದುಕೊಳ್ಳುವಂತೆ ಮಾಡಿತ್ತು. ಆ ಅಪ್ಪನಂತೆ ಅದೆಷ್ಟು ಅಪ್ಪಂದಿರು ಮಕ್ಕಳನ್ನು ಕಳೆದುಕೊಂಡಿದ್ದರೋ !

ತುರ್ತುಪರಿಸ್ಥಿತಿಯ ದಿನಗಳ ಬಗ್ಗೆ ನಾವು ಸಾಕಷ್ಟು ಕೇಳಿದ್ದೇವೆ. ಆಗ ಮಾಧ್ಯಮಗಳಿಗೆ ನಿರ್ಬಂಧ ಹೇರಲಾಗಿತ್ತು. ಪ್ರತಿಪಕ್ಷಗಳ ನಾಯಕರನ್ನು ಬಂಧನದಲ್ಲಿಡಲಾಗಿತ್ತು. ಕಾಂಗ್ರೆಸ್‌ ವಿರುದ್ಧ ಮಾತಾಡಿದವರನ್ನು ಜೈಲಿಗಟ್ಟಲಾಗಿತ್ತು. ಅದರ ವಿರುದ್ಧ ಲೋಕನಾಯಕ ಜಯಪ್ರಕಾಶ್ ನಾರಾಯಣ್‌ ನೇತೃತ್ವದಲ್ಲಿ ಹೋರಾಟ ರೂಪಿಸಲಾಗಿತ್ತು. ಇದೆಲ್ಲ ನಿಜ. ಆದರೆ ಆಗಿನ ದಿನಗಳ ಕರಾಳತೆ ಜನಜೀವನದ ಮೇಲೆ ಎಂತಹ ಪರಿಣಾಮ ಬೀರಿತ್ತು ಅನ್ನೋದು ಅಷ್ಟೊಂದು ಸ್ಪಷ್ಟವಾಗಿ ಗೋಚರವಾಗಲ್ಲ. ಆದರೆ ಪ್ರೊ. ಈಚಾರ ವಾರಿಯರ್‌ ಅವರ ಬದುಕಿನ ಘಟನೆಗಳಿವೆಯಲ್ಲಾ. ತುರ್ತುಪರಿಸ್ಥಿತಿಯ ಬಗ್ಗೆ ಅರ್ಥಮಾಡಿಕೊಳ್ಳಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.

ಒನ್ಸ್‌ ಅಗೈನ್ ಅದ್ಭುತ ಪುಸ್ತಕವೊಂದನ್ನು ಕನ್ನಡದ ಓದುಗರ ಕೈಗಿತ್ತಿದ್ದಾರೆ ಡಾ.ಜಗದೀಶ್ ಕೊಪ್ಪ. ಒಂದೇ ಗುಕ್ಕಿನಲ್ಲಿ ಓದಿ ಮುಗಿಸಬಹುದಾದ ಪುಸ್ತಕವಿದು. ಮರೀಬೇಡಿ. ಕೊಂಡು ಓದಿ.

Sunday, August 24, 2014

ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಸಾವು



ನಮಗೆಲ್ಲಾ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಭಾರತೀಯರಿಗೆ ಕಲ್ಪಿಸಿರುವ ಅಮೂಲ್ಯ ಹಕ್ಕಿದು. ಎಲ್ಲ ವಿಚಾರಗಳ ಬಗ್ಗೆ ನಾವು ಯಾವುದೇ ನಿರ್ಭಿಡೆಯಿಲ್ಲದೆ ನಮ್ಮ ಅಭಿಪ್ರಾಯವನ್ನು ದಾಖಲಿಸಬಹುದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಬಹುದೊಡ್ಡ ಆಸ್ತಿ. ಇದರಿಂದಾಗಿಯೇ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆ ಬಲಿಷ್ಠವಾಗಿ ರೂಪುಗೊಂಡಿರುವುದು. ರೂಪುಗೊಳ್ಳುತ್ತಿರುವುದು.

ಅದರಲ್ಲೂ ಈಗ ಅಭಿವ್ಯಕ್ತಿಯ ಯುಗ. ನಮ್ಮ ಮನಸ್ಸಿನ ಭಾವನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಬಹುದು. ಅದು ಕೇವಲ ಗೆಳೆಯರ ಜೊತೆ ಮಾತಿನ ಕಟ್ಟೆಯಲ್ಲಿ ಕುಳಿತು ಆಡುವ ಮಾತಿಗಷ್ಟೇ ಸೀಮಿತವಾಗಿಲ್ಲ. ಯಾವುದೇ ಮಾಧ್ಯಮದವರ ಹಂಗೂ ಬೇಕಿಲ್ಲ. ಯಾರ ಒಪ್ಪಿಗೆಯೂ ಬೇಕಿಲ್ಲ. ಅಪ್ಪಣೆಗೂ ಕಾಯಬೇಕಿಲ್ಲ. ನಮಗನ್ನಿಸಿದನ್ನು ಬಹಳ ಮುಕ್ತವಾಗಿ ಚರ್ಚಿಸಬಹುದು. ನಮಗನ್ನಿಸಿದನ್ನು ದಾಖಲಿಸಬಹುದು. ಇಷ್ಟವಿದ್ದವರು ಓದಿ ಖುಷಿಪಡುತ್ತಾರೆ. ಇಷ್ಟವಿಲ್ಲದವರು ಓದಿ ಉರಿ ಪಟ್ಟುಕೊಳ್ಳುತ್ತಾರೆ. ಅಷ್ಟೇ. ಅಷ್ಟೊಂದು ಮುಕ್ತ ವೇದಿಕೆಯನ್ನು ಸಾಮಾಜಿಕ ತಾಣಗಳು ತೆರೆದುಕೊಟ್ಟಿವೆ. ನವಮಾಧ್ಯಮದ ಶಕ್ತಿಯೇ ಅದು. ಇದು ಸಾಮಾನ್ಯ ಜನರ ಅಭಿವ್ಯಕ್ತಿಗೂ ಮುಕ್ತ ಮಾರುಕಟ್ಟೆಯನ್ನು ಒದಗಿಸಿದೆ. ಪ್ರತಿಯೊಬ್ಬರಿಗೂ ಮಾತಾಡುವ ಅವಕಾಶ ಕೊಟ್ಟಿದೆ. ಬರೆಯಲು ಪ್ರೋತ್ಸಾಹಿಸಿದೆ. ಅಭಿವ್ಯಕ್ತಿಗೆ ಇಲ್ಲಿ ಸಂಪೂರ್ಣ ಸ್ವಾತಂತ್ರ್ಯ.

ಇಂದು ನಾವು ಯಾವುದೇ ಭೀತಿಯಿಲ್ಲದೆ ಯಾವುದೇ ವ್ಯಕ್ತಿಯ ಬಗ್ಗೆಯೂ ಟೀಕಿಸಬಹುದು. ಆತನ ಪೂರ್ವಾಪರ ಸಂಪೂರ್ಣ ತಿಳಿದುಕೊಳ್ಳಲೇಬೇಕಂತೇನು ಇಲ್ಲ. ಆತ ಹೇಳಿದ ಯಾವುದೋ ಒಂದು ಮಾತು, ಆತನ ತೆಗೆದುಕೊಂಡು ಯಾವುದೋ ನಿಲುವು, ಆತ ಬರೆದ ಯಾವುದೇ ಬರಹ, ಆತನ ಯಾವುದೋ ಸಂಬಂಧದ ಬಗ್ಗೆ ನಮಗೆ ಇಷ್ಟವಾಗದಿದ್ದರೆ ಸಾಕು. ಅದು ನಾವು ನಂಬಿರುವ ಸಿದ್ಧಾಂತಕ್ಕೆ, ನಮ್ಮ ನಂಬಿಕೆೆಗೆ ವಿರುದ್ಧವಾಗಿದ್ದರೆ ಯಾವುದೇ ಮುಲಾಜಿಲ್ಲದೆ ವಿರೋಧಿಸಬಹುದು. ಹೀಗೆ ವಿರೋಧ ವ್ಯಕ್ತಪಡಿಸೋದಿಕ್ಕೆ ಯಾರ ಅನುಮತಿಯೂ ಬೇಕಿಲ್ಲ. ವಿರೋಧಕ್ಕೆ ಪುಷ್ಟಿ ಕೊಡಲು ನಮಗೆ ಯಾವುದೇ ಆಧಾರಗಳು ಬೇಕಿಲ್ಲ. ಅದಕ್ಕೆ ಭಾಷೆಯ ಮೇಲೆ ಹಿಡಿತ, ಸರಿಯಾದ ವ್ಯಾಕರಣ ಯಾವುದೂ ಬೇಕಿಲ್ಲ. ಆ ಕ್ಷಣದಲ್ಲಿ ಅನ್ನಿಸಿದನ್ನು ನಿರ್ಭಿಡೆಯಿಂದ ಬರೆಯುವ ಧೈರ್ಯವಿದ್ದರೆ ಸಾಕು. ಒಂದು ವೇಳೆ ಆ ಧೈರ್ಯವಿಲ್ಲದಿದ್ದರೂ ಆಗುತ್ತೆ. ಅನ್ಯರ ಹೆಸರು ಬಳಸುವ, ಫೋಟೋ ಹಾಕುವ, ಫೇಕ್ ಅಕೌಂಟ್‌ಗಳನ್ನು ಸೃಷ್ಟಿಸುವ ಕಲೆ ಗೊತ್ತಿದ್ದರೂ ನಡೆಯುತ್ತದೆ.

ಪೀಠಿಕೆ ಸ್ವಲ್ಪ ದೊಡ್ಡದೇ ಅನ್ನಿಸಬಹುದು. ಆದರೆ ಕಳೆದೆರಡು ದಿನಗಳಿಂದ ಅನ್ಸಿಸಿದ ಕೆಲವೊಂದು ವಿಚಾರಗಳನ್ನು ತಿಳಿಸಲು ಇದರ ಅವಶ್ಯಕತೆ ಖಂಡಿತ ಇದೆ. ಡಾ. ಯು. ಆರ್. ಅನಂತಮೂರ್ತಿ ಬದುಕಿದ್ದಾಗ ಅವರನ್ನು ವಿರೋಧಿಸಲು ಅನೇಕ ಕಾರಣಗಳು ಅನೇಕರಿಗೆ ಇದ್ದಿರಬಹುದು. ಒಬ್ಬ ಸಾಹಿತಿ, ಬರಹಗಾರ, ಚಿಂತಕನ ಎಲ್ಲಾ ವಿಚಾರಧಾರೆಗಳನ್ನು ಎಲ್ಲರೂ, ಎಲ್ಲಾ ಕಾಲಕ್ಕೂ ಒಪ್ಪಿಕೊಳ್ಳಬೇಕು ಅಂತೇನು ಇಲ್ಲ. ಅದು ಅನಂತಮೂರ್ತಿಯವರಿಗೂ ಅನ್ವಯಿಸುತ್ತದೆ. ಆದರೆ ಒಬ್ಬ ವ್ಯಕ್ತಿ ಸತ್ತಾಗ ಆತನಿಗೊಂದು ಶ್ರದ್ಧಾಂಜಲಿ, ನಿಟ್ಟುಸಿರು, ಆತನಿಗೊಂದು ಗೌರವ ಸಲ್ಲಿಸೋದು ಮನುಷ್ಯ ಧರ್ಮ. ಕಾಗೆಗಳು ತಮ್ಮ ಸಿಕ್ಕಿರುವ ಆಹಾರದ ವಿಚಾರಕ್ಕೆ ಕೆಲವೊಮ್ಮೆ ಒಂದು ಇನ್ನೊಂದರ ಮೇಲೆ ಸಿಟ್ಟಾಗಿ ಎರಗಬಹುದು. ಆದರೆ ಒಂದು ಕಾಗೆ ಸತ್ತರೆ ಉಳಿದೆಲ್ಲಾ ಕಾಗೆಗಳು ಕಾ.. ಕಾ.. ಕಾ.. ಅಂತ ಹಾರಾಡಿ ಬರುವುದು ಅವುಗಳ ಬಳಗದಲ್ಲಿ ಸಂಭವಿಸಿದ ಸಾವಿಗೆ ಮರುಗುವುದಕ್ಕಾಗಿ. ಆದರೆ ಮನುಷ್ಯರಿಗೆ ಸತ್ತ ಮೇಲೂ ಮುಂದುವರೆಯುವ ದ್ವೇಷಕ್ಕೆ ಕಾರಣಗಳೇ ಗೊತ್ತಾಗುವುದಿಲ್ಲ.

ಮೋದಿ ವಿರುದ್ಧ ಮಾತಾಡಿದ ಅನಂತಮೂರ್ತಿ ಅಂತಹ ಘನಘೋರ ಅಪರಾಧ ಎಸಗಿದರೆ ? ಅದು ಅವರ ಎಲ್ಲ ಬರಹಗಳನ್ನು ಮರೆಸುವಷ್ಟು ದೊಡ್ಡ ಅಪರಾಧವೇ? ಎಲ್ಲರೂ ಬಯಸುವ ಅಭಿವ್ಯಕ್ತಿ ಸ್ವಾತಂತ್ರ್ಯ ಅವರಿಗೆ ಇರಲಿಲ್ಲವೇ? ಅವರು ಆ ಮಾತನ್ನು ಹೇಳಿದ ಸಂದರ್ಭದಲ್ಲಿ ವಾಚಾಮಗೋಚರವಾಗಿ ಅವರನ್ನು ನಿಂದಿಸಿ ಬರೆದರು. ಪಾಕಿಸ್ತಾನಕ್ಕೆ ಹೋಗಲು ಟಿಕೇಟ್ ಕಳಿಸಿದರು. ಆದರೆ ಇಷ್ಟಕ್ಕೆ ತೃಪ್ತರಾಗದ ಕೆಲವರು ಅವರು ಇಹಲೋಕ ತ್ಯಜಿಸಿದ ಮೇಲೂ ಸಂಭ್ರಮಿಸಿದರು. ಖುಷಿಪಟ್ಟರು. ಆದರೆ ಯಾರ ಕಾರಣಕ್ಕಾಗಿ ಅನಂತಮೂರ್ತಿಯವರ ವಿರುದ್ಧ ಕೂಗಾಡಿದರೋ ಅದೇ ಪ್ರಧಾನಮಂತ್ರಿ ನರೇಂದ್ರ ಮೋದಿ, ಅನಂತಮೂರ್ತಿ ಸಾವಿನಿಂದ ಕನ್ನಡ ಸಾಹಿತ್ಯಕ್ಕಾದ ನಷ್ಟವೆಂದು ಟ್ವೀಟ್ ಮಾಡಿದ್ದರು. ಇದಕ್ಕೆ ಮೋದಿಯವರ ದೊಡ್ಡತನ ಎನ್ನಬೇಕೋ ? ಅನಂತಮೂರ್ತಿಯವರ ಸಾಧನೆ ಕಾರಣ ಎನ್ನಬೇಕೋ ?

ಸಾವಿನ ಸಂದರ್ಭದಲ್ಲೂ ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾದ ಕೆಲ ಪ್ರತಿಕ್ರಿಯೆಗಳು ಅಭಿವ್ಯಕ್ತಿ ಸ್ವಾತಂತ್ರ್ಯವನ್ನೇ ಅಣಕ ಮಾಡಿದಂತೆ ಭಾಸವಾಗುತ್ತಿದೆ.


Monday, June 2, 2014

'ರಾಮಂದ್ರ'ದ ನಗೆಬುಗ್ಗೆಗಳು

ರಾಮಂದ್ರ. ಇದನ್ನು ಕೇಳಿದಾಗ ನನ್ನಂತವರಿಗೆ ಸೀಮಾಂಧ್ರದ ರೀತಿಯಲ್ಲೇ ಭಾಸವಾಗತೊಡಗುತ್ತದೆ. ಆದರೆ ಬಯಲು ಸೀಮೆಯ ಮಂದಿ ಇದು ರಾಮಮಂದಿರ ಅನ್ನೋದನ್ನು ಥಟ್ಟಂತ ಹೇಳಿಯ ಉತ್ತರದಂತೆ ಹೇಳಿಬಿಡುತ್ತಾರೆ. ಅಂದಹಾಗೆ ನಾನು ಥಟ್ಟಂತ ಹೇಳಲು ಹೊರಟಿರುವ ರಾಮಂದ್ರ - ಹರಿಪ್ರಸಾದರ ಪ್ರಬಂಧಗಳ  ಬಗ್ಗೆ.

ಮಜಾ ಕೇಳಿ. ಹರಿಪ್ರಸಾದ್‌ ಪ್ರಬಂಧಗಳು ಅಂತಿದೆ ಮುಖಪುಟ. ಪುಸ್ತಕ ನೋಡಿದ ನನ್ನಕ್ಕ 'ಇದೆಂತಾ ನೀನ್ ಪುಸ್ತಕ ಬರೆದದ್ದಾ..?' ಅಂತ ಕೇಳಿದ್ದಳು. ಆಫೀಸಿನಲ್ಲಿ ಕುಳಿತು ಪುಸ್ತಕ ಓದುತ್ತಿದ್ದರೆ ಗೆಳೆಯರು - 'ಇದೇನು ನಿಂದಾ ಪುಸ್ತಕ ?' ಅಂತ ಕೇಳತೋಡಗಿದ್ದು ಒಂತರಾ ಖುಷಿಕೊಟ್ಟಿತ್ತು. ಅವ್ರಿಗೆಲ್ಲಾ ಇದು ನಾನಲ್ಲ. ನನ್ನದೇ ಹೆಸರಿನ ಇನ್ನೊಂದು ಹರಿಪ್ರಸಾದ ಅಂತ ಓದಿನ ನಡುವೆ ಸಣ್ಣದೊಂದು ಬ್ರೇಕ್ ತಕಂಡು ಹೇಳ್ತಿದ್ದೆ. ಅಂತೂ ಹರಿಪ್ರಸಾದರ ದಯೆಯಿಂದ ಪುಸ್ತಕ ಓದುವ ಎರಡು ದಿನ ಕೆಲವರ ಬಾಯಲ್ಲಿ ನಾನೂ ಬರಹಗಾರನಾಗುವ ಬಿಟ್ಟಿ ಅವಕಾಶ ಸಿಕ್ಕಿತು. ಇದೂ ಒಂಥರಾ ಥ್ರಿಲ್‌ ಕೊಡುತ್ತೆ. ಆದರೆ ಯಾರದ್ದೋ ಮಗುವಿಗೆ, ಇದು ನಿಮ್ಮ ಮಗುವಾ ಅಂತ ಕೇಳಿದಾಗ ಆಗುವ ಕಸಿವಿಸಿಯನ್ನು ನಾನು ಅನುಭವಿಸಿದ್ದು ಸುಳ್ಳಲ್ಲ.

ಇದೆಲ್ಲಾ ಇರಲಿ. ವಿಷಯಕ್ಕೆ ಬರುತ್ತೇನೆ. ಹರಿಪ್ರಸಾದ್‌, ನಿರಂತರ ಫೌಂಡೇಷನ್‌ನ ಸ್ಥಾಪಕ ಸದಸ್ಯರಲ್ಲೊಬ್ಬರು. ನನ್ನ ಹಿರಿಯ ಮಿತ್ರ ಜಯ ನಾಣಯ್ಯ ಅದೆಷ್ಟೋ ಬಾರಿ ನಿರಂತರದ ಬಗ್ಗೆ ಹೇಳುತ್ತಿರುತ್ತಾರೆ. ಹರಿಪ್ರಸಾದ್ ಬರೆಯುತ್ತಿದ್ದ ಬರಹಗಳ ಲಿಂಕ್‌ಅನ್ನು ಕಳಿಸಿ ' ಓದೋ ' ಅಂತ ದಬಾಯಿಸುತ್ತಿದ್ದರು. ಅವರು ದಬಾಯಿಸುತ್ತಿದ್ದರು ಓದುವಾಗ ಸಿಗುವ ಖುಷಿ ಮಾತ್ರ ನನ್ನದಾಗಿರುತ್ತಿತ್ತು. ಈ ನಿರಂತರದ ಬಗ್ಗೆ ಒಂದೆರಡು ಮಾತು ಹೇಳಿ ಮುಂದೆ ಪುಸ್ತಕದ ವಿಚಾರ ಹೇಳುತ್ತೇನೆ. - ಇದೇನು ಒಳ್ಳೆ ಭಾಷಣ ಬಿಗೀತಾನೆ ಅಂತ ನಿಮಗೆ ಅನ್ನಿಸಿದ್ರೂ ಮನ್ನಿಸಿ ಮುಂದೆ ಓದಿ - ನಾನು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯುವಾಗ ಒಂದು ಡಿಸೆರ್ಟೇಷನ್‌ ಮಾಡೋದು ಕಡ್ಡಾಯವಾಗಿತ್ತು. ಆಗ ನಾನು ಆಯ್ಕೆ ಮಾಡಿಕೊಂಡಿದ್ದು, ' ಸಂವಹನ ಮಾಧ್ಯಮವಾಗಿ ಬೀದಿ ನಾಟಕಗಳು' ಅನ್ನೋ ವಿಷಯವನ್ನು. ಇದಕ್ಕಾಗಿ ಮಾಹಿತಿ ಸಂಗ್ರಹಿಸಲು ಪುಸ್ತಕಗಳನ್ನು ತಡಕುತ್ತಾ ಕುಳಿತಾಗ ಸಿಕ್ಕಿದ್ದು ನನಗೆ ನಿರಂತರ ಪ್ರಕಾಶನದ ' ಬೀದಿ' ಪುಸ್ತಕ. ಪ್ರಸಾದ್‌ ಕುಂದೂರ್ ಸಂಪಾದಿಸಿರುವ ಈ ಪುಸ್ತಕದಲ್ಲಿ ಕರ್ನಾಟಕದ ಬೀದಿ ನಾಟಕದ ಬಗ್ಗೆ ಉಪಯುಕ್ತ ಮಾಹಿತಿ ಸಿಕ್ಕಿತ್ತು. ಈ ಪುಸ್ತಕ ಇಲ್ಲದೇ ಇರುತ್ತಿದ್ದರೆ ಬಹುಷಃ ನಾನು ನನ್ನ ಡಿಸೆರ್ಟೇಷನ್‌ಅನ್ನು ಸಮರ್ಪಕವಾಗಿ ಬರೆಯಲು ಸಾಧ್ಯವಾಗುತ್ತಿರಲಿಲ್ಲ. ಹಾಗೆಯೇ ಆ ಡಿಸೆರ್ಟೇಷನ್‌ಗಾಗಿ ಪ್ರಸಾದ್‌ ಕುಂದೂರರನ್ನು ಅವರ ಬೋಗಾದಿಯ ಮನೆಯಲ್ಲಿ ಸಂದರ್ಶನ ಕೂಡ ಮಾಡಿದ್ದೆ. ಹೀಗೆ ನಿರಂತರದ ಜೊತೆಗೆ ಸಂಪರ್ಕವಾಗಿದ್ದು.

ಹರಿಪ್ರಸಾದ್ ಬರೆದಿರುವ ಈ ಪುಸ್ತಕ ಒಳ್ಳೆಯ ಲಲಿತ ಪ್ರಬಂಧಗಳಿಂದ ಕೂಡಿದೆ. 'ನಮ್ಮಮ್ಮನ ಡಾಕ್ಟರ್‌ಗಳು ' ಪ್ರಬಂಧ ಓದಿದಾಗಲಂತೂ ಬಿದ್ದೂ ಬಿದ್ದೂ ನಗಾಡಿದ್ದೆ. ತಮ್ಮ ಅಜ್ಜನ ಬಗ್ಗೆ ತಮ್ಮ ತಾಯಿಯ ಮಾತುಗಳಲ್ಲಿ ಹರಿಪ್ರಸಾದ್‌ ವಿವರಿಸುತ್ತಾ ಹೋಗುತ್ತಿದ್ದಂತೆ ನಗೆಬುಗ್ಗೆಯೊಡೆಯುತ್ತದೆ. ನಿಜ ಅವರೇ ಹೇಳಿದಂತೆ ಗುರುರಾಜುಲು ನಾಯ್ಡು ಹರಿಕಥೆಯ ಶೈಲಿಯಲ್ಲಂತೂ ಇದನ್ನು ಪರಿಭಾವಿಸಿ ಓದಿದರೆ ನಗು ಇನ್ನಷ್ಟು ಜೋರಾಗುತ್ತೆ. ಲಲಿತ ಪ್ರಬಂಧವೊಂದು ಖುಷಿ ಕೊಡೋದು ಇಲ್ಲೇ.  'ಕದ್ದಾಲಿಕೆ ' ಪ್ರಬಂಧವಂತೂ ನಾಟಕದ ಶೈಲಿಯಲ್ಲೇ ನಡೆದರೂ ಒಂದು ಸಂಬಂಧದ ಬಗ್ಗೆ ಗೆಳೆಯರ ನಡುವಿನ ಸಂಭಾಷಣೆಯನ್ನು ನಿರೂಪಿಸಿದ ರೀತಿ ಅದ್ಭುತ. ಹಾಗೆಯೇ ಇದರಲ್ಲಿ ಸಂಬಂಧಗಳ ಬಗ್ಗೆ ವಿಷಣ್ಣ ಭಾವ ಮೂಡುತ್ತದೆ. 'ದೇವಾನೂರು ಪೋಸ್ಟ್‌  ' ಹಾಗೂ 'ರಾಮಂದ್ರ', ತೆಳು ಹಾಸ್ಯದ ನಡುವೆಯೇ ವಿಷಾದವನ್ನು ಮೂಡಿಸುತ್ತೆ.

ಇನ್ನು ತಮ್ಮ ಮಗಳ ಹೆಸರಿಡುವ ವಿಚಾರದ ಬಗ್ಗೆ ಹರಿಪ್ರಸಾದ್‌ ಬರೆದಿರುವ 'ಹೆಸರೇನೇ ಹುಡುಗಿ' ಹೆಸರಿಡುವ ತಾಪತ್ರಯಗಳನ್ನು ಮುಂದಿಡುತ್ತೆ. ಇದು ಕೇವಲ ಹರಿಪ್ರಸಾದ್‌ ಒಬ್ಬರದ್ದೇ ಅನುಭವವಲ್ಲ. ಬಹುಷಃ ಅನೇಕರು ಅನೇಕ ಸಂದರ್ಭಗಳಲ್ಲಿ ಇದೇ ಮಾದರಿಯ ಅನುಭವಗಳಿಗೆ ಒಳಗಾಗಿರುತ್ತಾರೆ. - ನಾನಿನ್ನೂ ಅದಕ್ಕೆ ಒಳಗಾಗಿಲ್ಲ - ' ಊರುಗಳೂ, ಚೀಟಿಗಳೂ' ಮಾತ್ರ ನನ್ನ ಮೇಲೆ ಗಾಢ ಪ್ರಭಾವವನ್ನು ಬೀರಿದೆ. ಕಾರಣ ಒಂದು - ನಾನು ಕೂಡ ಚೀಟಿ ಹಾಕಿ ಅನಿವಾರ್ಯ ಸಂದರ್ಭದಲ್ಲಿ ಚೀಟಿ ಕೂಗುವಾಗ ಅದರ ಏರಿಳಿತ ಕಂಡು ಜರ್ಜರಿತನಾಗಿದ್ದೇನೆ. ಹಾಗೆಯೇ ಅನೇಕ ಸಂದರ್ಭಗಳಲ್ಲಿ ಚೀಟಿಯಿಂದ ಮೋಸ ಹೋದ ಅನೇಕರ ಮಾತುಗಳನ್ನು, ನೋವುಗಳನ್ನು ಕಣ್ಣಾರೆ ಕಂಡಿದ್ದೇನೆ, ಕಿವಿಯಾರೆ ಕೇಳಿದ್ದೇನೆ. ಹಾಗೆಯೇ ಹಾವುಗಳ ಬಗ್ಗೆ ಹರಿಪ್ರಸಾದ್‌ ಬರೆದಿರುವ ಪ್ರಬಂಧ ನಿಜಕ್ಕೂ ಬಾಲ್ಯಕ್ಕೆ ತಂದು ನಿಲ್ಲಿಸಿತ್ತು. ಹಳ್ಳಿಯ ಹಿನ್ನೆಲೆಯಿಂದ ಬಂದ ಪ್ರತಿಯೊಬ್ಬರಿಗೂ ಇಂತಹ ಅನುಭವಗಳು ಇದ್ದೇ ಇರುತ್ತೆ. ಆದರೆ ಇತ್ತೀಚೆಗೆ ಹಳ್ಳಿಯ ಮಕ್ಕಳೂ ಕೂಡ ನನಗೆ ಒಂದೊಂದು ಸಲ ಸಿಟಿ ಮಕ್ಕಳ ತದ್ರೂಪದಂತೆ ಕಾಣುತ್ತಿದೆ. ಹೀಗಾಗಿ ಈಗಿನ ಹಳ್ಳಿ ಮಕ್ಕಳು ಈ ಅನುಭವಗಳಿಂದ ಸ್ವಲ್ಪ ದೂರವಾಗುತ್ತಿದ್ದರೆ ಅದು ಅವರ ತಪ್ಪಲ್ಲ ಬಿಡಿ.

ಒಂದೊಂದು ಪ್ರಬಂಧದ್ದೂ ಒಂದೊಂದು ಹದ. ಒಂದಷ್ಟು ಏರುಪೇರುಗಳಿವೆ ಅನ್ನಿಸುತ್ತೆ.ಆದರೆ ಕೊನೆಯಲ್ಲಿ ನಾನು ಪುಸ್ತಕದ ಮುನ್ನುಡಿಯಲ್ಲಿ ರಹಮತ್‌ ತರೀಕೆರೆಯವರು ಬರೆದಿರುವ ಸಾಲುಗಳನ್ನು ಉಲ್ಲೇಖಿಸುತ್ತೇನೆ. ' ಈ ಒಳ್ಳೆಯ ಪ್ರಬಂಧಗಳನ್ನು ಓದಿ ನಾನು ಪಟ್ಟಿರುವ ಸಂತೋಷ ಓದುಗರದ್ದೂ ಆಗಲಿದೆಯೆಂದು ಭಾವಿಸುತ್ತೇನೆ.' ಇದು ನನ್ನ ಭಾವನೆಯೂ ಹೌದು.


Thursday, May 1, 2014

ಕುಮಾರಸ್ವಾಮಿ ಮತ್ತು ಚುನಾವಣೆ

ಇದನ್ನು ತುಂಬ ದಿನಗಳ ಹಿಂದೆಯೇ ಬರೆಯಬೇಕೆಂದಿದ್ದೆ. ಆದರೆ ಬರೆಯಲು ಸಾಧ್ಯವಾಗಿರಲಿಲ್ಲ. ಚುನಾವಣೆಯ ಬ್ಯುಸಿಯ ನಡುವೆ ಬರೆಯಲು ಸಾಧ್ಯವಾಗಿರಲಿಲ್ಲ. ಈಗ ಚುನಾವಣೆ ಮುಗಿದು ರಿಸಲ್ಟ್‌ಗಾಗಿ ಎದುರು ನೋಡುತ್ತಿರುವಾಗ ಬರೆಯೋದು ಸೂಕ್ತ ಅನ್ನಿಸಿತ್ತು.

ವಿಷಯ ಇಷ್ಟೆ. ಈ ಬಾರಿ ಮತ್ತೆ ಲೋಕಸಭೆ ಚುನಾವಣೆಗೆ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧಿಸಿದ್ದಾರೆ.2009ರಲ್ಲೂ ಕುಮಾರಸ್ವಾಮಿ ಸ್ಪರ್ಧಿಸಿದ್ದರು. 2013ರಲ್ಲಿ ಕುಮಾರಸ್ವಾಮಿ ವಿಧಾನಸಭೆಗೆ ಸ್ಪರ್ಧಿಸಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮೇಲೆ ಉಪಚುನಾವಣೆ ಹೇರಿದ್ದರು. ಇದಕ್ಕೆ ಮುಂಚೆ 2009ರಲ್ಲಿ ರಾಮನಗರದ ವಿಧಾನಸಭಾ ಕ್ಷೇತ್ರದ ಮೇಲೂ ಉಪಚುನಾವಣೆ ಹೇರಿದ್ದರು. ಈಗ ಅವರಿಗೆ ಚಿಕ್ಕಬಳ್ಳಾಪುರದಿಂದ ಅರ್ಜೆಂಟಾಗಿ ಎಂಪಿಯಾಗುವ ಉತ್ಸಾಹ ಬಂದು ಚುನಾವಣೆಗೆ ಧುಮುಕಿಯಾಗಿದೆ. ಮತದಾರನ ತೀರ್ಪು ಮತಪೆಟ್ಟಿಗೆಯಲ್ಲಿ ಅಡಗಿದೆ. ಕುಮಾರಸ್ವಾಮಿ ಇಲ್ಲಿ ಗೆದ್ದರೆ ಮತ್ತೆ ರಾಮನಗರಕ್ಕೆ ಉಪಚುನಾವಣೆ ನಡೆಯುತ್ತೆ. ಅಲ್ಲಿಗೆ ರಾಮನಗರದ ಶಾಸಕ ಎಚ್.ಡಿ.ಕುಮಾರಸ್ವಾಮಿಯವರು ತಮ್ಮ ಹಿತಾಸಕ್ತಿಗಾಗಿ ಐದು ವರ್ಷಗಳ ಅಂತರದಲ್ಲಿ ಆ ಕ್ಷೇತ್ರದ ಜನರು ಐದು ಬಾರಿ ಚುನಾವಣೆಯನ್ನು ಎದುರಿಸುವಂತಹ ಕೊಡುಗೆಯನ್ನು ಕೊಟ್ಟಂತಾಗುತ್ತೆ.

ಇಷ್ಟಕ್ಕೂ ಕುಮಾರಸ್ವಾಮಿಯವರು ಎಂಪಿಯಾಗಿ ಗೆದ್ದರೆ ಏನು ಪ್ರಯೋಜನ. ಒಂದು ವೇಳೆ ಅವರದೇ ಲೆಕ್ಕಾಚಾರದಂತೆ ಹೇಳೋದಾದರೆ ಕೇಂದ್ರದಲ್ಲಿ ತೃತೀಯ ರಂಗ ಸರ್ಕಾರ ಅಧಿಕಾರಕ್ಕೆ ಬಂದರೆ ಜೆಡಿಎಸ್ ಕೋಟಾದಡಿಯಲ್ಲಿ ಕುಮಾರಸ್ವಾಮಿ ಕೇಂದ್ರ ಸಚಿವರಾಗಬಹುದು. ಇದೆ ಲೆಕ್ಕಾಚಾರದ ಅಡಿಯಲ್ಲಿ ಅವರು 2009ರಲ್ಲೂ ಲೋಕಸಭೆಗೆ ಸ್ಪರ್ಧಿಸಿದ್ದರು. ಚುನಾವಣೆ ಫಲಿತಾಂಶಕ್ಕೂ ಮೊದಲೇ ಸೋನಿಯಾಗಾಂಧಿಯವರನ್ನು ಭೇಟಿ ಮಾಡಿದ್ದರು. ಯುಪಿಎ ಸರ್ಕಾರಕ್ಕೆ ಪೂರ್ಣ ಬಹುಮತ ಬರದಿದ್ದಾಗ ಜೆಡಿಎಸ್ ಆರಂಭದಲ್ಲೇ ಭೇಷರತ್ ಬೆಂಬಲ ಘೋಷಿಸಿದ್ದು. ಅಷ್ಟೆಲ್ಲಾ ಮಾಡಿದ್ರೂ ಕಾಂಗ್ರೆಸ್ ಪಕ್ಷ ಕುಮಾರಸ್ವಾಮಿಯವರನ್ನು ಸರ್ಕಾರ ರಚನೆಯ ವೇಳೆ ಗಣನೆಗೆ ತೆೆಗದುಕೊಳ್ಳಲಿಲ್ಲ. ಮಂತ್ರಿ ಮಾಡಲಿಲ್ಲ. ಅದಾದ ನಂತರದ ಘಟನೆಗಳನ್ನು ಮೆಲುಕು ಹಾಕುವುದು ಈಗ ಸೂಕ್ತ.

ಕೇಂದ್ರದಲ್ಲಿ ಸಚಿವರಾಗದ ಮೇಲೆ ಕುಮಾರಸ್ವಾಮಿಯವರಿಗೆ ತಾವು ಯಾಕಾದರೂ ಸಂಸದನಾದೆನೋ ಎಂಬ ಜಿಗುಪ್ಸೆ ಶುರುವಾಗಿತ್ತು. ಯಡಿಯೂರಪ್ಪ ಸರ್ಕಾರದ ವಿರುದ್ಧ ಸದನದ ಒಳಗೆ ಮಾತನಾಡುವ ಅವಕಾಶ ಕೈ ತಪ್ಪಿ ಹೋಗಿದ್ದಕ್ಕೆ ಅನೇಕ ಬಾರಿ ಸುದ್ದಿಗೋಷ್ಟಿಗಳಲ್ಲಿ ಬೇಸರ ವ್ಯಕ್ತಪಡಿಸಿದ್ದರು. ಸಂಸದನಾಗಿ ತಾವು ಮಾಡುವಂತದ್ದೂ ಕೇಂದ್ರದಲ್ಲಿ ಏನೂ ಇಲ್ಲ ಎಂದು ಅರಿವಾದ ಮೇಲೆ ರಾಜ್ಯದಲ್ಲೇ ಉಳಿದು ರಾಜ್ಯ ಸರ್ಕಾರದ ವಿರುದ್ಧ ನಿರಂತರ ಟೀಕೆ ಆರಂಭಿಸಿದ್ದರು. ಆಗಿನ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಮಕ್ಕಳ ಭೂ ಹಗರಣವನ್ನು ಮೊದಲ ಬಾರಿಗೆ ವಿಧಾನಸೌಧದ ಜೆಡಿಎಸ್ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಕುಳಿತೇ ಮಾಧ್ಯಮದ ಮುಂದೆ ಬಿಚ್ಚಿಟ್ಟರು. 2010 ಅಕ್ಟೋಬರ್ ತಿಂಗಳಲ್ಲಿ ಯಡಿಯೂರಪ್ಪ ವಿರುದ್ಧ ಅವರ ಪಕ್ಷದ ಶಾಸಕರು ತಿರುಗಿಬಿದ್ದಾಗ ಅವರ ಬೆಂಬಲಕ್ಕೆ ಕುಮಾರಸ್ವಾಮಿ ನಿಂತರು. ಗೋವಾದಲ್ಲಿ ಹೋಗಿ ಭೇಟಿ ಮಾಡಿ ಬಂದಿದ್ದರು. ಸರ್ಕಾರ ಏನಾದ್ರೂ ಉರುಳಿದರೆ ಕಾಂಗ್ರೆಸ್ ಜೊತೆ ಸೇರಿ ಮೈತ್ರಿ ಸರ್ಕಾರ ರಚನೆಯ ಕನಸುಗಳನ್ನು ಕಂಡರು. ಕೊನೆಗೆ ಬಿಜೆಪಿಯ 16 ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಿದಾಗ ಅವರ ಬೆನ್ನಿಗೂ ನಿಂತರು. ಆದರೆ ಶಾಸಕರ ಅನರ್ಹತೆ ಬಿಟ್ಟರೆ ಆ ಬೆಳವಣಿಗೆಯಲ್ಲಿ ಕುಮಾರಸ್ವಾಮಿಯವರಿಗೆ ಬೇರೇನೂ ಲಾಭವಾಗಲಿಲ್ಲ. ಅಧಿಕಾರದ ಆಸೆಗಾಗಿ ಕುಮಾರಸ್ವಾಮಿ ಇಷ್ಟೆಲ್ಲಾ ಮಾಡಿದ್ರು ಅನ್ನೋ ಟೀಕೆಯನ್ನು ಎದುರಿಸಬೇಕಾಯಿತು.

ಇದೆಲ್ಲಾ ಈಗ ಮುಗಿದ ಅಧ್ಯಾಯ. ಮುಂದೆ 2013ರಲ್ಲಿ ವಿಧಾನಸಭೆ ಚುನಾವಣೆ ಎದುರಾದಾಗ ಕುಮಾರಸ್ವಾಮಿ ಇನ್ನಿಲ್ಲದಂತೆ ಶ್ರಮವಹಿಸಿ ಪಕ್ಷ ಸಂಘಟನೆಗೆ ದುಡಿದ್ರು. ಬಹುಷಃ ಚುನಾವಣೆಗೂ ಮೊದಲು ಸುಮಾರು ನಾಲ್ಕೈದು ತಿಂಗಳು ಅವರು ಎರಡು ರಾತ್ರಿಯನ್ನು ಒಂದೇ ಕಡೆ ಕಳೆದಿರಾರರು. ಇಡೀ ರಾಜ್ಯದ ಉದ್ದಗಲಕ್ಕೆ ಓಡಾಡಿದ್ರು. ಪಕ್ಷದ ಕಾರ್ಯಕರ್ತರನ್ನು ಸಂಘಟಿಸಿದ್ರು. ತಮ್ಮ ಪಕ್ಷಕ್ಕೆ ಏನೂ ಲಾಭವಾಗುವುದಿಲ್ಲ ಅಂತ ಗೊತ್ತಿದ್ದರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪಕ್ಷ ಸಂಘಟನೆಗಾಗಿ ದುಡಿದ್ರು. ಇದೆಲ್ಲದರ ಫಲವಾಗಿ 2008ರಲ್ಲಿ 28 ಸದಸ್ಯ ಬಲ ಹೊಂದಿದ್ದ ಜೆಡಿಎಸ್ ಎಲ್ಲಾ ಸಮೀಕ್ಷೆಗಳನ್ನು ಸುಳ್ಳಾಗಿಸಿ 40 ಸ್ಥಾನಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು. ಕುಮಾರಸ್ವಾಮಿಯವರು ವಿರೋಧ ಪಕ್ಷದ ನಾಯಕರಾಗಿಯೂ ಆಯ್ಕೆಯಾದರು. ಬಹುಷಃ ವಿಪಕ್ಷ ನಾಯಕರಾಗಿಯೇ ಮುಂದುವರೆಯಲು ಅವಕಾಶ ಸಿಗುತ್ತಿದ್ದರೆ ಕುಮಾರಸ್ವಾಮಿ ಲೋಕಸಭೆ ಕಡೆಗೆ ಯೋಚನೆ ಮಾಡಿರಲಾರರು. ಆದರೆ ಬಿಜೆಪಿ- ಕೆಜೆಪಿ ಒಂದಾದ ಮೇಲೆ ಕುಮಾರಸ್ವಾಮಿಯವರ ವಿರೋಧ ಪಕ್ಷ ನಾಯಕ ಸ್ಥಾನವೂ ಕಳೆದುಹೋಯಿತು. ಇದೆಲ್ಲದರ ಫಲವಾಗಿ ಕುಮಾರಸ್ವಾಮಿ ಈಗ ಮತ್ತೊಂದು ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರ ಲೆಕ್ಕಾಚಾರದಂತೆ ಅವರು ಈ ಚುನವಾಣೆಯಲ್ಲಿ ಗೆದ್ದು, ಕೇಂದ್ರದಲ್ಲಿ ತೃತೀಯ ರಂಗ ಸರ್ಕಾರ ಅಧಿಕಾರಕ್ಕೆ ಬಂದರೆ ಅವರು ಕೇಂದ್ರದಲ್ಲಿ ಸಚಿವರಾಗಬಹುದು.

ಯಾವುದೇ ಒಂದು ಪ್ರಾದೇಶಿಕ ಪಕ್ಷವನ್ನು ಅಧಿಕಾರವಿಲ್ಲದೆ ದೀರ್ಘಕಾಲ ಸಂಭಾಳಿಸಿಕೊಂಡು ಹೋಗುವುದು ಸುಲಭವಲ್ಲ. ಹೀಗಾಗಿ ಕುಮಾರಸ್ವಾಮಿಯವರು ಒಂದು ವೇಳೆ ಕೇಂದ್ರದಲ್ಲಿ ತಮಗೆ ಅಧಿಕಾರ ಸಿಕ್ಕರೆ ಆಗ ರಾಜ್ಯದಲ್ಲಿ ಪಕ್ಷ ಸಂಘಟನೆಗೆ ನೆರವಾಗಬಹುದು ಅಂತ ಲೆಕ್ಕಾಚಾರ ಹಾಕಿದ್ದರೆ ಪ್ರಸಕ್ತ ರಾಜಕೀಯ ದೃಷ್ಟಿಯಿಂದ ಅದು ಸರಿ ಅಂತ ಹೇಳಬಹುದು. ಆದರೆ ಅಲ್ಲಿ ಅಧಿಕಾರ ಸಿಗದಿದ್ದರೆ. ಆಗ ಮುಂದೇನು. ಕುಮಾರಸ್ವಾಮಿಯವರು ಗೆದ್ದರೆ ಸಂಸತ್‌ನಲ್ಲಿ ಹೋಗಿ ಕುಳಿತುಕೊಳ್ಳುತ್ತಾರಾ..? ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರಾ...? ರಾಜ್ಯದ ಪರ ಸಂಸತ್‌ನ ಒಳಗೆ ಹೋರಾಟ ಮಾಡ್ತಾರಾ...? ಈ ಎಲ್ಲಾ ಪ್ರಶ್ನೆಗಳಿಗೆ ಇತಿಹಾಸ ನೋಡಿದ್ರೆ ಹೌದು ಅನ್ನುವ ಉತ್ತರ ಸಿಗುವುದಿಲ್ಲ. ಅದೇನಿದ್ದರೂ ದೇವೇಗೌಡರಿಗಷ್ಟೇ ಸೀಮಿತ ಅನ್ನುವ ತೀರ್ಮಾನಕ್ಕೆ ಬಂದು ರಾಜ್ಯ ರಾಜಕಾರಣದ ವಿಚಾರದಲ್ಲಿ ಕುಮಾರಸ್ವಾಮಿ ಬ್ಯುಸಿಯಾಗುವ ಸಾಧ್ಯತೆಯೇ ಹೆಚ್ಚು.

ಇನ್ನೊಂದು ಅಂಶದ ಬಗ್ಗೆ ಇಲ್ಲಿ ಹೇಳಲೇ ಬೇಕು. ಕುಮಾರಸ್ವಾಮಿಯವರ ರಾಜಕಾರಣದ ಹಾದಿ ಹೀಗಿ ಸಾಗುತ್ತಿದ್ದರೆ ಅತ್ತ ಅವರ ತಂದೆ ದೇವೇಗೌಡರ ರಾಜಕಾರಣದ ಶೈಲಿಯನ್ನು ನೋಡಿ. ಅವರು ಮುಖ್ಯಮಂತ್ರಿಯಾಗಿದ್ದದ್ದು ಕೇವಲ 18 ತಿಂಗಳು. ಪ್ರಧಾನಿಯಾಗಿ 11 ತಿಂಗಳಿದ್ದರು. ಹಾಗಿದ್ದರೂ ಅವರು ಒಂದು ಸಮುದಾಯದ ಪ್ರಬಲ ನಾಯಕನಾಗಿ ಉಳಿದುಕೊಂಡಿದ್ದಾರೆ. ಅದಕ್ಕೆ ಕಾರಣ ಅವರ ಹೋರಾಟ. ಜನರ ಹೋರಾಟಗಳ ಜೊತೆಗೆ ( ಅದು ರಾಜಕೀಯ ಉದ್ದೇಶದಿಂದಲೇ ಕೂಡಿರಬಹುದು) ದೇವೇಗೌಡರು ಹೆಜ್ಜೆ ಹಾಕಿದ್ದಾರೆ. ಅವರ ಬಳಿಗೆ ನೇರವಾಗಿ ಜನ ಬಂದು ಅಪ್ಪಿಕೊಂಡು ಪ್ರೀತಿ ತೋರುವುದಿಲ್ಲ. ಆದರೆ ದೇವಗೌಡರು ಜನರಿದ್ದ ಕಡೆಗೆ ಹೋಗುತ್ತಾರೆ. ಅವರ ನಡುವೆ ಕುಳಿತುಕೊಳ್ಳುತ್ತಾರೆ. ಅವರ ಜೊತೆಗೆ ಹೆಜ್ಜೆಹಾಕುತ್ತಾರೆ. ಅವರಿಗೆ ಧ್ವನಿಯಾಗುತ್ತಾರೆ.

ಆದರೆ ಕುಮಾರಸ್ವಾಮಿಯವರದ್ದು ಇಲ್ಲಿ ವ್ಯತಿರಿಕ್ತ ನಿಲುವು. ಅವರ ಹೋರಾಟಗಳೇನಿದ್ದರೂ ಬಹುತೇಕ ಮಾಧ್ಯಮಗಳ ಸುದ್ದಿ ಗೋಷ್ಟಿಗೆ, ದಾಖಲೆಗಳ ಬಿಡುಗಡೆಗೆ ಸೀಮಿತ. ಇತ್ತೀಚೆಗೆ ಚಿಕ್ಕಮಗಳೂರಿನ ಕಳಸಾದಲ್ಲಿ ಅರಣ್ಯ ಒತ್ತುವರಿ ತೆರವು ವಿಚಾರದಲ್ಲಿ ಅಲ್ಲಿನ ನಿವಾಸಿಗಳ ಪರವಾಗಿ ರಸ್ತೆಗಿಳಿದಿದ್ದನ್ನು ಬಿಟ್ಟರೆ ಕುಮಾರಸ್ವಾಮಿಯವರ ಹೋರಾಟಗಳು ಜನರ ನಡುವೆ ಹೆಚ್ಚಾಗಿ ಕಾಣಿಸುವುದಿಲ್ಲ. ಅವರು ಹೋದಲ್ಲೆಲ್ಲಾ ಜನ ಮುತ್ತಿಕೊಳ್ಳುತ್ತಾರೆ. ಅವರ ಕೈ ಕುಲುಕುತ್ತಾರೆ.  ಜನಪ್ರಿಯತೆಯಿದೆ. ಆದರೆ ಅದು ವೋಟಾಗೋದಿಲ್ಲ. ಯಾಕಂದ್ರೆ ಅವರ ಬಗ್ಗೆ ಪ್ರೀತಿಯಿದ್ದರೂ ಕುಮಾರಸ್ವಾಮಿ ಜನರ ನಡುವೆ ಇಳಿದು ಮಾಡಿರುವ ಕೆಲಸಗಳು, ಹೋರಾಟಗಳು ವೋಟು ಹಾಕುವ ಮತದಾರನ ಕಣ್ಣಿಗೆ ಕಾಣುವುದಿಲ್ಲ. ಇದಕ್ಕಾಗಿ ಅವರು ಮತಹಾಕುವುದಿಲ್ಲ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಕುಮಾರಸ್ವಾಮಿಯವರ 20 ತಿಂಗಳ ಆಡಳಿತ ಅವಧಿಯ ಬಗ್ಗೆ ಮಾತನಾಡುವ ಜನ ಸಿಗ್ತಾರೆ. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲೂ ಅವರ ಅಭಿಮಾನಿಗಳಿದ್ದಾರೆ. ಆದರೆ ಕುಮಾರಸ್ವಾಮಿಗೆ ಚುನಾವಣೆ ಹತ್ತಿರವಾಗುವವರೆಗೆ ಜನರ ನಡುವೆ ಇಳಿದು ಕೆಲಸ ಮಾಡುವುದಿಲ್ಲ. ಯಾವುದೋ ಕಾರ್ಯಕ್ರಮಗಳಿಗೆ ಹೋಗಿ ಬರೋದನ್ನೇ ರಾಜ್ಯ ಪ್ರವಾಸ ಅಂತ ಪರಿಗಣಿಸುತ್ತಾರೆ. ಅವರ ಬಳಿ ಬಂದು ಜನ ತೋಡಿಕೊಳ್ಳುವ ಸಮಸ್ಯೆಯನ್ನೇ ಬಹುವಾಗಿ ಜನರ ಸಮಸ್ಯೆ ಅಂತಾರೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮವಾಸ್ತವ್ಯ ಮಾಡಿದ್ದವರು ಅಧಿಕಾರದಲ್ಲಿ ಇಲ್ಲದೇ ಇದ್ದಾಗ ಅದನ್ನು ಮಾಡಲು ಹೋಗುವುದಿಲ್ಲ.ಈಗ ಇದೆಲ್ಲವನ್ನೂ ಬಿಟ್ಟು ಮತ್ತೊಮ್ಮೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಇದು ಕುಮಾರಸ್ವಾಮಿಯವರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸುವ ಹಪಹಪಿಯನ್ನು ತೋರಿಸಿದೆ.

ಕುಮಾರಸ್ವಾಮಿಯವು ಅವಕಾಶಗಳನ್ನು ಅರಸುತ್ತಾ ಹೋಗುತ್ತಾರೆ. ಆದರೆ ಅವಕಾಶಗಳು ತಮ್ಮ ಕಾಲುಬುಡಕ್ಕೆ ಬರುವಂತೆ ಮಾಡುವುದಿಲ್ಲ. ಬಹುಷಃ ಅವರು ಮುಖ್ಯಮಂತ್ರಿಯಾಗಿದ್ದೂ ಅವಕಾಶಗಳನ್ನು ಅರಸುತ್ತಾ ಹೋಗಿದ್ದರಿಂದಲೇ. ದೇವೇಗೌಡರ ರೀತಿಯಲ್ಲಿ ತಮ್ಮದೇ ದುಡಿಮೆಯಿಂದ ಅಧಿಕಾರ ಅವರ ಕೈಗೆ ಬಂದಿಲ್ಲವಲ್ಲ!