Friday, April 25, 2014

ಇದು ಅಂತಿಂತಾ ಓಟವಲ್ಲ- ಸ್ವಾತಂತ್ರ್ಯದ ಓಟ!

" ಇದನ್ನು ರಿಟೈರ್‌ಮೆಂಟ್‌ ಆದ್ಮೇಲೆ ಓದೋಕೆಂದು ಬರೆದಿದ್ದಾ..?" ಪುಸ್ತಕದಂಗಡಿಯಲ್ಲಿ ಆ ಪುಸ್ತಕ ಎತ್ತಿಕೊಂಡಾಗ ತಮಾಷೆಗೆ ಹಾಗೆ ಹೇಳಿದ್ದೆ. ಯಾಕೆಂದರೆ ಪುಸ್ತಕದ ಗಾತ್ರ ಹಾಗಿತ್ತು. 200-300 ಪುಟದ ಪುಸ್ತಕವನ್ನೇ ಒಂದು ವಾರ ಓದುವ ನನಗೆ ಅನಾಮತ್ತು 1100ಕ್ಕೂ ಹೆಚ್ಚು ಪುಟಗಳ ಆ ಪುಸ್ತಕ ಕೈಗೆತ್ತಿಕೊಂಡಾಗ ಇದನ್ನು ಓದಿ ಮುಗಿಸೋದು ಯಾವಾಗ ಅನ್ನೋ ಪ್ರಶ್ನೆ ಕಾಡಿತ್ತು. ಕಾದಂಬರಿಯನ್ನು ನಿಧಾನವಾಗಿ ಓದಿದಷ್ಟೂ ಅದರ ಸುಖ ಜಾಸ್ತಿ. ಇನ್ನು ಈ ಪುಸ್ತಕ ಓದಿ ಮುಗಿಸಬೇಕೆಂದರೆ ನಾನು ರಿಟೈರ್ ಆದ ಮೇಲೆ ಮಾತ್ರ ಅಷ್ಟು ಟೈಂ ಸಿಗಬಹುದೇನೋ ಅನ್ನಿಸಿತ್ತು. ಅಂತೂ ಕೆಲಸದ ಬ್ಯುಸಿಯ ನಡುವೆ ಸುಮಾರು 2 ತಿಂಗಳ ಅಂತರದಲ್ಲಿ ಪುಸ್ತಕ ಓದಿ ಮುಗಿಸಿದೆ.

 ಅಂದಹಾಗೆ ಅದು - " ಸ್ವಾತಂತ್ರ್ಯದ ಓಟ". ಬೊಳುವಾರು ಮಹಮದ್ ಕುಂಞಿ ಬರೆದಿರುವ ಕಾದಂಬರಿ.

ಫೇಸ್‌ ಬುಕ್‌ನಲ್ಲಿ ಸ್ವಾತಂತ್ರ್ಯದ ಓಟದ ತುಣುಕುಗಳನ್ನು ಹಾಕಿ ಬೊಳುವಾರರು ಕಾದಂಬರಿಯ ಬಗ್ಗೆ ಹುಚ್ಚು ಹಿಡಿಸಿದ್ದರು. ಪುಸ್ತಕ ಓದಲೇ ಬೇಕೆಂದು ಡಿಸೈಡ್‌ ಮಾಡಿದ್ದೆ. ಈ ಬೊಳುವಾರರ ಕೃತಿಗಳು ಬಹುಬೇಗ ಮಾರಾಟವಾಗಿ ಹೋಗ್ತವೆ. ಅವರ ಹಳೆಯ ಪುಸ್ತಕಗಳಿಗಾಗಿ ಅದೆಷ್ಟೋ ಪುಸ್ತಕದಂಗಡಿಗಳಲ್ಲಿ ಹುಡುಕಾಡಿ ಪಾಡು ಪಟ್ಟಿದ್ದೇನೆ. ಇನ್ನು ಈ ಪುಸ್ತಕವೂ ಕೈ ತಪ್ಪಬಾರದೆಂದು ಕಾದಂಬರಿ ತಂದು ಕುಳಿತೆ.

ಪುಸ್ತಕದ ಗಾತ್ರ ಮೊದಲು ಹೆದರಿಸಿದ್ದರೂ ಓದಲು ಆರಂಭಿಸುತ್ತಿದ್ದಂತೆ ಓಟ ಶುರು. ಓಡುತ್ತಾ, ನಲಿಯುತ್ತಾ, ನಗುತ್ತಾ, ಕಿವುಚುತ್ತಾ, ಕರಗುತ್ತಾ, ಮರುಗುತ್ತಾ ಸಾಗಿದ ಈ ಓಟ ಮುಗಿದಾಗ ಮನಸ್ಸಿನ ತುಂಬಾ ವಿವರಿಸಲಾಗದ ವಿಶಿಷ್ಟ ಅನುಭೂತಿ.

ಕಾದಂಬರಿಯೊಂದು ತನ್ನ ಒಟ್ಟು ವಸ್ತುವಿನ ಮೂಲಕ ಯಾವುದೋ ಒಂದು ಕಾಲಘಟ್ಟದಲ್ಲಿ ಘಟಿಸುತ್ತದೆ. ಹಾಗೇನೇ ಆ ಸಮಯದ ಪ್ರಧಾನ ವಿಚಾರಧಾರೆಗಳ ಜೊತೆಗೆ ಸಂವಾದ ಅಲ್ಲಿನ ಪಾತ್ರಗಳ ಮೂಲಕ ನಡೆದುಹೋಗುವುದು ಸಾಮಾನ್ಯ. ಆದರೆ ಸ್ವಂತತ್ರ ಭಾರತದ ಅರ್ಧ ಶತಮಾನದುದ್ದಕ್ಕೂ ನಡೆಯುವ ಘಟನೆಗಳಿಗೆ ಸಾಕ್ಷಿಪ್ರಜ್ಞೆಯಾಗಿ ನಿಲ್ಲುವ ಕಾದಂಬರಿಯ ವಸ್ತುವೇ ಅಪೂರ್ವ.

ಎಲ್ಲಿಯ ಪಾಕಿಸ್ತಾನದ ಲಾಹೋರ್ ಸಮೀಪದ ಬಹವಾಲಪುರ ಎಲ್ಲಿಯ ಪುತ್ತೂರಿನ ಪಕ್ಕದಲ್ಲಿರುವ ಬೊಳುವಾರರ ಮುತ್ತುಪ್ಪಾಡಿ. ಎತ್ತಣದಿಂದೆತ್ತಣಕ್ಕೆ ಸಂಬಂಧವಯ್ಯ ಅಂತ ಅಚ್ಚರಿಯಾಗುತ್ತದೆ. ಆದರೆ ಬೊಳುವಾರರು ಸಂಬಂಧ ಹೆಣೆದಿದ್ದಾರೆ. ಸ್ವತಂತ್ರ ಭಾರತದಲ್ಲಿ ಘಟಿಸಿದ ಅನೇಕ ಘಟನೆಗಳು, ಅವು ಹಳ್ಳಿಗಳ ಜನಜೀವನದ ಮೇಲೆ ಬೀರುತ್ತಾ ಸಾಗಿದ ಪರಿಣಾಮಗಳು ಕಾದಂಬರಿಯಲ್ಲಿ ಘಟಿಸುತ್ತಾ ಹೋಗುತ್ತದೆ. ಅದೇ ಕಾರಣಕ್ಕೆ ಇದು ಕೇವಲ ಕಾದಂಬರಿಯಲ್ಲ. ಸ್ವತಂತ್ರ ಭಾರತದ ಅನೇಕ ಘಟನಾವಳಿಗಳನ್ನು ಕಾದಂಬರಿಯ ಮೂಲಕ ಹೇಳುತ್ತಾ ಸಾಗಿದ ಇತಿಹಾಸದ ಪುಸ್ತಕವೇನೋ ಅಂತ ಕೆಲವೊಮ್ಮೆ ಭಾಸವಾಗುತ್ತೆ. ಅದರಲ್ಲೂ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಘಟಿಸಿ ಹೋದ ಅನೇಕ ಘಟನೆಗಳು ಕಾಂದಬರಿಯ ಪಾತ್ರಗಳ ಜೊತೆಗೇ ಘಟಿಸುತ್ತದೆ. ಈ ಪಾತ್ರಗಳು ಅವಕ್ಕೆ ಸಾಕ್ಷಿ. ಹೀಗಾಗಿ ಇವರೆಲ್ಲರೂ ಇತಿಹಾಸದ  ಒಂದು ಭಾಗ.

ಸಾಮಾನ್ಯವಾಗಿ ಕಾದಂಬರಿಯಲ್ಲಿ ವಾಸ್ತವದಲ್ಲಿ ಇರದ ವ್ಯಕ್ತಿಗಳೇ ಪಾತ್ರಗಳಾಗುವುದು ಸಹಜ. ಅದಕ್ಕೆ ಕಾದಂಬರಿ ಅನ್ನೋದು. ಕಥೆಯಲ್ಲಾದರೂ ಅಷ್ಟೇ. ಆದರೆ ಸ್ವಾತಂತ್ರ್ಯದ ಓಟದಲ್ಲಿ ಹಾಗಲ್ಲ. ಇಲ್ಲಿ ಬಂದುಹೋಗುವ ಕೆಲವು ವ್ಯಕ್ತಿಗಳು ಪುತ್ತೂರಿನ ಸುತ್ತಮುತ್ತಲ ಪರಿಸರದಲ್ಲಿರುವ ವ್ಯಕ್ತಿಗಳು. ಹೀಗಾಗಿ ಕಾದಂಬರಿ ಸಮಾಕಾಲೀನ ಘಟನೆಗಳ ಜೊತೆಗೇ ಸಾಗುತ್ತದೆ.

ಕಾದಂಬರಿಯಲ್ಲಿ ಬಹುವಾಗಿ ಕಾಡುವುದು ಚಾಂದ್‌ ಅಲೀಯ ಪಾತ್ರ . ಚಾಂದ್ ಅಲೀ, ಚಾಂದಚ್ಚನಾಗಿ, ಚಾಂದಜ್ಜನಾಗುವವರೆಗೆ ಆತ ಇಡೀ ಕಾದಂಬರಿಯ ನಾಯಕ ಪಾತ್ರವಾಗಿ ಕಾಣಿಸಿಕೊಳ್ಳುತ್ತಾನೆ. ಆತನ ಬದುಕು, ಆತನ ನಡೆ ನುಡಿ ಇವೆಲ್ಲವೂ ಓದುಗನನ್ನು ಖಂಡಿತವಾಗಿ ವಿನೀತವಾಗಿಸುತ್ತೆ. ಹೆಚ್ಚು ಮೃದುವಾಗುವಂತೆ ಮಾಡುತ್ತೆ. ಅಪಾಯಗಳ ಸಂದರ್ಭದಲ್ಲೂ ತೋರಬೇಕಾದ ಸಮಚಿತ್ತವನ್ನು ತೋರಿಸಿಕೊಡುತ್ತೆ. ಆದರೆ ಆತನೊಳಗೆ ಬಚ್ಚಿಟ್ಟಿದ್ದ ಸತ್ಯಗಳನ್ನು ಯಾರ ಜೊತೆಯೂ ಹೇಳಲಾಗದೆ ಆತ ಪಡುವ ಪಾಡು ಮಾತ್ರ ಯಾರಿಗೂ ಬೇಡ ಅನ್ನಿಸುತ್ತೆ.

ಇನ್ನೊಂದು ಬಹುಮುಖ್ಯ ಪಾತ್ರ ಮಿಠಾಯಿ ಅವುಲಿಯಾ ಅಲಿಯಾಸ್ ಜೋಳಿಗೆ ಬಾಬಾ ಅಲಿಯಾಸ್ ಬದ್ರುದ್ದೀನ್‌ರದ್ದು. ಬಹುಷಃ ಧರ್ಮದ ನೆಲೆಗಟ್ಟಿನ ಆಧಾರದಲ್ಲಿ ನೋಡುತ್ತಾ ಹೋದಾಗ ಹಾಗೂ ಧರ್ಮ ಮತ್ತು ಬದುಕಿನ ವಾಸ್ತವಗಳಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಅನ್ನುವ ವಿಚಾರಗಳಲ್ಲಿ ಬಾಬಾನ ದೃಷ್ಟಿಕೋನ ಹೊಸ ನೋಟವನ್ನು ತೋರುತ್ತೆ. ಹೊಸ ದಾರಿದೀಪವಾಗುತ್ತಾ ಸಾಗುತ್ತೆ. ಆದರೆ ಮುಂದೆ ಘಟಿಸುವ ವಿಚಾರಗಳ ಬಗ್ಗೆಯೂ ಹೇಳಬಲ್ಲವರಂತೆ ಕಾಣುವ ಅವುಲಿಯಾ ಬಗ್ಗೆ ಕಾದಂಬರಿ ಓದಿ ಮುಗಿಸಿದಾಗ ನನ್ನ ಮನಸ್ಸಲ್ಲೊಂದು ಆಕ್ಷೇಪ ಹುಟ್ಟಿಕೊಂಡಿತ್ತು. ಅಷ್ಟೆಲ್ಲಾ ಗೊತ್ತಿದ್ದರೂ ಚಾಂದ್‌ ಅಲೀ ಹುಡುಕುತ್ತಿದ್ದ ತನ್ವೀರ್ ಹಾಗೂ ಮೊಹಿಂದರ್ ಎಲ್ಲಿದ್ದಾರೆಂದು ಬಾಬಾ ಯಾಕೆ ಹೇಳಲಿಲ್ಲಾ ಅನ್ನೋದೇ ನನ್ನ ಆಕ್ಷೇಪ. ಆದರೆ ಬೊಳುವಾರರು ಬಾಬಾನ ಬಾಯಲ್ಲಿ ಅಗತ್ಯ ಬಿದ್ದದ್ದನ್ನು ಮಾತ್ರ ಹೇಳಿಸಿ ಕಾದಂಬರಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.

ಆಗಲೇ ಹೇಳಿದೆ ಇದು ಇತಿಹಾಸಕ್ಕೆ ಸಾಕ್ಷಿಯಾಗುತ್ತಾ ಸಾಗಿದ ಕಾದಂಬರಿ ಅನ್ನೋದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು ಇಂದಿರಾಗಾಂಧಿ ವಿರುದ್ಧ ಘೋಷಣೆ ಕೂಗಿದ್ದರಂತೆ. ಆ ಕಾರಣಕ್ಕೆ ವಿದ್ಯಾರ್ಥಿಗಳನ್ನು ಅರೆಸ್ಟ್‌ ಮಾಡಿ ಜೈಲಿಗಟ್ಟಿದ್ದರಂತೆ. ಆದರೆ ನಾನು ಈ ಕಾದಂಬರಿ ಓದುವವರೆಗೂ ನನಗೆ ಈ ವಿಚಾರ ತಿಳಿದಿರಲಿಲ್ಲ. ಕಾದಂಬರಿ ಓದುವಾಗಲೂ ಇದು ಕಾಲ್ಪನಿಕ ಇರಬಹುದು ಅಂತಷ್ಟೇ ಅಂದುಕೊಂಡಿದ್ದೆ. ಆದರೆ ಮೊನ್ನೆ ಒಬ್ಬರು ಇತಿಹಾಸ ಪ್ರೊಫೆಸರ್ ಜೊತೆ ಮಾತನಾಡುತ್ತಿದ್ದಾಗ ಅವರು ಈ ವಿಷಯವನ್ನು ಪ್ರಸ್ತಾಪಿಸಿದ್ರು. ವಿದ್ಯಾರ್ಥಿಗಳ ಆ ಒಂದು ಹೋರಾಟ ಬಿಟ್ಟರೆ ಇಡೀ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಅಂತಹ ದೊಡ್ಡ ಪ್ರತಿಭಟನೆಗಳು ನಡೆದಿರಲಿಲ್ಲ ಅಂತ ಅವರು ವಿವರಿಸುತ್ತಿದ್ದರು. ಹೀಗೆ ಇತಿಹಾಸದ ಘಟನೆಗಳು ಈ ಕಾದಂಬರಿಯ ಮೂಲಕ ನಮ್ಮನ್ನು ತಲುಪಿವೆ.

ನಾನು ಬೆಳೆದ ಪರಿಸರ ಹಾಗೂ ನನ್ನ ಬುದ್ಧಿ ಬೆಳೆಯುತ್ತಾ ಸಾಗಿದ ಅವಧಿ ರಾಮಜನ್ನಭೂಮಿಯ ಹೆಸರಲ್ಲಿ ಬಾಬರಿ ಮಸೀದಿಯನ್ನು ಕೆಡವಿದ ಅವಧಿ. ಆಗ ನಮ್ಮ ಊರುಗಳಲ್ಲಿ ನಡೆದ ಅವಾಂತರಗಳು ಒಂದೆರಡಲ್ಲ. ಪುತ್ತೂರು ಮತ್ತು ಸುಳ್ಯ ಆಗ ಅಕ್ಷರಷಃ ಬೆಂದುಹೋಗಿತ್ತು. ಆದರೆ ಬೊಳುವಾರರ ಮುತ್ತುಪ್ಪಾಡಿಯಲ್ಲಿ ಚಾಂದ್ ಅಲೀ, ಅನಂತಣ್ಣ, ಪಂಡಿತರಂತಹ ಕೆಲವರು ಅದರಲ್ಲೂ ಇಸ್ಪೀಟ್ ಖಾದರ್ ಹಾಗೂ ಜೊಯಿಸರ ಮಗ ಸೇರಿಕೊಂಡು ಮಾಡಿದ ಕ್ರಮಗಳನ್ನು ಅದ್ಯಾಕೋ ನಮ್ಮ ಊರುಗಳಲ್ಲಿ ಮಾಡಲು ಸಾಧ್ಯವಾಗಲೇ ಇಲ್ಲ. ಅಂದು ನಮ್ಮ ಊರಲ್ಲಿ ಎಲ್ಲರಿಗೂ ಒಳ್ಳೆಯದನ್ನು ಬಯಸುವ, ಖಾಯಿಲೆಗಳಿಗೆ ಮಂತ್ರಿಸಿದ ನೀರನ್ನು ಕೊಡುತ್ತಿದ್ದ 'ಧರ್ಮತನ್ನಿ' ಎಂದೇ ಕರೆಸಿಕೊಳ್ಳುತ್ತಿದ್ದ ( ಅವರ ಹೆಸರು ಈಗಲೂ ನನಗೆ ನೆನಪಾಗುವುದಿಲ್ಲ) ಅವರ ಅಂಗಡಿ ಬೆಂಕಿ ಇಟ್ಟಿದ್ದರು. ಬಾಬರಿ ಮಸೀದಿ ಧ್ವಂಸ ಮಾಡಿದವರಿಗೆ ನಮ್ಮೂರಿನ ಧರ್ಮತನ್ನಿಯ ಅಂಗಡಿಗೆ ಬೆಂಕಿ ಹಚ್ಚಿದ್ದರಿಂದ ಏನು ಸಮಾಧಾನ ಸಿಕ್ಕಿತೋ ನನಗೆ ಈಗಲೂ ಅರ್ಥವಾಗುವುದಿಲ್ಲ. ಆದರೆ ಈ ಎಲ್ಲಾ ಘಟನೆಯಿಂದ ನಮ್ಮ ಊರುಗಳಲ್ಲಿ ಅದುವರೆಗೆ ಅನ್ಯೋನ್ಯವಾಗಿದ್ದ ಹಿಂದೂ ಮುಸಲ್ಮಾನರ ನಡುವೆ ಸಂಶಯದ ಬೀಜ ಬಿತ್ತಲು ಯಶಸ್ವಿಯಾದವರು ಇಂದು ಅದರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಕಾದಂಬರಿ ಓದುತ್ತಿದ್ದಾಗ ಈ ಎಲ್ಲಾ ಘಟನೆಗಳು ಅದೇಕೋ ಮನಸ್ಸಿಗೆ ತುಂಬಾ ಕಾಡಲಾರಂಭಿಸಿತ್ತು.

ಕಾದಂಬರಿಯಲ್ಲಿ ಬರುವ ಒಂದು ಅಂಶವನ್ನು ಪ್ರಸ್ತಾಪಿಸಲೇಬೇಕು. ಅದು ಪ್ರವಾದಿಯವರ ಚಿತ್ರಪಟದ ಮಾರಾಟದ್ದು. ಪ್ರವಾದಿಯವರ ಚಿತ್ರಪಟವನ್ನು ಮುತ್ತುಪ್ಪಾಡಿಯಲ್ಲಿ ಹಂಚಿದ ಫಕೀರ ಅಲ್ಲಿಂದ ಕಾಲ್ಕಿತ್ತಿರುತ್ತಾನೆ. ಆದರೆ ಖರೀದಿ ಮಾಡಿದವರು ಚಿತ್ರಪಟ ಖರೀದಿಸಿದ್ದರಿಂದ ತಮಗೆ ಲಾಭವಾಗಿದೆ ಅಂದುಕೊಂಡಿರುತ್ತಾರೆ. ಇದರ ಬಗ್ಗೆ ಹಲವು ಚರ್ಚೆಗಳು ನಡೀತವೆ. ಅಂತಿಮವಾಗಿ ಸೂಫಿಯಜ್ಜ ಕೊಡುವ ಉದಾಹರಣೆ ಹೆಚ್ಚು ಮನಸ್ಸಿಗೆ ನಾಟುತ್ತದೆ. ಹಿಂದೂ ದೇವರುಗಳು ಅದೆಷ್ಟೋ ಸಾವಿರ ವರ್ಷಗಳ ಹಿಂದೆ ಇದ್ದರಂತೆ. ಅವರ ಚಿತ್ರಪಟಗಳನ್ನಿಟ್ಟು ಪೂಜೆ ಮಾಡುತ್ತಾರೆ. ಹಾಗಿರುವಾಗ ಕೇವರ ಸಾವಿರದೈನೂರು ವರ್ಷಗಳ ಹಿಂದೆ ಇದ್ದ ನಮ್ಮ ಪ್ರವಾದಿಯವರ ಚಿತ್ರಪಟ ಯಾಕಿರಬಾರದು ಎಂದು ಪ್ರಶ್ನಿಸಿ, ಅವರನ್ನು ಹಂಗಿಸಲು ಮುಂದಾದವರ ಬಾಯಿಮುಚ್ಚಿಸುತ್ತಾರೆ.

ಇಂತಹ ಅನೇಕ ಘಟನೆಗಳು ಈ ಕಾದಂಬರಿಯುದ್ದಕ್ಕೂ ಸಾಗುತ್ತವೆ. ಹಾಗೆಯೇ ಬೊಳುವಾರರ ಬರಹದಲ್ಲಿನ ಸೂಕ್ಷ್ಮತೆಯನ್ನು ಓದಿಯೇ ಅನುಭವಿಸಬೇಕು. 1082 ಪುಟಗಳ ಕಾದಂಬರಿಯಲ್ಲಿ ಸಣ್ಣಪುಟ್ಟ ವಸ್ತುಗಳು ಬದಲಾದಾಗಲೂ ಅದಕ್ಕೊಂದು ವಿವರಣೆ ಸಿಗುತ್ತದೆ. ಹಾಗೆಯೇ ಮಹಾಭಾರತದಲ್ಲೋ, ರಾಮಯಣದಲ್ಲೊ ಬರುವಷ್ಟು ಪಾತ್ರಗಳು ಈ ಬೃಹತ್ ಕಾಂದಬರಿಯಲ್ಲಿ ಬಂದು ಹೋಗುತ್ತವೆ. ಆ ಎಲ್ಲಾ ಪಾತ್ರಗಳು ಒಂದಕ್ಕಿಂತ ಒಂದು ಹೆಚ್ಚು ಪ್ರಾಮುಖ್ಯ, ಕಡಿಮ ಪ್ರಾಮುಖ್ಯ ಅನ್ನಿಸುವುದಿಲ್ಲ. ಮಲೆಗಳಲ್ಲಿ ಮದುಮಗಳು ಕಾದಂಬರಿಯ ಆರಂಭದಲ್ಲಿ ಕುವೆಂಪು - ಇಲ್ಲಿ ಎಲ್ಲರೂ ಸಮಾನರು ಅನ್ನುವಂತೆ; ಸ್ವಾತಂತ್ರ್ಯದ ಓಟದಲ್ಲಿನ ಎಲ್ಲ ಪಾತ್ರಗಳೂ ಸಮಾನವೇ. ಕಾದಂಬರಿಯ ಒಂದು ಕಡೆಯಲ್ಲಿ ಬರುವ ಸಾಲುಗಳು - ಸ್ವಾತಂತ್ರ್ಯದ ಓಟದಲ್ಲಿ ಎಲ್ಲರೂ ಸಮಾನರೇ. ಇಲ್ಲಿ ಮೇಲು ಕೀಳಿಲ್ಲ ಅನ್ನುವಂತೆ ಎಲ್ಲಾ ಪಾತ್ರಗಳೂ ಸಮಾನವೇ. ಚಾಂದ್‌ ಅಲೀ ಪಾತ್ರ ಇಡೀ ಕಾದಂಬರಿಯುದ್ದಕ್ಕೂ ಬರುವುದರಿಂದ ಅದು ನಾಯಕ ಪಾತ್ರವಾದರೂ ಸಿನಿಮಿಬ್ರಾಯಿಯನ್ನೋ, ಸುಮತಿಯಕ್ಕಳನ್ನೋ, ಬೂಬಮ್ಮಳನ್ನೋ, ಉಸ್ಮಾನ್ ಅಲಿಯಾಸ್ ಉಮೇಶನನ್ನೋ, ಸಕೀನಾಳನ್ನೋ ನಾವು ಕಡಿಮೆ ತೂಕದ ಪಾತ್ರ ಅನ್ನುವಂತಿಲ್ಲ. ಆದರೆ ಪ್ರತಿಯೊಂದು ಪಾತ್ರ ಬಂದಾಗಲೂ ಅವರನ್ನು ಕಾದಂಬರಿಕಾರ ಪರಿಚಯಿಸುವ ರೀತಿ ನಿಜಕ್ಕೂ ಖುಷಿಕೊಡುತ್ತದೆ. ಅದು ಒಂದು ಸಾಲಿನ ಪರಿಚಯವಾದರೂ ಆಗಬಹುದು ಒಂದು ಪುಟದ ಪರಿಚಯವಾದರೂ ಸರಿಯೇ. ಅವರ ಪಾತ್ರಕ್ಕೆ ಒಗ್ಗುವ ರೀತಿಯಲ್ಲಿ ಪರಿಚಯಿಸಿ ಮುಂದಕ್ಕೆ ಸಾಗುತ್ತಾರೆ.

ಕಾದಂಬರಿಯನ್ನು ಓದಿ ಮುಗಿಸಿದಾಗ ಅದನೋ ಅವ್ಯಕ್ತ ಭಾವನೆ ಮನಸ್ಸಲ್ಲಿ ಮೂಡುತ್ತದೆ. ಮನಸ್ಸನ್ನು ಹಗುರಗೊಳಿಸುತ್ತದೆ. ಜೊತೆಗೆ ಇತಿಹಾಸ ತುಂಬ ಕಾಡುತ್ತದೆ. ಬದುಕಿನ ವೈಚಿತ್ರ್ಯಗಳು ಬೆರಗುಗೊಳಿಸುತ್ತವೆ. ಹುಟ್ಟು ಸಾವಿನ ನಡುವೆ ಮನುಷ್ಯ ಆಡುವ ಆಟಗಳು ಅಸಹ್ಯ ಮೂಡಿಸುತ್ತವೆ. ನಮ್ಮ ಬದುಕಿಗೊಂದು ಹೊಸ ಬಣ್ಣ ಹಚ್ಚಿಕೊಳ್ಳಲು, ಹೊಸ ದಾರಿಯಲ್ಲಿ ಸಾಗಲು ಪ್ರೇರಣೆಯಾಗುತ್ತದೆ.

ಖಂಡಿತವಾಗಿ ಈ ಕಾದಂಬರಿ ಕನ್ನಡದ ಶ್ರೇಷ್ಟ ಕಾದಂಬರಿಗಳ ಸಾಲಿನಲ್ಲಿ ನಿಲ್ಲುತ್ತದೆ.

Wednesday, April 2, 2014

ಉಳಿದವರು ಕಂಡಂತೆ - ಕಂಡಿದ್ದು ಕಾಣದ್ದು

ಸಿನಿಮಾ ನೋಡಲು ಕುಳಿತವನಿಗೆ ಇದ್ದಕ್ಕಿದ್ದಂತೆ ರಷೋಮನ್ ನೆನಪಾಯಿತು. ಒಂದು ಕೊಲೆಯನ್ನು ಬೇರೆ ಬೇರೆ ದೃಷ್ಟಿಕೋನದಲ್ಲಿ ಸೆರೆಹಿಡಿದ ಸಿನಿಮಾ ರಷೋಮನ್‌. ಅದು ಸಾರ್ವಕಾಲಿಕ ಕ್ಲಾಸಿಕ್‌ ಸಿನಿಮಾ. ಅಕಿರಾ ಕುರುಸೋವಾನ ಮಾಸ್ಟರ್ ಪೀಸ್. ಒಂದು ಕೊಲೆಯ ಸುತ್ತ ಹೆಣೆದ ಕುತೂಹಲಕರ ಕಥಾಹಂದರ ರಷೋಮನ್.

'ಉಳಿದವರು ಕಂಡಂತೆ' ಸಿನಿಮಾ ನೋಡುತ್ತಾ ಕುಳಿತಿದ್ದಾಗ ನೆನಪಾಗಿದ್ದು ರಷೋಮನ್‌. ಅದು ಆರಂಭದಲ್ಲಿ ಒಮ್ಮೆ ಮಾತ್ರ. ಕಾರಣ ಇಷ್ಟೇ. ಇಲ್ಲೂ ಒಂದು ಕೊಲೆಯನ್ನು ಉಳಿದವರು ಕಂಡಂತೆ ದಾಖಲಿಸಲಾಗಿದೆ. ಪತ್ರಕರ್ತೆಯಾಗಿ ಕಾಣಿಸಿಕೊಂಡಿರುವ ಶೀತಲ್ ಶೆಟ್ಟಿ ಕೊಲೆಯನ್ನು ಬೇರೆ ಬೇರೆಯವರ ದೃಷ್ಟಿಯಿಂದ ದಾಖಲಿಸುತ್ತಾ ಹೋಗುತ್ತಾರೆ. ಹೀಗಾಗಿ ಇದೂ ಕೂಡ ಒಂದು ಕೊಲೆಯ ಸುತ್ತ ಗಿರಕಿಹೊಡೆಯುವ ಸಿನಿಮಾ. ಆದರೆ ಇಲ್ಲಿ ಒಂದಕ್ಕಿಂತ ಹೆಚ್ಚು ಕೊಲೆ ನಡೆದಿದೆ. ಇದರಿಂದಾಗಿ ಉಳಿದವರು ಯಾವ ಕೊಲೆಯನ್ನು ಕಂಡರು ಅನ್ನೋದು ಸ್ವಲ್ಪ ಗೊಂದಲ ಹುಟ್ಟಿಸುತ್ತೆ.

ಸಿನಿಮಾದ ಪ್ಲಸ್‌ ಪಾಯಿಂಟ್‌ ರಕ್ಷಿತ್ ಶೆಟ್ಟಿ. ರಕ್ಷಿತ್‌ ಶೆಟ್ಟಿ ಕಾಣಿಸಿಕೊಂಡಾಗೆಲ್ಲಾ ನಗು ತೇಲಾಡುತ್ತೆ. ರಿಚ್ಚಿಯಾಗಿ ತಿಕ್ಕಲು ತಿಕ್ಕಲಾಗಿ ಕಾಣಿಸಿಕೊಳ್ಳುವ ರಕ್ಷಿತ್‌ ಶೆಟ್ಟಿ ಚಂದಗೆ ಅಭಿನಯಿಸಿದ್ದಾರೆ. ಇನ್ನು ಕಿಶೋರ್‌ ಕೂಡ ಎಂದಿನಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಬರುವ ಪಾತ್ರಗಳೆಲ್ಲವೂ ಸಣ್ಣವೇ. ಆದರೆ ಪ್ರತಿಯೊದು ಪಾತ್ರಕ್ಕೂ ತನ್ನದೇ ಆಳ ಅಗಲವಿದೆ. ಅಂತದ್ದೇ ಒಂದು ಪಾತ್ರ ಪುಟಾಣಿ ಹುಡುಗ ಡೆಮಾಕ್ರಸಿಯದ್ದು.

ಚಿತ್ರದ ಸಂಭಾಷಣೆ ಬಗ್ಗೆ ಹೇಳಲೇಬೇಕು. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರದಲ್ಲಿ ನಡೆಯುವ ಕತೆ. ಅದಕ್ಕೆ ತಕ್ಕಂತೆ ಇಲ್ಲಿ ಭಾಷೆ ಬಳಕೆಯಾಗಿದೆ. ತುಳು - ಕನ್ನಡ - ಕುಂದಗನ್ನಡ ಸಂಭಾಷಣೆ ಆ ಪರಿಸರವನ್ನು ಪ್ರತಿಬಿಂಬಿಸುತ್ತೆ. ಸಾಮಾನ್ಯವಾಗಿ ದಕ್ಷಿಣ ಕನ್ನಡ ಭಾಗದ ಕನ್ನಡವನ್ನು ಕಾಶೀನಾಥ್ ಸಿನಿಮಾಗಳಲ್ಲಿ ನೋಡಿದ್ದೇವೆ. ತೀರಾ ನಾಟಕೀಯವಾಗಿ ಕಾಶಿನಾಥ್‌ ಸಿನಿಮಾಗಳಲ್ಲಿ ದಕ್ಷಿಣ ಕನ್ನಡದ ಕನ್ನಡ ಬಳಕೆಯಾಗಿದೆ. ಉಪೇಂದ್ರರ ಬುದ್ಧಿವಂತ ಸಿನಿಮಾದಲ್ಲೂ ಅಷ್ಟೇ. ಆದರೆ ನಿರ್ದೇಶಕರೂ ಆಗಿರುವ ರಕ್ಷಿತ್‌ ಶೆಟ್ಟಿ ಅಲ್ಲಿನ ಭಾಷೆಯನ್ನು ಯಥಾವತ್ತಾಗಿ ಸಿನಿಮಾದ ಸಂಭಾಷಣೆಯಲ್ಲಿ ಬಳಸಿದ್ದಾರೆ. ಇದರಲ್ಲಿ ಭಾಷೆ ನಾಟಕೀಯವಾಗಿ ಕೇಳಿಸುವುದಿಲ್ಲ. ಬದಲಿಗೆ ಅವಿಭಜಿತ ದಕ್ಷಿಣ ಕನ್ನಡದ ಮಾತಿನ ಶೈಲಿಯನ್ನು ಅದೇ ರೀತಿಯಾಗಿ ಹಿಡಿದಿಟ್ಟಿದ್ದಾರೆ.  ರಕ್ಷಿತ್‌ ಶೆಟ್ಟಿಯ ಸೂಕ್ಷ್ಮತೆ ಇದರಲ್ಲಿ ಗೆದ್ದಿದೆ.

ಸಿನಿಮಾದ ನಿಧಾನವಾಗಿ ಸಾಗುತ್ತೆ. ಅಲ್ಲೊಮ್ಮೆ ಇಲ್ಲೊಮ್ಮೆ ಕೆಲವೊಂದು ಸೀನ್‌ಗಳು ತೀರಾ ನಾಟಕೀಯ ಅನ್ನಿಸೋದೂ ಇದೆ. ನಿಧಾನ ಗತಿಯಲ್ಲಿ ಸಾಗುವುದರಿಂದ ಕೆಲವೊಮ್ಮೆ ಬೋರ್‌ ಹೊಡೆಸುತ್ತೆ. ಹಾಗಂತ ಸಿನಿಮಾದಲ್ಲಿ ಮನರಂಜನೆಗೆ - ನಗುವಿಗೆ ಕೊರತೆಯಿಲ್ಲ. ಇದೆಲ್ಲಕ್ಕಿಂತ ಹೆಚ್ಚಾಗಿ ಇದೊಂದು ವಿಭಿನ್ನ ಪ್ರಯೋಗ. ಕನ್ನಡ ಸಿನಿಮಾದಲ್ಲಿ ಹೊಸ ಪ್ರಯೋಗ ಮಾಡುವ ನಿರ್ದೇಶಕನಿಗೆ ಗಟ್ಟಿ ಗುಂಡಿಗೆ ಬೇಕು. ಯಾಕಂದರೆ ಹೊಸ ಪ್ರಯೋಗಗಳನ್ನು ಜನ ಹೋಗಲಿ ಸಿನಿಮಾದ ಬಗ್ಗೆ ವಿಮರ್ಶೆ ಬರೆಯುವವರೇ ಮೆಚ್ಚಿಕೊಳ್ಳುವುದು ಕಷ್ಟ. ಈ ಸಿನಿಮಾದ ಬಗ್ಗೆ ಬರೆದ ವಿಮರ್ಶೆಗಳಲ್ಲಿ ಕೆಲವರು ಸಿನಿಮಾ ನೋಡೋದೇ ವ್ಯರ್ಥ ಅಂತೆಲ್ಲಾ ಬರೆದಿದ್ದಾರೆ. ಬರೆಯೋದು ಸುಲಭ. ಆದರೆ ಸಿನಿಮಾ ಮಾಡೋದು ಕಷ್ಟದ ಕೆಲಸ. ನೋಡೋದು ಬಿಡೋದು ಜನರಿಗೆ ಬಿಟ್ಟಿದ್ದು. ಸಿನಿಮಾದ ಇಡೀ ಕತೆಯನ್ನೇ ವಿಮರ್ಷೆಯಲ್ಲಿ ಬರೆದು ಕೊನೆಗೆ ತಮ್ಮದೊಂದು ತೀರ್ಮಾನ ಬರೆಯೋದು ಸುಲಭ. ಆದರೆ ವಿಮರ್ಷಕನ ಕೆಲಸ ಅದಲ್ಲ.


Monday, February 10, 2014

ಮರುಭೂಮಿಯ ಹೂ ಓದಿದ ಮೇಲೆ..

ಒಂದೇ ಗುಕ್ಕಿನಲ್ಲಿ ಓದಿ ಮುಗಿಸಿದೆ. ಯಾವುದೇ ಪುಸ್ತಕವನ್ನು ಅನಾಮತ್ತು ಒಂದೇ ಸಲ ಓದಿ ಮುಗಿಸುವ ಜಾಯಮಾನ ನನ್ನದಲ್ಲ. ಎಷ್ಟೇ ಕಾಡಿದ್ರೂ ಅದನ್ನು ನಿಧಾನವಾಗಿ ಐದಾರು ದಿನಗಳಲ್ಲಿ ಓದಿ ಮುಗಿಸೋದು ಹವ್ಯಾಸ. ಆದರೆ ' ಮರುಭೂಮಿ ಹೂ' ಅದಕ್ಕೆ ಅವಕಾಶ ಕೊಡಲಿಲ್ಲ. ಸುಸ್ತಾಗಿದೆ ಮಲಗ್ತೀನಿ ಅಂದ್ಕೊಂಡು ಪುಸ್ತಕದ ಮೇಲೆ ಕಣ್ಣಾಡಿಸಲೆಂದು ಎತ್ತಿಕೊಂಡ ಪುಸ್ತಕ ನಿದ್ದೆಯನ್ನೇ ಓಡಿಸಿಬಿಟ್ಟಿತ್ತು.

ಸೊಮಾಲಿಯಾದ ಮರುಭೂಮಿಯಲ್ಲಿ ಅರಳಿದ ಹೂವು ವಾಸಿರ್. ಮುಸ್ಲಿಂ ಬುಡಕಟ್ಟ ಸಮುದಾಯದ ಹೆಣ್ಣುಮಗಳು. ಮದುವೆಯ ಹೆಸರಲ್ಲಿ ಐದು ಒಂಟೆಗಳ ಬೆಲೆಗೆ ಬಿಕರಿಯಾಗಬೇಕಿದ್ದ ಹೆಣ್ಣುಮಗಳು. ಆದರೆ ಅಮ್ಮನ ಒಪ್ಪಿಗೆ ಪಡೆದು, ಮನೆಬಿಟ್ಟು ಮರಳು ಗಾಡಿನಲ್ಲಿ ಒಂಟಿಯಾಗಿ ಸಾಗಿ ಆಕೆ ಜೀವನದ ಸವಾಲುಗಳನ್ನು ಎದುರಿಸಿದ ರೀತಿ ಮೈ ಜುಮ್ಮೆನಿಸುತ್ತೆ. ಅಂತಹ ಬರಡು ಮರುಭೂಮಿಯಲ್ಲಿ ಅರಳಿದ ಹೂವು ವಾಸಿರ್ ಮುಂದೊಂದು ದಿನ ಇಡೀ ಜಗತ್ತು ಮೆಚ್ಚುವ ರೂಪದರ್ಶಿಯಾಗಿ ಬೆಳೆದ ಪರಿ ಅನನ್ಯ. ಆಕೆ ಪ್ರತೀ ಬಾರಿ ಹೇಳಿಕೊಳ್ಳುವ ದೇವರೇ ನಿಜಕ್ಕೂ ಇಂತದ್ದೊಂದು ಪವಾಡ ಮಾಡಿದನೇನೋ ಎಂಬಂತೆ ಸಾಗುತ್ತೆ ಆಕೆಯ ಬದುಕು. 

ವಾಸಿರ್‌ಗಿಂತಲೂ ಆಕೆಯ ತಾಯಿಯನ್ನು ಯಾವ ರೀತಿಯಾಗಿ ವಿವರಿಸಬೇಕೋ ಗೊತ್ತಾಗುತ್ತಿಲ್ಲ. ಅಮ್ಮ ಅಂದರೆ ಹೀಗೆ ಅಲ್ವಾ ಅನ್ನಿಸಿಬಿಡುತ್ತೆ. ಆ ತಾಯಿ ತಾನು ಬಯಸಿದ್ದರೆ ವೈಭವೋಪೇತವಾಗಿ ಅಲ್ಲದಿದ್ದರೂ ದಿನದ ಕೂಳಿಗೆ ಪರದಾಡದ ಸ್ಥಿತಿಯಲ್ಲಿ ಬದುಕು ಸಾಗಿಸಬಹುದಿತ್ತು. ಆದರೆ ಆಯ್ಕೆ ಮಾಡಿಕೊಂಡ ಗಂಡನ ಜೊತೆಗೆ ಮರಳುಗಾಡಿನಲ್ಲಿ ಜೀವನ ಸಾಗಿಸುತ್ತಾಳೆ. ಮಕ್ಕಳನ್ನು ಹೆರುತ್ತಾಳೆ. ಸಂಸಾರ ಸಾಗಿಸುತ್ತಾಳೆ. ಆದರೆ ಗಂಡನೆಂಬ ಗಂಡ ಅದೊಂದು ದಿನ ಬೇರೆ ಹೆಣ್ಣನ್ನು ಮದುವೆಯಾಗಿ ಮನೆಗೆ ಕರೆತಂದಾಗ ಒಂದೂ ಮಾತಾಡದೆ ಸುಮ್ಮನಾಗುತ್ತಾಳೆ. ಮುಂದೆ ಆಕೆಯ ಮಕ್ಕಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನೂ ಹೊರುತ್ತಾಳೆ. ಅಮ್ಮಾ ನಿನಗೊಂದು ಸಲಾಂ.

ತೇಜಸ್ವಿಯವರು ಅನುವಾದಿಸಿದ 'ಮಹಾಪಲಾಯನ' ಓದಿದಾಗ ಭೀಕರ ಅನುಭವವೊಂದು ಮನಸ್ಸಿಗೆ ನಾಟುತ್ತದೆ. ಸಾದತ್ ಹಸನ್ ಮಂಟೋನ ಕಥೆಗಳನ್ನು ಓದುವಾಗ ಬರ್ಬರತೆಯ ದರ್ಶನವಾಗುತ್ತದೆ. ಆದರೆ ಮರುಭೂಮಿಯ ಹೂವು ಹಾಗಲ್ಲ. ಇದು ಸೃಷ್ಟಿಸುವ ಅನುಭೂತಿಯನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಕಷ್ಟ. ಅಂತಃಕರಣವನ್ನು ತಟ್ಟುವುದು ಅಂತಾರಲ್ಲ. ಬಹುಷಃ ಅದು ಇದಕ್ಕೇ ಇರಬೇಕು. ಇರುವುದೊಂದೇ ಭೂಮಿ ಮೇಲೆ ನಮ್ಮದೇ ಕಷ್ಟ ಜಾಸ್ತಿ ಅಂತೆಲ್ಲಾ ನಾವು ಅಂದ್ಕೋತೀವಿ. ಆದರೆ ವಾಸಿರ್ ಅನುಭವಿಸಿದ ಮತ್ತು ಸೊಮಾಲಿಯಾದ ಮರಳುಗಾಡಿನಲ್ಲಿ ಇಂದಿಗೂ ಲಕ್ಷಾಂತರ ಹೆಣ್ಣುಮಕ್ಕಳು ಸಾಗಿಸುತ್ತಿರುವ ಬದುಕಿದೆಯಲ್ಲ. ಅದನ್ನು ಯಾವುದಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲವೇನೊ. 

ಹಿರಿಯ ಪತ್ರಕರ್ತ ಡಾ.ಜಗದೀಶ್ ಕೊಪ್ಪ dessert flower ಎಂಬ ವಾಸಿರ್ ಳ ಜೀವನ ಚರಿತ್ರೆಯನ್ನು ಅನುವಾದಿಸಿ ಮರುಭೂಮಿಯ ಹೂವನ್ನು ಕನ್ನಡದ ಜನರ ಕೈಗಿತ್ತಿದ್ದಾರೆ. ಅಚ್ಚುಕಟ್ಟಾದ ಅನುವಾದ ಮೂಲ ಬರಹ ಕನ್ನಡದ್ದೇ ಏನೋ ಎಂಬಷ್ಟು ಆಪ್ತವಾಗಿ ಮೂಡಿಬಂದಿದೆ. ಇದಕ್ಕಾಗಿ ಖಂಡಿತ ಕನ್ನಡಿಗರು ಡಾ.ಜಗದೀಶ್ ಕೊಪ್ಪ ಅವರಿಗೆ ಥ್ಯಾಂಕ್ಸ್‌ ಹೇಳಲೇಬೇಕು. ಪುಸ್ತಕ ಕೊಂಡು ಓದಿದರೆ ಅದಕ್ಕಿಂತ ಹೆಚ್ಚಿನದ್ದು ಬೇರೆನೂ ಬೇಕಿಲ್ಲವೇನೋ. ಯಾಕೋ ಪುಸ್ತಕ ಓದಿದಮೇಲೆ ಇದೆಲ್ಲವನ್ನೂ ಬರೆಯಬೇಕು ಅನ್ನಿಸ್ತು. ಕೊಂಡು ಓದಿ. 

Friday, January 24, 2014

ಸಾಂಸ್ಕೃತಿಕ ನೀತಿ ರೂಪುಗೊಳ್ಳುತ್ತಿದೆ

ರಾಜ್ಯದಲ್ಲಿ ಕೃಷಿ ನೀತಿ, ಕೈಗಾರಿಕಾ ನೀತಿ, ಯುವ ನೀತಿ, ಕ್ರೀಡಾ ನೀತಿ, ಮಾರುಕಟ್ಟೆ ನೀತಿ, ಹೀಗೆ ಸಾಲು ಸಾಲು ನೀತಿಗಳನ್ನು ಸರ್ಕಾರ ರೂಪಿಸುತ್ತಾ ಬಂದಿದೆ. ಇದಕ್ಕೊಂದು ಹೊಸ ಸೇರ್ಪಡೆಯಾಗಿ ಸಾಂಸ್ಕೃತಿಕ ನೀತಿ ಸೇರಿಕೊಳ್ಳಲಿದೆ. ರಾಜ್ಯಕ್ಕೊಂದು ಸಾಂಸ್ಕೃತಿಕ ನೀತಿಯನ್ನು ರೂಪಿಸುವ ಜವಾಬ್ದಾರಿಯನ್ನು ಹಿರಿಯ ಸಾಹಿತಿಗಳು ವಹಿಸಿಕೊಂಡಿದ್ದಾರೆ.

ಇದರ ನಡುವೆ ಸಾಂಸ್ಕೃತಿಕ ನೀತಿಯನ್ನು ಹಿರಿಯ ಕಾದಂಬರಿಕಾರ ಎಸ್.ಎಲ್‌.ಭೈರಪ್ಪ ವಿರೋಧಿಸಿದ್ದಾರೆ. ತುಂಬ ಅರ್ಥಗರ್ಭಿತವಾದ ಪ್ರತಿಕ್ರಿಯೆಯೊಂದನ್ನು ಅವರು ಕೊಟ್ಟಿದ್ದಾರೆ. ಸಾಂಸ್ಕೃತಿಕ ನೀತಿಯನ್ನು ರೂಪಿಸುವಾಗ ರಾಜ್ಯದಲ್ಲಿ ಆಡಳಿತವಿರುದ ರಾಜಕೀಯ ಪಕ್ಷದ ಆಶಯಗಳು ಅದರೊಳಗೆ ಸೇರಿಕೊಳ್ಳುವ ಅಪಾಯವಿದೆ ಎಂದು ಎಚ್ಚರಿಸಿದ್ದಾರೆ. ಅವರು ಯಾವುದೇ ಪಕ್ಷವನ್ನು ನೇರವಾಗಿ ಉಲ್ಲೇಖಿಸದೇ ಇರೋದರಿಂದ ಇದಕ್ಕೊಂದು ವಿಶಾಲಾರ್ಥವಿದೆ. ಆದರೆ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ಇದೆಲ್ಲಾ ಪೂರ್ವಾಗ್ರಹ ಪೀಡಿತ ಹೇಳಿಕೆ ಎಂದು ತಿರಸ್ಕರಿಸಿದ್ದಾರೆ. ಉಮಾಶ್ರೀ ಇದನ್ನು ಕೇವಲ ಕಾಂಗ್ರೆಸ್‌ ಸರ್ಕಾರ ಅನ್ನುವ ರೀತಿಯಲ್ಲಿ ಅರ್ಥಮಾಡಿಕೊಂಡಿದ್ದೇಕೋ ಗೊತ್ತಿಲ್ಲ. 

ಸಾಂಸ್ಕೃತಿಕ ನೀತಿ ರಾಜ್ಯದ ಸಂಸ್ಕೃತಿಯನ್ನು ಒಳ್ಳಗೊಂಡಿರುತ್ತದೆ. ಸಂಸ್ಕೃತಿಯನ್ನು ಪೋಷಿಸುವ, ಹಾಗೂ ಬೆಳೆಸುವ ದೂರದೃಷ್ಟಿಯನ್ನು ಹೊಂದಿರಬೇತು. ಇದರಲ್ಲಿ ಪ್ರತಿಯೊಂದು ಸಂಸ್ಕೃತಿಯ ಬಗ್ಗೆಯೂ ಸಮಾನ ದೃಷ್ಟಿಕೋನವಿರಬೇಕು. ಜನಪದ ಸಂಸ್ಕೃತಿ, ಜಾತಿಗಳ ಸಂಸ್ಕೃತಿ, ವೈದಿಕ ಸಂಸ್ಕೃತಿ, ಅಲ್ಪಸಂಖ್ಯಾತರ ಸಂಸ್ಕೃತಿ, ಆದಿವಾಸಿಗಳ ಸಂಸ್ಕೃತಿ ಹೀಗೆ ಸಂಸ್ಕೃತಿಯ ಆಳ ಮತ್ತು ವಿಸ್ತಾರ ದೊಡ್ಡದು. ಇವುಗಳಲ್ಲಿ ಯಾವುದೇ ಸಂಸ್ಕೃತಿಯ ಬಗ್ಗೆಯೂ ಉದಾಸೀನವನ್ನೋ ಅಥವಾ ಉದ್ದೇಶಪೂರ್ವಕ ಕಡೆಗಣನೆ ಮಾಡುವಂತದ್ದು ಸಲ್ಲದು. ಆದರೆ ಭೈರಪ್ಪ ಹೇಳಿದಂತೆ ರಾಜಕೀಯ ಆಶಯಗಳು ಸೇರಿಕೊಂಡಾಗ ಆಡಳಿತದಲ್ಲಿರುವ ಆಯಾ ಪಕ್ಷಗಳ ಹಿತಾಸಕ್ತಿ ಮುಖ್ಯವಾಗುತ್ತದೆ. ಅದು ಕಾಂಗ್ರೆಸ್ ಇರಬಹುದು ಅಥವಾ ಬಿಜೆಪಿ ಇರಬಹುದು. ಈ ಎರಡೂ ಪಕ್ಷಗಳು ಓಲೈಕೆ ರಾಜಕಾರಣವನ್ನು ಮಾಡುತ್ತಾ ಬಂದಿವೆ. ಇಂತಹ ಓಲೈಕೆಯ ರಾಜಕಾರಣದ ಅಂಶಗಳು ಸಾಂಸ್ಕೃತಿಕ ನೀತಿಯ ಮೇಲೆ ಪರಿಣಾಮ ಬೀರಿದರೆ ಅದರಿಂದ ಅಪಾಯವೇ ಹೆಚ್ಚು. 

ಕೃಷಿ ನೀತಿ, ಕೈಗಾರಿಕಾ ನೀತಿ, ಕ್ರೀಡಾ ನೀತಿ, ಮಾರುಕಟ್ಟೆ ನೀತಿ ಮೊದಲಾದುವುಗಳಲ್ಲಿ ಸರ್ಕಾರದ ನೀತಿ ಸರಿಯಾಗಿಲ್ಲದಿದ್ದರೆ ಅದು ಅಭಿವೃದ್ಧಿಯ ಮೇಲೆ ಪರಿಣಾಮ ಬೀರಬಹುದು. ರಾಜ್ಯದ ಸಾಧನೆಗಳ ಮೇಲೆ ಅಡ್ಡ ಪರಿಣಾಮಬೀರಬಹುದು. ಇದನ್ನು ಮುಂದೆ ಬರುವ ಸರ್ಕಾರಗಳು ವಿವೇಚನೆಯಿಂದ ಸರಿಪಡಿಸಿಕೊಳ್ಳಬಹುದು. ಆದರೆ ಯುವ ನೀತಿ, ಸಾಂಸ್ಕೃತಿಕ ನೀತಿಯಲ್ಲಿ ಎಡವಟ್ಟುಗಳಾದ್ರೆ ಅದನ್ನು ಸರಿಪಡಿಸೋದು ಕಷ್ಟ. 90ರ ದಶಕದಲ್ಲಿ ದೇಶದಲ್ಲಿ ನಡೆದಿರುವ ಸಾಂಸ್ಕೃತಿಕ ದಾಳಿಗಳ ನಂತರ ಹುಟ್ಟಿಕೊಂಡಿರುವ ಸಮುದಾಯಕ್ಕೆ ಈ ದೇಶದ ಮೂಲ ಬೇರುಗಳ ಆಶಯವೇ ಗೊತ್ತಾಗುತ್ತಿಲ್ಲ. ಎಲ್ಲವನ್ನೂ ತಮ್ಮ ಮೂಗಿನ ನೇರಕ್ಕೆ ಓದಿಕೊಳ್ಳುವ ಮನಸ್ಥಿತಿ ರೂಪುಗೊಳ್ಳುತ್ತಿದೆ. ಮಾನಸಿಕ ಮಾಲಿನ್ಯ ಹಾಗೂ ಬೌದ್ಧಿಕ ದಾರಿದ್ರ್ಯ ಹೆಚ್ಚುತ್ತಿದೆ. ಅಭಿವ್ಯಕ್ತಿಯ ಹೆಸರಿನಲ್ಲಿ ಬಾಯಿಗೆ ಬಂದಂತೆ ಮಾತನಾಡುವ ಹುಚ್ಚುತನ ಹೆಚ್ಚುತ್ತಿದೆ. 

ಸಾಂಸ್ಕೃತಿಕ ನೀತಿಯ ವಿಚಾರದಲ್ಲಿ ಸಾಹಿತಿಗಳ ತಂಡ ಎಷ್ಟೇ ಒಳ್ಳೆಯ ವರದಿಯನ್ನು ನೀಡಿದರೂ ರಾಜಕೀಯ ಪಕ್ಷಗಳು ಇದರಲ್ಲಿರುವ ಸಣ್ಣ ತಪ್ಪುಗಳನ್ನು ದೊಡ್ಡದು ಮಾಡಿ ಕ್ಯಾಂಪೇನ್ ಶುರುಮಾಡಿದ್ರೂ ಅಚ್ಚರಿಯೇನಿಲ್ಲ. ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ವಿಚಾರದಲ್ಲಿ ಇದೇ ಆಗುತ್ತಿದೆ. ಸಾಂಸ್ಕೃತಿಕ ನೀತಿಯೂ ಇದೇ ಅಪಾಯವನ್ನು ಮುಂದೆ ಎದುರಿಸಬಹುದು. 

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವಿಧಾನಸೌಧದ ಮುಂದೆ ಜನಪದ ಜಾತ್ರೆ ಅನ್ನೋ ಕಾರ್ಯಕ್ರಮವನ್ನು ಉದ್ಘಾಟಿಸಿದ್ರು. ಅಷ್ಟೇ ಅಲ್ಲ. ಅವರು ಮುಖ್ಯಮಂತ್ರಿಯಾಗಿದ್ದ ಇಪ್ಪತ್ತು ತಿಂಗಳ ಅವಧಿಯಲ್ಲಿ ಬೆಂಗಳೂರಿನ ಲಾಲ್‌ಬಾಗ್‌ನಲ್ಲಿ ಪ್ರತಿ ಶನಿವಾರ ಜನಪದ ಜಾತ್ರೆಯನ್ನು ನಿರಂತರವಾಗಿ ಆಯೋಜಿಸುತ್ತಾ ಬರಲಾಗಿತ್ತು. ಸಹಸ್ರಾರು ಸಂಖ್ಯೆಯಲ್ಲಿ ಬೆಂಗಳೂರಿಗರು ಬಂದು ಜಾನಪದ ನೃತ್ಯ ವೈಭವವನ್ನು ಕಂಡು ಸಂಭ್ರಮಿಸುತ್ತಿದ್ದರು. ರಾಜ್ಯದ ಕಲೆ ಮತ್ತು ಸಂಸ್ಕೃತಿಯನ್ನು ಪೋಷಿಸುವ ನಿಜವಾದ ಆಸಕ್ತಿಯಿರುವ ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ರೂಪಿಸಬೇಕು. ಜೆಡಿಎಸ್ - ಬಿಜೆಪಿ ಮೈತ್ರಿ ಸರ್ಕಾರದ ಉತ್ತಮ ಕಾರ್ಯಕ್ರಮಗಳ ಬಗ್ಗೆ ಮುಂದೆ ಸ್ವಂತ ಬಲದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಅದೆಲ್ಲಾ ತನ್ನ ಪಕ್ಷದ ಕೊಡುಗೆ ಅಂತಲೇ ಬಿಜೆಪಿ ಬಿಂಬಿಸಿಕೊಂಡು ಬಂದಿತ್ತು. ಆದರೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ಜಾನಪದ ಜಾತ್ರೆ ನೋಡಲು ಸಿಗಲಿಲ್ಲ !



Tuesday, January 14, 2014

ಮಲ್ಲಿಕಾರ್ಜುನ ಬಂಡೆಯವರ ನೆನೆದು...

ಗುಲ್ಬರ್ಗಾ ದಕ್ಷಿಣ ಮತಕ್ಷೇತ್ರದ ಉಪಚುನಾವಣೆಯ ಮತದಾನಕ್ಕೆ ಒಂದು ದಿನ ಬಾಕಿ ಇತ್ತು. ಹೀಗಾಗಿ ಚುನಾವಣೆಯ ಹಿಂದಿನ ಎರಡು ರಾತ್ರಿಗಳ ವಿವರ ಹೇಳಬೇಕಿಲ್ಲ. ಹಣ ಮತ್ತು ಹೆಂಡದ ಹೊಳೆ ನೇರವಾಗಿ ಮತದಾರರ ಮನೆಗಳತ್ತಲೇ ಹರಿಯೋದು ಈ ರಾತ್ರಿಗಳಲ್ಲಿ. ಸಹಜವಾಗೇ ಟಿವಿ ಪತ್ರಕರ್ತರಿಗೆ ಇಂತ ರಾತ್ರಿಗಳಲ್ಲಿ ಏನಾದ್ರೂ ಎಕ್ಸ್‌ಕ್ಲೂಸಿವ್ ದೃಶ್ಯ ಸಿಗುತ್ತಾ ಅನ್ನೋ ಕುತೂಹಲ ಹೆಚ್ಚು. ಇದಕ್ಕಾಗಿ ಅವತ್ತು ನಾವು ನೈಟ್‌ ರೌಂಡ್ಸ್‌ಗೆ ಹೊರಟಿದ್ವಿ. ನಾನು, ಕುಲಕರ್ಣಿ ಮತ್ತು ಗುಲ್ಬರ್ಗಾ ಕ್ಯಾಮರಾಮನ್ ಗಂಗಾಧರ್.

ರಾತ್ರಿ ಎಲ್ಲಾ ಸುಮಾರು ಕಡೆ ಸುತ್ತಾಡಿ ಕೊನೆಗೆ ನಾವು ಬಂದಿದ್ದು ಗುಲ್ಬರ್ಗಾದ ಶರಣ ಬಸವೇಶ್ವರ ದೇಗುಲದ ಹತ್ತಿರ. ಅಷ್ಟೊತ್ತಿಗೆ ಅಲ್ಲಿ ನಮಗೆ ಪೊಲೀಸ್ ಸಬ್‌ ಇನ್ಸ್‌ಪೆಕ್ಟರ್ ಒಬ್ರು ಎದುರಾದ್ರೂ. ನಮ್‌ ಗಂಗಾಧರ್ ಅವರನ್ನು ಪರಿಚಯಿಸಿದ. ಹಾಗೆ ಅವತ್ತಿನ ರಾತ್ರಿ ಸಿಕ್ಕವರೇ ಮಲ್ಲಿಕಾರ್ಜುನ್ ಬಂಡೆ. ತೆಳು ನೀಲಿ ಬಣ್ಣದ ಟೀ ಶರ್ಟ್‌ ಹಾಕ್ಕೊಂಡಿದ್ರು ಬಂಡೆ. ಕಟ್ಟುಮಸ್ತಾದ ಮೈಕಟ್ಟು. ಖಡಕ್ ಆಫೀಸರ್ ಗೆ ಬೇಕಾದ ವ್ಯಕ್ತಿತ್ವ ಅವರಿಗಿತ್ತು. ಹಾಗೇ ಸುಮ್ಮನೆ ಎಲೆಕ್ಷನ್ ವಿಚಾರದಲ್ಲಿ ಒಂದಷ್ಟು ಹೊತ್ತು ಹರಟೆ ಹೊಡ್ಕೊಂಡು ನಿಂತಿದ್ವಿ. ಅವರ ಮಾತುಗಳಲ್ಲಿ ಚುನಾವಣೆಯಲ್ಲಿ ಹರಿಯುವ ಹಣದ ಹೊಳೆಯ ಬಗ್ಗೆ ತೀವ್ರ ಅಸಮಾಧಾನವಿತ್ತು. ಹೀಗೇ ಡಿಪಾರ್ಟ್‌ಮೆಂಟ್ ವಿಚಾರ - ಅದೂ ಇದೂ ಅಂತ ಮಾತಾಡ್ತಿದ್ವಿ. ಅಷ್ಟೊತ್ತಲ್ಲಿ ಅಲ್ಲೊಂದು ಕಾರ್‌ ಬಂದಿತ್ತು.

ಅದು ವಿಧಾನ ಪರಿಷತ್ ಸದಸ್ಯರೊಬ್ಬರ ಕಾರು. ಸ್ವತಃ ಆ ಶಾಸಕ ಕೂಡ ಅದೇ ಕಾರಿನಲ್ಲಿದ್ರು. ಗುಲ್ಬರ್ಗಾದ ಉಪಚುನಾವಣೆಯಲ್ಲಿ ಅವರು ವಿಶೇಷ ಜವಾಬ್ದಾರಿ ನಿಭಾಯಿಸುತ್ತಿದ್ದವರು. ಹೀಗಾಗಿ ಅವರ ಕಾರಿನಲ್ಲೇನಾದ್ರೂ ಹಣ ಸಾಗಾಟ ಇರಬಹುದಾ ಅನ್ನೋ ಅನುಮಾನ ನಮಗೆ ಕಾಡಿತ್ತು. ಹೇಗಿದ್ರೂ ಜೊತೇಲಿ ಬಂಡೆ ಇದ್ರಲ್ಲಾ. ಅವರ ಜೊತನೇ ಇದನ್ನು ಹೇಳಿದ್ವಿ. ತಕ್ಷಣ ಬಂಡೆ ಕಾರ್ಯಪ್ರವೃತ್ತರಾದ್ರು. ಹೋಗಿ ಶಾಸಕರ ಇನೋವಾ ಕಾರನ್ನು ತಡೆದು ನಿಲ್ಲಿಸಿದ್ರು. ಶಾಸಕರನ್ನು ಕಾರಿಂದ ಕೆಳಗಿಳಿಸಿ ಸಂಪೂರ್ಣ ತಪಾಸಣೆ ನಡೆಸಿದ್ರು. ಆ ಕಾರಿನಲ್ಲಿ ಹಣ ಇರಲಿಲ್ಲ. ಆದ್ರೆ ಚುನಾವಣೆಯ ಸಂದರ್ಭದಲ್ಲಿ ಒಬ್ಬ ಪೊಲೀಸ್ ಅಧಿಕಾರಿಯ ನಿಷ್ಟುರತೆ ಇಷ್ಟವಾಯಿತು. ಯಾವುದೇ ಮುಲಾಜಿಲ್ಲದೆ ಗುಲ್ಬರ್ಗಾದ ಆ ಪ್ರಭಾವಿ ಶಾಸಕರ ಕಾರನ್ನು ತಪಾಸಣೆ ಮಾಡಿದ್ದು. ಅದೂ ಕ್ಯಾಮರಾ ಮುಂದೆ ಮಾಡೋದು ಇದೆಯಲ್ಲಾ. ಅಧಿಕಾರಿ ದಕ್ಷನಾಗಿದ್ದರೆ ಮಾತ್ರ ಇಂತದ್ದೆಲ್ಲಾ ಮಾಡಲು ಸಾಧ್ಯ. ( ಬೇರೆ ಚುನಾವಣೆಗಳ ಸಂದರ್ಭದಲ್ಲಿ ಬೇಕೆ ಪೊಲೀಸ್ ಅಧಿಕಾರಿಗಳ ಹತ್ತಿರ ನಾವು ಇಂತದ್ದೇ ಅನುಮಾನ ಹೇಳಿದಾಗ ಹಲವು ಸಬೂಬು ಹೇಳಿದ ಉದಾಹರಣೆಗಳು ನಮ್ಮ ಮುಂದಿವೆ.)  ಮಲ್ಲಿಕಾರ್ಜುನ ಬಂಡೆಗೆ ರಾಜಕಾರಣಿಗಳನ್ನು ಓಲೈಸುವ ಮನೋಭಾವ ಇರಲಿಲ್ಲ ಅನ್ನೋದನ್ನು ಇದು ಎತ್ತಿ ತೋರಿಸುತ್ತಿತ್ತು.

ಇದಾದ್ಮೇಲೂ ಒಂದಷ್ಟು ಹೊತ್ತು ಮಾತಾಡಿದ್ವಿ. ಮಲ್ಲಿಕಾರ್ಜುನ ಬಂಡೆ ಮೊದಲ ಭೇಟಿಯಲ್ಲೇ ತುಂಬ ಇಷ್ಟವಾದ್ರು. ಅವರ ಬಗ್ಗೆ ಒಂದು ವಿಶೇಷ ಗೌರವ ಮೂಡಿತ್ತು. ನಮ್ ಗಂಗಾಧರ್ ಕೂಡ ಬಂಡೆಯ ಹಲವು ಸಾಹಸಗಳ ಬಗ್ಗೆ ಅವತ್ತು ರಾತ್ರಿ ಹೇಳ್ತಿದ್ದ. ರಾಜಕಾರಣಿಗಳ ಬಗ್ಗೆ ಹಾಗೂ ಅಪರಾಧಿಗಳ ಬಗ್ಗೆ ಹೆಚ್ಚು ನಿಷ್ಠುರವಾಗಿರುತ್ತಿದ್ದ ಮಲ್ಲಿಕಾರ್ಜುನ್ ಬಂಡೆ ಸಾಮಾನ್ಯ ಜನರ ಬಗ್ಗೆ ಅಷ್ಟೇ ಪ್ರೀತಿಯಿಂದ ವರ್ತಿಸುತ್ತಿದ್ದರು.

ಮೊನ್ನೆ ರೌಡಿ ಮುನ್ನಾನ ಬಲಿಹಾಕಲು ಇದೇ ಸಾಹಸಿ ಮಲ್ಲಿಕಾರ್ಜುನ ಬಂಡೆ ತಮ್ಮ ತಂಡದೊಂದಿಗೆ ಹೋಗಿದ್ದರು. ಕಳೆದ ರಾತ್ರಿ ಬಂಡೆ ಇಹಲೋಕದ ಸಂಬಂಧ ಕಡಿದುಕೊಂಡಿದ್ದಾರೆ. ಬಂಡೆ ನಿಧನರಾದ ಸುದ್ದಿ ಕೇಳಿ ಗುಲ್ಬರ್ಗಾದ ಜನ ತೀವ್ರ ಶೋಕ ತಪ್ತರಾಗಿದ್ದಾರೆ. ಒಬ್ಬ ಪೊಲೀಸ್ ಅಧಿಕಾರಿ ಜನರ ಪ್ರೀತಿಯನ್ನು ಗಳಿಸೋದು ಸುಲಭವಲ್ಲ. ಕರ್ನಾಟಕ ಇಂತಹ ಹಲವು ದಕ್ಷ ಅಧಿಕಾರಿಗಳನ್ನು ಕಂಡಿದೆ. ಜನ ಪ್ರೀತಿಯಿಂದ ಈಗಲೂ ಹಲವು ಪೊಲೀಸ್ ಅಧಿಕಾರಿಗಳನ್ನು ನೆನೆಯುತ್ತಾರೆ. ಅಂತವರ ಸಾಲಿಗೆ ನಿಸ್ಸಂಶಯವಾಗಿ ಬಂಡೆ ಸೇರುತ್ತಾರೆ.

ಮಲ್ಲಿಕಾರ್ಜುನ ಬಂಡೆ ವ್ಯಕ್ತಿತ್ವ ಛಾಪು ಮೂಡಿಸಿದ ನೆನಪುಗಳು ಅವರ ಸಂಪರ್ಕಕ್ಕೆ ಬಂದವರ ಮನದಲ್ಲಿ ಸದಾ ಹಸಿರಾಗಿರಲಿದೆ. ಆದರೆ ಅವರ ಕುಟುಂಬಕ್ಕೆ ಆದ ನಷ್ಟವನ್ನು ತುಂಬಲು ಅಸಾಧ್ಯ.


Saturday, December 14, 2013

ದ್ಯಾವ್ರೇ ಭಟ್ರು ಇಷ್ಟು ಚಂದ ನಟಿಸ್ತಾರಾ...!!!

ಇಷ್ಟು ದಿನ ಯೋಗರಾಜ ಭಟ್ಟರು ಒಳ್ಳೆಯ ಸಿನಿಮಾ ನಿರ್ದೇಶಕ, ಚಿತ್ರ ಸಾಹಿತ್ಯ ರಚನೆಕಾರ, ಇನ್ನೂ ಏನೇನೋ ಆಗಿದ್ದರು. ಒಂದು ಒಳ್ಳೆಯ ಸಿನಿಮಾದ ಪಾಕ ಬಡಿಸಲು ಏನೇನು ಬೇಕೋ ಅದೆಲ್ಲವನ್ನೂ ಭಟ್ರು ಅಚ್ಚುಕಟ್ಟಾಗಿ ಮಾಡ್ತಿದ್ರು. ಆದರೆ ಅವರೊಬ್ಬ ಒಳ್ಳೆಯ ನಟ ಅನ್ನೋದು ಗೊತ್ತಾಗಿದ್ದು ದ್ಯಾವ್ರೇ ನೋಡಿದಾಗಲೇ. ಶಿಷ್ಯನ ಸಿನಿಮಾಗೆ ಗುರುವಿನಿಂದ ಇದಕ್ಕಿಂತ ದೊಡ್ಡ ಬೆಂಬಲ ಸಿಗೋದಿಕ್ಕೆ ಸಾಧ್ಯವಿಲ್ಲ. ಗಡ್ಡ ವಿಜಿ ಆಕ್ಷನ್ ಕಟ್ ಹೇಳಿದ್ದಕ್ಕೆ ಭಟ್ರು ಚಂದಗೆ ಅಭಿನಯಿಸಿದ್ದಾರೆ.

ದ್ಯಾವ್ರೇ ಸಿನಿಮಾ ನೋಡಿದಾಗಿನಿಂದ ಮನಸ್ಸಿನಲ್ಲಿ ಹಲವು ಪಾತ್ರಗಳು ಅಚ್ಚಾಗಿ ಉಳಿದಿವೆ. ಒಂದಕ್ಕಿಂತ ಒಂದು ವಿಭಿನ್ನ ಪಾತ್ರಗಳು. ಎಲ್ಲವೂ ಜೈಲಿನಲ್ಲಿ ಆರಂಭವಾದ್ರೂ ಒಬ್ಬೊಬ್ಬರದ್ದು ಒಂದೊಂದು ಕಥೆ. ಒಂದೊಂದು ವ್ಯಥೆ. ಇದು ಒಬ್ಬ ನಾಯಕನ ಸುತ್ತ ಹೆಣೆದ ಕಥೆಯಲ್ಲ. ಸಿನಿಮಾದಲ್ಲಿ ಹೆಚ್ಚಿನ ಭಾಗ ಯೋಗರಾಜ ಭಟ್ಟರು ಕಾಣಿಸಿಕೊಳ್ಳುತ್ತಾರೆ. ಹಾಗಾಗಿ ಅವರನ್ನು ಹೀರೋ ಅನ್ನಬಹುದೇನೋ. ಆದರೆ ಅವರೊಬ್ಬರೇ ಹೀರೋ ಅಲ್ಲ. ಚೀಂಕ್ರನಾಗಿ ಕಾಣಿಸಿಕೊಂಡ ನೀನಾಸಂ ಸತೀಶ ಪಾತ್ರಕ್ಕೆ ಜೀವ ತುಂಬಿದ ರೀತಿ ಅದ್ಭುತ. ಪರಾಕಾಯ ಪ್ರವೇಶ ಅಂದ್ರೆ ಇದೇನಾ...? ಇಷ್ಟವಾಗುವ ಇನ್ನಷ್ಟು ಪಾತ್ರಗಳು ದ್ಯಾವ್ರೇಗೆ ಜೀವತುಂಬಿವೆ. ಎಲೆಕ್ಷನ್ ಗೆ ನಿಂತು ಎಂಎಲ್ಎ ಆಗುವ ಕನಸುಕಾಣುತ್ತಲೇ ಸೇಡು ತೀರಿಸಿಕೊಳ್ಳಲು ಹಪಹಪಿಸುತ್ತಿರುವ ಚಿಕ್ಕರಸ ಪಾತ್ರ ಸಿನಿಮಾ ಮುಗಿದ ಮೇಲೂ ಕಾಡುತ್ತದೆ. ಇಂಗ್ಲಿಷ್ ಗೋಡೆ, ಜಗ್ಗ ಹೀಗೆ  ಸಿನಿಮಾದ ಹೀರೋಗಳ ಸಂಖ್ಯೆ ಬೆಳೆಯುತ್ತದೆ.

ಮುವತ್ತು ವರ್ಷ ಜೈಲಲ್ಲಿದ್ದು ಹೊರಬಂದ ದ್ಯಾವಣ್ಣನಿಗೆ ಹೊರಪ್ರಪಚಂದಲ್ಲಾದ ಬದಲಾವಣೆಗಳೇ ಗೊತ್ತಿಲ್ಲ. ಗುದ್ದಲಿ, ಸಲಕೆಗಳನ್ನು ರೆಡಿ ಮಾಡಿ ಕೆಲಸಕ್ಕೆ ಹೊರಡುವ ಅವನಿಗೆ ಬುಲ್ಡೋಜರ್ ಗಳು ಬಂದಿರೋದು ಹೇಗೆ ತಾನೇ ಗೊತ್ತಾಗಬೇಕು. ಜೈಲಲ್ಲಿದ್ದು ಬಂದ ಅಮಾಯಕ ದ್ಯಾವಣ್ಣನಿಗೆ ಹೊರ ಪ್ರಪಚಂದ ಬದುಕು ದುಸ್ತರವಾಗುತ್ತಾ ಹೋಗುತ್ತದೆ. ಪಾತ್ರ ಸಣ್ಣದು. ಆದರೆ ಸೃಷ್ಟಿಸುವ ಭಾವನೆಗಳು ದೊಡ್ಡದು. ಒಂಥರಾ ಚಿತ್ರಕ್ಕೆ ಟೈಟಲ್ ನಂತಿರುವ ಪಾತ್ರ ದ್ಯಾವಣ್ಣನದ್ದು.

ಇಷ್ಟೆಲ್ಲಾ ಹೇಳಿದ್ಮೇಲೆ ಒಂದು ಪಾತ್ರ ಹೇಳಲೇ ಬೇಕು. ಅದು ಇನ್ಸ್ ಪೆಕ್ಟರ್ ಸಾವಂತ್ ನದ್ದು. 'ಆ ದಿನಗಳು' ಚಿತ್ರದಲ್ಲಿ ಸರ್ದಾರ್ ಪಾತ್ರದಲ್ಲಿ ಮಿಂಚಿದ್ದ ಸತ್ಯ ಈಗ ಸರ್ದಾರ್ ಸತ್ಯ ಆಗಿದ್ದಾರೆ. ಯಾಕಂದ್ರೆ ಅದು ಅವರು ಜೀವತುಂಬಿದ್ದ ಪಾತ್ರ. ಈಗ ಸರ್ದಾರ್ ಸತ್ಯ ಸಾವಂತನಾಗಿ ಕಾಣಿಸಿಕೊಂಡಿದ್ದಾರೆ. ಅಟ್ಟಹಾಸ ಹಾಗೂ ವಿಕಟ ನಗು ಈ ಪಾತ್ರದ ಜೀವಾಳ. ಎರಡನ್ನೂ ಸರ್ದಾರ್ ಅದ್ಭುತವಾಗಿ ನಿಭಾಯಿಸಿದ್ದಾರೆ.

ಮತ್ತೆ ಭಟ್ಟರ ಕಡೆಗೆ ಬರಲೇಬೇಕು. ಜೈಲರ್ ಭಟ್ಟರು ಇಡೀ ಚಿತ್ರದಲ್ಲಿ ಬೆರೆತುಹೋಗಿದ್ದಾರೆ. ಗೋಡೇೇೇೇೇ.... ಎಂದು ಅವರು ಚೀತ್ಕರಿಸುವ ರೀತಿ ಹೃದಯ ಕಲಕುತ್ತದೆ. ಪಾತ್ರದ ಆಳವನ್ನು ಹೆಚ್ಚಿಸುತ್ತದೆ. ಯೋಗರಾಜ ಭಟ್ಟರ ಇತರೆ ಸಿನಿಮಾಗಳಂತೆ ಉಡಾಫೆ ಶೈಲಿಯಲ್ಲಿ ನೀತಿ ಹೇಳುವ ಪರಿಪಾಠ ದ್ಯಾವ್ರೇಯಲ್ಲೂ ಮುಂದುವರಿದಿದೆ. ಗುರುವಿನಿಂದ ಶಿಷ್ಯನಿಗೆ ಬಂದಿರುವ ಬಳುವಳಿ ಇದು.

ದ್ಯಾವ್ರೇಯಲ್ಲಿ ಆಗಲೇ ಹೇಳಿದಂತೆ ಹೀರೋ ಪಾತ್ರಗಳು ಹಲವಿವೆ. ಜೊತೆಗೆ ಪುಟಾಣಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಹೀರೋಯಿನ್ ಗಳ ಜೊತೆಗೆ ಒಳ್ಳೆಯ ಹಾಡುಗಳು, ಅದಕ್ಕೊಪ್ಪುವ ಸಂಗೀತ. ಚಂದನೆಯ ಸಿನಿಮಾಟೋಗ್ರಫಿ, ಸ್ಕ್ರೀನ್ ಪ್ಲೇ.. ಹೀಗೆ ದ್ಯಾವ್ರೆಯಲ್ಲಿ ಪ್ರತಿಯೊಂದು ಅಂಶವೂ ಹೀರೋಯಿನ್ ಸ್ಥಾನವನ್ನು ತುಂಬುತ್ತವೆ. ಒಂದು ಒಳ್ಳೆಯ ಸಿನಿಮಾವನ್ನು ಗಡ್ಡ ವಿಜಯ್ ಕೊಟ್ಟಿದ್ದಾರೆ.

ದ್ಯಾವ್ರೇೇೇೇೇೇ..... ಇಂತಾ ಸಿನಿಮಾಗಳು ನಿಜಕ್ಕೂ ಗೆಲ್ಲಬೇಕು.!






Friday, September 20, 2013

ಕೆಳಗಿನವರ ಲೋಕದಲ್ಲಿ ಏನೆಲ್ಲಾ ಉಂಟು...!

ಅದು ಶುರುವಾಗುವುದು ಹೀಗೆ.
ಬೆಳಗು ಇನ್ನೂ ಹರಿದಿರಲಿಲ್ಲ. ಒಂದೆಡೆ ಕೊರೆಯುವ ಚಳಿ. ಆದರೆ ಚಳಿಯೆಂದು ಕುಳಿತರೆ ಹೊಟ್ಟೆ ಹೊರೆಯುವುದು ಹೇಗೆ. ಎದ್ದು ಹೋಗಲೇ ಬೇಕು. ಚಿಂದಿ ಆಯೋದಕ್ಕೆ. ಮಲಗುವ ಗೂಡುಗಳಿಂದ ಹೊರಬಂದು ಕೊರೆಯುವ ಚಳಿಯಲ್ಲಿ ಕೆಲವರು ಚಿಂದಿ ಅರಸಿ ಹೋರಹೋಗುತ್ತಾರೆ. ಹುಡುಗಿಯ ಕಳ್ಳಸಂಬಂಧಿ ಗುಡಿ ಹೊದ್ದು ಹೊರಗೋಡುತ್ತಾನೆ. ರೋಗಗ್ರಸ್ತೆ ಹೆಂಗಸು ಕೆಮ್ಮುತ್ತಾ ನರಳುತ್ತಾಳೆ. ಆಕೆಯ ಗಂಡ ಹೆಂಡತಿ ಸತ್ತರೆ ಸಾಕೆಂದು ಆಶಿಸುವಂತೆ ತನ್ನದೇ ಕೆಲಸದಲ್ಲಿ ನಿರತನಾಗಿದ್ದಾನೆ. ಕೆಲಸ ಮಾಡದ ಸೋಮಾರಿಗಳು ತಮ್ಮದೇ ಹರಟೆಯಲ್ಲಿ ತೊಡಗಿದ್ದಾರೆ. ಕೆಳಗಿನವರ ಲೋಕದಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗುತ್ತದೆ.

ಇದು ಎನ್ಎಸ್ ಡಿಯ ಬೆಂಗಳೂರು ಚಾಪ್ಟರ್ ನಲ್ಲಿ ತರಬೇತಿ ಪಡೆದ ಮೊದಲ ತಂಡ ಪ್ರಸ್ತುತಪಡಿಸಿದ ' ಈ ಕೆಳಗಿನವರು' ನಾಟಕ.  ರಷ್ಯನ್ ಸಾಹಿತಿ ಮ್ಯಾಕ್ಸಿಂ ಗೋರ್ಕಿಯ lower depths ನಾಟಕವನ್ನು ಕನ್ನಡಕ್ಕೆ ರೂಪಂತರಿಸಿದ ನಾಟಕವಿದು. ಇದನ್ನು ಅದೆಷ್ಟು ಚೆನ್ನಾಗಿ ಕನ್ನಡಕ್ಕೆ ಬಿ.ಟಿ.ದೇಸಾಯಿಯವರು ಕನ್ನಡಕ್ಕೆ ರೂಪಾಂತರಿಸಿದ್ದಾರೆಂದರೆ ಇಡೀ ನಾಟಕ ಕನ್ನಡದ್ದೇ ಮಣ್ಣಿನ ಕಥೆಯಂತಿದೆ. ಅದರ ಭಾಷೆ, ಶೈಲಿ, ವಸ್ತು, ಇತಿಹಾಸ ಎಲ್ಲದರಲ್ಲೂ ಕರ್ನಾಟಕ, ಕನ್ನಡ ಮತ್ತು ಭಾರತದ ಒಳಗಿನ ಕಥೆಯಾಗಿ ಮಾರ್ಪಟ್ಟಿದೆ. ರಷ್ಯಾದ ಬರಹಗಾರನ ಒಟ್ಟು ಆಶಯವನ್ನು ಕನ್ನಡದ ಪರಿಸರದೊಳಗೆ ಬೆರೆಸಿ ತೋರಿಸಲಾಗಿದೆ.

ನಾಟಕ್ಕಾಗಿ ತುಂಬಾ ಅದ್ಭುತ ಸೆಟ್ ಹಾಕಲಾಗಿದೆ. ಅದೇ ಸೆಟ್ ನಲ್ಲಿ ಕೆಳಗಿನವರ ಲೋಕ ನಿಧಾನಕ್ಕೆ ಅನಾವರಣಗೊಳ್ಳುತ್ತಾ ಹೋಗುತ್ತದೆ. ಅಲ್ಲಿನ ವಾಸಿಗಳಲ್ಲಿ ಒಬ್ಬೊಬ್ಬರದ್ದೂ ಒಂದೊಂದು ಕಥೆ. ಕೆಲವರು ಜೈಲಿಗೂ ಹೋಗಿ ಬಂದವರು. ಮನೆ ಬಿಟ್ಟು ಬಂದವರು. ಪರಿವಾರ ತೊರೆದು ಪರದೇಶಿಗಳಾದವರು.  ಅವರ ನಡುವೆ ಜಗಳವಿದೆ. ಕೋಪ ತಾಪಗಳು ಆಗಾಗ್ಗೆ ನಡೆಯುತ್ತವೆ. ಆದರೆ ಅದೆಲ್ಲವನ್ನೂ ಮೀರಿದ ಅನ್ಯೋನ್ಯತೆಯಿದೆ. ಸಮಾಜದ ಅಂಕುಡೊಂಕುಗಳ ಬಗ್ಗೆ ಈ ಕೆಳಗಿನವರು ಒಂದು ಪ್ರಬುದ್ಧ ದೃಷ್ಟಿಕೋನವನ್ನೂ ಹೊಂದಿದ್ದಾರೆ.

ಅಲ್ಲಿಗೆ ಬರುವ ಅಜ್ಜಯ್ಯ ತನ್ನದೇ ಕಲ್ಯಾಣ ರಾಜ್ಯ ಹುಡುಕುತ್ತಾ ಹೊರಟವನು. ಇಂದು ಅಲ್ಲಿಗೆ ಬಂದಿದ್ದನಷ್ಟೆ.  ಅವರ ಬದುಕಿನ ಮೇಲೆ ಅಜ್ಜಯ್ಯ ಪ್ರಭಾವ ಬೀರುತ್ತಾನೆ. ಅವರ ಕಥೆಗಳಿಗೆ ಕಿವಿಯಾಗುತ್ತಾನೆ. ಅವರ ಭಾವನೆಗಳಿಗೆ ಮಾತಾಗುತ್ತಾನೆ. ಅವರ ಬದುಕಿಗೆ ದಾರಿಯಾದಂತೆ ಕಾಣುತ್ತಾನೆ.

ಸುಮಾರು ಎರಡೂವರೆಗಂಟೆಗಳ ಸುದೀರ್ಘನಾಟಕವಿದು. ಬದುಕಿನ ಸಂಕೀರ್ಣತೆಯನ್ನು ಮನಸ್ಸಿಗೆ ನಾಟುವಂತೆ ತೆರದಿಡಲಾಗಿದೆ. ನಾಟಕದಲ್ಲಿ ಹಾಸ್ಯವಿದೆ. ಗಂಭೀರ ಚಿಂತನೆಯಿದೆ. ನಗುವಿದೆ. ಅಳುವಿದೆ. ಸಂಗೀತವಿದೆ. ಒಂದು ಅದ್ಭುತ ಲೋಕದ ಅನಾವರಣಗೊಳಿಸಲಾಗಿದೆ.